ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ಟೈಪಿಸ್ಟ್ ತಿರಸ್ಕರಿಸಿದ ಕಥೆಯನ್ನು ಬಹುರೂಪಿ’ ಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ವಿಜಯ ಕರ್ನಾಟಕದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

ಅಂದು ತರಗತಿಯಲ್ಲಿ ಮೂಡ್ನಾಕೂಡು ಚಿನ್ನಸ್ವಾಮಿಯವರ ಮಹತ್ವದ ಪದ್ಯ ‘ನಾನೊಂದು ಮರವಾಗಿದ್ದರೆ’ಯ ಇಂಗ್ಲಿಷ್ ಅನುವಾದ ‘If I was a tree’ ಯನ್ನು ಚರ್ಚಿಸುತ್ತಿದ್ದೆ. ಭಾರತೀಯ ಸಮಾಜದ ಅನಿಷ್ಟ ಪದ್ದತಿಯಾಗಿದ್ದ ಅಸ್ಪ್ರಶ್ಯತೆಯ ಕರಾಳ ಅನುಭವಗಳನ್ನೆದುರಿಸಿದವನೊಬ್ಬ ಮನುಷ್ಯನಾಗುವ ಬದಲು ನಾನೊಂದು ಮರವಾಗಿದ್ದರೆ ಈ ಅಸಮಾನತೆಯಾದರೂ ಇರುತ್ತಿರಲಿಲ್ಲ.

ಹಕ್ಕಿಯೊಂದು ಗೂಡು ಕಟ್ಟುವ ಮುನ್ನ ನನ್ನ ಜಾತಿ ಯಾವುದೆಂದು ಕೇಳುತ್ತಿರಲಿಲ್ಲ ಎಂಬ ಮಾರ್ಮಿಕವಾದ ಸಾಲಿನಿಂದ ಶುರುವಾಗುವ ಈ ಪದ್ಯವನ್ನು ನಾನು ಚರ್ಚಿಸುತ್ತಿದ್ದದ್ದು ಪ್ರಥಮ ಪಿ‌.ಯು.ವಿದ್ಯಾರ್ಥಿಗಳ ಮುಂದೆ. ಅವರೆಲ್ಲ ಮಿಲೇನಿಯಮ್ ಕಾಲಮಾನದವರು. ಹಾಗಾಗಿ ಮೊದಲು ಭಾರತೀಯ ಸಮಾಜದಲ್ಲಿದ್ದ ಈ ವ್ಯವಸ್ಥೆಯ ಬಗ್ಗೆ ವಿವರಿಸಿ ಆನಂತರ ಪದ್ಯದ ಟೈಟಲ್ ನ್ನು ಮತ್ತೊಮ್ಮೆ ವಿವರಿಸಿದೆ. ಇಲ್ಲವಾದಲ್ಲಿ ‘If I was a tree’ ಎಂಬುದು ರೊಮ್ಯಾಂಟಿಕ್ ಆಗಿಬಿಡುವ ಸಾಧ್ಯತೆ ಇದೆ. ಕನ್ನಡ ಸಾಹಿತ್ಯದ ಪ್ರಮುಖ ಕವಿಗಳಲ್ಲೊಬ್ಬರಾದ ಚಿನ್ನಸ್ವಾಮಿಯವರ ಬಗ್ಗೆಯೂ ವಿವರಿಸಿದೆ.

ಆನಂತರ ಪದ್ಯದ ಒಂದೊಂದೇ ಸಾಲುಗಳನ್ನು ವಿವರಿಸುತ್ತ, ‘Raindrops wouldn’t turn back taking me for a dog eater. When I branch out further from my roots Mother Earth wouldn’t flee shouting for bath’ ಎನ್ನುವ ಸಾಲುಗಳನ್ನು ಅರ್ಥೈಸುವಾಗ ಮಾಸ್ತಿಯವರ ‘ಉಗ್ರಪ್ಪನ ಉಗಾದಿ’, Mulkraj Anand ಅವರ ‘Untouchable’, ಲಂಕೇಶರ ‘ಮುಟ್ಟಿಸಿಕೊಂಡವನು’ಗಳನ್ನು ಉದಾಹರಿಸಿದೆ. ಅಂಬೇಡ್ಕರ್ ಅವರಿಗಾದ ಅವಮಾನಗಳ ಬಗ್ಗೆಯೂ ಹೇಳಿದೆ. ಯಾಕೋ ಸಮಾಧಾನವಾಗಲಿಲ್ಲ. ಕೊನೆಗೆ ಬಾಲ್ಯದ ನಮ್ಮ ಮನೆಯ ನೆನಪಾಯಿತು. ಅದನ್ನು ಹೇಳಿಯೇಬಿಟ್ಟೆ.

ನಾವು ಚಿಕ್ಕವರಿರುವಾಗ ಪುಟ್ಟಕ್ಕ ಎಂಬುವವಳೊಬ್ಬಳು ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದಳು. ಆಕೆಗೆ ಮನೆಯೊಳಗೆ ಪ್ರವೇಶವಿರಲಿಲ್ಲ. ಆಕೆಯ ಊಟಕ್ಕೆ ಒಂದು ಅಲ್ಯೂಮಿನಿಯಂ ತಟ್ಟೆಯನ್ನು ಖಾಯಂ ಆಗಿ ಕೊಟ್ಟಿಗೆ ಮನೆಯ ಕಂಬದಲ್ಲಿಯೋ, ಇನ್ನೆಲ್ಲಿಯೋ ಇಟ್ಟುಕೊಂಡಿರುತ್ತಿದ್ದಳು. ಅವಳನ್ನು ಅಮ್ಮ ತುಂಬ ಪ್ರೀತಿಯಿಂದಲೇ ಕಾಣುತ್ತಿದ್ದರಾದರೂ ಮಡಿ ಮೈಲಿಗೆ ವಿಚಾರದಲ್ಲಿ ಅವಳನ್ನು ನಡೆಸಿಕೊಳ್ಳುತ್ತಿದ್ದುದು ಅಸ್ಪ್ರಶ್ಯಳಾಗಿಯೇ. ಪುಟ್ಟಕ್ಕನೂ ಅದನ್ನು ‘ಅದು ಹಾಗೆಯೇ’ ಎನ್ನುವಂತೆ ಸ್ವೀಕರಿಸಿಬಿಟ್ಟಿದ್ದಳು ಎಂಬುದು ನನಗೆ ಈಗ ಅರ್ಥವಾಗುತ್ತಿದೆ. ಅವಳಿಗಿಂತ ಹಲವು ದಶಕಗಳಿಗೆ ಚಿಕ್ಕವರಾದ ನಮ್ಮನ್ನೆಲ್ಲ ‘ರಿ’ ಹಚ್ಚಿ ಮಾತನಾಡಿಸುತ್ತಿದ್ದಳು.

ಚಿಕ್ಕ ವಯಸ್ಸಿನಲ್ಲೇ ಕೇವಲ ಜಾತಿಯ ಕಾರಣಕ್ಕಾಗಿ ಸಿಗುತ್ತಿದ್ದ ಈ ಗೌರವ ಮತ್ತು ಮನ್ನಣೆಗಳನ್ನು ನಾನೂ ಎಂಜಾಯ್ ಮಾಡುತ್ತಿದ್ದೆ. ಮನೆಗೆ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ಮಾಡುವವಳಿಗೆ ಮನೆಯೊಳಗೆ ಪ್ರವೇಶ ನಿಷಿದ್ಧ. ಕೆಲವೊಮ್ಮೆ ತಕ್ಷಣಕ್ಕೆ ಅವಳ ನೀರು ಕುಡಿಯವ ಲೋಟ ಸಿಗದಿದ್ದರೆ ಅವಳ ಬೊಗಸೆಗೆ ಮೇಲಿನಿಂದ ನೀರು ಸುರಿಯುತ್ತಿದ್ದದ್ದನ್ನೂ ಕಂಡಿದ್ದೆ. ಕೆಲವೊಮ್ಮೆ ನಾನೂ ಆ ಕೆಲಸ ಮಾಡಿದ್ದೇನೆ. ಪ್ರತೀ ವರ್ಷ ಈ ಪದ್ಯವನ್ನು ಬೋಧಿಸುವಾಗಲೂ ಇದು ನೆನಪಾಗುತ್ತದೆ. ಆರಂಭದಲ್ಲಿ ಮೇಲ್ಜಾತಿಯ ಈ ಹೆಚ್ಚುಗಾರಿಕೆಯನ್ನು ಸಂಭ್ರಮಿಸಿದ್ದ ನನಗೆ ಶಿಕ್ಷಣದಿಂದಾಗಿ, ಬಹಳ ಮುಖ್ಯವಾಗಿ ಐದರಿಂದ ಹತ್ತನೇ ತರಗತಿಯವರೆಗೆ ವಸತಿ ಶಾಲೆಯಲ್ಲಿ ಓದಿದ್ದರಿಂದಾಗಿ ಈ ಅನಿಷ್ಟ ಪದ್ದತಿಯಿಂದ ಹೊರ ಬರಲು ಸಹಾಯವಾಯಿತು.

ಮನೆಯಲ್ಲಿರುವ ಹಳೆಯ ಜನಕ್ಕೆ ಇದನ್ನು ಅರ್ಥ‌ ಮಾಡಿಸುವುದು ಕಷ್ಟ. ಕೊನೇ ಪಕ್ಷ ಹರೆಯದಲ್ಲಿರುವ ನೀವು ಇವುಗಳಿಂದ ಹೊರ ಬರಬೇಕೆಂಬುದು ಇಂಥ ಪಠ್ಯಗಳ ಹಿಂದಿನ ಉದ್ದೇಶ. ಆ ಪುಟ್ಟಕ್ಕನ ಮೊಮ್ಮಕ್ಕಳು ನಮ್ಮೊಡನೆ ಶಾಲೆಯಲ್ಲಿ ಒಂದೇ ತರಗತಿಯಲ್ಲಿ ಕೂರುತ್ತಿದ್ದರು. ಶಾಲೆಗಿಲ್ಲದ ಆ ಮೈಲಿಗೆ ಮನೆಗೆ ಬಂದಾಕ್ಷಣ ಎಚ್ಚರವಾಗುತ್ತಿತ್ತು ಎಂಬುದನ್ನ ನೆನಪಿಸಿಕೊಂಡರೆ ನನ್ನ ಮೇಲೆ ನನಗೆ ಅಸಹ್ಯ ಪಟ್ಟುಕೊಳ್ಳುವಂತಾಗುತ್ತದೆ. ಇನ್ನು ನಮಗಿಂತ ಮಡಿ-ಮೈಲಿಗೆ ಆಚರಿಸುವ ಮನೆಗಳಲ್ಲಿ (ಜಾತಿಗಳಲ್ಲಿ) ಇದು ಹೇಗಿತ್ತೋ ನನಗೆ ತಿಳಿಯದು.  ಸಾರ್ವಜನಿಕ ಬಸ್ಸುಗಳಲ್ಲಿ ಪ್ರಯಾಣ ಮಾಡಿ ಬಂದರೆ ಯಾರ್ಯಾರನ್ನೋ ಮುಟ್ಟಿ ಬಂದರುತ್ತೇವೆ ಎಂಬ ಕಾರಣಕ್ಕೆ ಸ್ನಾನ ಮಾಡಿ ಪವಿತ್ರವಾಗುತ್ತೇವೆ ಎಂಬ ಸಂಬಂಧಿಕರ ಅಜ್ಜಿಯೋರ್ವಳನ್ನು ಬಾಲ್ಯದಲ್ಲಿ ಕಂಡಿದ್ದೇನೆ. ಇವೆಲ್ಲದರಿಂದ ಮುಕ್ತರಾಗದ ಹೊರತು ನಾವು ಎಷ್ಟು ಶಾಂಪು, ಸೋಪು ಹಾಕಿ ತೊಳೆದರೂ ಮನಸ್ಸಿನ ಕೊಳೆ ಹೋಗಲಾರದು.

ಶಿಕ್ಷಣ ಅದನ್ನು ತೊಳೆಯುವ ಪ್ರಯತ್ನ ಮಾಡಿದರೂ ಇತ್ತೀಚಿಗೆ ಶಿಕ್ಷಿತರಲ್ಲೂ ಈ ಅಸಮಾನತೆಯ ಬೇರುಗಳು ಇನ್ನೂ ಗಟ್ಟಿಯಾಗಿರುವುದು ಆತಂಕಕಾರಿಯಾದುದು. It is my sincere request before all of you to come out of these divisive tools of our society and that should be the essence of Education’ ಎಂದು ಹೇಳುತ್ತಾ ಅವಮಾನಿತನೊಬ್ಬನಂತೆ ತಲೆ ತಗ್ಗಿಸಿದ ಅನುಭವವಾಯ್ತು. ವಿದ್ಯಾರ್ಥಿಗಳಿಗೇನು ಈ ಬಗ್ಗೆ ತಿಳಿಯಿತೋ ಇಲ್ಲವೋ ಆದರೆ ನಮ್ಮ ಮನೆಯಲ್ಲಿ ಒಂದು ಕಾಲದಲ್ಲಿ ಪಾಲಿಸುತ್ತಿದ್ದ ಅಂಥ ವ್ಯವಸ್ಥೆಯ ಬಗ್ಗೆ ಅಸಹ್ಯ ಅನ್ನಿಸಿದ್ದು ಮಾತ್ರ ನಿಜ.

ಒಮ್ಮೆ ಹೊಲದಲ್ಲಿ ಏನೋ ಕೆಲಸದ ಸಮಯದಲ್ಲಿ ಪುಟ್ಟಕ್ಕನ ಕೇರಿಯ ಮತ್ತೊಬ್ಬ ಮಹಿಳೆ ದುರ್ಗಕ್ಕ ಅನ್ನಿಸುತ್ತೆ, ‘ಅಯ್ಯೋ ನಮ್ ಮೈಯಲ್ಲೂ ಹರೀತಿರೋ ರಕ್ತ ಕೆಂಪೇ ತಗಳಿ’ ಎಂದು ಹೇಳಿದಾಗ ಅವತ್ತು ಉದ್ಧಟತನ ಅನ್ನಿಸಿತ್ತು. ಆದರೆ ಅದೆಷ್ಟು ಸಹಜವಾದ ಛಾಟಿಯೇಟು ಎಂಬುದು ಈ ಪದ್ಯ ಓದುವಾಗ ನನಗೆ ಅನ್ನಿಸುತ್ತೆ. ಗಿಡ, ಮರ, ಗುಡುಗು, ಸಿಡಿಲು, ಪ್ರವಾಹ, ಮಳೆ ಇವ್ಯಾವೂ ನಮ್ಮಲ್ಲಿ ಪಕ್ಷಪಾತ ಮಾಡುವುದಿಲ್ಲ. ಆದರೆ ಪ್ರವಾಹದಲ್ಲಿ ಮುಳುಗವ ಹಂತದಲ್ಲೂ ರಕ್ಷಿಸ ಬಂದವನನ್ನು ಯಾವ ಜಾತಿ ಎಂದು ಕೇಳುವ ಮನುಷ್ಯರು ನಾವಾಗಿದ್ದೇವೆ. ಕೆಲವೊಮ್ಮೆ ಮೀಸಲಾತಿಯನ್ನು ನೆನೆದು ಬೇಸರ ಮಾಡಿಕೊಂಡರೂ ಶತಮಾನಗಳ ಕಾಲ ಕತ್ತಲಲ್ಲಿಟ್ಟವರನ್ನು ಎಪ್ಪತ್ತು ವರ್ಷಗಳಲ್ಲಿ ಮೇಲೆತ್ತಿಬಿಟ್ಟೇವು ಎಂಬುದು ಕೂಡ ಹಾಸ್ಯಾಸ್ಪದವಾದುದು. ಕೇವಲ ಹುಟ್ಟಿನ ಜಾತಿಯ ಕಾರಣಕ್ಕೆ ಒಬ್ಬ ಮನುಷ್ಯ ಶ್ರೇಷ್ಠನೂ ಮತ್ತೋರ್ವ ಕನಿಷ್ಠನೂ ಆಗುತ್ತಾನೆ .

ಇನ್ನು ಕೆಲವು ದೇಶಗಳಲ್ಲಿ ಮೈಬಣ್ಣದ ಕಾರಣಕ್ಕೆ ಈ ತಾರತಮ್ಯ ಅನುಸರಿಸಲಾಗಿದೆ. ಅಂದರೆ ಮನುಷ್ಯ ಇಲ್ಲಿ ತಾನು ಇತರರಂತೆಯೇ ಮನುಷ್ಯ ಎಂಬುದನ್ನು ಸಾಬೀತು ಮಾಡಲು ಹೋರಾಡಬೇಕಾಗಿದೆ ಎಂದು ಯೋಚಿಸಿದಾಗ ನಮ್ಮ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಸಂಶೋಧನೆಗಳೆಲ್ಲ ಏನನ್ನು ಸಾಧಿಸಿವೆ ಎಂಬ ಗೊಂದಲವಾಗುತ್ತದೆ. ಮಂತ್ರಿಯೊಬ್ಬರು ಗ್ರಾಮ ವಾಸ್ತವ್ಯ ಮಾಡುವಾಗ ‘ಪರಿಶಿಷ್ಟ ಜಾತಿಯವರ ಮನೆಯಲ್ಲಿ ಆಹಾರ ಸೇವಿಸಿದ ಸಚಿವ’ ಎಂದು ಪದೇ ಪದೇ ಹೆಡ್ ಲೈನ್‌ನಲ್ಲಿ ತೋರಿಸುತ್ತಾರೆ ಎಂದರೆ ಏನರ್ಥ? ಇನ್ನೂ ಅವರ ಮನಸ್ಸಲ್ಲಿ ಕೀಳು ಎಂಬ ಭಾವನೆ ಹೋಗಿಲ್ಲವೆಂದೇ ತಾನೆ! 

ಆ ಪದ್ಯದ ಸಾರಾಂಶವನ್ನೋ, ಪ್ರಶ್ನೋತ್ತರಗಳನ್ನೋ ಬೋಧಿಸುವುದು ಬಹಳ ಸುಲಭದ ಕೆಲಸ. ಆದರೆ ನಾವು ಬೋಧಿಸುವ ವಿಷಯಗಳ ಪರಿಣಾಮ ಏನಾದರೂ ಇದೆಯಾ ಎಂಬುದನ್ನು ನಾವು ಯೋಚಿಸದೇ ಹೋದರೆ ಹೇಗೆ? ಇಷ್ಟೆಲ್ಲ ಗೊಂದಲದಲ್ಲಿರುವಾಗಲೇ ಒಂದು ವಿದ್ಯಮಾನದಿಂದ ನಾನು ಇನ್ನೂ ಆಶ್ಚರ್ಯಕ್ಕೊಳಗಾದೆ. ಲಿಂಗಾಯತರ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಪಾದಯಾತ್ರೆ ಮತ್ತು ಹೋರಾಟ ಆರಂಭವಾಗಿದೆ ಎಂಬುದು. ಪುಟ್ಟಕ್ಕನಿಗೂ ಮೀಸಲಾತಿ ಇದೆ. ಅವಳನ್ನು ಮನೆಯೊಳಗೆ ಸೇರಿಸದ ನನ್ನ ಜಾತಿಯ‌ ಒಂದು ಪಂಗಡಕ್ಕೂ ಮೀಸಲಾತಿಯ ಅವಶ್ಯಕತೆಯಿದೆ ಎಂದಾದರೆ ದೇಶದಲ್ಲಿರುವ ನಿಜವಾದ ಸಮಸ್ಯೆ ಯಾವುದು? ಎಂದು ಆಲೋಚಿಸುತ್ತಿರುವಾಗಲೇ ಮತ್ತೊಂದು ಘಟನೆ ನಡೆದದ್ದು ಗಮನಿಸಿದೆ.

ಇತ್ತೀಚಿಗೆ ಬಿಡುಗಡೆಯಾದ ಪೊಗರು ಚಿತ್ರದಲ್ಲಿ ಪೂಜಾರಿಯೊಬ್ಬನನ್ನು ವಿಲನ್ ಕಾಲಲ್ಲಿ ಒದೆಯುತ್ತಾನೆ ಎಂಬ ದೃಶ್ಯವಿದ್ದು, ಅದು ಬ್ರಾಹ್ಮಣ ಸಮುದಾಯಕ್ಕೆ ಮಾಡಿದ ಅವಮಾನ ಎಂಬ ಕಾರಣಕ್ಕೆ ನಿರ್ದೇಶಕರು ಕ್ಷಮೆ ಕೇಳಬೇಕಾಯಿತು. ಅದೊಂದು ಕಾಲ್ಪನಿಕ ಕಥೆ ದಯಮಾಡಿ ಕ್ಷಮಿಸಿ ಎಂದು ನಿರ್ದೇಶಕರು ತಮ್ಮ ಸಿನಿಮಾದ ವ್ಯಾಪಾರಕ್ಕೆ ಧಕ್ಕೆಯಾಗಬಾರದೆಂಬ ಕಾರಣಕ್ಕೆ ಇಷ್ಟವಿದೆಯೋ ಇಲ್ಲವೋ ಕ್ಷಮೆ ಕೇಳಿದರು.

ಆದರೆ ಸಿನಿಮಾದ ಖರಾಬು ಹಾಡಿನಲ್ಲಿ ಧ್ರುವ ಸರ್ಜಾ ಅವರು ನಾಯಕಿ ರಷ್ಮಿಕ‌ ಮಂದಣ್ಣ ಅವರನ್ನು ಕಾಲಿನಿಂದ ಅಸಹ್ಯವಾಗಿ ಎಳೆದುಕೊಳ್ಳುವ ಕ್ರೌರ್ಯದಂತೆ ಕಾಣುವ ಒಂದು ದೃಶ್ಯವೂ ಇದೆ. ಅದರ ಬಗ್ಗೆ ಯಾರಾದರೂ ಪ್ರತಿಭಟಿಸುತ್ತಾರಾ? ಅದು ಕೂಡ ಸ್ತ್ರೀಯನ್ನು ಗೌರವದಿಂದ ಕಾಣಬೇಕಾದ ನಮ್ಮ ಸಂಸ್ಕ್ರತಿಗೆ ಅಪಚಾರ ಎಸಗಿದಂತೆಯೇ ಅಲ್ಲವೆ? ಅದನ್ನು ಕಲೆಯಾಗಿ ತೆಗೆದುಕೊಳ್ಳಲು ತಯಾರಿರುವ ಸಮಾಜ ಪೂಜಾರಿಯ ಮೇಲೆ ಕಾಲಿಟ್ಟಾಗ ಮಾತ್ರ ಪ್ರತಿಭಟಿಸುತ್ತದಲ್ಲಾ ಯಾಕೆ? 

ಅಂದಹಾಗೆ ಮೇಲೆ ನಾನು ಹೇಳಿದ ಪದ್ಯವನ್ನು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿರುವುದು Rowena Hill ಎಂಬ ಬ್ರಿಟಿಷ್ ಮಹಿಳೆ. ಆಕೆ ಮೈಸೂರು ವಿಶ್ವವಿದ್ಯಾಲಯದಲ್ಲೂ ಅಭ್ಯಾಸ ಮಾಡಿದವರು. ಭಾರತದ ವಿವಿಧ ಭಾಷೆಗಳನ್ನು ಕಲಿತು ಇಲ್ಲಿನ ಸಾಹಿತ್ಯವನ್ನು ಭಾರತದ ಅನೇಕ ಭಾಷೆಗಳಿಗೂ, ಇಂಗ್ಲಿಷ್ ಮತ್ತು ಸ್ಪಾನಿಷ್ ಗೂ ಅನುವಾದಿಸಿರುವ ಆಕೆ ಈಗೇನಾದರೂ ಈ ಪದ್ಯವನ್ನು ಅನುವಾದಿಸಿದ್ದರೆ ಭಾರತೀಯ ಸಮಾಜದ ಅವಹೇಳನಕ್ಕೆ ಸಂಚು ಎಂದು ಇನ್ನೆಷ್ಟು ಟೀಕೆ ಎದುರಿಸಬೇಕಾಗಿತ್ತೋ ಏನೋ. 

ಇದರ ಜೊತೆಗೆ ಇತ್ತೀಚಿಗೆ ಆರನೇ ತರಗತಿ ಪಠ್ಯದಿಂದ ಹೊಸ ಧರ್ಮಗಳ ಉದಯ ಎಂಬ ಗದ್ಯ ಭಾಗವನ್ನು ತೆಗೆದು ಹಾಕಲು ಸೂಚಿಸಲಾಗಿದೆ ಎಂಬುದನ್ನು ಕೇಳಿದ ಮೇಲೆ ‘If I was a tree’ ಎಂಬಂಥ ಪದ್ಯವನ್ನು ತೆಗೆದು ಹಾಕಿಬಿಡುತ್ತಾರೋ ಎಂದೂ ನನಗೆ ಅನ್ನಿಸಿದೆ. ದ್ವಿತೀಯ ಪಿ‌.ಯು. ಆಂಗ್ಲಭಾಷೆಯ ಪಠ್ಯದಲ್ಲಿ ‘Water’ ಎಂಬ ಪದ್ಯವೊಂದಿದೆ. ಅದೂ ಕೂಡ ಅಸ್ಪ್ರಶ್ಯತೆ ಮತ್ತು ಶೋಷಣೆಯ ಮಾಧ್ಯಮವಾಗಿ ನೀರನ್ನು ಬಳಸಿದ್ದರ ಬಗ್ಗೆ ಮಾತನಾಡುವ ಪದ್ಯವೇ ಆಗಿದೆ.

Water knows everything ಎನ್ನುವ ಪದ್ಯದ ಸಾಲು ನಾವು ಏನೇ ಇತಿಹಾಸ ಬರೆದುಕೊಂಡರೂ ನೀರಿಗೆ ಎಲ್ಲವೂ ತಿಳಿದಿದೆ ಎಂಬುದನ್ನು ಮತ್ತೆ ಮತ್ತೆ ನಮಗೆ ನೆನಪಿಸುತ್ತದೆ. ಆ ಪದ್ಯವನ್ನು ಪಠ್ಯದಿಂದ ತೆಗೆದರೂ ನಾವು ಆಚರಿಸಿದ್ದ ಅಸ್ಪ್ರಶ್ಯತೆಯನ್ನು ಸುಳ್ಳೆಂದು ಹೇಳಲಾಗದು. ಏಕೆಂದರೆ Water is omniscient ! 

ಪುಟ್ಟಕ್ಕನ ಮನೆಯವರಿಗೆ ಸಂವಿಧಾನ ಒಂದಷ್ಟು ಸವಲತ್ತು ಕೊಟ್ಟಿದೆ. ನನಗೂ ಇನ್ನೊಂದಿಷ್ಟು ಸವಲತ್ತುಗಳನ್ನು ಕೊಟ್ಟಿದೆ. ಆದರೆ ನಮ್ಮ ನಮ್ಮ ಮನದ ಸಂವಿಧಾನ ಸರಿಯಾಗದ ಹೊರತು ಪುಟ್ಟಕ್ಕನನ್ನು ನಾವು ಮೊದಲು ಮನಸ್ಸಿಗೆ ಬಿಟ್ಟುಕೊಂಡರೆ ಸಾಕು, ಮನೆಯೆಂಬುದು ಕೇವಲ ಗೋಡೆಗಳ ಗೂಡು ಅಷ್ಟೆ… ಮನಸ್ಸು ತೆರೆಸುವ ಇಂಥ ಮಾರ್ಮಿಕ ಪಠ್ಯಗಳನ್ನು ತೆಗೆದು ಕೇವಲ ಮಗ್ಗಿ ಕಲಿಸುವಂತೆ ನಮ್ಮನ್ನು ಸರ್ಕಾರ ಮಾಡದಿದ್ದರೆ ಸಾಕು… ಇಲ್ಲವಾದಲ್ಲಿ ಕ್ವಿಕ್ ರಿಯಾಕ್ಷನ್ನಿನ ಈ ಸೋಷಿಯಲ್ ಮೀಡಿಯಾ ಕಾಲದಲ್ಲಿ ನಮ್ಮ ಮಕ್ಕಳು ಹಿಂದೆಂದಿಗಿಂತ ಹೆಚ್ಚು ಜಾತಿವಾದಿಗಳಾಗುವ ಅಪಾಯವಂತೂ ಇದೆ. 

ಅಂದಹಾಗೆ ಈ ವಿಷಯಕ್ಕೆ ತಲೆ ತಗ್ಗಿಸಿದೆ‌ ಎಂದು ಹೇಳಲು ನನಗೆ ಖಂಡಿತಾ ನಾಚಿಕೆಯಿಲ್ಲ… ವಿದ್ಯಾರ್ಥಿಗಳಿಗೆ ಸತ್ಯ ಹೇಳಿದ ಸಮಾಧಾನ ಇದೆ. 

February 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Keshav

    One of the finest articles I have read in recent times. You have picked so many topics and written under a common theme. One of the best essays I have read in recent times.

    ಪ್ರತಿಕ್ರಿಯೆ
  2. SUDHA SHIVARAMA HEGDE

    Well written Mavali. I also feel ashamed when the parents killed their own daughters in the psuedo illution of Satyaloka. Both the parents are science degree holders that too with medals. I discussed it with my students ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: