ಅಗ್ರಾಳ ಪುರಂದರ ರೈ (1916-2001) ಅವರು ಕೃಷಿಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಗಾಂಧಿವಾದಿಯಾಗಿ, ಸಾಹಿತಿಯಾಗಿ, ಪತ್ರಕರ್ತರಾಗಿ, ಸಾಮಾಜಿಕ ಚಿಂತಕರಾಗಿ 85 ವರ್ಷಗಳ ಕಾಲ ಬದುಕಿದವರು.
ಕೊಡಗಿನ ಭಾಗಮಂಡಲದಲ್ಲಿ ಜನಿಸಿ, ಹಿಂದಿನ ಪುತ್ತೂರು ತಾಲೂಕಿನ ಪುಣಚಾ ಗ್ರಾಮದ ಅಗ್ರಾಳದಲ್ಲಿ ಬಹುಕಾಲ ಕೃಷಿಕರಾಗಿ ಜೀವಿಸಿ, ಪುತ್ತೂರಿನಲ್ಲಿ ಡಾ. ಶಿವರಾಮ ಕಾರಂತರ ಮಕ್ಕಳ ಕೂಟದಲ್ಲಿ ಪಾಲುಗೊಂಡು, ಕಾರಂತರ ಪ್ರಭಾವದಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡವರು. ಆಗಿನ ಬಹುತೇಕ ಪತ್ರಿಕೆಗಳಲ್ಲಿ ಅವರ ಅನೇಕ ಲೇಖನಗಳು, ಕತೆಗಳು ಪ್ರಕಟವಾಗಿವೆ.
ಅವರ ಕತಾ ಸಂಕಲನ `ರಸಾಯನ’ (1952), ರೈತತಂಡದ ನಾಯಕರಾಗಿ ರೈತಪ್ರವಾಸದ `ನಮ್ಮ ಪ್ರವಾಸಾನುಭವ’ (1959), ಗೌರವಸಂಪಾದಕರಾಗಿ ಪುತ್ತೂರು ಬೋರ್ಡ್ ಹೈಯರ್ ಎಲಿಮೆಂಟರಿ ಶಾಲೆಯ ಶತಮಾನೋತ್ಸವ ಸ್ಮಾರಕಗ್ರಂಥ (1965) ಮತ್ತು ಪುತ್ತೂರು ಬೋರ್ಡ್ ಹೈಸ್ಕೂಲಿನ ಐವತ್ತು ವರ್ಷಗಳ ನೆನಪಿನ ಸಂಚಿಕೆ `ಸುವರ್ಣ ದೀಪಿಕಾ’ (1966) ಅವರ ಕೆಲವು ಸಾಹಿತ್ಯ ಕೃತಿಗಳು.
ಅವರು 1961ರಿಂದ ಹದಿನೆಂಟು ವರ್ಷಗಳ ಕಾಲ ಪುತ್ತೂರಿನಿಂದ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ವರದಿಗಾರರಾಗಿ ಗ್ರಾಮೀಣ ಪತ್ರಿಕೋದ್ಯಮಕ್ಕೆ ಹೊಸದಿಕ್ಕನ್ನು ತೋರಿಸಿದವರು.
1938ರಿಂದ 1969ವರೆಗೆ ರಾಷ್ಟ್ರೀಯ ಕಾಂಗೆಸ್ಸಿನ ಕಾರ್ಯಕರ್ತರಾಗಿ, ಗಾಂಧಿವಾದಿಯಾಗಿ, ಸಾಮಾಜಿಕ ಚಿಂತಕರಾಗಿ, ಭಾಷಣಕಾರರಾಗಿ ಕೆಲಸಮಾಡಿದವರು. 1985ರಿಂದ ತಮ್ಮ ಬದುಕಿನ ಕೊನೆಯವರೆಗೆ ಮಂಗಳೂರಿನಲ್ಲಿ ಇದ್ದು, ಇಲ್ಲಿನ ಸಾಹಿತ್ಯಕ ಸಾಮಾಜಿಕ ಚಟುವಟಿಕೆಗಳಲ್ಲಿ ಮತ್ತು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರು.
ನನ್ನ ತಂದೆ ಅಗ್ರಾಳ ಪುರಂದರ ರೈ ಅವರು ಬದುಕಿದ್ದರೆ ಈ ವರ್ಷ ಅವರಿಗೆ ನೂರು ತುಂಬುತ್ತಿತ್ತು. ಅವರನ್ನು ಕುರಿತ ನೆನಪಿನ ಸಂಪುಟವೊಂದನ್ನು ಪ್ರಕಟಿಸಲು ನಾನು ಬಯಸಿದ್ದೇನೆ.
ಅವರ ಸಂಪರ್ಕವನ್ನು ಹೊಂದಿದ್ದ ಅವರ ಕಿರಿಯ ಸಮಕಾಲೀನರು ಅವರ ಬಗೆಗಿನ ನೆನಪುಗಳನ್ನು ಬರೆದು ನನಗೆ ಕಳುಹಿಸಿಕೊಡಬೇಕಾಗಿ ವಿನಂತಿಸುತ್ತೇನೆ. ಅವರ ಜೊತೆಗಿನ ನಿರ್ದಿಷ್ಟ ಘಟನೆಗಳ ನೆನಪುಗಳು ಇದ್ದರೆ ದಯವಿಟ್ಟು ಅವನ್ನು ನಿಮ್ಮ ಬರಹದಲ್ಲಿ ಸೇರಿಸಿರಿ. ಕೆಲವೇ ಸಾಲುಗಳ ಟಿಪ್ಪಣಿಯಾದರೂ ಆಗಬಹುದು.
ನಿಮ್ಮ ಬರಹವನ್ನು ಬರುವ ತಿಂಗಳು ಆಗಸ್ಟ್ ಕೊನೆಯೊಳಗೆ ಈ ವಿಳಾಸಕ್ಕೆ ತಲಪುವಂತೆ ದಯವಿಟ್ಟು ಕಳುಹಿಸಿರಿ.
ಬಿ.ಎ. ವಿವೇಕ ರೈ
`ಸುಯಿಲ್’, ಜಪ್ಪು ಕುಡ್ಪಾಡಿ ರಸ್ತೆ, ಮಂಗಳೂರು – 575002
ಇಮೈಲ್ : vivekaraiba@gmail.com





0 Comments