ಬರಗೂರು ರಾಮಚಂದ್ರಪ್ಪ

ಚಿತ್ರದುರ್ಗದಲ್ಲಿ 2018ರ ಅಕ್ಟೋಬರ್ 13 ಮತ್ತು 14 ರಂದು ನಡೆದ
`ಭಾರತೀಯ ಸಾಹಿತ್ಯ ಮತ್ತು ಬಂಡಾಯ ಪರಂಪರೆ’
ವಿಚಾರ ಸಂಕಿರಣದ ಉದ್ಘಾಟನಾ ಭಾಷಣ.
ಭಾರತದ ಭಾವೋದ್ರೇಕೀರಣ
ಇಂದು ನಮ್ಮ ದೇಶ ಎದುರಿಸುತ್ತಿರುವ ಸವಾಲು ಮತ್ತು ಸಮಸ್ಯೆಗಳ ಸ್ವರೂಪವು ಇಪ್ಪತ್ತನೇ ಶತಮಾನಕ್ಕಿಂತ ಭಿನ್ನವಾಗಿದೆ. ಇಪ್ಪತ್ತೊಂದನೇ ಶತಮಾನದಲ್ಲಿ ಭಾರತವು ಬಲಿಷ್ಠ ರಾಷ್ಟ್ರವಾಗುತ್ತಿದೆಯೆಂದು ಬಿಂಬಿಸಲಾಗುತ್ತಿದೆ. ಆದರೆ ಬಲಿಷ್ಠವಾಗುತ್ತಿರುವುದು ಯಾವ ವಿಚಾರಗಳಲ್ಲಿ ಎಂಬುದನ್ನು ಪರಿಶೀಲಿಸಬೇಕು. ಆರ್ಥಿಕ ಸುಧಾರಣೆಯೆಂದು ಕರೆಸಿಕೊಳ್ಳುತ್ತಿರುವ ಜಾಗತೀಕರಣದ ಜಾರು ಬಂಡೆಯ ಆಟ ಬಿರುಸಾಗಿ ನಡೆಯುತ್ತಿದ್ದು ಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲೆ ಇನ್ನೂ ಶೇ. 22ರಷ್ಟು ಜನರು ಬಡತನದ ರೇಖೆಯ ಕೆಳಗಿರುವುದನ್ನು ಗಮನಿಸಬೇಕು.
ಒಂದು ಕೋಟಿ 78 ಲಕ್ಷದ 296 ಜನರು ಕೈಯ್ಯಲ್ಲೇ ಮಲ ಎತ್ತುತ್ತಿರುವ ‘ಸ್ವಚ್ಛ ಭಾರತ’ದ ವ್ಯಂಗ್ಯವನ್ನು ಗುರುತಿಸಬೇಕು. 8 ಕೋಟಿ 82 ಲಕ್ಷದ 371 ಜನರು ಮಲವನ್ನು ತಲೆಮೇಲೆ ಹೊತ್ತು ಚರಂಡಿ ಇತ್ಯಾದಿಗಳಿಗೆ ಹಾಯಿಸುವ ಕೆಲಸ ಮಾಡುತ್ತಿರುವ ಸ್ಥಿತಿಯನ್ನು ನೆನೆಯಬೇಕು. ಅಲ್ಲದೆ ಗೋವು ನಿಷ್ಠೆಯ ನೆಪದಲ್ಲಿ ಗೂಳಿಗಲಭೆಗಳು ನಡೆಯುತ್ತಿವೆ. ಈ ನೆಲೆಯಲ್ಲಿ ದಲಿತರು ಮತ್ತು ಮುಸ್ಲಿಮರನ್ನು ಅವಮಾನಿಸುವ, ಹಲ್ಲೆ ಮಾಡುವ ಹತ್ಯೆಗೂ ಹೇಸದ ಘಟನೆಗಳು ನಡೆದಿವೆ. ಇವು ಕೇವಲ ಕೆಲವೇ ಉದಾಹರಣೆಗಳು, ಆರ್ಥಿಕ ಸುಧಾರಣೆಯಡಿಯಲ್ಲಿರುವ ಸಂಕಟ ಸಂಕೇತಗಳು.
ಆರ್ಥಿಕ ಸುಧಾರಣೆಯೆಂಬ ಬಂಡವಾಳಶಾಹಿ ಪರ ಪರಿಕಲ್ಪನೆಗೆ ಸರಿಸಮನಾಗಿ ಸಾಮಾಜಿಕ ಸುಧಾರಣೆ ನಡೆಯದಿದ್ದರೆ ಅಸಮಾನತೆಯ ಕಂದಕಗಳು ಮುಚ್ಚುವುದಿಲ್ಲ. ಇಪ್ಪತ್ತೊಂದನೆಯ ಶತಮಾನದಲ್ಲಿ ಭಾರತ ಬಲಿಷ್ಠವಾಗುತ್ತಿದೆಯೆಂಬ ಭಾವನೆಯೊಂದಿಗೆ ಜಾತಿ ಮತ್ತು ಧರ್ಮ ಸಂಘರ್ಷಗಳ ಅನಾರೋಗ್ಯಕರ ಬೆಳವಣಿಗೆಯನ್ನು ಮರೆಯುವಂತಿಲ್ಲ. ಜೊತೆಗೆ, ಶ್ರೀಮಂತರ ಸಂಖ್ಯೆ ಹೆಚ್ಚುತ್ತಿದೆಯೆಂದು ಬೀಗುತ್ತಿರುವಾಗ ಸಮತೆಯ ಭೂಮಿ ಬಿರಿಯುತ್ತಿದೆ. ಹೋರಾಟದ ಹುಮ್ಮಸ್ಸನ್ನು ಹುನ್ನಾರದ ಧನುಸ್ಸು ದಮನಿಸಹೊರಟಿದೆ. ಇಪ್ಪತ್ತನೇ ಶತಮಾನದ ಆಶಯಗಳಿಗೆ ವಿದಾಯ ಹೇಳುವ ವಿಕೃತಿ ವಿಜೃಂಭಿಸುತ್ತಿದೆ.
ಇಪ್ಪತ್ತನೇ ಶತಮಾನ ಹೊಸ ಚರ್ಚೆ ಚಿಂತನೆಗಳನ್ನು ಹುಟ್ಟುಹಾಕಿತು. ಸಮಾನತೆ, ಸೋದರತೆ, ಸಹಿಷ್ಣುತೆಗಳು ಮುಪ್ಪುರಿಗೊಂಡ ಬದ್ಧತೆಯ ಬಾಗಿಲು ತೆರೆದು ಬೆಳಕು ಚೆಲ್ಲಿತು. ಪರಂಪರೆಯ ಪ್ರಗತಿಧಾರೆಗೆ ಸಮಕಾಲೀನ ಸೈದ್ಧಾಂತಿಕ ಸತ್ವ ಸೇರಿ, ಪ್ರಜಾಪ್ರಭುತ್ವದ ನಡಿಗೆಯನ್ನು ತೀವ್ರಗೊಳಿಸಿತು. ದಲಿತ ಚಳವಳಿ, ರೈತ ಚಳವಳಿ, ಮಹಿಳಾ ಚಳವಳಿ, ಬಂಡಾಯ ಸಾಹಿತ್ಯ ಚಳವಳಿ, ರಂಗಭೂಮಿ ಚಳವಳಿ – ಹೀಗೇ ಅನೇಕ ಚಳವಳಿಗಳಿಂದ ಸಮಾಜ ಬದಲಾವಣೆಯ ಬಾವುಟ ಹಾರತೊಡಗಿತು. ಇಂದಲ್ಲ ನಾಳೆ ಬದಲಾವಣೆ ಬಂದೇ ಬರುತ್ತದೆಯೆಂಬ ಆತ್ಮವಿಶ್ವಾಸ ಮೂಡಿ ಮಿಂಚತೊಡಗಿತು. ಕಾರ್ಮೋಡಗಳ ನಡುವಿನ ಮಿಂಚಿನ ಬೆಳ್ಳಿಗೆರೆಯಲ್ಲಿ ಕನಸು ಕಣ್ತೆರೆದು ಭವಿಷ್ಯದ ಭರವಸೆಯಾಯಿತು. ಆದರೆ ಇಪ್ಪತ್ತೊಂದನೇ ಶತಮಾನದಲ್ಲಿ ಈ ಭರವಸೆ ಕುಸಿಯತೊಡಗಿದೆ. ಆತ್ಮವಿಶ್ವಾಸದ ಬದಲು ಅಸಹಾಯಕತೆ ಕಾಣಿಸತೊಡಗಿದೆ. ಇಪ್ಪತ್ತನೇ ಶತಮಾನದಲ್ಲಿ ಬಲಾಢ್ಯವಾಗಿದ್ದ ಜಾತ್ಯತೀತ ತತ್ತ್ವವನ್ನು ಗೇಲಿಗಣ್ಣಿಂದ ನೋಡುವವರ ಸಂಖ್ಯೆ ಹೆಚ್ಚುತ್ತಿದೆ. ಧಾರ್ಮಿಕ ಮತ್ತು ಆರ್ಥಿಕ ಮೂಲಭೂತವಾದಿಗಳ ಒಕ್ಕಣ್ಣ ಬಾಣಗಳಿಂದ ಹೋರಾಟಗಳನ್ನು ಹಿಮ್ಮೆಟ್ಟಿಸುವ ಪ್ರಯತ್ನ ನಡೆದಿದೆ. ಪ್ರಜಾಪ್ರಭುತ್ವದ ನಡಿಗೆಯನ್ನು ಬಡಿಗೆ ಹಿಡಿದು ಬಗ್ಗಿಸಲಾಗುತ್ತಿದೆ. ಈ ಸನ್ನಿವೇಶವು ಸಾಂಸ್ಕೃತಿಕ ಲೋಕದ ಮೇಲೂ ದಟ್ಟ ಪರಿಣಾಮ ಬೀರುತ್ತಿದೆ.
ಇಂಥ ವಿಷಮ ಸನ್ನಿವೇಶದಲ್ಲಿ ನಾವು-ಸಾಹಿತಿಗಳು-ಸಾಹಿತ್ಯದ ಹೆಸರಲ್ಲಿ `ಸಂಭ್ರಮ’ ಪಡುವಂತಹ ವಾತಾವರಣವಿಲ್ಲ. ಆದ್ದರಿಂದ ನಾವು ಸಂಭ್ರಮಿಸುವ ಬದಲು ಸಂಕಟ ಮತ್ತು ಸಂಕಲ್ಪದಿಂದ `ಸಂವಾದ’ ನಡೆಸಬೇಕಾಗಿದೆ. ತನ್ಮೂಲಕ ಅಪವ್ಯಾಖ್ಯಾನಗಳ ಅನುಚಿತ ವಿಚಾರ ವಿಕೃತಿಗೆ ಪರ್ಯಾಯವಾಗಬೇಕಾಗಿದೆ. ಪರ್ಯಾಯ ವಿಚಾರಧಾರೆಯು ವ್ಯಕ್ತಿವೈಪರೀತ್ಯಗಳ ಆಡಂಬೊಲವಾಗಬಾರದು. ಸೈದ್ಧಾಂತಿಕ ಸಂವಾದದ ಅವಕಾಶಗಳನ್ನು ತೆರೆಯಬೇಕು. ಸಂವಾದದಲ್ಲಿ ಸ್ನೇಹಪೂರ್ವಕ ವಾದ-ಪ್ರತಿವಾದದ ಅವಕಾಶವಿರಬೇಕೇ ಹೊರತು ಮೊಂಡುವಾದದ ಹುದ್ದರಿಗಳ ವೀರಾವೇಶಕ್ಕೆ ವೇದಿಕೆಯಾಗಬಾರದು.
ಇಂದು ಮೊಂಡುವಾದದ ತುಂಡು ತಂಡಗಳ ತುರಿಕೆ ತೀವ್ರವಾಗುತ್ತಿದೆ; ಮೊಂಡುವಾದವೇ ಒಂದು ವ್ಯಾದಿಯಾಗುತ್ತಿದೆ. `ಅಂತಿಮ ಸತ್ಯದ ಹರಿಕಾರ’ರ ಆರ್ಭಟ ಪ್ರಚಾರದ ಪ್ರಥಮ ಸ್ಥಾನದಲ್ಲಿದೆ. ಇಂಥ ಸವಾಲಿನ ಸಂದರ್ಭದಲ್ಲಿ ಸತ್ಯಶೋಧನೆಯ ಸಂವಾದದಿಂದ ನಾವು ಜನಮನ ತಲುಪಬೇಕಾಗಿದೆ.
ಯಾಕೆಂದರೆ, ಸಾಂಸ್ಕೃತಿಕ ಲೋಕದಲ್ಲಿದ್ದ ವಿವೇಕಕ್ಕೆ ಅವಿವೇಕದ ಅಪವ್ಯಾಖ್ಯಾನಗಳನ್ನು ಎದುರಿಗಿಟ್ಟು ಇಂದು ಜನರಲ್ಲಿ ಭಾವೋದ್ರೇಕವುಂಟು ಮಾಡಲಾಗುತ್ತಿದೆ. ಯಾವುದು ಧರ್ಮ, ಯಾವುದು ಸಂಸ್ಕೃತಿ, ಯಾವುದು ದೇಶಭಕ್ತಿ, ಯಾವುದು ದೇಶದ್ರೋಹ ಎಂಬ ವಿಚಾರಗಳಲ್ಲಿ ಏಕಪಕ್ಷೀಯ ಸಾಂಸ್ಕೃತಿಕ ತೀರ್ಪುಗಳು ಬರುತ್ತಿವೆ. ಧರ್ಮವನ್ನೇ ಸಂಸ್ಕೃತಿ ಎಂದು ಅನೇಕರು ಬಿಂಬಿಸುತ್ತಿದ್ದಾರೆ. ಧರ್ಮವೆನ್ನುವುದು ಸಂಸ್ಕೃತಿಯ ಒಂದು ಭಾಗ ಮಾತ್ರ ಎಂಬುದನ್ನು ಮರೆಮಾಚುತ್ತಿದ್ದಾರೆ. ರಾಷ್ಟ್ರೀಯತೆಯನ್ನೂ ಅಪವ್ಯಾಖ್ಯಾನ ಮಾಡುತ್ತಿದ್ದಾರೆ. ಮೂಲಭೂತವಾದಿಗಳು ರಾಷ್ಟ್ರೀಯತೆಗೂ ಧರ್ಮಕ್ಕೂ ಸಂಬಂಧ ಕಲ್ಪಿಸುತ್ತಾರೆ. ಮೂಲಭೂತವಾದಿಗಳಿರಲಿ ಇತ್ತೀಚೆಗೆ ದಿನಾಂಕ: 12-9-2018ರಂದು ನಿವೃತ್ತ ನ್ಯಾಯಮೂರ್ತಿಯೊಬ್ಬರು ‘ಹಿಂದುತ್ವವೇ ರಾಷ್ಟ್ರೀಯತೆ’ ಎಂದು ಪ್ರತಿಪಾದಿಸಿದ್ದು ವರದಿಯಾಯಿತು. ಮೂಲಭೂತವಾದಿ ಧರ್ಮಗುರುಗಳು ಅಥವಾ ಅದೇ ವಿಚಾರದಾಟಿಯ ರಾಜಕೀಯ ನೇತಾರರು ಹೀಗೆ ಹೇಳಿದರೆ ಅವರ ಅಪವ್ಯಾಖ್ಯಾನಕ್ಕೆ ಅಧ್ಯಯನದ ಕೊರತೆ ಅಥವಾ ಪ್ರಜ್ಞಾಪೂರ್ವಕ ಪ್ರತಿಗಾಮಿ ನಿಲುವು ಕಾರಣವೆನ್ನಬಹುದು. ಸಂವಿಧಾನದ ಆಳ ಅಗಲಗಳನ್ನು ಅರ್ಥ ಮಾಡಿಕೊಂಡಿದ್ದಾರೆಂದು ಭಾವಿಸಲಾದ ನ್ಯಾಯಮೂರ್ತಿಗಳು ರಾಷ್ಟ್ರೀಯತೆಯನ್ನು ಹಿಂದುತ್ವಕ್ಕೆ ಸೀಮಿತಗೊಳಿಸಿದರೆ ಏನೆನ್ನಬೇಕು? ಇದು ಸಂವಿಧಾನಾತ್ಮಕ ಆಶಯದ ಅಪವ್ಯಾಖ್ಯಾನ ಎನ್ನಬೇಕು. ಹೀಗೆ ವಿವಿಧ ವಲಯಗಳ ಅಪವ್ಯಾಖ್ಯಾನದ ಅಬ್ಬರದಲ್ಲಿ ನಿಜ ವ್ಯಾಖ್ಯಾನ ನಿಬ್ಬೆರಗಾಗಿ ಹಾದಿಬದಿಯಲ್ಲಿ ನಿಲ್ಲುವಂತಾಗಿದೆ. ಅಷ್ಟೇ ಅಲ್ಲ, ‘ಸಂವಾದ’ಕ್ಕೆ ಅವಕಾಶವನ್ನೇ ಕೊಡದಿರುವ ಈ ಅಬ್ಬರ ಬೊಬ್ಬಿರಿದು ನಿಜ ದನಿಗಳನ್ನು ಕೇಳಿಸದಂತೆ ಮಾಡುತ್ತಿದೆ.
ಸಾಂಸ್ಕೃತಿಕ ಕ್ಷೇತ್ರದ ಬೋಧನೆ, ಚಿಂತನೆ, ಸಂಶೋಧನೆಗಳು ಮೂಲಭೂತವಾದಿ ಮಾತಿನ ಅಬ್ಬರಕ್ಕೆ ಬಲಿಯಾಗುತ್ತಿವೆ. ಹಿಂದೆ ಕವಿಗಳ ಕಾಲನಿರ್ಣಯ, ಜನ್ಮಸ್ಥಳ, ಮೃತ್ಯುಸ್ಥಳಗಳನ್ನು ಸಂಶೋಧಿಸುತ್ತಿದ್ದರೆ, ಈಗ ಮಾನವರನ್ನು ಬಿಟ್ಟು (ಇಲ್ಲದ) ದೇವರ ಜನ್ಮಸ್ಥಳ, ಮೃತ್ಯುಸ್ಥಳಗಳ ಸಂಶೋಧನೆ ಮುಂಚೂಣಿಗೆ ಬರುತ್ತಿದೆ. ಮಂದಿರ, ಮಸೀದಿಗಳ ಮೂಲವನ್ನು ಹುಡುಕಿ ರಾಜಕೀಯ ಹುನ್ನಾರಕ್ಕೆ ನೆರವು ನೀಡಲಾಗುತ್ತಿದೆ. ಧರ್ಮ ಮತ್ತು ಸಂಸ್ಕೃತಿಗಳು ಈಗ ರಾಜಕೀಯ ಅಸ್ತ್ರಗಳಾಗುತ್ತಿರುವ ಆತಂಕದಲ್ಲಿ ಇಂಥ ಚಿಂತನೆ ಮತ್ತು ಸಂಶೋಧನೆಗಳ ಅಪಾಯವನ್ನು ಮನಗಾಣಬಹುದು. ಈಗ ಸಾಂಸ್ಕೃತಿಕ ಸಂಶೋಧಕರಿಗಿಂತ ರಾಜಕೀಯ ಸಂಶೋಧಕರೇ ಮುಂಚೂಣಿಯಲ್ಲಿದ್ದಾರೆ, ಮುಖ್ಯವಾಗುತ್ತಿದ್ದಾರೆ. ಧರ್ಮಪರ ಚಿಂತಕರೇ ಸಂಸ್ಕೃತಿ ಚಿಂತಕರೆಂದು ಜನಪ್ರಿಯವಾಗುತ್ತಿದ್ದಾರೆ. ಹಿಂದೂ ಸಂಸ್ಕೃತಿ ಚಿಂತಕರು, ಇಸ್ಲಾಂ ಸಂಸ್ಕೃತಿ ಚಿಂತಕರು ಎಂಬ ಹಣೆಪಟ್ಟಿಗಳನ್ನು ಅಂಟಿಸುವ ಕಾರ್ಯಪಡೆಗಳು ಕಣ್ಣೆದುರು ನಿಂತುಕೊಂಡಿವೆ. ಇವು ಸಂವಾದಕ್ಕೆ ಸಿದ್ಧವಿರುವ ಪಡೆಗಳಲ್ಲ. ದನಿಯಡಗಿಸುವ ಸಂಘರ್ಷಕ್ಕೆ ಸಜ್ಜಾದ ಪಡೆಗಳು. ಇದರ ಫಲವಾಗಿ ಪರಸ್ಪರ ಚರ್ಚಿಸುವ, ಸಂವಾದಿಸುವ ಸನ್ನಿವೇಶ ಸೊರಗಿ ಹೋಗುತ್ತಿದೆ.
ನಾವು ತಿಳಿಯಬೇಕಾದ ಪ್ರಥಮ ಪಾಠ: ಪ್ರಜಾಪ್ರಭುತ್ವದಲ್ಲಿ ಸಂವಾದವು ಒಂದು ಸತ್ವಯುತ ಸ್ನೇಹ ಸಾಧನ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಂವಾದಕ್ಕೆ ವಿಶೇಷ ಮಹತ್ವವಿದೆ. ಸಾಂಸ್ಕೃತಿಕ ಕ್ಷೇತ್ರ ಬೆಳೆಯುತ್ತ ಬಂದಿರುವುದೇ ಒಳ ಮತ್ತು ಹೊರ ಸಂವಾದಗಳ ಸಾರ್ಥಕತೆಯಿಂದ. ಸಾಹಿತ್ಯಕ್ಷೇತ್ರಕ್ಕೆ ಬಂದರೆ, ಕೃತಿ ಪರಂಪರೆಯೊಂದಿಗೆ ನಡೆಸುವ ಮೌನ ಒಳಸಂವಾದದಿಂದ `ಪಂಪಭಾರತ’ ರಚನೆಗೆ ಪ್ರೇರಣೆ ಸಿಗುತ್ತದೆ. ಆಶ್ರಯ ನೀಡಿದ ರಾಜನಿಗೆ ಶರಣಾಗದೆಯೂ ಎದುರಾಗುವ ಹೊರಸಂವಾದವೂ ಸಾಧ್ಯವಾಗುತ್ತದೆ. ತನಗೆ ಆಶ್ರಯ ನೀಡಿದ ರಾಜನೇ ಅರ್ಜುನನಲ್ಲಿದ್ದಾನೆಂಬಂತೆ ಚಿತ್ರಿಸುತ್ತ ರಾಜನಿಗೆ ಗೌರವ ಕೊಡುತ್ತಲೇ ಆತನಿಗೆ ಎದುರಾದ ಪ್ರತಿನಾಯಕ ಕರ್ಣನನ್ನು ಮುಖ್ಯವಾಗಿಸುವ ರೀತಿಯಲ್ಲಿ ಹೊರಗಿನ ಸಾಮಾಜಿಕ ಸಂವಾದದ ಪಾತ್ರವಿದೆ. ಆದ್ದರಿಂದಲೇ ಪಂಪನಲ್ಲಿ ‘ಕುಲಂ ಕುಲಮಲ್ತು ಬೀರಮೆ ಕುಲಂ… ಅಭಿಮಾನಮದೊಂದೆ ಕುಲಂ’ ಎಂಬ ಮಾತು ಬರುತ್ತದೆ. ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಆದಿಪುರಾಣದ ಪಂಪನುಡಿ ಇಂದಿಗೂ ಸಾಮಾಜಿಕ ಘೋಷವಾಕ್ಯವಾಗಿದೆ.
ಪಂಪಭಾರತದಲ್ಲಿ ‘ಕರ್ಣರಸಾಯನಮಲ್ತೆ ಭಾರತಂ… ನೆನೆವೊಡೆ ಕರ್ಣನಂ ನೆನೆಯ’ ಎಂಬ ಪ್ರತಿನಾಯಕ ಪರವಾದ ಆಶಯಗಳು ಅಭಿವ್ಯಕ್ತಗೊಂಡಿವೆ. ಈ ಎಲ್ಲ ಆಶಯಗಳ ಹಿಂದೆ ಪಂಪ ನಡೆಸಿದ ರಾಜಕೀಯ ಮತ್ತು ಸಾಮಾಜಿಕ ಹೊರ ಸಂವಾದದ ಪ್ರೇರಣೆಯಿದೆ. ಪ್ರಭುತ್ವದೊಳಗಿದ್ದೂ ಪ್ರಭುತ್ವವನ್ನು ಮೀರುವ ಸೃಜನಶೀಲ ಸ್ವಾತಂತ್ರ್ಯದ ಆಶಯಕ್ಕೆ ಬೀಜರೂಪವಾದ ಪಂಪ ಕವಿಯ ಒಳ ಮತ್ತು ಹೊರ ಸಂವಾದಗಳ ಸ್ವರೂಪ ಅನನ್ಯವಾದುದ್ದು. ಪಂಪ ಕವಿಯಲ್ಲಿ ಸಂವಾದವು ಮೌನ ಮತ್ತು ಮಾತು – ಎರಡೂ ನೆಲೆಯಲ್ಲಿ ಕೆಲಸ ಮಾಡಿದೆ. ಇದು ಇಂದಿಗೂ ಮಾದರಿಯಾಗಿದೆ. ಪಂಪಕವಿಗೂ ಹಿಂದೆ ಎಂಟನೇ ಶತಮಾನದ ಶ್ರೀವಿಜಯ ಕೃತ ‘ಕವಿರಾಜ ಮಾರ್ಗ’ದಲ್ಲಿ ಬರುವ ನುಡಿಯೊಂದು ಪಂಪನ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ನುಡಿಮುತ್ತಿನಷ್ಟೇ ಮುಖ್ಯವಾಗಿದೆ. ‘ಕವಿರಾಜ ಮಾರ್ಗ’ಕಾರನ ಪ್ರಕಾರ ‘ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮುಂ ಪರಧರ್ಮಮುಮಂ’. ಅಂದರೆ ‘ಬೇರೆ ವಿಚಾರ ಮತ್ತು ಬೇರೆ ಧರ್ಮವನ್ನು ಸಹಿಸುವುದೇ ಬಂಗಾರ’. ಆದರೆ ಎಂಟನೇ ಶತಮಾನದಲ್ಲಿದ್ದ ಈ ಸಹಿಷ್ಣುತೆಯ ಸಾಮಾಜಿಕ ವಿವೇಕ ಇಪ್ಪತ್ತೊಂದನೇ ಶತಮಾನದಲ್ಲಿ ನುಚ್ಚುನೂರಾಗುತ್ತಿದೆ. ಅವಿವೇಕದ ಅಬ್ಬರದಲ್ಲಿ ವಿವೇಕ ಒದ್ದಾಡುತ್ತಿದೆ. ಅಸಹಿಷ್ಣುತೆಯ ಆಕ್ರಮಣದಲ್ಲಿ ಸಹಿಷ್ಣುತೆ ನೆಲ ಕಚ್ಚುತ್ತಿದೆ. ಹಾಗೆಂದು ಸಹಿಷ್ಣುತೆ ಪರವಾದ ಪ್ರತಿಪಾದನೆ ಸತ್ತಿಲ್ಲ; ಸಹಿಷ್ಣುತೆಗೆ ಸಂಪೂರ್ಣ ಸಮಾಧಿ ಕಟ್ಟಲು ಸಾಧ್ಯವಾಗಿಲ್ಲ. ಹಾಗೆಂದು ಮುಂಚೂಣಿಯ ಮೌಲ್ಯವಾಗಿ ಮೂಲಭೂತವಾದಿಗಳನ್ನು ಹಿಮ್ಮೆಟ್ಟಿಸುವ ಬೃಹತ್ ಶಕ್ತಿಯೂ ಆಗಿಲ್ಲ. ಹಿಂದೆ ಸಾಧ್ಯವಾಗಿದ್ದ ಒಳ ಮತ್ತು ಹೊರ ಸಂವಾದ ಸನ್ನಿವೇಶವೂ ಈಗಿಲ್ಲ.
ದೇಶದ ಇಂದಿನ ಮತೀಯ ರಾಜಕೀಯವು ಸಂವಾದದ ಸಾಧ್ಯತೆಗಳನ್ನು ಸಂಹರಿಸುವ ಸಂಭ್ರಮಕ್ಕೆ ಸಿಂಹಾಸನ ಹಾಕಿದೆ; ಸಮೂಹ ಸನ್ನಿಯನ್ನು ಬೆಳೆಸುತ್ತಿದೆ. ಧರ್ಮ ಮತ್ತು ಸಂಸ್ಕೃತಿಗಳನ್ನು ಸಮೂಹಸನ್ನಿ ಸೃಷ್ಟಿಯ ಸಾಧನಗಳನ್ನಾಗಿ ಬಳಸಲಾಗುತ್ತಿದೆ. ‘ಸಮೂಹ ಸನ್ನಿ’ ಪ್ರವೃತ್ತಿಯನ್ನು ಯಾವ ಮತೀಯವಾದಿಗಳು ಬೆಳೆಸಿದರೂ ಅದು ವಿರೋಧಕ್ಕೆ ಅರ್ಹ.
ಬಹುಸಂಖ್ಯಾತರಾಗಲಿ, ಅಲ್ಪಸಂಖ್ಯಾತರಾಗಲಿ ಧರ್ಮ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ಸಮೂಹ ಸನ್ನಿಗೆ ಕಾರಣವಾದರೆ ಅದು ಸಂವಾದಕ್ಕೆ ಸಮಾಧಿ ಕಟ್ಟುವ ಪ್ರಯತ್ನವೇ ಸರಿ. ಇಂಥ ಪ್ರವೃತ್ತಿಯಿಂದ ಇಂದು ಸಂಯಮ, ಸಂವಾದ, ಸಹಿಷ್ಣುತೆಗಳು ನೆನಪಿನ ನಿಘಂಟುವಿನಲ್ಲಿ ಅಚ್ಚಾಗಿ ಪೆಚ್ಚಾಗಿ ಕೂಡುವಂತಾಗಿದೆ. ಇಪ್ಪತ್ತನೇ ಶತಮಾನದ ಸಮಾನತೆಯ ಹೋರಾಟಕ್ಕೆ ಹಿನ್ನಡೆಯಾಗಿ, ಸದ್ಯ ಸಹಿಷ್ಣು ಸಮಾಜ ಸಾಧ್ಯವಾದರೆ ಸಾಕೆಂದು ನಿಟ್ಟುಸಿರು ಬಿಡುವಂತಾಗಿದೆ. ಆದ್ಯತೆಗಳ ಪಲ್ಲಟವಾಗಿದೆ.
ಸಮೂಹ ಸನ್ನಿಗೆ ಒಳಗಾಗುತ್ತಿರುವವರಲ್ಲಿ ಯುವಪೀಳಿಗೆಯವರೇ ಹೆಚ್ಚಿರುವಂತೆ ಕಾಣುತ್ತಿದೆ. ಹುಮ್ಮಸ್ಸಿನ ವಯಸ್ಸು ಉದ್ರೇಕಕ್ಕೆ ಒಳಗಾಗುವ ಸ್ವಾಭಾವಿಕ ಸ್ಥಿತಿಯನ್ನು ಮೂಲಭೂತವಾದಿ ಧಾರ್ಮಿಕ ಮತ್ತು ರಾಜಕೀಯ ನೇತಾರರು ಚೆನ್ನಾಗಿ ದುರುಪಯೋಗಿಸಿಕೊಳ್ಳುತ್ತಿದ್ದಾರೆ. ಭಯೋತ್ಪಾದನೆಯ ದುಷ್ಟಫಲಿತಗಳನ್ನು ಮೆಟ್ಟಬೇಕಾದ ಪರಿಸ್ಥಿತಿಯ ಜೊತೆ ಜೊತೆಗೇ ಭಾರತದ ಭಾವೋದ್ರೇಕೀಕರಣವೂ ನಡೆಯುತ್ತಿದೆ. ಭಯೋತ್ಪಾದನೆಯನ್ನು ಹಿಮ್ಮೆಟ್ಟಿಸಲೇಬೇಕು; ನಿಜ. ಆದರೆ ಧಾರ್ಮಿಕ ಮೂಲಭೂತವಾದವನ್ನು ಭಾವೋದ್ರೀಕೀಕರಣಕ್ಕೆ ಸಾಧನವಾಗಿಸಿ ಒಳ ಸಂಘರ್ಷಗಳನ್ನು ಹುಟ್ಟುಹಾಕಬಾರದು. ಸಂವಾದದ ಸತ್ವವನ್ನು ಸಮೂಹ ಸನ್ನಿಯಿಂದ ಸಾಯಿಸಬಾರದು. ಅರ್ಥಪೂರ್ಣ ಚರ್ಚೆ, ಚಿಂತನೆಗಳನ್ನು ವ್ಯರ್ಥಗೊಳಿಸಬಾರದು. ಇಂಥ ಹುನ್ನಾರಗಳು ನಿರ್ಭಿಡೆಯಿಂದ ನಡೆಯುತ್ತಿದ್ದು ಅತಾರ್ಕಿಕ ಹಾಗೂ ಅವೈಚಾರಿಕ ಬಾಯಿಬಾಂಬುಗಳಿಗೆ ಕೆಲವು ಉದಾಹರಣೆಗಳನ್ನು ನೀಡಬಯಸುತ್ತೇನೆ:
1. ಇಂದು ಯೋಗಕ್ಕೆ ಎಂದಿಲ್ಲದ ಪ್ರಾಶಸ್ತ್ರ್ಯ ಬಂದಿದೆ. ಏಕಾಗ್ರತೆಯನ್ನು ಸಾಧಿಸುವ ದೇಹ ಮತ್ತು ಮನಸ್ಸುಗಳೊಂದಾದ ಯೋಗಾಭ್ಯಾಸವು ಇಂದು ಏಕಾಂತವನ್ನು ಬಿಟ್ಟು ದೈಹಿಕ ಬಹಿರಂಗ ಪ್ರದರ್ಶನವಾಗುತ್ತಿದೆ. ಅದರಲ್ಲೂ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಜಾರಿಗೆ ಬಂದ ಮೇಲಂತೂ ಅದರ ಮಾರುಕಟ್ಟೆ ಮೌಲ್ಯವೇ ಮುಖ್ಯವಾಗುತ್ತಿದೆ. 2015ರಲ್ಲಿ ಯೋಗ ದಿನಾಚರಣೆ ಸಂದರ್ಭ ಬಂದಾಗ ಕೆಲವು ಇಸ್ಲಾಂ ಗುರುಗಳು ‘ಸೂರ್ಯ ನಮಸ್ಕಾರ ನಮ್ಮ ಧರ್ಮಕ್ಕೆ ಸಮ್ಮತವಲ್ಲ’ ಎಂಬ ಕಾರಣ ನೀಡಿ ಯೋಗದ ಈ ಭಾಗವನ್ನು ವಿರೋಧಿಸಿದರು. ಆಗ (ಇಂದಿನ ಉತ್ತರಪ್ರದೇಶದ ಮುಖ್ಯಮಂತ್ರಿ, ಅಂದಿನ ಸಂಸತ್ ಸದಸ್ಯ) ಯೋಗಿ ಆದಿತ್ಯನಾಥರು 09-06-2015ರಂದು ‘ಯೋಗ ವಿರೋಧಿಗಳು ಹಿಂದೂಸ್ತಾನ ಬಿಡಲಿ, ಸೂರ್ಯ ನಮಸ್ಕಾರ ವಿರೋಧಿಗಳು ಸಮುದ್ರಕ್ಕೆ ಬೀಳಲಿ’ ಎಂದು ಅಬ್ಬರಿಸಿದರು.
ಸರಿ ಸುಮಾರು ಇದೇ ಅವಧಿಯಲ್ಲಿ ಇನ್ನೊಬ್ಬ ಸಂಸತ್ ಸದಸ್ಯ ಸಾಕ್ಷಿ ಮಹಾರಾಜ್ ‘ಗೋಡ್ಸೆ ಮಹಾನ್ ದೇಶಭಕ್ತ’ ಎಂದು ಘೋಷಿಸಿದ್ದಲ್ಲದೆ ‘ಇಸ್ಲಾಂ ಮತ್ತು ಕ್ರೈಸ್ತರಾಗಿ ಮತಾಂತರ ಹೊಂದುವವರನ್ನು ನೇಣಿಗೇರಿಸಬೇಕು’ ಎಂದು ಕರೆಕೊಟ್ಟರು. ಇವರಿಬ್ಬರೂ ಕಾವಿಧಾರಿಗಳು! ಒಬ್ಬರಿಗೆ ಯೋಗ ವಿರೋಧಿಸುವವರು ದೇಶದಲ್ಲೇ ಇರಬಾರದು. ಇನ್ನೊಬ್ಬರಿಗೆ ದೇಶಭಕ್ತಿಯ ಪ್ರತೀಕ – ಗಾಂಧಿ ಕೊಲೆಗಾರ ಗೋಡ್ಸೆ! ದೇಶಭಕ್ತಿಯನ್ನು ಇಂಥ ಸಂಕುಚಿತ ಸ್ಥಿತಿಗೆ ತಂದವರ ದೇಶಭಕ್ತಿಯೇ ಪ್ರಶ್ನಾರ್ಹವಾದುದು. ಈ ಇಬ್ಬರಲ್ಲಿ ಒಬ್ಬರು ಅಲ್ಪಸಂಖ್ಯಾತರಿಗೆ ಸಮುದ್ರ ತೋರಿಸಿದರೆ, ಇನ್ನೊಬ್ಬರು ಮತಾಂತರಿಗಳಿಗೆ ನೇಣು ತೋರಿಸುತ್ತಾರೆ. ಅಂದರೆ ಇಬ್ಬರೂ ಸಂವಾದಕ್ಕೆ ಬದ್ಧರಲ್ಲ. ಸಂಹಾರಕ್ಕೆ ಸಿದ್ಧರು.
ಇಂಥವರು ವಿವೇಕಾನಂದರು ಮತಾಂತರಕ್ಕೆ ನೀಡಿದ ನಿಜ ಕಾರಣಗಳನ್ನು ಓದಿ ಅರ್ಥಮಾಡಿಕೊಳ್ಳಬೇಕು. ಕ್ರಿಶ್ಚಿಯನ್ ಮಿಷನರಿಗಳು ‘ಭಾರತ’ಕ್ಕೆ ಬಂದು ಮತಾಂತರ ಮಾಡುವುದನ್ನು ಮಾತ್ರವಲ್ಲ, ಯಾವುದೇ ಧರ್ಮೀಯರ ಮತಾಂತರವನ್ನು ವಿರೋಧಿಸುವ ವಿವೇಕಾನಂದರು ಮತಾಂತರದ ಕಾರಣವನ್ನು ಹೀಗೆ ನಿರೂಪಿಸಿದ್ದಾರೆ: ‘ಬಲಪ್ರಯೋಗದಿಂದ ಅವರನ್ನು (ಹಿಂದೂ ಜನರನ್ನು) ಮುಸಲ್ಮಾನ್ ಮತಕ್ಕೆ ಸೇರಿಸಿದರು ಎನ್ನುವುದು ಶುದ್ಧ ತಪ್ಪು. ಜಮೀನ್ದಾರರ ಉಪಟಳದಿಂದ, ಪುರೋಹಿತರ ಹಿಂಸೆಯಿಂದ ತಪ್ಪಿಸಿಕೊಳ್ಳಬೇಕೆಂದು ಮುಸಲ್ಮಾನರಾದರು. ಬ್ರಾಹ್ಮಣರ ಬಂಧನದಿಂದ ಪಾರಾಗಲು ಯತ್ನಿಸಿದ ಜನ ಸಾಮಾನ್ಯರು ಕ್ರೈಸ್ತಧರ್ಮ ಮುಂತಾದ ದೇಶದೊಳಗಿನ ವಿರೋಧಿ ಧಾರ್ಮಿಕ ಹಾವಳಿಗೆ ಸಿಕ್ಕಿದರು’ -ಇದು ಮತಾಂತರಕ್ಕೆ ವಿವೇಕಾನಂದರು ಕೊಟ್ಟ ಕಾರಣ. ಈ ಕಾರಣ ಸ್ವಯಂ ಸ್ಪಷ್ಟವಾಗಿದೆ. ವ್ಯಾಖ್ಯಾನದ ಅಗತ್ಯ ಕಾಣುವುದಿಲ್ಲ. ಆದರೆ ಇದೆಲ್ಲವೂ ಮತಾಂತರ ವಿರೋಧಿಗಳಿಗೆ ಅರ್ಥವಾಗಬೇಕಲ್ಲ! ಮತಾಂತರದ ಮೂಲಕಾರಣಗಳಿಗೆ ಪರಿಹಾರ ಹುಡುಕದ ವೃಥಾ ವಿರೋಧಕ್ಕೆ ಅರ್ಥವಿಲ್ಲ.
2. ಇನ್ನು ಸಾದ್ವಿ ಬಾಲಿಕಾ ಸರಸ್ವತಿ 02-03-2015ರಂದು ಕೊಟ್ಟ ಕರೆ ಹೀಗಿದೆ: ‘ಹಿಂದೂ ಯುವತಿಯರು ಕತ್ತಿ ಹಿಡಿಯಬೇಕು. ಲವ್ಜಿಹಾದ್ ಮಾಡಲು ಬಂದವರನ್ನು ಕತ್ತಿಯಿಂದ ಕಡಿಯಬೇಕು’. ನಿಜಕ್ಕೂ ಲವ್ಜಿಹಾದ್ನಿಂದ
ಹಿಂದೂ ಯುವತಿಯರನ್ನು ಯಾರಾದರೂ ವಂಚಿಸಿದರೆ ವಿರೋಧಿಸೋಣ. ಆದರೆ ‘ಕತ್ತಿಯಿಂದ ಕಡಿಯಬೇಕು’ ಎಂದು ಹೇಳುವುದು ಎಂಥ ಧರ್ಮ? ಇದು ಹಿಂದೂ ಧರ್ಮದ ನೀತಿಯನ್ನೇ ಅಣಕಿಸಿದಂತೆ ಅಲ್ಲವೆ?
3. ಹುತಾತ್ಮ ಕ್ಯಾಪ್ಟನ್ ಮಂದೀಪ್ಸಿಂಗ್ ಅವರ ಪುತ್ರಿ ಗುರುಮಿಹರ್ ಕೌರ್ 22-02-2017ರಂದು ತಮ್ಮ ವಾಟ್ಸ್ಆಪ್ನಲ್ಲಿ ಚಿತ್ರೀಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಜವಾಹರಲಾಲ್ ನೆಹರೂ ಯೂನಿವರ್ಸಿಟಿಯಲ್ಲಿ
ಉಮರ್ಖಾಲಿದ್ ಭಾಷಣ ಮಾಡಲು ಅವಕಾಶ ನೀಡಬಾರದೆಂದು ಎ.ಬಿ.ವಿ.ಪಿ ವಿರೋಧ ವ್ಯಕ್ತಪಡಿಸಿತ್ತು. ಎ.ಬಿ.ವಿ.ಪಿ.ಯ ಈ ವಿರೋಧ ಪ್ರಜಾಪ್ರಭುತ್ವ ವಿರೋಧಿ ಎಂದು ಗುರುಮಿಹರ್ ಕೌರ್ ಹೇಳಿಕೆ ಕೊಟ್ಟಿದ್ದರು.
ಆಗ ಧಾರ್ಮಿಕ ಮೂಲಭೂತವಾದಿಗಳು ‘ಈಕೆಯನ್ನು ರೇಪ್ ಮಾಡಬೇಕು’ ಎಂದು ಹೇಳಿಕೆ ಕೊಟ್ಟರು. ಹೀಗೆ ಹೇಳಿಕೆ ಕೊಟ್ಟವರು ಸಂಸ್ಕೃತಿ ಸಂರಕ್ಷಕರೆಂದು ಬಿಂಬಿಸಿಕೊಂಡ ಬಾಯಿಬಾಂಬಿನವರು! ಎಂಥ ವಿಪರ್ಯಾಸ! ಸಂಸ್ಕೃತಿ ಪರಿಕಲ್ಪನೆಗೆ ಇಂಥ ದುಸ್ಥಿತಿ ಬರಬಾರದು.
4. 09-04-2017ರಂದು ಹೈದರಾಬಾದ್ನಲ್ಲಿ ತೆಲಂಗಾಣದ ಬಿಜೆಪಿ ಶಾಸಕ ರಾಜ್ಸಿಂಗ್ ತೋಮರ್ ಹೀಗೆ ಬೊಬ್ಬರಿದರು : ‘ರಾಮ ಮಂದಿರಕ್ಕೆ ಅಡ್ಡಿಪಡಿಸಿದರೆ ತಲೆ ಕತ್ತರಿಸುತ್ತೇನೆ. ಗುಂಡು ಹಾರಿಸುತ್ತೇನೆ’. ಇದೇ ಶಾಸಕ 14-12-2017ರಂದು ಯಾದಗಿರಿಯಲ್ಲಿ ಭಾಷಣ ಮಾಡುತ್ತ ‘ಹಿಂದೂ ಧರ್ಮ ವಿರೋಧಿಗಳ ತಲೆ ಕಡಿಯಬೇಕು. ಹಿಂದೂಗಳೂ ಖಡ್ಗ ಇಟ್ಟುಕೊಳ್ಳಬೇಕು’ ಎಂದು ಕರೆಕೊಟ್ಟರು. ಇಂಥವರು ಹಿಂದೂ ಧರ್ಮದ ವಕ್ತಾರರೆಂದು ಹೇಳಿದರೆ ಅದು ಹಿಂದೂ ಧರ್ಮಕ್ಕೆ ಮಾಡುವ ಅವಮಾನ. ಆದರೇನು ಮಾಡುವುದು, ಈಗ ಮಾನ, ಅವಮಾನಗಳ ವ್ಯಾಖ್ಯಾನವೇ ಬದಲಾದಂತೆ ಕಾಣುತ್ತಿದೆ!
5. 20-04-2017ರಂದು ರಾಷ್ಟ್ರೀಯ ಗೋರಕ್ಷಕ ದಳದ ನೇತಾರ ನಾಗೇಂದ್ರಕುಮಾರ್ ಹೀಗೆಂದರು : ‘ಗೋಹತ್ಯೆ ಮಾಡಿ ತಿನ್ನುವವರನ್ನು ಸಾಯಿಸುವುದಿಲ್ಲ. ಕಾಲು ಕತ್ತರಿಸುತ್ತೇವೆ. ಆಗ ಕೊಲೆಯ ಅಪಾದನೆಯಿಂದ ಪಾರಾಗಬಹುದು’ ಇವರು ತಾವು ಪಾರಾಗಲು ಕೊಲೆ ಮಾಡದೇ ರಿಯಾಯಿತಿ ಕೊಟ್ಟಿದ್ದಾರೆ!
6. ಆದರೆ `ಭಾರತ ಹಿಂದೂ ಮಹಾಸಭಾ’ದ ರಾಷ್ಟ್ರೀಯ ಕಾರ್ಯದರ್ಶಿಯಾದ ಪೂಜಾ ಶಕುನ್ ಪಾಂಡೆಯವರು ಇಂಥ ರಿಯಾಯಿತಿ ಕೊಡುವುದಿಲ್ಲ. 26-08-2018ರಲ್ಲಿ ವರದಿಯಾದಂತೆ ಹೀಗೆ ಘೋಷಿಸಿದರು : ‘ನಾನು ಗೋಡ್ಸೆಗಿಂತ ಮೊದಲು ಹುಟ್ಟಿದ್ದರೆ ಮಹಾತ್ಮಗಾಂಧಿಯನ್ನು ನಾನೇ ಕೈಯ್ಯಾರೆ ಕೊಲ್ಲುತ್ತಿದ್ದೆ’. ಆದರೇನು ಮಾಡುವುದು, ಇವರು ಗೋಡ್ಸೆಗಿಂತ ತಡವಾಗಿ ಹುಟ್ಟಿದ್ದರು! ಮಲಿನ ಮನಸ್ಸಿನ ಹಿಂಸಾತ್ಮಕ ನುಡಿ ನೇತಾರರು ಯಾವಾಗಹುಟ್ಟಿದರೇನಂತೆ, ‘ನೀಚಬುದ್ಧಿಯ ಬಿಡು ನಾಲಗೆ’ ಎಂಬ ಹರಿದಾಸರ ನುಡಿಯನ್ನು ಹೇಳಿದರೂ ಪ್ರಯೋಜನವಿಲ್ಲ.
7. ವ್ಯಕ್ತಿ ವಧೆಯ ಕರೆಗಳಾಚೆಗೆ ಇನ್ನೊಂದು ಉದಾಹರಣೆಯಿದೆ. ಇದು ನಮ್ಮ ದೇಶಗ್ರಂಥ ಸಂವಿಧಾನದ ಪ್ರತಿಯನ್ನು ಸುಟ್ಟ ಪ್ರಕರಣ. 12-08-2018ರಂದು ಕೆಲವು ಕಿಡಿಗೇಡಿಗಳು ದೆಹಲಿಯ ಜಂತರ್ ಮಂತರ್ ನಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟು ಡಾ. ಅಂಬೇಡ್ಕರ್ ಅವರ ವಿರುದ್ಧ ಘೋಷಣೆ ಕೂಗಿದರು. ಇಪ್ಪತ್ತನೇ ಶತಮಾನದಲ್ಲಿ ಇಂಥದೊಂದು ಘಟನೆ ನಡೆಯಲು ಸಾಧ್ಯವಿರಲಿಲ್ಲ. ಅಂಥ ಕೆಟ್ಟ ಧೈರ್ಯವೂ ಇರಲಿಲ್ಲ. ಈಗ ಕಿಡಿಗೇಡಿಗಳ ಕೆಟ್ಟಕೃತ್ಯಕ್ಕೆ ದೇಶದ ರಾಜಧಾನಿ ಸಾಕ್ಷಿ ಸ್ಥಳವಾಯಿತು. ಸಂವಿಧಾನದ ಪ್ರತಿಯನ್ನು ಸುಟ್ಟವರು ಜಾತ್ಯತೀತ ತತ್ತ್ವವನ್ನು ಸುಟ್ಟರು; ಧಾರ್ಮಿಕ ಸೌಹಾರ್ದತೆಯನ್ನು ಸುಟ್ಟರು; ಸಮಾನತೆಯ ಆಶಯವನ್ನು ಸುಟ್ಟರು; ಆದರೂ ರಾಜಾರೋಷವಾಗಿ ಹೋದರು!
8. ‘ಪದ್ಮಾವತಿ’ ಹಿಂದಿ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ನಿರ್ದಿಷ್ಟ ಜಾತಿ ಸಮುದಾಯದ ಒಬ್ಬ ನೇತಾರರು ಸಿನಿಮಾ ನಾಯಕಿ ಪಾತ್ರಧಾರಿ ದೀಪಿಕಾ ಪಡಕೋಣೆಯವರ ತಲೆದಂಡಕ್ಕೆ ಹತ್ತು ಕೋಟಿ ರೂಪಾಯಿ ಬಹುಮಾನ ಘೋಷಿಸಿದರು.
9. ಸಾದ್ವಿ ಪ್ರಾಚಿಯವರು ಹಲ್ಲೆ ಹತ್ಯೆಗಳ ಮಾತಾಡಲಿಲ್ಲ. 02-03-2015ರಂದು ‘ಖಾನ್ಗಳ ಸಿನಿಮಾ ನೋಡಬೇಡಿ. ಅವು ಲವ್ಜಿಹಾದ್ ಹೇಳುತ್ತವೆ’ ಎಂದು ಕರೆಕೊಟ್ಟರು. ಇವರ ಅಭಿಪ್ರಾಯವನ್ನು ಒಪ್ಪದಿದ್ದರೂ ಇಲ್ಲಿ ಹಿಂಸಾತ್ಮಕ ಭಾಷೆ ಬಳಸಿಲ್ಲವೆಂಬುದು ಸಂತೋಷ ಸಂಗತಿ.
10. ಆದರೆ ಅಂದಿನ ಕೇಂದ್ರ ಸಚಿವ ಮುಖ್ತಾರ್ಅಬ್ಬಾಸ್ ನಕ್ವಿ ಅವರಿಗೆ ತಾಳ್ಮೆಯಿಲ್ಲ; ಅವರು ‘ದನದ ಮಾಂಸ ತಿನ್ನದೆ ಬದುಕಲಾಗದಿದ್ದರೆ ಪಾಕಿಸ್ತಾನಕ್ಕೆ ಹೋಗಿ’ ಎಂದು ಹೇಳಿದ್ದರು.
11. ಈಗಿನ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯವರಂತೂ ಸದಾ ವಿವಾದಾತ್ಮಕ ಮಾತುಗಳಿಂದ ಪ್ರಸಿದ್ಧರು. ತಮ್ಮ ಪಕ್ಷದ ಬೆಂಬಲಿಗರಲ್ಲವೆಂಬ ಕಾರಣಕ್ಕೆ ಬುದ್ಧಿ ಜೀವಿಗಳು, ಸಾಹಿತಿಗಳನ್ನು ಪುಟಗೋಸಿ, ಬಿಕನಾಸಿ, ಗಂಜಿ ಗಿರಾಕಿ ಎಂದೆಲ್ಲ ಕರೆದು ತಮ್ಮ ಮಟ್ಟ ಯಾವುದೆಂದು ಸ್ವಯಂ ಪ್ರಕಟಿಸುತ್ತ ಬಂದಿದ್ದಾರೆ. ಒಪ್ಪಿತವಾಗದ ವಿಚಾರಗಳನ್ನು ವಿಮರ್ಶಿಸಲಿ, ಟೀಕಿಸಲಿ. ಆದರೆ ಕೆಳದರ್ಜೆಯ ಬೈಗಳು ಮರ್ಯಾದೆತರುವುದಿಲ್ಲ.
12. ಶಾಸಕ ಯತ್ನಾಳ್ ಅವರೂ ಕಡಿಮೆಯಲ್ಲ. ‘ನಾನು ಗೃಹಸಚಿವನಾಗಿದ್ದರೆ, ಬುದ್ಧಿಜೀವಿ ಹಾಗೂ ಜಾತ್ಯತೀತವಾದಿಗಳನ್ನು ಸಾಲಾಗಿ ನಿಲ್ಲಿಸಿ ಗುಂಡಿಟ್ಟು ಕೊಲ್ಲಲು ಆದೇಶಿಸುತ್ತಿದ್ದೆ’ ಎಂದು ಸಂಭ್ರಮಿಸಿದ್ದಾರೆ. ಸಂಕೋಚವಿಲ್ಲದೆ ಸಂಭ್ರಮದಿಂದ ಓಡಾಡುತ್ತಿದ್ದಾರೆ! ಇದು ನಮ್ಮ ಇಂದಿನ ಸನ್ನಿವೇಶ.
13. ಇಂಥ ಮಾತಿನ ವರಸೆ ಒಂದೇ ಪಕ್ಷದವರಿಗೆ ಸೀಮಿತವಲ್ಲ. ‘ನಾವೇನು ಕಡಿಮೆ’ ಎಂದು ಮಮತಾ ಬ್ಯಾನರ್ಜಿಯವರ ಬಂಧು ಅಭಿಷೇಕ್, ತಮ್ಮ ಪಕ್ಷಕ್ಕೆ ಸವಾಲು ಹಾಕುವವರ ಕೈ ಕತ್ತರಿಸುವುದಾಗಿ, ಕಣ್ಣು ಕೀಳುವುದಾಗಿ 23-06-2015ರಂದು ಘೋಷಿಸಿದ್ದರು. ನಾಚಿಕೆಯಿಲ್ಲದ ಈ ಹಿಂಸಾತ್ಮಕ ನುಡಿಗಳಿಗೆ ಶಿಕ್ಷೆಯಿಲ್ಲ!
ಇಂಥ ಅನೇಕ ಬಾಯಿಬಾಂಬಿಗರನ್ನಷ್ಟೇ ಅಲ್ಲ, ಇಸ್ಲಾಂ ಮೂಲಭೂತವಾದಿಗಳನ್ನು, ಭಯೋತ್ಪಾದಕರನ್ನು ಧಿಕ್ಕರಿಸುವ ನಿಲುವು ನಮ್ಮದಾಗಬೇಕು. ಅಷ್ಟೇಕೆ ಯಾವುದೇ ರೀತಿಯ ಭಯೋತ್ಪಾದಕ ಕೃತ್ಯಗಳನ್ನು ವಿರೋಧಿಸಬೇಕು. ಸಂವಾದ, ಸಹಿಷ್ಣುತೆಯ ಆದರ್ಶದ ಕಣ್ಣೋಟ ನಮ್ಮದಾಗಬೇಕು. ಆದರೆ ಇಂದು ಈ ಆದರ್ಶದ ಕಣ್ಣುಗಳನ್ನೇ ಕೀಳಲಾಗುತ್ತಿದೆ. ಕುರುಡು ಕಂಠಪಾಠಗಳನ್ನು ಕಲಿಸಲಾಗುತ್ತಿದೆ. ಅಪವ್ಯಾಖ್ಯಾನಗಳನ್ನೇ ನಿಜ ವ್ಯಾಖ್ಯಾನಗಳೆಂದು ಬಿಂಬಿಸಲಾಗುತ್ತಿದೆ. ಇದಕ್ಕೆ ನಮ್ಮ ಅಕಡೆಮಿಕ್ ವಲಯದ ಕೆಲವರು ಕೊಡುಗೆ ನೀಡುತ್ತಿರುವುದು ಒಂದು ವಿರೋಧಾಭಾಸ. ಸಾಹಿತ್ಯ ವಿಮರ್ಶೆ, ವ್ಯಾಖ್ಯಾನಗಳಿಗೆ ಸಲ್ಲದ ಈ ಪ್ರವೃತ್ತಿಯಿಂದ ಯಾರೂ ಪ್ರಭಾವಿತರಾಗಬಾರದು.

ಈ ಹಿನ್ನೆಲೆಯಲ್ಲಿ ನಾನು 05-02-2016ರಂದು ಬರೆದ ‘ಅಕೆಡೆಮಿಕ್ ವಲಯಕ್ಕೂ ಬಂದ ಬಾಯಿಬಾಕತನ’ ಎಂಬ ಲೇಖನದ ಕೆಲವು ಮಾತುಗಳನ್ನು ಉಲ್ಲೇಖಿಸುತ್ತೇನೆ : “ಪುರಾಣ ಶಾಸ್ತ್ರ ಮತ್ತು ಪುರಾಣಕಾವ್ಯ ಒಂದೇ ಅಲ್ಲ. ಶಾಸ್ತ್ರಗಳಲ್ಲಿ ವಾಚ್ಯವೇ ಪ್ರಧಾನ, ಕಾವ್ಯಗಳಲ್ಲಿ ಧ್ವನಿಯೇ ಪ್ರಧಾನ. ಶಾಸ್ತ್ರಗಳಲ್ಲಿರುವ ಮಾತುಗಳಿಗೆ ಅವುಗಳಲ್ಲಿರುವಷ್ಟೇ ಅರ್ಥವಿದ್ದರೆ ಕಾವ್ಯಗಳಲ್ಲಿ ಮಾತುಗಳ ಒಳಗೆ ಮತ್ತು ಅದರಾಚೆಗೆ ಅನೇಕ ಅರ್ಥಗಳು ಸಾಧ್ಯ. ಆದ್ದರಿಂದ ಪುರಾಣ ಶಾಸ್ತ್ರಗಳಾದ ಮನುಸ್ಮøತಿ ಮತ್ತು ಭಗವದ್ಗೀತೆಗಳನ್ನು ಅರ್ಥ ಮಾಡಿಕೊಂಡಂತೆಯೇ ಪುರಾಣಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳನ್ನು ಅರ್ಥಮಾಡಿಕೊಳ್ಳಲಾಗದು; ಪುರಾಣಕಾವ್ಯಗಳು ಹಲವಾರು ವರ್ಷಗಳ ಬದುಕಿನ ಪ್ರಾತಿನಿಧಿಕ ಪ್ರತೀಕಗಳನ್ನು ಒಳಗೊಂಡಿರುತ್ತವೆ. ಇವುಗಳಲ್ಲಿರುವ ಪಾತ್ರಗಳು ನಿರ್ದಿಷ್ಟ ಚಾರಿತ್ರಿಕ, ಸಾಮಾಜಿಕ ಪ್ರತೀಕಗಳಾಗಿರಬಹುದು; ಚಾರಿತ್ರಿಕ ವ್ಯಕ್ತಿಗಳೇ ಆಗಿರುತ್ತಾರೆಂದು ಹೇಳಲಾಗದು. ಆದರೆ ನಮ್ಮ ಸನಾತನಿ ವ್ಯಾಖ್ಯಾನಕಾರರು ಈ ಪುರಾಣ ಕಾವ್ಯಗಳನ್ನು ಕಾವ್ಯವೆಂದು ಪರಿಗಣಿಸದೆ ಧರ್ಮಗ್ರಂಥಗಳೆಂದೂ ಪುಣ್ಯ ಪುರಾಣಗಳೆಂದೂ ಪರಿಗಣಿಸಿ ‘ಗರ್ಭಗುಡಿ’ ವ್ಯಾಖ್ಯಾನ ಮಾಡುತ್ತ ಬಂದರು. ಪುರಾಣವನ್ನು ಚರಿತ್ರೆಯಾಗಿಸಿ, ಚರಿತ್ರೆಯನ್ನು ಪುರಾಣವಾಗಿಸಿ ಕಲಸುಮೇಲೋಗರ ಮಾಡಿ ವ್ಯಕ್ತಿ ಕೇಂದ್ರಿತ ದೈವೀಕರಣ ಮಾಡುತ್ತ (ಉದಾ: ಶ್ರೀರಾಮ, ಶ್ರೀಕೃಷ್ಣ) ಪುರಾಣ ಕಾವ್ಯ ಪ್ರವೇಶದ ಪ್ರಾಥಮಿಕ ಪಾಠವನ್ನೇ ಮರೆತರು. ಮನುಸ್ಮøತಿ ಮತ್ತು ಭಗವದ್ಗೀತೆಗಳಂತಹ ಶಾಸ್ತ್ರಗಳನ್ನು ಸಾಮಾಜಿಕ ಸಂವಿಧಾನವೆಂಬಂತೆ ಬಿಂಬಿಸುತ್ತ ರಾಮಾಯಣ ಮತ್ತು ಮಹಾಭಾರತಗಳನ್ನು ಸನಾತನ ಸಂಸ್ಕøತಿ ಪ್ರಚಾರಕ್ಕೆ ಬಳಸಿಕೊಂಡರು. ಇವುಗಳನ್ನು ಸಾಹಿತ್ಯ ಕೃತಿಯೆಂದು ನೋಡುವ ದೃಷ್ಟಿಕೋನವನ್ನು ಕಿತ್ತುಕೊಂಡರು.
ಸಹಜವಾಗಿಯೇ ಪ್ರಗತಿಪರರಿಗೆ ಈ ಸನಾತನ ಪ್ರತಿಪಾದನೆಯು ಪ್ರತಿರೋಧಕ್ಕೆ ಅರ್ಹ ಎನ್ನಿಸಿತು. ಆದರೆ ಸನಾತನಿಗಳ ‘ಗರ್ಭಗುಡಿ ವಿಮರ್ಶೆ’ಗೆ ನಮ್ಮ ಪ್ರಗತಿಪರ ಪರ್ಯಾಯ ಹೇಗಿರಬೇಕೆಂಬುದನ್ನು ಎಲ್ಲರೂ ಸರಿಯಾಗಿ ಗ್ರಹಿಸಲಿಲ್ಲ. ಗರ್ಭಗುಡಿ ವಿಮರ್ಶೆಯು ಹೇಗೆ ಪುರಾಣಕಾವ್ಯಗಳನ್ನು ಸಾಹಿತ್ಯವಾಗಿ ನೋಡಲಿಲ್ಲವೋ ಹಾಗೆಯೇ ಕೆಲವು ‘ಅಕಡೆಮಿಕ್ ಪ್ರಗತಿಪರರು’ ಸನಾತನಿಗಳು ಹಾಕಿದ ಅದೇ ಹಾದಿಯ ಖೆಡ್ಡಾಕ್ಕೇ ಬಿದ್ದರು. ನಿಜ; ಮನುಸ್ಮøತಿಯಂಥ ಶಾಸ್ತ್ರಗ್ರಂಥಗಳನ್ನು ವಿರೋಧಿಸಲು ನಮಗೆ ಸಾಕಷ್ಟು ಸಾಮಾಜಿಕ ಕಾರಣಗಳಿವೆ. ವರ್ಣ ವ್ಯವಸ್ಥೆಯ ಅಮಾನವೀಯ ಅಸಮಾನತೆಯನ್ನು ಪ್ರತಿಪಾದಿಸುವ ಶಾಸ್ತ್ರಗ್ರಂಥಗಳನ್ನು ವಿರೋಧಿಸಲೇಬೇಕು. ಆದರೆ ಸೃಜನಶೀಲ ಕೃತಿಗಳಲ್ಲಿರುವ ಸಂಕೇತ, ರೂಪಕ ಇತ್ಯಾದಿಗಳನ್ನು ಗ್ರಹಿಸುತ್ತಲೇ ಪುರಾಣ ಕಾವ್ಯಗಳನ್ನು ಅರ್ಥ ಮಾಡಿಕೊಳ್ಳಬೇಕು. ನಿರ್ದಿಷ್ಟ ಚಾರಿತ್ರಿಕ ಸಂದರ್ಭಗಳಲ್ಲಿ ಸೃಷ್ಟಿಯಾದ ರಾಮಾಯಣ, ಮಹಾಭಾರತಗಳನ್ನು ಅಂದಂದಿನ ಸಂದರ್ಭದಲ್ಲಿಟ್ಟು ಸಮಕಾಲೀನ ವಿವೇಕದಿಂದ ವಿಶ್ಲೇಷಿಸಬೇಕು. ಜೊತೆಗೆ ಒಂದು ಕೃತಿಯನ್ನು ಇಡಿಯಾಗಿ ನೋಡಿ ನಿರ್ಧಾರಕ್ಕೆ ಬರಬೇಕೇ ಹೊರತು, ಒಂದು ಘಟನೆ, ಒಂದು ಪಾತ್ರವನ್ನು ಅನುಲಕ್ಷಿಸಿ ತೀರ್ಮಾನಕ್ಕೆ ಬರಬಾರದು. ಅನೇಕ ಪಾತ್ರಗಳು ವಿವಿಧ ರೀತಿಯಲ್ಲಿ ವರ್ತಿಸುತ್ತ, ಅನೇಕ ಘಟನೆಗಳು ಸಂಯೋಜನೆಗೊಳ್ಳುತ್ತ, ಬಿಡಿಬಿಡಿಯಾಗಿದ್ದದ್ದು ಇಡಿಯಾಗುತ್ತ ಒಂದು ಸಾಹಿತ್ಯ ಕೃತಿಮೂಡುತ್ತದೆ. ಆದ್ದರಿಂದ ಪುರಾಣ ಕಾವ್ಯಗಳನ್ನು ಅರ್ಥಮಾಡಿಕೊಳ್ಳುವಾಗ ಅವುಗಳು ಸೃಷ್ಟಿಯಾದ ಕಾಲಮಾನ, ಸಾಮಾಜಿಕ ಪದ್ಧತಿ, ರಾಜ್ಯಪದ್ಧತಿ, ಸಾಂಸ್ಕೃತಿಕ ವಿನ್ಯಾಸಗಳಾದಿಯಾಗಿ ಅನೇಕ ಅಂಶಗಳನ್ನು ಹಿನ್ನೆಲೆಗಿಟ್ಟುಕೊಂಡು ಪ್ರವೇಶಿಸಬೇಕು.
ಅದರ ಬದಲು ಒಂದು ಘಟನೆ, ಒಂದು ಪಾತ್ರವನ್ನು ಮಾತ್ರ ನೋಡಿ ತೀರ್ಮಾನಕ್ಕೆ ಬರುವುದು ಪ್ರಸವ ಪೂರ್ವದ ‘ಗರ್ಭಪಾತ’ವಾಗುತ್ತದೆ. ಆದ್ದರಿಂದ ಸನಾತನಿಗಳ `ಗರ್ಭಗುಡಿ ವಿಮರ್ಶೆಗೆ’ ಈ ‘ಗರ್ಭಪಾತ ವಿಮರ್ಶೆ’ ಉತ್ತರವಲ್ಲ. ಇದು ಪ್ರಗತಿಪರ ವಿಚಾರವಾದವೂ ಅಲ್ಲ. ಯಾರೋ ಪ್ರತಿಗಾಮಿ ವೈದಿಕರು ರಾಮಾಯಣ, ಮಹಾಭಾರತವನ್ನು ಹೈಜಾಕ್ ಮಾಡಿದ್ದಾರೆಂಬ ಕಾರಣಕೊಟ್ಟು ವಾಲ್ಮೀಕಿ, ವ್ಯಾಸರಂತಹ ಅವೈದಿಕ ಪ್ರತಿಭೆಗಳಿಗೆ ಅವಮಾನ ಮಾಡುವುದು ಪ್ರಗತಿಪರತೆಯ ಲಕ್ಷಣವಲ್ಲ. ನಾವು ಇಲ್ಲಿ ಹೈಜಾಕ್ ಹುನ್ನಾರವನ್ನು ವಿರೋಧಿಸಬೇಕೇ ಹೊರತು ಹೈಜಾಕಾದ ಕೃತಿಗಳನ್ನಲ್ಲ, ಕೃತಿಕಾರರನ್ನಲ್ಲ. ಅವೈದಿಕತೆಯ ಪರ ಎಂದು ಹೇಳಿಕೊಂಡು ಅವೈದಿಕ ಮೂಲದ ಕವಿ – ಕೃತಿಗಳನ್ನೇ ಸರಿಯಾಗಿ ಗ್ರಹಿಸದೆ ಇದ್ದರೆ ಹೇಗೆ? ಇಷ್ಟಕ್ಕೂ ವೈದಿಕ ಅವೈದಿಕ ಎಂಬುದೇ ಅಂತಿಮ ವಿಮರ್ಶಾ ಮಾನದಂಡವಲ್ಲ. ಗರ್ಭಗುಡಿ ವಿಮರ್ಶಕರು ಶ್ರೀರಾಮನನ್ನು ದೇವರು ಎಂದರೆ `ಅಲ್ಲ’ ಅನ್ನೋಣ. ಆದರೆ ಅವನು `ಕೊಲೆಗಡುಕ’, `ಅಪ್ಪನಿಗೆ ಹುಟ್ಟಿದವನಲ್ಲ’ ಎಂದು ಅವಿವೇಕದಿಂದ ಹೇಳಬೇಕಾಗಿಲ್ಲ. ಶ್ರೀಕೃಷ್ಣನ ರೂಪಕಾತ್ಮಕತೆಯನ್ನು ಗ್ರಹಿಸದೆ ‘ದೈವ’ ಎಂದವರಿಗೆ ‘ವ್ಯಭಿಚಾರಿ’ ಎನ್ನುವುದು ಪ್ರಗತಿಪರ ಉತ್ತರವಲ್ಲ. ಅನೇಕ ಬುಡಕಟ್ಟು ಸಂಸ್ಕೃತಿಗಳ ಒಕ್ಕೂಟವನ್ನು ಒಡಲಲ್ಲಿಟ್ಟುಕೊಂಡ ಮಹಾಭಾರತವನ್ನು ‘ಹಾದರದ ಕತೆ’ ಎಂದು ಬಾಲಿಶವಾಗಿ ಟೀಕಿಸಬೇಕಿಲ್ಲ. ಬಾಯಿಗೆ ಬಂದಂತೆ ಬೊಬ್ಬರಿಯುವುದು ವಿಚಾರವಾದವಲ್ಲ. ಬಾಯಿಬಾಕತನವು ಕ್ರಾಂತಿಕಾರಕತನವಲ್ಲ. ಅಂತೆಯೇ ಒಪ್ಪಿತವಾಗದ ವಿಚಾರಕ್ಕಾಗಿ ಬೆದರಿಕೆಯೊಡ್ಡುವ ‘ಹುಸಿ ಸಂಸ್ಕೃತಿ ವೀರ’ರನ್ನು ಮನ್ನಿಸಬೇಕಾಗಿಲ್ಲ.
ಕ್ರಾಂತಿಕಾರಿ ಲೆನಿನ್, ಟಾಲ್ಸ್ಟಾಯ್ ಬಗ್ಗೆ ಮಾಡಿದ ಒಂದು ವಿಮರ್ಶೆ ನನಗಿಲ್ಲಿ ನೆನಪಾಗುತ್ತಿದೆ. ಮಾಕ್ಸಿಂಗಾರ್ಕಿಯಂತೆ ಟಾಲ್ಸ್ಟಾಯ್ ಕಮ್ಯೂನಿಸ್ಟ್ ಕ್ರಾಂತಿಯ ಬೆಂಬಲಿಗರಲ್ಲ. ಅವರ ಕೃತಿಗಳೂ ಕ್ರಾಂತಿಯನ್ನು ಪ್ರತಿಪಾದಿಸುವುದಿಲ್ಲ. ಆದರೆ ಲೆನಿನ್ ಅವುಗಳಲ್ಲಿ ಅಂದಿನ ಕ್ರಾಂತಿಗೆ ಸಜ್ಜಾಗಿದ್ದ ಸಮಾಜದ ವಾಸ್ತವವನ್ನು ಕಂಡು, ಟಾಲ್ಸ್ಟಾಯ್ ಕೃತಿಗಳನ್ನು ‘Mirror of Russian Revolution’ ಎಂದು ಕರೆದು ಎಲ್ಲರೂ ಓದಬೇಕೆಂದು ಸಲಹೆ ನೀಡಿದ್ದರು. ಬಾಲ್ಜಾಕ್ – ಶ್ರೀಮಂತರ ಪರವಾದ ಒಬ್ಬ ಲೇಖಕ. ಆದರೆ ಏಂಗೆಲ್ಸ್ ಅವರು ‘ಶ್ರೀಮಂತರ ಅವನತಿಯ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಬಾಲ್ಜಾಕನ ಕೃತಿಗಳನ್ನು ಓದಬೇಕು’ ಎಂದು ಕ್ರಾಂತಿಕಾರಿಗಳಿಗೆ ಹೇಳಿದರು. ಸಯ್ವಂ ಕ್ರಾಂತಿಕಾರಿ ವಿಚಾರಧಾರೆಯ ಇವರಿಬ್ಬರ ಗ್ರಹಿಕೆಗಳು ಸಾಹಿತ್ಯಕೃತಿಗಳನ್ನು ನೋಡಬೇಕಾದ ವಿಧಾನಕ್ಕೆ ಪ್ರಬುದ್ಧ ಪಾಠಗಳಾಗಿವೆ. ಆದ್ದರಿಂದ ಅಂದಂದಿನ ಚಾರಿತ್ರಿಕ ಸಂದರ್ಭದಲ್ಲಿ ಕೃತಿಗಳನ್ನಿಟ್ಟು ಸಮಕಾಲೀನ ವಿವೇಕದಿಂದ ವ್ಯಾಖ್ಯಾನ ಮತ್ತು ಮರುವ್ಯಾಖ್ಯಾನ ಮಾಡಬೇಕು. ಗರ್ಭಗುಡಿ ವಿಮರ್ಶೆ ಮತ್ತು ಗರ್ಭಪಾತ ವಿಮರ್ಶೆಯಿಂದ ದೂರ ನಿಲ್ಲಬೇಕು. ಬಿಡಿಯಾಗಿ ನೋಡದೆ ಇಡಿಯಾಗಿ ನೋಡಬೇಕು. ಇದು ಸಾಹಿತ್ಯ ಪ್ರವೇಶದ ಪ್ರಥಮ ಪಾಠ”.
ಇದು ಸಾಹಿತ್ಯ ಪ್ರವೇಶದ ಪ್ರಥಮ ಪಾಠವಷ್ಟೇ ಅಲ್ಲ, ಸಂಸ್ಕೃತಿ ಪ್ರವೇಶದ ಒಂದು ಪಾಠವೂ ಹೌದು ಎಂದು ಇಂದು ಹೇಳಬೇಕಾಗಿದೆ. ಲೆನಿನ್ ಮತ್ತು ಏಂಗಲ್ಸ್ ಅವರಿಗೆ ಇದ್ದ ಔಚಿತ್ಯ ಪ್ರಜ್ಞೆಯನ್ನು ನಮ್ಮ ಸಂದರ್ಭಕ್ಕನುಗುಣವಾಗಿ ಪ್ರಸ್ತುತಗೊಳಿಸಿಕೊಳ್ಳಬೇಕಾಗಿದೆ. ನಮಗೆ ಅಂದರೆ ಸಾಂಸ್ಕೃತಿಕ ಕ್ಷೇತ್ರದವರಿಗೆ ರಾಜಕೀಯ ವಿರೋಧಿ ವಲಯಕ್ಕೆ ಪ್ರತಿರೋಧ ಒಡ್ಡುವುದು ಆದ್ಯತೆಯೊ, ಭಾವಲೋಕದ ಜನಸಮುದಾಯದ ಮನಸ್ಸು ಮುಟ್ಟಿ ಸತ್ಯವನ್ನು ಮನವರಿಕೆ ಮಾಡಿಕೊಡುವುದು ಆದ್ಯತೆಯೊ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕು. ರಾಜಕೀಯ ಪಕ್ಷಗಳು ಓಟಿಗಾಗಿ ಯಾವಾಗ ಏನು ಬೇಕಾದರೂ ಆಗುತ್ತವೆ. ಏನು ಬೇಕಾದರೂ ಮಾಡುತ್ತವೆ. ಇಂಥ ಪಕ್ಷಗಳ ಮುಖಾಮುಖಿಗೆ ಸೈದ್ಧಾಂತಿಕ ನೆಲೆಯಿರುವುದು ಅಪರೂಪವಾಗಿದ್ದು, ಜಾತಿವಾದ, ಕೋಮುವಾದವನ್ನು ವಿರೋಧಿಸುವಾಗ ಚುನಾವಣಾ ರಾಜಕೀಯವೇ ಈ ಪಕ್ಷಗಳಿಗೆ ಪ್ರಧಾನವಾಗಿರುತ್ತದೆ. ಆದ್ದರಿಂದ ಸಾಂಸ್ಕೃತಿಕ ಕ್ಷೇತ್ರವು ಸಾಮಾಜಿಕ ಪಿಡುಗುಗಳ ವಿರೋಧಕ್ಕಾಗಿ ರಾಜಕೀಯ ಪಕ್ಷಗಳ ಬತ್ತಳಿಕೆಯ ಬಾಣವಾಗುವುದು ಸರಿಯೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ಅಸಹಿಷ್ಣತೆ, ಅಸಮಾನತೆಗಳ ವಿರುದ್ಧ ಜನ ಸಮುದಾಯದಲ್ಲಿ ಜನಾಂದೋಲನದ ಬೀಜ ಬಿತ್ತುವ ಸಾಂಸ್ಕೃತಿಕ ಕೆಲಸ ನಮ್ಮ ಆದ್ಯತೆಯಾಗಬೇಕು. ಸೈದ್ಧಾಂತಿಕರಹಿತ ರಾಜಕೀಯ ಪಕ್ಷಗಳ ಪಾಲುದಾರರಾಗುವ ಬದಲು ಸೈದ್ಧಾಂತಿಕ ವಿಚಾರಗಳನ್ನು ಸೃಜನಾತ್ಮಕ ರೀತಿಯಲ್ಲಿ ಜನಮನಕ್ಕೆ ಮುಟ್ಟಿಸಬೇಕು. ನಮ್ಮ ಸಿದ್ಧಾಂತಕ್ಕೆ ಒಪ್ಪಿತವಾಗದ ಪಕ್ಷಗಳ ಎದುರು ಕಾಲು ಕೆರೆಯುತ್ತ ಕಾಲವ್ಯಯ ಮಾಡುವುದು ವ್ಯರ್ಥ ರಾಜಕಾರಣವಾಗುತ್ತದೆ.
ನಮ್ಮ ಕಣ್ಣೆದುರು ಇರುವ ಜನರೇ ನಮಗೆ ಮುಖ್ಯ, ಅವರೇ ನಮ್ಮ ಆದ್ಯತೆ. ಜನರಲ್ಲಿ ಜನರಾಗುವ ಸಾಂಸ್ಕೃತಿಕ ಕ್ರಿಯೆಯಿಂದ ಸಹಿಷ್ಣುತೆ, ಸಮಾನತೆಗಳ ಚಿತ್ತಭಿತ್ತಿಯನ್ನು ರೂಪಿಸುವ ಪ್ರಕ್ರಿಯೆ ನಮಗೆ ಪ್ರಧಾನವಾದುದು. ಎದುರು ರಾಜಕೀಯ ಪಕ್ಷವನ್ನು ಎಷ್ಟು ಚೆನ್ನಾಗಿ ತೆಗಳಿದೆ ಎಂಬ ಹುಸಿ ಸಂಭ್ರಮ ನಮಗೆ ಬೇಡ. ಅಂತಹ ರಾಜಕೀಯ ಪಕ್ಷಗಳ ಜನವಿರೋಧಿ ಸತ್ಯಗಳನ್ನು ಜನರಿಗೆ ಮನವರಿಗೆ ಮಾಡಿಕೊಡಬೇಕು. ಅಗತ್ಯ ಬಿದ್ದಾಗ ರಾಜಕೀಯ ಪಕ್ಷಗಳಿಗೆ ಪ್ರತ್ಯುತ್ತರ ಕೊಡಬೇಕು. ಆದರೆ ರಾಜಕೀಯ ಪಕ್ಷಗಳ ಗುಂಪಿನಲ್ಲೊಂದು ಗುಂಪಾಗಿ ಗಾಳಿ ಪಾಲಾಗಬಾರದು. ನಾವು ಜನರೊಳಗಿನ ಜನರಾಗಬೇಕು. ಜನರಿಗೆ ಹತ್ತಿರವಾದ ಸಾಂಸ್ಕೃತಿಕ ಸಂವಾದಕ್ಕೆ ಸಿದ್ಧವಾಗಬೇಕು.
ಈ ಪ್ರಕ್ರಿಯೆಗೆ ಪೂರಕವಾಗಿ ಪ್ರಗತಿಪರ ವಲಯದಲ್ಲಿ ಒಂದು ಹಂತದ ಒಗ್ಗಟ್ಟಾದರೂ ಮೂಡಬೇಕು. ಈಗ ಪ್ರಗತಿಪರೆನ್ನಿಸಿಕೊಂಡವರು ವಿವಿಧ ಗುಂಪುಗಳಾಗಿದ್ದಾರೆ. ಗುರಿ ಒಂದೇ ಆಗಿದ್ದರೂ ಗುಂಪುಗಳು ಒಂದೇ ಆಗಿಲ್ಲ. ಕೆಲವೊಮ್ಮೆ ಪ್ರಗತಿಪರರೇ ಇನ್ನೊಂದು ಪ್ರಗತಿಪರ ವಲಯವನ್ನು ಧಿಕ್ಕರಿಸುವ ಸನ್ನಿವೇಶಗಳೂ ಕಾಣುತ್ತಿವೆ. ಇದು ನಮ್ಮೊಳಗಿನ ಸಂವಾದದ ಕೊರತೆಯನ್ನು ಕಾಣಿಸುತ್ತಿದೆ. ಇದರ ಜೊತೆಗೆ ತಂತಮ್ಮ ನಿಲುವೊಂದೇ ಪ್ರಗತಿಪರ ಎಂಬ ಅಂತರ್ಗತ ಜಡಾಧಿಕಾರವೂ ಕೆಲಸ ಮಾಡುತ್ತಿದೆ. ಸಹಬಾಳ್ವೆ, ಸೌಹಾರ್ದತೆ, ಸಹಿಷ್ಣುತೆ, ಸಮಾನತೆಗಳೇ ಎಲ್ಲ ಪ್ರಗತಿಪರರ ಗುರಿ. ಈ ಕುರಿತು ಅಚಲವಾಗಿರೋಣ. ಆದರೆ ನಮ್ಮ ವಿಚಾರಗಳನ್ನು ವಿರೋಧಿಗಳಿಗೆ ಹೇಳುವುದಷ್ಟೇ ಅಂತಿಮವಲ್ಲ ಎಂದು ತಿಳಿಯೋಣ. ಎಷ್ಟು ಜನರನ್ನು ನಮ್ಮೊಂದಿಗೆ ಕರೆದೊಯ್ಯುವಂತೆ ಕೆಲಸ ಮಾಡುತ್ತೇವೆಂಬುದು ಮುಖ್ಯ. ಈ ನಿಟ್ಟಿನಲ್ಲಿ ಪ್ರಗತಿಪರರೊಳಗಿನ ಸಂವಾದ ಅಗತ್ಯ. ಅಕಸ್ಮಾತ್ ನಮ್ಮಲ್ಲಿ ಇದ್ದಿರಬಹುದಾದ ವ್ಯಕ್ತಿಗತ ಅಹಂಗಳನ್ನು ಬಿಟ್ಟು ಸಂವಾದಿಸುವ, ಸಂಘಟಿಸುವ ಕ್ರಿಯೆಗೆ ಮುಂದಾಗುತ್ತ ಪ್ರಗತಿಪರರು ಪ್ರತಿ ಪೀಳಿಗೆಗೂ ಮಾದರಿಯಾಗಬೇಕು. ಬದಲಾದ ಸನ್ನಿವೇಶದಲ್ಲಿ ವೈಚಾರಿಕ ವಿರೋಧಿಗಳನ್ನು ಎದುರಿಸುವ ಹೊಸ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಬೇಕು. ಸರಳ ಕಾರ್ಯತಂತ್ರ ಮತ್ತು ಕಾರ್ಯ ವಿಧಾನವೆಂದರೆ- ವಿವಿಧ ಪ್ರಗತಿಪರ ವಲಯಗಳ ನಡುವೆ ಒಳಸಂವಾದ ಮತ್ತು ಜನ ಸಮುದಾಯದ ಭಾವಲೋಕ ಪ್ರವೇಶಿಸುವ ಪ್ರಕ್ರಿಯೆ – ಇದು ನಮ್ಮ ಆದ್ಯ ಕ್ರಿಯೆ. ವೀರಾವೇಶದ ಮಾತಾಡಿ ‘ಹೀರೋ’ಗಳಾಗುವುದು ನಾಯಕತ್ವದ ಗುಣವಲ್ಲ. ಹೀರೋತನ ಬೇರೆ, ನಾಯಕತ್ವ ಬೇರೆ. ನಾವಿಂದು ಜನಮನ ಪರಿವರ್ತನೆ ಮತ್ತು ಪಲ್ಲಟ ಪ್ರಕ್ರಿಯೆಯ ಸಾಂಸ್ಕೃತಿಕ ನಾಯಕತ್ವವನ್ನು ರೂಪಿಸಬೇಕಾಗಿದೆ.
ಈ ದಿಕ್ಕಿನಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಪಾತ್ರ ಮಹತ್ವದ್ದೆಂದು ನಾನು ಭಾವಿಸುತ್ತೇನೆ. ಏಕೆಂದರೆ 1979ರಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯು ಎಡ ಮತ್ತು ಪ್ರಜಾಸತ್ತಾತ್ಮಕ ಪ್ರಗತಿಪರ ಸಾಂಸ್ಕøತಿಕ ಸಂಘಟನೆಯಾಗಿ ಹುಟ್ಟಿ ಬೆಳೆಯಿತು. ಅಂದಿಗಿಂತ ಇಂದು ಸಮಾನತೆ ಮತ್ತು ಸಹಿಷ್ಣುತೆ ವಿರೋಧಿ ವಲಯ ಪ್ರಬಲವಾಗಿ ಬೆಳೆದಿದೆ. ಬಲಪ್ರಯೋಗಕ್ಕೂ ಹೇಸದ ಗುಂಪುಗಳು ಹಲ್ಲೆ, ಹತ್ಯೆಗೂ ಮುಂದಾಗಿದೆ. ಪಾನ್ಸರೆ, ದಾಬೋಲ್ಕರ್, ಕಲಬುರ್ಗಿ, ಗೌರಿಯರನ್ನು ಹತ್ಯೆ ಮಾಡಲಾಗಿದೆ. ಹಲ್ಲೆ, ಹತ್ಯೆಗಳಿಲ್ಲದ ಸಹನೀಯ, ಸಂವಾದನೀಯ ಸಮಾಜ ನಮ್ಮದಾಗಬೇಕಾಗಿದೆ. ಈ ದಿಕ್ಕಿನಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಸೂಕ್ತ ವೇದಿಕೆಯಾಗಬಲ್ಲದು. ಅಂಬೇಡ್ಕರ್ ವಾದ, ಗಾಂಧಿವಾದ, ಲೋಹಿಯಾ ವಾದ, ಮಾಕ್ರ್ಸ್ವಾದ ಮುಂತಾದ ಸೈದ್ಧಾಂತಿಕ ಸ್ನೇಹಿತರನ್ನೂ ಯಾವುದೇ ವಾದವೂ ಮುಖ್ಯವಾಗದ ಸಾಮಾನ್ಯ ಪ್ರಗತಿಪರ ವಲಯದವರನ್ನೂ ಒಟ್ಟಿಗೇ ಒಳಗೊಳ್ಳುವ ವಿಶಾಲ ವೇದಿಕೆಯಾಗಿಯೇ ಹುಟ್ಟಿದ ಬಂಡಾಯ ಸಾಹಿತ್ಯ ಸಂಘಟನೆ ಇಂದಿಗೂ ಅದೇ ಮಾದರಿಯನ್ನು ಮುಂದುವರಿಸಲಿದೆ. ಇಲ್ಲಿ ತಂತಮ್ಮ ಸಿದ್ಧಾಂತಗಳ ಮೂಲ ಆಶಯ ಉಳಿಸಿಕೊಂಡು ಎಲ್ಲ ಪ್ರಗತಿಪರರೂ ಸೇರೋಣ, ಸಂವಾದಿಸೋಣ. ಜನವಿರೋಧಿ ಸಾಂಸ್ಕೃತಿಕ ರಾಜಕಾರಣ ಮತ್ತು ಪ್ರಭುತ್ವಕ್ಕೆ ಸಾಂಸ್ಕೃತಿಕ ಪ್ರತಿರೋಧ ಒಡ್ಡೋಣ. ಜನರೊಳಗೊಂದಾಗುವ ವಿಶಿಷ್ಟ ವಿಧಾನದ ಮೂಲಕ ಈ ಪ್ರತಿರೋಧ ಬೆಳೆಸೋಣ. ಈ ಕ್ರಿಯೆಗಾಗಿ ಪ್ರಾಚೀನ ಮತ್ತು ಅರ್ವಾಚೀನ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿನ್ಯಾಸಗಳಿಂದ ಆಯ್ದ ಅಂಶಗಳ ಪ್ರೇರಣೆ ಪಡೆಯೋಣ. ಈ ದೃಷ್ಟಿಯಿಂದ ಪರಂಪರೆಯ ಪ್ರಜ್ಞೆ ಮತ್ತು ಪ್ರಗತಿ ಪ್ರಜ್ಞೆಗಳು ಒಂದಾಗಬೇಕು. ಪರಂಪರೆಯಲ್ಲಿರುವ ಪ್ರಗತಿಪರ ನೆಲೆಗಳನ್ನು ಅರ್ಥ ಮಾಡಿಕೊಂಡು ಮರು ವ್ಯಾಖ್ಯಾನದ ಮೂಲಕ ಪ್ರಸ್ತುತ ಪಡಿಸಿಕೊಳ್ಳಬೇಕು. ಜನಮನದ ಭಾವಲೋಕವನ್ನು ತಲುಪಬೇಕು. ಹೀಗೆ ಮಾಡುವುದರಿಂದ, ಧರ್ಮ ಮತ್ತು ಸಂಸ್ಕೃತಿಗಳ ಅಪವ್ಯಾಖ್ಯಾನದ ಮೂಲಕ ಭಾರತದ ಭಾವೋದ್ರೀಕೀಕರಣ ಮಾಡುತ್ತಿರುವ ಜನವಿರೋಧಿ ಶಕ್ತಿಗಳಿಗೆ ಉತ್ತರವಾಗಬೇಕು.
ಹಿಂಸೆ ವಿರೋಧಿ ಪ್ರಜಾಸತ್ತಾತ್ಮಕ ಮೌಲ್ಯಕ್ಕೆ ಬೆಲೆ ತರಬೇಕು. ಪ್ರತಿಗಾಮಿ ವಲಯಕ್ಕೆ ವೈಚಾರಿಕವಾಗಿ ಎದುರಾಗಲು ಪ್ರಗತಿಪರ ವಲಯವು ವ್ಯಕ್ತಿ ವೈಪರೀತ್ಯಗಳನ್ನು ತೊರೆಯಬೇಕು. ಸಂಘಟನೆಯ ಒಳ ಸಂವಾದ ಪ್ರಜಾಸತ್ತಾತ್ಮಕವಾಗಿರಬೇಕು.
ಇಷ್ಟೆಲ್ಲ ಆಶಯಗಳನ್ನಿಟ್ಟುಕೊಂಡು ಇಂದು ಯುವ ಪೀಳಿಗೆಯನ್ನು ಒಳಗೊಳ್ಳುವ ಅಗತ್ಯವಿದೆ. ಪರಂಪರೆಯ ಪ್ರಗತಿಪರ ಸಂಗತಿಗಳನ್ನು ಪರಿಚಯಿಸುತ್ತ, ಪ್ರಸುತ್ತ ಸಂದರ್ಭವನ್ನು ಅರ್ಥೈಸಿಕೊಳ್ಳುವುದಕ್ಕೆ ಪ್ರೇರಣೆಯಾಗಲೆಂದೇ ಚಿತ್ರದುರ್ಗದಲ್ಲಿ ‘ಭಾರತೀಯ ಸಾಹಿತ್ಯ ಮತ್ತು ಬಂಡಾಯ ಪರಂಪರೆ’ ಎಂಬ ಪರಿಕಲ್ಪನಾತ್ಮಕ ವಿಚಾರ ಸಂಕಿರಣವನ್ನು ನಡೆಸಲಾಗುತ್ತಿದೆ. ವಿವಿಧ ಕಾಲಘಟ್ಟದಲ್ಲಿ ಅಂದಂದಿನ ಕಾಲದ ಜಡತೆಯನ್ನು ಮೀರಿದ ನಿದರ್ಶನಗಳು ನಮ್ಮಲ್ಲಿವೆ. ಹಾಗೆಂದು ಪರಂಪರೆಯು ಪೂರ್ಣವಾಗಿ ಇಂದಿಗೆ ಪ್ರಸ್ತುತವೆಂದೇನೂ ಅಲ್ಲ. ಅಂತೆಯೇ ಬಂಡಾಯವೆನ್ನುವ ಪ್ರಕ್ರಿಯೆ ಸಮಕಾಲೀನರದು ಮಾತ್ರವಲ್ಲ. ವಿವಿಧ ಚಾರಿತ್ರಿಕ ಸಂದರ್ಭದಲ್ಲಿ ಅಂದಿಗೆ ಪ್ರಸ್ತುತವೆನ್ನಿಸುವ ಬಂಡಾಯ ಪ್ರಕ್ರಿಯೆಗೆ ಕಾರಣವಾದ ಚಳವಳಿಗಳು ನಡೆದಿವೆ. ನಾಯಕತ್ವ ವಹಿಸಿದ ವ್ಯಕ್ತಿ ಪರಂಪರೆಯೂ ಇದೆ. ಹಿಂದಿನ ಈ ಪ್ರಗತಿ ಪರಂಪರೆಗೆ ಚಾರಿತ್ರಿಕ ಗೌರವವನ್ನು ಸಲ್ಲಿಸುತ್ತಲೇ ಸಮಕಾಲೀನವಾಗಿಸಿಕೊಳ್ಳುವ ಸಾಧ್ಯತೆಗಳನ್ನು ನಾವು ಅನ್ವೇಷಿಸಬೇಕು. ಈ ದೃಷ್ಟಿಯಿಂದ ನಮಗೆ ಪರಂಪರೆಯ ಪ್ರಜ್ಞೆ ಮುಖ್ಯ. ಈ ಅಂಶವನ್ನೂ ಅರ್ಥ ಮಾಡಿಕೊಳ್ಳಬೇಕು. ಪರಂಪರೆಯೆಂದರೆ ಜಡ ಸಂಪ್ರದಾಯವಲ್ಲ. ಜಡ ಸಂಪ್ರದಾಯ ಬೇರೆ; ಪರಂಪರೆ ಬೇರೆ. ಜಡ ಸಂಪ್ರದಾಯ ಸ್ಥಗಿತವಾದುದು; ಪರಂಪರೆ ಚಲನಶೀಲವಾದುದು. ಈ ಅಂಶವನ್ನೂ ಅರ್ಥಮಾಡಿಕೊಳ್ಳಬೇಕು. ಭಾರತವನ್ನು ಬಾಯಿಬಾಂಬಿನ ಭಾವೋದ್ರೇಕಿರಣದಿಂದ ಬಿಡುಗಡೆಗೊಳಿಸಬೇಕು. ನಮಗೆ ಹುಸಿಭಾವೋದ್ರೇಕತೆ ಬೇಡ. ನಿಜ ಭಾವನಾತ್ಮಕತೆ ಬೇಕು. ಭಾವೋದ್ರೇಕತೆ ಮತ್ತು ಭಾವನಾತ್ಮಕತೆ ಒಂದೇ ಅಲ್ಲ. ಎರಡೂ ಬೇರೆ.
ಪರಂಪರೆಯಪ್ರಜ್ಞೆ ಇಲ್ಲದಿದ್ದರೆ ನಾವು ಕಲಿತಿಲ್ಲ ಅಂತ ಅರ್ಥ; ಪ್ರಗತಿಪ್ರಜ್ಞೆಯಿಲ್ಲದಿದ್ದರೆ ನಾವು ಬೆಳೆದಿಲ್ಲ ಅಂತ ಅರ್ಥ; ಸಮಕಾಲೀನ ಪ್ರಜ್ಞೆ ಇಲ್ಲದಿದ್ದರೆ ನಾವು ಬದುಕಿಲ್ಲ ಅಂತ ಅರ್ಥ. ಈ ಮೂರೂ ಪ್ರಜ್ಞೆಗಳು ಒಂದಾಗದಿದ್ದರೆ ನಿಜ ಮನುಷ್ಯರಾಗಿಲ್ಲ ಅಂತ ಅರ್ಥ. ಆದ್ದರಿಂದ ಇಂದು ಜನರಿಗೆ ಸತ್ಯವನ್ನು ತಿಳಿಸಿ ಮನವರಿಕೆ ಮಾಡಿಕೊಡುವುದು ನಮ್ಮ ಸಾಮಾಜಿಕ, ಸಾಂಸ್ಕೃತಿಕ ಜವಾಬ್ದಾರಿ.
ಸತ್ಯದ ವಿಷಯ ಬಂದಾಗ ಹೆಸರಾಂತ ಭಾಷಾ ವಿಜ್ಞಾನಿ ನೋಮ್ ಚಾಮ್ಸ್ಕಿಯವರು ಹೇಳಿದ ಮಾತು ನೆನೆಪಾಗುತ್ತದೆ. ಅವರ ಮಾತುಗಳ ಸಾರ ಹೀಗಿದೆ: ‘ಜನರು ಸತ್ಯವನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಅವರಿಗೆ ಸತ್ಯವನ್ನು ತಿಳಿಸಿ ಮನವರಿಕೆ ಮಾಡಿಕೊಡುವುದು ಸಾಹಿತಿಗಳ ಜವಾಬ್ದಾರಿಯಾಗಬೇಕು. ಅದರೆ ಜನರಿಗೆ ಸತ್ಯವನ್ನು ತಿಳಿಸುವುದು ಕೇವಲ ಸಾಹಿತಿಗಳ ಜವಾಬ್ದಾರಿಯಲ್ಲ; ಎಲ್ಲ ಮರ್ಯಾದಸ್ಥ ಮನುಷ್ಯರ ಜವಾಬ್ದಾರಿ’.
ಹೌದು; ನಾವು ಜನರಿಗೆ ಸತ್ಯ ತಿಳಿಸೋಣ; ಮರ್ಯಾದಸ್ಥ ಮನುಷ್ಯರಾಗೋಣ.






0 Comments