ಅಕ್ಕಾ, ನಿನ್ನಯ ಗೊರವ ಸಿಕ್ಕನೇನೆ?

 

ಆಗಿನ್ನೂ ನನಗೆ ಏಳೋ ಎಂಟರ ಬಾಲ್ಯ. ನವರಾತ್ರಿಯ ಉತ್ಸವದ ನಿಮಿತ್ತ ನಮ್ಮೂರಿನ ದೇವಸ್ಥಾನದಲ್ಲಿ ದಿನವೂ ಕೀರ್ತನೆ ಕಾರ್ಯಕ್ರಮ ನಿಗದಿಯಾಗಿತ್ತು. ಕಥೆಯೆಂದರೆ ಜೀವಬಿಡುತ್ತಿದ್ದ ನಾನು ಎಲ್ಲರಿಗಿಂತ ಮುಂದಿನ ಸಾಲಿನಲ್ಲಿ ಕುಳಿತು ಕೀರ್ತನೆಗೆ ಕಿವಿಯಾಗುತ್ತಿದ್ದೆ.

ಸಾಮಾನ್ಯವಾಗಿ ಪುರಾಣದ ಕಥೆಗಳನ್ನೇ ಆಯ್ಕೆ ಮಾಡಿಕೊಳ್ಳುವ ಅವರು ಆ ದಿನ ಅಕ್ಕಮಹಾದೇವಿಯ ಕಥನವನ್ನು ಆಯ್ದುಕೊಂಡದ್ದು ನನಗೀಗಲೂ ವಿಸ್ಮಯ. ಏಕೆಂದರೆ ಭಕ್ತಿಯ ಪರಾಕಾಷ್ಠೆಯನ್ನು ಸಾರುವ ನೂರಾರು ಪೌರಾಣಿಕ ಕಥಾನಕಗಳು ಇರುವಾಗ ಮಾನುಷ ಜನ್ಮದ ಕಥೆಯನ್ನು ಆಯ್ದುಕೊಳ್ಳುವುದು ಆ ಕಾಲಕ್ಕೆ ಅಪರೂಪವೇ ಆಗಿತ್ತು. ಆದರೆ ಅವರ ನಿರೂಪಣೆ ಮಾತ್ರ ಥೇಟ್ ಪೌರಾಣಿಕ ಚೌಕಟ್ಟಿನಲ್ಲಿಯೇ ಸಾಗಿತ್ತು.

ಹರನ ಒಡ್ಡೋಲಗದಲ್ಲಿ ಚೇಷ್ಟೆ ಮಾಡಿ ಶಾಪಗ್ರಸ್ತಳಾಗುವ ದೇವಕನ್ಯೆ ಮಾನುಷ ಜನುಮದಲ್ಲಿ ಅಕ್ಕಮಹಾದೇವಿಯಾಗಿ ಜನಿಸುತ್ತಾಳೆ. ಅನುಪಮ ರೂಪವತಿಯಾದ ಅವಳು ಬಾಲ್ಯದಿಂದಲೇ ಹರನೇ ನನ್ನ ಗಂಡನೆಂದು ಆರಾಧಿಸುತ್ತಿರುತ್ತಾಳೆ. ಆ ಕ್ಷಣಕ್ಕೆ ಚಿಂತಿತರಾದರೂ ಅವಳ ಭಕ್ತಿಯ ಆಳವನ್ನು ಅರಿತಿದ್ದ ಅವಳ ತಂದೆ ತಾಯಿಯರು ಅವಳ ಲಿಂಗಸತೀ ಭಾವವನ್ನು ಗೌರವಿಸಿ, ಅವಳ ಹರನ ಅನುಸಂಧಾನಕ್ಕೆ ಭಂಗ ತರದೇ ಸಹಕರಿಸುತ್ತಿರುತ್ತಾರೆ.

ಆದರೆ ಒಂದು ದಿನ ಆ ನಾಡಿನ ಪ್ರಭು ಕೌಶಿಕಮಹಾರಾಜ ರಾಜಬೀದಿಯಲ್ಲಿ ಮೆರವಣಿಗೆ ಹೋಗುತ್ತಿರುವಾಗ ಮಾಳಿಗೆಯಲ್ಲಿ ಇಣುಕಿದ ಈ ಸುಂದರಿಯ ಮುಖವನ್ನು ನೋಡಿಯೇಬಿಡುತ್ತಾನೆ. ಚೆಂದವುಳ್ಳದ್ದೆಲ್ಲವೂ ದೊರೆಯ ಆಸ್ತಿಯಾಗಬೇಕೆಂಬ ಬಯಕೆಯನ್ನು ಹೊಂದಿದ ಮಹಾರಾಜ ಮಹಾದೇವಿಯನ್ನು ತನ್ನ ಅಂತಃಪುರಕ್ಕೆ ಸೇರಿಸುವಂತೆ ಅವಳ ತಂದೆ ತಾಯಿಗಳಿಗೆ ಆಜ್ಞಾಪಿಸುತ್ತಾನೆ. ರಾಜನ ಆಜ್ಞೆಯನ್ನು ಮೀರಲುಂಟೆ? ತಂದೆ ತಾಯಿಯರು ಮಹಾದೇವಿಯ ಮನವೊಲಿಸಲು ಪ್ರಯತ್ನಿಸುತ್ತಾರೆ. ಆದರೆ ಮಗಳದ್ದು ಒಂದೇ ಹಠ, ಹರನೇ ನನ್ನ ಪತಿಯಾದಮೇಲೆ ಅನ್ಯರ ವರಿಸಲುಂಟೆ? ಎಂದು. ಅಂತೂ ತಂದೆ ಮಗಳ ನಡುವೆ ಒಪ್ಪಂದವೊಂದು ಏರ್ಪಟ್ಟು ಮಹಾದೇವಿ ರಾಜನೊಂದಿಗೆ ನೇರವಾಗಿ ಮಾತನಾಡುವುದೆಂದು ತೀರ್ಮಾನವಾಗುತ್ತದೆ.

ಮಹಾದೇವಿಯ ಮಾತುಕತೆಯ ಕೋರಿಕೆಯನ್ನು ಕೇಳಿ ರಾಜನಿಗೆ ಆಶ್ಚರ್ಯವಾಗುತ್ತದೆ. ತಾನು ಕಿರುಬೆರಳಿನಿಂದ ಸನ್ನೆ ಮಾಡಿದರೆ ಸಾಕು, ತನ್ನ ಅಂತಃಪುರಕ್ಕೆ ಜಿಗಿಯುತ್ತ ಓಡಿಬರಲು ಹೆಣ್ಣುಗಳು ಸಿದ್ಧವಿರುವಾಗ ಇವಳು ಎಲ್ಲರಿಗಿಂತ ಭಿನ್ನವೆನಿಸಿ, ಇವಳನ್ನು ಹೊಂದುವ ಬಯಕೆ ಇನ್ನೂ ತೀವ್ರವಾಗುತ್ತದೆ.

ಮಹಾದೇವಿಯನ್ನು ಏಕಾಂತದಲ್ಲಿ ಕಂಡು ಮಾತನಾಡುತ್ತಾನೆ. ತನ್ನ ಲಿಂಗಪೂಜೆ, ಶರಣರ ಆರಾಧನೆಗೆ ಭಂಗ ತರಬಾರದೆನ್ನುವ ಶರತ್ತಿಗೊಳಪಟ್ಟು ಅವನನ್ನು ವರಿಸಲು ಮಹಾದೇವಿ ಒಪ್ಪುತ್ತಾಳೆ. ಸಕಲೈಶ್ವರ್ಯವೂ ಅರಮನೆಯಲ್ಲಿ ರಾಶಿಬಿದ್ದಿರುವಾಗ ಇವಳ ಆರಾಧನೆ ಮತ್ತು ಪೂಜೆ ತನ್ನ ಯಾವ ಸುಖಕ್ಕೂ ಅಡ್ಡಿಯಾಗಲಾರದು ಎಂದು ಭಾವಿಸಿದ್ದ ಕೌಶಿಕನ ನಿರೀಕ್ಷೆ ಸುಳ್ಳಾಗುತ್ತದೆ. ಇಡೀ ದಿನ ಹರನ ಧ್ಯಾನ ಮತ್ತು ಜಂಗಮರ ಸೇವೆಯಲ್ಲಿ ವ್ಯಸ್ತಳಾಗಿರುವ ಸತಿ ಅವನಲ್ಲಿ ಅಸಹನೆಯನ್ನು ಮೂಡಿಸುತ್ತಾಳೆ.

ಕಾಮುಕನಾದ ಕೌಶಿಕ ಒಮ್ಮೆ ಅವಳು ಜಂಗಮರ ಸೇವೆಯಲ್ಲಿರುವಾಗಲೇ ಅವಳನ್ನು ಅಂತಃಪುರಕ್ಕೆ ಕರೆಯುತ್ತಾನೆ. ಬಾರದ ಅವಳ ಮೇಲೆ ನೀನು ಜಂಗಮರೊಟ್ಟಿಗೆ ಸಲ್ಲಾಪವಾಡುತ್ತಿರುವೆ ಎಂದು ಮೂದಲಿಸುತ್ತಾನೆ. ಇದರಿಂದ ನೊಂದು ಅರಮನೆಯನ್ನು ತೊರೆದು ಹೋಗಲೆಳಸಿದ ಹೆಂಡತಿಯ ಸೀರೆಯನ್ನು ಎಳೆದು ನೋಯಿಸುತ್ತಾನೆ. ನೀನು ತೊಟ್ಟಿರುವ ವಸ್ತ್ರ, ವಡವೆಗಳೆಲ್ಲವೂ ತನ್ನ ಸೊತ್ತು ಎಂದು ಅಹಂಕಾರದಿಂದ ನುಡಿಯುತ್ತಾನೆ. ಮಹಾದೇವಿ ಅವನನ್ನು ತಿರಸ್ಕಾರದಿಂದ ನೋಡಿ, ಅವನ ವಸ್ತ್ರ, ವಡವೆಗಳನ್ನೆಲ್ಲ ಬಿಚ್ಚೊಗೆದು ದಿಗಂಬರೆಯಾಗಿ ಬಯಲ ದಾರಿಯ ಹಿಡಿದು ಸಾಗುತ್ತಾಳೆ.

ಈ ದೃಶ್ಯವನ್ನು ಕೀರ್ತನಕಾರರರು ವಿವರಿಸುತ್ತಿದ್ದಂತೇ ಅಲ್ಲಿ ಕುಳಿತ ಯಾರೊಬ್ಬರಿಗೂ ಇದು ಸಮ್ಮತವೆನಿಸಲಿಲ್ಲವಾಗಿ ಒಬ್ಬರ ಮುಖವನ್ನೊಬ್ಬರು ನೋಡುತ್ತಿದ್ದರು. ಇದನ್ನು ಅರಿತವರಂತೆ ಕೀರ್ತನಕಾರರು ಹಾಗೆ ಹೊರಟ ಮಹಾದೇವಿ ತನ್ನ ನೀಳಕೇಶರಾಶಿಯಿಂದಲೇ ತನ್ನ ದೇಹವನ್ನು ಹೇಗೆ ಮುಚ್ಚಿಕೊಂಡಳು ಎಂದು ತಮ್ಮ ಗೀತಸಾಹಿತ್ಯದಲ್ಲಿ ವಿವರಿಸಿದಾಗ ಎಲ್ಲರ ಮುಖದಲ್ಲಿಯೂ ನೆಮ್ಮದಿಯ ಮುಖಭಾವ.

ಪೂಜೆಯಲ್ಲಿರುವಾಗ ಕಾಮಿಸುವವ ಅವನೆಂಥ ಗಂಡ? ಎಂದು ಕೆಲವರೂ, ಆದರೂ ಅವಳು ಗಂಡನನ್ನು ತೀರ ಅಲಕ್ಷಿಸಿದಳೆಂದು ಕೆಲವರೂ ಚರ್ಚಿಸುತ್ತಾ, ಅವಳು ಶಾಪಗ್ರಸ್ತ ದೇವತೆಯಾದ್ದರಿಂದ ತಮ್ಮ ಭವದ ಬಂಧಗಳೆಲ್ಲವನ್ನು ಅವಳಿಗೆ ಅನ್ವಯಿಸಲಾಗದೆಂಬ ತೀರ್ಮಾನಕ್ಕೆ ಬಂದಾಗಿತ್ತು. ಹೀಗೆ ನನ್ನೊಳಗೆ ಇಳಿದ ಅಕ್ಕ ಅನೇಕ ಛದ್ಮವೇಷದ ಸ್ಪರ್ಧೆಗಳಲ್ಲಿ ಮೈತುಂಬ ಕೇಶರಾಶಿಯನ್ನು ಹರಡಿಕೊಂಡು ಕಣ್ಣೆದುರು ಪ್ರತ್ಯಕ್ಷಳಾಗಿದ್ದಳು ಕೂಡಾ.

ಹೆಣ್ಣೆಂದರೆ ಶೃಂಗಾರಪ್ರಿಯೆ, ಹೆಣ್ಣೆಂದರೆ ಆಸ್ತಿ ಅಂತಸ್ತಿಗೆ ಹಾತೊರೆಯುವವಳು, ಹೆಣ್ಣೆಂದರೆ ಚಿನ್ನ, ಸೀರೆ ಒಡವೆಗಳಿಗೆ ಮಾರುಹೋಗುವವಳು ಎಂಬೆಲ್ಲ ಸಿದ್ಧಮಾದರಿಗಳ ಚರ್ಚೆ ನಡೆಯುವಾಗಲೆಲ್ಲ ಅಕ್ಕ ಆಗಾಗ ನನ್ನೊಳಗೆ ಸುಳಿದು ತಲ್ಲಣವನ್ನು ಸೃಷ್ಟಿಸುತ್ತಾಳೆ. ಹೌದು, ಅಕ್ಕ ತೊರೆದು ಹೋದುದು ರಾಜಭೋಗವನ್ನು ಮಾತ್ರವಲ್ಲ, ತಾನು ಸನ್ನೆ ಮಾಡಿದ ಕೂಡಲೇ ಎಂಥಹ ಅನುಪಮ ರೂಪವತಿಯಾದರೂ ತನ್ನ ಮಂಚಕ್ಕೆ ಆಸೆಯಿಂದ ಬಂದುಬಿಡುವಳೆಂಬ ಗಂಡಿನ ಅಹಂಕಾರವನ್ನು ಕೂಡ.

ಅವಳು ಕಳಚಿಕೊಂಡಿದ್ದು ತನ್ನ ವಸನವನ್ನು ಮಾತ್ರವಲ್ಲ, ಅಂದಿನವರೆಗೆ ಹೆಣ್ಣನ್ನು ಸುತ್ತಿಕೊಂಡಿದ್ದ ಭವವೆಂಬ ಬಂಧನವನ್ನು ಕೂಡ. ಅವಳು ಆರಿಸಿಕೊಂಡಿದ್ದು ಬಯಲದಾರಿಯನ್ನು ಮಾತ್ರವಲ್ಲ, ಮನದ ಅರಿವು ತೋರುವ ನಿಜದ ಗುರಿಯನ್ನು ಕೂಡ. ಅವಳು ಬಯಸಿದ್ದು ಹರನೆಂಬ ಗಂಡನನ್ನು ಮಾತ್ರವಲ್ಲ, ಸಾಮಾಜಿಕವಾಗಿ ಅಪರೂಪಕ್ಕೆ ದಕ್ಕುವ ಆತ್ಮಸಂಗಾತವೆಂಬ ಅದ್ಭುತವನ್ನು ಕೂಡ. ಹೆಣ್ಣಿಗೊಂದು ಆಯ್ಕೆಯಿದೆ, ಹೆಣ್ಣಿನೊಳಗೊಂದು ಭಾವವಿದೆ, ಹೆಣ್ಣಿಗೂ ಒಂದು ಅಭಿವ್ಯಕ್ತಿಯಿದೆಯೆಂಬ ಅರಿವೇ ಇರದ ಕಾಲದಲ್ಲಿ ಅಕ್ಕ ನಡೆದ ದಾರಿ ಕತ್ತಲೆಯಲ್ಲಿ ಕೊರೆದ ಬೆಳಕಿನ ಗೆರೆಯಾಗಿ ಕಾಣುತ್ತದೆ.

ಅಕ್ಕನ ಆಯ್ಕೆ ಇಹದ ಹಂಗನ್ನು ತೊರೆಯಬೇಕಾದದ್ದು ಅಂದಿನ ಅವಶ್ಯಕತೆ. ಭವದ ಹಂಗನ್ನು ಮೀರಿಯಾದರೂ ತನಗೆ ಬೇಕಾದ ಆತ್ಮಸಂಗಾತದ ಪರಿಯ ಅರುಹಬೇಕಾದ ತುರ್ತು ಅಕ್ಕನದಾಗಿತ್ತು.

ಅಂಗವ ಲಿಂಗಮುಖದಲ್ಲಿ ಅರ್ಪಿಸಿ
ಅಂಗ ಅನಂಗವಾಯಿತ್ತು
ಮನವ ಅರಿವಿಂಗರ್ಪಿಸಿ
ಮನ ಲಯವಾಯಿತ್ತು
ಭಾವವ ತಪ್ತಿಗರ್ಪಿಸಿ,
ಭಾವ ಬಯಲಾಯಿತ್ತು
ಎನ್ನ ಕಾಯದ ಸುಖಭೋಗವ
ಲಿಂಗವೇ ಭೋಗಿಸುವವನಾಗಿ
ಶರಣಸತಿ ಲಿಂಗಪತಿಯಾದೆನು.

ಎಂಬುವವಳನ್ನು ಜಗವು ಒಪ್ಪಿಕೊಳ್ಳದೇ ಬೇರೆ ಮಾರ್ಗವಿರಲಿಲ್ಲ. ಅಕ್ಕನಿಗೋ ತನ್ನೆಲ್ಲ ಭಾವಗಳನ್ನು ಅರ್ಥೈಸಿಕೊಳ್ಳಬಲ್ಲ ಸಂಗಾತಿಗಳನ್ನು ಹುಡುಕಿಕೊಳ್ಳದೇ ವಿಧಿಯಿರಲಿಲ್ಲ. ಶರಣರ ಸಂಗದಲ್ಲಿ ಆಧ್ಯಾತ್ಮದ ಚಿಂತನೆಗಳಿಗೆ ಹೊಳಪು ಪಡೆದುಕೊಳ್ಳಲು ಅವಳು ಕಲ್ಯಾಣದ ದಾರಿಯನ್ನು ಹಿಡಿದು ಸಾಗುತ್ತಾಳೆ.

ನಡೆ ಶುಚಿ, ನುಡಿ ಶುಚಿ, ತನು ಶುಚಿ, ಮನ ಶುಚಿ, ಭಾವ ಶುಚಿ,
ಇಂತೀ ಪಂಚ ತೀರ್ಥಂಗಳನೊಳಕೊಂಡು ಮರ್ಥ್ಯದಲ್ಲಿ ನಿಂದ
ನಿಮ್ಮ ಶರಣರ ತೋರಿ ಎನ್ನನುಳಿಕೊಳ್ಳಾ

ಎಂದು ಅವಳು ಲಿಂಗವನ್ನು ಬೇಡಿಕೊಳ್ಳುತ್ತಾಳೆ. ಶರಣರ ಇರವನ್ನು ಅರಸುತ್ತಾ ಅಂದಿನ ಮಹಾಮನೆ ‘ಅನುಭವ ಮಂಟಪ’ವನ್ನು ಪ್ರವೇಶಿಸುವ ಅವಳಿಗೆ ಅಲ್ಲಿಯೂ ಪ್ರಶ್ನೆಗಳ ಬಾಣಗಳೇ ನಾಟುತ್ತವೆ. ಅವಳನ್ನು ಅಲ್ಲಮ ಪ್ರಭು ಪ್ರಶ್ನಿಸುವುದು ಹೀಗೆ,

ಉದುಮದದ ಯೌವನವನೊಳಕೊಂಡ ಸತಿ ನೀನು
ಇತ್ತಲೇಕೆ ಬಂದೆಯವ್ವಾ?
ಸತಿಯೆಂದರೆ ಮನಿವರು ನಮ್ಮ ಶರಣರು
ನಿನ್ನ ಪತಿಯ ಕುರುಹ ಹೇಳಿದರೆ ಬಂದು ಕುಳ್ಳಿರು
ಅಲ್ಲದಿರೆ ತೊಲಗು ತಾಯೆ.

ಇಂದಿಗೂ ಹೆಣ್ಣು ಗಂಡನ ವಿಳಾಸದ ಅಡಿಯಲ್ಲಿ ತಾನೆ ಎಲ್ಲ ಕಡೆಯಲ್ಲಿಯೂ ಪ್ರವೇಶ ಪಡೆಯುವುದು?
ಅಕ್ಕನೋ ನಿಚ್ಚಳವಾಗಿ ತನ್ನ ಕುರುಹನರಿತವಳು. ಅಷ್ಟೇ ಜಾಣ್ಮೆಯಿಂದ ಉತ್ತರಿಸುತ್ತಾಳೆ.

ಆಲದ ಮಂಟಪದ ಮೇಲೆ ಉರಿಯ ಚಪ್ಪರವಿಕ್ಕಿ,
ಆಲಿಕಲ್ಲ ಹಸೆಯ ಹಾಸಿ,
ಕಾಲಿಲ್ಲದ ಹೆಂಡತಿಗೆ
ತಲೆಯಿಲ್ಲದ ಗಂಡ ಬಂದು ಮದುವೆಯಾದನು.
ಎಂದೆಂದೂ ಬಿಡದ ಬಾಳುವೆಗೆ ಕೊಟ್ಟರೆನ್ನ
ಚನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ
ಮದುವೆಯ ಮಾಡಿದರು

ಅಕ್ಕನ ಉತ್ತರದಲ್ಲಿ ಅವಳ ನಡೆದ ದಾರಿಯ ಕಡುಕಷ್ಟದ ವಿವರವಿದೆ. ಭವದ ವಸನವ ಬಿಚ್ಚಿ ಬಂದವಳಿಗೆ ಕೇಶದ ಮರೆಯೇಕೆ ಎಂದೂ ಕೇಳುತ್ತಾನೆ ಅಲ್ಲಮ. ಅದಕ್ಕೆ ಅಕ್ಕನ ಉತ್ತರವೂ ಅಷ್ಟೇ ಮಾರ್ಮಿಕವಾಗಿದೆ.

ಫಲ ಒಳಗೆ ಪಕ್ವವಾಗಿಯಲ್ಲದೆ ಹೊರಗಣ ಸಿಪ್ಪೆ ಒಪ್ಪಗೆಡದು.
ಕಾಮನ ಮುದ್ರೆಯ ಕಂಡು ನಿಮಗೆ ನೋವಾದೀತೆಂದು,
ಆ ಭಾವದಿಂದ ಮುಚ್ಚಿದೆ, ಇದಕ್ಕೆ ನೋವೇಕೆ?

ಅಕ್ಕನ ಈ ಉತ್ತರದಿಂದ ಅನುಭಾವಿಗಳೆಲ್ಲರೂ ನಿಬ್ಬೆರಗಾಗುತ್ತಾರೆ. ಮಹಾಮನೆ ಅಕ್ಕನನ್ನು ತನ್ನ ತೆಕ್ಕೆಯೊಳಗೆ ಆಲಂಗಿಸುತ್ತದೆ.
ಆದರೆ ಅಲ್ಲಿಯೂ ಅಕ್ಕ ಸ್ಥಾವರವಾಗಿ ಉಳಿಯಲಿಲ್ಲ. ಜಂಗಮವಾಗಿ ಮಹಾಮನೆಯನ್ನು ತೊರೆದು ಕಾಡು, ಮೇಡುಗಳಲ್ಲಿ ತನ್ನ ಸಂಗಾತಿಯ ಇರವನ್ನು ಅರಸುತ್ತಾ, ಇಡಿಯ ಪ್ರಕೃತಿಯನ್ನೇ ತನ್ನ ಗೆಳೆತನದ ತೆಕ್ಕೆಯೊಳಗೆ ಸೇರಿಸಿಕೊಳ್ಳುತ್ತಾ, ತನ್ನ ಅನುಭವವನ್ನೆಲ್ಲ ಹಾಡಾಗಿಸುತ್ತ ಸಾಗುತ್ತಾಳೆ. ಹೆಣ್ಣು, ಗಂಡೆಂಬ ಬೇಧವಳಿದ ದಿವ್ಯಚೇತನವಾಗಿ ಹೊರಹೊಮ್ಮುತ್ತಾಳೆ.

ಹೆಣ್ಣು ಹೆಣ್ಣಾದಡೆ ಗಂಡಿನ ಸೂತಕ
ಗಂಡು ಗಂಡಾದಡೆ ಹೆಣ್ಣಿನ ಸೂತಕ
ಮನದ ಸೂತಕ ಹಿಂಗಿದೊಡೆ
ತನುವಿನ ಸೂತಕಕ್ಕೆ ತೆರಹುಂಟೆ?
ಅಯ್ಯಾ, ಮೊದ ಲಿಲ್ಲದ ಸೂತಕಕ್ಕೆ ಮರುಳಾಯಿತ್ತು ಜಗವೆಲ್ಲ
ಎನ್ನ ದೇವ ಚೆನ್ನಲ್ಲಿಕಾರ್ಜುನನೆಂಬ ಗುರುವಂಗೆ
ಜಗವೆಲ್ಲ ಹೆಣ್ಣು ನೋಡಾ ಅಯ್ಯಾ

ಆತ್ಮಸಂಗಾತವ ನೀಗಲು ಮಲ್ಲಿಕಾರ್ಜುನನೆಂಬ ಗಂಡನನ್ನು ತಾನೇ ಸೃಷ್ಟಿಸಿಕೊಂಡು ಸುಖಿಸಿದ ಅಕ್ಕನ ದಾರಿ ಅಂದಿನ ಕಾಲಕ್ಕೆ ಒಂದು ಪವಾಡವೇ ಸರಿ. ಅದನ್ನೇ ಚೆನ್ನಬಸವಣ್ಣ ಹೀಗೆ ಹೇಳುತ್ತಾನೆ,

ತನುವಿನೊಳಗಿದ್ದು ತನುವ ಗೆದ್ದಳು.
ಮನದೊಳಗಿದ್ದು ಮನವ ಗೆದ್ದಳು.
ವಿಷಯದೊಳಗಿದ್ದು ವಿಷಯಂಗಳ ಗೆದ್ದಳು.
ಅಂಗಸಮಗವ ತೊರೆದು ಭವವ ಗೆದ್ದಳು.

ಈ ಗೆಲುವಿನ ಹಾದಿಯಲ್ಲಿ ಅಕ್ಕ ಎದುರಿಸಿದ ಸಂಕಷ್ಟಗಳೆಷ್ಟೋ, ಎದುರಿಸಿದ ಎಡರು ತೊಡರುಗಳೆಷ್ಟೋ ಬಲ್ಲವರಾರು? ಅವಳು ನಡೆದ ಕಾಲುಹಾದಿ ಮುಂದಿನ ಹೆಂಗಳೆಯರ ಪಾಲಿಗೆ ಹೆದ್ದಾರಿಯಾದದ್ದಂತೂ ಸತ್ಯ.

ಅದು ಅಕ್ಕನೆಂಬ ಲಿಂಗಮೋಹಿಯ ಕಥೆ. ಆದರೆ ಈ ನನ್ನ ಕಥೆಯ ಇಹದ ಅಕ್ಕನ ದಾರಿಯೇ ಬೇರೆ.

ಕೌಶಿಕನಿಗಿಂತ ನೂರುಪಟ್ಟು ದುಷ್ಟನ
ಕೈಹಿಡಿದ ಅಕ್ಕ
ಬಿಟ್ಟು ಬಯಲಾಗು ಬಾರೆ ಎಂದರೆ
ಸಿಕ್ಕಲಾರದ ಶಿವನ ಎಲ್ಲೆಂದು ಹುಡುಕಲೇ?
ಸಿಕ್ಕವನನ್ನೇ ಜಡಿದು ಜಂಗಮನಾಗಿಸುವೆ
-ನೆಂಬ ಹಠದಲ್ಲಿ ಹೊರಟವಳು
ಮತ್ತೇನೋ ನೆನಪಾದವಳಂತೆ
ಹತ್ತಿರ ಬಂದು, “ನನ್ನ ಹಾಡುಗಳಿವು ಜೋಪಾನ”
ಎಂದು ನನ್ನೆದೆಯೊಳಗೆ ಬಚ್ಚಿಟ್ಟು ಹೋದಳು.

ಇವಳು ನಾನು ಸಂಧಿಸಿದ ಈ ಕಾಲದ ಅಕ್ಕ. ಜೀವನವಂದರೇನೆಂದು ತಿಳಿಯದ ಪ್ರಾಯದಲ್ಲಿಯೇ ಮದುವೆಯಾಗಿ, ಅದು ಆರ್ಥವಾಗುವ ವೇಳೆಗೆ ಬದುಕೇ ಮೂರಾಬಟ್ಟೆಯಾಗಿ ಮನೆಬಿಟ್ಟು ಹೊರಟ ಈ ಅಕ್ಕ ತಾನೊಬ್ಬಳೇ ಶಿವನೆಂಬ ಪರವ ಅರಸಿ ಹೋಗಲಿಲ್ಲ. ತನ್ನೊಂದಿಗೆ ಕೌಶಿಕನಿಗಿಂತಲೂ ನೂರು ಪಟ್ಟು ದುಷ್ಟನಾದ ಗಂಡನನ್ನು ಕಟ್ಟಿಕೊಂಡೇ ಹೊರಬಂದು, ಅವನನ್ನು ಕಷ್ಟಪಟ್ಟು ಹಣಿಯುತ್ತಲೇ ಅವನನ್ನು ಜಂಗಮನನ್ನಾಗಿಸಿ ನಗುತ್ತಾಳೆ. ಇವೆಲ್ಲವೂ ಸುಲಭಕ್ಕೆ ದಕ್ಕುವ ವಿಜಯವಲ್ಲ. ಅಕ್ಕನ ವೈರಾಗ್ಯ, ಅವಳ ಛಲ, ಅವಳ ನಿಚ್ಚಳತೆ ಎಲ್ಲವೂ ಬೇಕು. ಮತ್ತದನ್ನವಳು ಅಕ್ಕನಿಂದಲೇ ಎರವಲು ಪಡೆದಿದ್ದಾಳೆ ಕೂಡ.

ಆತ್ಮಸಂಗಾತದ ಸುಖವು ಕೈಜಾರುತ್ತಿದೆಯೆಂಬ ನೋವು ಮನಸ್ಸನ್ನು ಆವರಿಸುವ ಗಳಿಗೆಯಲ್ಲೆಲ್ಲಾ ಎಲ್ಲಿಂದಲೋ ಪ್ರತ್ಯಕ್ಷವಾಗುವ ಅಕ್ಕ ನಮ್ಮ ಮನದೊಳಗಿರುವ ಚೆನ್ನಮಲ್ಲಿಕಾರ್ಜುನನ ತೆರೆದು ತೋರುತ್ತಾಳೆ.

ಅಕ್ಕಾ ನಿನ್ನ ಗೊರವ ಗೊರವ
ಸಿಕ್ಕನೇನೆ? ಎಂದೆ
ನನ್ನೊಳಗಿನ ಲಿಂಗವ ತೆರೆದು
ತೋರಿ, ನಕ್ಕು ಮರೆಯಾದಳು.

ನನ್ನೊಳಗಿನ ಚೆನ್ನಮಲ್ಲಿಕಾರ್ಜುನನ ತೆರೆದು ತೋರುವ ಆ ಅಕ್ಕ ಮತ್ತು ಸಿಕ್ಕವನನ್ನೇ ಜಂಗಮನಾಗಿಸುವ ಹಠತೊಟ್ಟು, ತನ್ನೆದೆಯೊಳಗಿನ ಹಾಡುಗಳನ್ನು ನನ್ನಲ್ಲಿ ಬಚ್ಚಿಟ್ಟ ಈ ಅಕ್ಕ ಇಬ್ಬರೂ ಒಂದು ಬಿಂದುವಿನಲ್ಲಿ ಸಂಧಿಸಿ ನನ್ನೊಳಗೆ ಬೆಳಕಾಗುತ್ತಾರೆ. ದೇವಲೋಕದಿಂದ ಶಾಪಗ್ರಸ್ತರಾಗಿ ಭೂಮಿಯಲ್ಲಿ ಜನಿಸಿದ ದೇವರಂತೆಣಿಸದೇ ಅಪ್ಪಟ ಮನುಷ್ಯರಾಗಿ, ಪುರುಷ ಲೋಕದ ಗಡಿಯ ಮೀರುವ ದಾರಿಯನ್ನು ತೊರುವ ದರ್ಶಕರಂತೆ ಕಾಣುತ್ತಾರೆ. ಮತ್ತೆ, ಮತ್ತೆ ಬರುವ ಅಕ್ಕಂದಿರಲ್ಲಿ ಕೇಳುತ್ತೇನೆ,

ತೆಕ್ಕೆಗೆ ಸಿಗದವನ
ದಕ್ಕಿಸಿಕೊಳ್ಳುವುದಾದರೂ ಹೇಗೆ?
ನಕ್ಕು ನುಡಿಯುತ್ತಾರೆ
ಇನ್ನಷ್ಟು ಪ್ರೀತಿಸುವುದು.

‍ಲೇಖಕರು Avadhi Admin

August 17, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

4 ಪ್ರತಿಕ್ರಿಯೆಗಳು

  1. Kusumapatel

    ಸುಧಾ ಅವರೆ ತುಂಬಾ ಚೆನ್ನಾಗಿ ಬರೆದಿದ್ದೀರಿ, ಮತ್ತೆ ಮತ್ತೆ ಓದಬೇಕೆನಿಸುವಂತಿದೆ.

    ಪ್ರತಿಕ್ರಿಯೆ
  2. Ahalya Ballal

    “ನನ್ನೊಳಗಿನ ಚೆನ್ನಮಲ್ಲಿಕಾರ್ಜುನನ ತೆರೆದು ತೋರುವ ಆ ಅಕ್ಕ ಮತ್ತು ಸಿಕ್ಕವನನ್ನೇ ಜಂಗಮನಾಗಿಸುವ ಹಠತೊಟ್ಟು, ತನ್ನೆದೆಯೊಳಗಿನ ಹಾಡುಗಳನ್ನು ನನ್ನಲ್ಲಿ ಬಚ್ಚಿಟ್ಟ ಈ ಅಕ್ಕ ಇಬ್ಬರೂ ಒಂದು ಬಿಂದುವಿನಲ್ಲಿ ಸಂಧಿಸಿ ನನ್ನೊಳಗೆ ಬೆಳಕಾಗುತ್ತಾರೆ…..”

    ಇದು ತಾತ್ಪರ್ಯ.

    ಖುಶಿಯಿಂದ ಓದಿಸಿಕೊಳ್ಳುವ ಅಂಕಣ, ಸುಧಾಮಯಿ. ಅಭಿನಂದನೆ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: