ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂಗನವಾಡಿ ತಾಯಂದಿರ ವೇತನದ ರಾಜಕೀಯ, ಅರ್ಥಶಾಸ್ತ್ರ,

 ಜಿ ಎನ್ ನಾಗರಾಜ್ 

ವಿಧಾನ ಸಭೆಯಲ್ಲಿ ಚರ್ಚೆ, ಮುಖ್ಯಮಂತ್ರಿಗಳ ಉತ್ತರದ ನಂತರ ಬಹಳ ಚರ್ಚೆ ನಡೆಯುತ್ತಿದೆ. ವೇತನ ಚರ್ಚೆಯ ಬಗ್ಗೆ ಕೆಲ ಅಂಶಗಳು.

* ಈ ಯೋಜನೆಯನ್ನು ಪೂರ್ವ ಪ್ರಾಥಮಿಕ ಶಿಕ್ಷಣದ ಒಂದು ಸಾಧನವಾಗಿ, ಅದರ ಜೊತೆಗೆ ಶಿಶು ಅಭಿವೃದ್ಧಿಯನ್ನು ಮೇಳವಿಸಿ ಒಂದು ಪೂರ್ಣ ಪ್ರಮಾಣದ ಯೋಜನೆಯಾಗಿ ಮಾಡದೆ ಕೇವಲ ಅಲ್ಪ ಸಮಯದ ಗೌರವಧನದ ಕೆಲಸವಾಗಿ ಪರಿಗಣಿಸಿದ್ದು ಅಂದಿನ ಕಾಂಗ್ರೆಸ್ ಕೇಂದ್ರ ಸರ್ಕಾರದ ಮೂಲ ಅಪರಾಧ.

* ಮುಂದೆ ಕೆಜಿ- ಕಿಂಡರ್ ಗಾರ್ಟನ್ ಶಿಕ್ಷಣ ಪ್ರಾಮುಖ್ಯತೆ ಪಡೆದುಕೊಂಡ ಮೇಲೂ ಮುಂದಿನ ಯಾವ ಕೇಂದ್ರ ಸರ್ಕಾರವೂ ಇದನ್ನು ಮಾರ್ಪಡಿಸದಿದ್ದದ್ದು ಬಡ ಮಕ್ಕಳ ಶಿಕ್ಷಣದ ಮೇಲಿನ ಅಲಕ್ಷ್ಯ ಮತ್ತು ಧಾಳಿ.

* ೧೯೫೭ ರ ಪ್ರಥಮ ಕಮ್ಯೂನಿಸ್ಟ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಕಮ್ಯೂನಿಸ್ಟ್ ಪಕ್ಷ, ನಂತರ ೧೯೬೭ ರಲ್ಲಿ ತಮಿಳುನಾಡಿನ ಡಿಎಂಕೆ, ೧೯೮೩ ರ ನಂತರ ಕರ್ನಾಟಕದ ಜನತಾ ಪಕ್ಷ, ಆಂಧ್ರದ ತೆಲುಗುದೇಶಂ ಮೊದಲಾದ ಎಂಟು ರಾಜ್ಯ ಸರ್ಕಾರಗಳು , ಕಾಂಗ್ರೆಸ್, ಬಿಜೆಪಿ ಹೊರತಾಗಿ ಇತರೆಲ್ಕ ರಾಜಕೀಯ ಪಕ್ಷಗಳು ಜ್ಯೋತಿ ಬಸುರವರ ನೇತೃತ್ವದಲ್ಲಿ ಮಾಡಿದ ಒಕ್ಕೊರಲ ಒತ್ತಾಯ – ರಾಜ್ಯಗಳಿಗೆ ದೇಶದ ತೆರಿಗೆ ಸಂಪನ್ಮೂಲದಲ್ಲಿ ಶೇಕಡಾ ೭೫ ಭಾಗ ರಾಜ್ಯಗಳಿಗೆ ನೀಡಬೇಕು. ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಸಂಪನ್ಮೂಲಗಳ ಜೊತೆಗೆ ರಾಜ್ಯಗಳಿಗೆ ವರ್ಗಾಯಿಸಬೇಕು ಎಂದು . ಅದನ್ನುಕಾಂಗ್ರೆಸ್ ಕೇಂದ್ರ ಸರ್ಕಾರ ತಿರಸ್ಕರಿಸಿತು.

* ಇತ್ತೀಚೆಗೆ ಜಾಗತೀಕರಣ ತಂದ ಕಾಂಗ್ರೆಸ್ ಹಾಗೂ ನಂತರದ ಬಿಜೆಪಿ ಸರ್ಕಾರಗಳು ರಾಜ್ಯ ಸರ್ಕಾರಗಳ ಅಧಿಕಾರ, ಸಂಪನ್ಮೂಲಗಳ ಮೇಲೆ ನಿತ್ಯ ಧಾಳಿ ನಡೆಸುತ್ತಾ ಬಂದಿವೆ. ೧೯೯೬ ರ ಸಂಯುಕ್ತ ರಂಗ ಸರ್ಕಾರ ಬಹಳ ಸ್ವಲ್ಪ ಮಾತ್ರ ಉತ್ತಮ ಪಡಿಸಲು ಪ್ರಯತ್ನಿಸಿತು.

* ಈಗಿನ ಮೋದಿ ಬಿಜೆಪಿ ಸರ್ಕಾರ ರಭಸದಿಂದ ರಾಜ್ಯಗಳ ಸಂಪನ್ಮೂಲಗಳನ್ನು ಕಸಿದುಕೊಳ್ಳುತ್ತಿದೆ. ಅದರ ಫಲವೇ ೯೦: ೧೦ ಪ್ರಮಾಣವನ್ನು ೬೦:೪೦ ಭಾಗವನ್ನಾಗಿ ಪರಿವರ್ತಿಸಿದ್ದು. ನೀತಿ ಆಯೋಗ ರದ್ದು , ಸರ್ವ ಶಿಕ್ಷಣ ಅಭಿಯಾನ ಮೊದಲಾದ ಅನೇಕ ಯೋಜನೆಗಳಲ್ಲಿ ಕಡಿತ ಮಾಡಿದೆ.

* ಇಂದು ದೊಡ್ಡ ಗದ್ದಲ ಮಾಡುತ್ತಿರುವ ರಾಜ್ಯದ ಬಿಜೆಪಿ ನಾಯಕರು, ಸಂಸದರು ಒಮ್ಮೆಯೂ ಈ ಯಾವ ಬಗ್ಗೆಯೂ ದನಿಯೆತ್ತಲಿಲ್ಲ.

* ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರ ತಕ್ಷಣವೇ ದೃಢವಾಗಿ, ಬಲವಾಗಿ ವಿರೋಧಿಸಲಿಲ್ಲ. ಜನರಿಗೆ ಈ ಬಗ್ಗೆ ಸಾರಿ ಹೇಳಲಿಲ್ಲ . ಕೇಂದ್ರ ಸರ್ಕಾರಕ್ಕೆ ನಿಯೋಗಗಳನ್ನು ಕೊಂಡೊಯ್ದು ಪ್ರತಿಭಟಿಸಲಿಲ್ಲ . ರಾಷ್ಟ್ರೀಯ ಅಭಿವೃದ್ಧಿ ಪರಿಷತ್ತಿನ ಸಭೆಗಳಲ್ಲಿ ಪ್ರಬಲ ದನಿಯೆತ್ತಲಿಲ್ಲ. ರಾಜ್ಯದ ಜನತೆಯನ್ನು ಕೂಡ ಈ ಬಗ್ಗೆ ಹೋರಾಟಕ್ಕೆ ಇಳಿಸಬಹುದಾಗಿತ್ತು . ಇಳಿಸಲಿಲ್ಲ.

* ಇದರ ಅರ್ಥ ರಾಜ್ಯ ಸರ್ಕಾರ ಕೇಂದ್ರದ ಈ ಹೇರಿಕೆಯನ್ನು ಒಪ್ಪಿಕೊಂಡಿದೆ ಎಂದೇ ಅರ್ಥ. ಈ ಮೌನ ಒಪ್ಪಿಗೆ ನೀಡಿದ ಮೇಲೆ ಅದರಂತೆ ರಾಜ್ಯ ಸರ್ಕಾರವೇ ಹೊಣೆಯನ್ನು ಹೊರಬೇಕು.

* ಕಮ್ಯೂನಿಸ್ಟ್ ನೇತೃತ್ವದ ಎಡರಂಗ ಸರ್ಕಾರಗಳು ನಿರಂತರವಾಗಿ ಈ ಬಗ್ಗೆ ಪ್ರಬಲ ದನಿಯೆತ್ತಿವೆ. ಅಖಿಲ ಭಾರತ ಕಾರ್ಮಿಕ ಮುಷ್ಕರಗಳ ಒಂದು ಮುಖ್ಯ ಒತ್ತಾಯಗಳಲ್ಲಿ ಅಂಗನವಾಡಿಗಳಿಗೆ ಹಣ ಕಡಿತವೂ ಸೇರಿದೆ. ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಿಯೂ ಒಮ್ಮೆಯೂ ಈ ಪ್ರಯತ್ನಗಳನ್ನು ಬೆಂಬಲಿಸಲಿಲ್ಲ‌ .

* ಆದರೂ ಕೇರಳ ಎಡರಂಗ ಸರ್ಕಾರ ಅಂಗನವಾಡಿ ನೌಕರರ ವೇತನ ೧೦,೦೦೦ ನೀಡುವುದರಲ್ಲಿ ವ ಪಡಿತರದಲ್ಲಿ ಅಕ್ಕಿ ಜೊತೆಗೆ ಬೇಳೆ, ಬೇಳೆಕಾಳುಗಳು, ಎಣ್ಣೆ, ಮೆಣಸಿನಕಾಯಿ ಮೊದಲಾದ ಅನೇಕ ಅಗತ್ಯ ವಸ್ತುಗಳನ್ನು ನೀಡುವುದರಲ್ಲಿ, ಮಾಸಿಕ ವೇತನಗಳನ್ನು ೧೦೦೦ ರೂಗಿಂತ ಹೆಚ್ಚಿಸುವುದರಲ್ಲಿ ( ರಾಜ್ಯದಲ್ಲಿ ಕೇವಲ ೫೦೦ ) ಕೇಂದ್ರದ ಮೇಲೆ ಹೊಣೆ ಹಾಕುತ್ತಾ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ.

* ಕರ್ನಾಟಕಕ್ಕಿಂತ ಬಹಳ ಕಡಿಮೆ ಬಜೆಟ್ ಇರುವ ಕೇರಳದಲ್ಲಿ ಅಂಗನವಾಡಿಯವರಿಗೆ , ಇತರೆಲ್ಲಾ ದುಡಿವ ಜನರಿಗೆ , ಬಡ ಜನರಿಗೆ ಇರುವ ಪಾಲು ಕರ್ನಾಟಕ ಬಜೆಟ್ ನಲ್ಲಿ ಏಕಿಲ್ಲ ?

ಕರ್ನಾಟಕದಲ್ಲಿ ಇರುವ ಹೆಚ್ಚಿನ ಸಂಪನ್ಮೂಲವನ್ನು ಬಳಸಿ ಹೆಚ್ಚು ಆದಾಯ ಏಕೆ ಪಡೆದುಕೊಳ್ಳುತ್ತಿಲ್ಲ.?

ಈ ಪ್ರಶ್ನೆಗಳನ್ನು ಎತ್ರಬೇಕಾಗಿದೆ. ಅಂಗನವಾಡಿಯ ತಾಯಂದಿರಿಗೆ ನ್ಯಾಯ ಸಲ್ಲಿಸಿ. ಕನಿಷ್ಠ ೧೦,೦೦೦ ರೂ ನೀಡಬೇಕು .
ಕರ್ನಾಟಕ ರಾಜ್ಯ ಸರ್ಕಾರ , ಮೋದಿ ಸರ್ಕಾರ ರಾಜ್ಯ ಸರ್ಕಾರಗಳ ಅಧಿಕಾರ ಕಸಿದುಕೊಳ್ಳುವ ಪ್ರಯತ್ನಗಳ ವಿರುದ್ಧ ಪ್ರಬಲ ದನಿಯೆತ್ತಲಿ. ಹೋರಾಟ ಮಾಡಲಿ. ನಾವೆಲ್ಲ ಬೆಂಬಲಿಸೋಣ.

‍ಲೇಖಕರು avadhi

24 March, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading