ಮ್ಯಾಟ್ರಿಕ್ಸ್!
ಅಜಯನಿಗೆ ಮೈಜುಂ ಎಂದಿತು. ಇಡೀ ಶರೀರದಾದ್ಯಂತ ಮಿಂಚಿನಂತೆ ಛಳುಕು ಸುಳಿಯಿತು. ಎಲಾ…? ಇಂತದೊಂದು ದಿನ ಬರುವುದು ಸಾಧ್ಯವೇ..? ಮನುಷ್ಯರನ್ನು ಇನ್ಯಾರೋ ಆಳಬಲ್ಲರೆ..? ಮನುಷ್ಯರ ಬದುಕಿಗೆ ಒಂದು ಸಿದ್ಧವಾದ ಪ್ರೊಗ್ರಾಂ ಮಾಡಿ ಮಿದುಳಿಗೆ ಕನಸಿನ ಸಿಗ್ನಲ್ಗಳನ್ನು ಕೊಡುತ್ತ, ಅವರ ಇಡಿ ಬದುಕನ್ನೇ ವ್ಯರ್ಥ ಮಾಡಬಹುದೆ..?
ಅಜಯ್ ತನ್ನ ಸ್ನೇಹಿತೆ ಸಾಂಘವಿ ಜೊತೆ ಮ್ಯಾಟ್ರಿಕ್ಸ್ ಎಂಬ ವೈಜ್ಞಾನಿಕ ಸಿನೀಮಾ ನೋಡುತ್ತಿದ್ದ!
ಸಿನಿಮಾದಲ್ಲಿ ಹಾಗೇ ಇತ್ತು, ವಿಜ್ಞಾನಿಯೊಬ್ಬನ ಕಲ್ಪನೆ. ಇಡೀ ಮಾನವ ಸಮೂಹವನ್ನೇ ಕೋಶಗಳಲ್ಲಿಟ್ಟು ಅವರ ಮಿದುಳುಗಳಿಗೆ ಬದುಕು ಮುಂದುವರಿಯುತ್ತಿರುವಂತೆ ಸಂಕೇತಗಳನ್ನು ಕೊಟ್ಟು, ಮಾನವರಲ್ಲಿ ಉತ್ಪಾದನೆಯಾಗುವ ಸೂಕ್ಷ್ಮ ವಿದ್ಯುತ್ತನ್ನು ಸಂಗ್ರಹಿಸಿ ಕಂಪ್ಯೂಟರುಗಳು ಭೂಮಿಯೆಂಬ ಗ್ರಹದಲ್ಲಿ ವಿಜೃಂಭಿಸುತ್ತಿದ್ದವು! ಸಿನಿಮಾ ಮುಗಿಯಿತು. ಎಲ್ಲರೂ ಎದ್ದು ಆಚೆ ನಡೆಯುತೊಡಗಿದರು. ಅಜಯನಿಗೇಕೋ ತಕ್ಷಣ ಏಳಬೇಕೆಂಬುದೇ ಹೊಳೆಯಲಿಲ್ಲ. ಒಂದು ಕೆಟ್ಟ ಕನಸು ಕಂಡವನಂತೆ ಅವಾಕ್ಕಾಗಿ ಕೂತಿದ್ದ.
`ಏಯ್ ಹೊರಡುವುದಿಲ್ಲವೆ…?’
ಸಾಂಘವಿ ಕೇಳಿದಳು.
ಅಜಯ ಗಡಬಡಿಸಿ ಎದ್ದ.
`ಏನು..? ಕೆಲಸಕ್ಕೆ ಬರುವ ಮೂಡ್ ಇಲ್ಲವೆ…?’
`ಮೂಡ್..? ಹೂಂ ನಡೆ..’ ಅಜಯ ಸೀಟು ಬಿಟ್ಟು ಎದ್ದ.
ಸಿನಿಮಾ ಹಾಲಿನಿಂದಾಚೆ ಸಾಲಾಗಿ ಸೈಕಲ್ಲುಗಳನ್ನು ಜೋಡಿಸಿದ್ದರು. ಇಬ್ಬರೂ ಒಂದೊಂದು ಸೈಕಲ್ಲು ಏರಿ ಹೊರಟರು.
`ವಾಟ್ ಈಸ್ ರಾಂಗ್ ವಿಥ್ ಯು..? ಹೊಟ್ಟೆಗೇನೂ ಬೇಡವೆ..ನನಗಂತೂ ಹೊಟ್ಟೆ ಹಸಿದಿದೆ?’
ಕೆಫೆ ಹತ್ತಿರವಾದಾಗಲೂ ಅಜಯ ಸೈಕಲ್ ಪೆಡಲ್ ಒತ್ತಿ ಮುಂದುವರಿದ. ಸಾಂಘವಿ ಕೂಗಿದಳು.
`ಓ ಸಾರಿ ಯಾರ್… ಮರೆತುಬಿಟ್ಟೆ! ಲೆಟ್ ಅಸ್ ಈಟ್ ಸಂಥಿಗ್’
ಇಬ್ಬರೂ ಕೆಫೆಯನ್ನು ಹೊಕ್ಕರು.
ಅ ಕೆಫೆ ಯಾವ ಅಂತರರಾಷ್ಟ್ರಿಯ ಕೆಫೆಗು ಕಮ್ಮಿಯಿಲ್ಲದಂತಿತ್ತು. ಅಲ್ಲಿ ಎಲ್ಲ ರೀತಿಯ ತಿನಿಸುಗಳು, ಪೇಯಗಳೂ ದಿನದ ಇಪ್ಪತ್ನಾಲ್ಕು ತಾಸುಗಳೂ ಲಭ್ಯವಿರುತ್ತವೆ. ಇಬ್ಬರೂ ಅಲ್ಲಿಯ ದೊಡ್ಡ ಡಿಜಿಟಲ್ ಪರದೆಯ ಮೇಲಿದ್ದ ಮೆನು ಓದಿದರು. ಅಜಯ ಪಿಜ್ಜಾ ಅರ್ಡರ್ ಮಾಡೋಣ ಎಂದ. ಆದರೆ ಸಾಂಘವಿ ಅದಕ್ಕೆ ಒಪ್ಪಲಿಲ್ಲ. `ಕೆಲಸ ಇನ್ನೂ ದಂಡಿಯಾಗಿ ಬಿದ್ದಿದೆ. ಯೂ ನೋ ನಾನು ನಾಳೆ ಸಂಜೆ ಬಾಂಬೆ ಫ್ಲೈಟ್ ಕ್ಯಾಚ್ ಮಾಡಬೇಕು..ನಾಡಿದ್ದು ಇಬ್ಬರು ಅಮೆರಿಕನ್ ಕ್ಲೈಂಟ್ಸ್ ಜೊತೆ ಡಿಸ್ಕಷನ್ ಇದೆ. ಈ ಸಮಯದಲ್ಲಿ ಐ ಕೆನಾಟ್ ಈಟ್ ಹೆವಿ ಫುಡ್ ಲೈಕ್ ಪಿಜ್ಜಾ.
`ಸಮುದ್ರದಲ್ಲಿ ನೀರಿದ್ದರೂ ಕುಡಿಯಲಾಗದು’ ಎಂದ ಅಜಯ ತನ್ನ ಮಾತೃ ಭಾಷೆ ಕನ್ನಡದಲ್ಲಿ ವಿಷಾದದಿಂದ.
`ಏನು ಹಾಗಂದರೆ..?’
ಸಾಂಘವಿಗೆ ಅದು ಅರ್ಥವಾಗಿರಲಿಲ್ಲ. ಅವಳು ಬೆಂಗಾಲಿ-ಕನ್ನಡ ಬಾರದು. ಅಜಯನಿಗೆ ಅದನ್ನು ವಿವರಿಸಿ ಹೇಳುವ ಮನಸ್ಸಾಗಲಿಲ್ಲ. `ಏನಿಲ್ಲ… ಆಮೇಲೆ ಹೇಳುತ್ತೇನೆ..ನಾಳೆ ನಿನ್ನ ಮುಂಬೈ ಅಸೈನ್ಮೆಂಟ್ ಬಗ್ಗೆ ತಲೆ ಕೆಡಿಸಿಕೊಂಡಿದ್ದೀಯ..ಇದರ ನಡುವೆ ಇವೆಲ್ಲ ಬೇಡ’
ನಿಜಕ್ಕೂ ಸಾಂಘವಿಯ ಜೊತೆ ಮಾತಾಡಲು ಅಜಯನಿಗೆ ಮನಸ್ಸೇ ಇರಲಿಲ್ಲ! ಅವನಿಗೀಗ ಏಕಾಂತ ಬೇಕೆನಿಸಿತ್ತು. ಕಳೆದೆರಡು ದಿನಗಳಿಂದಲೂ ಅವನ ಮನಸ್ಸು ವ್ಯಘ್ರವಾಗಿತ್ತು. ಅದಕ್ಕೇನಾದರೂ ಕಾರಣವಿತ್ತೋ ಇಲ್ಲವೋ ಅದನ್ನೂ ಅವನು ವಿಶ್ಲೇಷಣೆ ಮಾಡುವ ಗೋಜಿಗೆ ಹೋಗಿರಲಿಲ್ಲ.
ಕೊನೆಗೆ ಅವಳ ಇಚ್ಛೆಯಂತೆ ಕೆಲವು ಸ್ಯಾಂಡ್ವಿಚ್, ಕೋಕ್ಗೆ ಆರ್ಡರ್ ಮಾಡಿದ ಅಜಯ. ಇಬ್ಬರೂ ಕೆಫೆಯಿಂದೀಚೆ ಬಂದಾಗ ಮೆಲ್ಲಗೆ ಮಳೆ ಶುರುವಾಗಿತ್ತು. ಕೆಫೆಯ ಈಚೆ ಜೋಡಿಸಿದ್ದ ಛತ್ರಿಗಳನ್ನು ತೆಗೆದುಕೊಂಡು ಇಬ್ಬರೂ ತಮ್ಮ ತಮ್ಮ ಡಿಪಾರ್ಟ್ ಮೆಂಟುಗಳ ಕಡೆಗೆ ನಡೆದರು. ಥಿಯೇಟರಿನಿಂದ ಈಚೆ ಬರುವಾಗ ತಂದ ಸೈಕಲ್ಲುಗಳ ಬಗೆಗೆ ಅವರಿಗೆ ಯೋಚನೆ ಇರಲಿಲ್ಲ.
ಅಜಯನ ಮನಸ್ಸು ಇನ್ನೂ ಸ್ಥಿಮಿತಕ್ಕೆ ಬಂದಿರಲಿಲ್ಲ. ಹಿಂದಿನ ದಿನ ಬಂದ ಪತ್ರಗಳು ಮನದ ಮೂಲೆಯೊಂದರಲ್ಲಿ ಕೊರೆಯುತ್ತಿರುವುದು ಅವನಿಗರಿವಾಯಿತು. ಅಲ್ಲದೆ ನೆನ್ನೆ ರಾತ್ರಿ ಅಸ್ಪತ್ರೆಯಲ್ಲಿ ಕಂಡ ರಾಜನ ಕರುಣಾಜನಕ ಮುಖ ಕೂಡ ತನ್ನನ್ನು ಕೊರೆಯುತ್ತಿದೆ ಎನ್ನುವುದರ ಅರಿವಾಯಿತು. ತನ್ನ ಈ ಇರಿಸುಮುರಿಸುವಿಕೆಗೆ ಕಾರಣವಿಲ್ಲದಿಲ್ಲ. ಡಿಪಾರ್ಟ್ ಮೆಂಟ್ ಗೆ ಹೋದರು ತನ್ನ ಟೇಬಲ್ಲು ಮತ್ತು ಅಲ್ಲಿ ಇಡೀ ವಿಶ್ವದ ಕಿಡಿಕಿಯಂತೆ ಕೂತಿರುವ ಕಂಪ್ಯೂಟರ್ನ ಮುಂದೆ ಹೋಗಿ ಕೂರಲು ಮನಸ್ಸು ಬರಲಿಲ್ಲ.
`ಅಜಯ್, ಬಾಸ್ ವಾಂಟೆಡ್ ಯೂ..’ ಸಹೊದ್ಯೋಗಿ ಸುಷ್ಮಾ ಹೇಳಿದರೂ ಸಹ ಅದನ್ನು ಮನಸ್ಸಿನ ಮೇಲೆ ಹಾಕಿಕೊಳ್ಳದೆ ಅಜಯ ಡಿಪಾರ್ಟ್ ಮೆಂಟಿನ ತಾರಸಿಯ ಮೇಲೆ ಹೋದ.ತನ್ನನ್ನು ಅಕಾಶಕ್ಕೆ ತೆರೆದುಕೊಂಡ. ಮೇಲೆ ನೋಡಿದ – ಚುಕ್ಕಿ ಚಂದ್ರಮರು ಕಂಡಾರೇನೊ ಎಂಬ ಆಸೆಯಿಂದ. ಆದರೆ ಇನ್ನೂರು ಎಕರೆ ಜಾಗದಲ್ಲಿ ಹರಡಿಕೊಂಡಿದ್ದ ಅ ಬೃಹತ್ ಕಂಪ್ಯೂಟರ್ ವಾಣಿಜ್ಯ ಸಂಕೀರ್ಣದ ಬಿಡಿ ಬಿಡಿ ಕಟ್ಟಗಳು, ಅವುಗಳನ್ನು ಬೆಳಗಿಸಿದ್ದ ನೂರಾರು ಸೋಡಿಯಂ ವೇಪರ್ ಲೈಟುಗಳಲ್ಲಿ ಆಕಾಶ ಮಸುಕುಮಸುಕಾಗಿ ಕಂಡಿತು.
ಆ ಸಂಕೀರ್ಣದಲ್ಲಿ ಎಲ್ಲ ವ್ಯವಸ್ಥೆಯು ಇತ್ತು. ಅಲ್ಲಿ ಕೆಲಸ ಮಾಡುವವರ ಎಲ್ಲ ಅಗತ್ಯಗಳನ್ನೂ ಕೂಲಂಕುಶವಾಗಿ ವಿಚಾರ ಮಾಡಿ ಎಲ್ಲ ವ್ಯವಸ್ಥೆಯನ್ನೂ ಆಡಳಿತವರ್ಗ ಕಲ್ಪಿಸಿಕೊಟ್ಟಿತ್ತು. ಇನ್ನೂರು ಎಕರೆಯಲ್ಲಿ ಹರಡಿಕೊಂಡಿದ್ದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವವರ ಆಹಾರ ಸಮಸ್ಯೆಗಳನ್ನು ನೀಗಿಸಲು ಆರು ಅಂತರರಾಷ್ಟ್ರೀಯ ಮಟ್ಟದ ಹೋಟೆಲುಗಳಿದ್ದವು. ಹಗಲು ರಾತ್ರಿಗಳಿಗೆ ಅಲ್ಲಿ ವ್ಯತ್ಯಾಸವಿರಲಿಲ್ಲ.
ಅಲ್ಲಿ ಕೆಲಸವು ಅಷ್ಟೆ! ಅಲ್ಲಿ ಜನರು ಯಾವಾಗ ಮನೆಗಳಿಗೆ ಹೋಗುತ್ತಾರೆ, ಯಾವಾಗ ಮತ್ತೆ ಕೆಲಸಕ್ಕೆ ಬರುತ್ತಾರೆ ಎಂದು ಯಾರಿಗು ತಿಳಿಯುತ್ತಿರಲಿಲ್ಲ. ಅಲ್ಲಿ ಯಾರೂ ಮನೆಗೆ ಹೋಗುವುದೇ ಇಲ್ಲವೇನೊ.. ಅವರುಗಳಿಗೆ ಮನೆಯೇ ಇಲ್ಲವೇನೋ ಎಂಬಂತೆ ಇದ್ದರು. ಸದಾ ಕೆಲಸದಲ್ಲಿಯೇ ತೊಡಗಿಕೊಂಡಿರುತ್ತಾರೇನೋ ಎಂಬ ಭಾವನೆ ಯಾರಿಗಾದರೂ ಬರುವಂತಿತ್ತು!
ಆ ಕಂಪೆನಿ ವಿಶ್ವದಲ್ಲೇ ಹೆಸರುವಾಸಿಯಾಗಿತ್ತು. ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಅಗ್ರ ಸ್ಥಾನದಲ್ಲಿತ್ತು. ದೇಶಕ್ಕೆ ಹೇರಳವಾದ ವಿದೇಶೀ ವಿನಿಮಯವನ್ನು ಪ್ರತಿ ವರ್ಷವೂ ಗಳಿಸುತ್ತಿತ್ತು. ಅಲ್ಲಿ ಕೆಲಸ ಮಾಡುವುದು ಯಾರಿಗೇ ಆದರೂ ಗೌರವದ ಸಂಕೇತವಾಗಿತ್ತು. ಕಂಪೆನಿಯವರೂ ಸಹ ದೇಶದೆಲ್ಲೆಡೆ ಹೋಗಿ ಅಲ್ಲಿಯ ಇಂಜಿನಿಯರಿಂಗ್ ಕಾಲೇಜುಗಳಿಂದ ಪ್ರತಿಭಾನ್ವಿತ ಇಂಜಿನಿಯರುಗಳನ್ನು ಆಯ್ಕೆ ಮಾಡಿ ಅವರಿಗೆ ಸೂಕ್ತ ತರಬೇತು ನೀಡಿ ತನ್ನ ಸಂಸ್ಥೆಯ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳುತ್ತಿತ್ತು.
ಅಜಯ ಕೊನೆಯ ವರ್ಷದ ಇಂಜಿನಿಯರಿಂಗ್ ಓದುವಾಗಲೇ ಕಂಪೆನಿಯವರು ಬಂದು ಅವನನ್ನು ಆಯ್ಕೆ ಮಾಡಿದ್ದರು. ಅ ಕ್ಷಣ ಅವನ ಆನಂದಕ್ಕೆ ಮಿತಿಯೇ ಇರಲಿಲ್ಲ. ತನ್ನೆಲ್ಲಾ ಸಮಸ್ಯೆಗಳೂ ಬಗೆಹರಿದವು ಎಂದುಕೊಂಡಿದ್ದ. ಆದರೆ ಕ್ರಮೇಣ, ಬಹಳ ತಡವಾಗಿ ಅವನಿಗೆ ಅರಿವಾಗಿತ್ತು. ಹಿಂದೆಂದು ಇಲ್ಲದ ಸಮಸ್ಯೆಗಳು ಸೃಷ್ಟಿಯಾಗಿದ್ದವು!
ನೆನ್ನೆ ಆಸ್ಪತ್ರೆಯಲ್ಲಿ ಕಂಡ ರಾಜನೇ ಒಂದು ಉದಾಹರಣೆಯಾಗಿದ್ದ. ಧೀರ್ಘ ಕಾಲ ಕುಳಿತು ಕಂಪ್ಯೂಟರಿನಲ್ಲಿ ಕೆಲಸ ಮಾಡಿದ್ದರಿಂದ ಅವನ ಕೈಕಾಲು ಮತ್ತು ಕುತ್ತಿಗೆಗಳು ಬಲಹೀನವಾಗಿದ್ದವು. ಕುತ್ತಿಗೆಯನ್ನು ಪಕ್ಕಕ್ಕೆ ತಿರುಗುಸುವುದಿರಲಿ ಇದ್ದ ಜಾಗದಲ್ಲಿ ಇಟ್ಟುಕ್ಕೊಳ್ಳಲೂ ಸಾಧ್ಯವಾಗದಂತಹ ಅಸಾಧ್ಯವಾದ ನೋವು ಕಂಡು ಅವನೀಗ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ! ಚಿಕಿತ್ಸೆಯೇನೆಂದರೆ ಕೈಕಾಲು ಕುತ್ತಿಗೆಗಳಿಗೆ ಮಸಾಜ್, ವ್ಯಾಯಾಮ, ಧ್ಯಾನ ಜೊತೆಗೆ ಸೈಕಿಯಾಟ್ರಿಸ್ಟ್ ಕೌನ್ಸೆಲಿಂಗ್! ಇದು ಬಹಳ ಸಮಯ ತೆಗೆದುಕೊಳ್ಳಬಹುದು ಎಂದು ಬೇರೆ ವೈದ್ಯರು ಹೇಳಿದ್ದರು!
ರಾಜನದು ಒಂದೇ ಒಂದು ಕೇಸಾಗಿದ್ದರೆ ಅಜಯನ ಚಿಂತೆಗೆ ಕಾರಣ ಇರಲಿಲ್ಲ. ರಾಜನಂತ ಹತ್ತಾರು ಜನರ ವಿವಿಧ ರೀತಿಯ ಅಸ್ವಸ್ಥತೆಗಳು ಅಜಯನ ಮನಸ್ಸಿನ ಮೂಲೆಯಲ್ಲಿ ಕೊಳ್ಳಿ ದೆವ್ವಗಳಾಗಿ ಕುಣಿಯುತ್ತಿದ್ದವು!
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಅಸಾಧಾರಣ ಒತ್ತಡಗಳನ್ನು ಭರಿಸುತ್ತ ಅಜಯನ ದೇಹ ಕಮರಿಹೋಗುತ್ತಿತ್ತು. ಮನಸ್ಸು ಬಿರಿದು ಹೋಗುತ್ತಿತ್ತು! ಅಜಯನಿಗೆ ಕೆಲಸಕ್ಕೆ ಬರುವುದು ಮಾತ್ರ ಗೊತ್ತಿತ್ತು, ಆದರೆ ಯಾವಾಗ ಮನೆಗೆ ವಾಪಾಸ್ಸಾಗುತ್ತೇನೆ ಎನ್ನುವುದು ಮಾತ್ರ ತಿಳಿದಿರುತ್ತಿರಲಿಲ್ಲ. ಒಮ್ಮೊಮ್ಮೆ ಇದ್ದಕ್ಕಿದ್ದಂತೆ ವಿದೇಶಗಳಿಗೆ ಕೂಡ ಹೋಗಬೇಕಾಗಿಬರುತ್ತಿತ್ತು! ಹೆಚ್ಚು ಕಮ್ಮಿ ಉಟ್ಟಬಟ್ಟೆಯಲ್ಲೇ ಹೋಗಬೇಕಾದ ಪರಿಸ್ಥಿಗಳು ಇದ್ದವು!
ಅಜಯನ ಮೊಬೈಲು ಹೊಡೆದುಕ್ಕೊಳ್ಳತೊಡಗಿತು. ಮನಸ್ಸಿಲ್ಲದ ಮನಸ್ಸಿನಿಂದ ಕಿವಿಗಿಟ್ಟುಕೊಂಡ! ಅವನ ಬಾಸು! ತನ್ನನ್ನು ನೋಡಬೇಕೆಂದು ಸುದ್ದಿ ಕಳಿಸಿದ್ದರೂ ಅಜಯ ಹೋಗಿರಲಿಲ್ಲ. ಅದರ ಸ0ಬಂಧವಾಗಿ ಬಾಸು ರೇಗಬಹುದು ಎಂದುಕೊಂಡ. ಆದರೆ ನಡೆದದ್ದೇ ಬೇರೆ!
`ಅಜಯ್, ನಾಳೆ ಭಾನುವಾರ…ಹೋಪ್ಫುಲ್ಲಿ ಕೆಲಸಕ್ಕೆ ಬರಬೇಕಾಗಿಲ್ಲ, ಎಲ್ಲಾ ನಮ್ಮ ನಮ್ಮ ಮನೆಯಲ್ಲೇ ಇರುತ್ತೇವೆ ಅಂದುಕೊಳ್ಳೋಣ!’ ಎಂದು ಜೋರಾಗಿ ನಕ್ಕರು. ‘ನಾಳೆ ನನ್ನ ಮನೆಯಲ್ಲಿ ಒಂದು ಸಣ್ಣ ಸೆಲಿಬರೇಶನ್! ಯೂ ನೋ..ಒಂದು ವರ್ಷದ ಕೆಳಗೆ ಒಂದು ಮಗುವನ್ನು ದತ್ತು ತೆಗೆದುಕೊಂಡಿದ್ದೇವಲ್ಲ..? ಅದರ ಮೊದಲನೆಯ ಹುಟ್ಟಿದ ಹಬ್ಬ! ಪ್ಲೀಸ್ ಮೇಕ್ ಇಟ್ ಕನ್ವೀನಿಯ0ಟ್ ಟು ಅಟೆಂಡ್! ಸಂಜೆ ಏಳು ಗಂಟೆಗೆ..ಓ..ನಾಟ್ ಅಟ್ ಹೋಮ್..ಯೂ ನೋ..ಪೆಂಟಗನ್ ಹೋಟೆಲ್..ಅಲ್ಲೇ..ಡೋಂಟ್ ಮಿಸ್!’
`ತ್ಯಾಂಕ್ಸ್’ ಎಂದ ಅಜಯ್ ನಿರ್ಭಾವುಕನಾಗಿ. ಅವನ ಕೈಯಲ್ಲಿದ್ದ ವಾಚು ಕಿಣಿಕಿಣಿ ಸದ್ದು ಮಾಡಿತು. ಸಂಜೆ ಏಳು ಗಂಟೆಯಾಗಿದೆ ಎಂಬ ಅಲಾರಂ ಅದು. ನಾಲ್ಕು ವರ್ಷಗಳ ಕೆಳಗೆ ಕೆಲಸಕ್ಕೆ ರಿಪೋರ್ಟ್ ಮಾಡಿಕೊಂಡ ದಿನ ಅದನ್ನು ಸೆಟ್ ಮಾಡಿದ್ದು. ಏನಾದರಾಗಲಿ ಸಂಜೆ ಏಳು ಗಂಟೆಗೆ ಮನೆಗೆ ಹಿಂತಿರುಗಿಬಿಡಬೇಕೆಂದುಕೊಂಡಿದ್ದ ಅಜಯ್. ಅದು ಸೆಟ್ ಮಾಡಿದ ದಿನದಿಂದ ಈವರೆಗೆ, ನಾಲ್ಕು ವರ್ಷಗಳು ಕಳೆದ ನಂತರವೂ ಅಜಯನಿಗೆ ಎಂದೂ ಏಳು ಗಂಟೆಗೆ ಮನೆಗೆ ಹಿಂದಿರುಗಲಾಗಿರಲಿಲ್ಲ.








Nice Story, ಮನುಷ್ಯ ತನ್ನನ್ನು ಮರೆತ ದಿನಮಾನಗಳಿವು ಅನಿಸುತ್ತದಲ್ಲವೇ..?? ಕೆಲಸ ಬದುಕ ನುಂಗದಿರಲಿ ಅಷ್ಟೆ.
Nanna katheyeno enisuttide… Nanagu kelasakke serida dinadinda Elu gantege manege talupalu aage illa.. 🙁