ಅಕ್ಕ ಕೇಳವ್ವಾ, ನಾನೊಂದು ಕನಸ ಕಂಡೆ..

ಡಾ.ಲಕ್ಷ್ಮೀ ಜಿ ಪ್ರಸಾದ

ಮೊನ್ನೆ ಶಿರ್ವದಲ್ಲಿ ಹಿಡಿದ ನರಸಣ್ಣ ವೇಷದ ಫೋಟೋ ವನ್ನು ಫೇಸ್ ಬುಕ್ ಗೆ ಹಾಕುತ್ತಿದ್ದಾಗ ಪಕ್ಕನೆ ನನ್ನ ಕ್ಯಾಮರಾದ ಕನವರಿಕೆ ಬಗ್ಗೆ ನೆನಪಾಯಿತು.

ಯಾಕೋ ಏನೋ ನಾನು ಸಣ್ಣಾಗಿನಿಂದ ಎಲ್ಲ ಹುಡುಗಿಯರ ಹಾಗೆ ಇರಲಿಲ್ಲ .ಸಾಮಾನ್ಯಾವಾಗಿ ಹುಡುಗಿಯರಿಗೆ ಬಣ್ಣ ಬಣ್ಣದ ಬಳೆ, ಲಂಗ ರವಿಕೆ ಅಂತ ಆಸಕ್ತಿ ಇರ್ತದೆ . ಅವರ ಆಟಗಳಲ್ಲಿ ಕೂಡ ಅಡುಗೆ ಮಾಡುದು , ರಂಗೋಲಿ ಹಾಕುದು , ಅಮ್ಮ ಮಗುವಿನ ಅಭಿನಯ ಇತ್ಯಾದಿ ಇರುತ್ತದೆ. ಆದರೆ ನನಗೆ ಬಳೆ ಲಂಗ ರವಿಕೆಗಳ ಬಗ್ಗೆ ಏನೇನೂ ಆಸಕ್ತಿ ಇರಲಿಲ್ಲ. ಬಹುಶ ನಮ್ಮ ಕೋಳ್ಯೂರು ದೇವರ ಮಂಡಲ ಪೂಜೆಗೆ ಬಂದ ಜಾತ್ರೆಯಲ್ಲಿಯೂ ಕೂಡ ನಾನು ಬಳೆ ಗಿಳೆ ಆಟದ ಸಾಮಾನುಗಳನ್ನು ತೆಗೆದ ನೆನಪು ನನಗಿಲ್ಲ . ನಾನು ದಂಬಾರು ತೊಟ್ಟಿಲ್ ನಲ್ಲಿ ಕುಳಿತು ಕೊಳ್ಳುತ್ತಾ ಇದ್ದುದು ಮಾತ್ರ ನನಗೆ ನೆನಪಿದೆ . ಶೆಟ್ಟಿ ಐಸ್ ಕ್ರೀಂ ಕೂಡ ನನಗೆ ಆಗ ಅಷ್ಟೇನೂ ರುಚಿಕರ ಎನಿಸಿರಲಿಲ್ಲ. ಆದರೂ ಎಲ್ಲರೂ ತಿನ್ನುವಾಗ ನಾನು ತಿನ್ನದಿದ್ದರೆ ಹೇಗೆ ಎಂದು ನಾನೂ ಐಸ್ ಕ್ರೀಂ ತಿನ್ನುತ್ತಿದ್ದೆ !

laxmi prasad with cameraನನಗೆ ಚಿಕ್ಕಂದಿನಲ್ಲಿ ವಿಪರೀತ ಸಾಹಸ ಪ್ರವೃತ್ತಿ ಇತ್ತು ! ನನಗೆ ಚಿಕ್ಕಂದಿನಲ್ಲಿಯೇ ಕ್ಯಾಮರ ಬೇಕು ಫೋಟೋ ಹಿಡಿಯಬೇಕು ಎಂಬ ಹಂಬಲ ಇತ್ತು ! ಇದಕ್ಕೆ ಒಂದು ಕಾರಣವೂ ಇದೆ . ಸುಮಾರು ಮೂವತ್ತು ಮೂವತ್ತೆರಡು ವರ್ಷ ಮೊದಲು ನಾನು ನಾಲ್ಕನೇ ತರಗತಿ ಓದುತ್ತಿರುವ ಸಮಯದಲ್ಲಿ ನಾನು ಜಾತ್ರೆಯಂದು ಸಂತೆಗೆ ಹೋದಾಗ ಮೊದಲ ಬಾರಿಗೆ ಕ್ಯಾಮೆರಾವನ್ನು ನೋಡಿದೆ . ಆಗ ಯಾರ ಕೈಯಲ್ಲೂ ಕ್ಯಾಮರ ಇರುತ್ತಿರಲಿಲ್ಲ ಈಗಿನಂತೆ .
ಆ ದಿನ ಅಪರೂಪಕ್ಕೆ ಯಾರೋ ಒಬ್ಬರು ಸಂತೆಯ ಫೋಟೋ ತೆಗೆಯುತ್ತಿದ್ದರು.

ಕೋಳ್ಯೂರು ದೇವರ ಆಯನದ ಸಂತೆಯಲ್ಲಿ ಮೂರು ಕೋಲುಗಳನ್ನು ತ್ರಿಕೋನ ಆಕಾರದಲ್ಲಿ ಜೋಡಿಸಿ ಅದರ ಮೇಲೆ ಮರದ ಹಲಗೆಯಂಥದ್ದು ಏನನ್ನೋ ಇಟ್ಟು, ಅದರ ಮೇಲೆ ಒಂದು ಕಪ್ಪು ಬಟ್ಟೆ ಮುಚ್ಚಿ ಒಬ್ಬಾತ ಏನೋ ಮಾಡುತ್ತಾ ಇದ್. ಆತ ಫೋಟೋ ತೆಗೆಯಲು ಸಿದ್ಧತೆ ಮಾಡುತ್ತಿದ್ದುದು ಇರಬಹುದು ಎಂದು ನನಗೆ ಎಷ್ಟೋ ಸಮಯದ ಮೇಲೆ ಅಂದಾಜು ಆಗಿತ್ತು. ಆಗಂತೂ ನನಗೆ ಅವರು ಫೋಟೋ ತೆಗೆಯುವ ಸಂಗತಿ ಗೊತ್ತಿರಲಿಲ್ಲ , ನಾನು ಅವರನ್ನು ಗಮನಿಸದೆ ಕ್ಯಾಮೆರಾದ ಎದುರಿನಿಂದ ಹೋದೆ . ನಾನು ಹೋಗುವುದೂ ಕ್ಯಾಮರ ಕ್ಲಿಕ್ ಮಾಡುವುದೂ ಒಟ್ಟಿಗೆ ಆಯಿತು. ಅಲ್ಲಿದ್ದವರೆಲ್ಲ ಏ ಏ ..ಎಂದು ಬೊಬ್ಬೆ ಹೊಡೆದರು . “ಎಂತ ಸಂಗತಿ” ಅಂತ ಗೊತ್ತಿಲ್ಲದ ನನಗೆ ಒಂದು ಕ್ಷಣ ಗಾಬರಿ ಆಯ್ತು .ಅಷ್ಟರಲ್ಲಿ ಫೋಟೋ ತೆಗೆಯುತ್ತಿದ್ದಾತ “ಇರಲಿ ಬಿಡಿ ಸಣ್ಣ ಹುಡುಗಿ ಅವಳಿಗೇನು ಗೊತ್ತಾಗುತ್ತೆ” ಎಂದು ಹೇಳಿ ನನ್ನಲ್ಲಿ “ನೀನು ಈ ಕ್ಯಾಮೆರದೊಳಗೆ ಬಿದ್ದಿದ್ದೀಯಾ ಗೊತ್ತಾ” ಎಂದು ಕೇಳಿ ತಮಾಷೆ ಮಾಡಿದರು . ಆಗ ನನಗೆ ಅವರು ಏನು ಹೇಳಿದ್ದು ಅಂತ ಗೊತ್ತಾಗಲಿಲ್ಲ . ಅವರಲ್ಲಿದ್ದ ವಸ್ತು ಕ್ಯಾಮರ ಅದರಲ್ಲಿ ನಮ್ಮ ಫೋಟೋ ಬರುತ್ತೆ ಅಂತಾನೂ ಅಗ ಗೊತ್ತಿರಲಿಲ್ಲ, .

ಆದರೆ ಸ್ಟೈಲ್ ಆಗಿ ನಿಂತು ಆ ತರ ಬೆಳಕು ಹಾಯಿಸುವ ಆ ವಸ್ತು ಹಿಡಿದ ವ್ಯಕ್ತಿಗೆ ತುಂಬಾ ಗೌರವ ಇದೆ , ಆ ವಸ್ತುವಿಗೆ ತುಂಬಾ ಬೆಲೆ ಇದೆ ಅಂತ ಗೊತ್ತಾಯ್ತು . ಆಗಲೇ ಅಂದು ಕೊಂಡೆ ನಾನು ದೊಡ್ಡವಳಾದ ಆ ವಸ್ತುವನ್ನು ತಗೊಂಡು ಅದೇ ತರ ಮೂರು ಕೋಲು ಮೇಲೆ ನಿಲ್ಲಿಸಿ ಮಿಂಚು ಹೊಡಿಸಿ ಮಿಂಚಬೇಕು ಅಂತ !
ಮತ್ತೆ ಒಂದೆರಡು ವರ್ಷ ಕಳೆಯುವಾಗ ನನಗೆ ಕ್ಯಾಮರ ಬಗ್ಗೆ ತುಸು ಮಾಹಿತಿ ತಿಳಿಯಿತು .ಕ್ಯಾಮರ ತುಂಬಾ ಬೆಲೆ ಬಾಳುವ ವಸ್ತು ಶ್ರೀಮಂತರ ಕೈಯಲ್ಲಿ ಮಾತ್ರ ಇರುತ್ತದೆ ಅಂತ ತಿಳಿದಾಗಲೂ ನನಗೆ ಒಂದು ಕ್ಯಾಮರ ಬೇಕು , ಕಂಡ ಕಂಡದ್ದನ್ನೆಲ್ಲ ಫೋಟೋ ತೆಗೆಯಬೇಕು ಎಂಬ ಆಸೆ ಮಾತ್ರ ದೂರವಾಗಲಿಲ್ಲ.

ವರುಷಗಳು ಕಳೆದರೂ ನನ್ನ ಮೆದುಳು ಹೆಚ್ಚೇನೂ ಬೆಳೆಯಲಿಲ್ಲ, (ಈಗಲೂ ಹಾಗೆ ಇದೆ ಅದು ಮುಂದಕ್ಕೆ ಬೆಳೆಯಲ್ಲ ಅಂತ ಹಠ ಮಾಡಿ ಕೂತಿದೆ ತಣ್ಣನೆ !!) ಕ್ಯಾಮರದ ಹುಚ್ಚು ಹಾಗೆಯೆ ಇತ್ತು ಡಿಗ್ರೀ ಎರಡನೇ ವರ್ಷ ಓದುವಾಗ ಮದುವೆ ಆಯಿತು . ಪ್ರಸಾದ್ ಸಮೀಪದ ಸಂಬಂಧಿಯೊಬ್ಬರ ಕೈಯಲ್ಲಿ ಕ್ಯಾಮರ ಇತ್ತು . ಆಗಿನ ಕಾಲಕ್ಕೆ ಕೊಡಕ್ ರೀಲ್ ಹಾಕುವ ಕ್ಯಾಮರವೆ ಒಂದು ಸೋಜಿಗದ ವಸ್ತು ನನ್ನ ಪಾಲಿಗೆ.

laxmi prasad1ಪ್ರಸಾದ್ ತಂಗಿ ನನ್ನದೇ ವಯಸ್ಸಿನ ಹುಡುಗಿ . ಒಂದು ದಿನ ಅವರ ಸಂಬಂಧಿಕರಲ್ಲಿದ್ದ ಆ ಕ್ಯಾಮರವನ್ನು ತಂದು ಮನೆ ಮಂದಿಯ ಎಲ್ಲರ ಫೋಟೋಗಳನ್ನು ತೆಗೆದಳು . ಮನೆಯಲ್ಲಿದ್ದ ಜನರು ನಾಯಿ ಬೆಕ್ಕು ಮರ ಗಿಡ ಎಲ್ಲವುಗಳ ಮೇಲೂ ಮಿಂಚು ಬಿತ್ತು. (ನನ್ನ ಮತ್ತು ಪ್ರಸಾದ್ ಹೊರತಾಗಿ !) ನನಗೆ ನನ್ನ ಫೋಟೋ ತೆಗೆಯದ್ದು ಏನೂ ಬೇಸರ ಇರಲಿಲ್ಲ ! ಆದರೆ ಒಮ್ಮೆಯಾದರೂ ಕ್ಲಿಕ್ ಮಾಡಲು ನನ್ನ ಕೈಗೆ ಕೊಟ್ಟಿದ್ದರೆ ಎಂದು ಆಸೆಯಾಗಿತ್ತು ! ಏನು ಮಾಡುದು ! ಅದು ತಂದೆ ಮನೆಯಲ್ಲವಲ್ಲ , ಆಶಿಸಿದ್ದೆಲ್ಲ ಸಿಗಲು !

ಆಗ ನಾನು ಅಂದುಕೊಂಡೆ ನಾನು ಮುಂದೆ ಓದಿ ಕೆಲಸಕ್ಕೆ ಸೇರಿದ ನಂತರ ಮೊದಲ ತಿಂಗಳ ಸಂಬಳದಲ್ಲಿಯೇ ಒಂದು ಕ್ಯಾಮರ ತೆಗೆದುಕೊಳ್ಳಬೇಕು ಎಂದು.
ಆದರೆ ಡಿಗ್ರೀ ಆಗಿ ಎಂ. ಎ ಓದಿ ಕೆಲಸಕ್ಕೆ ಸೇರುವಷ್ಟರಲ್ಲಿ ಕ್ಯಾಮೆರಕ್ಕಿಂತ ಹೆಚ್ಚು ಮನೆ, ಬದುಕಿನ ಅಗತ್ಯತೆಗಳು ಖರ್ಚಿನ ಸರಮಾಲೆಗಳು ಎದುರಾದವು . ನನ್ನ ಕ್ಯಾಮರದ ಕನವರಿಕೆ ಅಲ್ಲಿಯೇ ಕಮರಿತ್ತು .

ಒಂದೆರಡು ವರ್ಷ ಹೀಗೆ ಕಳೆಯಿತು…

1997ರ ಅಕ್ಟೋಬರ್ 29 ರಂದು ಪ್ರಸಾದ್ “ನಿನ್ನ ಬರ್ತ್ ಡೇಗೆ ಒಂದು ಸಣ್ಣ ಆದರೆ ಸ್ಪೆಷಲ್ ಗಿಫ್ಟ್” ಅಂತ ನನ್ನ ಕೈಗೆ ಒಂದು ಪೊಟ್ಟಣ ನೀಡಿದರು .
ನಾವಿಬ್ಬರೂ ಸಿಹಿ ಪ್ರಿಯರು , ಹಾಗಾಗಿ ಯಾವುದಾದರೂ ವಿಶೇಷ ಸ್ವೀಟ್ ಇರಬಹುದೆಂದು ತೆರೆದು ನೋಡಿದರೆ ನನ್ನೆದುರು ಕೊಡಕ್ ಕ್ಯಾಮರ ಇತ್ತು !
ನಾನು ಸಣ್ಣ ಹುಡುಗಿಯಂತೆ ಕುಣಿದು ಸಂಭ್ರಮಿಸಿದೆ ! ನನ್ನ ಅಂದಿನ ಸಂಭ್ರಮ ನೆನೆದರೆ ಈಗ ನನಗೆ ನಗು ಬರುತ್ತದೆ ! ಎಂಥ ಹುಚ್ಚು ಅಂತ !
ಅಂದಿನಿಂದ ಶುರು ಸಿಕ್ಕಿದ್ದನ್ನು ಫೋಟೋ ತೆಗೆಯುವ ಹುಚ್ಚು ! ಇಂದಿನವರೆಗೂ ಮುಂದುವರೆದಿದೆ .

laxmi prasad book cover2004ರಲ್ಲಿ ನನ್ನ ಭೂತಾರಾಧನೆ ಕುರಿತಾದ ಸಂಶೋಧನ ಕಾರ್ಯಕ್ಕೆ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ಅಣ್ಣ ಕೃಷ್ಣಭಟ್ ವಾರಾಣಾಸಿ ನನಗೆ ಒಂದು ಒಳ್ಳೆಯ ಕ್ಯಾನನ್ ಡಿಜಿಟಲ್ ಕ್ಯಾಮರ ಮತ್ತು ಒಂದು ಹಾಂಡಿಕಾಮ್ ಅನ್ನು ಒದಗಿಸಿಕೊಟ್ಟರು .ಅಲ್ಲಿಂದ ಫೋಟೋ ತೆಗೆಯುದಕ್ಕೆ ಇರುವ ಎಲ್ಲ ಅಡ್ಡಿಗಳೂ ನಿವಾರಣೆಯಾದವು. ರೀಲ್ ಕ್ಯಾಮರದಲ್ಲಿ ಫೋಟೋ ಹೇಗೆ ಬಂತು ಎಂದು ನೋಡಿ ಪುನಃ ಕ್ಲಿಕ್ಕಿಸುವ ಅವಕಾಶ ಇಲ್ಲ , ಜೊತೆಗೆ ಅದರ ಸ್ಟುಡಿಯೋ ಕ್ಕೆ ಕೊಟ್ಟು photos ಆಗಿ ಕನ್ವರ್ಟ್ ಮಾಡಿ ತರಲು ಸಾಕಷ್ಟು ದುಡ್ಡು ವ್ಯಯವಾಗುತ್ತಿತ್ತು . ಗುಣ ಮಟ್ಟ ಕೂಡ ಅಷ್ಟಕ್ಕಷ್ಟೇ !.

ಅಣ್ಣ ಕೊಟ್ಟ ಕ್ಯಾಮರದಲ್ಲಿ ಸುಮಾರು ವರ್ಷ ಭೂತಾರಾಧನೆ ಬಗ್ಗೆ ಫೀಲ್ಡ್ ವರ್ಕ್ ಮಾಡಿ ರೆಕಾರ್ಡ್ ಮಾಡಿ ಫೋಟೋ ಹಿಡಿದು ಅಧ್ಯಯನ ಮಾಡಿದೆ ನನ್ನ ಹೆಚ್ಚಿನ ಸಂಶೋಧನೆ ಅಣ್ಣನ ಕಾಮರದಲ್ಲಿಯೇ ಆಗಿದೆ ಅದರಲ್ಲಿ ತೆಗೆದ ಫೋಟೋ ತುಂಬಾ ಗುಣ ಮಟ್ಟದಲ್ಲಿ ಬರುತ್ತಿತ್ತು . ಆದರೂ ತುಂಬಾ ಕಾಲ (ಸುಮಾರು ಎಂಟು-ಒಂಬತ್ತು ವರ್ಷ ) ಕೆಲಸ ಮಾಡಿದಾಗ ಅದು ಹಾಳಾಗತೊಡಗಿತು, ಅದರ ಕಾರ್ಯ ಕ್ಷಮತೆ ಕುಗ್ಗಿದಾಗ ಒಂದು ಒಳ್ಳೆಯ ಕ್ಯಾಮರ ಖರೀದಿಸಬೇಕು ಎಂದು ಕೊಂಡೆ. ಅಷ್ಟರಲ್ಲಿ ಚಿಕಾಗೊದಲ್ಲಿ ಕೆಲಸ ಮಾಡುತ್ತಿರುವ ತಮ್ಮ ಈಶ್ವರ ಭಟ್ ವಾರಾಣಸಿ ಒಂದು ಪನಸೋನಿಕ್ ಡಿಜಿಟಲ್ ಕ್ಯಾಮರವನ್ನು ಗಿಫ್ಟ್ ಆಗಿ ಕೊಟ್ಟರು.
ಪ್ರಸ್ತುತ ಅದರಲ್ಲಿಯೇ ಸಿಕ್ಕಿದ್ದನ್ನು ಫೋಟೋ ಹಿಡಿಯುವ ಕಾಯಕ ಮುಂದುವರಿಸಿದ್ದೇನೆ ! ಹಾಗಂತ ನನ್ನನ್ನು ದೊಡ್ಡ ಫೋಟೋಗ್ರಾಫರ್ ಎಂದು ಕೊಳ್ಳಬೇಡಿ. ಇಂದಿಗೂ ಫೋಟೋಗ್ರಫಿ ಬಗ್ಗೆ ನನ್ನ ಜ್ಞಾನ ದೊಡ್ಡ ಸೊನ್ನೆಗೆ ಹತ್ರದಲ್ಲಿಯೇ ಇದೆ !

ಈಗ ಮತ್ತೆ ಪುನಃ ತಮ್ಮ ಈಶ್ವರ ಭಟ್ ತುಂಬಾ ಬೆಲೆ ಬಾಳುವ ಡಿಎಸ್ ಎಲ್ ಆರ್ ಕ್ಯಾಮರ ತಂದುಕೊಟ್ಟಿದ್ದಾರೆ. ಕನಸು ಈಡೇರಿದೆ.. ಇನ್ನಾದರೂ ಸ್ವಲ್ಪ ಫೋಟೋಗ್ರಫಿ ಬಗ್ಗೆ ಕಲಿಯಬೇಕೆಂದುಕೊಂಡಿದ್ದೇನೆ

‍ಲೇಖಕರು admin

December 9, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಮುಗಿಯದ ಮೌನ- GKN

    ಭೂತಗಳ ಲೋಕದಲ್ಲಿ, ಅವಿರತವಾಗಿ ಸಂಶೋಧನೆ ನಡೆಸಿದ ನಿಮ್ಮ ಆಸಕ್ತಿ ಅವರ್ಣನೀಯ,,,,,,, ಹೊಸ ಕ್ಯಾಮರಕ್ಕೆ ಶುಭವಾಗಲಿ, ಹಾಗೆ ಫೋಟೋಗ್ರಫಿ ಕಲಿಕೆಗೂ ಕೂಡ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: