-ಕಮಲಾಕರ ಕಡವೆ
೧ .ಅಮ್ಮನ ಜಡೆಯಲ್ಲಿ ಸಿಕ್ಕಿಬಿದ್ದ ಕಾಗೆ
ಶಬ್ದಕ್ಕೆ ಸಿಗದ ಸಂಕಟಗಳ ಉಬ್ಬರದಿಂದ
ಎದ್ದೆದ್ದು ಅಬ್ಬರಿಸುವ ಅಲೆಗಳಿಗೆ
ತೀರದ ಒಡಲಿಗೆ ಇರಿದಿರಿದು ಇರಿವ ಜೋರು;
ಸಣ್ಣ ಸಣ್ಣ ಬದುಕುಗಳ ಗೂಡುಗಳು
ಹಲ್ಲುಕಚ್ಚಿ ಕೂತಿವೆ ಬಿರುಗಾಳಿಯ ಎದುರು.
ಈ ನೆನಪುಗಳೋ ಹಬ್ಬಿವೆ
ಕೊನೆಮೊದಲಿಲ್ಲದ ರಹದಾರಿಗಳ ಜಾಲದಂತೆ;
ಈ ಬಹುರೂಪಿ ಕಾಲನಿಗೋ ದಾರಿ ನೂರಾರು.
ಆದರೂ, ಕಾಲವಾಗುವುದೇನೂ ದುರಂತವಲ್ಲ,
ಬದುಕುವಷ್ಟು.
ಮರಳುವ ಮಾತೇ ಆಡದೆ
ನದಿಯಲ್ಲಿ ಹರಿದು ಹೋಗುತ್ತಿದೆ ನೀರು;
ಮರಳಿ ಮರಳಿ ಬೆಟ್ಟಕ್ಕೆ ಗುದ್ದುತ್ತಿದೆ ಗಾಳಿ;
ನಕ್ಷತ್ರಗಳಿಗೆ ನೆಲದ ದಾರಿ ತೋರಿಸಿವೆ ಮಿಂಚು ಹುಳಗಳು.
ಎಲ್ಲ ಬೆಳಕುಗಳ ನಡುವೆ ಜಾಗರವಿರುವ ಶಾಪಕ್ಕೆ
ಊರಿಗೂರೇ ಕಂಪಿಸಿದೆ.
ಹಾಡುಗಳ ಜರಡಿಯಲ್ಲಿ ಸೋಸಿ ಸೋಸಿ
ಅಮ್ಮ ಬೇಯಿಸಿದ್ದಾಳೆ ಹಗಲು ರಾತ್ರಿಗಳನ್ನು;
ಅವಳ ಜಡೆಯಲ್ಲಿ ಸಿಕ್ಕಿಬಿದ್ದ ಪುರಾತನ ಕಾಗೆಯೊಂದು
ಕರೆದಿದೆ ಕಾಕಾ ಎಂದು ವ್ಯವಧಾನವೇ ಇಲ್ಲದಂತೆ.
ನರ್ತಿಸುವ ಜೇನಿನಂತೆ,
ರಾಸಾಯನಿಕಗಳ ಸ್ಫುರಿಸುವ ಎಲೆಗಳಂತೆ,
ಘೀಳುಡುವ ಒಂಟಿ ಸಲಗದಂತೆ,
ಆಕಾಶದ ತುಂಬೆಲ್ಲ ತುಂಬಿದೆ ಸಂಕೇತಗಳು.
ಕಳೆದು ಹೋದ ಭಾಷೆಯೊಂದರ ಹುಡುಕಾಟ
ನಡೆಸಿದೆ ಕವಿತೆ.
**
೨ .ಅಂಗೈಯಗಲದ ಮೋಡ
ಅಂಗೈಯಗಲದ ಮೋಡ
ಇಡೀ ಸೂರ್ಯನನ್ನು ಮರೆ ಮಾಚಿದೆ
ಅಂಗಳದಲ್ಲಿ ನಡುರಾತ್ರಿ
ಅಗೋಚರ ನಾಯಿಯ ಎದೆಯೊಡೆವ ಬೊಗಳಿಕೆ
ಹನಿ ಹನಿ ಮಳೆ
ಹಗೂರ ಹಬ್ಬಿಸುತ್ತಿದೆ ಗೋಡೆಯುದ್ದಕ್ಕೆ ತೇವ
ಹೊಸಹುಟ್ಟಿಗೆ ಕಾರಣವಾಗುತ್ತ
ಸಾವಿನ ಗೂಡು ಸೇರಿದೆ ಗಂಡು ಜೇನು
ಕಪ್ಪುಗಟ್ಟಿದ ಬಾನಿನಡಿಯಲ್ಲಿ
ಸಾಲುಸಾಲು ಹೊಳೆದಿವೆ ಬೆಳ್ಳಕ್ಕಿಗಳು
ಅವನ ಒಂಟಿತನದ ಸುತ್ತಲಿನ ವಿಸ್ತೃತ ಪ್ರಪಂಚ
ಒದಗಿಸಿದೆ ಅಪಾರ ಅರ್ಥ-ಸಂಕೇತಗಳನ್ನು ಅವನ ಕವಿತೆಗೆ.
**
೩ .ಅತೃಪ್ತನ ಸಾಲುಗಳಲ್ಲಿ ಸುಸಂಬದ್ಧ ಸುಳುಹು
ಅಪಾರ ಕರುಣೆಯಿಂದ ಮರ ನೋಡುತ್ತಿದೆ
ನೆರಳಿಲ್ಲದ ಅವನ ಮೈಯನ್ನು.
ನೆಕ್ಕಿ ನೆಕ್ಕಿ ಕರುವಿನ ದೇಹಕ್ಕೆ ಬಲವುಣ್ಣಿಸುವ ಆಕಳಿನಂತೆ
ತಿಳಿಗಾಳಿ ಸೋಕಿದೆ ಅವನ ರೋಮರೋಮವನ್ನು.
ವಾಲ್ಟ್ ವಿಟ್ಮನ್ನನ ಜೇಡದ ಹಾಗೆ
ಕಾಗದದೆದುರು ಕುಳಿತು ಕಾದಿದ್ದಾನೆ ಕವಿ
ಎದೆಯೊಳಗಿನ ಅಕ್ಷರಕ್ಕೆ ಅರ್ಥದ ಮೆರುಗು ಮೂಡಿಸಲು.
ಎಲ್ಲಿಯೋ ಯುದ್ಧ, ಎಲ್ಲಿಯೋ ಸಾವುನೋವು,
ಎಲ್ಲಿಯೋ ಇತಿಹಾಸದ ನಮೂದು.
ಎಲ್ಲ ಬೇರುಗಳೂ ಎಲ್ಲಿಯೋ ಸಂಧಿಸಿವೆ
ಅವನ ಕವಿತೆಯೊಂದಕ್ಕೆ ರವಾನಿಸುತ್ತ ಸಂಕೇತಗಳನ್ನು.
ಬ್ಲೇಕನ ಹುಲಿಯೋ, ಡಾಂಟೆಯ ನರಕವೋ,
ಯೇಟ್ಸನ ಗಿರಿಗಿರಿ ಸುರುಳಿಯೋ,
ದೂತನಾದ ಮೋಡವೋ, ಮಣ್ಣಿನ ಬಂಡಿಯೋ,
ಹೆಣದ ಬಟ್ಟೆಯೋ, ಕಾಬೂಲಿವಾಲನೋ,
ಜೋಗಿಯೋ, ನಾಯಿಗುತ್ತಿಯೋ, ಜಪ್ತಿಗೆ ಸಿಗದ ನವಿಲುಗಳೋ,
ಕೋಳಿ ನುಂಗಿದ ಕೋಡಗನೋ, ನಕ್ಷತ್ರ ಯಾತ್ರಿಕನೋ,
ಧೋ ಎಂದು ಧಾರಾಕಾರ ಸುರಿದಿವೆ
ಅವನ ನುಡಿಗಟ್ಟೊಳಗೆ ಒಳಾರ್ಥಗಳನ್ನು.
ಬಗೆ ಬಗೆಯ ಗಿಡ, ಮರ, ಬಳ್ಳಿ, ಬೇರುಗಳಿಂದ
ಹೆಕ್ಕಿತಂದ ಮಸಾಲೆಗಳೆಲ್ಲ
ಅಡುಗೆಯವನ ಕೈಯ ಜಾದೂವಿಗೆ ಓಗೊಟ್ಟು
ಹುಟ್ಟಿಸಿದ ರುಚಿಯ ರಸ
ಹೊಮ್ಮಿದೆ ಅವನ ಅತೃಪ್ತ ಸಾಲುಗಳಲ್ಲಿ ಸುಸಂಬದ್ಧ ಸುಳುಹು.
ಇಡೀ ವಿಶ್ವವೇ ಕಾದಿದೆ ಹೊಕ್ಕಲು
ಒಂದು ಕವಿತೆಯೊಳಗಿನ ವಾಗರ್ಥವಾಗಿ.






ಸೊಗಸಾದ ಚಿತ್ರಣಗಳು ಕಮಲಾಕರ
What images you conjure, Dada … waah … ಅತೃಪ್ತನ ಸಾಲುಗಳಲ್ಲಿ ಸುಸಂಬದ್ಧ ಸುಳುಹು, I liked the best …