ನಿಮ್ಮ ವಂಶವೃಕ್ಷಕ್ಕೊಂದು ನನ್ನ ಕ್ಷಮಾಪಣೆಯ ಪತ್ರ
ವಿ ಆರ್ ಕಾರ್ಪೆಂಟರ್
ಕ್ಷಮಿಸಿ, ನಿಮ್ಮ ಗ್ರಹಿಕೆ ಸರಿಯಾಗಿದೆ
ಹೌದು ನೀವು ಗ್ರಹಿಸಿದಂತೆ,
ನಾನು ಜೇಬುಗಳ್ಳ!
ವಾರದ ಹಿಂದೆಯಷ್ಟೆ
ನಿಮ್ಮ ಚಿಕ್ಕಪ್ಪನ ಜೇಬಿಗೆ
ಕತ್ತರಿ ಹಾಕಿದೆ
ಬಿಡಿಗಾಸೂ ದಕ್ಕಲಿಲ್ಲ
ಒಂದು ತಾಳೆಗರಿ ಮಾತ್ರವಿತ್ತು
ಕಷ್ಟಪಟ್ಟು ಕದ್ದದ್ದನ್ನು ಬಿಸಾಡುವ
ಮನಸಾಗಲಿಲ್ಲ
ಮೂರು ರಾತ್ರಿಗಳ ಸಂಶೋಧನೆ
ನಡೆಸಿದೆ,
‘ಧರ್ಮವನ್ನು ಉಳಿಸಬೇಕು
ಮತ್ತೊಬ್ಬರ ಗೋರಿಗಳ ಮೇಲೆ’
ಎಂದು ಬರೆದಿತ್ತು!
ಅದೇ ಮೊನ್ನೆ ತಾನೆ
ವಿದೇಶದಿಂದ ಹಿಂದುರಿಗಿದ
ನಿಮ್ಮ ಕಿರಿಯ ಮಗನ
ಜೇಬಿಗೂ ಅವತ್ತೇ ಕೈಯಿಟ್ಟೆ
ಆದರೆ ಸಿಕ್ಕಿದ್ದೇನು ಗೊತ್ತಾ?
ಅತ್ಯಾಚಾರ ಮಾಡಬೇಕಿರುವ
ಹೆಂಗಳೆಯರ ಸುದೀರ್ಘ ಪಟ್ಟಿ!
ನಾನು ಅಥವಾ ನನ್ನಂಥ
ಜೇಬುಗಳ್ಳರು ನಿಮ್ಮ ದಾರಿಯಲ್ಲಿ
ಎದುರಾದರೆ,
ಯಾವುದಾದರೂ ಒಂದು
ಕ್ಷುಲ್ಲಕ ಆರೋಪ ಹೊರಿಸಿ
ಕೊಂದುಬಿಡಿ
ಇಷ್ಟು ಮಾತನಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿಬಿಡಿ
0 ಪ್ರತಿಕ್ರಿಯೆಗಳು