ಅಂಗೋಲಾದ ಕಥೆಯಾಗದ ಕಥೆಗಳು..

”ಬ್ಲಡ್ ಡೈಮಂಡ್: ಅಂಗೋಲಾದ ಕಥೆಯಾಗದ ಕಥೆಗಳು – 2”

”ತಲೆಮರೆಸಿಕೊಂಡು ಪಲಾಯನಗೈಯುವುದನ್ನು ಬಿಟ್ಟು ಬೇರ್ಯಾವ ಪರಿಹಾರವೂ ನನಗೆ ತಿಳಿಯಲಿಲ್ಲ. ಬದುಕುಳಿಯುವುದೇ ಸದ್ಯ ಎಲ್ಲದಕ್ಕಿಂತಲೂ ಮುಖ್ಯ ಎಂದು ನನಗನ್ನಿಸಿತ್ತು”, ಎಂದು ತನಗಾದ ಗಣಿಗಾರಿಕೆಯ ದಿನಗಳ ಕೆಟ್ಟ ಅನುಭವಗಳನ್ನು ಮತ್ತೆ ನೆನಪಿಸಿಕೊಂಡು ನಿಟ್ಟುಸಿರಿಡುತ್ತಿದ್ದಾನೆ ಒಬ್ಬ ಕಾರ್ಮಿಕ.

ಆತ ತನ್ನೂರಿನಲ್ಲಿ ಕೃಷಿ ಮಾಡಿಕೊಂಡು ಹೇಗೋ ಎರಡು ಹೊತ್ತಿನ ಅನ್ನವನ್ನು ಸಂಪಾದಿಸುತ್ತಿದ್ದ. ಆದರೆ ಈ ವೃತ್ತಿಯಲ್ಲಿ ಹೆಚ್ಚಿನ ಸಂಪಾದನೆಯಿದೆ ಎಂದು ಯಾರಿಂದಲೋ ತಿಳಿದುಬಂತು. ತಕ್ಷಣ ತನ್ನೂರಿನಿಂದ ಕುವಾಂಗೋಗೆ ಬಂದ ಆತ ಅಲ್ಲಿಯವರೊಡನೆ ಸೇರಿಕೊಂಡು ಹೊಸ ವೃತ್ತಿಗಿಳಿದ. ಆದರೆ ಕ್ರಮೇಣ ವೃತ್ತಿಯ ಭಯಾನಕ ಮುಖಗಳು ಮೆಲ್ಲಮೆಲ್ಲನೆ ಅನಾವರಣಗೊಂಡವು. ಸಂಪಾದನೆಯಿರಲಿಲ್ಲ ಎಂದರೆ ಸುಳ್ಳಾಡಿದಂತಾಗುತ್ತದೆ. ಆದರೆ ಪ್ರತೀ ಬಾರಿ ಪ್ರಾಣವನ್ನೇ ಒತ್ತೆಯಿಟ್ಟು ಪೋಲೀಸರೊಂದಿಗೆ ಆಡುವ ಭಯಾನಕ ಆಟಗಳು ಸಹಜವಾಗಿಯೇ ಉಸಿರುಗಟ್ಟಿಸುವಂತಿದ್ದವು. ಹೀಗಾಗಿ ಈ ಬಾರಿ ಆತನಿಗೆ ತನ್ನೂರಿಗೆ ಮರಳದೆ ಬೇರೆ ದಾರಿಯಿರಲಿಲ್ಲ.

ಇನ್ನು ಇಂಥವರನ್ನು ಹೊರತುಪಡಿಸಿದರೆ ಗಣಿಗಾರಿಕೆಯನ್ನು ಬಿಟ್ಟು ಬೇರ್ಯಾವ ವೃತ್ತಿಕೌಶಲಗಳನ್ನು ಹೊಂದಿಲ್ಲದ ಒಂದು ಕಾರ್ಮಿಕವರ್ಗವೂ ಇತ್ತು. ಅದು ನೆಟ್ಟಗೆ ಅತ್ತ ತಮ್ಮ ಜೀವನವನ್ನೂ ನಡೆಸಲಾರದೆ, ಇತ್ತ ಸೈನಿಕರ ಚಿತ್ರಹಿಂಸೆಯನ್ನೂ ತಾಳಲಾರದೆ ಒದ್ದಾಡುತ್ತಿತ್ತು. ಪೋಲೀಸರನ್ನು ಎದುರು ಹಾಕಿಕೊಂಡು ವಜ್ರಗಳನ್ನು ತೆಗೆಯುವುದು ನಿಜಕ್ಕೂ ಅಸಾಧ್ಯದ ಮಾತಾಗಿತ್ತು. ಆದರೆ ಅವರು ಕೇಳಿದಷ್ಟು ಪ್ರಮಾಣದ ಮೊತ್ತವನ್ನು ನೀಡುವುದೂ ಕೂಡ ಸಾಧ್ಯವಿರಲಿಲ್ಲ. ಕೆಲ ಮೊಂಡ ಅಧಿಕಾರಿಗಳು ಏಕಾಏಕಿ ಬಂದು ಇಂತಿಷ್ಟು ಹಣವನ್ನು ಕೇಳುವುದು ಸಾಮಾನ್ಯವಾಗಿತ್ತು. ”ಕಾಸು ಕೈಗೆ ಸಿಗುವುದು ಮಾರಾಟವಾದ ನಂತರವೇ. ನಂತರ ಖಂಡಿತ ಕೊಡುವೆ”, ಎಂದು ಅಂದು ಒಬ್ಬಾತ ಪ್ರಾಮಾಣಿಕವಾಗಿಯೇ ಹೇಳಿದ್ದ. ಆದರೆ ಆ ಅಧಿಕಾರಿಗೆ ಮಾತ್ರ ಅದು ದರ್ಪದ ಮಾತೆಂದು ಅನ್ನಿಸಿದ್ದರಿಂದ ಕಾರ್ಮಿಕನ ಅದೃಷ್ಟ ಕೈಕೊಟ್ಟಿತ್ತು.

”ಕೊಡುವುದಾದರೆ ಈಗಲೇ ಕೊಡು, ಇಲ್ಲಾಂದ್ರೆ ಸಾಯಲು ತಯಾರಾಗು”, ಭಂಡ ಅಧಿಕಾರಿ ಅಬ್ಬರಿಸಿದ್ದ. ಯಾವ ಕಾರ್ಮಿಕ ತಾನೇ ನೋಟುಗಳನ್ನು ತುರುಕಿಕೊಂಡು ಕೆಸರಿನ ಗುಂಡಿಗಿಳಿಯುತ್ತಾನೆ? ದುರಾದೃಷ್ಟವಶಾತ್ ಅದು ಆತನ ಪಾಲಿನ ಕೊನೆಯ ದಿನವಾಗಿತ್ತಷ್ಟೇ. ಅಧಿಕಾರಿ ಈಗ ಆತನನ್ನು ತೀವ್ರವಾಗಿ ಥಳಿಸತೊಡಗಿದ್ದಾನೆ. ರಕ್ತ ಹರಿಯುತ್ತಲೇ ಇದ್ದು ಇತ್ತ ಕಾರ್ಮಿಕನ ಕಣ್ಣು ಕತ್ತಲಾಗುತ್ತಿದೆ. ಇದಾದ ಕೆಲವೇ ನಿಮಿಷಗಳಲ್ಲಿ ಆತನ ಪ್ರಾಣಪಕ್ಷಿಯೂ ಹಾರಿಹೋಗುತ್ತದೆ. ತನ್ನ ಥಳಿತದಿಂದ ಕಾರ್ಮಿಕನ ಸಾವನ್ನು ನಿರೀಕ್ಷಿಸದ ಅಧಿಕಾರಿ ಶವವನ್ನು ನಿರ್ಭಾವುಕನಾಗಿ ಎಳೆದುಕೊಂಡು ಹೋಗಿ ಕಸದಂತೆ ಪಕ್ಕದ ನದಿಗೆ ಎಸೆಯುತ್ತಾನೆ. ಈ ಸ್ಥಳದಲ್ಲಿ ಸದ್ಯಕ್ಕಿರುವ ಕಾರ್ಮಿಕರ ತಂಡವನ್ನು ಬೇಗನೇ ಬದಲಿಸಿ ಹೊಸ ತಂಡವನ್ನು ಹಾಕಬೇಕು ಎಂಬ ಯೋಚನೆಯೂ ಆತನಿಗೆ ಬರುತ್ತದೆ. ಹೊಸ ತಂಡದ ಆಗಮನದ ನಂತರವೇ ಹೊಸ ಕಂತಿನ ಹಫ್ತಾ ಸಿಗುವುದಲ್ಲವೇ!

ಅಂಗೋಲಾ ಸೈನ್ಯದ ಹಿರಿಯ ಅಧಿಕಾರಿಗಳು ಇಂಥಾ ಪುಟ್ಟ ಗಣಿಕಾರಿಕೆಯಿಂದ ತೆಗೆಯಲಾಗುವ ವಜ್ರಗಳನ್ನು ತಮ್ಮ ಖಾಸಗಿ ಆಸ್ತಿಯೆಂಬಂತೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಹೊಸ ಸಂಗತಿಯೇನಲ್ಲ. ಆಂತರಿಕ ಯುದ್ಧವು ಮುಗಿದ ನಂತರವಂತೂ ಈ ಕೆಲಸವು ಇವರಿಗೆ ಮತ್ತಷ್ಟು ಸುಲಭವಾಗಿಬಿಟ್ಟಿತ್ತು. ಮೈನಿಂಗ್ ಕಂಪೆನಿಗಳಲ್ಲಿರುವ ಭಾರೀ ಶೇರುಗಳು ಮತ್ತು ತಮ್ಮದೇ ಅಧೀನದಲ್ಲಿರುವ ಸೆಕ್ಯೂರಿಟಿ ಸಂಸ್ಥೆಗಳನ್ನು ನೇಮಿಸಿಕೊಂಡ ಹಿರಿಯ ಜನರಲ್ ಗಳು ದೇಶದ ಸಂಪತ್ತನ್ನು ಕೊಳ್ಳೆಹೊಡೆಯಲು ತುದಿಗಾಲಿನಲ್ಲಿ ನಿಂತಿದ್ದರು. ರಾಷ್ಟ್ರಾಧ್ಯಕ್ಷರನ್ನೊಳಗೊಂಡಂತೆ ಕ್ಯಾಬಿನೆಟ್ಟಿನ ಹಿರಿಯ ಕುಳಗಳೊಂದಿಗೆ ಒಡನಾಟವಿದ್ದ ಮಿಲಿಟರಿ ಅಧಿಕಾರಿಗಳು ಕ್ರಮೇಣ ಈ ಸೌಲಭ್ಯಗಳನ್ನು ತಮ್ಮ ವಿಧೇಯತೆಗೆ ಮತ್ತು ಸ್ವಾಮಿಭಕ್ತಿಗೆ ಪ್ರತಿಫಲವಾಗಿ ಸಿಗಲೇಬೇಕಾದ ಹಕ್ಕು ಎಂಬಂತೆ ಭಾವಿಸಿ ಅಮಾಯಕರ ಮೇಲೆ ಅಟ್ಟಹಾಸಗೈಯುವ ಮಟ್ಟಿಗೆ ಪರಿಸ್ಥಿತಿಗಳು ಬದಲಾಗಿದ್ದವು.

ಅಸಲಿಗೆ ತಮ್ಮ ಹಿಂದೆ ಇಂಥಾ ಬೆಂಬಲಗಳಿರುವುದಲೇ ಮಿಲಿಟರಿ ಅಧಿಕಾರಿಗಳು ತಮಗೆ ಬೇಕಾದಂತೆ ಧಾಂಧಲೆಗಳನ್ನು ನಡೆಸುವುದು ಸುಲಭವಾಯಿತು. ಅಂಗೋಲಾದ ಇತರ ಭಾಗಗಳಿಂದ ಒತ್ತಾಯಪೂರ್ವಕವಾಗಿ ಕಾರ್ಮಿಕರನ್ನು ತರಿಸಿಕೊಂಡು ಬಂದೂಕು ತೋರಿಸಿ ಕೆಲಸ ಮಾಡಿಸುವುದು ಸಾಮಾನ್ಯವಾಯಿತು. ವಿರೋಧಿಸಿದವರಿಗೆ ಎಂದಿನಂತೆ ಕಂಡಲ್ಲಿ ಗುಂಡು. ಟೆಲಿಸರ್ವೀಸ್ ನಂತಹ ಖಾಸಗಿ ಸೆಕ್ಯೂರಿಟಿ ಸಂಸ್ಥೆಗಳಂತೂ ಅಂಗೋಲನ್ ಆರ್ಮ್‍ಡ್ ಫೋರ್ಸಸ್ (ಎಫ್.ಎ.ಎ) ಜೊತೆ ಸೇರಿಕೊಂಡು ಹಿಂಸೆಯ ತಾಂಡವವಾಡಿಬಿಟ್ಟಿದ್ದವು. 1993 ರಲ್ಲಿ ಆರಂಭಗೊಂಡು ಅಂಗೋಲಾದ ಅತೀ ದೊಡ್ಡ ಸೆಕ್ಯೂರಿಟಿ ಸಂಸ್ಥೆಯಾಗಿ ಬೆಳೆದಿದ್ದ ಟೆಲಿಸರ್ವೀಸ್ ಸಂಸ್ಥೆಯು ಸರಕಾರದ ಕೃಪಾಕಟಾಕ್ಷದಿಂದ ಬಲು ದೊಡ್ಡ ಮಟ್ಟಕ್ಕೆ ಬೆಳೆದ ಸಂಸ್ಥೆಗಳಲ್ಲೊಂದು. ಸಂಸ್ಥೆಯ 66% ಶೇರುಗಳು ದೇಶದ ಭದ್ರತಾ ಮತ್ತು ಮಿಲಿಟರಿ ವ್ಯವಸ್ಥೆಯ ಹಿರಿಯ ಅಧಿಕಾರಿಗಳ ಕೈಗಳಲ್ಲಿದ್ದರೆ ಉಳಿದ 34% ಯಾರಿಗೆ ಸೇರಿದ್ದು ಎಂಬುದು ನಿಗೂಢ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಗಳಲ್ಲಿ ತರಬೇತಿ ಶಿಬಿರಗಳನ್ನು ಹೊಂದಿರುವ ಸಂಸ್ಥೆಯ ಪ್ರತೀ ಪೇದೆಯ ಜೇಬಿನಲ್ಲೂ ನಿಯಮಾವಳಿಗಳ ಪುಟ್ಟ ಪುಸ್ತಿಕೆಯಿರಬೇಕಿರುವುದು ಕಡ್ಡಾಯ. ಆದರೆ ಈ ನಿಯಮಾವಳಿಗಳಲ್ಲಿ ಯಾವುದು ಚಿತ್ರಹಿಂಸೆ ಮತ್ತು ಅಮಾಯಕರ ಹತ್ಯೆಗಳನ್ನು ಸಮರ್ಥಿಸುತ್ತವೆ ಎಂಬುದನ್ನು ಮಾತ್ರ ಸಂಸ್ಥೆಯೇ ಬಹಿರಂಗಪಡಿಸಬೇಕಷ್ಟೇ. ತನ್ನ ರಕ್ತಸಿಕ್ತ ಇತಿಹಾಸದ ಹೊರತಾಗಿಯೂ ಅಂಗೋಲಾ ಮತ್ತು ಇತರ ದೇಶಗಳ ಪ್ರತಿಷ್ಠಿತ ಕಂಪೆನಿಗಳಿಗಾಗಿ ನಿರಂತರವಾಗಿ ಭದ್ರತಾ ಸೇವೆ ಸಲ್ಲಿಸಿದ ಕುಖ್ಯಾತಿ ಟೆಲಿಸರ್ವೀಸ್ ಸಂಸ್ಥೆಯದ್ದು.

ಎಫ್.ಎ.ಎ ಮತ್ತು ಟೆಲಿಸರ್ವೀಸ್ ಗಳು ಸ್ವತಂತ್ರ ಸಂಸ್ಥೆಗಳಾದರೂ ಕುವಾಂಗೋದಲ್ಲಿ ಬಹುತೇಕ ಜಂಟಿಯಾಗಿಯೇ ಇವೆರಡೂ ಸಂಸ್ಥೆಗಳು ಇಲ್ಲಿಯ ವ್ಯವಸ್ಥೆಯನ್ನು ಆಳಿದವು. ಆಗಸ್ಟ್ 20, 1989 ರಂದು ನಡೆದ ನೂರಾ ಐದು ಕಾರ್ಮಿಕರ ಸಾಮೂಹಿಕ ಚಿತ್ರಹಿಂಸೆಯು ಇದಕ್ಕೊಂದು ಉತ್ತಮ ನಿದರ್ಶನ. ಅಂದು ಅಷ್ಟೂ ಕಾರ್ಮಿಕರನ್ನು ವಿವಸ್ತ್ರಗೊಳಿಸಿದ ಎಫ್.ಎ.ಎ ಎಲ್ಲರನ್ನೂ ನೆಲದಲ್ಲಿ ಮಲಗಿಸಿ, ಸೊಂಟಗಳನ್ನು ಕಟ್ಟಿ ತೀವ್ರವಾಗಿ ಥಳಿಸಿತು. ಇಷ್ಟು ಸಾಲದ್ದೆಂಬಂತೆ ಅರ್ಧರಾತ್ರಿಯ ಸುಮಾರು ಒಂದರ ಆಸುಪಾಸಿನಲ್ಲಿ ಇವರೆಲ್ಲರನ್ನೂ ಸ್ಥಳೀಯ ಟೆಲಿಸರ್ವೀಸ್ ಘಟಕಕ್ಕೆ ಎರಡನೇ ಸುತ್ತಿನ ಚಿತ್ರಹಿಂಸೆಗಾಗಿ ಹಸ್ತಾಂತರಿಸಿತು.

ಹೀಗೆ ಆ ರಾತ್ರಿ ಅಮಾನುಷವಾಗಿ ಥಳಿತಕ್ಕೊಳಗಾದವರಲ್ಲಿ ಯುವ ಸಾಮಾಜಿಕ ಕಾರ್ಯಕರ್ತನಾಗಿದ್ದ ಜೋರ್ಡಾನ್ ಅಲ್ಮೈಡಾನೂ ಒಬ್ಬ. ಈ ಘಟನೆಯ ಎರಡು ವಾರಗಳ ನಂತರ ರಾಜಧಾನಿಯಾದ ಲುವಾಂಡಾಗೆ ತೆರಳಿದ ಜೋರ್ಡಾನ್ ‘ನೋವೋ ಜರ್ನಲ್’ ಎಂಬ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಇವೆಲ್ಲವನ್ನೂ ಬಹಿರಂಗಗೊಳಿಸಿದ. ಜೊತೆಗೇ ಮೆಥಡಿಸ್ಟ್ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿಗಳೊಡನೆಯೂ ಜೊತೆಗೂಡಿ ತನ್ನ ಅನುಭವಗಳನ್ನು ಹೇಳಿಕೊಂಡ. ”ಗುಲಾಮನಾಗುವುದು ಅಂದರೇನು ಎಂಬುದು ನನಗೆ ಅಂದು ತಿಳಿಯಿತು”, ಎಂದು ಭಾವುಕನಾಗಿ ಕಣ್ಣೀರಿಟ್ಟ. ಆತನ ಮಾತುಗಳು ಒಂದಷ್ಟು ಸುದ್ದಿಯಾಗಿ ಸರಕಾರವನ್ನು ಎಚ್ಚರಿಸಿದವು. ಆದರೆ ಎಂದಿನಂತೆ ಈ ಎಲ್ಲಾ ಆರೋಪಗಳನ್ನೂ ಇಲಾಖೆಯು ತಳ್ಳಿಹಾಕಿ ತನಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ಕುಳಿತುಬಿಟ್ಟಿತ್ತು.

ಇನ್ನು ಅಂಗೋಲಾದ ಅತೀ ಹಳೆಯ ಮೈನಿಂಗ್ ಸಂಸ್ಥೆಯಾದ ಐ.ಟಿ.ಮ್ ಮೈನಿಂಗ್ ಕಂಪೆನಿಯದ್ದೂ ಇದೇ ಕಥೆ. ಆಡಳಿತಾರೂಢ ಎಂ.ಪಿ.ಎಲ್.ಎ ಪಕ್ಷದ ಜೊತೆಗೆ ಗಾಢ ಸಂಬಂಧವನ್ನು ಹೊಂದಿದ್ದ ಈ ಸಂಸ್ಥೆಯು ಭ್ರಷ್ಟಾಚಾರ, ವಂಚನೆ, ಖೊಟ್ಟಿಪತ್ರಗಳಂತಹ ಗಂಭೀರ ಅಪರಾಧಗಳ ಹಿನ್ನೆಲೆಯನ್ನು ಹೊಂದಿರುವಂಥದ್ದು. ಕೇವಲ ಐ.ಟಿ.ಎಮ್ ಮೈನಿಂಗ್ ಸಂಸ್ಥೆಯಿಂದಾಗಿಯೇ ಅಂಗೋಲಾದ ಆರ್ಥಿಕತೆಗಾದ ನಷ್ಟವು ಇನ್ನೂರು ಮಿಲಿಯನ್ ಡಾಲರ್ ಗಳಿಗೂ ಮಿಕ್ಕಿದ್ದು ಎಂದು ಹೇಳಲಾಗುತ್ತದೆ.

ಅಂಗೋಲಾ ಸರಕಾರದ ಭ್ರಷ್ಟಾಚಾರಗಳ ಬಗ್ಗೆ ಬರೆದೇ ವ್ಯವಸ್ಥೆಯ ಕೆಂಗಣ್ಣಿಗೀಡಾದ ಲೇಖಕರಾದ ರಫೆಲ್ ಮಾರ್ಕಸ್ ಮೊರಾಯಿಸ್ ಈ ಪ್ರಕರಣಗಳ ಗಂಭೀರತೆಯ ಬಗ್ಗೆ ವಿವರವಾಗಿ ದಾಖಲಿಸುತ್ತಾರೆ. ಡಿಸೆಂಬರ್ 2009 ರಲ್ಲಿ ಕುವಾಬೋದಲ್ಲಿ ನಡೆದ 45 ಕಾರ್ಮಿಕರ ಸಾಮೂಹಿಕ ಹತ್ಯೆಯ ವಿಚಾರಕ್ಕೆ ಸಂಬಂಧಪಟ್ಟಂತೆ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯ ಸಂಪಾದಕರಾದ ಮೈಕಲ್ ಅಲೆನ್ ರೊಂದಿಗೆ ಲಿಂಡಾರನ್ನು ಭೇಟಿಯಾಗುವ ಲೇಖಕರು ಆಕೆಯ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡಿರುತ್ತಾರೆ. ನಂತರ ಲುವಾಂಡಾಗೆ ಬರುವ ರಫೆಲ್ ನೇರವಾಗಿ ಎಫ್.ಎ.ಎ ಯ ಜನರಲ್ ಸ್ಟಾಫ್ ಮುಖ್ಯ ಕಚೇರಿಗೆ ತೆರಳಿ ಈ ಬಗ್ಗೆ ಅಲ್ಲಿ ಚರ್ಚಿಸುತ್ತಾರೆ. ಚರ್ಚಿಸುವ ನೆಪದಲ್ಲಿ ಪರೋಕ್ಷವಾಗಿ ಅವರಿಗೆ ಎಚ್ಚರಿಕೆಯನ್ನೂ ನೀಡುತ್ತಾರೆ. ಅಲ್ಲಿಂದ ಡಿವಿಷನ್ ಆಫ್ ಪಾಟ್ರಿಯೋಟಿಕ್ ಎಜುಕೇಷನ್ ಕಚೇರಿಗೆ ಬರುವ ರಫೆಲ್ ಧ್ವನಿಮುದ್ರಿಕೆಯನ್ನು ಹಿರಿಯ ಅಧಿಕಾರಿಗಳ ಮುಂದಿಟ್ಟು ಅವರ ಬೆವರಿಳಿಸುತ್ತಾರೆ. ಅಲ್ಲಿಯ ಅಧಿಕಾರಿಗಳು ರಫೆಲ್ ರವರ ದೂರವಾಣಿ ಸಂಪರ್ಕ ಸಂಖ್ಯೆಯನ್ನು ಪಡೆದುಕೊಂಡು ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ನಡೆಯ ಬಗ್ಗೆ ಹೇಳುತ್ತೇವೆ ಎಂಬ ಭರವಸೆಯನ್ನು ಅವರಿಗೆ ನೀಡುತ್ತಾರೆ. ಗಟ್ಟಿ ಸಾಕ್ಷ್ಯಾಧಾರಗಳನ್ನು ಹೊಂದಿದ್ದ ಈ ಪ್ರಕರಣವು ಇಷ್ಟು ಗಂಭೀರವಾಗಿದ್ದರೂ ಮೇಲೆ ಹೆಸರಿಸಿರುವ ಯಾವ ಕಚೇರಿಯೂ ಕೂಡ ಮತ್ತೆ ಲೇಖಕರನ್ನು ಸಂಪರ್ಕಿಸಲಿಲ್ಲವಂತೆ.

ಲಿಂಡಾರ ಹೇಳಿಕೆಗಳು ಮುಂದೆ ಎಪ್ರಿಲ್ 2010 ರಲ್ಲಿ ಅಂಗೋಲನ್ ಪತ್ರಿಕೆಯೊಂದರಲ್ಲೂ, ಜೂನ್ 2010 ರಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ನಲ್ಲೂ ಪ್ರಕಟವಾದವು. ಅಂಗೋಲನ್ ಮಿಲಿಟರಿ ಸಂಸ್ಥೆಯಾದ ಎಫ್.ಎ.ಎ ಎಂದಿನಂತೆ ಇವೆಲ್ಲವೂ ಕಪೋಲಕಲ್ಪಿತ ಎಂದು ಹೇಳಿ ಮೌನಕ್ಕೆ ಜಾರಿತು. ಅಂಗೋಲಾದ ಲುಂಡಾ ನಾರ್ತೆ (ಲುಂಡಾ ಉತ್ತರ) ಪ್ರೊವಿನ್ಸ್ ಸರಕಾರದಿಂದ ಅಧಿಕೃತ ಹೇಳಿಕೆಯನ್ನು ಪಡೆಯುವ ರಫೆಲ್ ರ ಯತ್ನಗಳಿಗೂ ನಿರಾಶೆಯಾಗಿತ್ತು. ಗಣಿಕಾರ್ಮಿಕನಾಗಿದ್ದ ತನ್ನ ಮಗನನ್ನು ಕಳೆದುಕೊಂಡ ನತದೃಷ್ಟ ತಾಯಿಯಾಗಿದ್ದ ಲಿಂಡಾರ ದುಃಖವು ಯಾರಿಗೂ ಬೇಕಿರಲಿಲ್ಲ. ಅಷ್ಟಕ್ಕೂ ಘಟನೆಯ ಸಂತ್ರಸ್ತರು ಹೇಳಿರುವುದು ಸುಳ್ಳು ಎಂದಾದರೆ ನಿಜಕ್ಕೂ ಅಲ್ಲಿ ನಡೆದಿದ್ದೇನು ಎಂದು ಅಧಿಕೃತವಾಗಿ ಹೇಳಿಕೆಯನ್ನು ನೀಡಲು ಸರಕಾರದ ಯಾವ ವಿಭಾಗವೂ ಮುಂದೆ ಬರದಿದ್ದ ಪರಿಣಾಮವಾಗಿ ಅಂಗೋಲಾ ಸರಕಾರದ ನಿಷ್ಕ್ರಿಯತೆ ಮತ್ತು ಜಾಣಕುರುಡು ಮತ್ತೆ ಜಗಜ್ಜಾಹೀರಾಯಿತು.

ಈ ಬಗೆಗಿನ ಬಹುತೇಕ ಎಲ್ಲಾ ಪ್ರಕರಣಗಳಲ್ಲೂ ಅಂಗೋಲಾ ಸರಕಾರವು ಗೂಬೆ ಕೂರಿಸಿದ್ದು ಗಣಿಕಾರ್ಮಿಕರ ವಿರುದ್ಧವೇ ಹೊರತು ಯಾವತ್ತೂ ಸರಕಾರದ ಅಥವಾ ಸೈನ್ಯದ ಇರುವಿಕೆಯನ್ನು ಅಧಿಕೃತವಾಗಿ ಪರಿಗಣಿಸಿಲ್ಲ. ಕಾರ್ಮಿಕರು ತಮ್ಮತಮ್ಮಲ್ಲೇ ಬಡಿದಾಡಿಕೊಂಡು ಸಾಯುತ್ತಾರೆ ಮತ್ತು ನಾವುಗಳು ಈ ಬಗ್ಗೆ ಏನೂ ಮಾಡುವಂತಿಲ್ಲ ಎಂಬುದು ಸರಕಾರದ ವಾದ. ಒಟ್ಟಿನಲ್ಲಿ ಈ ಬಗ್ಗೆ ದನಿಯೆತ್ತಿದವರ ಕಾಳಜಿಯನ್ನು ನಿರ್ದಾಕ್ಷಿಣ್ಯವಾಗಿ ಕಡೆಗಣಿಸಿದ್ದಲ್ಲದೆ ವಿಶ್ವಸಂಸ್ಥೆಯಂತಹ ಜಾಗತಿಕ ಮಟ್ಟದಲ್ಲೂ ತನ್ನ ತಪ್ಪುಗಳಿಗೆ ತೇಪೆ ಹಾಕಿಕೊಳ್ಳುವಲ್ಲಿ ಅಂಗೋಲಾ ಸರಕಾರವು ಒಂದು ಮಟ್ಟಿಗೆ ಯಶಸ್ವಿಯಾಯಿತು ಎಂಬುದರಲ್ಲಿ ಸಂದೇಹವಿಲ್ಲ.

ಅದೆಷ್ಟೋ ಅಂಗೋಲನ್ನರು ತಮಗಾದ ದೌರ್ಜನ್ಯಗಳಿಗೆ ನ್ಯಾಯ ಸಿಗಬಹುದೆಂಬ ನಿರೀಕ್ಷೆಯಲ್ಲಿ ಇನ್ನೂ ಇದ್ದಾರೆ. ದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯವಿರದಿದ್ದರೂ, ಮೂಗು ಮುಳುಗುವಷ್ಟು ಮೊಕದ್ದಮೆ-ಜೀವ ಬೆದರಿಕೆಗಳಿದ್ದರೂ, ಜೀವದ ಹಂಗು ತೊರೆದು ಸತ್ಯಗಳನ್ನು ಬಯಲುಮಾಡುವ ಭಯಾನಕ ಸಾಹಸದಲ್ಲಿ ತೊಡಗಿರುವ ರಫೆಲ್ ರಂತಹ ಸಾಹಸಿ ಪತ್ರಕರ್ತರು ಅಂಗೋಲಾದಲ್ಲಿ ಇನ್ನೂ ಸಕ್ರಿಯರಾಗಿದ್ದಾರೆ. ಆಂತರಿಕ ಯುದ್ಧದ ಅಂತ್ಯದೊಂದಿಗೆ ಅಂಗೋಲಾದ ಕೆಲ ವರ್ಗಗಳಂತೂ ನಿರಾಳತೆಯ ನಿಟ್ಟುಸಿರಿಡುವಂತಾಯಿತು. ಈ ಅದೃಷ್ಟವು ಅಂಗೋಲಾದ ಗಣಿಕಾರ್ಮಿಕರಿಗೆ ಸಿಗುವುದ್ಯಾವಾಗ ಎನ್ನುವುದೇ ಸದ್ಯದ ಬಹುದೊಡ್ಡ ಪ್ರಶ್ನೆ.

***********

‍ಲೇಖಕರು avadhi

October 2, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: