ಅಂಗಡಿಗಳು ಊರಿನಲ್ಲಿ ಅರಳಿ ಹೊರಳಿದ್ದು

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. 

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು. 

‘ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

“ದೇವರ ಪೆಪ್ಪರಮಂಟೇ ನಮ್ಮ ಗಗನದೊಳಲೆಯುವ ಚಂದಿರನು” ಮಕ್ಕಳ ಪದ್ಯದ ಸಾಲೊಂದು ಸದಾ ಜೊತೆಗಿರುತ್ತದೆ. ಬಣ್ಣಗಳು ಅನೇಕ ಸಲ ಬವಣೆಗಳಾಗಿ ಬಿಡುತ್ತವೆ. ಕೆಲವೊಮ್ಮೆ ಮುಗುದ ಕುತೂಹಲದೊಳಗಿನ ಅಪಾಯಗಳಲ್ಲದ ಸೆಳೆತಗಳು ಆಗಿರುತ್ತವೆ. ಅಂಗಡಿಯೊಂದು ನನ್ನೂರಿಗೆ ಬಂದು ಪಾರದರ್ಶಕ ಗಾಜಿನ ದೊಡ್ಡ ಬಾಟೆಲುಗಳು ಹಲವು ಬಣ್ಣಗಳ ಮಿಠಾಯಿಗಳನ್ನು ಪ್ರದರ್ಶನಕ್ಕೆ ಇಟ್ಟು ಊರಿನೆಲ್ಲ ಮಕ್ಕಳನ್ನು ಮಾತ್ರ ಸೆಳೆಯಲಿಲ್ಲ.. ದೊಡ್ಡವರ ಎದೆಗೂಡಿನಲ್ಲಿ ಉಬ್ಬಸವನ್ನು ಹುಟ್ಟಿಸಿ ಒಂದಷ್ಟು ಕುಟುಂಬಗಳ ಅಳಲಿಗೂ ಮೊದಲಾಗಿವೆ.

ನನ್ನ ಊರಿನಲ್ಲಿ ಒಂದು ಕಾಲಕ್ಕೆ ಅಂಗಡಿಗಳೇ ಇರಲಿಲ್ಲವಂತೆ. ಹತ್ತು ಫರ್ಲಾಂಗು ದೂರದ ಒಂದು ಕಿರಿದಾದ ನಗರದಿಂದ ವೈಶ್ಯರೊಬ್ಬರು ದಿನಸಿ ಹಾಗೂ ಧಿರಿಸುಗಳನ್ನು ತಂದು ನಮ್ಮ ಮನೆಯ ಹೊರಜಗಲಿಯಲ್ಲಿ ಇಟ್ಟರೆ ಊರೊಳಗೆ ಶೆಟ್ರು ಬಟ್ಟೆ ದಿನ್ಸಿ ತಂದವ್ರೆ ತಗಮರೆಲ್ಲ ಬಂದು ತಗಳ್ರಿ ಅಂತ ವರ್ತಮಾನ ಹೋಗ್ತಿತ್ತಂತೆ. ಜನ ಬಂದು ಬೇಕಾದ್ದು ಕೊಂಡು ಹೋದ ಮೇಲೆ ಉಳಿದದ್ದನ್ನು ಕಟ್ಟಿ ಜಗ್ಲಿ ಮೂಲೇಲಿ ಇಟ್ಟು ಹೋಗೋರು ಮರಳಿ ಮರುವಾರ ಬಂದು ವಹಿವಾಟು ನಡ್ಸೋರು ಅಂತ ಅಪ್ಪ ಹೇಳೋರು.

ಬಾಳಿನ ಅಂಗಡಿಯಲ್ಲಿ ಹೊರಳಾಡುವ ಹಸಿವಿಗೆ ಎಷ್ಟಾದರೂ ಸಾಲದು. ನನ್ನೂರಿನಲ್ಲಿ ಜೀತ ಮಾಡುವವರ ಸಂಖ್ಯೆಯೇನೂ ಕಡಿಮೆ ಇರಲಿಲ್ಲ. ಅಕ್ಕರ ಕಲಿಯಲು ಅವಕಾಶ ಸಿಗದ ಎಷ್ಟೋ ಕುಟುಂಬಗಳು ಮಕ್ಕಳು ಮರಿಗಳನ್ನು ಬಗಲಿಗೆ ಹಾಕಿಕೊಂಡೇ ನಿಯತ್ತಿನಿಂದ ಶ್ರಮಿಸಿ ತಿಂದ ಆತ್ಮಗೌರವವನ್ನು ನಾನು ಕಿರಿವಯೋಮಾನದಲ್ಲೇ ಕಂಡಿದ್ದೇನೆ. ಈ ಬದುಕೇ ಹೀಗೆ ಅನೇಕ ಸಲ “ಆಸೆಗಳ ಗರಡಿಯೊಳಗೆ ಹತಾಶೆಗಳ ಕಸರತ್ತು” ಆಗಿ ನರಳಿ ಬಿಡುತ್ತದೆ.

ಹಳೆಯದರ ನಡುವಿನ ತಪಸ್ಸು ಮತ್ತು ಹೊಸ ಸೃಷ್ಟಿ ಎರಡು ಒಂದು ಕಡೆ ಹರಿದಾಡಲು ಸಾಧ್ಯವಾಗುವುದು ಯಾವಾಗಲೂ ಇದ್ದದ್ದೇ. ಕಲಿಕೆ ಮತ್ತು ಅರಿವು ಪರಸ್ಪರ ಒಟ್ಟಾಗಿ ಆಂದೋಲನವಾದಾಗಲೇ ಯಾವುದೇ ಜಾಗದಲ್ಲಾದರೂ ಸ್ಥಿತ್ಯಂತರಗಳಾಗಲು ಸಾಧ್ಯ. ಪ್ರಭುತ್ವವನ್ನು ನಯವಾಗಿ ಪೋಷಿಸುವ ಕೆಲವೇ ಮಂದಿ ಸ್ಥಿತಿವಂತರು ನಮ್ಮೂರಲ್ಲಿ ಜಾತಿ, ಧರ್ಮವನ್ನು ಅಪಾಯವಲ್ಲದ ಸರಕಿನಂತೆ ಕಪಟಿಗಳಾಗಿ ಸಾಕಿಕೊಂಡಿದ್ದಾರೆ.

ಇಂಥಾ ಕಾರಣಗಳಿಂದಾಗಿಯೇ ಒಂದಷ್ಟು ವರ್ಷಗಳು ಪ್ರಗತಿಯ ಅರಿವು ನನ್ನೂರಿನಲ್ಲಿ ಎಚ್ಚರವಿಲ್ಲದಂತೆ ಮಲಗಿಬಿಟ್ಟಿತ್ತು. ಕ್ರಮೇಣ ದೂರದೂರಿಂದ ಬಂದು ವ್ಯಾಪಾರ ಮಾಡುವ ವಣಿಕರು ಬರುವುದು ನಿಂತುಹೋಗಿ ಊರಿನ ಜನರೇ ನಗರಕ್ಕೆ ಎತ್ತಿನ ಗಾಡಿಗಳನ್ನು ಬಾಡಿಗೆ ಮಾಡಿಕೊಂಡು ಖರೀದಿಗೆ ಹೋಗಿಬರೂವ ಹೊಸತೊಂದು ಮೊದಲಾಯಿತು. ಹೀಗಿರುವಾಗ ಬೂಬಜ್ಜಿ ಅನ್ನೋರು ವಕ್ಕಾಕು, ಕಮ್ಗಡ್ಲೆ, ಸೊಂಡ್ಗೆ, ಗೊಂಬೆ ಮಿಠಾಯಿ ಬೀಡಿ ಬೆಂಕಿಪಟ್ಣ ಹೀಗೆ ಸಣ್ಣಪುಟ್ಟದನ್ನು ಜೋಡಿಸಿ ಅಂಗಡಿ ಇಟ್ಟಮೇಲೆ ಐದು ಆರು ಹತ್ತು ಪೈಸೆಗಳಿಂದಲೂ ವ್ಯಾಪಾರ ನಡೆಯಲು ನಾಂದಿ.

ಈ ಮುಸ್ಲಿಂ ಕುಟುಂಬವೊಂದು ನಮ್ಮೂರಿಗೆ ಗುಳೇ ಬಂದು ಕೊಡುಕೊಳೆ ನಡೆಯುವಾಗ ಅನ್ಯಧರ್ಮೀಯರೆಂಬ ಅಗ್ಗದ ವಿರೋಧ ಪ್ರೀತಿ ಇರುವ ಯಾರಿಗೂ ಬರಲಿಲ್ಲ. ಜಾತಿ ಧರ್ಮಗಳು ಆಕ್ರಮಣದ ಹಂತಕ್ಕೆ ಏರದಂತೆ ಓಡಾಡಿಕೊಂಡು; ಭಾವನೆಗಳನ್ನು ಹಿಡಿದು ಅನುಭವದ ಮೊತ್ತವನ್ನು ಸೃಷ್ಟಿಸುತ್ತಾ ಹೋಗಿರುವುದು ದಿಟ. ಊರಿನೆಲ್ಲಾ ಮಕ್ಕಳು ಬೂಬಜ್ಜಿಯ ಅಂಗಡಿಯಲ್ಲಿ ಸಿಗುವ ಸಿಹಿಗೊಂಬೆಗಳ ಮಿಠಾಯಿಯ ಮೂಲಕವೇ ಸಾಮ್ಯತೆ ಕಂಡುಕೊಂಡಿದ್ದಾಗಿ ನನ್ನ ದೊಡ್ಡ ಅಕ್ಕ ನನಗೆ ಆಗಾಗ ಹೇಳೋರು. ಜಾತಿ, ಧರ್ಮಗಳು ಆಯುಧಗಳ ಕಡೆಗೆಂದೂ ಹೋಗದಂತೆ ಮೈತ್ರಿಯೊಂದು ಉಳಿದಿದ್ದು ನಾನೂ ಕಂಡೆ.

ಬೂಬಜ್ಜಿಯ ಅಂಗಡಿಯ ಜೊತೆಗೆ ಎರಡನೆಯದಾಗಿ ಈರ್ಗಟ್ಟಣ್ಣ ಅನ್ನೋ ಅಜ್ಜನ ಅಂಗಡಿ ಊರಿಗೆ ಬಂತು. ನಾನು ಬಾಲ್ಯದಲ್ಲಿ ಕಂಡ ಮೊದಲನೆಯ ವಣಿಕ ಈ ಅಜ್ಜ. ಐದು ಹತ್ತು ಪೈಸೆಗಳನ್ನು ಕೂಡಿಟ್ಟು ಅಂಗಡಿ ವದನ ಕಾಣಲು ಪರದಾಡಿದ ದಿನದ ಸ್ಮೃತಿಗಳು ಈಗಲೂ ಮುದ ಕೊಡುತ್ತವೆ. ಊರಿನೆಲ್ಲಾ ಜನ ಎರಡು ರುಪಾಯಿಗೆ ಟೀಪುಡಿ ತೆಗೆದುಕೊಳ್ಳುವುದು ನನಗೆ ಚಹಾ ಮಾಯೆಗೆ ಬಲಿಯಾಗುವಂತೆ ಮಾಡಿದ್ದು. ಯಾರ ಮನೆಯವರು ಟೀ ಪುಡಿಗೆ ಅಂಗಡಿಗೆ ಬಂದಿದ್ದು ಕಂಡರೆ ಸಾಕು ಅವರ ಮನೆಯಲ್ಲಿ ಟೀ ಬುರ್ಗು ಸಿದ್ಧವಾಗುತ್ತದೆ ಅಂತ ನಾನು ಆ ಮನೆಗೆ ಹೋಗುತ್ತಿದ್ದೆ. ಈಗಲೂ ಊರಿಗೆ ಹೋದರೆ ಸಾಧ್ಯವಾದಷ್ಟು ಮನೆಗಳಲ್ಲಿ ಊರೆಲ್ಲ ಅಲೆದಾಡಿ ಟೀ ಕುಡಿದೇ ಬರುವಷ್ಟು ನಂಟು ನನಗೂ ನನ್ನೂರಿಗು.

ನಿಧಾನಕ್ಕೆ ಅಂಗಡಿಯೆಂಬ ಮಾಯೆ ಊರಿನ ಅನೇಕರನ್ನು ಸೋಮಾರಿಗಳನ್ನಾಗಿ ಮಾಡಿದ್ದು ನಿಜವೇ. ನಾನು ಪ್ರಾಥಮಿಕ ಹಂತ ಮುಗಿಸುವ ವೇಳೆಗೆ ದೊಡ್ಡಕಾಕ ಅನ್ನೋರು ದೊಡ್ಡ ಅಂಗಡಿಯನ್ನೇ ಇಟ್ಟರು. ಈ ಸಮಯಕ್ಕೆ ಒಂದು ಬಸ್ಸು ಬರಲು ಶುರುವಾಯಿತು. ಶಿರಾ ಪೇಟೆಯಿಂದ ಬರುವ ಈ ಬಸ್ಸಿನಲ್ಲಿ ನಮ್ಮ ಮನೆಗೆ ದಿನಪತ್ರಿಕೆ ಬರುವುದು ಮೊದಲಾದ ಮೇಲೆ ಪತ್ರಿಕೆ ತಗೊಂಡು ದೊಡ್ಡಕಾಕನ ಅಂಗಡಿಯ ಬೆಂಚು ಇಲ್ಲವೇ ಬಸ್ ನಿಲ್ದಾಣದಲ್ಲಿ ಇದ್ದ ಅರಳಿ ಕಟ್ಟೆಯ ಜಗಲಿಯ ಬಳಿ ದುಂಡು ಜನ ಸೇರೋರು. ಈ ದೊಡ್ಡಣ್ಣನ ಅಂಗಡಿಗೆ ಬರುಕ್ಲಿ ಸಿಗರೇಟು ಬಂದ ಮೇಲೆ ಊರಿನ ಅನೇಕ ಮನೆಗಳು ಹೊಗೆಯಲ್ಲಿ ಉಸಿರು ಕಟ್ಟಿದ್ದಕ್ಕೆ ಏನು ಹೇಳಲಿ? ಮಾಯೆಯ ಸುಳಿಯ ರಭಸ ಯಾರನ್ನು ಎಲ್ಲೆಲ್ಲಿಗೆ ಹೊಯ್ಯುತ್ತದೆಯೋ ತಿಳಿಯಲ್ಲ.

ಇದೊಂದು ಅಂಗಡಿ ಏಕಕಾಲಕ್ಕೆ ಅನೇಕ ಪೀಳಿಗೆಗಳು ಜೀವಂತ ಇದ್ದುಕೊಂಡು; ಈ ಪೀಳಿಗೆಗಳ ನಡುವೆ ಭಿನ್ನಮತ ಮತ್ತು ಸಹಮತ ಎರಡು ಇರುವಂತೆ ಕಾಯ್ದುಕೊಳ್ತು. ದೊಡ್ಡಣ್ಣನ ಅಂಗಡಿಯಲ್ಲಿ ಯಾವಾಗಲೂ ಬೇಯಿಸಿದ ಗುಡ್ಡ ಸಿಗೋವು. ಈ ತತ್ತಿಯ ವಾಸನೆ ಎಲ್ಲರನ್ನೂ ಒಳಗು ಮಾಡಿಕೊಳ್ತು. ಈ ಕಾರಣಕ್ಕೆ ಅನೇಕ ಮನೆಗಳಲ್ಲಿ ಕಲಹಗಳು ಹುಟ್ಟಿದವು. ದೊಡ್ಡಣ್ಣನ ಅಂಗ್ಡಿತಗೆ ಹೊಲ್ಸು ಬಡ್ಯುತ್ತೆ ಅಮ್ತ ನುಗ್ತೀರಲ್ಲ ನದ್ರಾಗಲ್ವೇ ನಿಮ್ಗೆ. ಸಿಗ್ರೇಟೂದದು ತತ್ತಿತಿಂದ್ಕಂಡು ಒಕ್ಕುಲ್ತನುದ್ ಗ್ಯಾನ ಬಿಟ್ಟು ಅರಾಸಿಲ್ದಂಗೆ ಓಡಾಡ್ತೀರಲ್ಲ ಅನ್ನೋ ಮಾತುಗಳು ಸವಕಲಾದವು ಬಿಟ್ರೆ ಜನ ಬದ್ಲಾಗಿದ್ದು ಕಡಿಮೆಯೇ. ಸಿಗರೇಟಿನ ಹೊಗೆ ಕವಿದು ಮರೆಮಾಚಿದ ಅರಿವು ಅದೆಷ್ಟೋ?

ದೊಡ್ಡ ಕಾಕ ಕ್ರಮೇಣ ಮನೆಯಲ್ಲಿಯೇ ಕಾರಮಾಡಿ ದೊಡ್ಡವೇ ಗಾಜಿನ ಶೀಸಗಳಿಗೆ ತುಂಬೋರು. ನಾವು ಶಾಲೆ ಬಿಟ್ಟ ಕೂಡಲೇ ಅಂಗಡಿಯ ಕಡೆಗೆ ಓಡ್ತಿದ್ವಿ. ಇಲ್ಲಿ ಸಿಗುವ ಬಾಯಿಬಣ್ಣ, ಕಾರ ತಂದ ಸಿರಿಯ ವಿಸ್ತಾರ ಕಡಿಮೆಯಲ್ಲ. ಕೆಂಪಗೆ ಬಾಯಿಗೆ ಬಣ್ಣ ಬಳಿಯುತ್ತಿದ್ದ ಸವಿ, ಕಮ್ಮಗೆ ನಾಲಿಗೆಗೆ ಹಿತವೆನಿಸುತ್ತಿದ್ದ ಕಾರಪುರಿ ಊರಿನೆಲ್ಲ ಮಕ್ಕಳ ಲೋಚನದೊಳಗಿನ ಸೆಳೆತ. ಅತಿಹೆಚ್ಚು ವ್ಯಾಪಾರವನ್ನು ಸಲೀಸಾಗಿ ಮಾಡುವ ವಣಿಕನಾಗಿ ಬದಲಾದ ದೊಡ್ಡಕಾಕ ಕಾಲಮುಗಿದಂತೆ ಸರಾಯಿಯೊಳಗೆ ಮುಳುಗಿದ್ದು ವಿಪರ್ಯಾಸ.

ಚಹಾ, ತತ್ತಿ, ಕಾರಪುರಿ, ತರಾವರಿ ತಿನಿಸುಗಳ ಜೊತೆಗೆ ಪ್ರಸಿದ್ಧಿಗೆ ಬಂದ ಇವರು ಹಣಕೂಡಿದಂತೆ ಬಾಳಿನ ಸ್ಥಿರದಿಕ್ಕು ಬಿಟ್ಟು ಅಮಲಿನ ಕಡೆಗೆ ವಾಲಿ ಕಡೆಗೊಂದು ದಿನ ಘಟಬಿಟ್ಟೇ ಹೋದರು. ಹೆಂಡತಿ ಮಕ್ಕಳು ಅಂಗಡಿಯನ್ನು ಚೆಂದಕ್ಕೆ ನಡೆಸಿದರು ಕೂಡ ಅದೇಕೋ ವಿಧಿ ಆ ಕುಟುಂಬದ ಒಟ್ಟು ಬದುಕನ್ನು ಕೊಚ್ಚಿ ಹಾಕಿತು… ಆದರೆ ಕಾಕ ಮಾಡುತ್ತಿದ್ದ ಕಾರದ ಸ್ವಾದ ಮಾತ್ರ ನಮ್ಮ ನಾಲಿಗೆಯಲ್ಲಿ ಅಳಿದಿಲ್ಲ…

ಕಾಲ ಸರಿದಂತೆ ನಿಧಾನಕ್ಕೆ ಒಂದೊಂದೇ ಅಂಗಡಿಗಳು ಊರು ತುಂಬಿದವು. ಶಿರಾ ಪಟ್ಟಣದ ಮೋಹವು ಹೆಚ್ಚಿ ಅನೇಕ ಬದಲಾವಣೆಗಳನ್ನು ಊರು ಉಡಿಸಿಕೊಂಡಿತು. ಆದರೂ ನಾವು ಮಾತ್ರ ದಿನವೂ ಶಾಲೆ ಮುಗಿಸಿ ಬರುವಾಗ ಅಂಗಡಿಯ ಅರಿಶಿಣದ ಬೋಟಿಯನ್ನು ನಾಕಾಣಿ ಕೊಟ್ಟು ಬಾಯಾಡದೆ ಬಿಡ್ತಿರ್ಲಿಲ್ಲ.

ಮಾಧ್ಯಮಿಕ ಶಾಲೆಗೆ ನಾವು ಕಾಲಿಡುವ ವೇಳೆಗೆ ಪಕ್ಕದ ಊರಿನಿಂದ ಸಂಚಾರಿ ಅಂಗಡಿಯೊಂದು ನನ್ನೂರಿಗೆ ಬಂತು. ಮುಪ್ಪಿಗೆ ಕಾಲಿಟ್ಟ ಅಜ್ಜಿಯೊಬ್ಬರು ಗೂಡೆಯಲ್ಲಿ ಬಣ್ಣ ಬಣ್ಣದ ಟೇಪು, ಟೀ ಜಾಲ್ರ, ಏರ್ಪಿನ್ನು, ಬಟ್ಟೆಪಿನ್ನು, ಸೂಜಿ ದಾರ, ಎಲ್ಲವನ್ನೂ ತುಂಬ್ಕಂಡು ಊರಿನ ಮನೆಮನೆಯ ಅಮ್ಮಂದಿರು ಮಕ್ಕಳಿಗೆ ಜೊತೆಯಾದರು.

ಗೂಡೆ ಅಜ್ಜಿ ಬಂದ್ರೆ ಸಾಕು ನಾವು ಬಾಗ್ಲು ಸಂದೀಲಿ ಗೂಡೆ ಇಳ್ಸಿ ಏನಾದರೊಂದು ಕೊಳ್ತಿದ್ವಿ. ವರ್ಣಗಳನೇಕವಿರುತ್ತಿದ್ದ ಟೇಪುಗಳೇ ನಮ್ಮ ಜಡೆಗಳೊಟ್ಟಿಗೆ ಸಖ್ಯ ಬೆಳೆಸಿದ್ದು. ಹೆಚ್ಚು ಕಡಿಮೆ ಈ ಗೂಡೆ ಅಜ್ಜಿ ನಾನು ಪಿಯುಸಿ ಮುಗಿಸುವವರೆಗೂ ನಮ್ಮೂರಿಗೆ ಬರುತ್ತಿದ್ದರು. ನಮ್ಮೂರಿನೆಲ್ಲ ಹೆಣ್ಣು ಮಕ್ಕಳಿಗೂ ಈ ಗೂಡೆ ಬಲು ಆಪ್ತವಾಗಿತ್ತು. ಇಳಿ ವಯಸ್ಸಿನಲ್ಲೂ ಊರಿಂದೂರಿಗೆ ನಡೆದು ಬದುಕನ್ನು ಹೆಣೆದುಕೊಂಡ ಅಜ್ಜಿಗೆ ಅನೇಕ ಮನೆಗಳಲ್ಲಿ ಕೊಡುತ್ತಿದ್ದ ಬುತ್ತಿಯೇ ಆಧಾರ..

ವಾರಕ್ಕೆ ಒಮ್ಮೆ ತರಾವರಿ ಗಾಜಿನ ಬಳೆಗಳ ಜೊತೆ ಬರುತ್ತಿದ್ದ ಬಳೆರಂಗಮ್ಮ ಒಂದಷ್ಟು ವರ್ಷಗಳ ಕಾಲ ನನ್ನೂರಿನ ಎಲ್ಲಾ ಹೆಣ್ಣು ಮಕ್ಕಳ ಕೈಯಲ್ಲಿ ಸದ್ದಿನ ಮಾಧುರ್ಯ ಉಳಿಸಿದವರು. ನಾವೆಲ್ಲ ಹೀಗೆ ಊರಿನೊಳಗೆ ಬದಲಾವಣೆಯಾಗುತ್ತಲೆ ದಕ್ಕಿದ ಅನುಭವದ ವಲಯದಲ್ಲಿ ಬೆಳೆದವರು. ಶಹರಗಳ ಮಾಯೆಯ ಝಲಕ್ ಆಗಾಗ ಊರೊಳಗೆ ಮಿಸುಕಾಡಿದಂತೆ ಕಂಡರೂ ಹೆಚ್ಚು ನಮ್ಮನ್ನು ಕಾಡಿದ ಸಂಭ್ರಮ ಅಜ್ಜಿಯ ಗೂಡೆ ಮತ್ತು ರಂಗಕ್ಕನ ಬಣ್ಣದ ಬಳೆಗಳು ಹಾಗೂ ದೊಡ್ಡ ಕಾಕನ ಕಾರಬುರ್ಗು.

ಊರೊಳಗೆ ಭಿನ್ನ ಆಯಾಮಗಳಾಗಿ ನಡೆದಾಡಿದ ಎಲ್ಲವೂ ಈಗ ನಂಬಲಾಗದಷ್ಟು ವ್ಯತ್ಯಾಸ ಕಂಡಿವೆ. ಪರಿಣಯಗಳು ನಡೆದರೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕುವ ಜನ ಕೂಡ ಕಡಮಾಡಿಕೊಂಡು ರಾಜಧಾನಿಗೋ ಇಲ್ಲವೇ ಜಿಲ್ಲೆಗೋ ತಮಗೆ ಬೇಕಾದ್ದಕ್ಕೆ ತೆರಳುವಷ್ಟು ಆಧುನಿಕತೆ ನುಸುಳಿದೆ.

ಕಂದಾಚಾರಗಳಿಗೆ ವಿದಾಯ ಹೇಳಲಾಗದ ಮಿಗಿಲಾದ ಹೊಸತನಗಳು ಎಷ್ಟೇ ಬಂದರೂ ಬದುಕಿನ ಅಂಗಳದಲ್ಲಿ ನಲಿವು ಉಳಿಯಲ್ಲ. ಬಳೆಯ ರಂಗಮ್ಮನಿಗೆ ಕೈಕೊಟ್ಟು ತೊಡಿಸಿಕೊಂಡ ಗಾಜಲುಗಳು ಕೊಟ್ಟ ಆನಂದವನ್ನು ಮತ್ತೆ ಕಾಣಲಾಗಿಲ್ಲ. ಊರಿನೆಲ್ಲ ಹೆಣ್ಣುಮಕ್ಕಳು ಒಂದೇ ಕಡೆ ಒಮ್ಮೊಮ್ಮೆ ಸೇರಿ ರಂಗಕ್ಕನ ಜೊತೆಗೆ ನಕ್ಕು ನಲಿದದ್ದು ಮನದ ಸಿಂಗಾರ. ಹಿರಿಯ ಅಮ್ಮಂದಿರು ಎಲ್ಲಾ ಹೆಣ್ಣು ಮಕ್ಕಳಿಗೂ ಬಳೆ ಕೊಡಿಸುತ್ತಿದ್ದ ಮಮತೆಯೊಂದು ಈಗಲೂ ಉಳಿದಿದೆ.

ಈಗ ಬಸ್ ನಿಲ್ಲುವ ಆಸು ಪಾಸು ತಲೆ ಎತ್ತಿರುವ ಅನೇಕ ಅಂಗಡಿಗಳು ಹದಿಹರೆಯದ ಹುಡುಗರಿಗೆ ಐಪಿಎಲ್, ಕೆಪಿಎಲ್, ಕ್ರಿಕೆಟ್ ಮೋಹ ಹುಟ್ಟಿಸಿ ಹೆಚ್ಚು ಸಿಗರೇಟುಗಳು ಮುಗಿಯಲು ದಾರಿಯಾಗಿವೆ. ಅರವತ್ತು ದಾಟಿದವರಿಗೆ ಭೂತ, ವರ್ತಮಾನ, ಭವಿಷ್ಯಗಳೆಲ್ಲದರ ಚಿಂತೆ ಹಚ್ಚಿ ಆಗಿಹೋದ ಅನೇಕ ನೆನಪುಗಳನ್ನು ಸುರಿದುಕೊಂಡು ವಿಶ್ರಾಂತಿ ಒದಗಿಸಿವೆ. ಮಧ್ಯವಯಸ್ಕರು ಹೊಣೆಗಾರಿಕೆ ಪಲಾಯನವಾದ ಎರಡಕ್ಕೂ ಮುಖಾಮುಖಿಯಾಗಿ ಸ್ಥಬ್ದಗೊಂಡಂತೆ ಕಂಡರೂ ಬದುಕಿನೊಟ್ಟಿಗೆ ಚಲಿಸುತ್ತಾರೆ. ಇಷ್ಟೆಲ್ಲಾ ವಿದ್ಯಮಾನಗಳ ನಡುವೆಯೂ ಚೆಂದಕ್ಕೆ ಬೇಸಾಯವನ್ನು ಊರು ಕಾಯ್ದುಕೊಂಡಿರುವುದಕ್ಕೆ ಸಡಗರವಾಗುತ್ತದೆ.

ಒಂದಷ್ಟು ನೆನಪುಗಳ ಜೊತೆ ಸಾಗಿ ಬರುವಾಗ ಅಡಿಗರ ಕವಿತೆಯೊಂದು ಮುಂದೆ ಬಂತು..
ಸುಖಗಿರಿ ಶೃಂಗಸ್ಥಿತಿಗೆ ನಲಿವವರ ಕಣ್ಣು ಬಾನಿನತ್ತ
ಕೆಳಗೆ ಅದರ ಹೊರೆ ಹೊತ್ತು ನಿಂತವರು ಲಕ್ಷ ಲಕ್ಷ….

November 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vishwas

    ಅಕ್ಕನ, ಈ ಲೇಖನದ ಅಂಗಡಿಯಲ್ಲಿ ನನಗೆ ಸಿಕ್ಕ ಅತ್ಯಮೂಲ್ಯ ಮೌಲ್ಯವೆಂಬ ಸರಕುಗಳಿವು:

    ಅಂಗಡಿಗಳು, ಮನಗಳಲ್ಲಿ ಮನೆ ಮಾಡಿ ‘ಮನದಂಗಡಿಗಳು’ ಮೂಡಿದ್ದು ಹೀಗೆ…..

    ಮನದಂಗಡಿಗಳಲ್ಲಿ ವ್ಯಾಪಾರಗಳು ನಡೆಯೋದು ನಮ್ಮ ಕಣ್ಣು, ಮಾತು, ಹೃದಯ, ಯೋಚನಾ ಶಕ್ತಿಗಳಿಂದ. ಹೊರಗಿನ ಅಂಗಡಿಗಳಲ್ಲಿ ದೊರಕುವ ಸರಕನ್ನ ಕಾಣುವುದು ‘ಕಣ್ಣು’. ಪ್ರತ್ಯಕ್ಷವಾಗಿ ಕೊಂಡಾಗ ತೃಪ್ತಿಯಾಗೋದು ‘ಹೃದಯ’. ಅದರನುಭವಗಳನ್ನು ಮತ್ತೊಬ್ಬರಿಗೆ ತಿಳಿಸೋದು ‘ಮಾತು’. ಅದಕ್ಕೆ ಜಾಹೀರಾತುಗಳೇ ‘ಯೋಚನಾ ವಿಧಾನ’. ಉದಾಹರಣೆಗೆ, ಬಣ್ಣದ ಮಿಠಾಯಿಯನ್ನ ಕಂಡು, ಕೊಂಡು, ರುಚಿ ಸವಿದು, ಅಭಿರುಚಿಯನ್ನು ವರ್ಣಿಸಿದಂತೆ. ಇವೆಲ್ಲಾ ನಮ್ಮ ಮನದಂಗಡಿಯ ಗೋಡೋನಿನಲ್ಲಿ ಸಂಗ್ರಹವಾಗುವ ಸರಕುಗಳು. ‘ನೆನಪು’ಗಳೆಂಬ ಗ್ರಾಹಕರು ಮನದಂಗಡಿಗೆ ಭೇಟಿಕೊಟ್ಟಾಗ, ದೊಡ್ಡ ಮೊತ್ತದಲ್ಲಿ ಖರೀದಿಸಬಲ್ಲ ಸರಕುಗಳಿವು.

    ಶೆಟ್ರು ತರುವ ಧಿನಸಿಗಳಿಂದ, ‌ಬೂಬಜ್ಜಿಯ ಬೊಂಬೆ ಮಿಠಾಯಿ, ಈರ್ಗಟ್ಟಣ್ಣನ ಟೀಪುಡಿ, ದೊಡ್ಡಕಾಕನ ತತ್ತಿ ಕಾರಗಳು, ಸಿಗರೇಟುಗಳು, ಗೂಡೆ ಅಜ್ಜಿಯ ಸಂಚಾರಿ ಅಂಗಡಿಯ ಬಣ್ಣದ ಟೇಪುಗಳು, ಬಳೆರಂಗಮ್ಮನ ಬಣ್ಣದ ಬಳೆಗಳವರೆಗೂ ಎಲ್ಲವೂ ಮನದಂಗಡಿಗಳನ್ನ ಕಟ್ಟಲ್ಲು ಸಹಾಯಿಸಿದವು.

    ಇಷ್ಟೆಲ್ಲಾ ಸರಕುಗಳಿರುವ ಮನದಂಗಡಿಗೆ ‘ನೆನಪು’ಗಳೆಂಬ ಗ್ರಾಹಕರು ಏನಾದರೂ ಕೊಳ್ಳಲು‌ ಬಂದಾಗ, ಗುಣ ಮಟ್ಟದ ಭರವಸೆ ಕೊಡಬೇಕಾದ ಜವಾಬ್ದಾರಿ ನಮ್ಮ ಕೈಯಲ್ಲಿ. ಅದು ಬಣ್ಣದ ಟೇಪು, ಬಳೆ, ಮಿಠಾಯಿಗಳನ್ನ ಕೊಂಡ ಸಿಹಿಯ ತುಣುಕುಗಳಿಂದ ತುಂಬಿಸುವುದೋ??, ಅಥವಾ ಸಿಗರೇಟು, ತಂಬಾಕು, ಜಾತಿ, ರಾಜಕೀಯ, ಧರ್ಮಗಳನ್ನು ಸೇದಿ ಹೊಗೆ ಬಿಟ್ಟು, ಜಗಿದು ಉಗಿದ ಕ್ಷಣಿಕ ತೃಪ್ತಿಗಳಂತಹ ಸರಕುಗಳಿಂದ ಆ ಮನದಂಗಡಿಯನ್ನು ತುಂಬುವುದೋ?? ಅನ್ನೋದು ನಮ್ಮ ಕೈಯಲ್ಲಿ.

    ಮನದಂಗಡಿಯ, ‘ನೆನಪು’ ಎಂಬ ಗ್ರಾಹಕನು ಅಲ್ಲಿಂದ ಏನನ್ನಾದರೂ ಕೊಂಡಾಗ ಅವನಿಗನಿಸಬೇಕಿರುವುದು *ಶಿವ ತೃಪ್ತನಾದ* ಎಂದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: