ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂದು, ಇಂದು, ನಾಳೆಯ ಬೆಸೆಯುವ ಕೃತಿ: ತ ಸು ಶಾಮರಾಯರ ‘ಮೂರು ತಲೆಮಾರು’

ಬಿ ಕೆ ಮೀನಾಕ್ಷಿ

ಇದು ಕನ್ನಡ ಸಾಹಿತ್ಯ ಲೋಕದ ಆಗಸದಲ್ಲಿ ಧೃವತಾರೆಯಾದ ಶ್ರೀಮಾನ್ ವೆಂಕಣ್ಣಯ್ಯನವರ ಕುರಿತ ಕೃತಿ. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯ ‘ಬಂಗಾರದ ಬೆಳೆ’ಯ ಹತ್ತನೆಯ ಕೃತಿ. ಲಾಕ್ ಡೌನ್ ಸಮಯದಲ್ಲಿ ಹಳೆಯ ಪುಸ್ತಕಗಳನ್ನೆಲ್ಲ ತೆಗೆದು ಓದುತ್ತಿದ್ದಂತೆ, ‘ಮೂರು ತಲೆಮಾರು’ ಮತ್ತೊಮ್ಮೆ ಕಣ್ಸೆಳೆಯಿತು.

ನಾನು ನಮ್ಮ ಮನೆಗೆ ಹೋಗುವ ಹಾದಿಯಲ್ಲಿ ಒಂದು ಮನೆಯ ಮುಂದೆ ‘ತ ಸು ಶಾಮರಾಯ’ ಎಂಬ ಫಲಕ ನೀಲಿ ಅಕ್ಷರಗಳಲ್ಲಿ ರಾರಾಜಿಸುತ್ತಿತ್ತು. ನಮ್ಮ ಮನೆಯವರಿಗೆಲ್ಲ ಆ ಫಲಕವನ್ನು ತೋರಿಸಿದ್ದೆ. ಆದರೆ ಅವರ ವಾಸವೇನೂ ಅಲ್ಲಿರಲಿಲ್ಲ, ಮತ್ತವರು ಇಹದಲ್ಲಿರಲೂ ಇಲ್ಲ. ಅವರ ಮೇಲಿನ ಗೌರವಕ್ಕೆ ಆ ಮನೆಯನ್ನು ಕೊಂಡವರು ಅದನ್ನು ಈಗಲೂ ಹಾಗೇ ಉಳಿಸಿಕೊಂಡಿದ್ದಾರೆ. ಅಂದರೆ ಅವರ ಬಗ್ಗೆ ಜನಕ್ಕೆ ಈಗಲೂ ಅದೆಷ್ಟು ಗೌರವವಿರಬೇಕೆಂಬುದಕ್ಕೆ ಇದೊಂದು ಉದಾಹರಣೆ.

ದಿವಂಗತ ವೆಂಕಣ್ಣಯ್ಯನವರ ಕಿರಿಯ ಸಹೋದರರಾದ ತ ಸು ಶಾಮರಾಯರು ಅಂದಿನ ಜೀವನದ ಘಟನಾವಳಿಗಳನ್ನು ಮೂರು ಭಾಗವಾಗಿಸಿ ‘ಮೂರು ತಲೆಮಾರು’ ನಮ್ಮ ಮುಂದಿಟ್ಟಿದ್ದಾರೆ. ‘ಕೇಳಿದ್ದು’ ‘ಕಂಡಿದ್ದು’ ಮತ್ತು ‘ಅನುಭವಿಸಿದುದು.’

ಈ ಜೀವನಚರಿತ್ರೆಯ ಹೊತ್ತಗೆಯನ್ನೋದುವಾಗ, ಹದವಾಗಿ ಮಿಳಿತಗೊಂಡ ಕೆನೆಮೊಸರನ್ನವನ್ನು ಸವಿದಂತೆ, ಹಿತವಾದ, ಮುದನೀಡುವ ಸರಳ ನಿರೂಪಣೆಯಲ್ಲಿ ನಾವು ಆ ಕಾಲಕ್ಕೆ ಜಾರಿಹೋಗುತ್ತೇವೆ. ಇಲ್ಲಿ ಯಾರೊಬ್ಬರೂ ಕೆಟ್ಟವರಿಲ್ಲ, ಯಾರಲ್ಲೂ ಕುಹಕ ವಂಚನೆಗಳಿಲ್ಲ. ದ್ರೋಹ ಚಿಂತನೆಗಳಿಲ್ಲದ ಕಾಲವೂ ಒಂದಿತ್ತೆ ಎಂದು ಮೂಕವಿಸ್ಮಿತರಾಗಿ ಬಿಡುತ್ತೇವೆ. ಎಲ್ಲವೂ ಹೂವು ಅರಳಿದಷ್ಟೇ ನಿರ್ಮಲ ಪ್ರೀತಿಯಿಂದೊಡಗೂಡಿದೆ.

ನಿಜವಾಗಿಯೂ ಪ್ರಪಂಚ ಇಷ್ಟು ಸುಂದರವಾಗಿತ್ತೇ ಎಂದು ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ. ಇದೇನು ರಾಮರಾಜ್ಯದಲ್ಲಿದ್ದದ್ದನ್ನು ಹೀಗೆ ಸಾಮಾಜಿಕವಾಗೇನಾದರೂ ನಿರೂಪಿಸುತ್ತಿದ್ದಾರಾ? ಎಂದು ಅನುಮಾನವಾಗುತ್ತದೆ. ಕೇಡುಳ್ಳ ಮನಸ್ಸುಗಳಿಲ್ಲದ, ಇರುವುದರಲ್ಲೇ ನಾಲ್ಕು ಜನಕ್ಕೆ ದಾನ ಮಾಡಿ, ತಾವು ಹಸಿದೊಡಲಿನಲ್ಲಿ ಮಲಗಿದ ಜನರನ್ನು ವರ್ಣಿಸುವಾಗ ಇದರಲ್ಲಿ ಯಾವೊಂದು ಉತ್ಪ್ರೇಕ್ಷೆಯೂ ಓದುಗರಿಗೆ ಕಾಣುವುದಿಲ್ಲ.

ದಿವಂಗತ ತ ಸು ಶಾಮರಾಯರು ‘ಕೇಳಿ’ದ್ದನ್ನು ಯಥಾವತ್ತಾಗಿ ನಮ್ಮ ಮುಂದಿಟ್ಟಿದ್ದಾರೆ. ಅವರ ತಾತನವರಾದ ವೆಂಕಣ್ಣಯ್ಯನವರ ಗುಣಸ್ವಭಾವ, ವ್ಯಕ್ತಿತ್ವ, ಅವರ ದೈವಭಕ್ತಿ, ಜೀವನದ ಸರಳ ನಡವಳಿಕೆಗಳೆಲ್ಲವೂ ನಮಗೆ ಒಂದು ವಿಶೇಷ ಅನುಭವವನ್ನೇ ನೀಡುತ್ತದೆ. ಅವರು ಅಮಾನತುಗೊಂಡಾಗ, ವಾಪಸ್ಸು ಸರ್ಕಾರವೇ ಅವರನ್ನು ಶೇಕದಾರರನ್ನಾಗಿ ನೇಮಿಸಿ ಪರಶುರಾಮಪುರಕ್ಕೆ ವರ್ಗಾಯಿಸಿದಾಗ, ಅಲ್ಲಿನ ಜನ, ಕೊರಳು- ಕೊಂಬಿಗೆ ಗೆಜ್ಜೆಕಟ್ಟಿದ ದೊಡ್ಡ ಎತ್ತುಗಳನ್ನು ಹೂಡಿದ ಸವಾರಿ ಗಾಡಿಯಲ್ಲಿ ಅವರು ಬರುವರೆಂದು, ಕೊಂಬು, ಕಹಳೆ, ತಮಟೆ, ಕರಡಿ ವಾದ್ಯಗಳ ಸಮೇತ ಅವರನ್ನು ಬರಮಾಡಿಕೊಳ್ಳಲು, ಕೈಗೆ ನಿಂಬೆಹಣ್ಣು, ಕುಡಿಯಲು ಹದವಾದ ಎಳನೀರು ನೀಡಲು ಸಿದ್ಧವಾಗಿದ್ದರೆ, ಆಗ ಅಲ್ಲಿಗೆ ಬರುವುದು ಒಬ್ಬ ಬರಿಗಾಲಿನ ಯಾಚಕ ಬ್ರಾಹ್ಮಣನಂತೆ ತೋರುವ ಒಬ್ಬ ಕಡುಬಡವರಾದ ಸಾದಾ ಮನುಷ್ಯ. 

ಅಲ್ಲೆಲ್ಲಾದರೂ ಶೇಕದಾರರು ಮಾರ್ಗದಲ್ಲಿ ಸಿಕ್ಕರೇ? ಎಂದು ಕಾಯುತ್ತಿದ್ದವರು ಇವರನ್ನು ಕೇಳಿದಾಗ ದೊರೆತ ಉತ್ತರ, ಅವರು ಈ ದಿನ ಬರುವುದಿಲ್ಲ. ಯಾವಾಗ ಬರುತ್ತಾರೋ ತಿಳಿಯದೆನ್ನುತ್ತಾರೆ. ಜನ ನಿರಾಶರಾಗಿ ವಾಪಸಾಗುತ್ತಾರೆ. ಮಾರನೇ ದಿನ ಇವರೇ ಶೇಕದಾರ ಮಹಾಶಯರೆಂದು ತಿಳಿದಾಗ ಜನ ತಬ್ಬಿಬ್ಬು! ಈ ಘಟನೆಯ ಮೂಲಕ ಅಂದಿನ ಅವರ ಸರಳತೆ, ಬಡತನ, ಅಧಿಕಾರದ ದುರುಪಯೋಗವರಿಯದ ಮುಗ್ಧತೆ ಎಲ್ಲವೂ ಓದುಗನಿಗೆ ದಕ್ಕುತ್ತದೆ.

ವೆಂಕಣ್ಣಯ್ಯನವರ ಚಾರಿತ್ರ್ಯವಧೆ ಮಾಡಲು ಪ್ರಯತ್ನಿಸುವ ವೆಂಕಟರಮಣಯ್ಯ, ಕಡೆಗೆ ತಾನೇ ಕ್ಷಮೆ ಕೇಳಿ, ತಮ್ಮಂತ ಭಗವದ್ಭಕ್ತರು ನನ್ನಂತ ಪಾಮರನನ್ನು ಶಪಿಸಿ ನನ್ನ ವಂಶ ನಿರ್ವಂಶವಾಗಬಾರದೆಂದು ಬೇಡಿಕೊಳ್ಳುವಾಗ, ವೆಂಕಣ್ಣಯ್ಯನವರು ಪಾಮರರಿಂದಲೇ ಅಲ್ಲವೇ ಪಾವಿತ್ರ್ಯಕ್ಕೆ ಬೆಲೆ? ಪತಿತರಿಲ್ಲದಿದ್ದರೆ ಪಾವಿತ್ರ್ಯಕ್ಕೆಲ್ಲಿಯ ಬೆಲೆ. ನಿಮ್ಮನ್ನು ಅವನೇ ಕ್ಷಮಿಸುತ್ತಾನೆ ಬಿಡಿ ಎಂದು ರಾಮನಿಗೊಪ್ಪಿಸಿ ನಿರ್ಲಿಪ್ತರಾಗುತ್ತಾರೆ.

ವೆಂಕಣ್ಣಯ್ಯನವರ ಪೂರ್ವಿಕರಾದ ದೇವರ ರಂಗಮ್ಮನವರ ಜೀವನ, ಅವರ ದೈವಭಕ್ತಿ ನಮ್ಮಂತಹ ಸಾಮಾನ್ಯ ಜನ ಕಲ್ಪಿಸಿಕೊಳ್ಳಲೂ ಅಸಾಧ್ಯವಾದದ್ದು. ದಿನವೂ ಮೊಸರು ಕಡೆದು ಬೆಣ್ಣೆ ತೆಗೆವಾಗ, ಬಾಲಕೃಷ್ಣ ಬಂದು, ಅವನಿಗೆ ಬೆಣ್ಣೆ ತಿನಿಸುವ ಭಾಗ್ಯ ದೇವರ ರಂಗಮ್ಮನದು. ತಿರುಪತಿಯಾತ್ರೆ ಮಾಡಲಾಗದ ರಂಗಮ್ಮ ದೇವರ ಕೃಪಾಕಟಾಕ್ಷದಿಂದ ಉತ್ಸವ ಮೂರ್ತಿಯ ಪಕ್ಕದಲ್ಲೇ ಕುಳಿತು, ನೆರೆದ ಭಕ್ತವೃಂದವನ್ನು ಮನದಣಿಯೆ ವೀಕ್ಷಿಸುತ್ತಾಳೆ. ಈ ಪ್ರಸಂಗ ಓದಿದಾಗ, ಎಂಥ ಮನೆತನದ, ಎಂಥ ಅದ್ಭುತ ಜನರಿವರು ಎಂದು ಆಶ್ಚರ್ಯವಾಗದಿರದು. ಇಂತಹ ಅನೇಕ ಕತೆಗಳು ಅಥವಾ ಘಟನೆಗಳು ಓದಲು ದಕ್ಕುತ್ತವೆ.

ಇಂತಹ ಮನೆತನಕ್ಕೆ ಸೇರಿದ ವಂಕಣ್ಣಯ್ಯನವರು ಪ್ರತಿನಿತ್ಯ ಸ್ನಾನ, ಜಪ, ಪಾರಾಯಣಗಳನ್ನು ಮಾಡುತ್ತಾ ಕಡೆಗೊಂದು ದಿನ ತಾವು ದೇಹ ತ್ಯಜಿಸುವ ಕಾಲ ಸನ್ನಿಹಿತವಾಯಿತೆಂದು ತಾವು ಪಾರಾಯಣ ಮಾಡುತ್ತಿದ್ದ ರಾಮಾಯಣ ಗ್ರಂಥವನ್ನು ಮಗನಾದ ಸುಬ್ಬಣ್ಣನಿಗೆ ನೀಡಿ ‘ಇದೇ ನಿನ್ನ ಆಸ್ತಿ. ಕಾಪಾಡಿಕೋ’ ಎಂದು ಹೇಳಿ ರಾಮನನ್ನು ಜಪಿಸುತ್ತಾ ದೇಹತ್ಯಾಗ ಮಾಡುತ್ತಾರೆ. ಇದನ್ನೆಲ್ಲ ಶಾಮರಾಯರು ಹಿರಿಯರಿಂದ ಕೇಳಿದ್ದನ್ನು ದಾಖಲಿಸಿ ಓದುಗರಿಗಿತ್ತಿದ್ದಾರೆ.

ಇಂತಹ ವೆಂಕಣ್ಣಯ್ಯನವರ ಮಗನೇ ಸುಬ್ಬಣ್ಣ. ಸುಬ್ಬಣ್ಣನವರದೂ ಕೂಡ ತಂದೆಯಂತೆಯೇ ಅಗಾಧವಾದ ದೈವಭಕ್ತಿ ಮತ್ತು ಉದಾತ್ತ ವ್ಯಕ್ತಿತ್ವ. ವೆಂಕಣ್ಣಯ್ಯನವರ ಮರಣಾನಂತರ ದಾಯಾದಿಗಳ ಕಿರುಕುಳದಿಂದ ಊರನ್ನೇ ಬಿಟ್ಟು ಮಕ್ಕಳೊಂದಿಗೆ ಹೊರಬರುವ ವೆಂಕಣ್ಣಯ್ಯನವರ ಕುಟುಂಬವಾದ ಹನುಮಕ್ಕಮ್ಮ, ಊರಿನವರ ಸಹಾಯದಿಂದ ತಳುಕಿನಲ್ಲಿಯೇ ಬಿಡಾರ ಹೂಡಿ, ಅಲ್ಲಿಯೇ ತಮ್ಮ ಬದುಕು ಕಟ್ಟಿಕೊಂಡು ಬಾಳಿ ಬದುಕಿ ಚಿತ್ರದುರ್ಗ ಜಿಲ್ಲೆಯ ‘ತಳುಕು’ ಎಂಬ ಊರಿನ ಹೆಸರನ್ನು ನಾಡಿನಲ್ಲಿ ಚಿರಸ್ಥಾಯಿಯಾಗುವಂತೆ ಮಾಡಿದರು. ಸುಬ್ಬಣ್ಣನವರು ಸಣ್ಣ ವಯಸ್ಸಿಗೇ ಇಡೀ ಕುಟುಂಬದ ಜವಾಬ್ದಾರಿಯನ್ನು ಹೊತ್ತು, ಮಕ್ಕಳ ಓದು, ಸಹೋದರರ ಸಲಹುವಿಕೆ, ಮದುವೆ, ಮುಂಜಿ, ಸೋಬನ, ಬಾಣಂತನಗಳನ್ನು ಲೋಪವಿಲ್ಲದಂತೆ ನಿಭಾಯಿಸುತ್ತಾ, ಭೂಮಿಕಾಣಿಗಳನ್ನು ಕೂಡ ಮಾಡಿಕೊಳ್ಳುತ್ತಾರೆ.

ತಮ್ಮನನ್ನು ಅವನು ಕೇಳಿದ ಓದನ್ನೇ ಓದಿಸುತ್ತಾರೆ. ಬಲತಮ್ಮ ಓದಿನಲ್ಲಿ ಹಿಂದುಳಿದಾಗ, ತಮಗೆ ಅದರಿಂದೊದಗಬಹುದಾದ ಅಪಖ್ಯಾತಿಗೆ ಹೆದರುತ್ತಾರೆ. ಅಂತೂ ಜಮೀನನ್ನು ಸಂಪಾದಿಸಬೇಕೆನ್ನುವ ಅವರ ಆಸೆಗೆ, ಆ ಶ್ರೀರಾಮನ ಕೃಪೆಯಿಂದ ಅವಕಾಶವಾಗಿ, ನೂರಾರು ಎಕರೆಗೆ ಒಡೆಯರಾಗುತ್ತಾರೆ. ತಮ್ಮ ಸ್ವಾಭಿಮಾನಕ್ಕೆ ಮತ್ತು ರಾಮನಿಗೆ ಅವಮಾನವಾಯಿತೆಂದು, ತಮ್ಮ ಶೇಕದಾರಿಕೆಗೇ (ಯಾವುದೇ ಇತರ ಆದಾಯವಿಲ್ಲದಿದ್ದರೂ, ಅವನೇ, ಆ ರಾಮನೇ ಕೈ ಹಿಡಿದು ನಡೆಸುತ್ತಾನೆ ಎಂಬ ಭರವಸೆಯಲ್ಲಿ) ರಾಜಿನಾಮೆ ಬರೆದುಕೊಟ್ಟು ಬರಿಗೈಲಿ ಮನೆಗೆ ಬರುವ ಸುಬ್ಬಣ್ಣನವರು ಮೇರುವ್ಯಕ್ತಿ. 

ಮುಂದೆ ಅಭಿವೃದ್ಧಿಗೆ ಬಂದ ಸುಬ್ಬಣ್ಣನವರು, ರಂಗನೆಂಬ ಮರಿ ಕುದುರೆಯೊಂದನ್ನು ಕೊಂಡು ವೈಭೋಗದಿಂದಲೇ ಜೀವನಯಾಪನೆ ಮಾಡುತ್ತಾರೆ. ಸಾಲದ್ದಕ್ಕೆ ಅವರೊಬ್ಬ ಕವಿಯಾಗಿದ್ದರು, ನಾಟಕಕಾರರೂ ಆಗಿದ್ದರು. ಅನೇಕ ನಾಟಕಗಳನ್ನು ರಚಿಸಿ, ಕಲಾವಿದರನ್ನು ಸಜ್ಜುಗೊಳಿಸಿ ಊರಿನ ಜಾತ್ರೆ ಉತ್ಸವಗಳಲ್ಲಿ ಪ್ರದರ್ಶನ ಕೊಟ್ಟದ್ದು ಅವರ ಮೇಧಾವಿತನಕ್ಕೆ ಉದಾಹರಣೆಯಾಗಿದೆ ಇದನ್ನೆಲ್ಲ ನೋಡಿದ್ದ ಶಾಮರಾಯರು ‘ನೋಡಿದ್ದು’ ಭಾಗದಲ್ಲಿ ದಾಖಲಿಸಿದ್ದಾರೆ.

ಸುಬ್ಬಣ್ಣನವರಿಗೆ ಮೊದಲ ಮಗುವಾದಾಗ ಹನುಮಕ್ಕಮ್ಮ ತಮ್ಮ ಪತಿಯ ದಿವ್ಯನಾಮವನ್ನೇ ತಮ್ಮ ಮೊಮ್ಮಗನಿಗೆ ನಾಮಕರಣ ಮಾಡುತ್ತಾರೆ. ತಾತನ ಹೆಸರನ್ನೇ ಹೊತ್ತು ಬದುಕಿ ಬಾಳಿದ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಹೆಸರನ್ನು ಅಜರಾಮರವಾಗಿಸಿದ, ಹಲವಾರು ಪ್ರಥಮ ಕಾರ್ಯಗಳನ್ನು ಕೈಗೊಂಡು, ತಮ್ಮ ಇಡೀ ಜೀವನವನ್ನೇ ಸಾರ್ಥಕವಾಗಿ ಬಾಳಿದ ಮಹಾನ್ ವ್ಯಕ್ತಿಯೇ, ದಿವ್ಯ ಚೇತನವೇ ದಿವಂಗತ ಶ್ರೀಮಾನ್ ಟಿ ಎಸ್ ವೆಂಕಣ್ಣಯ್ಯನವರು.

ತ ಸು ಶಾಮರಾಯರು ತಮ್ಮ ಅಣ್ಣನವರ ಬಗ್ಗೆ ಬರೆಯುವಾಗ ಅದೆಷ್ಟು ನಿರ್ಲಿಪ್ತತೆ ಸಾಧಿಸಿದ್ದಾರೆಂದರೆ, ನನಗೆ ವೆಂಕಣ್ಣಯ್ಯನವರು ರಾಮನಂತೆಯೂ, ತ ಸು ಶಾಮರಾಯರು ಲಕ್ಷ್ಮಣನಂತೆಯೂ ಭಾಸವಾದರು. ‘ಅನುಭವಿಸಿದುದು’ ವಿಭಾಗದಲ್ಲಿ ತ ಸು ರವರು ತಾವು ಕಣ್ಣಾರೆ ಕಂಡ ಅಣ್ಣನವರ ಎಲ್ಲ ವಿಷಯಗಳನ್ನು ದಾಖಲಿಸಿ ಮುಂದಿನ ತಲೆಮಾರುಗಳಿಗೆ ಇಂತಹ ಅನನ್ಯ, ಉನ್ನತ ವ್ಯಕ್ತಿಯೊಬ್ಬರಿದ್ದರು ಎಂದು ತಿಳಿಸಿಕೊಟ್ಟಿದ್ದಾರೆ.

ಶ್ರೇಷ್ಠ ಎಂಬ ಪದಕ್ಕೆ ವ್ಯಾಖ್ಯಾನ ಮಾಡಬಹುದಾದರೆ ಅದು ಶ್ರೀ ಟಿ ಎಸ್ ವೆಂಕಣ್ಣಯ್ಯ. ಇಂಗ್ಲಿಷ್ ಲೋಯರ್ ಸೆಕೆಂಡರಿಗೆ, ಲಕ್ಷ್ಮೀಪತಿರಾಯರು ಪಲ್ಲಂಗದಲ್ಲಿ ಪವಡಿಸಿ ಓದುತ್ತಿದ್ದ ಗಟ್ಟಿಯಾದ ಓದನ್ನು;  ಯಾವುದೋ ಕಂತೆ ಬೊಂತೆಯ ಮೇಲೆ ಮಲಗಿ ಪಠ್ಯೇತರಗಳನ್ನು ಓದುತ್ತಿದ್ದ ವೆಂಕಣ್ಣಯ್ಯನವರು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದರು. ನೀನು ಖಂಡಿತ ನಪಾಸಾಗುವೆ ಪಠ್ಯ ಓದು ಎಂದು ಮೂದಲಿಸುತ್ತಿದ್ದರು ಲಕ್ಷ್ಮೀಪತಿ. ಆದರೆ ಬಿಡುವಿಲ್ಲದೆ ಓದಿ ಓದಿ ಅಭ್ಯಸಿಸಿದ್ದ ಲಕ್ಷ್ಮೀಪತಿ ನಪಾಸಾಗಿ ಅದನ್ನು ಕೇಳಿಸಿಕೊಂಡಿದ್ದ ಮಾತ್ರಕ್ಕೆ ಉತ್ತೀರ್ಣರಾದ ವೆಂಕಣ್ಣಯ್ಯನವರ ಏಕಾಗ್ರತೆಗೆ ಇದೊಂದು ದೊಡ್ಡ ಉದಾಹರಣೆ.

ತಂದೆ ಸುಬ್ಬಣ್ಣನವರ ಸಂಗ್ರಹದಲ್ಲಿದ್ದ ಎಲ್ಲ ಗ್ರಂಥಗಳನ್ನೂ ಓದಿ ಮುಗಿಸಿದ್ದ ವೆಂಕಣ್ಣಯ್ಯನವರಿಗೆ ವಿಧವಿಧ ಭಾರತಗಳೂ, ರಾಮಾಯಣಗಳೂ ಬಾಯಿಪಾಠವಾಗಿ ಅವುಗಳ ತಿರುಳು ವೆಂಕಣ್ಣಯ್ಯನವರ ನಾಲಿಗೆಯ ಮೇಲೆ ನಲಿದಾಡುತ್ತಿದ್ದವು. ಸಂಜೆ ಇವರ ಮನೆಯಲ್ಲಿ ಸೇರುತ್ತಿದ್ದ ಎಲ್ಲರಿಗೂ, ರಾಮಾಯಣ, ಮಹಾಭಾರತಗಳ ವಾಚನ ಮಾಡಿ ಅರ್ಥಸಹಿತ ವಿವರಗಳನ್ನು ಹೇಳುತ್ತಿದ್ದರು. ಇಷ್ಟೊಂದು ಜ್ಞಾನದ ನಿಧಿಗಳಾದ ವೆಂಕಣ್ಣಯ್ಯನವರ ಓದು ವಿದ್ಯಾಭ್ಯಾಸವೆಲ್ಲ ಸಾಂಗವಾಗೇನೂ ಮುಗಿಯದೇ ಅನೇಕ ಕಷ್ಟಕಾರ್ಪಣ್ಯಗಳ ಮಧ್ಯೆಯೇ ಉನ್ನತ ಶ್ರೇಣಿಗೆ ಏರಿದ ವೆಂಕಣ್ಣಯ್ಯನವರು, ನಮ್ಮ ಮೈಸೂರು ವಿಶ್ವವಿದ್ಯಾಲಯದ ಮೊದಲ ಕನ್ನಡ ಪ್ರೊಫೆಸರರು.

ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ, ಪ್ರಬುದ್ಧ ಕರ್ನಾಟಕದ ನಿರ್ವಹಣೆ, ಅನೇಕಾನೇಕ ಕನ್ನಡ ಕೆಲಸಗಳ ನಡುವೆಯೂ, ತಮ್ಮ ದಾನ ಧರ್ಮಗಳನ್ನು ಧ್ಯೇಯಗಳನ್ನು ಬಿಡದೆ ಅನೇಕ ವಿದ್ಯಾರ್ಥಿಗಳಿಗೆ ವಾರಾನ್ನದ, ಪರೀಕ್ಷಾ ಶುಲ್ಕದ ದಾತೃಗಳಾಗಿ, ಕಷ್ಟವೆಂದು ಬಂದವರ ಕೈಹಿಡಿದವರಾಗಿ, ವಿದ್ಯಾರ್ಥಿಗಳ ಮೆಚ್ಚಿನ ಗುರುಗಳಾಗಿ, ಸಮಕಾಲೀನ ಕವಿಸ್ನೇಹಿತರ ಮೆಚ್ಚಿನ ಮಿತ್ರರಾಗಿ ಕಿರಿಯರಿಗೆ ಅಣ್ಣನಂತೆ ಹಿರಿಯರಿಗೆ ಮಗನಂತೆ ಬಾಳಿ ಬದುಕಿದ ವೆಂಕಣ್ಣಯ್ಯನವರ ವ್ಯಕ್ತಿತ್ವಕ್ಕೆ ಸರಿಸಾಟಿಯಾದುದು ಬಹುಶಃ ಇನ್ಯಾವುದೂ ಇರಲಾರದು ‘ಅನುಪಮ’ ಎಂಬುದಕ್ಕೆ ತಕ್ಕ ಉದಾಹರಣೆ ಶ್ರೀಮಾನ್ ವೆಂಕಣ್ಣಯ್ಯನವರು.

ಇವರ ಮನೆಯಲ್ಲಿ ಸದಾಕಾಲ ವಾರಾನ್ನದ ಹುಡುಗರು, ಹೋಗಿ ಬರುವವರು, ನೆಂಟರಿಷ್ಟರು ತುಂಬಿ ತುಳುಕುತ್ತಿರುವಾಗ ದಿನಸಿಯ ನಿರ್ವಹಣೆ ಕೂಡ ಕಷ್ಟವಾಗಿತ್ತು. ಇಂತಹ ಸಮಯದಲ್ಲಿ ದಿನಸಿಗಾಗಿ, ಕಷ್ಟಪಟ್ಟು, ಬ್ಯಾಂಕಿನಿಂದ ಮುನ್ನೂರು ರೂಪಾಯಿಗಳ ಲೋನ್ ಪಡೆದ ವೆಂಕಣ್ಣಯ್ಯನವರು, ಆ ಹಣವನ್ನು ಮನೆಗೆ ದೇಹೀ ಎಂದು ಬಂದ, ತನ್ನ ತಾಯಿಯ ಕರ್ಮಾಂತರಗಳನ್ನು ಮುಗಿಸಲು ಸಹಾಯ ಕೇಳಿದ, ಗುರುತು ಪರಿಚಯವಿಲ್ಲದ ಮನುಷ್ಯನೊಬ್ಬ, ಇನ್ನೂರೈವತ್ತು ಕೇಳಿದರೆ ಮುನ್ನೂರನ್ನೂ ಕೊಟ್ಟು ಕಳಿಸುವ ಅವರ ದೊಡ್ಡ ಗುಣ ಮನುಷ್ಯ ಮಾತ್ರರಾದವರಿಗೆ ಬರಲು ಸಾಧ್ಯವೇ?

ಇನ್ನೊಮ್ಮೆ ವೆಂಕಣ್ಣಯ್ಯನವರ ಮನೆಯ ಮಹಡಿಯಲ್ಲಿ ಗದುಗಿನ ಭಾರತದ ರಸವತ್ತಾದ ಭಾಗಗಳ ವಾಚನಗೋಷ್ಠಿ ನಡೆಯುತ್ತಿತ್ತು. ಕೆಳಗೆ ಅಡುಗೆ ಕೋಣೆಯಲ್ಲಿ ರಸಭರಿತವಾದ ಪಾಕ ತಯಾರಾಗುತ್ತಿದ್ದ ಮಧ್ಯೆಯೇ ಒಂದು ಚೀರಾಟ ಕೇಳಿತು. ನಂತರ ವೆಂಕಣ್ಣಯ್ಯನವರ ಪ್ರವೇಶದಿಂದ ಯಥಾವತ್ತಾಗಿ ಎಲ್ಲ ಮುಂದುವರಿಯಿತು.

ಮಹಾ ಮಹಾ ಕವಿಗಳು, ಸ್ನೇಹಿತರು, ವಿದ್ವನ್ಮಣಿಗಳೆಲ್ಲ ಸೇರಿದ್ದರು. ಕೊನೆಯಲ್ಲಿ ಭೋಜನ ಮುಗಿದ ನಂತರ, ʼಇಂದು ತುಪ್ಪ ಬಡಿಸಲು ಅಮ್ಮ ಏಕೆ ಬರಲಿಲ್ಲ?’ ಎಂದು ವೆಂಕಣ್ಣಯ್ಯನವರ ಆಪ್ತಮಿತ್ರರಾದ ರಾಜೀವಲೋಚನಂ ಕೇಳಿದರು. ಮನೆಯಲ್ಲಿ ಆಗತಾನೇ ತನ್ನ ಮಗು ತೀರಿಹೋದದ್ದು, ಅದನ್ನು ಶಾಮರಾಯರು ಮತ್ತು ವೆಂಕಣ್ಣಯ್ಯನವರ ಅಳಿಯಂದಿರು ಒಪ್ಪ ಮಾಡಿ ಬಂದದ್ದನ್ನು ಊಟದ ನಂತರ ವಿವರಿಸಿದ ವೆಂಕಣ್ಣಯ್ಯನ್ನವರ, ಸ್ಥಿಮಿತ, ಶಾಂತಭಾವಕ್ಕೆ, ಅವರ ಗೆಳೆಯ ‘ನೀನು ಮನುಷ್ಯನಲ್ಲ’ ಎಂದದ್ದನ್ನು ನಾವು ಹೇಗೆ ಅರ್ಥೈಸಿಕೊಳ್ಳೋಣ?

ಎ ಆರ್ ಕೃ, ಡಿವಿಜಿ, ವಿ ಸೀ, ಎ ಎನ್ ಎಮ್, ಮುಂತಾದ ಗಣ್ಯರ ಒಡನಾಟದಲ್ಲಿ ಎಲ್ಲರಿಗೂ ಮಾರ್ಗದರ್ಶಕರಾಗಿ ಯಾವ ಸ್ಥಾನಮಾನಕ್ಕೂ ಆಶಿಸದೆ, ಉನ್ನತ ಹುದ್ದೆಗೆ ಅರ್ಜಿ ಹಾಕಲು ಬೇಡಿಕೊಂಡರೂ ಅರ್ಜಿ ಸಲ್ಲಿಸದ ಮಹಾನ್ ಗುಣಸಂಪನ್ನರನ್ನು ನಾವು ಬೇರೆಲ್ಲಿ ಕಾಣಲು ಸಾಧ್ಯ?

ಇಂತಹ ನೂರು ಘಟನೆಗಳು ವೆಂಕಣ್ಣಯ್ಯನವರ ಬಾಳಿನಲ್ಲಿ ನಡೆದುಹೋಗಿವೆ. ಎಲ್ಲದಕ್ಕೂ ನಿರ್ಲಿಪ್ತತೆಯನ್ನು ಸಾಧಿಸಿದ್ದ ಅವರ ವ್ಯಕ್ತಿತ್ವ ಅನನ್ಯವಾದುದು. ಕುವೆಂಪುರವರು ಅವರ ಪಟ್ಟಶಿಷ್ಯರಾಗಿದ್ದು, ಕಾನೂರನ್ನು ಬರೆಯಲು ಕುವೆಂಪುರವರನ್ನು ಪ್ರೇರೇಪಿಸಿ ಬರೆಸಿದ ಕೀರ್ತಿ ವೆಂಕಣ್ಣಯ್ಯನವರದು.

ಯಾವ ಬೆಳೆವ ಮೊಳಕೆಗಳನ್ನು ಅಲ್ಲಿಯೇ ಚಿವುಟದೆ, ಅದಕ್ಕೆ ಗೊಬ್ಬರ ನೀರೆರೆದು ಪೋಷಿಸಿದ ದೊಡ್ಡದೊಂದು ತೋಟದ ಮಾಲಿ ಶ್ರೀ ವೆಂಕಣ್ಣಯ್ಯನವರು. ಅವರನ್ನು ಅತ್ಯಂತ ವಿನಮ್ರತೆಯಿಂದ ನೆನೆದು ಅವರ ಅಡಿದಾವರೆಗೆ ನಮಿಸಿ, ಅವರ ಅನುಪಮ ವ್ಯಕ್ತಿತ್ವವನ್ನು ನಮಗೆ ಕಟ್ಟಿಕೊಟ್ಟ ಶ್ರೀಯುತ ತ ಸು ಶಾಮರಾಯರಿಗೆ ನಮಿಸುತ್ತೇನೆ.

‍ಲೇಖಕರು Avadhi

6 December, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading