ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅಂತರಾತ್ಮನೂ ಅಂತರಾಳವೂ…' – ರೇಣುಕಾ ನಿಡಗುಂದಿ ಬರೀತಾರೆ

ರೇಣುಕಾ ನಿಡಗುಂದಿ

ದೆಹಲಿಯ ಬಿರು ಬಿಸಿಲು ಇಷ್ಟವಾಗುವುದು ಅದನ್ನು ಗಜಲ್ ನಂತೆ ಸ್ವೀಕರಿಸಿದಾಗ ಮಾತ್ರ. ಉತ್ತರದ ಬಿಸಿಲಿನ ಪ್ರಕೋಪವನ್ನು ಸಹಿಸದೇ ಬದುಕಿಲ್ಲವೆಂತಾದರೆ ಬಿಸಿಲು ಬಿಟ್ಟು ಗುಲ್ ಮೊಹರಿನ ಕೆಂಪನ್ನೂ, ಅಮಲ್ತಾಸ್ ಹೂಗೊಂಚಲ ಸೊಬಗನ್ನೂ ಬೆರೆಸಿಕೊಂಡು ತಣ್ಣನೆಯ ಸುಳಿಗಾಳಿಗೆ ಎದೆಯೊಡ್ಡಬೇಕಾಗುತ್ತದೆ. ಈಗಂತೂ ಮುಂಗಾರು ಮಳೆ, ಆಷಾಡದ ಮಳೆ, ಯಾವ್ಯಾವೋ ನಕ್ಷತ್ರಗಳ ಮಳೆ ಸುರಿದು, ಇಳೆಯ ಒಡಲಾಗ್ನಿಯೆಲ್ಲವೂ ದಹಿಸಿ ಮೇಲೆದ್ದು ಬೇಯುತ್ತಿರುವಂತೆ
ಆರ್ದ್ರತೆ ಹೆಚ್ಚಿದೆ. ಸೆಕೆ, ಬೆವರಿಳಿಯುವ ಅಸಹನೆಯ ಮೋಡವೆಲ್ಲ ಕಟ್ಟಿಕೊಳ್ಳುವ ಅನಿವಾರ್ಯತೆ ಉಸಿರುಗಟ್ಟಿದೆ. ಮನಸ್ಸಿನ ನೆಮ್ಮೆದಿ ಕದಡಿದ, ನೋವು ಹಿಂಡಿದ ನಮ್ಮ ಸುತ್ತಲೇ ಕುಣಿಯುತ್ತಿರುವ ಏನೆಲ್ಲ ಪಾತ್ರಗಳನ್ನು, ನಾನಾ ವೇಷಗಳ ವಿಶೇಷಗಳ ಆಗಾಧತೆಯನ್ನು ಅರಗಿಸಿಕೊಳ್ಳುತ್ತಿರುವಾಗಲೇ ಈ ಮೋಡ, ಈ ಮಳೆಯ ಜೀವ ನದಿ ಮತ್ತೆ ತುಂಬಿ ಹರಿಯತೊಡಗುತ್ತದೆ. ರಾಹತ್ ಫತೇಹ್ ಅಲಿ ಖಾನ್ ನ ’ತೇರೆ ಬಿನಾ’ ಹಾಡು ರಾತ್ರಿಯ ನೀರವತೆಯ ಎದೆಬಿರಿದು ಒಳಗನ್ನು ಬೆರೆತು ಹನಿಯತೊಡಗುತ್ತದೆ. ಆ ಮನದ ಅಂಚಿನಿಂದ ಈ ಮನಕೆ ಹರಿವ, ಇರಿಯುವ, ಮೀಟುವ ರಸ ನಿಮಿಷಗಳೆಲ್ಲ ಗುರುಪೂರ್ಣಿಮೆಯ ಹಾಲು ಬೆಳದಿಂಗಳ ಬಟ್ಟಲಲ್ಲಿ ಸೂಸುತ್ತಿತ್ತು. ಸುಮ್ಮನೆ ಅವರು ನಮ್ಮ ಆಪ್ತರು ಇವರು ನಮ್ಮ ಆಪ್ತರು ಎಂಬ ಎಣಿಕೆಯಲ್ಲಿ ಮನದ ಮೂಲೆಯನ್ನೆಲ್ಲ ತಡಕಾಡುತ್ತ ನಂಬಿಗೆಗೆ ಆಸರೆಯಾಗದ ಮಾತುಗಳನ್ನೆಲ್ಲ ನಮ್ಮ ಚಿರಾಸ್ತಿಯೆಂದು ನಂಬುತ್ತ ವಂಚಿಸಿಕೊಳ್ಳುತ್ತಿದ್ದುದೇ ಆಯಿತು. ಹುಸಿ ನಂಬಿಗೆಗಳಿಂದ ನಮ್ಮನ್ನು ನಾವೇ ವಂಚಿಸಿಕೊಳ್ಳುವುದಿದೆಯಲ್ಲ ಅದಕ್ಕಿಂತ ಮೂರ್ಖತನ ಬೇರೊಂದಿಲ್ಲ.
 
ನಮ್ಮವರಲ್ಲದ , ನಾವು ಕನಸು ಮನಸಿನಲ್ಲೂ ಯೋಚಿಸಿದ, ತೋರಿಕೆಗೂ ಒಂದು ಮುಗುಳ್ನಗೆಯನ್ನೋ, ಸ್ನೇಹಹಸ್ತವನ್ನೋ ಬಯಸಿರದ ಸಹೃದಯಿಗಳು ಹಾತೊರೆದು ಸಂತೈಸಿದಾಗ ಕಣ್ಣು ಹನಿಗೂಡಿದ್ದವು. ಬಿಕ್ಕಳಿಕೆ ಬಿನ್ನಾಣ ತೊರೆದು ನಿಂತಿತ್ತು. ಕಹಿ ಅನುಭವಗಳು ಮಾಸುವುದಿಲ್ಲ ಹಾಗಂತ ಜೀವನ ಅಲ್ಲೆ ನಿಂತ ನೀರಾಗಬಾರದು, ಅದು ನಿರಂತರ ಸೆಲೆಯಾಗಬೇಕು ಎಂದೆಲ್ಲ ನನ್ನ ಟೀಚರ್ ಸ್ನೇಹಿತೆ ಗಂಟೆಗಟ್ಟಲೆ ಚೂರು ಬೇಸರಿಸದೇ ಮಾತಾಡುವಾಗೆಲ್ಲ ಎದುರಿನ ಪಾರ್ಕಿನಲ್ಲಿ ಹಾರಾಡುತ್ತಿದ್ದ ಹಳದಿ ಚಿಟ್ಟೆಗಳು ಚೆಂದ ಕಂಡಿದ್ದವು. ಮೊದಲು ಅಂದಗೇಡಿಯಾಗಿ ಕರಿ ಹುಳುವಾಗಿ ಹರಿದಾಡಿದ, ಯಾರಿಗೂ ಬೇಡದ ಜೀವವೀಗ ಅಂದದ ಚಿಟ್ಟೆಯಾಗಿ ಹಾರಾಡುತ್ತಿತ್ತು. ಹೊಸ ಜೇವ ಪಲ್ಲವಿಸಿದ ಸಂಭ್ರಮದಲ್ಲಿ ಚಿಕ್ಕ ಚಿಕ್ಕ ಪಕ್ಕಗಳನ್ನು ಹಾರಿಸಿ ಚಿಮ್ಮಿಸಿ ಪುಟಿ ಪುಟಿದು ಹಾರಾಡುತ್ತಿತ್ತು. ಹಳದಿ ಬಿಸಿಲಿನ ಅನನ್ಯತೆಯಲ್ಲಿ ಹಳದಿ ಕಪ್ಪು ಚುಕ್ಕೆಯ ಪಾತರಗಿತ್ತಿ ಚಿನ್ನಾಟವಾಡುತ್ತಿತ್ತು. ನನ್ನೊಳಗನ್ನೆಲ್ಲ ಮಥಿಸುತ್ತ. ಕೂಡಿ ಕಳೆದು ಭಾಗಿಸಿ ತಾಳೆ ನೋಡುವ ಹೊತ್ತಿನಲ್ಲಿ ನನ್ನಾತ್ಮವೂ ಗತ್ತಿನಲ್ಲಿ ನನ್ನೆದುರು ಕೂತಿತ್ತು. ಹೀಗೇ ಮೌನದೊಂದಿಗೆ ಮಾತಿಗೆ !!
ಒಂದು ದಿನದ ಮೌನವೂ ಸೆಕೆಯ ಆರ್ದ್ರತೆಯಂತೆ ಮನಸಿಗೆ ಕಸಿವಿಸಿಯಾಗತೊಡಗಿದಾಗ ಅದೆಲ್ಲ ಅವನಿಗೆ ಆರೋಪಿಸತೊಡದ್ದಳು. ಬದುಕು ಒಂಥರಾ ಫೇಸಬುಕ್ ಚೌಕಟ್ಟಿನಲ್ಲಿ ಸಿಕ್ಕಿಕೊಂಡಂತಾಗಿದೆ. ಆ ಕೊಂಡಿ ತೆಗೆದು ಹೊರಬೀಳಬೇಕು, ಸ್ವಚ್ಚಂದದ ಗಾಳಿಯನ್ನು ಆಸ್ವಾದಿಸಬೇಕು ಎಂದು ಗಟ್ಟಿಗೊಂಡ ತೀರ್ಮಾನವೆಲ್ಲ ಬೆಳಕು ಹರಿದಂತೆ ಮೆಲ್ಲಗೇ ಕರಗತೊಡಗುತ್ತದೆ. ಮೊನ್ನೆ ಸ್ನೇಹಿತನೊಬ್ಬ ಇಂಥದ್ದೇ ಕತೆ ಹೇಳುತ್ತಿದ್ದ. ಆಕೆ ದೊಡ್ದ ಐಎಸ್ ಅಧಿಕಾರಿಣಿಯಂತೆ. ಆಕೆ ಡೈವೋರ್ಸಿ. ದೊಡ್ಡ ಮಗನೂ ಇದ್ದಾನೆ. ಈಗ ಆನ್ ಲೈನ್ ಒಬ್ಬ ವಿದೇಶಿಯನೊಂದಿಗೆ ಮದುವೆಮಾಡಿಕೊಂಡಿದ್ದಾಳಂತೆ. ಅವಳಿಲ್ಲಿ ಅವನಲ್ಲಿ. ವರುಷಕ್ಕೋ ಎರಡು ವರ್ಷಕ್ಕೋ ಒಮ್ಮೆ ಸೇರುತ್ತಾರಂತೆ. ಅವನೂ ಬರುತ್ತಾನೆ, ಇಲ್ಲಾ ಇವಳನ್ನೇ ಕರೆಸಿಕೊಳ್ಳುತ್ತಾನಂತೆ. ಆನ್ ಲೈನ್ ಮದುವೆ !! ನಿಜಾನಾ? ಅದು ಹೇಗೆ ಸಾಧ್ಯ ಅದನ್ನ ಮದುವೆ ಅಂತಾ ಒಪ್ಪಿಕೊಳ್ಳೊದು ?
ತನ್ನ ನೂರಾರು ಪ್ರಶ್ನೆಗಳಿಗೆ ಅವನು ’ನಿನ್ನ ತಲೆ’ ಅರ್ಥವಾಗೋದಿಲ್ಲ ಬಿಡು ಎಂದುಬಿಟ್ಟ. ಮುಂದೆ ವಿವರಿಸಲೇ ಇಲ್ಲ. ಅದನ್ನೆ ದಿನನಿತ್ಯ ಮೆಲುಕುಹಾಕುತ್ತ. ದಿನನಿತ್ಯದ ಬದುಕನ್ನು ಆನ್ ಲೈನ್ ಚೌಕಟ್ಟಿನಲ್ಲಿ ಇಟ್ಟು ತೂಗುತ್ತ ಅಚ್ಚರಿಯಲ್ಲಿದ್ದವಳಿಗೆ ಅವನೂ ಹೀಗೇ ಹೇಳಿದ ನೆನಪು. ನಾನು ನಿಂಜೊತೆನೇ ಇದ್ದೀನಲ್ಲ…ಒಬ್ಬರಿಗೊಬ್ಬರು ಮಾತಾಡ್ತೀವಿ, ಸಂತೈಸ್ತೀವಿ..ಹೀಗೆ ಇದ್ದುಬಿಡೋಣ ಕಣೆ’ ಎಂದವನ ಮಾತುಗಳೆಲ್ಲ ಬೋಗಸ್ ಅನಿಸಿದ್ದು ಸುಳ್ಳಲ್ಲ. ಆದರೆ ಅವನಿಲ್ಲದ ಕ್ಷಣವೆಲ್ಲ ಮೌನದ ಕಂಬಳಿ ಹುಳು. ಆದರೆ ನಿಜದ ಸಂಬಂಧಗಳು ಹಳಸಲಾಗಿ, ವೇಷ ಕಳಚಿ ನಿಂತ ಭೂಮಿಕೆಯಲ್ಲಿ ಆಸರೆಯ ಬೆಳಕು ನಿಸ್ತೇಜವಾಗತೊಡಗಿದಾಗ ಯಾವುದು ಮಿಥ್ ? ಗೊಂದಲವಾಗುತ್ತಿತ್ತು. ಹೋಗಲಿ ಬಿಡು ಹೀಗೆ ಕಿಟಕಿಯಲ್ಲಿ ಪಿಸುಗುಡುತ್ತ, ಚಿನಕುರುಳಿಯಂತೆ ನಲಿಯುತ್ತ ಸಮಯ ಸಿಕ್ಕಷ್ಟು ಒಬ್ಬರಿಗೊಬ್ಬರು ಕೊಟ್ಟರೆ ಸಾಕಲ್ಲ. ಹೌದೆನೋ ! ನಿಜವಾಗಿಯೂ ಇಂದಿನ ಧಾವಂತದ ಯುಗದಲ್ಲಿ ಯಾರಿಗೂ ಎನನ್ನೂ ನೀಡುವ, ಅಪೇಕ್ಷಿಸುವ ಕಾಲಮಾನವನ್ನು ಮೀರಿ ಬೆಳೆದುಬಿಟ್ಟಿದ್ದೇವೆ. ಇದ್ದರೂ ಇದ್ದೀತು ಎನಿಸಿ ಸುಮ್ಮನಾಗುಳಿಯುವ ಸರದಿ ತನ್ನದು.
ಹೀಗೆ ಏಕಾಂಗಿತನದ ಕಿಟಕಿ ತೆರೆದು ಮತ್ತೊಮ್ಮೆ ಇಣುಕಿ ಇಣುಕಿ ಪುಳಕದ ಕ್ಷಣವನ್ನೇ ಅರಸುವುದು ಈಗೊಂದು ನಿತ್ಯದ ಕಾಯಕ. ಒಂದು ಸುದೀರ್ಘ ಅಂತರಾಳದ ಬಳಿಕ ಮತ್ತೆ ಮನಸಿನ ಚಕ್ರ ತನ್ನ ಗತಿಗೆ ಮರಳುವುದು , ಗತಿಸಿದ ಕಾಲದ ಮರುಕಳಿಕೆಯನ್ನು ಅಪೇಕ್ಷಿಸುವುದು ಹಾಸ್ಯಾಸ್ಪದ. ಆದರೆ ಸ್ಪರ್ಶವೇ ಇಲ್ಲದ ಪುಟಗಳಲಿ ಭಾವಗಳು ಚೆಲ್ಲಾಡುವಾಗ ಒಂದೊಂದನ್ನೇ ಹೆಕ್ಕಿ ಹೆಕ್ಕಿ ಪೋಣಿಸಿ ತಾನು ಪದ್ಯ ಕಟ್ಟುವುದೂ ….ಪದಗಳ ಸಾಲು ಹಿಡಿದು ಅದೇ ಕಾವ್ಯದ ಜಾಡಿನಲ್ಲಿ ಸುತ್ತುವುದೂ ಇಬ್ಬರಿಗೂ ಆಪ್ಯಾಯವೇ. ಅದು ಒಬ್ಬರನ್ನೊಬ್ಬರು ಒಬ್ಬರಿಗಾಗಿ ಕೊಟ್ಟುಕೊಂಡ ಕ್ಷಣಗಳು. ಯಾವ ಒಪ್ಪಂದವೂ ಇಲ್ಲದ ಒಡಂಬಡಿಕೆ. ಮನಸಿನ ಅಕ್ಷರಗಳೇ ಸಾಕ್ಷಿ. ಒಂದು ಕವನ ಸಂಕಲನ ತರಬೇಕು ಹೀಗೆ ಅಂತಾ ಮನಸಿಗೆ ಹಾರಿ ಬಂದ ಚಿಟ್ಟೆ ಮಾತು ಆಲಿಸಿದ್ದೆ. ಹಾಗೊಂದು ಕವನ ಸಂಕನ ನಿಜಕ್ಕೂ ಬರಲಿದೆಯಂತೆ….ದಿನಪತ್ರಿಕೆಯಲ್ಲಿ ಓದಿದ್ದು. ಹಾಗೆ ಕಿಟಕಿ ತೆರೆದು ಹೊರಗಿನ ಹಳದಿ ಬಿಸಿಲೂ ಹಳದಿ ಚಿಟ್ಟೆಗಳು ಮನೆಯೊಳಗಾಡುವ ಮುದವನ್ನು ಹಿಡಿದಿರಲಾರದೇ ಮತ್ತೊಮ್ಮೆ ಕಣ್ಣಾಡಿಸಿದೆ. ಅವನು ಅವಳಿಗೆ, ಅವಳು ಅವನಿಗೆ ಬರೆದುಕೊಂಡ ಪಾರಿಜಾತಗಳು ಪದ್ಯಗಳು ಅದೇ ಪುಟದಲ್ಲಿ ಅರಳಿದ್ದವು….ಕೋಣೆಯ ತುಂಬ ಪಾರಿಜಾತದ ಕಂಪು…..! ಮನದೊಳಗಿನ ನಾದದಲಿ……ಅಂತರತಮ ನೀ ಗುರು….ಆತ್ಮತಮೋಹಾರಿ….’ ಮತ್ತೆ ಮತ್ತೆ ದ್ವನಿಸುತ್ತಿತ್ತು.!
 

‍ಲೇಖಕರು avadhi

3 August, 2013

5 Comments

  1. D.Ravivarma

    ಹಾಗೆ ಕಿಟಕಿ ತೆರೆದು ಹೊರಗಿನ ಹಳದಿ ಬಿಸಿಲೂ ಹಳದಿ ಚಿಟ್ಟೆಗಳು ಮನೆಯೊಳಗಾಡುವ ಮುದವನ್ನು ಹಿಡಿದಿರಲಾರದೇ ಮತ್ತೊಮ್ಮೆ ಕಣ್ಣಾಡಿಸಿದೆ. ಅವನು ಅವಳಿಗೆ, ಅವಳು ಅವನಿಗೆ ಬರೆದುಕೊಂಡ ಪಾರಿಜಾತಗಳು ಪದ್ಯಗಳು ಅದೇ ಪುಟದಲ್ಲಿ ಅರಳಿದ್ದವು….ಕೋಣೆಯ ತುಂಬ ಪಾರಿಜಾತದ ಕಂಪು…..! ಮನದೊಳಗಿನ ನಾದದಲಿ……ಅಂತರತಮ ನೀ ಗುರು….ಆತ್ಮತಮೋಹಾರಿ….’ ಮತ್ತೆ ಮತ್ತೆ ದ್ವನಿಸುತ್ತಿತ್ತು.!manamuttuva bhaavanegalu…nijakku tumbaa apyayamanvaada baraha…

  2. Anonymous

    ಮೊದಲು ಅಂದಗೇಡಿಯಾಗಿ ಕರಿ ಹುಳುವಾಗಿ ಹರಿದಾಡಿದ, ಯಾರಿಗೂ ಬೇಡದ ಜೀವವೀಗ ಅಂದದ ಚಿಟ್ಟೆಯಾಗಿ ಹಾರಾಡುತ್ತಿತ್ತು. ಹೊಸ ಜೇವ ಪಲ್ಲವಿಸಿದ ಸಂಭ್ರಮದಲ್ಲಿ ಚಿಕ್ಕ ಚಿಕ್ಕ ಪಕ್ಕಗಳನ್ನು ಹಾರಿಸಿ ಚಿಮ್ಮಿಸಿ ಪುಟಿ ಪುಟಿದು ಹಾರಾಡುತ್ತಿತ್ತು. ಹಳದಿ ಬಿಸಿಲಿನ ಅನನ್ಯತೆಯಲ್ಲಿ ಹಳದಿ ಕಪ್ಪು ಚುಕ್ಕೆಯ ಪಾತರಗಿತ್ತಿ ಚಿನ್ನಾಟವಾಡುತ್ತಿತ್ತು.
    ತುಂಬಾ ಸುಂದರವಾದ ಸಾಲುಗಳು. ಚಿಟ್ಟೆಗಳನ್ನು ನೋಡುತ್ತಲೇ ಇರುತ್ತೇವೆ . ಆದರೆ ಅದರ ಈ ವರ್ಣನೆ .. ಅಭಿನಂದಿಸಲೇ ಬೇಕು . ‘ಅಂತರಾತ್ಮನೂ ಅಂತರಾಳವೂ ‘ ತುಂಬಾ ಆಪ್ತ ವಾಗಿದೆ ರೇಣುಕಾ .. ಅಭಿನಂದನೆಗಳು .

  3. varija devi

    The feelings in the third para is good. Olleya kaavya pratimeya tunuku idu. abhinandanegalu. hiigee munduvaresi. ettarettarakke hoogi.

  4. hemalatha.sc

    channagide renuka odutha odabeku annisuthe

  5. bharathi bv

    Eshtondu dinavaagide … ode irlilla … tumba tumba ishtavaythu renuka

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading