ಕತೆಗಾರ ಸಿದ್ದು ಸತ್ಯಣ್ಣವರ ‘ಒಂದು ತೇಗದ ಕುರ್ಚಿ’
ಈ ಕಥಾ ಸಂಕಲನವನ್ನು ‘ಅಮೂಲ್ಯ ಪುಸ್ತಕ’ ಪ್ರಕಟಿಸಿದೆ.
ರಘುನಾಥ ಚ ಹ ಬರೆದ ಮುನ್ನುಡಿ ಇಲ್ಲಿದೆ.
–ರಘುನಾಥ ಚ ಹ
ಮನುಷ್ಯ ವಿರೋಧಿ ಧೋರಣೆಗಳನ್ನು ವಿರೋಧಿಸುತ್ತ, ಆ ವಿರೋಧದ ಪ್ರಕ್ರಿಯೆಯಲ್ಲಿ ನಾವು ಯಾವುದನ್ನು ನಿರಾಕರಿಸುತ್ತಿರುತ್ತೇವೆಯೋ ಅದೇ ನಡವಳಿಕೆಯನ್ನು ನಮಗರಿವಿಲ್ಲದಂತೆ ಮೈಗೂಡಿಸಿಕೊಳ್ಳುವ ವಿರೋಧಾಭಾಸಕ್ಕೆ ಸಾಕಷ್ಟು ಉದಾಹರಣೆಗಳು ದೊರೆಯುತ್ತಿರುವ ಕಾಲಘಟ್ಟ ಇಂದಿನದು. ಶೋಷಣೆಯನ್ನು ವಿರೋಧಿಸುತ್ತ, ಮಾನವೀಯತೆಯನ್ನು ಪ್ರತಿಪಾದಿಸುವ ನಮ್ಮ ನಡೆ-ನುಡಿಗಳು ಕೊಂಚ ಎತ್ತರತಪ್ಪಿದರೂ ಅಸೂಕ್ಷ್ಮಗೊಳ್ಳುವ ಸಂಕೀರ್ಣ ಸಂದರ್ಭದಲ್ಲಿ, ಮನುಷ್ಯರಾಗಿ ಉಳಿಯುವುದೇ ಬಹು ದೊಡ್ಡ ಸವಾಲಿನಂತೆ ಕಾಣಿಸುತ್ತದೆ. ಆ ಹೊಣೆಗಾರಿಕೆಯನ್ನು ನಿರ್ಲಕ್ಷಿಸುವ ಕೆಲವರು ಉತ್ಪಾದಿಸುವ ದೊಡ್ಡದೊಡ್ಡ ಮಾತುಗಳ ಬಲೂನಿಗೆ ತಾಗಿಸುವ ನಿಜದ ಸೂಜಿಮೊನೆಗಳಂಥ ಯುವ ಅಭಿವ್ಯಕ್ತಿಯ ರೂಪದಲ್ಲಿ ಸಿದ್ದು ಸತ್ಯಣ್ಣವರ ‘ಒಂದು ತೇಗದ ಕುರ್ಚಿ’ ಸಂಕಲನದ ಕಥೆಗಳು ಕಾಣಿಸುತ್ತಿವೆ. ಪ್ರತಿರೋಧದ ಮನೋಭಾವ ಒಳಗೊಂಡಿರುವ ಈ ಅಭಿವ್ಯಕ್ತಿಯ ಭಿತ್ತಿ, ವಿವೇಕ ಹಾಗೂ ಸಂಯಮಗಳ ವಿಶಿಷ್ಟ ಸಮೀಕರಣವಾಗಿದೆ. ಈ ಸಮೀಕರಣದ ರೂಪದಲ್ಲಿ ಕಾಣಿಸುವ ಎಂಟು ಕಥೆಗಳ ಈ ಸಂಕಲನದ ಕೇಂದ್ರದಲ್ಲಿ, ವ್ಯವಸ್ಥೆಯನ್ನು ಆದ್ರಗೊಳಿಸುವ, ಮಾನವೀಯಗೊಳಿಸುವ ಹಂಬಲ ಸ್ಪಷ್ಟವಾಗಿದೆ.
ಸಿದ್ದು ಅವರ ಕಥೆಗಳು ಒಳಿತು-ಕೆಡುಕುಗಳ ಸರಳ ಮಾದರಿಗೆ ಸಮಾಧಾನಗೊಳ್ಳದೆ, ಬದುಕು ಒಡ್ಡುವ ಪರೀಕ್ಷೆಗಳಲ್ಲಿ ಈ ಮಾದರಿಗಳು ನಿಕಷಕ್ಕೊಳಪಡುವ ಸವಾಲಿಗೆ ತಮ್ಮನ್ನು ತಾವೇ ಒಡ್ಡಿಕೊಂಡಿರುವುದು ವಿಶೇಷ. ಶೋಷಣೆ ಕುರಿತಾದ ನಮ್ಮ ವಿರೋಧದ ಅಸಲಿಯತ್ತನ್ನು ವಿಮರ್ಶೆಗೊಳಪಡಿಸುವ ಗುಣದ ಕಾರಣದಿಂದಲೇ ಇಲ್ಲಿನ ಕಥೆಗಳು ವಿಶಿಷ್ಟವಾಗಿ ಕಾಣಿಸುತ್ತವೆ. ಇದಕ್ಕೆ ನಿದರ್ಶನರೂಪದಲ್ಲಿ ‘ಒಂದು ತೇಗದ ಕುರ್ಚಿ’ ಹಾಗೂ ತ್ರಾಸೊಂದು ಕರಗಿತು’ ಕಥೆಗಳನ್ನು ಗಮನಿಸಬಹುದು.
ಸಂಕಲನದ ಶೀರ್ಷಿಕೆ ಕಥೆಯಾದ ‘ಒಂದು ತೇಗದ ಕುರ್ಚಿ’ ಕಥೆಯ ಮಾಲತೇಶ ತನ್ನ ಕುಟುಂಬದ ಸಂಕಷ್ಟದ ನಡುವೆಯೂ ಪತ್ರಿಕೋದ್ಯಮ ಕಲಿತು ಪತ್ರಕರ್ತನಾಗಿದ್ದಾನೆ. ಪತ್ರಕರ್ತನಾದ ಕಾರಣಕ್ಕೆ ಊರಿನ ಜನರ ಕಣ್ಣಲ್ಲಿ ‘ಮನುಷ್ಯ’ನೂ ಆಗಿದ್ದಾನೆ. ಊರೆಲ್ಲ ಗೌರವಿಸಿದರೂ ಗೌಡರ ಮನೆಯ ತೇಗದ ಕುರ್ಚಿ ಮಾಲತೇಶನ ಸ್ವಾಭಿಮಾನಕ್ಕೆ ಸವಾಲಿನಂತೆ ಕಾಣಿಸುತ್ತಿದೆ. ಹೇಗಾದರೂ ಮಾಡಿ ಆ ಕುರ್ಚಿಯನ್ನು ಪಡೆಯುವ ಹಂಬಲ ಅವನದು. ಗೌಡರ ಕುರ್ಚಿಯನ್ನು ಪಡೆಯುವುದು ಎಂದರೇನು? ಗೌಡರಂತೆ ದರ್ಪವನ್ನು ಹೊಂದುವುದೆ? ಜನಸಾಮಾನ್ಯರನ್ನು ಶೋಷಿಸುವುದೆ? ಸರೀಕರ ನಡುವೆ ತನ್ನನ್ನು ವಿಶೇಷವಾಗಿ ಗುರ್ತಿಸಿಕೊಳ್ಳುವುದೆ? ಈ ಪ್ರಶ್ನೆಗಳ ಕುರಿತು ಕಥೆ ನೇರವಾಗಿ ಪ್ರಸ್ತಾಪಿಸುವುದಿಲ್ಲ. ಗೌಡರ ತೇಗದ ಕುರ್ಚಿಯ ಬಗೆಗಿನ ಮಾಲತೇಶನ ಮೋಹದ ಕುರಿತೂ ಕಥೆ ಸ್ಪಷ್ಟವಾಗಿ ಏನನ್ನೂ ಹೇಳುವುದಿಲ್ಲ. ಆದರೆ, ಶೋಷಣೆ ಹಾಗೂ ಅಧಿಕಾರದತ್ತವಾದ ದರ್ಪದ ಸಂಕೇತವನ್ನು ಹೊಂದುವ ಹಂಬಲ ಸಮಕಾಲೀನ ಸಂದರ್ಭದಲ್ಲಿ ಏನನ್ನು ಧ್ವನಿಸುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ. ಶೋಷಣೆಯನ್ನು ವಿರೋಧಿಸುತ್ತ ವಿರೋಧಿಸುತ್ತ ತಾವೇ ಆ ಪರಂಪರೆಯ ಭಾಗವಾದವರ ಉದಾಹರಣೆಗಳೂ ವಿರಳವಲ್ಲ. ಗೌಡರ ಸಾವಿನ ನಂತರ ಅವರ ಮನೆಗೆ ಹೋದಾಗಲೂ ಮಾಲತೇಶನ ಕಣ್ಣು ತೇಗದ ಕುರ್ಚಿಯನ್ನೇ ಹುಡುಕುತ್ತದೆ. ಅದರ ಕುರಿತು ವಿಚಾರಿಸಿದಾಗ, ದೇವಕ್ಕ ಹೇಳುವ ಮಾತು ಅವನನ್ನು ಬೆಚ್ಚಿಬೀಳಿಸುತ್ತದೆ. ಮಳೆಯಿಂದಾಗಿ ಒಲೆಗೆ ಒಣಸೌದೆ ಸಿಗದೆ, ಕುರ್ಚಿಯನ್ನು ಮುರಿದು ಅದರ ಅವಯವಗಳನ್ನೇ ದೇವಕ್ಕ ಉರುವಲಾಗಿ ಬಳಸಿದ್ದಾಳೆ. ಕುರ್ಚಿಯ ಸೌದೆಯನ್ನು ಸುಟ್ಟು ಮಾಲತೇಶನಿಗೆ `ಚಾ’ ಮಾಡಿಕೊಟ್ಟಿದ್ದಾಳೆ. ಕುರ್ಚಿಯನ್ನು ಸುಡುವುದರ ಮೂಲಕ ದೇವಕ್ಕ ತನಗರಿವಿಲ್ಲದೆಯೇ ದರ್ಪದ ಸಂಕೇತವೊಂದನ್ನು ಕೊನೆಗಾಣಿಸಿದ್ದಾಳೆ. ಆ ಸಂಕೇತವನ್ನು ತನ್ನದಾಗಿಸಿಕೊಳ್ಳಲು ಹಂಬಲಿಸುತ್ತಿದ್ದ ಮಾಲತೇಶನ ಅಹಂಕಾರವನ್ನೂ ದೇವಕ್ಕ ಸುಟ್ಟುಹಾಕಿದ್ದಾಳೆ. ಮಾಲತೇಶನ ಮೂಲಕ ಕೊನೆಗೊಳ್ಳಬೇಕಾಗಿದ್ದ ಗೌಡಿಕೆಯ ದರ್ಪದ ಸಂಕೇತ ದೇವಕ್ಕನ ಮೂಲಕ ಕೊನೆಗೊಳ್ಳುವುದು ಕುತೂಹಲಕರ. ಸಾಂಪ್ರದಾಯಿಕ ಶಿಕ್ಷಣದ ಮೂಲಕ ದೊರೆಯದ ಅರಿವನ್ನು ಜೀವನಜನ್ಯ ಶಿಕ್ಷಣ ನೀಡುವುದನ್ನು ಈ ಕಥೆ ಸಹೃದಯರ ಗಮನಕ್ಕೆ ತರುವಂತಿದೆ.
ಜಮೀನ್ದಾರಿಕೆಯ ಸಂಕೇತವಾಗಿದ್ದ ಕುರ್ಚಿ ತನಗೆ ಸಿಗದೆ ಹೋದುದೇ ಒಳ್ಳೆಯದಾಯಿತು ಎನ್ನುವ ಅರಿವು ಮಾಲತೇಶಗೂ ಆಗಿದೆ. ಆ ಮೂಲಕ ಮಾಲತೇಶಗೆ ದೇವಕ್ಕ ಗುರುವೂ ಆಗಿದ್ದಾಳೆ. ಕುರ್ಚಿ ಬೂದಿಯಾದುದನ್ನು ತಿಳಿದು ಮನಸೆಲ್ಲ ಖಾಲಿ ಖಾಲಿ ಅನ್ನಿಸಿ ನಿಟ್ಟುಸಿರು ಬಿಟ್ಟರೂ, ಗೌಡರ ಮನೆಯಿಂದ ತೆರಳುವಾಗ ಮಾಲತೇಶನ ಹೆಜ್ಜೆಗಳಲ್ಲಿ ಲವಲವಿಕೆ ಕಾಣಿಸುತ್ತದೆ. ಅದು ಕಥೆಯ ಸಾರ್ಥಕ ಕ್ಷಣ; ಕಲಿತ ತರುಣನ ಶಿಕ್ಷಣಕ್ಕೆ ಅರ್ಥ ದಕ್ಕಿದ ಕ್ಷಣ.

‘ತ್ರಾಸೊಂದು ಕರಗಿತು’ ಕಥೆಯ ರಾಮಪ್ಪನನ್ನು ಮಾಲತೇಶನ ಮತ್ತೊಂದು ರೂಪದಂತೆ ಕಾಣಬಹುದು. ಅಪ್ಪನನ್ನು ಕಳೆದುಕೊಂಡು, ಅವ್ವನ ಕಣ್ಣುಗಳ ಬೆಳಕಲ್ಲಿ ಬೆಳೆದ ರಾಮಪ್ಪ- ಊರವರ ರಾಮ್ಯಾ- ಬಾಲ್ಯದಲ್ಲಿ ತನಗಾದ ಅವಮಾನವನ್ನು ಶಿಕ್ಷಣ ಮತ್ತು ಸ್ಥಾನದ ಮೂಲಕವೇ ಮೀರಿದ್ದಾನೆ. ಮಾಲತೇಶ ಪತ್ರಕರ್ತನಾದರೆ, ರಾಮ್ಯಾ ಪೊಲೀಸನಾಗಿ ರಾಮಪ್ಪನಾಗುತ್ತಾನೆ. ‘ಕಳ್ಳು ಕುಡಿದು ಊರವರ ಕಣ್ಣಲ್ಲಿದಾರಿ ಬಿಟ್ಟೇತ್ಯಾಳ ಇದು ಹುಚಗೆಂಡಿ’ ಅನ್ನಿಸಿಕೊಂಡ ರಾಮ್ಯಾ, ಹೈಸ್ಕೂಲ್ ಗುಮಾಸ್ತ ಸಿದ್ಧಯ್ಯನಿಂದ ಅವಮಾನಿತನಾಗಿ ಊರವರಿಂದ ಮಾನಗೇಡಿಯೆಂದು ಕರೆಸಿಕೊಂಡಿದ್ದಾನೆ. ಹೀಗೆ ಕಳೆದುಹೋದ ಮಾನವನ್ನು ಪೊಲೀಸನಾಗುವ ಮೂಲಕ ರಾಮ್ಯಾ ಮರಳಿ ಪಡೆದರೂ, ಸಿದ್ಧಯ್ಯನಿಂದಾದ ಅವಮಾನ ಅವನನ್ನೂ ಅವನ ತಾಯಿಯನ್ನೂ ಕೊರೆಯುತ್ತಲೇ ಇದೆ. ಸಿದ್ಧಯ್ಯನ ಮಗಳಿಗೆ ಸರಿಯಾದ ವರ ಸಿಗಲಿಲ್ಲವೆನ್ನುವುದು ರಾಮಪ್ಪನ ತಾಯಿಗೆ ಒಂದು ಬಗೆಯ ನೆಮ್ಮದಿ ತರುತ್ತದೆ. ಆದರೆ, ತಮಗಾದ ಅವಮಾನವನ್ನು ಮೀರಲು ಸೇಡು ತೀರಿಸಿಕೊಳ್ಳುವ ದಾರಿ ಹಿಡಿಯದ ರಾಮಪ್ಪ, ತನ್ನ ಔದಾರ್ಯದಲ್ಲೇ ಸಿದ್ಧಯ್ಯ ನನ್ನು ಕುಬ್ಜನನ್ನಾಗಿಸುವುದು ಕಥೆಯ ಹೊಳಪನ್ನು ಹೆಚ್ಚಿಸಿದೆ.
‘ಒಂದು ತೇಗದ ಕುರ್ಚಿ’ ಕಥೆಗೆ ಹೋಲಿಸಿದರೆ ತ್ರಾಸೊಂದು ಕರಗಿತು’ ಕಥೆಯ ಹರಹು ದೊಡ್ಡದು. ಮೊದಲ ಕಥೆಯಲ್ಲಿ ಸೂಚ್ಯವಾಗಿದ್ದ ಜಾತಿಯ ಪ್ರಶ್ನೆ ರಾಮನ ಸಂದರ್ಭದಲ್ಲಿ ಸ್ಪಷ್ಟವಾಗಿ ಮುನ್ನೆಲೆಗೆ ಬಂದಿದೆ. ರಾಮನ ಮೇಲಿನ ಸಿದ್ಧಪ್ಪನ ಅಸಹನೆಗೆ, ಮಗಳ ಮೇಲಿನ ಅವನ ವಿಪರೀತ ಕಾಳಜಿಯಷ್ಟೇ ಕಾರಣವಾಗಿರದೆ, ರಾಮನ ಜಾತಿಯೂ ಕಾರಣವಾಗಿದೆ. ರಾಮನನ್ನು ಹಿಡಿದು ತದುಕಬೇಕೆನಿಸಿದರೂ, ಅಟ್ರಾಸಿಟಿ ಕೇಸನ್ನು ಎದುರಿಸಬೇಕಾದ ಆತಂಕದಲ್ಲಿ ಅವನು ತನ್ನನ್ನು ತಾನು ಸಂಭಾಳಿಸಿಕೊಂಡಿದ್ದಾನೆ. ಊರವರ ಕಣ್ಣಲ್ಲಿ ರಾಮ ದಾರಿ ಬಿಟ್ಟವನೆನ್ನಿಸಿಕೊಂಡಾಗ, ಆ ಸಂದರ್ಭವನ್ನು ಬಳಸಿಕೊಳ್ಳುವ ಸಿದ್ಧಯ್ಯ ಅಮಾಯಕ ಹುಡುಗನನ್ನು ಚಪ್ಪಲಿಯಿಂದ ಹೊಡೆದು ಅವಮಾನಿಸುತ್ತಾನೆ. ಊರಿನ ಜನ ಕೂಡ ಆ ದೌರ್ಜನ್ಯದ ಭಾಗವಾಗುತ್ತಾರೆ. ಊರುಕೇರಿಗಳಲ್ಲಿನ ಜಾತಿಯ ವ್ಯಸನ ಅವಕಾಶ ಸಿಕ್ಕಾಗ ಹೇಗೆ ಹೆಡೆಯೆತ್ತಿ ಫೂತ್ಕರಿಸುತ್ತದೆ ಎನ್ನುವುದಕ್ಕೆ ರಾಮ ಎದುರಿಸುವ ಅವಮಾನ ನಿದರ್ಶನದಂತಿದೆ. ಜೀವದ ಗೆಳೆಯನಿಗೆ ಮಾತ್ರವಲ್ಲ, ಮಕ್ಕಳ ಮನಸ್ಸನ್ನು ತಿಳಿಗೊಳಿಸಬೇಕಾದ ಶಾಲೆಯ ಮಾಸ್ತರರಿಗೆ ಕೂಡ ರಾಮ ಅಸ್ಪೃಶ್ಯನಾಗಿಬಿಡುತ್ತಾನೆ. ಈ ಅವಮಾನ ಪೊಲೀಸನಾದ ನಂತರವೂ ಅವನನ್ನು ತೀವ್ರವಾಗಿ ಬಾಧಿಸುತ್ತದೆ. ಮಧ್ಯರಾತ್ರಿಯಲ್ಲೊಮ್ಮೆ ಎಚ್ಚರಗೊಂಡು ಬಾಲ್ಯದ ಅವಮಾನವನ್ನು ನೆನಪಿಸಿಕೊಂಡು ಒದ್ದಾಡುವ ಅವನು, ಕಿಟಕಿಯಾಚೆಗಿನ ನಿರ್ಜನ ಬೀದಿ ಕಂಡು ‘ಈ ಸೂಳೆ ಮಕ್ಳ ಜಗತ್ತು ಹಿಂಗೆ ಇದ್ದ್ ಬಿಡಬೇಕಿತ್ತು’ ಎಂದು ತನ್ನಷ್ಟಕ್ಕೆ ಹೇಳಿಕೊಳ್ಳುತ್ತಾನೆ. ಈ ಮಾತು ರಾಮನ ಅಂತರಂಗದ ಸಿಟ್ಟು ಹಾಗೂ ಅಸಹಾಯಕತೆ ಎರಡನ್ನೂ ಧ್ವನಿಸುತ್ತದೆ. ಆದರೆ, ವಾಸ್ತವದಲ್ಲಿ ಆ ಸಿಟ್ಟು ಸೇಡಿನರೂಪ ತಾಳದೆ, ಯಾರನ್ನೂ ಸುಡದೆ ಬೆಳುದಿಂಗಳಾಗಿ ಮಾರ್ಪಡುವುದು ಕುತೂಹಲಕರ. ರಾಮನ ಔದಾರ್ಯ, ವಿವೇಕ ಮತ್ತು ಕ್ಷಮಾಗುಣ ವೈಯಕ್ತಿಕವಷ್ಟೇ ಆಗಿರದೆ, ಇಡೀ ದಲಿತ ಸಮುದಾಯದ ತಾಯ್ತನದಂತಿದೆ. ಫ್ಯೂಡಲ್ ಜಾತಿಗಳು ತೋರಿಕೆಯ ಮಾತುಗಳಲ್ಲಷ್ಟೇ ಉಳಿಸಿಕೊಂಡಿರುವ ಮಾನವೀಯತೆಯ ಮಿಡಿತಗಳನ್ನು ಶೋಷಿತರು ತಮ್ಮ ಕೃತಿಯಲ್ಲಿ ಜೀವಂತವಾಗಿರಿಸಿಕೊಂಡಿರುವುದನ್ನು ಸಿದ್ದು ಅವರ ಕಥೆಗಳು ಸೂಚಿಸುತ್ತಿರುವಂತೆ ಕಾಣಿಸುತ್ತದೆ.
ಕಲಿತ ದಲಿತ ಯುವಕರ ದ್ವಂದ್ವಗಳ ರೂಪದಲ್ಲೂ ‘ಒಂದು ತೇಗದ ಕುರ್ಚಿ’ ಹಾಗೂ ತ್ರಾಸೊಂದು ಕರಗಿತು’ ಕಥೆಗಳನ್ನು ನೋಡಬಹುದು. ಶೋಷಣೆಗೆ ಒಳಗಾದವರಿಗೆ ವಿಮೋಚನೆಯ ರೂಪದಲ್ಲಿ ಶಿಕ್ಷಣ ಕಂಡರೂ, ನಂತರದಲ್ಲೂ ಹೊಸ ಬಂಧನಗಳನ್ನು ಎದುರಿಸಲೇಬೇಕಾದ ಅನಿವಾರ್ಯತೆಯಿದೆ. ಈ ಅನಿವಾರ್ಯತೆಯನ್ನು ವಿವೇಕದ ಮೂಲಕ ಎದುರಿಸುವ ರಾಮಪ್ಪ ಹಾಗೂ ಮಾಲತೇಶರಂಥವರು ನಿಜದ ಬದುಕಿಗೂ ಇಳಿದು ಬರಬೇಕಾದ ಅಗತ್ಯವನ್ನು ಕಥೆಗಾರರು ಪ್ರತಿಪಾದಿಸುತ್ತಿರುವಂತಿದೆ. ದೇವಕ್ಕನಿಂದತನ್ನ ಪ್ರತಿರೋಧದ ಟೊಳ್ಳುತನ ನೀಗಿಕೊಳ್ಳುವ ಮಾಲತೇಶನಂತೆ, ಸಿದ್ಧಯ್ಯನ ಮಗ ದಲಿತ ಹುಡುಗಿಯ ಮೇಲೆ ದೌರ್ಜನ್ಯವೆಸಗಿದ ಪ್ರಸಂಗವನ್ನು ವೈಯಕ್ತಿಕ ಸ್ವಾರ್ಥಕ್ಕೆ ಬಳಸಿಕೊಳ್ಳುವ ಅವಕಾಶವಿದ್ದರೂ ನಿರ್ಲಿಪ್ತವಾಗುಳಿಯುವ ರಾಮಪ್ಪನ ಸಂಯಮ ಹಾಗೂ ವಿವೇಕ ದೊಡ್ಡದು. ಈ ಅರಿವು, ಸಂಯಮ ಹಾಗೂ ವಿವೇಕ ಶೋಷಣೆಯನ್ನು ವಿರೋಧಿಸುವ ವ್ಯಕ್ತಿ ಹಾಗೂ ಚಳವಳಿಗಳ ಭಾಗವಾಗುವ ಅಗತ್ಯವನ್ನು ಸಿದ್ದು ಅವರ ಕಥೆಗಳು ಮನಗಾಣಿಸುವಂತಿವೆ.
ಜಾತಿರಾಡಿಯ ನಿಟ್ಟಿನಲ್ಲಿ ‘ತ್ರಾಸೊಂದು ಕರಗಿತು’ ಕಥೆಯ ಇನ್ನೊಂದು ಆಯಾಮವಾಗಿ ನೋಡಬಹುದಾದ ‘ಸೂರೀಕೆರೆಯಲ್ಲಿ’ ಕಥೆ ರಾಜಕಾರಣದ ದಾಳವಾಗಿ ಜಾತಿ ಬಳಕೆಯಾಗುವ ವಿಪರ್ಯಾಸವನ್ನು ಕಾಣಿಸುತ್ತದೆ. ಊರಿನವರ ಕಣ್ಣಿನಲ್ಲಿ ‘ದೇವ್ರಂಥ ಮನುಷ್ಯ’ನಾದ ಶಂಕರಗೌಡ ಸರದೇಸಾಯಿ, ಅಂತರಂಗದಲ್ಲಿ ಪೋಷಿಸಿಕೊಂಡ ಜಾತಿವಿಷವನ್ನು ಮಗಳಿಂದಲೂ ಮುಚ್ಚಿಡುವಷ್ಟು ಚಾಣಾಕ್ಷ. ಸೋದರ ಸಂಬಂಧಿಯ ಮಗನಿಂದ ದಲಿತ ಹುಡುಗಿಗೆ ಅನ್ಯಾಯವಾದಾಗ ನ್ಯಾಯಕೊಡಿಸುವ ಮೂಲಕ ತನ್ನ ರಾಜಕೀಯ ಹಿತಾಸಕ್ತಿ ಸಾಧಿಸಿಕೊಳ್ಳುವ ಸರದೇಸಾಯಿ, ತನ್ನ ಮಗಳು ದಲಿತ ಹುಡುಗನನ್ನು ಪ್ರೀತಿಸಿ ಬಸಿರಾದಾಗ ಕ್ರೂರಿಯಾಗುತ್ತಾನೆ. ಪ್ರೇಮಿಸಿದ ಹುಡುಗನನ್ನು ಗುಟ್ಟಾಗಿ ಕೊಲ್ಲಿಸಿ, ಮಗಳಿಗೆ ಬೇರೆ ಮದುವೆ ಮಾಡುತ್ತಾನೆ. ಮಗಳ ಪ್ರೇಮ- ಪ್ರೇಮದ ಫಲದ- ವಿಷಯ ಅರಿಯದವನಂತೆ ಹಣ್ಣು ತಿನ್ನಿಸುವ ತಣ್ಣಗಿನ ಕ್ರೌರ್ಯವನ್ನೂ ಕಥೆ ಭಾವಾವೇಶಕ್ಕೊಳಗಾಗದೆ ಸಂಯಮದಿಂದ ಚಿತ್ರಿಸಿರುವುದು ವಿಶೇಷ.
ಆಸ್ಪತ್ರೆಯಿಂದ ನಾಪತ್ತೆಯಾದ ಹಸುಗೂಸಿನ ಹುಡುಕಾಟದಕಥೆ ‘ಹತ್ಯೆ’ ವ್ಯವಸ್ಥೆಯಲ್ಲಿ ಅಂತರ್ಗತವಾದ ಕ್ರೌರ್ಯವನ್ನು ಅನಾವರಣಗೊಳಿಸುವ ಪ್ರಯತ್ನ. ಮಗುವನ್ನು ಕದ್ದು ಸಿಕ್ಕಿಬೀಳುವ ರೇಣುಕಾ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ರೇಣುಕಾಳನ್ನು ಮಕ್ಕಳ ಕಳ್ಳಿಯಾಗಿ ಬಿಂಬಿಸುವ ಮಾಧ್ಯಮವೇ, ಸಾವಿನ ನಂತರ ಬಂಜೆಯೆಂದು ಬಿಂಬಿಸಿ ಅವಳ ಬಗ್ಗೆ ಅನುಕಂಪ ಮೂಡಿಸಲು ಪ್ರಯತ್ನಿಸುವ ವ್ಯಂಗ್ಯ ಕಥೆಯಲ್ಲಿದೆ. ದಾದಿಯಾಗಿ ಹಲವರ ಪಾಲಿಗೆ ತಾಯಿಯಂತೆ ಕಾಣಿಸಿದ್ದ ಹೆಣ್ಣುಮಗಳು, ವೈಯಕ್ತಿಕ ಬದುಕಿನ ಕೊರತೆಯನ್ನು ನೀಗಿಕೊಳ್ಳಲಿಕ್ಕಾಗಿ ದುರ್ಬಲ ಕ್ಷಣದಲ್ಲಿ ಮಗುವನ್ನು ಕದ್ದರೂ, ಅವಳೊಳಗಿನ ತಾಯಿಯನ್ನು ಕಥೆ ಗೌರವದಿಂದಲೇ ಚಿತ್ರಿಸಿರುವುದು ಗಮನಾರ್ಹ. ಪೊಲೀಸರು ಮನೆಗೆ ನುಗ್ಗಿದ ಸಂದರ್ಭದಲ್ಲಿ ಮಗುವಿಗೆ ಮೊಲೆಯುಣಿಸುತ್ತಿದ್ದ ರೇಣುಕಾ ಎದೆಯ ತುಂಬಾ ಸೆರಗು ಎಳೆದುಕೊಳ್ಳುತ್ತಾಳೆ. ಪೇದೆಯ ಕಣ್ಣಿಗೆ ಅವಳ ತಾಯ್ತನ ಕಾಣಿಸದೆ, ಕಳ್ಳತನವಷ್ಟೇ ಕಾಣಿಸುತ್ತದೆ. ರೇಣುಕಾ ಮೊಲೆಯುಣಿಸುತ್ತಿದ್ದ ವಿಷಯ ತಿಳಿದು ಮಗುವಿನ ಅಜ್ಜಿಯ ಆವರೆಗಿನ ಸಿಟ್ಟೆಲ್ಲ ಇಳಿದು ಹೋಗುತ್ತದೆ. ಮಗುವಿಗೆ ಸಂಬಂಧಿಸಿದವರು ಮನುಷ್ಯರಂತೆ ವರ್ತಿಸುವ ಸಂದರ್ಭದಲ್ಲೇ, ಮಾಧ್ಯಮದ ಮಂದಿಗೆ ರೇಣುಕಾ ಹಾಗೂ ಮಗು ಸರಕಿನಂತೆ ಕಾಣಿಸುತ್ತಾರೆ. ಕಳ್ಳಿ ಜೀಪ್ ಹತ್ತುವ ದೃಶ್ಯ ಅವರಿಗೆ ಮುಖ್ಯವೆನ್ನಿಸುತ್ತದೆ; ಟಿಆರ್ ಪಿಗಾಗಿ ಚಾರಿತ್ರ್ಯಹರಣ ಮಾಡಲು ಹಾಗೂ ಚಾರಿತ್ರ್ಯ ಸೃಷ್ಟಿಸಲು ಹಿಂಜರಿಯದ ಮಾಧ್ಯಮವನ್ನು ಕಥೆ ಬೇಟೆಗಾರನ ರೂಪದಲ್ಲಿ ಚಿತ್ರಿಸುತ್ತದೆ. ಮಾಧ್ಯಮದ ಜೊತೆಗೆ ಪೊಲೀಸ್ ವ್ಯವಸ್ಥೆಯ ಸಂವೇದನಾರಾಹಿತ್ಯವನ್ನೂ ಕಥೆ ಕಾಣಿಸುತ್ತದೆ.
ಸಿದ್ದು ಅವರ ಕಥೆಗಳ ನಾಯಕರು ನಿರ್ವಹಿಸುತ್ತಿರುವ ಪತ್ರಕರ್ತ ಅಥವಾ ಪೊಲೀಸ್ ಉದ್ಯೋಗಗಳು, ಹೊಟ್ಟೆಪಾಡಿನ ನೌಕರಿಗಳಷ್ಟೇ ಅಲ್ಲ; ಅವು, ಶೋಷಣೆ-ದೌರ್ಜನ್ಯ ವಿರೋಧಿ ಆಂದೋಲನಕ್ಕೆ ಒದಗಬಹುದಾದ ಪ್ರತಿರೋಧದ ಶಕ್ತಿಗಳೂ, ಜೀವನಪ್ರೀತಿಯ ಚೋದಕ ಗುಣಗಳೂ ಹೌದು. ಸಮಾಜದ ಹಿತಕ್ಕೆ ಒದಗಿಬರಬೇಕಾದ ಈ ಕ್ಷೇತ್ರಗಳು ಗಲೀಜು ಮೆತ್ತಿಕೊಂಡಿರುವುದರ ಬಗ್ಗೆ ವಿಷಾದವನ್ನೂ ಹಾಗೂ ಅವುಗಳು ಹೊಂದಿರಬೇಕಾದ ನೈತಿಕತೆಯ ಅಗತ್ಯವನ್ನು ‘ಒಂದು ತೇಗದ ಕುರ್ಚಿ’ ಸಂಕಲನದ ಕೆಲವು ಕಥೆಗಳು ಸೂಚ್ಯವಾಗಿ ಮನಗಾಣಿಸುತ್ತವೆ.
ವರ್ತಮಾನದ ಬದುಕಿನ ಕುದಿಯಲ್ಲಿ ಮಾನವೀಯತೆಯ ಪಸೆ ಆರುತ್ತಿರುವುದರ ಕುರಿತ ಆತಂಕ ಸಿದ್ದು ಅವರ ಕಥೆಗಳ ಕಾಳಜಿಗಳಲ್ಲೊಂದಾಗಿದೆ. ‘ಮಂಜವ್ವ ಎನ್ನುವ ಗೃಹಿಣಿಯೂ…’ ಮನುಷ್ಯರೆಲ್ಲ ಮನುಷ್ಯರಾಗಿ ಉಳಿಯಲು ಹಂಬಲಿಸುವ ಕಥೆಯಾಗಿದೆ. ಎರಡು ತಲೆಮಾರುಗಳ ಪೋಷಕರ ಮನಸ್ಥಿತಿಯಲ್ಲಿನ ವೈರುಧ್ಯವನ್ನು ಹಂದಿಗೊಂಬೆ’ ಕಥೆ ಸೂಚಿಸುವಂತಿದೆ. ಮನೆಯಲ್ಲಿ ಯಾವುದೇ ಸಮಸ್ಯೆಯಿಲ್ಲದಿದ್ದರೂ ಇರುವ ಒಬ್ಬಳೇ ಮಗಳು ಲೋಕಜ್ಞಾನದಿಂದ ವಂಚಿತವಾಗಬಾರದು ಎನ್ನುವ ಎಚ್ಚರದ ಅಪ್ಪ? ಅಮ್ಮನಿಗೆ, ಬೆಳೆದು ಮದುವೆಯಾದ ಮಗಳು ತನ್ನ ಮಗನನ್ನು ಬೆಳೆಸಲು ತೋರಿಸುವ ಧೋರಣೆಯನ್ನು ಅರಗಿಸಿಕೊಳ್ಳುವುದು ಕಷ್ಟ. ಶಿಕ್ಷಣಕ್ಕಾಗಿ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಈ ತಲೆಮಾರಿನ ತಾಯಿಗೆ, ಬಯಲಿನಲ್ಲಿ ಸಿಗುವ ಸಹಜ ಶಿಕ್ಷಣದ ಬಗೆಗೆ ಗೌರವವೇ ಇಲ್ಲ. ಶಿಕ್ಷಣ ಹಾಗೂ ಪಾಲನೆ ಪೋಷಣೆ-ಎರಡೂ ನಿಟ್ಟಿನಲ್ಲಿ ಆಗಿರುವ ಬದಲಾವಣೆಗಳ ಕುರಿತು ಈ ಕಥೆ ಸೂಚಿಸುವಂತಿದೆ.
ಸಿದ್ದು ಸತ್ಯಣ್ಣವರ ಅಂತಃಕರಣವೇ ಮೂರ್ತರೂಪ ತಾಳಿದಂಥ ಉತ್ಸಾಹಿ ಬರಹಗಾರ. ಕಪ್ಪತಗುಡ್ಡ ಪರಿಸರದ ಜೀವಂತಿಕೆಯನ್ನು ಮೊಗೆದುಕೊಳ್ಳುವಂತೆ ಕಾಣಿಸುವ ಸಹೃದಯಿ ಕಥೆಗಾರನ ಬರವಣಿಗೆಯಲ್ಲೂ ಪರಿಸರದ ತಾಯ್ತನದ ಗುಣ ಸಹಜವಾಗಿಯೇ ಮಿಳಿತಗೊಂಡಿದೆ. ಸಮಾಜದ ಸಂರಚನೆಯಂತೆಯೇ ಹಲವು ಸಿಕ್ಕು ಹಾಗೂ ಬಿಕ್ಕಟ್ಟುಗಳು ಸಾಹಿತ್ಯದಲ್ಲೂ ಪರಿಸರದಲ್ಲೂ ಇವೆ. ಅವುಗಳನ್ನು ಎದುರುಗೊಳ್ಳುತ್ತ, ಎಡತಾಕಿದ ಸಂಗತಿಗಳಿಗೆಲ್ಲ ಮಾನವೀಯತೆಯ ಸ್ಪರ್ಶ ನೀಡಲು ಪ್ರಯತ್ನಿಸುವುದು ಸಾಹಿತ್ಯದ ಜೀವಗುಣದ ಬಗ್ಗೆ ನಂಬಿಕೆಯುಳ್ಳ ಬರಹಗಾರನ ಕರ್ತವ್ಯ. ಈ ಹೊಣೆಗಾರಿಕೆಯ ನಿರ್ವಹಣೆಯ ರೂಪದಲ್ಲೂ ಸಿದ್ದು ಅವರ ಕಥೆಗಳಿಗೆ ಮಹತ್ವವಿದೆ. ಸಿದ್ದು ಅವರ ಭಾಷೆ ಸರಳವಾಗಿದೆ, ಪರಿಣಾಮಕಾರಿಯಾಗಿದೆ. ಕಟ್ಟುವಿಕೆಯಲ್ಲಿ ಇನ್ನಷ್ಟು ಬಿಗಿ-ಬಿಸುಪು ಬೇಕು; ಕಥೆಯ ಶಿಲ್ಪ ಹಾಗೂ ಧ್ವನಿಶಕ್ತಿಯ ಬಗ್ಗೆ ಸಿದ್ದು ಇನ್ನಷ್ಟು ಮಹತ್ವಾಕಾಂಕ್ಷಿ ಆಗಬೇಕು ಎನ್ನುವ ಅಪೇಕ್ಷೆಗಳ ನಡುವೆಯೂ, ತಮ್ಮೊಳಗಿನ ಆದ್ರತೆಯಿಂದ ‘ಒಂದು ತೇಗದ ಕುರ್ಚಿ’ ಸಂಕಲನದ ಕಥೆಗಳು ಆಪ್ತವೆನ್ನಿಸುತ್ತವೆ.
ಕಥೆಗಳ ಚೊಚ್ಚಿಲ ಕಟ್ಟು ಹಿಡಿದು ಸಂಭ್ರಮಿಸುತ್ತಿರುವ ಗೆಳೆಯನನ್ನು ಕನ್ನಡ ಕಥಾ ಜಗತ್ತಿಗೆ ಪ್ರೀತಿಯಿಂದ ಸ್ವಾಗತಿಸುವೆ. ಓದುಗರ ಒಲವು-ಮನ್ನಣೆಯೊಂದಿಗೆ ವಿಮರ್ಶೆಯ ಕಾಳಜಿಯೂ ‘ಒಂದು ತೇಗದ ಕುರ್ಚಿ’ ಸಂಕಲನವನ್ನು ಪೊರೆಯಲಿ; ‘ಕಥೆಗಳ ಕಪ್ಪತಗುಡ್ಡ’ದ ಅಸಂಖ್ಯ ಜಾಡುಗಳಲ್ಲಿ ಸಿದ್ದು ಅವರ ಪಯಣ ನಿರಂತರವಾಗಿರಲಿ, ನಿತ್ಯನೂತನವಾಗಿರಲಿ ಎಂದು ಆಶಿಸುವೆ.






0 Comments