ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅಂತರಾಳ'ದಿಂದ ರಾಮಚಂದ್ರ ಹಡಪದ್

ಅಂತರಾಳದಿಂದ ರಾಮಚಂದ್ರ ಹಡಪದ್ –ನಿನ್ನ ರೂಪು ಎದೆಯ ಕಲಕಿ
ಬೇಲೂರು ರಘುನಂದನ್ 

ನಾಳೆ  ದೆಹಲಿಯಲ್ಲಿ ರಾಮಚಂದ್ರ ಹಡಪದ್ ಮತ್ತು ‘ಅಂತರಾಳ’ ತಂಡ ದೊಡ್ಡರಂಗೇಗೌಡರ ಸಂಗಡ ಜೀವ ಜೀವದ ಹಾಡುಗಳನ್ನು ಹೊತ್ತು ಅಭಿವ್ಯಕ್ತಿಸಲು ಹೊರಟಿದೆ. ಇಡೀ ಬಳಗಕ್ಕೆ ನನ್ನ ಹೃದಯ ತುಂಬಿದ ಅಭಿನಂದನೆಗಳನ್ನು ಸಲ್ಲಿಸುವೆ. ಈ ಬಗೆಯ ಕಾರ್ಯಕ್ರಮಗಳು ಕನ್ನಡಿಗರು ಎಲ್ಲೆಲ್ಲಿ ಇದ್ದಾರೋ ಅಲ್ಲೆಲ್ಲಾ ಜರುಗಲಿ ಎಂದು ಆಶಿಸುವೆ.

ಹಿಂದೂಸ್ಥಾನಿ ಗಾಯಕರಾದ ಸವಿತಾ ಅಮರೇಶ ನುಗಡೋಣಿಯವರು ‘ರವೀಂದ್ರರ ಸಾಹಿತ್ಯದ ಬಂಗಾಳಿ ಸಂಗೀತದ ತುಣುಕೊಂದನ್ನು ಹಾಡಿದ್ದೀನಿ ಕೇಳಿ’ ಎಂದು ತಾವು ಹಾಡಿದ ತುಣುಕೊಂದನ್ನು ಕಳಿಸಿದ್ದರು.
ಮತ್ತೆ ಮತ್ತೆ ಕೇಳಿದೆ. ಹಾಡಿನ ಸಾಹಿತ್ಯ ಅರ್ಥವಾಗಲಿಲ್ಲ. ಆದರೆ ಹಾಡು ಮತ್ತೆ ಮತ್ತೆ ಕೇಳುವಾಗ ಕಣ್ಣೀರು ಹನಿ ಹನಿಯಾಗಿ ಕೊನೆಗೆ ಬಿಕ್ಕಳಿಸಿ ಅಳುವಂತಾಗಿ ಮನಸು ಆರ್ದ್ರವಾಗಿಬಿಟ್ಟಿತು. ಹೀಗೆ ಇತ್ತೀಚಿಗೆ “ಅಂತರಾಳ” ಎನ್ನುವ ಯುವ ಸಮೂಹ  ಏರ್ಪಡಿಸಿದ್ದ ‘ನಿನ್ನ ರೂಪು ಎದೆಯ ಕಲಕಿ’ ಎನ್ನುವ ಹೆಸರಿನ ಕಾರ್ಯಕ್ರಮದಲ್ಲಿ ಯುವ ಪ್ರತಿಭಾವಂತ ಮಹತ್ವದ ಗಾಯಕ ರಾಮಚಂದ್ರ ಹಡಪದ್ ಹಾಡಿಗೆ ಮೇಲೆ ಹೇಳಿದ ಸ್ಥಿತಿಯನ್ನೇ ನನ್ನ ಮನಸು ತಲುಪಿತ್ತು. ಇದು ಯಾವ ವ್ಯಾಖ್ಯಾನಕ್ಕೂ ಸಿಕ್ಕದ ಸಂಗೀತದ ಶಕ್ತಿ.
‘ಅಂತರಾಳ’ ಸಂಗೀತಕ್ಕಾಗಿಯೇ ಹುಟ್ಟಿಕೊಂಡ ಗೆಳೆಯರ ಗುಂಪು. ಸಂಗೀತ ಪರಂಪರೆಯಲ್ಲಿನ ಹಳೆಯ ಹಾಡುಗಳು, ಭಾವಗೀತೆಗಳು, ಮಧುರ ಚಿತ್ರ ಗೀತೆಗಳನ್ನು ಸಹೃದಯರಿಗೆ ಮತ್ತೆ ಮತ್ತೆ ಕೇಳಿಸುವ ಪ್ರಾಮಾಣಿಕ ಜವಾಬ್ದಾರಿಯನ್ನು ಹೊತ್ತು ಹೊತ್ತಿರುವ ಹಣತೆ ಅಂತರಾಳ. ಇನ್ನು ದೀಪದಿಂದ ದೀಪವನ್ನು ಬೆಳಗುವುದು ಇದರ ಕಾಯಕ. ಅಬ್ಬರದ ಸಂಗೀತದ ಕಾರ್ಯಕ್ರಮಗಳ ನಡುವೆ ಸಾಹಿತ್ಯಕ್ಕೆ ಯಾವ ಪ್ರಾಮುಖ್ಯತೆಯನ್ನು ಕೊಡದೆ ನಡೆಯುತ್ತಿರುವ ಬಹುತೇಕ ಕಾರ್ಯಕ್ರಮಗಳಲ್ಲಿ ಅಂತರಾಳ ಸಂಗೀತ ಮತ್ತು ಸಾಹಿತ್ಯ ಎರಡರ ಸಾಂಗತ್ಯ ಅದಕ್ಕಿರುವ ಅವಿನಾಭಾವ ಸಂಬಂಧ, ಕವಿ, ಸಾಹಿತಿ ಎಲ್ಲರನ್ನೂ ಒಳಗೊಂಡು ಕೇಳುವ ಮತ್ತು ಅನುಭವಿಸಲು ಬೇಕಾದ ಮನಸ್ಥಿತಿಯನ್ನು ರೂಪಿಸುತ್ತ ಹೊಸ ಸಂಸ್ಕೃತಿಯನ್ನು ಕಟ್ಟಲು ಹೊರಟಿದೆ. ಸಂಗೀತವನ್ನು ಬಯಸುವ ಹೃದಯಕ್ಕೆ ಜೀವಂತಿಕೆ ದ್ವನಿಯನ್ನು ಕೊಡುವ ಮೂಲಕ ಕನ್ನಡದ ಹಾಡುಗಬ್ಬದ ಪರಂಪರೆಯಲ್ಲಿ ಹೊಸ ಕನಸು, ಹೊಸ ಭಾವ ಮೂಡಿಸಲು ಹೆಜ್ಜೆ ಇಟ್ಟಿದೆ ಎನ್ನುವುದಂತೂ ಖಂಡಿತ. ಈ ಬಗೆಯ ಭಾವ ಪ್ರಧಾನ ಸಂಗೀತ ಕಾರ್ಯಕ್ರಮಗಳಿಗೆ ಕಾಲವೂ ಕೂಡ ನಿರೀಕ್ಷಿಸಿತ್ತು.
ಇಂದು ಓದುವ ಪಠ್ಯಕ್ಕಿಂತ ಕೇಳುವ ಸಂಸ್ಕೃತಿ ಮತ್ತು ನೋಡುವ ಸಂಸ್ಕೃತಿಗೆ ನವೀನ ಆಯಾಮಗಳು ದೊರಕುತ್ತಿವೆ. ಕಾಲ ಕೇಳುವುದನ್ನು ಕೊಡುವುದೇ ಕಲಾಧರ್ಮ. ಈ ನಿಟ್ಟಿನಲ್ಲಿ ಅಂತರಾಳದ ಗೆಳೆಯರು ನಮಗೆ ಸದಭಿರುಚಿಯ ಸಂಗೀತವನ್ನು ಕೇಳಿಸುವ ಕಡೆಗೆ ಕೊಂಡೊಯ್ಯುತ್ತಿರುವುದು ನಿಜಕ್ಕೂ ಸಹೃದಯ ಲೋಕಕ್ಕೆ ಸಂತಸವನ್ನು ತಂದಿದೆ. ಇದನ್ನು ಸಾಕ್ಷೀಕರಿಸಿದ್ದು ರವಿಂದ್ರ ಕಲಾಕ್ಷೇತ್ರದಲ್ಲಿ ನಡೆದ ”ನಿನ್ನ ರೂಪು  ಎದೆಯ ಕಲಕಿ” ಎನ್ನುವ ಕಾರ್ಯಕ್ರಮ.
ಇಡೀ ಕಲಾಕ್ಷೇತ್ರ ಹಾಡಿನ ಕಾರಣಕ್ಕೆ ತುಂಬಿ ಹೋಗಿತ್ತು. ಅಲ್ಲಿ ಎಲ್ಲವೂ ಸಂಗೀತದಿಂದ ಆನಂದ ಮಯ. ಸಾಹಿತ್ಯದಿಂದ ಸಂತೋಷಮಯ. ತಾಳಮೇಳಗಳಿಂದ ದಕ್ಕಿದ್ದು, ಮನಸು ಮಮ್ಮಲ ಮಿಡಿದಿದ್ದದ್ದಕ್ಕೆ ಯಾವ ವಿವರಣೆಯೂ ಸಾಧ್ಯವಿಲ್ಲ. ಈ ಕಾರ್ಯಕ್ರಮದಲ್ಲಿ ರಾಮಚಂದ್ರ ಹಡಪದ್ ಅವರ ಗಾಯನ ಹಾಗೂ ಶ್ವೇತ ಪ್ರಭು ಅವರ ಸಹ ಗಾಯನ ನಿಜಕ್ಕೂ ಒಂದು ದಿವ್ಯ ಅನುಭೂತಿಯನ್ನೇ ಸೃಷ್ಟಿಸಿಬಿಟ್ಟಿತ್ತು.
ಇದೆಲ್ಲದಕ್ಕೂ ಕಳಸ ಪ್ರಾಯವೆಂಬಂತೆ ದೊಡ್ಡರಂಗೇಗೌಡರ ಕವಿತೆ ಹುಟ್ಟಿದ ಕವಿಸಮಯ, ಕಾರ್ಯಕ್ರಮವನ್ನು ಔಚಿತ್ಯ ಪೂರ್ಣವಾಗಿ ನಿರ್ವಹಿಸುತ್ತಿದ್ದ ನಿರೂಪಣೆ ಇವೆಲ್ಲವೂ ಹೊಸ ಲೋಕವೊಂದನ್ನೇ ತೋರುತ್ತಿತ್ತು.  ಗೌಡರಿಗೆ ಕವಿಯಾಗಿ ದಕ್ಕಿದ ಮನ್ನಣೆ ಚಿತ್ರ ಸಾಹಿತಿಯಾಗಿ ದಕ್ಕಿರಲಿಲ್ಲ. ಕನ್ನಡ ಚಿತ್ರರಂಗಕ್ಕೆ ಅವರು ಕೊಟ್ಟ ಹಾಡುಗಳು ಒಂದಕ್ಕಿಂತ ಒಂದು ಮೌಲಿಕವೂ ಮತ್ತು ಸೌಂದರ್ಯ ಪ್ರಜ್ಞೆಯಿಂದ ಕೂಡಿದವುಗಳಾಗಿವೆ.
ಆದರೆ ಚಿತ್ರ ಸಾಹಿತಿಯಾಗಿ ಅವರ ಸಮ್ಮುಖದಲ್ಲೇ ಆತ್ಮಸಂತೋಷಕ್ಕೆ ಜೀವ ತರುವ ಗಾಯಕನಲ್ಲಿ ಹಾಡಿಸುತ್ತಾ, ಹಾಡು ಹುಟ್ಟಿದ ರಸಮಯ ಘಳಿಗೆಗಳ ಬಗ್ಗೆ ಕವಿಯ ಬಳಿ  ಮಾತಾಡಿಸುತ್ತಾ, ಕಿಕ್ಕಿರಿದು ತುಂಬಿದ ಸಭಾಗೃಹದಲ್ಲಿ ಕಾರ್ಯಕ್ರಮ ನಡೆದದ್ದು ಅಂತರಾಳದ ಕನಸಿನಿಂದ, ಬದ್ಧತೆಯಿಂದ ಮತ್ತು ಕನ್ನಡ ಸಾಹಿತ್ಯ ಮತ್ತು ಸಂಗೀತದ ಮೇಲಿನ ಪ್ರೇಮದಿಂದ ಅಲ್ಲದೆ ಮತ್ತೇನು ಇಲ್ಲ. ಕಾರ್ಯಕ್ರಮ ನೋಡಿದ ಯಾವ ಕವಿಯಾದರೂ ತನ್ನ ಹಾಡುಗಳು ಹೀಗೆ ಒಮ್ಮೆಯಾದರು ಪ್ರಸ್ತುತಿಯಾಗಬೇಕು ಎಂದು ಅನಿಸುವಂತೆ ‘ನಿನ್ನ ರೂಪು ಎದೆಯ ಕಲಕಿ’ ಕಾರ್ಯಕ್ರಮವನ್ನು ಅಂತರಾಳ ರೂಪಿಸಿತ್ತು.
ಹೇಳುವ ಮಾತನ್ನು ಹೇಳದಿದ್ದರೆ ಅಪ್ರಮಾಣಿಕರಾಗುವುದಂತೂ ನಿಜ. ಮನದುಂಬಿ ಕಲೆಯನ್ನು ಅಭಿನಂದಿಸದಿದ್ದರೆ ಕಲಾವಿದನಿಗೆ ನಷ್ಟವೇನೂ ಇಲ್ಲ. ಹಾಗಾದರೆ ಅದು ಸಾಂಸ್ಕೃತಿಕ ಜವಾಬ್ದಾರಿಯಿಂದ ನುಣುಚಿಕೊಂಡ ಪಾಪಪ್ರಜ್ಞೆ.  ಹಾಗಾಗಿ ಅನ್ನಿಸಿದ್ದನ್ನು, ಅನುಭವಕ್ಕೆ ಬಂದಿದ್ದನ್ನು ಇಲ್ಲಿ ಅಕ್ಷರಗಳಾಗಿಸುತ್ತಿದ್ದೇನೆ. ಮುಕ್ತ ಮನಸಿನಿಂದ ಅಪ್ಪಟ ಪ್ರತಿಭೆಗಳನ್ನು ಕುರಿತು ಮಾತಾಡದೇ ಇದ್ದುದ್ದಕ್ಕೆ ಲೋಕ ಕಳೆದುಕೊಂಡಿದ್ದೆ ಹೆಚ್ಚು. ಅಭಿವ್ಯಕ್ತಿಗೆ ಸಹೃದಯರು ಬೇಕೇ ಬೇಕು. ಈಗ ಹೊಸ ಸಾಂಸ್ಕೃತಿಕ ತಲೆಮಾರು ರೂಪುಗೊಳ್ಳುತ್ತಿರುವ ಕಾಲ. ಈ ಕಾಲಕ್ಕೆ ಅರ್ಥ ಮತ್ತು ವ್ಯಾಪ್ತಿ ಬಹಳ ದೊಡ್ಡದಿದೆ. ತಲುಪುವ ಸಾಧ್ಯತೆಗಳೂ ಬಹಳಷ್ಟಿವೆ.
ತಲುಪಬೇಕಾದ ದಾರಿಯೂ ಕೂಡ ತುಂಬಾ ಮಹತ್ವದ್ದು. ಈ ನೆಲೆಯಲ್ಲಿ ರಾಮಚಂದ್ರ ಹಡಪದ್ ಎನ್ನುವ ನಮ್ಮ ತಲೆಮಾರಿನ ಗಾಯಕ ನಿಜಕ್ಕೂ ಕನ್ನಡದ ಸಂಗೀತ ಕ್ಷೇತ್ರದಲ್ಲಿ ನಿಜವಾಗಿ ಅನನ್ಯ ಪ್ರತಿಭೆ. ಈ ಗಾಯಕನ ಧ್ವನಿಗೆ ಭಾಷೆಯ ಹಂಗಿಲ್ಲ. ಇವರ ಸಂಗೀತದ ಭಾಷೆಗೆ ಭಾವದ ಹರಹು ವಿಸ್ತಾರವಾಗಿ ಹರಡಿಕೊಳ್ಳುವ ಸಾಮರ್ಥ್ಯವಿದೆ. ಹಾಡುಗಾರ, ಸಂಗೀತ ಮೇಳ ಮತ್ತು ಕೇಳುವ ಮತ್ತು ನೋಡುವ ಪ್ರೇಕ್ಷಕ ಸಮುದಾಯವನ್ನು ಒಟ್ಟಾಗಿ ಲೀನವಾಗಿಸುವ ಶಕ್ತಿ ಹಡಪದ್ ಅವರಿಗೆ ಇದೆ ಎನ್ನುವುದು ಹಡಪದ್ ಅವರ ಸಂಗೀತ ಕೇಳಿದವರಿಗೆ ಎಲ್ಲರಿಗೂ ಅನುಭವಕ್ಕೆ ಬಂದಿರುತ್ತದೆ. ಹಡಪದ್ ಅವರು ನಡೆಸಿ ಕೊಡುವ ಸುಮಧುರ ಸಂಗೀತದ ಸಂಜೆಯನ್ನು ಕೇಳದಿದ್ದರೆ ಕಳೆದುಕೊಳ್ಳುವುದೇ ಹೆಚ್ಚು ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ.
ಮುಗ್ಧತೆ ಮತ್ತು ಪ್ರಬುದ್ಧತೆಗಳೆರಡೂ ಸೇರಿದರೆ ಸೃಜನಶೀಲತೆ ಎಂಬುವ ಭೂಮಿ ಗುಣದ ಅನುಭವ ನಮಗೆ ದಕ್ಕುತ್ತಾ ಹೋಗುತ್ತದೆ. ಮಗುವಾಗಿದ್ದುಕೊಂಡು ಜಗತ್ತನ್ನು ವಿಸ್ಮಯದಿಂದ ನೋಡುತ್ತಾ, ಅದೇ ಜಗತ್ತನ್ನು ಪ್ರಶ್ನಿಸುತ್ತಾ ತನ್ನ ಅನಿಸಿಕೆಗಳಿಗೆ ಅಭಿವ್ಯಕ್ತಿಸುತ್ತಾ ಒಂದು ಅನನ್ಯ ಲೋಕವನ್ನೂ ನಮ್ಮ ಮುಂದೆ ತೆರೆದಿಡುವುದೇ ಒಂದು ವಿಸ್ಮಯ. ಕ್ರಿಯಾಶೀಲತೆ ಎಂದಿಗೂ ಪ್ರಯೋಗದ ಕಡೆಗೆ ಮುಖ ಮಾಡಿರುತ್ತದೆ. ಪ್ರಯೋಗಗಳು ಅಭಿವ್ಯಕ್ತಿಯ ದಾರಿಯಲ್ಲಿ ಬಹುಮುಖತೆಯ ಸತ್ವವನ್ನು ನಂಬಿರುತ್ತವೆ. ಈ ಪ್ರಯೋಗಶೀಲತೆ ಮತ್ತು ಕ್ರಿಯಾಶೀಲತೆಗಳ ನಡುವೆ ಪ್ರತಿಭೆ, ಕಲ್ಪನೆ ಮತ್ತು ತನ್ನ ಸುತ್ತಮುತ್ತಲಿನ ಜಗತ್ತು ಒಂದು ಕಲಾಕೃತಿಯನ್ನು ಕಟ್ಟಿಕೊಡುವುದಕ್ಕೆ ಸದಾ ಹಾತೊರೆಯುತ್ತಿರುತ್ತದೆ. ಕಾವ್ಯ, ನಾಟಕ, ನೃತ್ಯ, ಸಂಗೀತ, ಚಿತ್ರಕಲೆ ಇನ್ನಿತರ ಯಾವುದೇ ಕಲಾ ಮಾಧ್ಯಮ ಸಾಗುವುದು ಇದೇ ದಾರಿಯಲ್ಲಿ.
ಈ ದಾರಿಯಲ್ಲಿ ಗೆಳೆಯ ರಾಮಚಂದ್ರ ಹಡಪದ್ ಪ್ರಯೋಗ ಶೀಲ ಸಂಗೀತಗಾರ. ಅಭದ್ರತೆ ಮತ್ತು ಸೃಜನಶೀಲತೆ ಪರಸ್ಪರ ಸಂಗಾತಿಗಳು. ಕಾಲ ಮತ್ತು ಅನುಭವ ಇವೆರಡೂ ಸೇರಿ ಪ್ರತಿಭೆಗೆ ವೇದಿಕೆಯಾದಾಗ ಕಲೆ ನಮಗೆ ಸತ್ಯವೆನ್ನುವ ಆನಂದವನ್ನು ಕೊಟ್ಟು ನಮ್ಮನ್ನು ನಿರುಮ್ಮಳವಾಗಿಸುತ್ತದೆ. ಹೀಗೆ ಸಾಗಿದ ಬದುಕಿನ ದಾರಿಯಲ್ಲಿ ಗಾಯಕ ಹಡಪದ್ ಅವರದ್ದು ಅಭದ್ರತೆ, ಸಂಕಷ್ಟ ಮತ್ತು ನೋವುಗಳ ನಡುವೆ ಅರಳಿದ ಅಪ್ಪಟ ಸೃಜನಶೀಲ ಮನಸು. ಈ ಮನಸಿಗೆ ಹಾಡಿನಲ್ಲಿ ಆತಂತಿಕ ಸೌಂದರ್ಯವನ್ನು ಅನುಭವಿಸುವುದು ಮತ್ತು ತನ್ನ ಅನುಭವವನ್ನು ಸಂಗೀತದ ಮೂಲಕ ಇತರರಿಗೆ ಉಣಬಡಿಸುವುದು ಮಾತ್ರ ಗೊತ್ತು. ಈ ಮಾತುಗಳೆಲ್ಲ ಅತಿಶಯೊಕ್ತಿ ಎನಿಸಬಹುದು ಆದರೆ ಬೆಳಕನ್ನು ಹಿಡಿದಿಡಲು ಆಗುವುದಿಲ್ಲ. ಹಡಪದ್ ಒಬ್ಬ ಮಾಂತ್ರಿಕ ದ್ವನಿ ಉಳ್ಳ ಹಾಗೂ ಸ್ವರ ಜ್ಞಾನ ಉಳ್ಳ ಪ್ರತಿಭಾವಂತ ಗಾಯಕ. ಗಾಯಕ ಹಡಪದ್ ಹಿಡಿದಿಡಲು ಆಗದ ಸಂಗೀತದ ಬೆಳಕು.
ಹಡಪದ್ ಉತ್ತರಕರ್ನಾಟಕದವರು. ಬಾಲ್ಯದಲ್ಲಿ ಅಣ್ಣ ರೇಡಿಯೋದಲ್ಲಿ ‘ಗುಟ್ಟೊಂದ ಹೇಳುವೆ ಪುಟಾಣಿ ಮಕ್ಕಳೇ’ ಎನ್ನುವ ಸಿನೆಮಾ ಹಾಡನ್ನು ಕೇಳಿಸುತ್ತಿದ್ದಾಗ ಹಡಪದ್ ಅವರಿಗೆ ನಾದದ ಬೀಜ ಮೊಳೆಯಲು ಆರಂಭವಾಯಿತು. ತಾಯಿ ಅಣ್ಣ ಹಾಗೂ ಹಡಪದ್ ಮನೆ ಮನೆಗೆ ವರ್ತನೆಗೆ ಹಾಲು ಹಾಕುತ್ತಾ ಬದುಕು ಕಟ್ಟಿಕೊಂಡವರು. ಹೀಗೆ ಹಾಲು ಹಾಕುವ ಮನೆಯೊಂದರಲ್ಲಿ ಸಂಗೀತದ ಗುರು ಎಂ. ಆರ್. ದುರ್ಗೇಶ್ ಅವರು ಮಕ್ಕಳಿಗೆ ಸಂಗೀತ ಪಾಠ ಹೇಳುವುದನ್ನು ಕೇಳಿಸಿಕೊಂಡು ಅವರ ಸಂಸರ್ಗದಿಂದ ಶಿಷ್ಯತ್ವ ದೊರಕಿ ಮೊದಲ ಹಿಂದೂಸ್ಥಾನಿ ಸಂಗೀತ ಪಾಠಗಳು ಶುರುವಾಯಿತು. ಸಿಕ್ಕ ಸಿಕ್ಕ ಅವಕಕಾಶಗಳಲ್ಲಿ ಬಾಲ ಪ್ರತಿಭೆಯಾಗಿದ್ದಾಗಿಂದಲೂ ತನ್ನ ಆಸಕ್ತಿಯನ್ನು ಇಮ್ಮಡಿಗೊಳಿಸಿಕೊಳ್ಳುತ್ತಾ ಬೆಳದರು ಹಡಪದ್.
ಪಿ.ಯು.ಸಿ ನಂತರ ಇಂಜಿನಿಯರಿಂಗ್ ಪದವಿ ಸೇರಿಕೊಂಡರೂ ಸಂಗೀತ ಇವರನ್ನು ಅಲ್ಲಿ ಇರಗೊಡಲಿಲ್ಲ. ನಂತರ ಸಂಗೀತವೇ ತನ್ನ ಬದುಕಿನ ಕಾರ್ಯಕ್ಷೇತ್ರ ಎಂದು ನಂಬಿ ಬೆಂಗಳೂರಿಗೆ ಬಂದರು. ಬದುಕಿಗಾಗಿ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡಿದರೂ ಮತ್ತೆ ಹಡಪದ್ ಸಂಗೀತದ ಮೂಲಕ ಕನ್ನಡ ರಂಗಭೂಮಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲಿ ಹಡಪದ್ ಅವರ ಪ್ರತಿಭೆಗೆ ದಕ್ಕಿದ್ದು ಮಹಾ ಆವರಣ. ಏಕಲವ್ಯ, ರೂಪಾಂತರದ ರಾಮಧ್ಯಾನ ಚರಿತೆ, ಅನಭಿಜ್ಞ ಶಾಕುಂತಲ ನಾಟಕದ ಹಾಡುಗಳನ್ನು ಕನ್ನಡ ರಂಗಭೂಮಿ ಮರೆಯಲು ಸಾಧ್ಯವಿಲ್ಲ. ಚಲನಚಿತ್ರ ಕ್ಷೇತ್ರದಲ್ಲೂ ಮಹತ್ವಾಕಾಂಕ್ಷಿಯಾದ ಕನಸುಗಳನ್ನು ಇಟ್ಟುಕೊಂಡು ಬದ್ಧತೆಯಿಂದ ಕೆಲಸ ಮಾಡುತ್ತಿರುವ ಸಂಗೀತಗಾರ ರಾಮಚಂದ್ರ ಹಡಪದ್ ಅವರ ಕಣ್ಣುಗಳಲ್ಲಿ ಬಹಳಷ್ಟು ಗುರಿಗಳಿವೆ, ಮನಸಿನಲ್ಲಿ ಬತ್ತದ ಉತ್ಸಾಹವಿದೆ. ಇದಿಷ್ಟೂ ಹಡಪದ್ ಎನ್ನುವ ಸಂಗೀತಗಾರನ ಇತಿವೃತ್ತ. ಬದುಕು ಹದವಾಗುವುದೆಂದರೆ ಹೀಗೆ ಅಲ್ಲವೇ? ಅನುಭವದ ಎಲ್ಲ ದಾರಿಗಳಲ್ಲೂ ಸಮಾಧಾನದ ಮತ್ತು ಸಾಂತ್ವನದ ಹೂವುಗಳು ಎಂದಾದರೂ ದೊರಕುತ್ತವೆ ಎಂಬುದು ಸತ್ಯ. ಯಾಕೆಂದರೆ ಕಷ್ಟಗಳ ನಡುವೆ ನೆಮ್ಮದಿ ತನ್ನ ದಾರಿಯನ್ನು ಹುಡುಕಿಕೊಳ್ಳುತ್ತದೆ. ಹಡಪದ್ ಅವರ ಬದುಕಿನ ಯಾನ ಕೂಡ ತನ್ನ ಆಸಕ್ತಿಗೆ ಸಾಂತ್ವನ ಮತ್ತು ಸಂತಸವನ್ನು ಹುಡುಕಿಕೊಂಡ ಮತ್ತು ಹುಡುಕಿಕೊಳ್ಳುತ್ತಿರುವ ಯಶೋಗಾಥೆ ಎಂದರೆ ತಪ್ಪಿಲ್ಲ.
ನಾದ ಯಾಕೆ ಹೊಮ್ಮುತ್ತದ ? ಹಾಡು ಯಾಕೆ ಅಭಿವ್ಯಕ್ತಿಗೊಳ್ಳುತ್ತದೆ ? ಎಂಬ ಪ್ರೆಶ್ನೆಗಳಿಗೆ ಸುಲಭದ ಉತ್ತರಗಳಿಲ್ಲ. ಸ್ವರ ರಾಗ ಶ್ರುತಿಗಳು ಮಿಡಿಯುವುದು ನಮ್ಮನ್ನು ಅಂತರಂಗವನ್ನು ಶುದ್ಧಗೊಳಿಸಲು ಮತ್ತು  ಹೆಚ್ಚು ಅಂತಃಕರಣಿಗಳನ್ನಾಗಿ ಮಾಡಲು. ಮನಸ್ಸು ಮಿಡಿದಾಗ ಭಾವ ಲಹರಿಯಾಗುತ್ತದೆ. ಮನಸು ಬಣ್ಣವಾಗುತ್ತದೆ, ಹಾಡಾಗುತ್ತದೆ. ರಾಮಚಂದ್ರ ಹಡಪದ್ ಮತ್ತು ಸವಿತಾ ಅವರ ಹಾಡುಗಳನ್ನು ಕೇಳಿ ಹೀಗೆ ನನ್ನ ಭಾವ ಅಕ್ಷರಗಳಾಗಿ ಬಿಟ್ಟವು. ಇನ್ನು ಅಂತರಾಳದ ಪಾಲೂ ಕೂಡ ಇಲ್ಲಿ ಉಲ್ಲೇಕಾರ್ಹ.
ನನ್ನ ಹಾಡು
ಹಾಡು ಕೇಳುವಾಗ  ಬಳಿಗೆ ಬರುವ ಬಾಳು
ಮಾತುಗಳು ಸೋತಾಗ  ಮನ ಮಿಡಿದ ಹಾಡು
 
ಕಣ್ಣ ನೀರಿನ ಧರ್ಮ ಭಾವ ಸಂಗೀತ
ನೋವಿನ ಕಥನಕೆ ಸಾಂತ್ವನದ ರಾಗ
 
ಅಮಲಿಗೆ ಸ್ವರ ಕುಡಿದಾಗ ನಶೆಯು
ಭಕುತಿ ತಲ್ಲೀನತೆಗೆ ತನ್ಮತೆಯ ಪರಿಯು
 
ಧಮನಿಗಳು ಹಾಡುವ ತನಕ ಕೇಳು
ಜೀವ ತಣಿಯುವ ತನಕ ಹಾಡು ಹಾಡು
 
ಲಿಪಿಯು ಭಾಷೆಯ ಭಾವ ಚಿತ್ರ
ಮೇಳದ ತಾಳಕ್ಕೆ ಸ್ವರ ಸುಪಾತ್ರ
 
ಭಂಗ ತರುವ ಹಂಗು ಕಳಚಿದ ಅರ್ಥ
ಹಾಡಿಲ್ಲದ ಬಾಳು ಪೂರ್ಣ ವ್ಯರ್ಥ
 
ಬಯಸಿ ಗುನುಗುವ ಹಾಡಿನ ಹಿಂದೆ
ಯಾರಿಗೂ ಗೊತ್ತಿರದ ಬಾಳ ಕಥನ
 
ಹಾಡು ಹಾಡು ಮೈ ದುಂಬಿ ಹಾಡು
ಮನವೆಲ್ಲಾ ಹೂವಾದ ಜೀವದ ಹಾಡು

‍ಲೇಖಕರು avadhi

18 November, 2017

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. Savitha Sharath

    ಬಹಳ ಸೊಗಸಾಗಿ ಬರೆದಿದ್ದೀರಿ ಸಾರ್.. ಅಭಿನಂದನೆಗಳು.

  2. Swarna

    It was very nice. Keep it up & best of luck to ur future.

  3. Ramachandra

    Thank you Avadhi and thank you Belur raghinandan sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading