ʼಸಮತೆ ಎಂಬುದೇ ಯೋಗ ನೋಡಾʼ

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ,  ರಂಗಭೂಮಿ,  ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ.  ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು.

‘ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

“ಇಲ್ಲಿ ಮುಟ್ಟಿದರೆ ಮೆತ್ತಿಕೊಳ್ಳುವ ಮುಖವಾಡ
ಪವಾಡವೆಂಬ ಕೈವಾಡ
ನಡೆ ನುಡಿಯ ನಡುವೆಲ್ಲ ನಗುವ
ತಾಯಿಯ ಕಣ್ಣು
ಒಳಗೆ ಬಲಿಪೀಠ”  (ಎನ್.ಕೆ ಹನುಮಂತಯ್ಯ)

ಹಳ್ಳಿಗಳಿಗೆ ನುಗ್ಗುತ್ತಿರುವ ಆಧುನಿಕತೆಯ ಒಳಗೆ ಸಂವಿಧಾನವೊಂದು ಜೀವಶಕ್ತಿಯಾಗಿ ಬಂದರೆ ಸಾಕು ಆಗ ಶಿಕ್ಷಣ, ಸಂಸ್ಕೃತಿ, ಸಮಾನತೆ, ಸ್ವಾತಂತ್ರ್ಯ ಎಲ್ಲವೂ ಸಹಜವಾದ ಆಂತರ್ಯದ ಪ್ರಾರ್ಥನೆಗಳಾಗಿ ಉಳಿಯಲು ಆಗುತ್ತದೆ. ಬದಲಾವಣೆ ಎನ್ನುವುದು ಹಲ್ಲೆಯ ನಾಜೂಕಿನ ಮೊಗ ಧರಿಸಿದರೆ ಎಲ್ಲೆಲ್ಲಿಯೂ ಭ್ರಮೆಗಳದೇ ಮೇಲುಗೈ. ನಾವು ಚಿಕ್ಕವರಿದ್ದಾಗ ಊರಿನೆಲ್ಲ ಮನೆಗಳನ್ನು ಹೊಕ್ಕು ತಿಂದುಂಡು ಮನೆಮನೆಯ ಬೀದಿಗಳಲ್ಲು ಆಡಿ ಬೆಳೆದವರು. ದ್ವಿಜ ಪ್ರಜ್ಞೆ ಎಂಬ ಮಾಯೆ ನಮ್ಮೂರಿನ ನೆಲಕ್ಕೆ ಪ್ರವೇಶಿಸದ ಕಾರಣಕ್ಕೆ ನಮಗೆಲ್ಲ ಧರ್ಮದುರಿ ತಾಗಲಿಲ್ಲ.

ಊರಿನೆಲ್ಲರ ತೋಟಗಳಿಗೆ ಕಾಯಿಕೆಡವಲು ಬರುತ್ತಿದ್ದ ಬುಡೇನ್ಸಣ್ಣ ಮುಸಲ್ಮಾನರೆಂಬ ಬೇಧವನ್ನು ಯಾರು ಎಂದಿಗೂ ತೋರಲಿಲ್ಲ. ಅವರಂತು ನಮಗೆಲ್ಲ ಕೈತುತ್ತು ಕೊಟ್ಟ ಮಮತೆಯೊಳಗೆ ಮಾನವತೆಯೊಂದು ಕಾಲಕ್ಕೆ ಅರಿವಿನ ಬಲ ತಂದಂತೆ ಚಲಿಸುತ್ತಲೇ ಇದೆ. ಇವರ ಕುಟುಂಬ ಗುಳೇ ಬಂದು ನನ್ನೂರಿನಲ್ಲಿ ನೆಲೆಸಿದ ಮೇಲೆ ಊರಿನಲ್ಲಿಯೇ ಜನಿಸಿ ಬೆಳೆದವರಂತೆ ಒಗ್ಗಿಕೊಂಡು ಬದುಕಿಗಾಗಿ ಕಾಯಿ ಕೆಡವುವ ವೃತ್ತಿಯನ್ನು ರೂಢಿಸಿಕೊಂಡು ಎರಡು ಮಕ್ಕಳಿಗೂ ಊರನ್ನೇ ಬಳಗ ಮಾಡಿಕೊಟ್ಟು ಊರಿನಲ್ಲಿ ಬದುಕಿರುವ ಆಚರಣೆಗಳಲ್ಲೇ ತಮ್ಮ ಕುಟುಂಬವನ್ನು ಬೆಸೆದು ಧರ್ಮದಿಂದ ಹೊರಗುಳಿದು ಬದುಕಿದವರು.

ನಮ್ಮ ಮನೆಗಂತೂ ಇವರ ಸಖ್ಯ ಅತ್ಯಂತ ಸಮೀಪದ್ದು. ಅಟ್ಟಿ ಬಾಗ್ಲಗೆ ತೆಂಗಿನ ಕಾಯಿಗಳ ರಾಶಿ ಬಿದ್ದಿದ್ದರೆ ಅಲ್ಲಿ ಅಪ್ಪನ ಶ್ರಮ ಬುಡೇನಣ್ಣನ ಸಾತ್ ಎರಡು ದರ್ಶನವಾಗುತ್ತಿದ್ದವು. ನಮ್ಮ ಊರಿನಲ್ಲಿ ಧರ್ಮದ ತಾಪ ಎಂದೂ ಓಡಾಡಲಿಲ್ಲ. ಬುಡೇನಣ್ಣನ ಸಂಸಾರ ಇವತ್ತಿನವರೆಗೂ ಇಲ್ಲಿಯೇ ಸೊಗಸಾಗಿ ಬದುಕಲು ಜೊತೆಯಾಗಿದ್ದು ತನ್ನ ವೃತ್ತಿಯೇ ಹೊರತು ಧರ್ಮವಲ್ಲ. ತನ್ನ ಇಬ್ಬರು ಮಕ್ಕಳಿಗೂ ಒಳ್ಳೆಯ ಬದುಕನ್ನು ಒದಗಿಸಿ ಚಳ್ಳಕೆರೆ ಸೀಮೆಗೆ ಕಳಿಸಿದ್ದಾರೆ. ಅವರು ನಮಗೆ ಅಕ್ಕ ಅಣ್ಣ ನೇ ಆಗಿ ಕರೆದು ಕಳಿಸುವಷ್ಟು ನಂಟು ಭದ್ರವಾಗಿ ಉಳಿದಿದೆ.

ರಾಮರಹೀಮರು ಶ್ರಮಜೀವಿಗಳಾಗಿ ನನ್ನ ಊರಿನಲ್ಲಿ ನೆಲೆಸಿದ್ದಾರೆ. ಅವರ ನಡುವೆ ಎಂದೂ ಕಲಹವಾಗಿಲ್ಲ. ನಮ್ಮ ನೆರೆಯ ಊರಿನಲ್ಲಿ ಬಾಬಯ್ಯನ ಆಚರಣೆಯಲ್ಲಿ ಇಡೀ ಗ್ರಾಮದ ಜನ ಬಾಬಯ್ಯನ ಒಕ್ಕಲೇ ಎಂಬಂತೆ ಪ್ರೇಮದ ಪರಮಾವಧಿಗೆ ತಲುಪಿ ಬಾಬಯ್ಯನನ್ನು ಹೊತ್ತು ಕುಣಿಯುತ್ತಾರೆ. ಪಕ್ಕದ ಊರನ್ನು ದಾಟಿ ಬಾಬಯ್ಯನ ಸಮೂಹ ನನ್ನ ಊರಿಗೆ ಬಂದಾಗ ಮುಕ್ತವಾಗಿ ಸಮೂಹದೊಳಗೆ ನಾನು ಹೊಕ್ಕು ಆರಾಧಿಸಿದ ನೈಜ ಅನುಭವ ಸದಾ ನನಗೆ ಮಧುರ.

ಜಾತಿ ಧರ್ಮದ ಯಾವ ಗುರುತುಗಳನ್ನು ಕಾಣಿಸದೆ ಬಾಬಯ್ಯನನ್ನು ಎಲ್ಲರೂ ಧರಿಸಿ ಒಂದಾಗುವ ಮಹಾಮೈತ್ರಿಗೆ ಸನಾತನ ಪ್ರಜ್ಞೆಯ ನೆರಳು ಬೀಳದಿರಲೆಂಬ ಹಂಬಲ ನಮ್ಮ ಭಾಗದ ಸಮುದಾಯಕ್ಕೆ ದಕ್ಕಿದ ಅರಿವು. ಸಂವಿಧಾನದ ನೆರಳು ಒಳಿತಿನ ಕೂಟವಾಗಿ ಎಲ್ಲರೊಳಗೂ ಅರಿಯುವ ಅಮರವಾದ ತಟನಿಯಾಗಬೇಕಿದೆ. ಧರ್ಮದಾಚೆಗೆ ನಡೆದ ನಮ್ಮ ಊರು ಈಗೀಗ “ಗಾಂಧಿ”ಯ ರಾಮನನ್ನು ಬಿಟ್ಟು ಮೂಲಭೂತವಾದದ ಕಡೆಗೆ ನಡೆದಂತೆ ಕಂಡರೂ ರಾಮರಹೀಮರು ಒಂದಾಗಿ ರಘುಪತಿ ರಾಘವ ರಾಜಾರಾಮ್ ಭಜನೆ ಮಾಡುವುದು ಅಳಿದಿಲ್ಲ.

ನಮ್ಮ ಮನೆಯಲ್ಲಿ ಸುಮಾರು ವರ್ಷಗಳವರೆಗೆ ಹಿಟ್ಟಿನ ಗಿರಣಿ ನಡೆಸಿದ ಹುಸೇನಣಯ, ಬಾಷಣ್ಣ, ಬಾಬಣ್ಣ ಎಲ್ಲರೂ ಕಿರಿಯ ವಯಸ್ಸಿನಿಂದ ಒಟ್ಟು ಕುಟುಂಬದಲ್ಲಿ ನಾವು  ಇಪ್ಪತ್ತೇಳು ಮಂದಿ ಮಕ್ಕಳ ಜೊತೆಗೂ ಭಾವನಾಲೋಕವನ್ನು ವಿಸ್ತರಿಸಿಕೊಂಡವರು. ಇವರ ಮಕ್ಕಳುಗಳೆಲ್ಲ ನಮ್ಮ ಜೊತೆಗೆ ನಲಿದು ಬೆಳೆದ ಪರಿಯಂತು ಅಪೂರ್ವವೇ.

ಹುಸೇನಣ್ಣನ ಕಡೆಯ ತಮ್ಮ ಬಾಬಣ್ಣ “ಅಣ್ಣನವರ” ನಿಜಭಕ್ತ. ನಾವು ಚಿಕ್ಕವರಿದ್ದಾಗ ನಮ್ಮ ಮನೆಯ ಪಡಸಾಲೆಯಲ್ಲಿ ಕೂರಿಸಿಕೊಂಡು “ಖಯಾದು ಖಯಾದು” ಎಂದು ದೊಡ್ಡ ದನಿಯಲ್ಲಿ ಕೂಗುತ್ತಾ ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಅಣ್ಣನವರ ಅಭಿನಯವನ್ನು ಅನುಕರಣೆ ಮಾಡಿ ತೋರಿಸುವಾಗ ನಾವೆಲ್ಲ ಸಾಕ್ಷಾತ್ ಸಿನಿಮಾ ನೋಡುವಂತೆಯೇ ಶ್ರದ್ದೆಯಿಂದ ಕುಳಿತು ಖಯಾದು ಕಶ್ಯಪರನ್ನು ಎದುರಾಗುತ್ತಿದ್ದೆವು. ಪ್ರಹ್ಲಾದನ ಮಹಿಮೆಯನ್ನು ಖಯಾದು ಅಮ್ಮನ ಮಮತೆಯನ್ನು ಸೂಕ್ಷ್ಮದೊಳಗೆ ಗ್ರಹಿಸಲು ನನಗಾಗಿದ್ದು ಈ ಬಾಬಣ್ಣನಿಂದಲೇ.

ಇವರ ಅಣ್ಣ ಬಾಷಣ್ಣ ನನಗೆ ಸೂಜು ಮಲ್ಲಿಗೆಯ ಕುರಿತಾದ ಹಾಡುಗಳನ್ನು ಹೇಳಿಕೊಡ್ತಿದ್ರು. ಮಲ್ಲಿಗೆಯಷ್ಟೇ ಕೋಮಲವಾಗಿ ಎಲ್ಲರೊಳಗೂ ಬೆರೆತು ಬಾಳಲು ಕಲಿತವರಿಗೆ ಧರ್ಮದ ಇಕ್ಕಟ್ಟುಗಳು ಬರಲಾರವು. ಎಲ್ಲವನ್ನೂ ಭ್ರಮೆಗಳ ಒಳಜ್ವಾಲೆಯಲ್ಲಿ ಹತ್ತಿಸಿ ಬಿತ್ತಿದರೆ ಅರಿವು ಉರಿದು ರಾಮರಹೀಮರು ಆಯುಧವಿಡಿದು ಕದನಪ್ರೇಮಿಗಳಾಗಿ ಜನವಲಯಕ್ಕೆ ಬರುವಾಗ ಸಮುದಾಯಗಳು ಅತಂತ್ರದಲ್ಲಿ ತತ್ತರಿಸುತ್ತವೆ. ಶಿಕ್ಷಣ ಕೂಡ ಸಂಗ್ರಾಮದ ಮಾಯೆಯ ಕಡೆಗೆ ಚಲಿಸುವಂತೆ ಮಾಡುವ ಅಪಾಯಗಳನ್ನು ನಿಯಂತ್ರಿಸಲಾಗದ ದೌರ್ಬಲ್ಯಕ್ಕೆ ಯುವಮನಸುಗಳು ಇಳಿಯುತ್ತಿವೆ.

ನಾನು ಬೆಳೆದ ನನ್ನೂರಿನ ಪರಿಸರ ಮಾಯೆ ಮೋಜುಗಳ ಆಚೆಗೆ ನಿಂತ ಸಮಾನತೆಯ ಪ್ರೀತಿಯಷ್ಟನ್ನೇ ಕಾಣಿಸಿದ್ದು. ಅವತ್ತಿನ ಪ್ರಾಥಮಿಕ ಸರ್ಕಾರಿ ಶಾಲೆಗಳಲ್ಲಿ ಮಾಸ್ತರುಗಳ ಮಾತುಗಳು ಮನದ ಮಾತುಗಳಾಗಿ ಬದುಕಿಗೆ ಬೇಕಾಗುವ ವಿವೇಕ ಕೊಡುತ್ತಿದ್ದವು. ನಮಗೆಲ್ಲ ಇಂಗ್ಲಿಷ್ ಮಾಸ್ತರು ಭಾಷೆಯನ್ನು ಭಾವನೆಯಾಗಿ ಕಲಿಸಿದರೇ ಹೊರತು ಮೇಲರಿಮೆಯ ಶೋಷಣೆಯಾಗಿ ಕಲಿಸಲಿಲ್ಲ.

ಪ್ರಜಾಪ್ರಭುತ್ವದ ಉಸಿರು ಅಕ್ಷರ ಲೋಕದೊಳಗಿನ ಒಡಕು ಕೇಡುಗಳನ್ನು ತೊಳೆಯದಂತೆ ಹೆಣೆಯಲಾಗುತ್ತಿರುವ ಜಾಲದಲ್ಲಿ ಗ್ರಾಮಗಳು ನಗರಗಳು ಧರ್ಮಹೊತ್ತು ಅಸ್ತ್ರಗಳಾಗುತ್ತಿವೆ. ನನ್ನೂರನ್ನು ಸೇರಿ ಆಸುಪಾಸಿನ ಎಲ್ಲಾ ಊರುಗಳಲ್ಲಿ ಸಂವಿಧಾನವನ್ನು ಖಚಿತ ನೆಲೆಯಲ್ಲಿ ಗ್ರಹಿಸಿ ಗೌರವಿಸಿದ ಎಲ್ಲರೂ ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ಜಾಗ ಗಳಿಸಿ ವೃತ್ತಿಯಲ್ಲಿ ಕೂಡ ಮಹತ್ತನ್ನು ಕಂಡಿದ್ದಾರೆ.

ವೈಯಕ್ತಿಕ ನಿಲುವುಗಳನ್ನು ಅಹಿಂಸಾತ್ಮಕ ಸಹಕಾರವಾಗಿ ಕಾಯ್ದುಕೊಂಡ ಊರಿನ ಹಿರಿಯರು ರಹೀಮನ ಒಕ್ಕಲು ರಾಮನ ಒಕ್ಕಲುಗಳನ್ನು ಜೊತೆಮಾಡಿಕೊಂಡು ಊರಿನಲ್ಲೆಂದು ಈ ಕಾರಣಕ್ಕಾಗಿ ಗಲಬೆಗಳಾಗದಂತೆ ಕಟ್ಟಿದ ಚರಿತ್ರೆ ಕುರಿತಾಗಿ ನಾನು ಹೆಚ್ಚು ಹೊಸತನಗಳಿಗೆ ಎದುರಾದೆ. ಈ ಕುತೂಹಲಗಳು ಊರೊಳಗಿನ ಕಿರಿಯರ ಬಳಗದಲ್ಲಿ ತುಂಬಿದ ವಿಶ್ವಾಸ ಉದಾತ್ತ ಪ್ರೀತಿಯೊಲುಮೆ  ಮಾಸಿಲ್ಲ.

ಹಲವು ಭಿನ್ನ ವೃತ್ತಿಗಳ ಮೂಲಕ ತನ್ನದೇ ಕುತೂಹಲಗಳನ್ನು ನೇಯುವ ನನ್ನ ಊರಿನಲ್ಲಿ ಒಂದು ತಲೆಮಾರು ಮುಗಿದು ಹೊಸ ತಲೆಮಾರುಗಳು ತೆರೆದುಕೊಳ್ಳುವ ಕಾಲಕ್ಕಾಗಲೇ ಚುನಾವಣೆಗಳ ಕಾವಿನಲ್ಲಿ ರಾಮರಹೀಮರು ರಿಪುಗಳಾದರೂ ಕೂಡ ಕಾಯಿ ಕೆಡವಿದ ಬುಡೇನಣ್ಣ, ಹಿಟ್ಟಿನ ಗಿರಣಿಯಲ್ಲಿ ಬದುಕನ್ನು ಅರಳಿಸಿಕೊಂಡ ಬಾಷಣ್ಣ, ಈಗ ಸ್ಥಿತಿವಂತರ ತೋಟ ಕಾಯುವ ಬಾಬಣ್ಣ ಎಲ್ಲರನ್ನೂ ಊರಿನ ಹಿರಿಯರು ಈ ನೆಲದ ರಾಗಕ್ಕೆ ಒಗ್ಗಿದ ನಿಜಮಾನವರಂತೆ ಪೋಷಿಸಿದ್ದಾರೆ.

ಇವರೆಲ್ಲ ಊರಿನ ಭಾಗವಾಗಿ ಧರ್ಮ ಪ್ರಜ್ಞೆಗೆ ಜೋತು ಬೀಳದೆ ಸಹಜವಾಗಿ ಬದುಕಿನ ಕಣ್ಣಿನಲ್ಲಿ ಹೊಸದಿಟ್ಟಿಯ ಸಖ್ಯಕಂಡು ಬಾಬಯ್ಯನಂತೆ ಭೂತರಾಯನನ್ನು ದೇನಿಸುತ್ತಾರೆ. ಒಕ್ಕಲು ಮಕ್ಕಳ ಕೂಟದಲ್ಲಿ ಫಸಲು ಮೂಡಿದ ಕಾಲಕ್ಕೆ ಬಣವೆ, ಕಣ, ಕಂತೆ ಎಲ್ಲಕ್ಕೂ ಕೈಕೊಟ್ಟು ದುಡಿಯುತ್ತಾರೆ. ಮಣ್ಣೊಡಲ ಜೀವಗಾಳಿಯಾಗಿ ದೇಶಕ್ಕೆ ಹಸಿವಿಲ್ಲವಾಗಿಸಿದ ನೇಗಿಲಿನುಸಿರುಗಳು ಅರಾಜಕತೆಯ ಪ್ರಭುತ್ವದಡಿಯಲ್ಲಿ ಮುಳುಗದಂತೆ ನಡೆಯುವ ವಿಪ್ಲವಕ್ಕೆ ತುತ್ತುಗಳನ್ನು ಗೌರವಿಸುವ ಸಮುದಾಯ ಕಾಯಲು ಮುಂದಾಗಬೇಕಿದೆ.

ನನ್ನ ಊರಂತು ಸಧ್ಯಕ್ಕೆ ಪ್ರಜಾಪ್ರಭುತ್ವದೊಳಗೆ ಸುರಕ್ಷಿತವಾಗಿದೆ ಎಂದು ಸಡಗರದಿಂದ ಇರಲು ಆಗುತ್ತಿಲ್ಲ. “ಆತ್ಮ ಮತ್ತು ಪರಿಸರಗಳೆರಡನ್ನೂ ಕಲುಷಿತಗೊಳಿಸುತ್ತಾ ಬಂದ ಸಂಸ್ಕೃತಿಗೆ ಅದರ ಪರಿಣಾಮ ತಟ್ಟಲಾರಂಭಿಸುತ್ತದೆ ಎನ್ನುವ ಪೂರ್ಣಚಂದ್ರ ತೇಜಸ್ವಿಯವರ ಮಾತು ಎಲ್ಲ ಕಾಲದ ಪ್ರಭುತ್ವಗಳ ಅರಾಜಕತೆಯನ್ನು ಪ್ರಶ್ನಿಸುವಂತಿದೆ.

ನನ್ನ ಊರಿನ ಕಾಲಕಾಲದ ಕುತೂಹಲ, ಹೊಸತನ ಹಾಗೆಯೇ ರಾಜಕೀಯ ಬದಲಾವಣೆಗಳನ್ನು ನೋಡುತ್ತಾ ಮತ್ತೆ ತೇಜಸ್ವಿಯವರ “ಚಿದಂಬರ ರಹಸ್ಯ” ಓದಿದೆ.

“ನಮ್ಮೆಲ್ಲರ ಸಂಕಟಗಳು ಆಯಾ ಕಾಲಘಟ್ಟದ ನಿಸ್ತೇಜ ಚಹರೆಗಳಿಗೆ ಸಂಬಂಧಿಸಿದವು”(ಕುಂ. ವೀರಭದ್ರಪ್ಪ).

.

February 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Chaitrashree R nayak

    ಧರ್ಮದ ಗೋಜಿಗೆ ಹೋಗದೆ ತಮ್ಮ ತಮ್ಮ ಕಸುಬನ್ನು ಮಾಡುತ್ತಾ ಸದಾ ನಮ್ಮ ಮನೆಯಲ್ಲಿ ಎಲ್ಲರೂ ಸೇರಿ ಹಬ್ಬಗಳನ್ನು ಆಚರಿಸುತ್ತಾರೆ ಮತ, ಜಾತಿಯ , ಯಾವುದೇ ಪ್ರಶ್ನೆಗೆ ದಾರಿ ಮಾಡಿ ಕೊಡದೆ ಸಾಮಾನ್ಯರಂತೆ ಬದುಕುವ ಇವರಿಗೆ ಯಾವುದೇ ಧರ್ಮವು ಅಡ್ಡ ಬರಲಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: