’ಅಕ್ಕ, ಅಲ್ಲಮ, ಬಸವ ಮತ್ತು ಕಲ್ಯಾಣ’ – ಗಿರಿಜಾ ಶಾಸ್ತ್ರಿ ಬರೀತಾರೆ

ಕಲ್ಯಾಣದ ಮೂರು ದಾರಿಗಳು…….

ಗಿರಿಜಾಶಾಸ್ತ್ರಿ,

ಮುಂಬಯಿ

ಬುದ್ಧ ನಮ್ಮ ದೇಶದಿಂದ ಹೊರಟು ಹೋದ. ಯುದ್ಧದ ಎದುರು ನಿಂತ, ಅನಿಯಂತ್ರಿತ ಪ್ರೇಮದ ಸಾಕಾರ ಮೂರ್ತಿಯಾದ ಬುದ್ಧ ಯಾಕೆ ಹೊರಟು ಹೋದ? ವಿಪಶ್ಶನಾ ಶಿಬಿರದಲ್ಲಿ ನೆರೆದ ಅಭ್ಯರ್ಥಿಗಳನ್ನು ಉದ್ದೇಶಿಸಿ ಸತ್ಯನಾರಾಯಣ ಗೊಯೆಂಕಾ ಹೇಳುತ್ತಿದ್ದರು. ಬುದ್ಧನ ಜೊತೆಗೇ ಅವನ ಪ್ರೇಮ ಸಿದ್ಧಾಂತಗಳು ನಮ್ಮ ದೇಶದಿಂದ ಹೊರಟು ಹೋಗಿದ್ದವು. ಅದನ್ನು ಬರ್ಮಾದೇಶದಿಂದ ಮತ್ತೆ ಭಾರತದಲ್ಲಿ ಪ್ರಚಾರಕ್ಕೆ ತಂದವರು ಗೊಯೆಂಕಾ ಅವರು.
ಅನನ್ಯವಾದ ಪ್ರೇಮಸಾಧನೆ ವಿಪಶ್ಶನಾ ಧ್ಯಾನದಿಂದ ಸಾಧ್ಯ ಎಂದು ಬುದ್ಧ ಹೇಳುತ್ತಾನೆ. ವಿಪಶ್ಶನಾ ಕ್ರಿಯೆಯ ಪ್ರಾರಂಭದಲ್ಲಿ, ಐದು ಹತ್ತು ನಿಮಿಷಗಳ ಕಾಲ ಶ್ವಾಸೋಚ್ವಾಸವನ್ನು ಸಹಜವಾಗಿ ಅದು ಬಂದು ಹೋಗುವ ಹಾಗೆ ಗಮನಿಸುವ ಕ್ರಮವಿದೆ. ಇದನ್ನು ‘ಆನಾ ಪಾನಾ ಧ್ಯಾನ’ ವೆನ್ನುತ್ತಾರೆ (ಅನುಲೋಮ ವಿಲೋಮ) ಹೀಗೆ ಒಳಬಂದು ಹೊರ ಹೋಗುವ ಉಸಿರಿಗೆ ಯಾವ ಹೆಸರನ್ನು ಕೊಡಲೂ ಬುದ್ಧ ವಿರೋಧಿಸುತ್ತಾನೆ. ಅದು ಕೇವಲ ಉಸಿರು. ಉಸಿರಾಟ. ಇದಕ್ಕೆ ಯಾವ ಹೆಸರಿನ ಆಧಾರವಿಲ್ಲ. ಮಂತ್ರಗಳ ನೆರವಿಲ್ಲ. ಅಸ್ಮಿತೆಯಿಲ್ಲ. ಇವಕ್ಕೆ ಒಂದು ಹೆಸರನ್ನು ಕೊಟ್ಟಾಕ್ಷಣ ಅಲ್ಲಿ ಅಸ್ಮಿತೆಯ ಪ್ರಶ್ನೆ ಎದುರಾಗುತ್ತದೆ. ಆಗ ಹೆಸರುಗಳ ಮೇಲಾಟ, ಅಸ್ಮಿತೆಯ ಶ್ರೇಷ್ಠತೆ ಪ್ರಾರಂಭವಾಗುತ್ತದೆ. ಧ್ಯಾನವೆಂದರೇನೇ, ಈರುಳ್ಳಿಯ ಸಿಪ್ಪೆಯ ಹಾಗೆ ಒಂದೊಂದೇ ಪೊರೆಯನ್ನು ನಿಧಾನವಾಗಿ ಕಳಚಿಕೊಂಡು ಕಡೆಗೆ ಏನೂ ಇಲ್ಲವಾಗುವುದು. ಅದರ ಉದ್ದೇಶವೇ ಅಸ್ಮಿತೆಯನ್ನು ಕಳೆದುಕೊಳ್ಳುವುದು.
ಯುದ್ಧವನ್ನು ನಿರಾಕರಿಸಿದ ಬುದ್ಧ ನಮ್ಮ ದೇಶದಿಂದ ಹೊರಟು ಹೋದ. ಯಾಕೆಂದರೆ ಯುದ್ಧದ ನಿರಾಕರಣೆ ನಮ್ಮ ದೇಶದ ನಡತೆಯಲ್ಲ. ಹಾಗೆ ನೋಡಿದರೆ ಅದು ಈ ಜಗತ್ತಿನ ನಡತೆಯೇ ಅಲ್ಲ. ಆದುದರಿಂದಲೇ ಬುದ್ಧ ಎಲ್ಲಿಯೂ ಸಲ್ಲದೇ ಹೋದ. ನಮ್ಮ ಚರಿತ್ರೆಯೆಂದರೆ ಯುದ್ಧಗಳ ಚರಿತ್ರೆ. ಕೊಲ್ಲು, ಕಡಿ, ಬಡಿ, ಗೆಲ್ಲು ಇವುಗಳ ಮೇಲಾಟವೇ ನಮ್ಮ ಚರಿತ್ರೆಯ ಮೂಲ ಮಂತ್ರ. ಯುದ್ಧ ಭೂಮಿಯಲ್ಲಿ ಒಂದೊಂದು ಅಡಿ ಮುಂದಿಟ್ಟರೆ ಎಂತಹ ಲಾಭಗಳು ದೊರಕುವುವು ಎಂದು ನಮ್ಮ ಧಾರ್ಮಿಕ್, ವೀರ ಕಾವ್ಯಗಳು ಬಣ್ಣಿಸುತ್ತವೆ. ಶತ್ರುವನ್ನು ಕೊಂದರೆ ವೀರ ಸ್ವರ್ಗ, ಅಲ್ಲಿ ರಂಭೆ, ಮೇನಕೆ, ತಿಲೋತ್ತಮೆಯರು… ಸೇವೆ ಮಾಡಲು ಕಾದಿರುತ್ತಾರೆ. ಇದು ಒಂದು ರೀತಿಯ ‘ಜಿಹಾದಿ’ ಯಲ್ಲದೇ ಮತ್ತೇನು?
ಬುದ್ಧ ಹೊರಟು ಹೋಗಿದ್ದಾನೆ. ಈಗ ನಮಗೆ ಲಾಂಛನಗಳ ನಡುವೆ, ಅಸ್ಮಿತೆಗಳ ನಡುವೆ ಮೇಲಾಟ, ಹೋರಾಟ..
ಅಂಬೇಡ್ಕರ್ ಅವನನ್ನು ಮತ್ತೆ ತರಲು ಪ್ರಯತ್ನಿಸಿದರು. ಆದರೆ ಆದದ್ದೇನು? ಇಂದು ಮಹಾರಾಷ್ಟ್ರದ ತುಂಬಾ ಮಹಾಬೌದ್ಧರು ತುಂಬಿಕೊಂಡಿದ್ದಾರೆ. ಅವರ ಜೋಪಡಿಗಳ ಮೇಲೆ ಬುದ್ಧ ಮತ್ತು ಅಂಬೇಡ್ಕರ್ ಅವರ ಪಟಗಳು ರಾರಾಜಿಸುತ್ತಿವೆ. ಅವರ ವೇಷ ಭೂಷಣಗಳು ಬದಲಾಗಿರಬಹದು, ಬೆರಳೆಣಿಕೆಯ ಮಂದಿ ಅಲ್ಪ ಸ್ವಲ್ಪ ಶಿಕ್ಷಣ, ಒಂದಷ್ಟು ಹಣ ಗಳಿಸಿರಬಹುದು ..ಅಷ್ಟೇ. ಅವರು ಮಾತ್ರ ಸಾಂಸ್ಕೃತಿಕವಾಗಿ ನಿಂತಲ್ಲೇ ನಿಂತಿದ್ದಾರೆ. ಮಹಾರಾಷ್ಟ್ರದ ಯಾವುದಾದರೂ ಮನೆಹೊಕ್ಕು ಅಲ್ಲಿ ಏನಾದರೂ ಬುದ್ಧನ ಫೋಟೋ ಕಂಡರೆ ಜಾತಿವಾದಿಗಳಿಗೆ ವಾಕರಿಕೆ ಬರುತ್ತದೆ, ಜೈ ಭೀಮ್ ವಾಲೆ ಎನ್ನುವ ಜಿಗುಪ್ಸೆ ತಾತ್ಸಾರ. ಯಾಕೆಂದರೆ ಅಲ್ಲಿರುವುದು ಬುದ್ಧ ಅಲ್ಲ. ಒಬ್ಬ ಮಹರ್.
14 ನೆಯ ಶತಮಾನದಲ್ಲಿದ್ದ ಒಬ್ಬ ಮರಾಠಿ ಸಂತ ಚೋಖಮಿಳ ಎನ್ನುವವನು ಅಂತಹ ಮಹರ್ ಜನಾಂಗದಿಂದ ಬಂದವನು. ಅವನು ಪಂಡರಾಪುರದ ವಿಟ್ಠಲನ ಎದುರಿಗೆ, ಅವನ ಮುಖಕ್ಕೆ ರಾಚುವಂತೆ ಎತ್ತರದ ದನಿಯಲ್ಲಿ ಹಾಡುತ್ತಾನೆ, ಜೋಹರ್ ಮಾಯಿ ಬಾಪ್ ಜೋಹರ್.. ತುಮ್ಚಾ ಮಹರ್ಚಾ ಮಹರ್..ಮಹರ್

ಮಾಯಿ ಬಾಪ್ಪಾ (ವಿಟ್ಠಲ, ರುಕುಮಾಯಿ) ನಿಮಗೆ ನಮಸ್ಕಾರ !
(ವಿಟ್ಠಲ) ನೀನು ಹಾರುವ, ಹಾರುವ
ನಾ ನಿನ್ನ ಹೊಲೆಯರ ಹೊಲೆಯ, ಕಿಂಕರರ ಕಿಂಕರ
ಹಸಿದು ಬಳಲಿ ನಿನ್ನ ಪ್ರಸಾದಕ್ಕಾಗಿ ಬಂದಿದ್ದೇನೆ
ನಿನ್ನ ಭಕ್ತರು ಉಂಡೆಸೆದ ಎಂಜಲಿಗಾಗಿ
ತಾಟೊಂದನ್ನು ತಂದಿದ್ದೇನೆ…
ನೀ ಹಾರುವ ಹಾರುವ ನಾ ಹೊಲೆಯರ ಹೊಲೆಯಾ..
 
ಎನ್ನುತ್ತಾ ಎದೆ ತಟ್ಟಿಕೊಂಡು ತನ್ನ ಜಾತಿಯನ್ನು, ತನ್ನ ಹೀನ ಸ್ಥಿತಿಯನ್ನು ಘಂಟಾಘೋಷವಾಗಿ ಚೋಖಮಿಳ ಸಾರುವುದು ನಮ್ಮ ಸಾಮಾಜಿಕ ವ್ಯಂಗ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಕುಮಾರ ಗಂಧರ್ವರ ಕಂಠದಲ್ಲಿ ಈ ಹಾಡನ್ನು ಕೇಳಿದರೆ ಮುಂಬಯಿಯ ಗಗನಚುಂಬೀ ಇಮಾರತುಗಳು ನಡುಗುವಂತೆ ಭಾಸವಾಗುತ್ತವೆ. ಆದರೆ ಅವು ನಿಜವಾಗಿ ನಡುಗುವುದಿಲ್ಲ. ಎದುರಿನ ಅರಬ್ಬಿ ಕಡಲಿನ ವೈಶಾಲ್ಯತೆಯನ್ನು ಅಣಕಿಸುವಂತೆ ಕಟ್ಟಡಗಳು ಸಮುದ್ರವನ್ನು ತಳ್ಳಿ ಎದ್ದು ನಿಲ್ಲುತ್ತವೆ. ಕೆಳಗೆ ಜೋಪಡಿಗಳ ಒಳಗೆ ಬುದ್ಧನ ಪಟದ ಮುಂದೆ ಹಣತೆ ಮಿಣುಕುತ್ತದೆ.

***

ರಾಮಕೃಷ್ಣ ಪರಮಹಂಸರು ಹುಟ್ಟಿದ್ದು ಹಿಂದೂಧರ್ಮದಲ್ಲಿ. ಆದರೆ ಅವರು ಬದುಕಿದ್ದಷ್ಟು ಕಾಲವೂ ಜಗತ್ತಿನ ಬೇರೆ ಬೇರೆ ಧರ್ಮಗಳ ನಂಬಿಕೆಗಳನ್ನು ಆತ್ಮಸಾತ್ ಮಾಡಿಕೊಳ್ಳುವ ಸಲುವಾಗಿ ಆಯಾ ಧರ್ಮಕ್ಕನುಸಾರವಾಗಿ ಹಲವಾರು ವೇಷಗಳನ್ನು ತೊಟ್ಟು, ಆ ವೇಷದಲ್ಲಿ ಬದುಕಿ ಆಯಾ ನಂಬಿಕೆಗಳನ್ನು ಸಾಕ್ಷಾತ್ಕರಿಸಿಕೊಳ್ಳುವಲ್ಲಿ ಸದಾ ಪ್ರಯೋಗಶೀಲರಾಗಿರುತ್ತಿದ್ದರು. ಉದಾಹರಣೆಗೆ ಕ್ರಿಸ್ತನನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂದರೆ ಕ್ರೈಸ್ತರಹಾಗೇ ಬದುಕುತ್ತಿದ್ದರು. ಹಾಗೆ ಬದುಕುತ್ತಿದ್ದ ಕಾಲದಲ್ಲಿ ಅವರು ತಮ್ಮ ಆರಾಧ್ಯ ದೈವವಾದ ಕಾಳಿಯನ್ನು ಒಮ್ಮೆಯೂ ತಿರುಗಿ ಕೂಡ ನೋಡುತ್ತಿರಲಿಲ್ಲವಂತೆ. ಆಯಾ ಧರ್ಮದ ನಂಬಿಕೆಗಳನ್ನು ಆತ್ಮಸಾತ್ ಮಾಡಿಕೊಂಡು ವೇಷ ಕಳಚಿದನಂತರವೇ ಹೊರಬರುತ್ತಿದ್ದರಂತೆ- ಹೌದು, ಯಾಕೆಂದರೆ ಒಂದನ್ನು ವಿಸರ್ಜಿಸದೇ ಮತ್ತೊಂದರ ಆವಾಹನೆಯಾಗಲಾರದು. ನಾವು ಏನೂ ಆಗದೇ ಇದ್ದಾಗ ಮಾತ್ರವೇ  ಏನೋ ಆಗಲು ಸಾಧ್ಯ. ಯಾವುದೋ ಅಸ್ಮಿತೆಗೆ ಅಂಟಿಕೊಂಡುಬಿಟ್ಟಾಗ ಅದರ ಜೊತೆಗೆ ಸ್ಥಾವರವಾಗಿಬಿಡುವ ಅಪಾಯವಿರುತ್ತದೆ. ಪರಮಹಂಸರು ಯಾವುದೇ ಒಂದು ಅಸ್ಮಿತೆಗೆ ತಮ್ಮನ್ನು ತಾವು ಕಟ್ಟಿಹಾಕಿಕೊಂಡವರಲ್ಲ. ಆದುದರಿಂದಲೇ ಅವರಿಗೆ ಹಲವು ಆಕೃತಿಗಳ ಮೈಹೊಕ್ಕು ಹಾದು ಹೊರಬರಲು ಸಾಧ್ಯವಾಯಿತು. ಅವರು ಹೊಸ ಹೊಸ ಆವಾಹನೆ ಮತ್ತು ವಿಸರ್ಜನೆಯ ಆವರ್ತನಗಳಲ್ಲಿ ಅಖಂಡತೆಯನ್ನು ಅನುಭವಿಸಲು ಪ್ರಯತ್ನಿಸುತ್ತಿದ್ದರು. ಹೀಗೆ ಮಾಡುವುದರ ಮೂಲಕವೇ ಅವರಿಗೆ ಆಧುನಿಕ ಯುಗದಲ್ಲಿ ಸರ್ವಧರ್ಮ ಸಮನ್ವಯತೆಯನ್ನು ಸಾರಲು ಸಾಧ್ಯವಾಯಿತು.
ದಾರಿ -ಒಂದು
ನಮ್ಮ ಮನೆಯಿರುವುದು ಮುಂಬಯಿಯ ಹೊರವಲಯದ ಕಲ್ಯಾಣ್ ಶಹರದಲ್ಲಿ. ನಮ್ಮ ಮನೆಯ ಕೆಲಸದಾಕೆ ಮುಗ್ಧ ರಿಯಾನ ಮುಸ್ಲಿಂ ಜಾತಿಗೆ ಸೇರಿದ ಹೆಣ್ಣು ಮಗಳು. ಆಕೆ ದಿನಾ ಬರುವಾಗ ಕರೆಗಂಟೆ ಒತ್ತಿ ಬಿರಬಿರನೆ ಒಳ ಬರುವುದೇ ಹೆಚ್ಚು. ನಗರದಲ್ಲಿ ಯಾವುದೇ ಆಘಾತಕಾರಿಯಾದ ಸಂಗತಿಯಿದ್ದರಂತೂ ಅವಳು ಒಳ ನುಗ್ಗುವ ರಭಸ ಇನ್ನೂ ಜೋರಾಗಿಯೇ ಇರುತ್ತದೆ. ಬಾಂಬ್ ಆಸ್ಫೋಟದ ಮಾರನೆಯ ದಿನ ಹೀಗೆ ನುಗ್ಗಿದವಳೇ, ಕ್ಯಾ ಹೋಗಯಾ ದೀದೀ, ಐಸಾ ಕ್ಯೂಂ ಹೋತಾಹೈ ದೀದೀ? ಎಂದು ಗಾಬರಿ ಉದ್ವೇಗದಿಂದ ಭೈಯಾ ಬಾಹರ್ ಕಹೀ ನಹಿ ಗಯಾನಾ? ಎಂದು ತನಗೆ ತಾನೇ ಸಮಾಧಾನ ಪಟ್ಟುಕೊಳ್ಳುತ್ತಾಳೆ. ಏ ಸಬ್ ಕೌನ್ ಕಿಯಾ ಹೈಂ, ಐಸಾ ಕ್ಯೂಂ ಹೋತಾ ಹೈಂ ದೀದಿ.. ಸಬ್ ಕಾ ಭಗವಾನ್ ಏಕ್ ಹೈಂ ನಾ ಎನ್ನುವ ಅವಳ ಮಾತಿಗೆ, ಮುಸಲ್ಮಾನ್, ಇಂಡಿಯನ್ ಮುಜಾಹಿದ್ದೀನ್ ಎಂದು ಗಂಟಲವರೆಗೆ ಬಂದ ಮಾತನ್ನು ನಾಲಗೆ ನುಂಗಿಕೊಳ್ಳುತ್ತದೆ. ಎಲ್ಲ ಬಡವರ ಹಾಗೆ ಅವಳೂ ಅಶಿಕ್ಷಿತಳು. ಅವಳೆಂದರೆ ಮನೆ ಮಗಳ ಹಾಗೆ ಎಲ್ಲದರಲ್ಲೂ ಅಚ್ಚುಕಟ್ಟು ಇರಸರಿಕೆ, ಅವಳೆಂದರೆ ಕಕ್ಕುಲಾತಿ ಉಕ್ಕಿ ಹರಿಯುತ್ತದೆ. ಮನೆಯೊಳಗೆ ಬಂದ ತಕ್ಷಣ ಗಣಪತಿಗೆ ಕೈಮುಗಿದು ಮುಂದಿನ ಕೆಲಸ ಪ್ರಾರಂಬಿಸುತ್ತಾಳೆ. ಗಣಪತಿ ಹಬ್ಬದಂದು ‘ಚುಟ್ಟಿ’ ಬೇಕೆಂದು ಗೋಗರೆಯುತ್ತಾಳೆ. ಮುಂಬಯಿಯ ಉದ್ದಗಲಕ್ಕೆ ವೈಭವದಿಂದ ಮೆರೆಯುವ ‘ಗಣಪತಿ ಬಾಪ್ಪಾ’ನನ್ನು ನೋಡಲು ಹೋಗುವ ಆಸೆ ಅವಳಿಗೆ. ಪಕ್ಕದ ಚಾಳಿನ ಪಾರೂ ಇವಳು ಒದಗಿಸಿದ ತೆಂಗಿನಕಾಯಿ, ಬೆಲ್ಲದಿಂದ ಅವಳಿಗೆ ಮೋದಕ ಮಾಡಿಕೊಡುತ್ತಾಳೆ. ಹಿಂದೂಗಳ ಎಲ್ಲಾ ದೊಡ್ಡ ಹಬ್ಬಗಳನ್ನೂ ‘ಪೂರಣ್ ಪೋಳಿ’ ಮಾಡಿ ಆಚರಿಸುತ್ತಾಳೆ. ಯಾವುದೋ ಒಂದು ವಿಶೇಷ ತಿಂಗಳಲ್ಲಿ ಬಸವಣ್ಣನಿಗೆ ಅಮಾವಾಸ್ಯೆ ಇಂದ ಹಿಡಿದು ಪೌಣರ್ಿಮೆಯವರೆಗೆ ದೀಪ ಬೆಳಗುವುದು ಅವರ ಮನೆಯ ಪದ್ಧತಿಯಂತೆ. ಅದನ್ನು ಚಾಚೂ ತಪ್ಪದಂತೆ ಮಾಡುತ್ತಾಳೆ. ನೀನೆಂಥಾ ಮುಸಲ್ಮಾನ್ ಹೋಗು ಎಂದು ಪ್ರೀತಿಯಿಂದ ಗದರಿದರೆ. ನಮ್ಮ ಹಳ್ಳಿಯಲ್ಲಿ ಎಲ್ಲರೂ ಇರುವುದು ಹೀಗೆಯೇ ಎನ್ನುತ್ತಾಳೆ.
ಇನ್ನೊಬ್ಬಳು, ಅವಳ ಗೆಳತಿ, ಅಸ್ಪೃಶ್ಯ ಜಾತಿಗೆ ಸೇರಿದ ಮಾದೇವಿ. ಅವಳ ತಮ್ಮನ ಹೆಸರು ಸೈಯ್ಯದ್. ಹೀಂಗ್ಯಾಕ ..ಮುಸಲರ ಹೆಸರಿಟ್ಟೀರಿ.. ಅಂದರೆ, ಅಂವಾ..ಸ್ಯೆಯ್ಯದ್ ಬಾಬನ್ಗಾ ಹರಕೆ ಹೊತ್ತಮ್ಯಾಲೆ ಹುಟ್ಟದಾ ನೋಡ್ರೀ ….ಅದ್ಕೆ ಅವನ ಹೆಸ್ರು ಸೈಯ್ಯದ್ ಎನ್ನುತ್ತಾಳೆ. ವರ್ಷಕ್ಕೊಮ್ಮೆ ನಡೆಯುವ ಪೀರ್ ಸೈಯ್ಯದ್ನ ಜಾತ್ರೆಯಲ್ಲಿ ಅವನ ದರ್ಗಾಕ್ಕೆ, ನೆಂಟರಿಷ್ಟರನ್ನೆಲ್ಲಾ ಕರೆದುಕೊಂಡು ಹೋಗಿ, ಚಾದರ್ ಹಾಸಿ ಮೇಕೆ ಕಡಿದು ಬಾಡೂಟ ಮಾಡಿದ ಮೇಲೆಯೇ ಹರಕೆ ತೀರುವುದಂತೆ. ಮಕ್ಕಳಿಗೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಕಂಡು ಬಂದರೂ ಅವರು ಓಡುವುದು ಮಸೀದಿಯಲ್ಲಿ ಮುಲ್ಲಾನ ಬಳಿಗೆ, ಅವನು ಒದಗಿಸುವ ನವಿಲುಗರಿಯ ಸೇವೆಗೆ.
ಇವರಿಬ್ಬರೂ ಗುಲ್ಬರ್ಗಾ ಕಡೆಯ ಹೆಣ್ಣುಮಕ್ಕಳು. ಈ ನೆಲ ತತ್ವಪದಕಾರರ ಅಖಂಡ ದೃಷ್ಟಿಕೋನದಿಂದ ಹದಗೊಂಡ ನೆಲ. ಕೋಮು ಸೌಹಾರ್ದ ವೆಂಬುದು ಈ ನೆಲದ ಸಂಪತ್ತು. ಮಾಸ್ತಿಯವರು ಹೈದ್ರಾಬಾದ್ ಕರ್ನಾಟಕದ ರಜಕಾರರ ದಂಗೆಯ ಬಗ್ಗೆ ಬರೆಯುತ್ತಾರೆ. ಆದರೂ ಈ ಪ್ರದೇಶದಲ್ಲಿ ಹಿಂದೂ ಮುಸ್ಲಿಂ ಐಕ್ಯತೆ ಎಂಬುದು ಅನನ್ಯವಾಗಿದೆ. ಈ ಪ್ರದೇಶದಲ್ಲಿ ಕೋಮು ಗಲಭೆ ನಡೆದಿರುವುದು ಕಡಿಮೆ. ರಿಯಾನಳಿಗಾಗಲೀ, ಮಾದೇವಿಗಾಗಲೀ ಈ ಎರಡು ಧರ್ಮಗಳ ವ್ಯತ್ಯಾಸವೇ ತಿಳಿಯದು. ಇರಾಕ್ ಸಿರಿಯಾ ನಡುವೆ ನಡೆಯುತ್ತಿರುವ ನರಮೇಧದ ಬಗ್ಗೆ ಅವಳಿಗೆ ಹೇಳಿದರೆ ಐಸಾ ಕ್ಯೂಂ ಹೋತಾ ಹೈಂ ದೀದಿ.. ಎನ್ನುತ್ತಾಳೆ.
ರಮಜಾನ್ ದರ್ಗಾ ಅವರು ಮುಂಬಯಿಗೆ ಬಂದಾಗ ಹೇಳಿದ ಮಾತಿದು- ಹಜರತ್ ಬಾಬಾ ಅವರು ತಮ್ಮ ಶಿಷ್ಯರೊಂದಿಗೆ ನದಿದಂಡೆಯ ಮೇಲೆ ಬರುತ್ತಿದ್ದರಂತೆ. ಆಗ ಒಬ್ಬ ವೈದಿಕ ಸೂರ್ಯನಿಗೆ ಅಘ್ರ್ಯವನ್ನು ಕೊಡುತ್ತಿದ್ದನಂತೆ ಅದನ್ನು ನೋಡಿದ ಹಜರತ್ರು ಶಿಷ್ಯರನ್ನು ಕುರಿತು ಆ ನನ್ನ ದೇವರನ್ನು ಸೇರಲು ಎಷ್ಟೆಲ್ಲಾ ಸುಂದರ ದಾರಿಗಳಿವೆ ನೋಡಿ ಎಂದು ಗದ್ಗತಿರಾದರಂತೆ.
ನಮ್ಮ ಗೊರೂರರ ‘ಮಲ್ಲಿಗೆ ಹಳ್ಳಿಯ ಬಯಲಾಟ’ದಲ್ಲಿ ಹನುಮಂತನ ಪಾತ್ರ ಮಾಡುವವನು ಒಬ್ಬ ‘ಸಾಬಿ’ಯೇ. ಅಲ್ಲದೇ ಶಾಲುಸಾಬಿ ಬರದೇ ರಂಗನಾಥನ ತೇರಿನ ಮಿಣಿಗೆ ಕೈಹಚ್ಚುವ ಪ್ರಶ್ನೆಯೇ ಇಲ್ಲ. ಅವನು ‘ಕೌರವ ಪಾಂಡವರ ಹಾಗೆೆ ಕಚ್ಚಾಡಿ ಸಾಯಬೇಡಿ’ ಜನರಿಗೆ ಬುದ್ದಿ ಮಾತುಗಳನ್ನು ಹೇಳುವುದು ಹಿಂದೂ ಕಾವ್ಯಗಳ ಉದಾಹರಣೆಗೆಳ ಮೂಲಕವೇ. ಗುರು ಗೋವಿಂದ ಭಟ್ಟರು ಮುಸಲ್ಮಾನ್ ಜಾತಿಗೆ ಸೇರಿದವನನ್ನು ಶಿಷ್ಯನಾಗಿ ಸ್ವೀಕರಿಸಿ ಅವನನ್ನು ಸಂತ ಶಿಶುನಾಳನನ್ನಾಗಿ ಮಾಡುತ್ತಾರೆ.
ಗೋವಿಂದ ಪೈಗಳು ಯದುನಾತನು ಯೂದನಾತನಲ್ಲವೇ ಎನ್ನುತ್ತಾರೆ. ಬಿ.ಎ ಸನದಿಯವರಂತೂ ಭಾಷಣವನ್ನು ಪ್ರ್ರಾರಂಭಿಸುವುದೇ ಶಿವಶರಣರ ವಚನಗಳಿಂದ. ನಿಸಾರರು ಕೃಷ್ಣನ ಬಗೆಗೆ ಪದ್ಯ ಬರೆಯುತ್ತಾರೆ.
ಹೀಗೆ ನಂಬಿಕೆಗಳು ಸಾಂಸ್ಥಿಕವಾದಂತೆಲ್ಲಾ ಅದನ್ನು ಜಂಗಮವಾದದ್ದು ಕೆಡಹುತ್ತಾ ಹೋದ ಇತಿಹಾಸ, ಈ ಹೊತ್ತಿನಲ್ಲಿ ನಮ್ಮ ಕಣ್ಣಿಗೆ ಕಾಣುವುದೇ ಇಲ್ಲ.
ದಾರಿ-2
ಮೇ ತಿಂಗಳಲ್ಲಿ ಇದೇ ‘ಕಲ್ಯಾಣ’ದಿಂದ ಆರಿಫ್ ಮಜೀದ್ ಎನ್ನುವ ಇಂಜನಿಯರಿಂಗ್ ಕೊನೆ ವರುಷದಲ್ಲಿ ಕಲಿಯುತ್ತಿದ್ದ ಯುವಕ ಇದ್ದಕ್ಕಿದ್ದಂತೆ ಕಾಣೆಯಾದ. ತನ್ನ ಗೆಳೆಯರಾದ ಶಾಹೀನ್ ಟಂಕಿ, ಫಹಾದ್ ಶೇಖ್, ಅಮಾನ್ ತಾಂಡೇಲ್ ಅವರೊಂದಿಗೆ ಯಾತ್ರೆಯ ನೆಪದಲ್ಲಿ ಇರಾಕಿಗೆ ತೆರಳಿದ್ದ. ಅವರೆಲ್ಲಾ ಸುನ್ನೀ ಮೂಲಭೂತವಾದಿ ಸಂಘಟನೆಯಾಗಿರುವ ಐಸಿಸ್ ಗೆ ಸೇರ್ಪಡೆಯಾಗಿದ್ದರು. ಆರಿಫ್ ಮಜೀದ್ ಭವಿಷ್ಯದ ಕನಸುಗಳನ್ನು ಕಾಣಬೇಕಾದ ಹುಡುಗ ಇರಾಕ್ ನ ಬಾಂಬ್ ದಾಳಿಯ ವೇಳೆ ಅಸುನೀಗಿದ. ಆರಿಫ್ ನ ತಂದೆ ಒಳ್ಳೆಯ ಸುಶಿಕ್ಷಿತ ಕುಟುಂಬಕ್ಕೆ ಸೇರಿದ ವೈದ್ಯರು. ಬಹಳ ಶಿಸ್ತಿನ ಮನುಷ್ಯ. ಮಕ್ಕಳನ್ನೂ ಕೂಡ ಅಷ್ಟೇ ಶಿಸ್ತಿನಿಂದ ಬೆಳೆಸಿದವರು. ಕಲ್ಯಾಣದ ಆಸುಪಾಸಿನ ಹಿಂದೂಗಳ ದೃಷ್ಟಿಯಲ್ಲಂತೂ ಬಹಳ ಎತ್ತರದ ವ್ಯಕ್ತಿ. ಆರಿಫ್ನ ಬಗ್ಗೆ ಕೂಡ ಅಕ್ಕಪಕ್ಕದವರು ಒಳ್ಳೆಯ ಹುಡುಗನೆಂದೇ ತಾರೀಫ್ ಮಾಡುತ್ತಾರೆ. ಆದರೆ ಲೆಕ್ಕಾಚಾರ ತಪ್ಪಿಹೋದುದು ಎಲ್ಲಿ? ಅವರ ಮನೆಯಿಂದು ಸ್ಮಶಾನ ವಾಗಿದೆ. ಆರಿಫ್ನ ತಂದೆ ಯಾರ ಬಳಿ ಮಾತನಾಡುವುದಕ್ಕೂ ನಿರಾಕರಿಸುತ್ತಾನಂತೆ. ತಾಯಿಗೆ ಓಡಾಡಲೂ ಅಸಾದ್ಯವಾಗಿದೆಯಂತೆ.
ಉಗ್ರಗಾಮಿ ಹೋರಾಟದಲ್ಲಿ ತೊಡಗಿರುವ ಶಾಹಿನ್ ದೂರವಾಣಿಯ ಮೂಲಕ ತನ್ನ ಅಸ್ವಸ್ಥ ತಾಯಿಗೆ ತನ್ನ ಸುರಕ್ಷತೆ ಕುರಿತಾಗಿ ಆಗಾಗ ಸಂದೇಶವನ್ನು ನೀಡುತ್ತಿದ್ದಾನಂತೆ. ಅದನ್ನು ಧ್ವನಿ ಮುದ್ರಿಸಿಕೊಂಡ ಶಾಹಿನ್ ನ ಸೋದರ ಅವನ ತಾಯಿಗೆ ಅದನ್ನು ಪದೇ ಪದೇ ಕೇಳಿಸುತ್ತಿದ್ದಾನಂತೆ. ಅವನು ನಾಪತ್ತೆಯಾದಾಗಿನಿಂದ ಅವನ ತಾಯಿ ಆಸ್ಪತ್ರೆಗೆ ದಾಖಲಾಗಲು ನಿರಾಕರಿಸುತ್ತಿದ್ದಾಳಂತೆ..
ದಾರಿ-3
ಸುಮಾರು ಮೂವತ್ತು ನಲವತ್ತು ವರುಷಗಳ ಹಿಂದೆ ರಾಜಲಕ್ಷ್ಮಿ ಎನ್. ರಾವ್ ಅವರು ಇದೇ ‘ಕಲ್ಯಾಣ’ ಪಟ್ಟಣದಲ್ಲಿ ಸ್ವಲ್ಪ ಕಾಲ ವಾಸವಾಗಿದ್ದರು. ರಾಜಲಕ್ಷ್ಮಿ ಎನ್ .ರಾವ್ (1934) ಕನ್ನಡ ಸಾಹಿತ್ಯ ಕಂಡ ಒಬ್ಬ ಅಪರೂಪದ ನವ್ಯಕಾಲದ ಕತೆಗಾರ್ತಿ. ಆಕೆಯ ಜೊತೆಗಿಟ್ಟು ನೋಡಬಹುದಾದ ಆ ಕಾಲದ ಸೂಕ್ಷ್ಮಜ್ಞ ಕತೆಗಾರ್ತಿ ಇನ್ನೊಬ್ಬರಿಲ್ಲ. ಅವರ ಸಮಕಾಲೀನರಿಗಿಂತ ಒಂದು ಐದು ದಶಕಗಳಾದರೂ ಅವರು ಮುಂದಿದ್ದರು. ಬಿ.ಎಂ.ಶ್ರೀ. ಯವರ ಮೊಮ್ಮಗಳಾಗಿ ತಾತನ ಮನೆಯಲ್ಲಿ ಸ್ವಾತಂತ್ರ್ಯದ ಬದುಕನ್ನು ಕಂಡವರು. ಇಂಗ್ಲಿಷ್ ಎಂ.ಎ. ಪದವೀಧರೆಯಾದ ಈಕೆ ಆಗಿನ ಕಾಲಕ್ಕೆ ಓ ಹೆನ್ರಿಯಿಂದ ಪ್ರಭಾವಿತರಾಗಿದ್ದು, ಡೆಕ್ಕನ್ ಹೆರಾಲ್ಡ್, ಇಲ್ಲಸ್ಟ್ರೇಟೆಡ್ ವೀಕ್ಲಿಗಳಲ್ಲಿ ಕಥೆ ಕವಿತೆಗಳನ್ನು ಬರೆಯುತ್ತಿದ್ದರು. ರಾಮಚಂದ್ರ ಶರ್ಮ, ನಿರಂಜನ, ರಾಘವ, ಸದಾಶಿವರಂತಹ ಪಡ್ಡೆಹುಡುಗರ ಜೊತೆ ಸಾಹಿತ್ಯಚರ್ಚೆಯಲ್ಲಿ ಮೈಸೂರ ಪಬ್ಲಿಕ್ ಲೈಬರ್ರಿಯ ಕಾರಿಡಾರುಗಳಲ್ಲಿ ಸದಾ ಓಡಾಡುತ್ತಾ ಗಂಡುಬೀರಿ ಎನ್ನುವಂತಹ ಸ್ವಭಾವವನ್ನು ಬೆಳೆಸಿಕೊಂಡಿದ್ದವರು. ಅಂತಹವರು ತಮ್ಮ ಸಂಗಮ ಎನ್ನುವ ಏಕೈಕ ಕಥಾ ಸಂಕಲವನ್ನು ಪ್ರಕಟಿಸಿ ಉಚ್ಛ್ರಾಯ ಸ್ಥಿತಿಗೆ ತಲಪುವ ಮುನ್ನವೇ ಓದಿಗೆ, ಲೇಖನಿಗೆ ವಿದಾಯ ಹೇಳಿಬಿಟ್ಟರು. ವೈವಾಹಿಕ ಜೀವನದ ಪ್ರಾರಂಭದಲ್ಲಿಯೇ ಜಿಗುಪ್ಸೆ ಹೊಂದಿ ಹೆಣ್ಣು ಕೂಸನ್ನೂ, ಗಂಡನನ್ನೂ ತ್ಯಜಿಸಿ ಆತ್ಮೋದ್ಧಾರದ ಗುರಿಯಲ್ಲಿ ಉತ್ತರಕಾಶಿಯ ಕಡೆಗೆ ನಡೆದುಬಿಟ್ಟರು.
ನಿಮ್ಮ ನಿರ್ಗಮನದಿಂದ ಕನ್ನಡ ಸಾಹಿತ್ಯಕ್ಕೆ ಎಷ್ಟು ನಷ್ಟವಾಯಿತಲ್ಲಾ, ಯಾಕೆ ಹೀಗೆ ಮಾಡಿದಿರಿ? ಎಂದು ಕೇಳಿದ್ದಕ್ಕೆ, ‘What about my inner quest’? ಎಂದು ಸವಾಲು ಹಾಕಿದರು.
ಈಗಲೂ ಅವರು ಮೈಸೂರಿನ ಬಳಿಯ ಒಂದು ಆಶ್ರಮದಲ್ಲಿ ಯಾರಿಗೂ ಕಾಣದಂತೆ ತಮ್ಮ ಆತ್ಮ ಶೋಧನೆಯಲ್ಲಿ ತೊಡಗಿದ್ದಾರೆ. ಅವರನ್ನು ಕಾಣಲು ಆಶ್ರಮಕ್ಕೆ ಹೋದವರಿಗೆ ಅವರ ತಾಯಿಗುಣ ಇನ್ನಿಲ್ಲದಂತೆ ಪರಿಚಯವಾಗುತ್ತದೆ.

***

ಮರಾಠಿಯ ಪ್ರಸಿದ್ಧ ಕವಿ ದಿಲೀಪ್ ಚಿತ್ರೆಯವರು ಗೋಧ್ರಾ, ಗುಜರಾತ್, ಗಬರ್ಾ,ಗಾಂಧೀಜಿ, ಮತ್ತು ಜನಾಂಗಹತ್ಯೆ (ಜಿನೋಸೈಡ್)’ ಎಂಬ ಐದು ‘ಜಿ’ ಗಳ ಕುರಿತು ಬರೆಯುತ್ತಾ, ಗುಜರಾತಿನಲ್ಲಿ ನಡೆದ ಜನಾಂಗ ಹತ್ಯೆಯು, ಶ್ರೀಲಂಕಾದಿಂದ ಆಫ್ಘಾನಿಸ್ಥಾನದವರೆಗೆ, ನೇಪಾಳದಿಂದ ಭಾರತದ ಪಶ್ಚಿಮ ಕರಾವಳಿಯ ವರೆಗೆ, ನಮ್ಮ ಇಡೀ ನಾಗರೀಕತೆಯೇ ಇಂದು ಸಂಕಷ್ಟದಲ್ಲಿದೆ ಎಂಬ ನಿಷ್ಠುರವಾದ ಪಾಠವನ್ನು ನಮಗೆ ಕಲಿಸುತ್ತದೆ, ನಮಗೆ ಅಖಂಡ ವಿಶಿಷ್ಟ ನಾಗರಿಕ ಜನಾಂಗವಾಗಿ ಬದುಕಿ ಉಳಿಯಲು ಇರುವ ಏಕೈಕ ಮಾರ್ಗವೆಂದರೆ ನಮ್ಮ ನೆರೆಹೊರೆಯವರನ್ನು ಕೊಲ್ಲುವುದನ್ನು ಬಿಟ್ಟು ಅವರ ಜೊತೆಯಲ್ಲಿನ ನಮ್ಮ ಭಾಂದವ್ಯವನ್ನು ಧೃಡೀಕರಿಸುವುದರ ಮೂಲಕ ಮಾತ್ರ ಸಾಧ್ಯಎನ್ನುತ್ತಾರೆ.
ಇಂತಹ ಸಾಮಾಜಿಕ ವೈಷಮ್ಯಗಳು ಹೊತ್ತಿ ಉರಿಯುತ್ತಿರುವ ಈ ಹೊತ್ತಿನಲ್ಲಿ, ಯಾವುದು ಕಲ್ಯಾಣದ ದಾರಿ? ರಾಜಲಕ್ಷ್ಮಿಯ ದಾರಿಯೇ? ಆರಿಫ್ನ ದಾರಿಯೇ? ಇಲ್ಲ ರಿಯಾನಾ, ಮಾದೇವಿಯರ ದಾರಿಯೇ? ಒಂದು ಆತ್ಮೋದ್ಧಾರದ ದಾರಿಯಾದರೆ, ಇನ್ನೊಂದು ಸಂಘರ್ಷದ ದಾರಿ, ಮತ್ತೊಂದು ಸಾಮರಸ್ಯದ ದಾರಿ.
ಇಂದಿನ ಮಹಾರಾಷ್ಟ್ರದ ಈ ಕಲ್ಯಾಣ 12 ನೆಯ ಶತಮಾನದ ಆ ಕಲ್ಯಾಣದೊಂದಿಗೆ ಸಂವಾದ ಮಾಡುವುದರ ಅಗತ್ಯವಿದೆ. ಅಕ್ಕ ಮತ್ತು ಅಲ್ಲಮನ ದಾರಿ ಆತ್ಮೋದ್ಧಾರದ ದಾರಿಯಾದರೆ, ಬಸವಣ್ಣನಲ್ಲಿ ಲೋಕೋದ್ಧಾರ ಮತ್ತು ಆತ್ಮೋದ್ಧಾರ ಎರಡೂ ಏಕಕಾಲಕ್ಕೆ ಸಂಭವಿಸುತ್ತವೆ. ಆದ್ದರಿಂದಲೇ ಡಿ.ಆರ್. ನಾಗರಾಜ್ ಅವರು ತಮ್ಮ ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ ಎನ್ನುವ ಕೃತಿಯಲ್ಲಿ ಕಲ್ಯಾಣದ ಕುರಿತಾಗಿ ಹೀಗೆ ಹೇಳುತ್ತಾರೆ. 12 ನೆಯ ಶತಮಾನ ಆದ ಮೇಲೆ ಕಲ್ಯಾಣವಿಲ್ಲ ನಿಜ. ಆದರೆ ಕಲ್ಯಾಣವೆನ್ನುವುದು ಕನ್ನಡ ಜನರ ನೆನಪಿನಲ್ಲಿ ಶಾಶ್ವತವಾಗಿ ಉಳಿದಿದೆ. ರಾತ್ರಿಯಲ್ಲಿ ಮಾತ್ರ ನಿಗಿನಿಗಿಸುವ ಪಾಳು ಪಟ್ಟಣಗಳಂತೆ ಕಲ್ಯಾಣವೂ ಸಾಮಾಜಿಕ ವಿಷಮತೆಯ ರಾತ್ರಿಯಲ್ಲಿ ಯಾವಾಗಲೂ ಮಿನುಗಿ ಕರೆದಿದೆ. ಕನ್ನಡ ಭಾಷೆಯೊಳಗೆ ದನಿ ಎದ್ದರೆ ಅದು ಕಲ್ಯಾಣದ ಜೊತೆಗೇ ಮಾತಾಡಬೇಕು. ಅದು ಕನ್ನಡ ಭಾಷೆಯ ಚಾರಿತ್ರಿಕ ವಿಧಿ. ಇಡೀ ಕರ್ನಾಟಕವೆಂಬ ಭೂ ಸಂಸ್ಕೃತಿಯ ಪ್ರದೇಶದಲ್ಲಾಗಲೀ, ಕನ್ನಡ ಸಂಸ್ಕೃತಿಯಲ್ಲಾಗಲೀ ಹನ್ನೆರಡನೇ ಶತಮಾನಕ್ಕಿಂತ ಹೆಚ್ಚು ಕ್ರಾಂತಿಕಾರಕವಾದ ಇನ್ನೊಂದು ಸ್ಥಳವಿಲ್ಲ. ಸಾಮಾಜಿಕ ವಿಷಮತೆಯ ರಾತ್ರಿಗಳಲ್ಲಿ ಕಲ್ಯಾಣ ಮತ್ತಷ್ಟು ಹೊಳೆದು ಕರೆಯುತ್ತದೆ.

‍ಲೇಖಕರು G

October 21, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Prabhakar M. Nimbargi

    ಒಂದು ಆತ್ಮೋದ್ಧಾರದ ದಾರಿಯಾದರೆ, ಇನ್ನೊಂದು ಸಂಘರ್ಷದ ದಾರಿ, ಮತ್ತೊಂದು ಸಾಮರಸ್ಯದ ದಾರಿ.The last one is what we all need at this present juncture. Communal harmony is well-built in our social structure. Why do some try to puncture it?
    A well written invitation to join the ಸಾಮರಸ್ಯದ ದಾರಿ. Thanks for this article.

    ಪ್ರತಿಕ್ರಿಯೆ
  2. renuka manjunath

    girija avare….. bahaLa dinagaLa nanthara inthaha ondu adbhutha lekhana oduvanthaythu….! vandanegalu…

    ಪ್ರತಿಕ್ರಿಯೆ
  3. Kiran

    A well balanced and unbiased visualization of how we are and how we could be and should be. These days it is very hard to find some writing that stands at the center and looks at everything with equal respect, while most people start from their prejudices and just interested in blaming the other parties for all the mess.
    Thanks.

    ಪ್ರತಿಕ್ರಿಯೆ
  4. Ramjan Darga

    A very sensible article. Basava is able to take us to Kalyan. Basava is common name for all enlightened Souls. Girija Shastry is my favourite writer.

    ಪ್ರತಿಕ್ರಿಯೆ
  5. s.g.shivashankar

    intha Athma ShodhanegaLa agathya ella kaaladalloo nadeyabEku. uthhama chintanegaLu. Dhanyavadagalu.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: