ಅಕ್ಕನ ಬೆನ್ನುಹತ್ತಿದ ಸಂಧ್ಯಾ, ಭಾರತಿ ಎಂಬ ತಂಗಿಯರು

ಅಕ್ಕನ ಬೆನ್ನುಹತ್ತಿದ ತಂಗಿಯರು :

‘ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ’

 ಒಂದು ಅನಿಸಿಕೆ
                        
ಗಿರಿಜಾಶಾಸ್ತ್ರಿ

“ಅಯ್ಯಾ, ನೀನು ಕೇಳಿದಡೆ ಕೇಳು ಕೇಳದಿದ್ದರೆ ಮಾಣು ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ” ಇದು ಅಕ್ಕಮಹಾದೇವಿಯ ವಚನವೊಂದರಲ್ಲಿ ಬರುವ ಸಾಲು.

ಈ ಸಾಲಿನಲ್ಲಿ ಒಂದು ಒತ್ತಡ ಅಡಗಿದೆ. ಯಾವ ಕ್ಷಣದಲ್ಲಾದರೂ ಸ್ಫೋಟಗೊಳ್ಳಬಹುದಾದ ಒತ್ತಡ. ಇದು ಚೆನ್ನಮಲ್ಲಿಕಾರ್ಜುನನೆಡೆಗೆ ಇರುವ ಅಕ್ಕನ ಪ್ರೇಮದ ಒತ್ತಡ ಮಾತ್ರವಲ್ಲ, ಘನೀಭೂತ ಲೋಕದ್ರವ್ಯಗಳನ್ನು ಹುದುಗಿಸಿಕೊಂಡು ಅದನ್ನು ಹೊರಹಾಕಲಾರದೇ ಒದ್ದಾಡುವ ಕವಿಯ ಒತ್ತಡವೂ ಹೌದು. ‘ಹೇಳಿದರೆ ಹಾಳಾಗುವುದು ಸವಿಯು ಹೇಳದಿದ್ದರೆ ತಾಳಲಾರನು ಕವಿಯು’ ಎನ್ನುವ ತಳಮಳ.

ಒಳಗೇ ಇಟ್ಟುಕೊಳ್ಳುವುದು ಯೋಗವಾದರೆ ಹೊರಗೆ ಬಿಟ್ಟುಕೊಡುವುದು ವಿಯೋಗ. ಹೀಗೆ ಕವಿಯಿಂದ ಬೀಳ್ಕೊಂಡ ಕವಿತೆ ಓದುಗರಲ್ಲಿ ಸಮಾಗಮ ಹೊಂದುತ್ತದೆ. ಕವಿತೆಯೆಂದರೆ ಯೋಗ ವಿಯೋಗಗಳ ಚಕ್ರೀಭವನ ಕ್ರಿಯೆ. ಪ್ರೇಮದ ಪ್ರಕ್ರಿಯೆಯೂ ಇಂತಹುದೇ. ವಿಯೋಗದಲ್ಲಿ ಯೋಗದ ನೆನಪು ಕಾಡಿದರೆ, ಯೋಗದಲ್ಲಿ ವಿಯೋಗದ ಭಯ ಕಾಡುತ್ತದೆ. ಒಂದು ರೀತಿಯಲ್ಲಿ ಕವಿತೆಗೆ, ಪ್ರೇಮಕ್ಕೆ ವಿಪ್ರಲಂಭವೇ ಶಾಶ್ವತ ಭಾವ ಎನಿಸಿಬಿಡುತ್ತದೆ. ‘ಆಷಾಢದ ಒಂದು ದಿನ’ದ (ಮೋಹನ್ ರಾಕೇಶ್) ಸಮಸ್ಯೆಯೇ ಇದಲ್ಲವೇ? ವಿಪ್ರಲಂಭ ಇರುವವರೆಗೆ ಹಾಡು ಇರುತ್ತದೆ. ಅದು ಮುಗಿದ ಮೇಲೆ ಹಾಡೂ ಮುಗಿದು ಹೋಗುತ್ತದೆ. ಕದಳಿ ಹೊಕ್ಕ ಮೇಲೆ ಅಕ್ಕನ ಹಾಡನ್ನು ಕೇಳಿದವರುಂಟೆ?

ಸಂಧ್ಯಾ ಮತ್ತು ಭಾರತಿಯವರ ಈ ಜುಗಲಬಂದಿ ‘ಆನು ಹಾಡಿದಲ್ಲದೆ..’ ಕವಿತಾಸಂಕಲನದ ಸಾರ್ಥಕ್ಯ ಇರುವುದೇ ಅಕ್ಕನ ದೇಹ ತನ್ಮಯತೆಯನ್ನು, ಅದರ ಉರವಣೆಗಳ ಅಭಿವ್ಯಕ್ತಿಯನ್ನು ಮುಂದುವರೆಸುತ್ತಾ ಹೋಗುತ್ತದೆ ಎನ್ನುವುದರಲ್ಲಿ. ಕನ್ನಡ ಸಾಹಿತ್ಯದಲ್ಲಿ ಬಹುಶಃ ಕಾಯದ ಬಗ್ಗೆ ಅಕ್ಕನಷ್ಟು ಮಾತನಾಡಿದವರು ಇನ್ನೊಬ್ಬರಿಲ್ಲವೆನಿಸುತ್ತದೆ (ಉರಿಲಿಂಗಪೆದ್ದಿಯನ್ನು ಬಿಟ್ಟರೆ). ಅವಳ ಕಾಯದ ಭಾಷೆಯೇ ಅವಳ ಪ್ರೇಮದ ತೀವ್ರತೆಯನ್ನೂ ಪ್ರತಿಪಾದಿಸುವಂತಹದು. ಅವಳು ಚೆನ್ನಮಲ್ಲಿಕಾರ್ಜುನನೊಡನೆ ಆತ್ಮಸಾಂಗತ್ಯಕ್ಕೆ ಹಾತೊರೆದರೂ ಅದನ್ನು ದೇಹಭಾಷೆಯ ಮೂಲಕವೇ ಪ್ರಕಟಗೊಳಿಸಬೇಕಾಗಿರುವುದು ಜೈವಿಕ ವಿಧಿ. ಇದು ನಮ್ಮ ಎಲ್ಲಾ ಭಕ್ತಿ ಸಾಹಿತ್ಯದ ನಿಜ ಕೂಡ.

ಕವಿತೆಗೆ ಅದರ ಓದುಗರಿಗೆ ಮುಖ್ಯವಾಗುವುದು ಕದಳಿಯವರೆಗಿನ ರೋಲರ್ ಕೋಸ್ಟರ್ ಸವಾರಿಯ ಪಯಣದಲ್ಲಿ ಎದುರಾಗುವ ಬೇನೆ, ಬವಣೆ, ಶೃಂಗಾರ ವಿಪ್ರಲಂಬಗಳಷ್ಟೇ. ಬದುಕೆಂದರೂ ಅದೇ ತಾನೇ? ಈ ಎಲ್ಲವನ್ನೂ ದಾಟಿದಮೇಲೆ ಏನಾದರೇನು? ಅಕ್ಕ ಹೇಳುವ ಹಾಗೆ ಚೆನ್ನಮಲ್ಲಿಕಾರ್ಜುನನ ಕೂಡಿದ ಮೇಲೆ ಈ ಕಾಯವನ್ನು ‘ನಾಯಿ ತಿಂದರೇನು ನೀರು ಕುಡಿದರೇನು’ ಆದುದರಿಂದ ಅಕ್ಕನನನ್ನು ಅಖಂಡವಾಗಿ ಹಿಡಿಯಬೇಕೆಂದರೆ ಅವಳ ಪ್ರಯಾಣದಗುಂಟ ನಾವೂ ಸಾಗಬೇಕು.

ಆ ಪ್ರಯಾಣದ ತಗ್ಗು, ತಿಟ್ಟುಗಳನ್ನು, ಕಮರಿ, ಕಂದಕಗಳನ್ನು ಸಂಧ್ಯಾ ಮತ್ತು ಭಾರತಿಯವರು ತಮ್ಮ ಕವಿತೆಗಳ ಮೂಲಕ ಹಿಡಿದಿಡಲು ಪ್ರಯತ್ನಿಸಿದ್ದಾರೆ.

‘ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆ’ ಶೀರ್ಷಿಕೆಯನ್ನು ಇಲ್ಲಿ ಸರಿಯಾಗಿಯೇ ಬಳಸಿಕೊಳ್ಳಲಾಗಿದೆ. ಇದು ದೇಹಾತ್ಮ ಜಿಜ್ಞಾಸೆಗಳ ದಟ್ಟಕಾಡು. ಇಲ್ಲಿ ಕಾವು ಕುಳಿತ ಕವಿತೆಗಳೆಲ್ಲ ‘ನೀಲಿ ಧ್ಯಾನ’ (ಗ್ಯಾನ)ದೊಳಗೆ ಕಳೆದು ಹೋಗಿವೆ. ಆಜ್ಞಾ ಚಕ್ರದ ಬಣ್ಣವೂ ನೀಲಿಯೇ ಎನ್ನುತ್ತಾರೆ. ಶಿವ, ಅದರ ಮಧ್ಯೆ ಇರುವ  ತನ್ನ ಬೆಂಕಿ ಕಣ್ಣು ತೆರೆದು ಮುಚ್ಚುವುದರ ಮೂಲಕವೇ ಸಂಬಂಧಗಳು ರೂಪುಗೊಳ್ಳುತ್ತವೆ ಹಾಗೆಯೇ ಅಳಿದುಹೋಗುತ್ತವೆ, ಗಂಡು ಹೆಣ್ಣಿನ ಅನ್ಯೋನ್ಯ ಪ್ರೇಮಕ್ಕೆ ಆತ್ಯಂತಿಕ ಮಾದರಿಯೆಂದರೆ ಶಿವ ಶಿವೆಯರೇ. ತಾನೊಲಿದವಳಿಗಾಗಿ, ಶಿವನನ್ನು, ಬಿಟ್ಟರೆ ಬಹುಶಃ ಬೇರೆ ಯಾವ ಗಂಡೂ ತನ್ನನ್ನೇ ಹೋಳಾಗಿಸಿಕೊಂಡ ಉದಾಹರಣೆಗಳು ಸಿಗುವುದಿಲ್ಲ. ಅಂತಹವನಿಗಾಗಿ ಹಂಬಲಿಸುವುದು, ಅವನ ಬಗ್ಗೆ ‘ಹಾಡಿದಲ್ಲದೇ ಸೈರಿಸಲಾರೆ ಎನ್ನುವುದು’ ಅವನನ್ನು ಹೊಂದಬೇಕೆನ್ನುವುದು ಪ್ರತಿಯೊಬ್ಬ ಹೆಣ್ಣಿನ ಕನಸೂ ಆಗಿದೆ.

ದೇಹದ ಭಾಷೆಯಲ್ಲಿ ಹೆಣ್ಣು ಮಾತನಾಡುವುದು ಸುಲಭವಲ್ಲ. ‘ಹಸಿಮಣ್ಣಿನ ತೇವಕ್ಕೆ ಕಾಯುವ ಮೊಮ್ಮಗಳ ’(ಸಂಧ್ಯಾ : ಅವರೆ ಹೂ ಕ್ರೋಟನ್ ಗಿಡ)  ಮುಂದೇನೋ ಆಯ್ಕೆಯ ಪ್ರಶ್ನೆಯಿದೆ ಆದರೆ ಅದಕ್ಕೆ ಉತ್ತರ ಕಂಡಕೊಳ್ಳುವಷ್ಟರಲ್ಲಿ ‘ಸಂತೆಯೇ ಮುಗಿದು ಹೋದರೆ?’ ಎನ್ನುವ ಭಯ (ಭಾರತಿ: ‘ಆಯ್ಕೆ’) ಇದು ಅಕ್ಕನ ಕಾಲದಿಂದ ಇಂದಿನವರೆಗೂ ಇದೆ.  ಕನ್ನಡ ಸಾಹಿತ್ಯದಲ್ಲಿ ಈ ಭಯವನ್ನು ದಾಟುತ್ತಿರುವ, ದಾಟಿದ ಮಹಿಳಾ ಕವಿಗಳು ಇದ್ದಾರೆ. ಅದಕ್ಕೆ ಹೊಸದಾಗಿ ಸೇರ್ಪಡೆಯಾಗುತ್ತಿರುವ, ಅದನ್ನು ಅನನ್ಯವಾಗಿ ನಿರ್ಭಿಡೆಯಿಂದ ದಾಖಲಿಸಿರುವ ಸಂಧ್ಯಾ ರಾಣಿ ಮತ್ತು ಭಾರತಿಯವರ ಈ ಕವಿತೆಗಳು ಅಕ್ಕನ ಕಾಯದ ಕಳವಳಕ್ಕಿಂತ ಕಡಿಮೆಯೇನಲ್ಲ.

ಸಂಗಾತವೆಂದರೆ ಪಾರಸ್ಪರಿಕವಾದುದು. ಎಷ್ಟು ನಾಜೂಕೆಂದರೆ ಹಾಲು ಮೊಸರಾಗುವ ಧಾರಣೆಯಂತೆ. ಈ ಧಾರಣೆಯ ಹದ ಸ್ವಲ್ಪ ಹೆಚ್ಚುಕಡಿಮೆಯಾದರೂ ಹಾಲು ಹೆಪ್ಪುಗಟ್ಟುವುದಿಲ್ಲ. (ಸಂಗಾತ) ಗಂಡು ಹೆಣ್ಣಿನ ನಡುವಿನ ಸಂಬಂಧಗಳ ಸೂಕ್ಷ್ಮ ಸ್ವರೂಪವನ್ನು ಕಾಯುವ ಬೇಯುವ, ಸುಖಿಸುವ ಮನೋ ದೈಹಿಕ ವ್ಯಾಪಾರಗಳನ್ನು ತೀವ್ರವಾಗಿ ಇಲ್ಲಿನ ಕವಿತೆಗಳು ಕಟ್ಟಿಕೊಡುತ್ತವೆ. ‘ಕನಸನ್ನು ಕಟ್ಟಿ ಹಾಕಿ ಕುಂಡದಲಿ ಹೂತಿಟ್ಟು ಬೋನ್ಸಾಯ್’ ಆಗಿ ಬದುಕಿದ ದೇಹ ಮನಸ್ಸಿಗೆ (ಬೋನ್ಸಾಯ್ ಮೊರೆ) ‘ಕಡಲಾಗಿ ಮೊರೆದು ಮೆಟ್ಟಿಲು ಒತ್ತಿ ಗುಡ್ಡವ ಹತ್ತಿ ಬೆಟ್ಟದ ತುದಿ ಏರಿ ಕಾಲು ಮೀಟಿ ಒಮ್ಮೆಲೆ ಸ್ವತಂತ್ರವಾಗಿ ಆಗಸದುದ್ದ ಹರಡಿ ಇಲ್ಲವಾಗುವ’ (ನೀರವ) ಬಯಕೆ ಇದೆ.

ಗಂಡು ಹೆಣ್ಣಿನ ಸಂಬಂಧವೆಂದರೆ ‘ಇಬ್ಬರೂ ಉರಿದು ಇಲ್ಲವಾಗುವುದು’ (ಪರಾಗ ಸ್ಪರ್ಷದ ಆ ಘಳಿಗೆ) ‘ಅವಳು ಭೋರ್ಗರೆವ ಜಲಪಾತವಾದರೆ’ (ಕತೆ ಹೀಗೆ ಮುಗಿದು ಬಿಡುತ್ತದೆ) ಇವನು ‘ಅರೆತೆರೆದ ಬಾಗಿಲಿನ ಹಿಂದಿನ ಕೌತುಕ ಮತ್ತು ನಿಗೂಢ’ (ಅವನೆಂಬ ಅಸಾಂಪ್ರದಾಯಕ ಪದ್ಯ). ಸಂಗಾತವೆಂದರೆ ವೈರುಧ್ಯಗಳ ಆಗರವೂ ಹೌದು ಆದುದರಿಂದಲೇ ಅದು ನಿಗೂಢ. ಶಿವ ಕೂಡ ಅನೇಕ ವೈರುಧ್ಯಗಳ ದೈವ. ಶೀಘ್ರ ಕೋಪಿ, ಶೀಘ್ರ ಪ್ರಸಾದಿ. ನಿಗೂಢನೂ, ತತಕ್ಷಣಕ್ಕೆ ಪ್ರಕಟವಾಗುವವನೂ (ಸದ್ಯೋಜಾತ) ಹೌದು. “ಬಿಗಿದಪ್ಪಿದರೆ ಮಂಜಾಗುತ್ತಾನೆ/ಮೈಬಳಸಿದರೆ ಬೂದಿಯಾಗುತ್ತಾನೆ ……. ಬಿಟ್ಟು ಹೋದ ಎಂದು ಹೆಪ್ಪುಗಟ್ಟಿದರೆ ತಂಗಾಳಿಯಲ್ಲಿ ತನ್ನುಸಿರ ಕಳಿಸಿ ಕೆನ್ನೆ ನೇವರಿಸುತ್ತಾನೆ” (ನೀಲಕಂಠನೊಡನೆ ನನ್ನ ನೀಲೀ ಗ್ಯಾನ).

ಬದುಕೆನ್ನುವುದೇ ಅರ್ಥ ಅಪಾರ್ಥಗಳ ವೈರುಧ್ಯಗಳ ದೊಡ್ಡ ಮೊತ್ತ. ದೇಹದ ಹಂಗು ತೊರೆದಾಗ ಮಾತ್ರ ಇಲ್ಲಿ ಸಂಪೂರ್ಣ ಪರಸ್ಪರ ಸಮಾಗಮ ಸಾಧ್ಯ.  ದೇಹದ ಮೂಲಕವೇ ದೇಹ ಭಾವನೆಯನ್ನು ಮೀರಬೇಕಾಗಿರುವುದು ದೇಹಿಗಳ ಅನಿವಾರ್ಯ.  ‘ಅವನು ಹರಿಯಲಿಲ್ಲ ಅವಳು ನಿಲ್ಲಲಿಲ್ಲ’ (ಕತೆ ಹೀಗೆ ಮುಗಿದು ಹೋಗುತ್ತದೆ), ‘ನಾವಾಗದ ಬರಿಯ ನಾನು ನೀನು’ (ಕವಲು ದಾರಿ) ಎನ್ನುವ ಸಾಲುಗಳೂ ಕೂಡ ಇಂತಹ ಪಾರಸ್ಪರಿಕತೆಯನ್ನು ಕಳೆದುಕೊಂಡ ಸ್ಥಿತಿಯನ್ನೇ ಹೇಳುತ್ತವೆ. ಇದರ ವಿಷಾದದ ಒಳಧ್ವನಿ ಯೋಗದ ಕನಸೇ ಆಗಿದೆ.

ಕಾಯುವ ಬೇಯುವ ನೋಯುವ ಸಂಭ್ರಮಿಸುವ ಈ ಸಂಬಂಧಗಳ ಜಾಲದೊಳಗೆ ಮಳೆ ಮೋಡ, ಬೆಂಕಿ, ಜ್ವಾಲಾಮುಖಿ, ಕಡಲು, ಪರ್ವತ, ನದಿ, ಬಿರುಗಾಳಿ ತಂಗಾಳಿ, ಬಿಸಿಲು, ಇರುಳು, ಮಿಂಚು ಹುಳು. ಬಣ್ಣದ ಚಿಟ್ಟೆ ಎಲ್ಲಾ ಇವೆ. ಇವು ಸಂಬಂಧಗಳ ಹೊರಗಿವೆಯೋ ಒಳಗಿವೆಯೋ? ವಾಸ್ತವವೋ, ನಮ್ಮ ಗ್ರಹಿಕೆಯೋ? ಎನ್ನುವ ಮಾಯೆಯನ್ನು ಹರಡಿವೆ. ಈ ಬದುಕು ಒಂದು ‘ಮಾಯಾ ಕನ್ನಡಿ’. ಈ ಸಂಕಲನಕ್ಕೆ ಮುನ್ನುಡಿ ಬರೆದ ಕೆ.ವೈ. ನಾರಾಯಣ ಸ್ವಾಮಿಯವರು ಕೂಡ ‘ಮನದ ಮುಂದಣ ಮಾಯೆ’ ಎನ್ನುವುದು ಈ ಅರ್ಥದಲ್ಲಿಯೇ ಇರಬಹುದು. ಯಾಕೆಂದರೆ ಯಾವ ಭಾವಸ್ಥಿತಿಯೂ ಶಾಶ್ವತವಲ್ಲ. ಎಲ್ಲವೂ ಬದಲಾಗುತ್ತಲೇ ಹೋಗುವಂತಹದು.

ಇಲ್ಲಿನ ಅನೇಕ ಕವಿತೆಗಳಲ್ಲಿ ಚಿಟ್ಟೆಯ ಪ್ರತಿಮೆ ಬರುತ್ತದೆ. ಒಂದು ಕ್ಷಣ ಮುಷ್ಠಿಯಲಿ ಹಿಡಿದ ಮಾತ್ರಕ್ಕೆ ಕೈಗೆ ಬಣ್ಣದ ಹುಡಿಯನ್ನಷ್ಟೇ ಮೆತ್ತಿ ಹಾರಿ ಹೋಗುವ ಚಿಟ್ಟೆಗಳಿವು. ಇವುಗಳ ‘ಗಾಳಿಕೆನೆಯ’ ನವಿರು, ‘ಗಾಳಿಹೆಜ್ಜೆ ಹಿಡಿದು’ ಸುಗಂಧಕ್ಕೆ ಹಾರುವ ರೀತಿ, ಚಂಚಲತೆ, ಕ್ಷಣಭಂಗುರತೆ, ಚುರುಕುತನ, ಚಪಲತೆ, ಆಕರ್ಷಣೆ, ವಿಕರ್ಷಣೆ, ರಂಗು ರಂಗಿನ ಸ್ವರೂಪ ಎಲ್ಲವೂ ಗಂಡು ಹೆಣ್ಣಿನ ಸಂಬಂಧಗಳ ಸಂಕೀರ್ಣ ಮುಖಗಳನ್ನೇ ಬಯಲಾಗಿಸುತ್ತವೆ.
ಈ ಕವಿತೆಗಳು ತಲಪಿಸುವ ಗಾಢ ಅನುಭವಗಳನ್ನು, ಅವುಗಳ ತೀವ್ರ ತಾಕಲಾಟ, ತುಮುಲಗಳನ್ನು ಗಮನದಲ್ಲಿಟ್ಟುಕೊಂಡೇ ಒಂದು ಮಾತನ್ನು ಕಡೆಗೆ ಹೇಳಬೇಕಾಗಿದೆ.

ಇಲ್ಲಿನ ಕೆಲವು ಕವನಗಳು ವ್ಯಾಖ್ಯಾನದೋಪಾದಿಯಲ್ಲಿ ಕೊನೆಗೊಳ್ಳುತ್ತವೆ. ರಘುನಾಥ್ ಅವರು ಇವುಗಳನ್ನು ‘ಬಿಗು ಮತ್ತು ಲಘು’ ಕವಿತೆಗಳು ಎನ್ನುತ್ತಾರೆ. ಓದುಗರ ಗ್ರಹಿಕೆಯ ಬಗ್ಗೆ ಶಂಕೆ ಮೂಡಿದಾಗ ಹೀಗೆ ಲಘು ಆಗುವುದುಂಟು.  ಆದರೆ ಇಂತಹ ವ್ಯಾಖ್ಯಾನಗಳು ಆಗಸದಲ್ಲಿ ಸ್ವಂಚ್ಛಂದ ಹಾರುವ ಕವಿತೆಯ ರೆಕ್ಕಗಳನ್ನು ಕತ್ತರಿಸಿಬಿಡುತ್ತವೆ. ಕುಂಡದಲ್ಲಿಟ್ಟು ಬೋನ್ಸಾಯ್ ಮಾಡಿಬಿಡುತ್ತವೆ. ಸಹೃದಯರ ಕಲ್ಪನೆಯ ಅಂಗಳದಲ್ಲಿ ಕವಿತೆಗಳನ್ನು ಆಡಲು ಬಿಡಬೇಕು. ಸಹೃದಯರ ಎದೆಯಲ್ಲಿ ಅವು ರೂಪಾಂತರಗೊಳ್ಳಬೇಕು. ಆಗ ಅವುಗಳಿಗೆ ಅಸಂಖ್ಯ ರೆಕ್ಕೆ ಪುಕ್ಕ, ಬಣ್ಣಗಳು ಮೂಡಿ, ಇನ್ನಿಲ್ಲದ ವೇಗ ಒದಗಿ ಬಂದು ‘ಅಮೃತಕ್ಕೆ ಹಾರು’ತ್ತವೆ.

ಈ ಕವಿತಾ ಸಂಕಲನವನ್ನು ನಾನು ಕಂಡಿರಿಸಿರುವ ರೀತಿಯಲ್ಲಿ ಕೆಲವರಿಗೆ ಸ್ವಲ್ಪ ಉತ್ಪ್ರೇಕ್ಷೆ ಕಾಣಿಸಬಹದು. ಹೊಸ ಪ್ರಯೋಗಗಳ ಕಡೆಗೆ ಓದುಗರನ್ನು ಸೆಳೆಯಲು ಉತ್ಪ್ರೇಕ್ಷೆಯ ಅಗತ್ಯವಿದೆ. ನನಗೆ ಈ ಮಾತುಗಳನ್ನು ಹೇಳುವ ಧೈರ್ಯ ಬಂದುದೇ ಈ ಸಂಕಲನಕ್ಕೆ ಮುನ್ನುಡಿ ಬರೆದಿರುವ ಕೆ.ವೈ. ನಾರಾಯಣಸ್ವಾಮಿಯವರ ಅನನ್ಯ ಮಾತುಗಳನ್ನು ಓದಿ. ಸಂಧ್ಯಾ ರಾಣಿ, ಭಾರತಿಯವರಿಗೆ ಸಿಕ್ಕ ಅಮೂಲ್ಯವಾದ ಕೆ.ವೈ.ನಾ ಪ್ರಶಸ್ತಿಯಿದು. ಇಬ್ಬರಿಗೂ ಅಭಿನಂದನೆಗಳು.

‍ಲೇಖಕರು avadhi

March 15, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: