ಅಂಗೋಲಾದಲ್ಲಿ ನೀರು ಹುಡುಕುತ್ತಾ..

”ನಲ್ಲಿನೀರೆಂಬ ಮಹಾವೈಭೋಗ”

”ಅಲ್ಲಾ… ನೀವು ಇವರಿಗ್ಯಾಕೆ ನೀರನ್ನು ಕೊಡುತ್ತಿಲ್ಲ? ಇಲ್ಲಿ ವಿದ್ಯುಚ್ಛಕ್ತಿ ಬೇರೆ ಇಲ್ಲ. ಅದ್ಯಾಕೆ ನೀವು ಇವರೊಂದಿಗೆ ಮಲತಾಯಿ ಧೋರಣೆಯನ್ನು ಮಾಡುತ್ತಿದ್ದೀರಿ ಎಂದು ನನಗಂತೂ ಅರ್ಥವಾಗುತ್ತಿಲ್ಲ!”

ಹೀಗೆ ಡಾ. ಗೌರ್ ಅಂದು ನನ್ನ ಸಮ್ಮುಖದಲ್ಲೇ ಇಲ್ಲಿಯ ಸ್ಥಳೀಯ ಅಧಿಕಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡಾಗ ಮನಸ್ಸು ಭಾರವಾಗಿತ್ತು. ಸಮಾಜಶಾಸ್ತ್ರಜ್ಞರಾಗಿರುವ ಮತ್ತು ಈ ಕ್ಷೇತ್ರದಲ್ಲಿ ಬರೋಬ್ಬರಿ ನಾಲ್ಕು ದಶಕಗಳಷ್ಟು ವೃತ್ತಿ ಅನುಭವವಿರುವ ದೆಹಲಿ ಮೂಲದ ಡಾ. ಗೌರ್ ನಾವಿರುವ ಸ್ಥಳಕ್ಕೆ ಭೇಟಿ ನೀಡಿದ್ದು ಇದೇ ಮೊದಲಬಾರಿಯೇನಲ್ಲ.

ಕಳೆದ ಒಂದೂವರೆ ವರ್ಷಗಳಲ್ಲಿ ಅವರ ಮೂರು ಭೇಟಿಗಳು ಸಂಪನ್ನವಾಗಿದ್ದವು. ಪ್ರತೀಬಾರಿ ಬಂದಾಗಲೂ ಯಾವುದೇ ಸೌಲಭ್ಯಗಳಿಲ್ಲದ ಈ ಒಂದು ಬೈರೋ (ಗ್ರಾಮ) ಮಾತ್ರ ಇರುವ ಸ್ಥಿತಿಯಲ್ಲೇ ಇದ್ದಿದ್ದು ಅವರನ್ನು ಕಂಗೆಡಿಸಿರಬಹುದು. ವಿಪರ್ಯಾಸವೆಂದರೆ ತನ್ನ ನಾಲ್ಕನೇ ಭೇಟಿಯಲ್ಲೂ ಕೂಡ ಇಲ್ಲಿ ಅಂಥದ್ದೇನೂ ಬದಲಾವಣೆಯನ್ನು ಕಾಣದ ಡಾ. ಗೌರ್ ಇದೇನಪ್ಪಾ ಅವಸ್ಥೆ ಎಂದು ಚಿಂತಿತರಾಗಿದ್ದರು.

ಆದರೆ ಇದೂ ಕೂಡ ಒಂದು ರೀತಿಯಲ್ಲಿ ಅರ್ಧಸತ್ಯವೇ. ಡಾ. ಗೌರ್ ಅಂದು ನೋಡುತ್ತಿದ್ದಿದ್ದು ಪರಿಸ್ಥಿತಿಯ ಒಂದು ಮುಖವನ್ನಷ್ಟೇ. ಅಸಲಿಗೆ ಇಲ್ಲಿ ಅಧಿಕಾರಿಯದ್ದೂ, ನಮ್ಮದೂ ಸೇರಿದಂತೆ ಯಾರ ತಪ್ಪೂ ಇರಲಿಲ್ಲ. ನೀರಾವರಿ ಸೌಲಭ್ಯಕ್ಕೆಂದು ಹತ್ತು ಬೈರೋಗಳನ್ನು ಆರಿಸುವಾಗ ಯಾವುದಾದರೂ ಒಂದು ಬೈರೋ ಹತ್ತನೇ ಸ್ಥಾನದಲ್ಲಿ ಬರಲೇಬೇಕಲ್ಲವೇ? ಮೇಲಾಗಿ ತನ್ನ ಅಕ್ಕಪಕ್ಕದ ಯಾವ ಬೈರೋಗಳಲ್ಲೂ ಕುಡಿಯುವ ನೀರಿನ ಪೈಪುಗಳು ಇನ್ನೂ ಕಾರ್ಯೋನ್ಮುಖವಾಗಿಲ್ಲದ ಪರಿಣಾಮ ಆ ಬೈರೋದಲ್ಲೂ ಕುಡಿಯುವ ನೀರಿನ ಸೌಲಭ್ಯವು ಸದ್ಯಕ್ಕೆ ಆರಂಭವಾಗುವ ಯಾವ ಲಕ್ಷಣಗಳೂ ಇರಲಿಲ್ಲ. ಒಟ್ಟಾರೆಯಾಗಿ ಆ ಗ್ರಾಮದ ಜನರಿಗೆ ಸದ್ಯಕ್ಕಂತೂ ಮುಕ್ತಿಯೇ ಇಲ್ಲವೆಂಬ ಕಟುಸತ್ಯವು ಅಂದು ಡಾ. ಗೌರ್ ರವರಿಗೆ ಸ್ಪಷ್ಟವಾಗಿ ಕಾಣುತ್ತಿತ್ತು. ಹೀಗಾಗಿ ಸಹಜವಾಗಿಯೇ ಅವರು ಸಿಡಿಮಿಡಿಗೊಂಡಿದ್ದರು.

ಭಾರತವೂ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಅಭಾವದ ಪ್ರಮಾಣವು ತೀರಾ ಅಪಾಯಕಾರಿಯೆಂಬಷ್ಟು ಹೆಚ್ಚಾಗಿರುವುದು ಹೊಸ ವಿಷಯವೇನೂ ಅಲ್ಲ. ಪಿ.ಸಾಯಿನಾಥ್ ರವರ `ಪರಿ’ ತಂಡವು ಗ್ರಾಮೀಣ ಭಾರತದ ಇಂಥಾ ಸೂಕ್ಷ್ಮಗಳನ್ನು ಕಟ್ಟಿಕೊಡುತ್ತಿರುವ ಪರಿಯನ್ನು ಕಂಡು ಬೆಚ್ಚಿಬಿದ್ದ ಆರಂಭದ ದಿನಗಳು ನನಗಿನ್ನೂ ನೆನಪಿದೆ.

`ಬರ’ ಎಂದಾಗಲೆಲ್ಲಾ ಅಂದು ನಮ್ಮ ಕಣ್ಣ ಮುಂದೆ ಬರುತ್ತಿದ್ದಿದ್ದು ಬಿರುಕುಬಿಟ್ಟ, ನೀರಿನ ಪಸೆಯಿಲ್ಲದ ನೆಲ ಮತ್ತು ಅಲ್ಲೇ ತಲೆಯ ಮೇಲೆ ಕೈಹೊತ್ತು ಕುಳಿತಿರುವ ಒಬ್ಬ ಬಡಪಾಯಿ ರೈತ ಮಾತ್ರ. ಅಸಲಿಗೆ ಸಾಯಿನಾಥ್ ರವರ ಅಪರೂಪದ ಲೇಖನಗಳನ್ನು ಓದುವವರೆಗೂ ಈ ಚಿತ್ರಕ್ಕೆ ಮೀರಿದ ಭಾರತವೂ ಇದೆ ಎಂಬ ಸತ್ಯವೇ ನನಗೆ ಗೊತ್ತಿರಲಿಲ್ಲ.

ನಮ್ಮ ಮುಖ್ಯವಾಹಿನಿಯ ಮಾಧ್ಯಮಗಳಿಗೂ ಕೂಡ ಗ್ರಾಮೀಣ ಭಾರತದ ಕಥೆಗಳು ಬಿತ್ತರವಾಗಬೇಕಾದ ಸುದ್ದಿಯೆಂದು ಅನ್ನಿಸಿರಲೇ ಇಲ್ಲ. ಪಿ. ಸಾಯಿನಾಥ್ ಮತ್ತು ಅವರ ತಂಡದ ಬರಹಗಳು ಒಂದು ಪಕ್ಷ ಮಿಸ್ ಆಗುತ್ತಿದ್ದರೆ ಗ್ರಾಮೀಣಭಾರತವನ್ನು ಅರಿತುಕೊಳ್ಳುವ ಎಷ್ಟು ದೊಡ್ಡ ಅವಕಾಶವನ್ನು ನಾನು ಕಳೆದುಕೊಳ್ಳುತ್ತಿದ್ದೆ ಎಂದು ನಾನು ಈಗಲೂ ಅಂದುಕೊಳ್ಳುತ್ತಿರುತ್ತೇನೆ.

ನೀರಿನ ಸೌಲಭ್ಯಗಳ ಬಗ್ಗೆ ಅರಿತುಕೊಳ್ಳಲು ನಾನು ವೀಜ್ ನ ಮನೆಬಾಗಿಲುಗಳನ್ನು ತಟ್ಟುತ್ತಿದ್ದಾಗ ಸಿಕ್ಕ ಮಾಹಿತಿಗಳು ನನಗೆ ಗ್ರಾಮೀಣ ಭಾರತವನ್ನೇ ಮತ್ತೆ ಮತ್ತೆ ನೆನಪಿಸುತ್ತಿದ್ದವು. ಮುಂಜಾನೆಯ ಬೆಳಕು ಮೂಡುವ ಮುನ್ನವೇ ಅಗಲವಾದ ದೊಡ್ಡ ಬಕೆಟ್ಟೊಂದನ್ನು ತಲೆಯ ಮೇಲೆ ಹೊತ್ತ ಇಲ್ಲಿಯ ಮಹಿಳೆಯರು ಕುಡಿಯುವ ನೀರನ್ನು ತರಲು ಹೊರಡಬೇಕಿತ್ತು. ಈ ನೀರು ತರುವ ಕೆಲಸ ಮಾತ್ರ ಇಲ್ಲಿಯ ಮನೆಗಳಲ್ಲಿ ಮಹಿಳೆಗೇ ಮೀಸಲು.

ನೀರಿನ ಪುಟ್ಟ ಟ್ಯಾಂಕುಗಳ ಹತ್ತಿರವೇ ಇರುವ ಮನೆಗಳ ಸ್ಥಿತಿಗಳಾದರೂ ವಾಸಿ. ಆದರೆ ಉಳಿದವರು ಇದಕ್ಕಾಗಿಯೇ ಮೈಲುಗಟ್ಟಲೆ ದೂರವನ್ನು ನಡೆದುಕೊಂಡು ಕ್ರಮಿಸಿ ನೀರನ್ನು ಸಂಗ್ರಹಿಸಬೇಕು. ಕಣ್ಣಿಗೆ ರಾಚುವ ಹಳದಿ, ನೀಲಿ, ಹಸಿರು, ಕೆಂಪು ಬಣ್ಣದ ಬಕೆಟ್ಟುಗಳನ್ನು ತಲೆಯ ಮೇಲೆ ಹೊತ್ತ ಬಾಲಕಿಯರು, ತರುಣಿಯರು ಮತ್ತು ಮಹಿಳೆಯರು ಇಲ್ಲಿ ಎಲ್ಲಾ ಕಡೆಯೂ ಕಾಣಸಿಗುವುದು ಸಾಮಾನ್ಯ. ಇನ್ನು ಮಕ್ಕಳೂ ಕೂಡ ಕ್ಯಾನ್ ಗಳಲ್ಲಿ ಅಥವಾ ತಲೆಯ ಮೇಲೆ ಹೊತ್ತ ಪುಟ್ಟ ಪಾತ್ರೆಗಳಲ್ಲಿ ನೀರನ್ನು ಸಂಗ್ರಹಿಸಿ ಕೊಂಡೊಯ್ಯುವುದು ಅಂಗೋಲಾದಲ್ಲಿ ಕಾಣುವ ಸಾಮಾನ್ಯ ದೃಶ್ಯಗಳಲ್ಲೊಂದು.

ರಾಜಧಾನಿಯಾಗಿರುವ ಲುವಾಂಡಾವನ್ನೊಳಗೊಂಡಂತೆ ಶಹರಗಳಾದ ವಾಂಬೋ, ಬೆಂಗೇಲಾಗಳಲ್ಲಿ ಕೊಳವೆಗಳನ್ನು ಆಧರಿಸಿದ ನೀರು ಸರಬರಾಜು ವ್ಯವಸ್ಥೆಗಳು ಆಂತರಿಕ ಯುದ್ಧದ ನಂತರದ ದಿನಗಳಲ್ಲಿ ಬಂದರೂ ಬಂದಿರಬಹುದು. ಆದರೆ ವೀಜ್ ನಂತಹ ಪ್ರಾಂತಗಳ ಜನರು ಇಂಥಾ ಸೌಲಭ್ಯಗಳನ್ನು ಪಡೆದುಕೊಳ್ಳಲಾರಂಭಿಸಿದ್ದು ಇದೇ ಐದಾರು ವರ್ಷಗಳ ಹಿಂದೆ. ಅದರಲ್ಲೂ ವೀಜ್ ನ ಹಲವಾರು ಭಾಗಗಳಿಗೆ ಇನ್ನೂ ನಲ್ಲಿ ನೀರಿನ ವ್ಯವಸ್ಥೆಗಳು ಸರಿಯಾಗಿ ತಲುಪಿಲ್ಲ. ಪ್ರತಿನಿತ್ಯವೂ ಮೈಲುಗಟ್ಟಲೆ ನಡೆದುಕೊಂಡು ನೀರನ್ನು ಸಂಗ್ರಹಿಸಿಯೋ, ಟ್ಯಾಂಕರುಗಳಲ್ಲಿ ಬರುವ ನೀರನ್ನು ಖರೀದಿಸಿಯೋ, ನದಿಗಳನ್ನು ಪುಟ್ಟಝರಿಗಳನ್ನು ಅವಲಂಬಿಸಿಕೊಂಡೋ ಇಂದಿಗೂ ಬದುಕುತ್ತಿದ್ದಾರೆ ಇಲ್ಲಿಯ ಗ್ರಾಮಸ್ಥರು.

ಕಳೆದ ಬಾರಿ ಕಂದೊಂಬೆ ನೋವೋ ಮತ್ತು ಅನಾ ಪೌಲಾ ಗ್ರಾಮಗಳಲ್ಲಿ ಅಲ್ಲಿಯ ಸೋಬಾ (ಸರಪಂಚ್) ಸೇರಿದಂತೆ ಗ್ರಾಮದ ಹಲವು ಗಣ್ಯರನ್ನು ಭೇಟಿಯಾಗಿದ್ದ ನಾನು ಸಾರ್ವಜನಿಕ ಸಮಾರಂಭವೊಂದರಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದೆ. ಬೆರಳೆಣಿಕೆಯ ಮಾಧ್ಯಮಬಂಧುಗಳೂ ಕೂಡ ಬಂದು ಸೇರಿದ್ದರು. ಇನ್ನು ಮುಂದೆ ಕುಡಿಯುವ ನೀರು ನಿಮ್ಮ ಮನೆಯಂಗಳದ ನಲ್ಲಿಗಳಲ್ಲೇ ಬರಲಿದೆ ಎಂಬ ಮಾತುಗಳನ್ನು ಇಲ್ಲಿಯ ಊರ ಮುಖ್ಯಸ್ಥರು ಗ್ರಾಮಸ್ಥರಿಗೆ ಮನದಟ್ಟು ಮಾಡಿಕೊಡುತ್ತಿದ್ದಾಗ ಅಲ್ಲಿ ಎದ್ದ ಖುಷಿಯ ತರಂಗಗಳನ್ನು ಶಬ್ದಗಳಲ್ಲಿ ಹಿಡಿದಿಡುವುದು ಕಷ್ಟ. ವಿವಿಧ ಮೂಲಗಳಿಂದ ಕಷ್ಟಪಟ್ಟು ನೀರನ್ನು ಹೊತ್ತು ತರುತ್ತಿದ್ದ ಇಲ್ಲಿಯ ಗ್ರಾಮಸ್ಥರು ಬೇಸತ್ತಿದ್ದು ಆ ಸಂದರ್ಭದಲ್ಲಿ ಸ್ಪಷ್ಟವಾಗಿತ್ತು. “ಆದಷ್ಟು ಬೇಗ ಈ ಕೆಲಸಗಳನ್ನು ಮುಗಿಸಿ ನಮ್ಮ ಮನೆಯಂಗಳಕ್ಕೆ ನೀರು ಬರುವಂತೆ ಮಾಡಿ”, ಎಂಬ ಆಗ್ರಹವು ಅಂದು ಒಕ್ಕೊರಲಿನಿಂದ ಬಂದಿತ್ತು.

ಹಾಗೆಂದು ವೀಜ್ ಸೇರಿದಂತೆ ಅಂಗೋಲಾದ ಬಹುತೇಕ ಪ್ರದೇಶಗಳು ಬರಪೀಡಿತ ಪ್ರದೇಶಗಳೇನಲ್ಲ. ವರ್ಷಕ್ಕೆ ಏಳೆಂಟು ತಿಂಗಳುಗಳ ಕಾಲ ಪ್ರದೇಶವೊಂದು ಒಳ್ಳೆಯ ಮಳೆಯನ್ನು ಪಡೆಯುತ್ತಿದ್ದರೆ ಇಲ್ಲಿ ನೀರಿನ ಅಭಾವದ ಸಮಸ್ಯೆಗಳು ಉದ್ಭವವಾಗಲಾರದು. ಆಗಲೂಬಾರದು. ರಿಯೋ ಡಾಂಜೆ (ಡಾಂಜೆ ನದಿ) ಯಂತಹ ನದಿಮೂಲಗಳು ವೀಜ್ ಗ್ರಾಮಸ್ಥರಿಗೆ ಇಂದಿಗೂ ಜೀವಸೆಲೆಯೇ. ವ್ಯವಸ್ಥಿತವಾದ ಒಂದು ಜಲ ಸಂಸ್ಕರಣಾ ಘಟಕವೂ ವೀಜ್ ನಲ್ಲಿರುವುದರಿಂದ ಕುಡಿಯಲು ಶುದ್ಧವಾದ ನೀರು ತಕ್ಕಮಟ್ಟಿಗಾದರೂ ಇವರಿಗೆ ನಸೀಬಾಗುತ್ತಿದೆ.

ಆದರೆ ಸದ್ಯದ ನೀರಿನ ಮೂಲಗಳು ವೀಜ್ ನ ಅವಶ್ಯಕತೆಗಳನ್ನು ಸಂಪೂರ್ಣವಾಗಿ ಪೂರೈಸುವಷ್ಟು ಶಕ್ತವಾಗಿಲ್ಲ ಎಂಬುದು ಅಷ್ಟೇ ಸತ್ಯ. ಕೊಳವೆಬಾವಿಗಳು ಇಲ್ಲಿ ಇನ್ನೂ ಬಂದಿಲ್ಲದೆ ಇರಬಹುದು. ಆದರೆ ಕೊಚ್ಚಿಹೋಗುತ್ತಿರುವ ಮಳೆನೀರನ್ನು ಹಿಡಿದಿಡುವ ಯಾವ ಪ್ರಯತ್ನಗಳೂ ಆಗುತ್ತಿಲ್ಲ. ಹೀಗಾಗಿಯೇ ಇಲ್ಲಿಯ ಬಹುಪಾಲು ಜನರಿಗೆ ಮನೆಯಂಗಳದಲ್ಲಿ ನಲ್ಲಿಯೊಂದು ನೀರನ್ನು ಒದಗಿಸುವುದೆಂದರೆ ಅದು ಯಾವ ಮಹಾಸೌಲಭ್ಯಕ್ಕಿಂತಲೂ ಕೂಡ ಕಮ್ಮಿಯಿರಲಿಲ್ಲ. ಅದೆಷ್ಟು ದೊಡ್ಡಮಟ್ಟಿನ ಸಮಯ ಮತ್ತು ಶ್ರಮದ ಉಳಿತಾಯ ಇಲ್ಲಿಯ ಮಹಿಳೆಯರಿಗೆ! ಹೀಗಾಗಿ ನೀರಿನ ವಿಷಯ ಮಾತಾಡಿದಾಗಲೆಲ್ಲಾ ಅವರ ಕಂಗಳಲ್ಲಿ ಕಾಣುತ್ತಿದ್ದ ಹೊಳಪು ಸಹಜವೇ ಆಗಿತ್ತು.

”ಆಫ್ರಿಕಾದಲ್ಲಿ ನೀರಿನ ವಿಷಯಗಳು ಬಂದಾಗಲೆಲ್ಲಾ ನೀವು ಸ್ಥಳೀಯ ಮಹಿಳೆಯರನ್ನೇ ಮಾತಾಡಿಸಬೇಕು”, ಎನ್ನುವ ಡಾ. ಗೌರ್ ರವರ ಕಳಕಳಿಯು ನನಗೆ ಸಂಪೂರ್ಣವಾಗಿ ಅರ್ಥವಾಗುವಂಥದ್ದು. ಏಕೆಂದರೆ ಮುಂಜಾನೆ ಬೇಗ ಎದ್ದು ಮೈಲುಗಟ್ಟಲೆ ನಡೆದುಕೊಂಡು ಹೋಗಿ ನೀರು ತಂದು ತುಂಬಿಸುವವಳು ಅವಳು. ಅಷ್ಟು ದೂರದ ಜಾಗಗಳಿಗೆ ಮೂರರಿಂದ ನಾಲ್ಕು ಬಾರಿಯಾದರೂ ಆಕೆ ಕಾಲ್ನಡಿಗೆಯಲ್ಲೇ ಪ್ರಯಾಣಿಸಬೇಕು. ನಂತರ ಬೇಗಬೇಗನೆ ಮನೆಗೆ ಬಂದವಳೇ ಹೊಟ್ಟೆಪಾಡಿನ ಕೆಲಸಕ್ಕೆಂದು ಲಗುಬಗೆಯಿಂದ ಹೊರಡಬೇಕು.

ಕೃಷಿಯಾಗಿದ್ದರೆ ಕೃಷಿ. ಆಕೆ ಪುಟ್ಟ ವ್ಯಾಪಾರಗಳನ್ನು ನಡೆಸುವವಳಾಗಿದ್ದರೆ ತರಕಾರಿ, ಮೀನು, ಮಾಂಸ, ಹಣ್ಣುಗಳನ್ನು ಸೇರಿದಂತೆ ತನಗೆ ಬೇಕಿರುವ ಉತ್ಪನ್ನಗಳನ್ನು ಬೇಗನೇ ತರಬೇಕಾದಲ್ಲಿಂದ ತಂದು ವ್ಯಾಪಾರಕ್ಕೆ ಕೂರಬೇಕು. ಮನೆಯಲ್ಲಿ ಮತ್ತಿಬ್ಬರು ಹೆಣ್ಣುಮಕ್ಕಳಿದ್ದರೆ ಮನೆಯೊಡತಿಗೂ ಕೊಂಚ ಸಹಾಯವಾದಂತಾಗುವುದು ಸಹಜ. ಮನೆಯಲ್ಲಿರುವ ಈ ಹೆಣ್ಣುಮಕ್ಕಳು ಮಧ್ಯಾಹ್ನದ ಹೊತ್ತಿಗೆ ಮತ್ತೆ ನೀರಿಗೆಂದು ಹೊರಡುತ್ತಾರೆ. ಇದು ಸಂಜೆಯ ಮತ್ತು ರಾತ್ರಿಯ ಬಳಕೆಗಾಗಿ. ಸಿಕ್ಕರೆ ಅದೃಷ್ಟ. ಇಲ್ಲವಾದರೆ ಖಾಲಿ ಕೈ. ಸೂರ್ಯದೇವನು ನಡುಮಧ್ಯಾಹ್ನದಲ್ಲಿ ನೆತ್ತಿಯ ಮೇಲೆ ಸುಡುತ್ತಿದ್ದರೆ ಈ ಬಿಸಿಲಿನ ಝಳದಲ್ಲೂ ನೀರಿಗಾಗಿ ಅಷ್ಟು ದೂರ ಹಲವು ಬಾರಿ ಪ್ರಯಾಣಿಸುವ ಇಲ್ಲಿಯ ಮಹಿಳೆಯರನ್ನು ಕಂಡರೆ ಇವರೆಷ್ಟು ಶ್ರಮಜೀವಿಗಳು ಎನ್ನುವ ಭಾವವು ಮೂಡದಿರಲು ಸಾಧ್ಯವೇ ಇಲ್ಲ. ಇವೆಲ್ಲವುಗಳ ಮಧ್ಯೆಯೇ ಆಕೆ ಕೈಗೊಂದು ಕಂಕುಳಿಗೊಂದು ಎಂಬಂತಿರುವ ತನ್ನ ಮಕ್ಕಳ ದಂಡನ್ನೂ ಸಂಭಾಳಿಸುತ್ತಾಳೆ ಎನ್ನುವುದು ಮತ್ತೊಂದು ಗಮನಾರ್ಹ ಅಂಶ.

ಇದು ಮನೆಗಳ ಮಾತಾಯಿತು. ಇನ್ನು ನೀರಿನ ಅಭಾವವು ಶಾಲೆಗಳಂತಹ ಸ್ಥಳಗಳಲ್ಲಿ ತರುವ ಸಮಸ್ಯೆಗಳೇ ಇನ್ನೊಂದು ಬಗೆಯದ್ದು. ಕಳೆದ ಬಾರಿ ನಾನು ಡಾಕ್ ರೊಂದಿಗೆ ಈ ಬಗ್ಗೆ ಚರ್ಚಿಸುತ್ತಿದ್ದಾಗ ಅವರ ತಂಡವು ಸ್ಥಳೀಯ ಶಾಲೆಗಳಿಗೆ ಹೋಗಿ ಕೈಗಳನ್ನು ಸ್ವಚ್ಛವಾಗಿಡುವ ಬಗ್ಗೆ ಮಕ್ಕಳಿಗೆ ನೀಡುತ್ತಿರುವ ತರಬೇತಿಗಳ ಬಗ್ಗೆ ಹೇಳಿದ್ದರು. ಡಾಕ್ ಹೇಳುವಂತೆ ನದಿಯಂತಹ ಮೂಲಗಳಿಂದ ನೇರವಾಗಿ ನೀರನ್ನು ತಂದು ಉಪಯೋಗಿಸುತ್ತಿರುವ ಜನರಲ್ಲಿ ಮಲಿನ ನೀರಿನಿಂದಾಗಿ ಬರುವ ಖಾಯಿಲೆಗಳು ಸಾಮಾನ್ಯವಂತೆ. ಬಟ್ಟೆ ಒಗೆಯುವುದು, ಸ್ನಾನ ಮಾಡುವುದರಿಂದ ಹಿಡಿದು ಎಲ್ಲಾ ಬಗೆಯ ಕ್ರಿಯೆಗಳನ್ನು ಈ ನೀರಿನಲ್ಲೇ ಮಾಡುವುದಲ್ಲದೆ ಇದೇ ನೀರನ್ನು ಕುಡಿಯುವುದಕ್ಕಾಗಿಯೂ ಬಳಸುತ್ತಿದ್ದ ಪರಿಣಾಮವಾಗಿ ಖಾಯಿಲೆಗಳ ಪ್ರಮಾಣವೂ ಹೆಚ್ಚಿತ್ತು.

ಇಂಥಾ ಅನುಭವಗಳನ್ನು ನಾನು ಸ್ವತಃ ಗ್ರಾಮಸ್ಥರಿಂದಲೂ ಕೇಳಿ ತಿಳಿದುಕೊಂಡಿದ್ದೆ. ನನ್ನ ಅನುಭವದ ಮಟ್ಟಿನಲ್ಲಂತೂ ಹತ್ತರಲ್ಲಿ ಎರಡರಷ್ಟು ಮನೆಗಳು ಮಾತ್ರ ಕುದಿಸಿ ಆರಿಸಿದ ನೀರನ್ನು ಕುಡಿಯುತ್ತಿದ್ದರು. ಉಳಿದವರು ಇದ್ದಿಲು, ಕಟ್ಟಿಗೆಗಳನ್ನು ಕೊಂಡು ತಂದು ಒಲೆ ಹಚ್ಚುವಷ್ಟು ಸ್ಥಿತಿವಂತರಾಗಿರಲಿಲ್ಲ. ತಂದ ಒಂದಿಷ್ಟು ಇದ್ದಿಲನ್ನು ಅವರು ಅಡುಗೆಗಾಗಿ ಮಾತ್ರ ಬಳಸುತ್ತಿದ್ದರು. ಹೊಟ್ಟೆನೋವಿನಂತಹ ಸಮಸ್ಯೆಗಳು ಇವರುಗಳಿಗೆ ಆಗಾಗ ಬರುವುದು ಸಾಮಾನ್ಯವೆಂಬ ಮಾಹಿತಿಗಳೂ ಕೂಡ ಗ್ರಾಮಸ್ಥರೊಂದಿಗಿನ ನನ್ನ ಮಾತುಕತೆಗಳಲ್ಲಿ ಹೊರಬಿದ್ದಿದ್ದವು.

ಇನ್ನು ಕಳ್ಳಕಾಕರ ಸಮಸ್ಯೆಯಂತಹ ವಿಚಿತ್ರ ಸಮಸ್ಯೆಗಳಿಂದ ಸ್ಥಳೀಯರ ಸ್ಥಿತಿಯು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿರುವುದೂ ಕೂಡ ಸತ್ಯವೇ. ಇತ್ತೀಚೆಗೆ ಕೊಳವೆಯಾಧಾರಿತ ಕುಡಿಯುವ ನೀರಿನ ವ್ಯವಸ್ಥೆಯು ಹೊಸದಾಗಿ ಬಂದ ನಂತರ ಶುರುವಾದ ವಿಲಕ್ಷಣ ತಂಟೆಯಿದು. ಅದೇನೆಂದರೆ ನೀರಿನ ಬಳಕೆಯ ಬಗ್ಗೆ ಲೆಕ್ಕವಿಡಲು ಅಳವಡಿಸಲಾಗಿದ್ದ ಮೀಟರ್ ಗಳನ್ನು ಒಂದೋ ಕಳ್ಳಕಾಕರು ಕದಿಯುತ್ತಿದ್ದರು ಅಥವಾ ಕಿಡಿಗೇಡಿಗಳು ಅದನ್ನು ಅಷ್ಟಿಷ್ಟು ನಾಶಪಡಿಸಿ ಮಾಯವಾಗುತ್ತಿದ್ದರು. ಗ್ರಾಮದ ಸಾಮಾನ್ಯ ನಾಗರಿಕನೊಬ್ಬನಿಂದ ಹಿಡಿದು ಜಲ ಇಲಾಖೆಯ ಸ್ಥಳೀಯ ಕಾರ್ಯಾಲಯದವರೆಗೂ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ಇದನ್ನು ಹತ್ತಿಕ್ಕಲು ಪ್ರಯತ್ನಗಳು ನಡೆಯುತ್ತಲೇ ಇವೆ. ಈ ಬಗ್ಗೆ ಊರ ಪ್ರತಿನಿಧಿಗಳೊಂದಿಗೆ ಚರ್ಚೆಗಳಾಗುತ್ತಿವೆ. `ಇದು ನಿಮ್ಮ ಸ್ವತ್ತು. ಇದನ್ನು ಸುರಕ್ಷಿತವಾಗಿರಿಸುವುದು ನಿಮ್ಮ ಜವಾಬ್ದಾರಿ’, ಎಂಬ ಸಂದೇಶವನ್ನು ಇಲಾಖೆಯಿಂದ ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನಗಳೂ ಇಲ್ಲಿ ನಡೆಯುತ್ತಿವೆ.

ನಮ್ಮಲ್ಲಿಗೆ ಅತಿಥಿಯಾಗಿ ಬಂದಿದ್ದ ಸಮಾಜಶಾಸ್ತ್ರಜ್ಞರೊಂದಿಗೆ ಒಂದು ದಿನ ನಾನು ಇಲ್ಲಿಯ ಗ್ರಾಮವೊಂದರ ಮನೆಗೆ ತೆರಳಿ, ನೀರಿನ ಮೀಟರ್ ಅನ್ನು ಹುಡುಕುತ್ತಾ ಎಲ್ಲಿದೆಯಪ್ಪಾ ಎಂದು ಮನೆಯವರಲ್ಲಿ ಕೇಳಿದ್ದೆ. ಸಾಮಾನ್ಯವಾಗಿ ಒಂದೋ ಇವುಗಳನ್ನು ಮನೆಯ ಗೋಡೆಗಂಟಿಕೊಂಡೇ ಇರುವಂತೆ ಹೊರಭಾಗದಲ್ಲಿ ಅಳವಡಿಸಲಾಗುತ್ತದೆ ಅಥವಾ ಆ ದೊಡ್ಡದಾದ ಆಯತಾಕಾರದ ಕಾಕ್ರೀಟ್ ಡಬ್ಬವನ್ನೇ ಮನೆಯೆದುರು ಪ್ರತ್ಯೇಕವಾಗಿ ತಳಪಾಯವನ್ನೆಲ್ಲಾ ಮಾಡಿಸಿ ವ್ಯವಸ್ಥಿತವಾಗಿ ಅಳವಡಿಸಿರಲಾಗುತ್ತದೆ. ಒಟ್ಟಾರೆಯಾಗಿ ಇಷ್ಟು ದೊಡ್ಡ ಕಾಂಕ್ರೀಟ್ ಚೌಕಗಳು ಕಣ್ಣಿಗೆ ಬೀಳದಿರುವುದಕ್ಕೆ ಮಾತ್ರ ಸಾಧ್ಯವೇ ಇಲ್ಲ.

ಆದರೆ ಅಂದು ನನಗೆ ಆ ಮನೆಯ ನೀರಿನ ಮೀಟರ್ ಡಬ್ಬವು ಕಂಡೇ ಇಲ್ಲವಾದ ಪರಿಣಾಮವಾಗಿ ಸಹಜವಾಗಿಯೇ ಮನೆಯ ಸದಸ್ಯನೊಬ್ಬನಲ್ಲಿ ಕೇಳಿದ್ದೆ. ನನ್ನ ಮಾತನ್ನು ಕೇಳಿ ಸಾವಧಾನವಾಗಿ ಹೊರಬಂದ ಆತ ಅಲ್ಲೇ ಎಡಭಾಗದಲ್ಲಿದ್ದ ಕಲ್ಲುಗಳ ರಾಶಿಯೊಂದನ್ನು ತೋರಿಸಿದ್ದ. ನಂತರ ಆತ ಬೊಟ್ಟುಮಾಡಿದ್ದ ಜಾಗವನ್ನು ಸೂಕ್ಷ್ಮವಾಗಿ ನೋಡಿದರೆ ಈ ಕಾಂಕ್ರೀಟ್ ಡಬ್ಬವು ಸಂಪೂರ್ಣವಾಗಿ ಆವರಿಸುವಂತೆ ದೊಡ್ಡ ದೊಡ್ಡ ಕಲ್ಲುಗಳನ್ನಿರಿಸಿ ಅದನ್ನು ಬಚ್ಚಿಡಲಾಗಿತ್ತು.

ಪಕ್ಕದ ಮನೆಯವರು ಪುಟ್ಟ ದಿಮ್ಮಿ ಮತ್ತು ಕಟ್ಟಿಗೆಯ ರಾಶಿಗಳನ್ನಿಟ್ಟು ಅಷ್ಟು ದೊಡ್ಡ ಕಾಂಕ್ರೀಟ್ ಚೌಕಗಳನ್ನು ಮುಚ್ಚಿದ್ದರು. ಒಟ್ಟಾರೆಯಾಗಿ ದೂರದಿಂದ ಈ ಮನೆಗಳನ್ನು ನೋಡುವ ಖದೀಮರಿಗೆ ಇಲ್ಲಿ ಕಲ್ಲಿನ ಅಥವಾ ಕಟ್ಟಿಗೆಯ ರಾಶಿಯಷ್ಟೇ ಕಂಡು ಕಾಂಕ್ರೀಟ್ ಚೌಕವು ಕಾಣದೆ ಮರಳುವ ಸಾಧ್ಯತೆಗಳೇ ಹೆಚ್ಚಿದ್ದವು. ಇದನ್ನು ನೋಡಿ ಚಕಿತರಾಗಿ ನಾವು ನಕ್ಕಿದ್ದೂ, ನಮ್ಮನ್ನು ನೋಡಿ ಮನೆಯವರು ನಕ್ಕಿದ್ದೂ ಆಯಿತು.

ಆದರೆ ಅದೇ ಬೈರೋದ ಮತ್ತೊಬ್ಬ ಬುದ್ಧಿವಂತ ಮಾತ್ರ ಬೇರೆಯದೇ ತಂತ್ರವನ್ನು ಅನುಸರಿಸಿದ್ದ. ಮನೆಯ ಗೋಡೆಗಂಟಿಕೊಂಡಿರುವಂತೆ ಅಳವಡಿಸಲಾಗಿದ್ದ ಆ ಕಾಂಕ್ರೀಟ್ ಚೌಕದ ಸುತ್ತಲೂ ಆತ ಲೋಹದ ಸರಳುಗಳನ್ನು ಭದ್ರವಾಗಿ ಅಳವಡಿಸಿ ಬೀಗಹಾಕಿದ್ದ. ಬೂದುಬಣ್ಣದ ಕಾಂಕ್ರೀಟ್ ಚೌಕವು ಲೋಹದ ಪಂಜರದೊಳಗಿರುವ ಪ್ರಾಣಿಯಂತೆ ನೋಡಲು ತಮಾಷೆಯಾಗಿ ಕಾಣುತ್ತಿತ್ತು.

”ಇವನ ಮಹಾತಲೆಗೊಂದು ಅವಾರ್ಡು ಕೊಡಲೇಬೇಕು”, ಎಂದು ನಗುತ್ತಾ ಅಂದು ನಾವು ಮುನ್ನಡೆದಿದ್ದೆವು.

‍ಲೇಖಕರು avadhi

May 1, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: