ʼನ್ಯಾಯದ ತಕ್ಕಡಿ ಕಣ್ಣು ಮುಚ್ಚಲೇ ಇಲ್ಲʼ

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ.

ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ ಇಂಥದ್ದೊಂದು ನಡೆಯಲಿಲ್ಲವಲ್ಲ ನಮ್ಮ ಮಕ್ಕಳು ಮುಚ್ಚಟೆಯಾಗಿದ್ದಾರಲ್ಲ ಎನ್ನುವ ನೆಮ್ಮದಿಯ ಭಾವ ಮನಸಿನಾಳದಲ್ಲಿ ಬೆಚ್ಚಗೆ ಕೂತಿರುತ್ತದೆ.

ಕಾಣದಾದ ಮತ್ತು ವಾಪಸ್ಸು ಮನೆಗೆ ಹೋಗದ ಹೆಣ್ಣುಮಕ್ಕಳ ಬಗ್ಗೆ ಲೀಲಾ ಸಂಪಿಗೆ ನಮ್ಮ ನಿಮ್ಮೆಲ್ಲರ ವೈಯಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ತುಸು ಜಾಗೃತಗೊಳಿಸುತ್ತಿದ್ದಾರೆ ‘ಆಫ್ ದಿ ರೆಕಾರ್ಡ್’ ನಲ್ಲಿ.

ಲೈಂಗಿಕ ವೃತ್ತಿ ಮಹಿಳೆಯರಿಗಿರುವ ಕಾನೂನುಗಳ ಜಾರಿಯೇ ಮೌಢ್ಯದಿಂದ ಕೂಡಿವೆ.  ಅದೆಷ್ಟು  ಕ್ರೂರ, ಅವೈಜ್ಞಾನಿಕವಾಗಿ  ಕೋರ್ಟು, ಪೋಲಿಸು, ಸರ್ಕಾರಗಳು ನಡೆದುಕೊಳ್ಳುತ್ತಿವೆಯಲ್ಲಾ? ಈ ವೃತ್ತಿಗೆ ಸಂಬಂಧಿಸಿ ಬಹುತೇಕ ಇದೇ ಪರಿಸ್ಥಿತಿ ಭಾರತದಾದ್ಯಂತ ನಿರಂತರವಾಗಿ  ನಡೆದೇ ಇವೆಯಾದರೂ ಹೇಗೆ ?

ಸುಮಾರು 20 ಅಡಿಯಷ್ಟು ಉದ್ದಗಲದ ಒಂದು ಒಳಾಂಗಣ. ಒಂದು ದೊಡ್ಡ ಕುರ್ಚಿ, ಕುರ್ಚಿಗೆ ತಾಗಿ ದೊಡ್ಡದಾದ ಒಂದು ಅಥವಾ ಅಂಟಿಕೊಂಡಂತೆ ಎರಡು ಟೇಬಲ್ಲು. ಟೇಬಲಿನ ತುದಿಯಲ್ಲಿ  ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಕೈಯಲ್ಲೊಂದು ತಕ್ಕಡಿ ಹಿಡಿದು ನಿಂತಿರುವ ಒಂದು ಶಿಲ್ಪ. ಅದಕ್ಕಿಂತ ಕೆಳಗೆ ಅಂದರೆ ದೊಡ್ಡ ಟೇಬಲ್ಲಿಗೆ ತಾಗಿ ಸಣ್ಣ ಟೇಬಲ್, ಎರಡು ಕುರ್ಚಿಗಳು. ಆ ತುದಿಗೊಂದು, ಈ ತುದಿಗೊಂದು. ಅದರ ಮುಂದಕ್ಕೆ ‌ಒಂದು ಸಣ್ಣ ಒಳಾಂಗಣ. ಅದರಾಚೆ ಅಕ್ಕಪಕ್ಕದಲ್ಲಿ ಕಟಕಟೆಗಳು….. 

ʼನಾನು ಶಕುಂತಲಾʼ…. 

ಒಬ್ಬ ಮೋಸಗಾರನ ದಂಧೆಯ ವಂಚನೆಗೆ ಒಳಗಾಗಿ ಈ ವಿಷವರ್ತುಲದೊಳಗೆ ನೂಕಲ್ಪಟ್ಟವಳು. ಕಳೆದ ಹದಿನೈದು ವರ್ಷಗಳಲ್ಲಿ ಸರಿಸುಮಾರು 150-160 ಬಾರಿ ನಾನು ಬಂಧನ ಕ್ಕೊಳಗಾಗಿರಬಹುದು. ಆ ಬಂಧನ, ಸ್ಟೇಟ್ ಹೋಂ,ಕೋರ್ಟ್, ಬಿಡಿಸಿಕೊಂಡು ಹೋಗುವುದು…. ಈ ಪ್ರಕ್ರಿಯೆಗಳೂ ಕೂಡ ತುಂಬಾ ಹೈರಾಣಾದ ಸ್ಥಿತಿಗಳು. 

ಮಧ್ಯಾಹ್ನದ ಸಮಯ, ಊಟಕ್ಕೆ ಮುಂಚೆ, ಕೆಲವೊಮ್ಮೆ ಇನ್ನೇನು ಕೋರ್ಟ್ ಬಾಗಿಲು ಮುಚ್ಚುವುದಕ್ಕಿಂತ  15 ನಿಮಿಷಗಳ ಮೊದಲು ಹೊರಗಿನ ಮೆಟ್ಟಿಲಲ್ಲಿ ಅಥವಾ ಮೂಲೆಯಲ್ಲಿ ನಾವು 8 – 9 ಹುಡುಗಿಯರು ನಿಂತಿರುತ್ತೇವೆ.  ಅಲ್ಲಿಯೇ ನಮ್ಮನ್ನು ಬಂಧಿಸಿದ ವ್ಯಾಪ್ತಿಯ ಪೊಲೀಸ್ ಠಾಣೆಯ ಕೋರ್ಟ್ ಪಿಸಿ ಅಡ್ಡಾಡುತ್ತಿರುತ್ತಾನೆ. 

ಹಿಂದಿನ ದಿನವೇ ಬಂಧಿಸಿ, ಸ್ಟೇಟ್ ಹೋಂನಲ್ಲಿಟ್ಟಿದ್ದು  ಅಲ್ಲಿಂದ ಕೋರ್ಟಿಗೆ ಹಾಜರು ಪಡಿಸಿರುತ್ತಾರೆ.   ಬಂಧಿಸಲ್ಪಟ್ಟಾಗ ಸುದ್ದಿ ತಿಳಿದ ಸ್ನೇಹಿತರು ಅಥವಾ ಗಿರವಿ ಅಂಗಡಿಯವರು/ ಬ್ರೋಕರುಗಳು / ಪಿಂಪ್ ಗಳು/

ಘರ್ವಾಲಿಗಳು ಕೋರ್ಟ್ ಆವರಣದಲ್ಲಿಯೇ ಕಾಯುತ್ತಿರುತ್ತಾರೆ. ಇದೊಂದು ನೆಟ್ ವರ್ಕ್.  ಕೋರ್ಟ್ ಗೆ  ದಂಡ ಕಟ್ಟಲು ಇವರಲ್ಲಿ ಯಾರಾದರೂ ನಮಗೆ ದುಡ್ಡು ಕೊಡ್ತಾರೆ. ಬಿಡಿಸಿ ಕೊಂಡ ಮೇಲೆ ನಾವು ದುಡಿದ ದುಡ್ಡಿಗೆ ಪಾಲುದಾರರಾಗ್ತಾರೆ. ಬಡ್ಡಿ ಸಮೇತ ವಸೂಲಿ ಮಾಡ್ತಾರೆ. ಏನೇ ಆದರೂ ನಮಗೂ ಅನಿವಾರ್ಯವಾಗಿರುತ್ತದೆ.  ಕೊಡಲೇಬೇಕಾದ ದಂಡದ ವ್ಯವಸ್ಥೆ ಮಾಡಿಕೊಳ್ಳಬೇಕು. ಏನಿಲ್ಲದಿದ್ದರೂ ತನ್ನನ್ನೇ ಅಡವಿಟ್ಟಾದರೂ ಬಡ್ಡಿ ಹಣ ಪಡೆದು ಎದೆಯೊಳಗೆ ತುರುಕಿ ಕಾಯುತ್ತಾ  ನಿಲ್ಲಬೇಕು. 

ಕೆಲವೊಮ್ಮೆ ಹಣವಿಲ್ಲದೆ, ಯಾರೂ ಬರದೆ, ದಾರಿ ಕಾಣದಾದಾಗ ಹೊಸ ಘರ್ವಾಲಿಗೆ ಅಥವಾ ಬ್ರೋಕರ್ ಗೆ ಶರಣಾಗಿ ಅವರಿಂದ ಹಣ ಪಡೆಯಬೇಕಾಗುತ್ತದೆ. ( ಬಿಡಿಸಿದ ಕೂಡಲೇ ಹಣ ಕೊಟ್ಟವರ ಜೊತೆ ಹೋಗಬೇಕು) .

ನಮ್ಮಂತಹವರು   ನ್ಯಾಯಾಲಯದ ಒಳಪ್ರವೇಶಿಸಿದಾಗಿನ ದೃಶ್ಯದ ಒಂದು ಪರಿಚಯವನ್ನು ನನ್ನ ದೃಷ್ಟಿಕೋನದಿಂದ ಮಾಡುತ್ತಿದ್ದೇನೆ. ಉಸಿರುಗಟ್ಟಿಸುವ ವಾತಾವರಣ ಎಂಥದೋ ಭಯ ಆಗುತ್ತಿದೆ, ಆತಂಕ. ಆ ದೊಡ್ಡ  ಕುರ್ಚಿಯೆಂದೂ ನಮಗೆ ಸರಿಯಾಗಿ ಕಂಡೇ ಇಲ್ಲ. 

ಕೆಳಗಡೆ ಕುರ್ಚಿಯಲ್ಲಿ ಕೂರಲು ಆಗದೆ ಹಾರಾಡುವವ ಬೆಂಚ್ ಕ್ಲರ್ಕ್ ಅದೇನನ್ನೋ ನ್ಯಾಯದೇವತೆಗೆ ಉಸುರುತ್ತಾನೆ. ನ್ಯಾಯದೇವತೆ ಇನ್ನು ಮುಂದೆ ಹಾಗೆ ಮಾಡಬೇಡ 200 ರೂಪಾಯಿ ಎಂದು ಹೇಳಿದ್ದು ಸ್ಪಷ್ಟವಾಗುವುದು ಆ ಕೆಳಗಿನ ವ್ಯಕ್ತಿ ಪುನರುಚ್ಚರಿಸಿದ್ದಾಗ ಮಾತ್ರ. 

 ಹೇ ಬರ್ರೇ,  ಸಾಲಾಗಿ ನಿಂತ್ಕೊಳಿ, ಟೈಮ್ ಆಗ್ತಾ  ಇದೆ,  ಸಾಹೇಬರು ಹೊರಟುಬಿಟ್ಟರೆ ಇವತ್ತು ನೀವು ಸ್ಟೇಷನ್ ನಲ್ಲೇ  ಕೊಳೀ ಬೇಕಾಗುತ್ತೆ.  ನಿಮ್ಮ ಹೆಸರು ಕೂಗ್ದಾಗ ಒಬ್ಬೊಬ್ಬರೇ ಹೋಗ್ಬೇಕು.  ಚಪ್ಪಲಿಯನ್ನು ಆಚೇಲೇ ಬಿಡ್ರಿ.  ಏ ಗಲಾಟೆ ಮಾಡ್ಬೇಡ್ರೇ, ಬಟ್ಟೆ ಸರಿ ಮಾಡಿಕೊಳ್ಳಿ….. ಕೋರ್ಟ್ ಆವರಣಕ್ಕೆ ಹೋಗೋ ಮೊದಲು  ಮಾನಸಿಕವಾಗಿ ನಮ್ಮನ್ನು ಆ ಪೇದೆಗಳು ಸಿದ್ಧ  ಮಾಡೋ ಪರಿ ಇದು. 

ಅವರು ದಂಡ ಹೇಳಿದ್ದು  200 ರೂಗಳಾದ್ರೆ , ಅಲ್ಲಿಯ ಗುಮಾಸ್ತನಿಗೆ, ಪೇದೆಗೆ  ಎಲ್ಲಾ ಸೇರಿ ಅವರು ಹೇಳಿದಷ್ಟು ಕೊಟ್ಟು ಬರ್ತಿರಬೇಕು. ಇಲ್ಲದಿದ್ರೆ ಇದನ್ನು ಸಂಭಾಳಿಸೋ ನ್ಯಾಯವಂತರ ದೃಷ್ಟೀಲಿ ನಾವು ಬ್ಲಾಕ್ ಲಿಸ್ಟ್ ಆಗ್ಬಿಡ್ತೀವಿ ಅಷ್ಟೆ.  ಅಲ್ಲಿಗೆ ಆ ದಿನ ನಾನು ಬಂದ ಮುಕ್ತಳಾಗುತ್ತೇನೆ. 

ನ್ಯಾಯಾಧೀಶರೇಕೆ ಒಮ್ಮೆಯಾದರೂ ಕತ್ತೆತ್ತಿ ನಮ್ಮನ್ನು ದಿಟ್ಟಿಸಿ ಪ್ರಶ್ನಿಸುವುದಿಲ್ಲ? ಅಥವಾ ನಮ್ಮನ್ನು ವಿಚಾರಿಸಿ ದಂಡ ವಿಧಿಸುವುದಿಲ್ಲ ? ನಮ್ಮ ಮೇಲೆ ನಿರಂತರವಾಗಿ ದಂಡ ವಿಧಿಸಿ ಸಾಧಿಸಿದ್ದಾದರೂ ಏನು ? ನಮ್ಮ ಮೇಲೆ ಈ ಕಾನೂನುಗಳಿಗೆ ಏಕಿಂಥಾ ನಿರ್ಲಿಪ್ತತೆ ? ಯಾಕೆ ಈ ವೃತ್ತಿ ಮಾಡ್ತೀಯಾ , ಯಾರು ನಿನ್ನ ಹಿಂದೆ ಇದ್ದಾರೆ ? ಅಂತ ಒಮ್ಮೆಯಾದರೂ ನಮ್ಮನ್ನು ಮನುಷ್ಯರಂತೆ ಯಾಕೆ ನೋಡಿಲ್ಲ ? ಸದಾ ನಮ್ಮನ್ನು ಕಾಡುವ ಪ್ರಶ್ನೆಗಳಿವು.

ಕೆಲವೊಮ್ಮೆ ಕೋರ್ಟಿನಿಂದ ಆಗತಾನೆ ಬಿಡಿಸಿಕೊಂಡು ಬಂದಿರ್ತೇವೆ, ಮತ್ತೆ ಅದೇ ದಿನ  ಬಂಧಿಸಿ ಬಿಡ್ತಾರೆ. ಮತ್ತದೇ ಸುಳಿ. ಹೀಗೆ ಬಂಧಿತರಾದಾಗಲೆಲ್ಲಾ ಯಾವತ್ತೂ ನಾವು ಪೂರ್ವ ಸಿದ್ಧತೆಯನ್ನೇನೂ  ಮಾಡಿಕೊಂಡಿರೋದಿಲ್ಲ.  ಮಕ್ಕಳನ್ನು ಬಿಟ್ಟು ಬಂದಿರುತ್ತೇವೆ ,  ಕೆಲವೊಮ್ಮೆ ವೃತ್ತಿ ಮಾಡುವಲ್ಲಿಯೇ ಮಕ್ಕಳು ಇರ್ತವೆ, ಈ ಎಲ್ಲಾ ಪ್ರೊಸೀಜರ್ ಮುಗಿಸಿ ಹೋಗುವವರೆಗೂ ಆ ಮಕ್ಕಳ ಗತಿ ಏನು ? ಎಷ್ಟೋ ಬಾರಿ ಎರಡು-ಮೂರು ದಿನಗಳೂ ಆಗಿಬಿಡ್ತಾವೆ. 

ಕೆಲವೊಮ್ಮೆ ಮಕ್ಕಳಿಗೆ ತುಂಬಾ ಅನಾರೋಗ್ಯ ಇರುತ್ತೆ ಅಥವಾ ಅವರನ್ನು ನೋಡ್ಕೊಳ್ಳೋರಿಗೆ ಏನೋ ತುರ್ತು ಕೆಲಸಗಳಿರ್ತಾವೆ, ಬ್ರಾಥಲ್ ಗಳಾದ್ರೆ ಅವುಗಳ ನಿಗಾ ಮಾಡೋರು ಇರೋಲ್ಲ….. ಅಯ್ಯೋ ನಮ್ಮ ಬದುಕುಗಳು ಯಾಕೆ ಇಷ್ಟೊಂದು ನಿಕೃಷ್ಟ, ಇಷ್ಟೊಂದು ಗೋಜಲುಗಳು ಅಂತ ಅದೆಷ್ಟು ಕಣ್ಣೀರು ಹರಿಸಿದ್ದೀವೋ ಗೊತ್ತಿಲ್ಲ….. ಸಾಮಾನ್ಯವಾಗಿ ಈ ವೃತ್ತಿ ಮಾಡುವ ಎಲ್ಲರಿಗೂ ಈ ಬಂಧನಗಳು ಬದುಕ ಬಂಧನದೊಳಗಿನ ಸಂಕೋಲೆಗಳು ಅನ್ನಿಸ್ತಾವೆ. 

ಅದೊಂದು ದಿನ ಮಂಜುಳಾಳನ್ನು ಆ ಪೇದೆ ಹಿಂದಿನ ದಿನ ಮಾಮೂಲಿ ಕೊಡಲಿಲ್ಲ ಅನ್ನೋ ಸಿಟ್ಟಿಗೆ ಬಂಧಿಸಿ ಬಿಟ್ರು. ಎಷ್ಟು ಅಂಗಲಾಚಿದ್ರೂ ಬಿಡಲೇ ಇಲ್ಲ. ಸ್ಟೇಷನ್ ಗೂ ಕರ್ಕೊಂಡೋದ್ರು. ಅಲ್ಲಿಂದ ಸ್ಟೇಟ್ ಹೋಂಗೆ ಸಾಗಿಹಾಕೋಕೆ ತಯಾರಿ ನಡೆದಿತ್ತು. ಇನ್ನೇನು ತಪ್ಪಿಸ್ಕೊಳ್ಳೋ ಪ್ರಯತ್ನಾನ ಮಂಜುಳಾ ಮಾಡ್ತಿದ್ಲು. ಇದು ಗೊತ್ತಾದ ಪೇದೆ ಅವಳ ಸೀರೆ ಹಿಡ್ಕೊಂಡ. ಆ ಸೀರೆಯನ್ನೇ ಬಿಚ್ಚಿ ಆ ಪೇದೆಯ ಮುಖಕ್ಕೆ ಎಸೆದು ಬರೀ ಒಳಲಂಗ, ಬ್ಲೌಸ್ ನಲ್ಲೇ ಓಡಿ ಹೋದ್ಲು. ಅವನಿಗೆ ಅದು ಅನಿರೀಕ್ಷಿತವಾಗಿತ್ತು. ನಮಗೆ ಮಾತ್ರ ಪೇದೆಗಳಲ್ಲಿ ಲಿಂಗಬೇಧವಿಲ್ಲ…

ಗಂಡಸು ಪೇದೆ, ಹೆಂಗಸು ಪೇದೆ ಯಾರಾದರೂ ಇರ್ತಾರೆ.  ಮಂಜುಳಾ ಓಡಿ ಓಡಿ ಅಲ್ಲೆಲ್ಲೋ ಮರೆಯಲ್ಲಿ ಅವಿತುಕೊಂಡಿದ್ದು ಕತ್ತಲು ದಟ್ಟವಾದ ಮೇಲೆ ಮನೆ ಸೇರ್ಕೊಂಡ್ಳು. ಅಂಥಾ ಸ್ಥಿತಿಯಲ್ಲೂ ಅವಳು ಮನೆ ಸೇರಲೇ ಬೇಕಿತ್ತು, ಯಾಕೆಂದರೆ ಆ ದಿನ ಅವಳ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ಲು. ಆಸ್ಪತ್ರೆ ಖರ್ಚಿಗೆ ಹೇಗಾದ್ರೂ ಒಂದಿಷ್ಟು ದುಡ್ಡಿಗಾಗಿ ಮಂಜುಳಾ ಮೆಜೆಸ್ಟಿಕ್ ಗೆ ಬಂದಿದ್ಲು. 

ಮಾರನೇ ದಿನ ಮಂಜುಳಾಳನ್ನು ನೋಡಿದ ಪೇದೆಗೆ ಉರಿದು ಹೋಗಿತ್ತು. ಹಿಂದಿನ ದಿನದ ಅವಮಾನ ತೀರಿಸಿ ಕೊಂಡಿದ್ದ….ಮತ್ತೆ ಬಂಧಿಸಿದ್ದ. ಕೋರ್ಟ್ ರಜೆ, ಅದೂ ಇದೂ ಅಂತ ನಾಲ್ಕು ದಿನಗಳಾದ್ರೂ ಅವಳು ಹೊರಗೆ ಬರಲೇ ಇಲ್ಲ… ಅವಳ ಮಗು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯಿತು. ಅಸಹಾಯಕಳ ಅವಳ ರೋಧನ  ಭೂಮಿ ಆಕಾಶಗಳನ್ನು ಒಂದು ಮಾಡಿತ್ತು.

‍ಲೇಖಕರು ಲೀಲಾ ಸಂಪಿಗೆ

October 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: