ತಮ್ಮ ಮೊದಲ ತುಳು ಕಾದಂಬರಿ ‘ದೆಂಗ’ಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಅಕ್ಷಯ ಆರ್ ಶೆಟ್ಟಿ ಈಗ ಮತ್ತೆ ಒಂದು ತುಳು ನಾಟಕ ಹಾಗೂ ಕನ್ನಡ ಕವನ ಸಂಕಲನದೊಂದಿಗೆ ಬರುತ್ತಿದ್ದಾರೆ.
ಕನ್ನಡದ ಹಿರಿಯ ವಿದ್ವಾಂಸರಾದ ಪ್ರೊ ಬಿ ಎ ವಿವೇಕ ರೈ ಅವರಿಂದ ದೆಂಗ ಕಾದಂಬರಿ ತುಳು ಸಾಹಿತ್ಯಕ್ಕೆ ಹೊಸ ತಿರುವು ನೀಡುತ್ತದೆ ಎನ್ನುವ ಪ್ರಶಂಸೆ ಪಡೆದಿದೆ.
ಅವರ ‘ಪೆರ್ಗ’ ನಾಟಕ ಕೃತಿ ತುಳುಕೂಟ, ಕುಡ್ಲ ಆಯೋಜಿಸಿದ ತುಳು ನಾಟಕ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದೆ.
ಅವರ ಎರಡು ಕೃತಿಗಳು ಹೊರ ಬರುತ್ತಿರುವ ಈ ಸಂದರ್ಭದಲ್ಲಿ ಅವರ ಕವನ ಸಂಕಲನಕ್ಕೆ ಖ್ಯಾತ ಕವಿ ವಾಸುದೇವ ನಾಡಿಗ್ ಅವರು ಬರೆದ ಮುನ್ನುಡಿಯನ್ನು ನಿಮ್ಮ ಓದಿಗಾಗಿ ಕೊಡುತ್ತಿದ್ದೇವೆ.
‘ಹಿಡಿ ಅಕ್ಕಿಯ ಧ್ಯಾನ’ದ ಜೊತೆಗೆ ಕೆಲವು ನುಡಿಗಳು

ವಾಸುದೇವ ನಾಡಿಗ್
—–
ಕಾವ್ಯ ಮೀಮಾಂಸೆಯಲ್ಲಿ ಕವಿ ಪ್ರತಿಭೆಯ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ ಇದರ ಜೊತೆಗೆ ಕವಿಗೆ ಇರಬೇಕಾದ ಸಿದ್ಧತೆಗಳ ಕುರಿತಂತೆ ಗಹನವಾದ ಮಾತುಗಳಿವೆ. ಈ ಎರಡು ಸಂಗತಿಗಳನ್ನು ಆಳವಾಗಿ ಓದಿ ಮನನ ಮಾಡಿಕೊಂಡರೆ ಕಾವ್ಯ ಒಂದಿಷ್ಟು ದಕ್ಕಬಹುದು. ಪ್ರತಿಭೆಯ ಮಾತುಬಂದಾಗ ಭಟ್ಟ ತೌತನ ‘ಪ್ರಜ್ಞಾ ನವ ನವೋಲ್ಲೇಖ ಶಾಲಿನೀ ಪ್ರತಿಭಾ ಮತಾ’ ಎಂಬ ಮಾತು ಮತ್ತು ಕೊಲ್‌ರಿಜ್‌ನ ಇಮ್ಯಾಜಿನೇಶನ್, ರಾಜಶೇಖರನ ನಿರ್ಣಯಗಳು, ಟಿ ಎಸ್ ಎಲಿಯಟ್‌ನ ಪ್ರತಿಭೆ ಮತ್ತು ಪರಂಪರೆಯ ಮಾತುಗಳು ಅತ್ಯಂತ ಉಲ್ಲೇಖಾರ್ಹ ಮತ್ತು ಮನನೀಯ ಕೂಡಾ.
ನಿಜ ಕಾವ್ಯ ಅಥವಾ ಯಾವುದೇ ಸೃಜನಶೀಲ ಮಾಧ್ಯಮ ಇರಲಿ ಅಲ್ಲಿ ಕಲಾವಿದ ಅಥವಾ ಸೃಜನ ಶೀಲ ಮನಸು ಲೋಕವನ್ನು ನೋಡುವ ಮತ್ತು ಗ್ರಹಿಸುವ ಶಕ್ತಿಯ ಮೇಲೆ ಅವರವರ ಅನನ್ಯತೆ ಕಾಣುತ್ತದೆ. ಇಡಿ ತೌಲನಿಕ ಕಾವ್ಯ ಮೀಮಾಂಸೆ ಹೇಳುವ ಮಾತು ಇದೇ. ಲೋಕಹ್ರಹಿಕೆಯಲ್ಲಿ ಹೊಸತನ ಕಾವ್ಯವನ್ನು ಅತ್ಯಂತ ಭಿನ್ನ ಮಾರ್ಗವನ್ನು ಕಟ್ಟಿಕೊಡಬಹುದು. ಈ ಪ್ರತಿಭಾ ಶಕ್ತಿಯ ಜೊತೆಗೆ ವ್ಯುತ್ಪತ್ತಿ ಅಂದರೆ ಭಿನ್ನ ಬಗೆಯ ಆಳವಾದ ಓದಿ ಅಧ್ಯಯನ ಶಿಸ್ತುಗಳು ಕವಿಯನ್ನು ಶಕ್ತ ಮತ್ತು ಅನನ್ಯ ಗೊಳಿಸುತ್ತದೆ. ಪ್ರತಿಭೆಗೆ ಪೋಷಕಾಂಶ ಊಡಿಸುತ್ತದೆ.
ಸದ್ಯ ಮಂಗಳೂರಿನ ಶ್ರೀಮತಿ ಅಕ್ಷಯ ಆರ್ ಶೆಟ್ಟಿ ಅವರ ಕವನ ಸಂಕಲನ ‘ಹಿಡಿ ಅಕ್ಕಿಯ ಧ್ಯಾನ’ ಕವನ ಸಂಕಲನ ನನ್ನ ಕಣ್ಣ ಎದುರಿಗೆ ಇದೆ. ಅಕ್ಷಯ ಶೆಟ್ಟಿ ಅವರ ಓದು ಬರಹ ಮತ್ತು ವೃತ್ತಿ ಜೀವನವೇ ಭಿನ್ನ ನೆಲೆಯದ್ದು. ಮೈಕ್ರೋ ಬಯಾಲಜಿಯಲ್ಲ ಪದವಿ, ಕನ್ನಡ ಸಾಹಿತ್ಯ ಸ್ನಾತಕೋತ್ತರ ಪದವಿ, ಮಾನವ ಸಂಪನ್ಮೂಲ ವಿಷಯಯದಲ್ಲಿ ಎಂ ಬಿ ಎ ಪದವಿ. ಸದ್ಯ ಮ್ಯಾನೇಜ್ ಮೆಂಟ್ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕಿ, ಸಂಶೋಧನ ಕ್ಷೇತ್ರದಲ್ಲಿ ಕೆಲಸ. ಕನಕ ಚಿಂತನ (ಸಂಪಾದಿತ)ಮ್ ‘ಬಹುರೂಪಿ’ ಪ್ರಕಾಶನದ ದೆಂಗ ಎನ್ನುವ ತುಳು ಕಾದಂಬರಿ, ನನ್ನ ಹಾದಿ ಮತ್ತು ಬದುಕು ಭಾವದ ತೆನೆ ನಂತರದ ಮೂರನೇ ಸಂಕಲನ ಇದು.
ಅರಿವಿನ ಭಿನ್ನವಾದ ನೆಲೆಗಳನ್ನು ಕೆಲಸ ಮಾಡಿರುವ ಅಕ್ಷಯಾ ಅವರು ತಮ್ಮ ಸೂಕ್ಷ್ಮ ಸಂವೇದನೆಗೆ ಆಕರವಾಗಿ ಕಾವ್ಯವನ್ನು ಬಳಸಿಕೊಂಡಿರುವುದು ಸ್ಪಷ್ಟ. ನನ್ನ ಮೊದಲ ಮಾತುಗಳಲ್ಲಿ ಹೇಳಿದ ಹಾಗೆ ಇಲ್ಲೊಂದು ವಿಭಿನ್ನ ಬಗೆಯಿಂದ ಲೋಕವನ್ನು ನೋಡುವ ಕಣ್ಣಿದೆ ಹಾಗೆ ನೋಡಬೇಕೆಂಬ ಹಂಬಲದ ದನಿಯಿದೆ ಮತ್ತು ಆ ನಿಟ್ಟಿನ ಪ್ರಾಮಾಣಿಕವಾದ ಪ್ರಯತ್ನವೂ ಇದೆ. ಕಳೆದ ಎರಡು ಮೂರು ವರ್ಷಗಳಿಂದ ಹೊಸ ಕವನಸಂಕಲನವನ್ನು ಪ್ರಕಟಿಸುವ ಉತ್ಸಾಹ ತೋರಿದರೂ ಅಲ್ಲೊಂದು ಸಣ್ಣ ಸಂಕೋಚ ಮತ್ತು ಗುಣಮಟ್ಟದ ಕುರಿತ ಸ್ವ ಅವಲೋಕನದ ಕಾರಣ ತಡವಾಗಿದೆ. ಜವಾಬ್ದಾರಿ ಮತ್ತು ತಮ್ಮ ಬರಹದ ಬಗ್ಗೆ ತಮಗೇ ಇರುವ ಶಂಕೆಯ ಫಲ ಇದು ಅತ್ಯಗತ್ಯ ಕೂಡಾ.
ಇಲ್ಲಿನ ಪ್ರತಿಭೆ ಸುತ್ತಣದ ಲೋಕವನ್ನು ನೋಡುವ ಕ್ರಮದ ಮೂಲಕ ಈ ಸಂಕಲನದ ಹಲವು ಕವನಗಳು ಓದಿಸಿಕೊಳ್ಳುತ್ತವೆ. ಇದು ಅಪೇಕ್ಷಣೀಯ ಕೂಡಾ. ಈ ಸಂಕಲನದ ಕವಿತೆಗಳಲ್ಲಿ ಈಚೆಗೆ ಬಹುತೇಕರು ಬರೆವ ಮೋಹದ ಭ್ರಾಮಕ ಸಾಲುಗಳಿಲ್ಲ ಮತ್ತು ತೆಳುವಾದ ಸಾಲುಗಳ ಬೆನ್ನೇರಿಕೆ ಇಲ್ಲ. ಹೆಣ್ಣಿನ ಕನಲುವಿಕೆ, ವಿಶಾದ, ಅದೇ ಅದೇ ಸ್ಲೋಗನ್ ರೂಪದ ಬಂಡಾಯ ಇಲ್ಲ
ಎಲ್ಲವೂ ಬಾಳಿನ ತತ್ವವೊಂದನ್ನು ಹಿಡಿವ ಮತ್ತು ತನ್ನ ಬಾಳನ್ನು ರೂಪಿಸಿದ ವಿಚಾರಗಳನ್ನು ಅಭಿವ್ಯಕ್ತ ಪಡಿಸುವ ಗಂಭೀರವಾದ ಪ್ರಯತ್ನ ಇದೆ. ಕವಿತೆ ಎಂದರೆ ಬಾಳಿನ ನಂಬಿಕೆಗಳನ್ನು ಮತ್ತೆ ಮತ್ತೆ ಶೋಧಿಸಿ ಕೊಟ್ಟ ಅಕ್ಷರ ರೂಪ ಎಂಬ ಮಾತಿನಂತೆ ಇಲ್ಲಿನ ಕವಿತೆಗಳು ಕಾಣುತ್ತವೆ. ವರ್ತಮಾನ ಇರಬಹುದು ಅಥವಾ ಚರಿತ್ರೆ ಪುರಾಣ ಇರಬಹುದು ಅದರ ಮೂಲಕ ಅನೇಕ ಗೊಂದಲ ಮತ್ತು ತಕರಾರನ್ನು ಮುಖಾಮುಖಿ ಆಗಿಸುವ ಗುಣ ಇಲ್ಲಿಯದು. ಹಾಗಾಗೇ ಇಲ್ಲಿನ ಅಪ್ಪ ಬುದ್ಧನಾಗಲಿಲ್ಲ, ದೇವರು ಬದಲಾದ, ಯಶೋಧರೆಯ ಉವಾಚ, ರಾಧಾ ರಮಣರ ನಡುವೆ ನಾವೂ ನೀವೂ, ಎಲ್ಲರೊಳಗೊಂದಾದ ರಾಮನೇ, ನಂಬಿಕೆ ದೇವರು, ಮತ್ತು ಸಮಾಜ ಇವು ಗಮನಾರ್ಹ.

ಅಕ್ಷಯ ಅವರ ಕವಿತೆಗಳಲ್ಲಿ ದಟ್ಟವಾಗಿ ಕಾಣುವ ಅಂಶ ಅದು ತನ್ನನ್ನು ಸಾಕಿ ಸಲುಹಿ ಬೆಳೆಸಿದ ತವರು ಮತ್ತು ಅಪ್ಪ ಅಮ್ಮಂದಿರ ಗಾಢ ಅಂತಃಕರಣ. ಅಪ್ಪನ ಬೆವರು ಅಮ್ಮನ ಶೋಚನೀಯ ದಣಿವು ಈ ಸಂಕಲನದಲ್ಲಿ ಉದ್ದಕ್ಕೂ ಹರಿದಿದೆ. ಅದು ಹಸಿವು ಮತ್ತು ಬಾಳನ್ನು ಕಟ್ಟಿಕೊಳ್ಳುವ ಶ್ರಮದ್ದು. ನಿಂತಲ್ಲಿ ಕೂತಲ್ಲಿ ಇಲ್ಲಿ ಕವಿಗೆ ಆ ದುಡಿಮೆ ಮತ್ತು ಹೋರಾಟದ್ದೇ ಚಿಂತನೆ. ಅದು ಇಡೀ ಸಂಕಲನದ ಶೀರ್ಷಿಕೆಯಲ್ಲಿ ದನಿಯಾಗಿ ಕೂತಿದೆ. ಬಾಳಿನ ಎಲ್ಲ ಹಂಬಲಗಳ ಆಚೆ ಹೊಟ್ಟೆ ಹಸಿವು ಇದೆಯಲ್ಲ ಅದು ತೀವ್ರವಾದ ಪಾಠ ಕಲಿಸುತ್ತದೆ. ಜೀವ ಕೊಡುವ ಮತ್ತು ಜೀವ ತೆಗೆವ ಈ ಅನ್ನದ ಸಂಗತಿ ಇಲ್ಲಿ ಉಸಿರಿನ ಝೇಂಕಾರ ಮತ್ತು ವಿಪ್ಲವಗಳಿಗೆ ಕಾರಣವಾಗುತ್ತದೆ.
‘ಹಾಸಲ್ಲೇ ಉಸುರಿ ಕಣ್ಣಲ್ಲೇ ಜೀವ ಹಿಡಿದಿರುವ
ಅಮ್ಮನ ಸುಕ್ಕುಗಳಾಳದಲ್ಲಿ ಹುಡುಕುವ’
ಈ ಭಾವ ಜೀವನವನ್ನು ಕುರಿತ ಜಿಜ್ಞಾಸೆಗೆ ತೊಡಗುತ್ತದೆ. ಅಪ್ಪನ ಅನಾರೋಗ್ಯ ಅಮ್ಮನ ಬವಣೆಗಳಲ್ಲಿ ಮೂಡುವ ಬಾಳನ್ನು ಕುರಿತು ಮತ್ತೆಮತ್ತೆ ಚಿಂತನೆಗೆ ತೊಡಗುವಿಕೆ ಇಲ್ಲಿ ಕಾಣುತ್ತದೆ, ಎಷ್ಟೇ ಸಂಕಟ ಸಾವುಗಳನ್ನು ಕಂಡರೂ ಉಂಡರೂ ಮನೆ ಬಿಟ್ಟು ಹೋಗದ ಅಪ್ಪ ಬುದ್ಧನಾಗದೇ ಬಾಳನ್ನು ಜಯಿಸಿದವನು. ಒಮ್ಮೆ ಹೆಣವನ್ನು ಕಂಡು ಹೌಹಾರಿದ್ದ ಸಿದ್ಧಾರ್ಥನಿಗೂ ನಿತ್ಯ ಸಾವನ್ನು ಕಾಣುವ ಅಪ್ಪನಿಗೂ ಬಹಳ ವ್ಯತ್ಯಾಸ ಇದೆ ಎಂಬ ಕಾರಣಕ್ಕೇ ಇಲ್ಲಿ ಅಪ್ಪ, ಅಕ್ಕಿ, ಹಿಡಿ, ಅನ್ನ, ಸಾರು, ಉಸಿರು ಕೂಡಾ ಇಲ್ಲಿ ಕಾವ್ಯದ ಧಾತುಗಳಾಗುತ್ತವೆ ತಾತ್ವಿಕತೆಯನ್ನು ರೂಪಿಸುತ್ತವೆ. ಯುಗಾದಿ ಮತ್ತು ನಾನು, ಕಟ್ಟಿರುವ ಗೆಜ್ಜೆ, ಅಮೃತ ಘಳಿಗೆಗಳು, ಇಂತಲ್ಲಿ ಇವು ಸ್ಪಷ್ಟ.
ಉಳಿದಂತೆ ಸ್ವಾತಂತ್ರಭಾರತದಲ್ಲಿ ಹೆಣ್ಣಿನ ಸ್ವಾತಂತ್ರ÷್ಯ, ಮನೆ, ಉದ್ಯೋಗವನ್ನು ನಿಭಾಯಿಸುವ ಬವಣೆ ಸವಾಲು, ದಾಸ್ಯ ಅಥವಾ ಗುಲಾಮಗಿರಿ ಅನ್ನುವುದು ಮನೆಯೊಳಗೂ ಹೊರಗೂ ಹೇಗೆ ಮೆಟ್ಟಿ ನಿಲ್ಲಿಸುತ್ತದೆ? ಹಕ್ಕುಗಳ ವ್ಯಂಗ್ಯ, ಆದರ್ಶಗಳ ಸೋಲಿನ ವಿಶಾದ, ಸಂಬAಧಗಳ ಕ್ಷಣಿಕತೆ, ಭ್ರಾಮಕ ಬಾಂಧವ್ಯಗಳ ಕಿರುಚಾಟ, ಮಗ ಮಕ್ಕಳ ಕಾಡುವ ಪ್ರಶ್ನೆಗಳು, ನಿಸರ್ಗದ ರಹಸ್ಯ ಮತ್ತು ರಮಣೀಯತೆ, ಕಾಪಿಡಬೇಕಾದ ತನ್ನದೇ ಕನಸುಗಳು, ಎಷ್ಟೇ ಉದ್ದುದ್ದ ಭಾಷಣಗಳನ್ನು ಬಿಗಿದರೂ ಹೆಣ್ಣಾಗಿ ಅಡುಗೆ ಕೋಣೆಯೊಳಗೆ ಮಾಡಿಕೊಳ್ಳಬೇಕಾದ ಹೊಂದಾಣಿಕೆ ಈ ಎಲ್ಲ ಎಲ್ಲದರ ಬಗ್ಗೆ ಶ್ರೀಮತಿ ಅಕ್ಷಯ ಶೆಟ್ಟಿ ಅವರು ಕವಿತೆಯ ಶರೀರದ ಮೂಲಕ ಅಭಿವ್ಯಕ್ತಿ ಪಡಿಸಿದ್ದಾರೆ. ಅವರ ಪಾಲಿಗೆ ಕವಿತೆ ಎನ್ನುವುದು ಬಾಳಿನ ಮುಖ್ಯ ಸಂವೇದನೆಗಳನ್ನು ದಾಖಲಿಸಬಹುದಾದ ಸೂಕ್ಷ÷್ಮ ಮಾಧ್ಯಮ. ಇದು ಕುಸುರುಗಾರಿಕೆ ಕೂಡಾ ಹೌದು. ಯಾವ ಅನುಭವ ಸಂವೇದನೆ ಕವಿತೆಯಾಗಬಲ್ಲದು ಎಂಬ ಚಿಂತನೆಯೂ ಇಲ್ಲಿ ಕೆಲಸ ಮಾಡಿದೆ

ಹೀಗೊಂದು ತರ್ಕ, ಸಾಮಾನ್ಯಳ ಸ್ವಗತ, ಒಲೆಯ ಮುಂದು, ಬೌತಿಕವಾದವೂ ತಾತ್ವಿಕತೆಯೂ, ಕಟ್ಟಿರುವ ಗೆಜ್ಜೆ, ಗಡಿ ಮತ್ತು ಮನಸು, ಬದುಕು-ಭಾವ, ಸ್ವಾತಂತ್ರ÷್ಯ ದಿನಾಚರಣೆ, ಪೂರ್ವದ ಆಧುನಿಕ ಕಾಲ ಇತ್ಯಾದಿ ಕೆಲವು ಕವನಗಳ ವಸ್ತು ಚೆನ್ನಾಗಿನೆ. ವಸ್ತು ಮತ್ತು ಅಭಿವ್ಯಕ್ತಿಯ ನಡುವೆ ಪಕ್ವವಾಗುವ ಕ್ರಿಯೆ ಒಂದಿರುತ್ತದೆ ಇದು ಕವಿತೆಯನ್ನು ಗಟ್ಟಿಗೊಳಿಸಬಲ್ಲದು.
‘ಅಲ್ಲೊಂದು ಖಾಲಿ ಪುಟವಿತ್ತು ರೇಖೆಗೊಳ್ಳುವ ಮನಸಿತ್ತು
ಜಿಜ್ಞಾಸೆಯೊಳಗೆ ಪದವಿತ್ತು ಪದದೊಳಗೆ ಲಯವಿತ್ತು’
ಎಂಬ ಸಾಲುಗಳ ಹಾಗೆ ಜಿಜ್ಞಾಸೆಗಳಿಗೆ ಲಯಬದ್ದ ಪದಗಳ ಸಾಂಗತ್ಯ ದೊರೆತಾಗ ಅದರ ಗಹನತೆಯೇ ಭಿನ್ನ. ಒಟ್ಟು ಸಂಕಲನದ ವೈವಿಧ್ಯಮಯ ವಸ್ತುಗಳಿಗೆ ಇನ್ನಷ್ಟು ಮೋಹಕ ರೂಪಕದ ಭಾಷೆ ಮತ್ತು ಹೇಳದೆಯೂ ಎಲ್ಲ ಹೇಳುವ ಮಾಂತ್ರಿಕ ಭಾವಲಯ ಅಕ್ಷಯ ಅವರಿಗೆ ದಕ್ಕಬಲ್ಲದು. ಬರೆಯಬೇಕೆಂಬ ಹಂಬಲ ಮತ್ತು ಅಂತಹ ಬಿಡುಗಡೆಯ ಹಪಾಹಪಿತನ ಜೊತೆಗೆ ತಾವು ಬರೆದದ್ದು ಗುಣಾತ್ಮಕವಾಗಿದೆಯೆ ಎಂಬ ಸಣ್ಣ ಅನುಮಾನವಿರುವ ಶ್ರೀಮತಿ ಅಕ್ಷಯ ಶೆಟ್ಟಿ ಅವರಿಂದ ಇನ್ನೂ ಮಹತ್ವವಾದ ರಚನೆಗಳನ್ನು ಖಂಡಿತಾ ನಿರೀಕ್ಷೆ ಮಾಡಬಹುದು. ಕವಿತೆ ಎಂಬುದು ಉಸಿರ ಲಯದಷ್ಟೇ ಸಹಜವಾದಾಗ ಅದ್ಭುತಗಳು ಸಂಭವಿಸಬಹುದು. ಬಹುತ್ವದ ಓದು ಅಬಿರುಚಿ ಮತ್ತು ಅಧ್ಯಾಪನದ ಅನುಭವ ಇರುವ ಅಕ್ಷಯ ಅವರ ಬಗ್ಗೆ ಖಂಡಿತಾ ನನಗೆ ಭರವಸೆ ಇದೆ. ವಾಚ್ಯಗಳಿಂದ ಬಿಡಿಸಿಕೊಂಡು ಅವರು ರೂಪಕಾತ್ಮಕ ನುಡಿಗಳ ಜೊತೆಗೆ ಮಾತಾಡಲಿ ಎಂದು ಆಶಿಸುವೆ.






0 Comments