ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಜ್ಜನ ಪ್ರಾಣ ಉಳಿಸಿದ್ರು ಧೋನಿ ಮತ್ತು ಗಂಭೀರ್

ಲಕ್ಷ್ಮೀಶ ಹೆಗಡೆ

ದಿನಾಂಕ ೨-೪-೨೦೧೧ನೇ ಶನಿವಾರ. ಸ್ಥಳ ಮುಂಬೈನ ವಾಂಖೆಡೆ ಕ್ರೀಡಾಂಗಣ.ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ಇನ್ನೇನು ಕೆಲವೇ ಕ್ಷಣಗಳಲ್ಲಿ ವಿಶ್ಚಕಪ್ ಫೈನಲ್ ಪಂದ್ಯ ಆರಂಭವಾಗಲಿದೆ. ಪ್ರದೀಪ ಓಡಿ ಬಂದು ಅಜ್ಜನ ಬಳಿ ಹೇಳುತ್ತಾನೆ,”ಅಜ್ಜಾ ಆಸ್ಪತ್ರೆಯಲ್ಲಿ ರೇಡಿಯೋ ಕಾಮೆಂಟರಿ ಕೂಡಾ ಕೇಳುವ ಹಾಗಿಲ್ಲವಂತೆ, ಈಗ ಏನು ಮಾಡೋದು” ಪ್ರದೀಪನ ಅಜ್ಜ ರಾಘವೇಂದ್ರ ರಾಯರು ಹೃದಯಕ್ಕೆ ಗೆ ಸಂಭಂದಿಸಿದ ಖಾಯಿಲೆಯಿಂದಾಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ.

ಪ್ರದೀಪ ೪ನೇ ತರಗತಿಯಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ ಹುಡುಗ. ಅವನಜ್ಜ ರಾಘವೇಂದ್ರರಾಯರು ೮೦ ವರ್ಷ ವಯಸ್ಸಿನ ವೃಧ್ಧರು.ಇಬ್ಬರೂ ಕ್ರಿಕೆಟ್ ಅನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ.ರಾಘವೇಂದ್ರರಾಯರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಅವರಿಗೆ ಬ್ರಿಟೀಷರು ಭಾರತಕ್ಕೆ ಕ್ರಿಕೆಟ್ ಎಂಬ ಆಟವನ್ನು ಪರಿಚಯಿಸಿದ್ದರ ಬಗ್ಗೆ ಹೆಮ್ಮೆಯಿದೆ.ರಾಘವೆಂದ್ರರಾಯರ ತಂದೆ ಕೂಡಾ ಸ್ವಾತಂತ್ರ್ಯ ಹೋರಾಟಗಾರರೇ.ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯರನ್ನು ಫೀಲ್ಡಿಂಗ್ ನಿಲ್ಲಿಸಿ ಬ್ರಿಟೀಷರು ಬ್ಯಾಟಿಂಗ್ ಮಾಡುತ್ತಿದ್ದುದನ್ನು, ಬ್ರಿಟೀಷರನ್ನು ಬೇಗ ಆಲೌಟ್ ಮಾಡಿ ಭಾರತೀಯರು ಬ್ಯಾಟಿಂಗ್ ಮಾಡುವಾಗ ತಾವು ಅನೇಕ ಸಲ ಕೊನೆಯವರೆಗೂ ಹೋರಾಡಿ ಪಂದ್ಯ ಗೆಲ್ಲಿಸಿಕೊಟ್ಟದ್ದು, ಬ್ರಿಟೀಷರು ಅವಮಾನ ತಾಳಲಾರದೆ ಭಾರತೀಯರನ್ನು ಮೋಸ ಮಾಡಿ ಪಂದ್ಯ ಗೆದ್ದಿರೆಂದು, ಕಂಬಕ್ಕೆ ಕಟ್ಟಿ ಚಾಟಿ ಏಟು ನೀಡುತ್ತಿದ್ದ ಕಥೆಗಳನ್ನು ರಾಘವೇಂದ್ರರಾಯರು ತಮ್ಮ ಮೊಮ್ಮಗ ಪ್ರದೀಪನಿಗೆ ಆಗಾಗ ಹೇಳುತ್ತಿದ್ದರು. ಇದರಿಂದ ಪ್ರದೀಪನೂ ಸಹ ಸಣ್ಣ ಮಗುವಾಗಿದ್ದಗಿನಿಂದಲೇ ಕ್ರಿಕೆಟ್ ಮೇಲೆ ಆಸಕ್ತಿ ಬೆಳೆಸಿಕೊಂಡ.ಪ್ರದೀಪನ ಅಪ್ಪ ಅಂದರೆ ರಾಘವೇಂದ್ರ ರಾಯರ ಮಗ ಸುಭಾಷ್ ನಿಗೆ ಪ್ರದೀಪ ಕ್ರಿಕೆಟ್ ಆಡುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಹಾಗಾಗಿ ಯಾವಾಗಲೂ ಪ್ರದೀಪನನ್ನು ಗದರುತ್ತಿದ್ದ. ಆಗೆಲ್ಲಾ ಪ್ರದೀಪ ಹೋಗಿ ಅಜ್ಜನ ಮಡಿಲು ಸೇರುತ್ತಿದ್ದ. ತಾವು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರಿಂದ ಬರುತ್ತಿದ್ದ ಹಣದಿಂದಲೇ ರಾಯರು ಪ್ರದೀಪನನ್ನು ಕ್ರಿಕೆಟ್ ಅಕಾಡೆಮಿಗೆ ಕೋಚಿಂಗ್ ಗೆ ಸೇರಿಸಿದ್ದರು. ೧೯೮೩ರಲ್ಲಿ ಭಾರತ ಮೊದಲ ಬಾರಿಗೆ ಕ್ರಿಕೆಟ್ ನಲ್ಲಿ ವಿಶ್ವಚಾಂಪಿಯನ್ ಆದಾಗ ರಾಯರು ಇಡೀ ಊರಿಗೆ ಸಿಹಿ ಹಂಚಿದ್ದರು. ತಮ್ಮ ಮಗ ಸುಭಾಷ್ ಐ.ಎ.ಎಸ್. ಪಾಸು ಮಾಡಿದಾಗಲೂ ರಾಯರು ಅಷ್ಟು ಖುಷಿ ಪಟ್ಟಿರಲಿಲ್ಲ.

ಇಂತಿಪ್ಪ ರಾಘವೇಂದ್ರರಾಯರಿಗೆ ಒಂದು ದಿನ ಇದ್ದಕ್ಕಿದ್ದ ಹಾಗೆಯೇ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಸೇರಿಸಿದಾಗ ವೈದ್ಯರು ಹೃದಯಕ್ಕೆ ರಕ್ತ ಸರಬರಾಜು ಮಾಡುವ ರಕ್ತ ನಾಳಗಳು ಬ್ಲಾಕ್ ಆಗಿವೆ. ಇದೊಂದು ಎಮರ್ಜೆನ್ಸ್ಯಿ ಕೇಸು ರಾಯರು ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲೆ ಇರಬೇಕು ಎಂದರು. ಆಗ ೨೦೧೧ನೆ ವರ್ಷದಲ್ಲಿ ಭಾರತದಲ್ಲಿ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ಆರಂವಾಗಿತ್ತಷ್ಟೇ.ತನಗೆ ವಿಶ್ವಕಪ್ ಪಂದ್ಯಾವಳಿ ನೋಡಲಾಗುವುದಿಲ್ಲವಲ್ಲಾ ಎಂಬ ಕೊರಗಿನಿಂದಲೇ ರಾಯರ ಹೃದಯದ ಸ್ಥಿತಿ ದಿನೆ ದಿನೇ ಕ್ಷೀಣಿಸಲಾರಂಭಿಸಿತಾದರೂ, ಭಾರತ ಒಂದೊಂದೇ ಪಂದ್ಯ ಗೆದ್ದು ಫೈನಲ್ ತಲುಪುವಷ್ಟರಲ್ಲಿ ರಾಯರು ಮತ್ತೆ ಉತ್ಸಾಹದ ಚಿಲುಮೆಯಾಗಿದ್ದರು. ಪ್ರದೀಪನಿಗೆ ಶಾಲೆಗೆ ರಜೆಯೂ ಇದ್ದುದ್ದರಿಂದ ಆತ ಇಡೀ ದಿನವೂ ಆಸ್ಪತ್ರೆಯಲ್ಲಿ ಅಜ್ಜನನ್ನು ನೋಡಿಕೊಂಡು ಇರುತ್ತಿದ್ದ. ಆಸ್ಪತ್ರೆಯ ಪಕ್ಕದ ಅಂಗಡಿಗಳಿಂದ ಸ್ಕೋರ್ ನೋಡಿಕೊಂಡು ಬಂದು ರಾಯರಿಗೆ ಹೇಳುತ್ತಿದ್ದ.

ಹೀಗಿರುವಾಗ ಫೈನಲ್ ಪಂದ್ಯ ಬಂದೇ ಬಿಟ್ಟಿತ್ತು, ರಾಯರಿಗೆ ತಾನು ಹೇಗಾದರೂ ಮಾಡಿ ಫೈನಲ್ ಮ್ಯಾಚ್ ನೋಡಲೇಬೇಕೆಂದು ಇಚ್ಛೆ ಇತ್ತು. ಡಾಕ್ಟರ್ ರೌಂಡ್ಸ್ಗೆ ಬಂದಾಗ ” ಡಾಕ್ಟ್ರೆ ಆಸ್ಪತ್ರೆಯ ಒ.ಪಿ.ಡಿ ಯಲ್ಲೇ ಟಿ.ವಿ. ಇದೆಯಲ್ಲ, ಅಲ್ಲಿ ಹೇಗೂ ಪಂದ್ಯವನ್ನು ಪ್ರಸಾರ ಮಾಡೇ ಮಾಡುತ್ತಾರೆ. ನಾನು ಅಲ್ಲಿಯೇ ಕುಳಿತುಕೊಂಡು ಮ್ಯಾಚ್ ನೋಡುತ್ತೇನೆ” ಎಂದರೂ ಡಾಕ್ಟ್ರು ಅವಕಾಶ ಕೊಡಲಿಲ್ಲ. ಇದರಿಂದ ರಾಯರು ಅತೀವ ಬೇಸರಗೊಂಡರು. ಅವತ್ತು ರಾಯರನ್ನು ನೋಡಲು ಅವರ ಮಿತ್ರರೊಬ್ಬರು ಬಂದಿದ್ದರು. ಅವರು ತಮ್ಮ ಮನೆಯಲ್ಲಿರುವ ರೇಡಿಯೋವನ್ನು ರಾಯರು ಕ್ರಿಕೆಟ್ ಕಾಮೆಂಟರಿ ಕೇಳಲಿ ಎಂಬ ಉದ್ದೇಶದಿಂದ ತಂದು ಕೊಟ್ಟರು. ಅದನ್ನು ನೋಡಿದ ಡಾಕ್ಟ್ರು ವಾರ್ಡ್ ನಲ್ಲಿ ಕಾಮೆಂಟರಿ ಕೆಳುವ ಹಾಗಿಲ್ಲ ಎಂದು ಪ್ರದೀಪನ ಬಳಿ ಹೇಳಿ ಕಳಿಸಿದರು.

“ಶ್ರೀಲಂಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.ಮೊದಲ ಹತ್ತು ಓವರ್ ನಲ್ಲಿ ಒಂದು ವಿಕೆಟ್ ಕಳೆದುಕೊಂಡು ಕೇವಲ ೩೮ ರನ್ ಗಳಿಸಿದೆ. ಜಹೀರ್ ಖಾನ್ ಬಿಗುವಾದ ಬೌಲಿಂಗ್ ದಾಳಿ ನಡೆಸುತ್ತಿದಾನೆ.” ಎಂದು ಪ್ರದೀಪ ಒಂದೇ ಉಸಿರಿನಲ್ಲಿ ಅಂಗಡಿಯಲ್ಲಿ ಟಿವಿ ನೋಡಿದವನೇ ಬಂದು ಅಜ್ಜನಿಗೆ ಹೇಳಿದ. ರಾಘವೇಂದ್ರ ರಾಯರು ಖುಶಿಗೊಂಡರು. ಭಾರತ ವಿಶ್ವಕಪ್ ಗೆಲ್ಲಲಿ ಎಂದು ದೇವರ ಬಳಿ ಪ್ರಾರ್ಥನೆ ಮಾಡತೊಡಗಿದರು.ಕುಮಾರ ಸಂಗಕ್ಕರ ಸಹ ಬೇಗ ಔಟ್ ಆದಾಗ ರಾಯರು ಖುಶಿಯಿಂದ ನಲಿಡಾಡಿಬಿಟ್ಟರು. ಪ್ರದೀಪ ಆಗಾಗ ಬಂದು ಸ್ಕೋರ್ ಹೇಳುತ್ತಿದ್ದ. ಮಾಹೇಲ ಜಯವರ್ಧನ ನಿಧಾನವಾಗಿ ಇನ್ನಿಂಗ್ಸ್ ಕಟ್ಟಲಾರಂಭಿಸಿದಾಗ ರಾಯರಿಗೆ ಚಿಂತೆ ಶುರುವಾಯಿತು.  ಕೊನೆಗೆ ಆತ ಶತಕ ಬಾರಿಸಿದಾಗ ಕ್ರೀಡಾಸ್ಪೂರ್ಥಿಯಿಂದ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಕೊನೆಗೆ ಶ್ರೀಲಂಕಾ ೫೦ ಓವರ್ ಗೆ ೨೭೫ ರನ್ ಗಳಿಸಿದಾಗ ಇದನ್ನು ಭಾರತ ಚೇಸ್  ಮಾಡಬಹುದೇ ಎಂದು ರಾಯರು ಅಲೋಚಿಸತೊಡಗಿದರು. ಇನ್ನಿಂಗ್ಸ್ ಬ್ರೇಕ್ ನಲ್ಲಿ ಭಾರತ ಯಾವ ರೀತಿ ಆಡಬೇಕು, ಮೊದಲ ಹತ್ತು ಓವರ್ ಗಳಲ್ಲಿ ಯಾವ ರೀತಿ ಆಡಬೇಕು, ಮಾಲಿಂಗ, ಮುರಳೀಧರನ್ ರ ಬೌಲಿಂಗ್ ಅನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಪ್ರದೀಪನ ಜೊತೆ ಚರ್ಚಿಸಿದರು.

ಭಾರತದ ಇನ್ನಿಂಗ್ಸ್ ಆರಂಭಿಸಲು ಸಚಿನ್, ಸೆಹ್ವಾಗ್ ಮೈದಾನಕ್ಕಿಳಿದರು. ಸಚಿನ್ ಸೆಂಚುರಿ ಬಾರಿಸಲಿ, ಭಾರತ ಗೆಲ್ಲಲಿ ಎಂದು ರಾಯರು ದೇವರಲ್ಲಿ ಪ್ರಾರ್ಥಿಸತೊಡಗಿದರು. “ಅಜ್ಜಾ ಸೆಹ್ವಾಗ್ ಮೊದಲ ಎಸೆತಕ್ಕೇ ಔಟ್. ಮಾಲಿಂಗನ ಎಸೆತಕ್ಕೆ ಎಲ್.ಬಿ. ಆಗಿ ಔಟ್ ಆಗಿದ್ದಾನೆ, ಎಂದಾಗ ರಾಯರ ಮುಖ ಬಿಳುಚಿಕೊಂಡಿತು. ಬಿ.ಪಿ. ಜಾಸ್ತಿ ಆಯಿತು. ಆದರೂ ಭಾರತ ಗೆಲ್ಲಲಿ ಎಂದು ದೇವರಲ್ಲಿ ರಾಯರು ಒಂದೇ ಸಮನೆ ಪ್ರಾರ್ಥನೆ ಮಾಡತೊಡಗಿದರು.  “ಸಚಿನ್ ಮಾಲಿಂಗನ ಎಸೆತದಲ್ಲಿ ಕೀಪರ್ ಸಂಗಕ್ಕರನಿಗೆ ಕ್ಯಾಚ್ ನೀಡಿ ಔಟ್ ಆಗಿದ್ದಾನೆ. ಶ್ರೀಲಂಕಾ ಆಟಗಾರರ ಸಂಭ್ರಮ ಮುಗಿಲು ಮುಟ್ಟಿದೆ.” ಎಂದು ಪ್ರದೀಪ ಹೇಳಿದ ಕೂಡಲೇ ರಾಯರ ಹೃದಯ ಸ್ಥಂಬನವಾಯಿತು. ಕ್ರಿಕೆಟ್ ನ ದೇವರು ಸಚಿನ್ ತೆಂಡುಲ್ಕರೇ ಔಟಾದ ಮೇಲೆ ಭಾರತ ಗೆಲ್ಲುವುದಾದರೂ ಹೇಗೆ, ಇದನ್ನು ರಾಯರಿಗೆ ಅರಗಿಸಿಕೊಳ್ಳಲಾಗಲಿಲ್ಲ. ಕುಸಿದು ಬಿದ್ದು ರಾಯರು ಮೂರ್ಛೆ ಹೋದರು. ಪ್ರದೀಪ ವೈದ್ಯರನ್ನು ಕೂಗಿದ. ರಾಯರನ್ನು ಐ.ಸಿ.ಯು. ಗೆ ಸಾಗಿಸಲಾಯಿತು. ಹೃದಯ ಬಡಿತ ಮತ್ತೆ ಶುರುವಾಗಲು ಎಲ್ಲ ವೈದ್ಯರೂ ಸೇರಿಕೊಂಡು, ಹೃದಯಕ್ಕೆ ಎದೆಯ ಮೇಲಿಂದ ಮಸಾಜ್ ಮಾಡಲಾರಂಭಿಸಿದರು. ಇಡೀ ರಾಯರ ಕುಟಂಬವೇ ಆಸ್ಪತ್ರೆಗೆ ಬಂತು. ಪ್ರದೀಪ ಅಜ್ಜ ಹುಶಾರಾಗಲಿ ಎಂದು ಪ್ರಾರ್ಥಿಸುತ್ತಲೇ ಮ್ಯಾಚ್ ನೋಡಲು ಪಕ್ಕದ ಅಂಗಡಿಗೆ ಓಡಿದ.”ಅಜ್ಜ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ, ಈಗಲೂ ನಿನಗೆ ಕ್ರಿಕೆಟ್ಟೇ ಹೆಚ್ಚಾಯಿತಾ” ಎಂದು ಪ್ರದೀಪನ ಅಮ್ಮ ಬೈದರು.

ಇತ್ತ ವೈದ್ಯರ ಸತತ ಪ್ರಯತ್ನದಿಂದ ರಾಯರ ಹೃದಯ ಮತ್ತೆ ಬಡಿದುಕೊಳ್ಳಲಾರಂಭಿಸಿತು. ರಾಯರು ಎಚ್ಚರಗೊಂಡರು. “ಅಯ್ಯೋ ಭಾರತ ಸೋತಿತಲ್ಲಾ, ನಾನೇಕೆ ಇನ್ನು ಬದುಕಿರಲಿ” ಎಂದು ರಾಘವೇಂದ್ರರಾಯರು ಕೂಗತೊಡಗಿದರು. ಆದರೆ ಅವರ ಪಕ್ಕದಲ್ಲಿದ್ದ ಪ್ರದೀಪ ಹೇಳಿದ “ಇಲ್ಲ ಅಜ್ಜಾ ಭಾರತ ಎರಡನೇ ಬಾರಿಗೆ ವಿಶ್ವಕಪ್ ಗೆದ್ದಿದೆ. ಗಂಭೀರ್ ೯೭ ರನ್ ಗಳಿಸಿದ್ದಾನೆ. ಧೋನಿ ಮುಂಭಡ್ತಿ ಪಡೆದು ಬಂದು ಭರ್ಜರಿ  ಆಟವಾಡಿ ಮ್ಯಾಚ್ ಗೆಲ್ಲಿಸಿ ಕೊಟ್ಟಿದ್ದಾನೆ. ದೇವರು ದೊಡ್ಡವನು ನೀನೂ ಬದುಕಿದೆ, ಭಾರತವೂ ಗೆದ್ದಿತು” ಎಂದ. ರಾಯರಿಗೆ ಖುಶಿಯಿಂದ ಏನು ಮಾಡಬೇಕೆಂದೇ ತಿಳಿಯಲಿಲ್ಲ.”ನೋಡಿ ಅವರು ಕ್ರಿಕೆಟ್ ಬಿಟ್ಟು ಬದುಕುವುದಿಲ್ಲ, ಭಾರತ ವಿಶ್ವಕಪ್ ನಲ್ಲಿ ಗೆಲ್ಲುತ್ತಾ ಫೈನಲ್ ತಲುಪಿದ ಹಾಗೆಯೇ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿತು. ದೇವರ ದಯೆಯಿಂದ ಅವರ ಜೀವಕ್ಕೇನೂ ಅಪಾಯವಿಲ್ಲ, ಹಾರ್ಟ್ ಬ್ಲಾಕ್ ಎಲ್ಲಾ ತೆಗೆದಿದ್ದೇವೆ. ಇನ್ನಾದರೂ ಅವರನ್ನು ಅವರ ಪಾಡಿಗೆ ಕ್ರಿಕೆಟ್ ನೋಡಿಕೊಂಡು ಇರಲು ಬಿಡಿ” ಎಂದು ವೈದ್ಯರು ಹೇಳಿದರು.

“ಪ್ರದೀಪ ಮುಂಬೈ ಗೆ ಎರಡು ಟ್ರೈನ್ ಟಿಕೇಟ್ ಬುಕ್ ಮಾಡು, ಭಾರತ ತಂಡದ ವಿಜಯೋತ್ಸವವನ್ನು ನೋಡಲು ನಾವು ಮುಂಬೈ ಗೆ ಹೋಗೋಣ” ಎಂದು ರಾಘವೇಂದ್ರರಾಯರು ಖುಶಿಯಿಂದ ಹೇಳಿದರು..

 

 

‍ಲೇಖಕರು avadhi

13 March, 2014

1 Comment

  1. V.R.Carpenter

    superb writeup…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading