ಹೋಗಿ ಬರುವೆ ನನ್ನ ನಲ್ಲೆ ಬಳಿಯೇ ಕಾದಿರು… ಸಿ ಅಶ್ವಥ್ ಗುಂಗು

ಭಾವಗಳ ಅರಸ ಅಶ್ವಥ್

ಸಂತೋಷ್ ಅನಂತಪುರ

ಹೊತ್ತಲ್ಲದ ಹೊತ್ತಲ್ಲಿ ನನ್ನೊಳಗಿನ ‘ಅಶ್ವಥ್ ಭಾವ’ವು ಆಲ್ ಆಫ್ ಎ ಸಡನ್ ಎದ್ದು ಕುಳಿತು ಬಿಟ್ಟಿತು. ಭಾವನೆಗಳೆಲ್ಲವೂ ‘ಜಾಮ್’ ಆಗಿ ಕತ್ತು ಮುರಿದು ಮಲಗಿರುವ ಈ ಹೊತ್ತಲ್ಲಿ- ‘ಜಿನ್’ ಅಲಿಯಾಸ್ ಜಿ.ಎನ್.ಮೋಹನ್ ಸಾರಥ್ಯದ ಅವಧಿ’ಯು ‘ಕ್ಲಬ್ ಹೌಸ್’ನಲ್ಲಿ ‘ಸಿ. ಅಶ್ವಥ್ ಹಾಡುಗಳ ಮ್ಯೂಸಿಕ್ ಜ್ಯಾಮ್’ ಕಾರ್ಯಕ್ರಮವನ್ನು ಕಟ್ಟಿಕೊಟ್ಟರಷ್ಟೆ. ಅಷ್ಟಕ್ಕೇ ಮುದುರಿ ಕುಳಿತಿದ್ದ ಭಾವಗಳೆಲ್ಲವೂ ಎದ್ದು ಕುಳಿತು ಮೆತ್ತಗೆ ಉಸಿರಿಡಲು ತೊಡಗಿದವು.

ಹರಿವ ತೊರೆ, ಬಳಕುವ ಬಳ್ಳಿ, ಮೊರೆಯುವ ಕಡಲು, ಬೀಸುವ ಮಾರುತ, ದಟ್ಟ ಕಾಡು, ಎಳೆ ಬಿಸಿಲು, ಕಂತುವ ರವಿ, ಹುಣ್ಣಿಮೆಯ ಚಂದ್ರ… ಅಷ್ಟೇ ಯಾಕೆ, ಸುಂದರ ರೂಪಗಳೂ ಭಾವನೆಗಳನ್ನು ಉದ್ದೀಪಿಸುತ್ತವೆ. ಭಾವ ಉದ್ದೀಪನಗೊಳ್ಳದ ಮನುಷ್ಯರೇ ಇಲ್ಲ. ಹಿತಾನುಭವಗಳನ್ನು ನೀಡುವ ವಸ್ತು, ವಿಷಯಗಳು ಪ್ರಕೃತಿಯ ಒಡಲಲ್ಲಿ ಸಾಕಷ್ಟಿವೆ. ಭಾವುಕವಾಗದ ಗಳಿಗೆ, ಭಾವುಕನಾಗದ ವ್ಯಕ್ತಿ, ಭಾವನೆಗಳಿಲ್ಲದವುಗಳು ಜೀವಜಾಲದಲ್ಲೇ ಇಲ್ಲ. ಇತರ ಕಲಾ ಪ್ರಕಾರಗಳಂತೆ ಸಂಗೀತವೂ ಭಾವನೆಯನ್ನು ವ್ಯಕ್ತಪಡಿಸಲಿರುವ ಒಂದು ವೇದಿಕೆ.

ಜೀವ ರಹಸ್ಯದೊಳಗೆ ಹರಡಿಕೊಂಡಿರುವ ಅಷ್ಟೂ ಭಾವ ತೀವ್ರತೆಗಳನ್ನು ಸಂಗೀತ ಸಾಗರದಲ್ಲಿ ಈಜಾಡಿ ಅನುಭವಿಸಬಹುದು. ಭಾವದ ಹೃದಯಕ್ಕೆ ಗೀತವಾಗುವ, ಹೃದಯ ಗೀತಕ್ಕೆ ಭಾವವಾಗುವ ಸೌಭಾಗ್ಯ ಆಯಾ ಜನ್ಮದ್ದು. ಕೆಲವರ ಜನ್ಮ ಭಾವೋದ್ದೀಪನಕ್ಕೆಂದೇ ಇರುತ್ತದೆ. ಭಾವಗೀತವನ್ನು ಗೀತಭಾವವನ್ನು ಹಾಡದ ಹೃದಯ ಮನಸ್ಸುಗಳಿಲ್ಲ.

ಗೀತೆಯ ಭಾವವನ್ನು ಹೃದ್ಯವಾಗಿಸಿ ಹಾಡುವ ಪ್ರಕಾರ ಭಾವಗೀತೆ. ಗೀತೆಯ ಭಾವಕ್ಕೆ ಚ್ಯುತಿಯಾಗದಂತೆ, ಭಾವದ ಓಘಕ್ಕೆ ಗೀತೆಯು ಒಗ್ಗಿಕೊಳ್ಳುವಂತೆ ಘಟಿಸುವ ಸೊಬಗಿನ ಕ್ಷಣದಲ್ಲಿ ಉತ್ತಮ ಭಾವಗೀತೆಗಳು ಹುಟ್ಟುತ್ತವೆ. ಪಿ. ಕಾಳಿಂಗ ರಾವ್, ಪದ್ಮಚರಣ್, ಮೈಸೂರು ಅನಂತಸ್ವಾಮಿ ಮೊದಲಾದವರಿಂದ ಹರಿದು ಬಂದ ಪ್ರಕಾರವೊಂದು ಕಡಲಾಗಿ ಮೊರೆದದ್ದು ಸಿ.ಅಶ್ವಥ್ ಯುಗದಲ್ಲಿ. ಆ ಕಡಲಿನ ಮೊರೆತದಲ್ಲಿ ಅನಿರ್ವಚನೀಯವಾದ ಹಿತವಿದೆ, ಮುದವಿದೆ. ತಲ್ಲಣಗಳ ತಣಿಸುವ ಮಾಂತ್ರಿಕ ಭಾವಸ್ಪರ್ಶವಿದೆ.

ಕವಿಯ ಆಶಯವನ್ನು ಖರಾರುವಾಕ್ಕಾಗಿ ಅರ್ಥೈಸಿಕೊಂಡು ಭಾವಪೂರ್ಣವಾಗಿ ರಾಗ ಸಂಯೋಜಿಸಿದ್ದಲ್ಲದೆ ಹಾಡಿನಲ್ಲೂ ಗೀತೆಯ ಭಾವಕ್ಕೆ ಒಂದಿಷ್ಟೂ ಅಪಚಾರವಾಗದಂತೆ ಎಚ್ಚರ ವಹಿಸಿದವರು ಸಿ.ಅಶ್ವಥ್. ಸಾಹಿತ್ಯವನ್ನು ಹಿಂಜಿ ಹಿಂಜಿ ಅದರ ಅಷ್ಟೂ ರಸವನ್ನು ಕುಡಿಸುತ್ತಿದ್ದರಲ್ಲದೆ ಖುದ್ದು ತಾವೇ ಅನುಭವಿಸಿ ಹಾಡಿಯೂ ತೋರಿದ್ದರು. ಕೆಲವರು ಇತಿಹಾಸ ನಿರ್ಮಿಸಲೆಂದೇ ಅವತರಿಸುತ್ತಾರೆ-ಸಿ.ಅಶ್ವಥ್ ಅಂತಹವರಲ್ಲೊಬ್ಬರು.

ಸಾಹಿತ್ಯದ ಭಾವ ಸಾರವನ್ನು ಹರಿಯಿಸಲು ಸಂಗೀತವೊಂದು ಪ್ರಕಾರವಾಗುತ್ತದೆ. ಮತ್ತದು ಅಶ್ವಥ್ ಅವರ ಸಂಯೋಜನೆಗಳಲ್ಲಿ ದಿಟವಾಗಿ ಕಾಣಬಹುದು. ಅಷ್ಟು ಸ್ಪುಟವಾಗಿ ಉಚ್ಚರಿಸಿ, ಭಾವವನ್ನು ಹೊದ್ದು ಹಾಡಿ ಸುಖಿಸುವ ಮತ್ತೋರ್ವ ಗಾಯಕನನ್ನು ನಾ ಕಂಡಿಲ್ಲ. ಅವರ ಹಾಡುಗಳನ್ನು ಕೇಳಿದಾಗ ರಕ್ತವು ಚರ್ಮ ಸೀಳಿಕೊಂಡು ಸರಕ್ಕನೆ ಚಿಮ್ಮುವಂತಹ ಅನುಭವ. ಭಾವಗಳನ್ನು ಮನ ಮುಟ್ಟುವಂತೆ ದಾಟಿಸುವ ಶಕ್ತಿ ಅವರ ಧ್ವನಿ ಮತ್ತು ಸಂಯೋಜನೆಗಳಿವೆ. ನಾವು ನಿಜಕ್ಕೂ ಅದೃಷ್ಟವಂತರೇ ಸರಿ.

ಹೊತ್ತಲ್ಲದ ಹೊತ್ತಲ್ಲಿ ನನ್ನೊಳಗಿನ ‘ಅಶ್ವಥ್ ಭಾವ’ವು ಆಲ್ ಆಫ್ ಎ ಸಡನ್ ಎದ್ದು ಕುಳಿತು ಬಿಟ್ಟಿತು. ಭಾವನೆಗಳೆಲ್ಲವೂ ‘ಜಾಮ್’ ಆಗಿ ಕತ್ತು ಮುರಿದು ಮಲಗಿರುವ ಈ ಹೊತ್ತಲ್ಲಿ- ‘ಜಿನ್’ ಅಲಿಯಾಸ್ ಜಿ.ಎನ್.ಮೋಹನ್ ಸಾರಥ್ಯದ ಅವಧಿ’ಯು ‘ಕ್ಲಬ್ ಹೌಸ್’ನಲ್ಲಿ ‘ಸಿ. ಅಶ್ವಥ್ ಹಾಡುಗಳ ಮ್ಯೂಸಿಕ್ ಜ್ಯಾಮ್’ ಕಾರ್ಯಕ್ರಮವನ್ನು ಕಟ್ಟಿಕೊಟ್ಟರಷ್ಟೆ. ಅಷ್ಟಕ್ಕೇ ಮುದುರಿ ಕುಳಿತಿದ್ದ ಭಾವಗಳೆಲ್ಲವೂ ಎದ್ದು ಕುಳಿತು ಮೆತ್ತಗೆ ಉಸಿರಿಡಲು ತೊಡಗಿದವು.

ನೆನಪುಗಳಿಗೆ ಸಾವಿಲ್ಲ. ಆಯುಸ್ಸಿನುದ್ದಕ್ಕೂ ನಮಗೆ ಆಸರೆಯಾಗಿ ಅವುಗಳು ಜೊತೆಯಲ್ಲೇ ಇರುತ್ತವೆ. ಒಂದೊಮ್ಮೆ ಆಯಸ್ಸು ಮುಗಿದದ್ದೇ ನಾವು ನೆನಪುಗಳಾಗಿ ಬಿಡುತ್ತೇವೆ. ನನ್ನೊಳಗಿನ ‘ಸಿ.ಅಶ್ವಥ್ ನೆನಹು’ ಗಳು ಕೂಡಾ ಹಾಗೆಯೇ ಜೀವಿಸುತ್ತಿರುವಂತದ್ದು. ನಾನು ಉದ್ಯೋಗ ಮಾಡುತ್ತಿದ್ದ ವಿದ್ಯಾ ಸಂಸ್ಥೆಯ ಕಾರ್ಯಕ್ರಮಗಳಿಗೆ ಬಹಳಷ್ಟು ಬಾರಿ ಸಿ.ಅಶ್ವಥ್ ಅವರನ್ನು ಅತಿಥಿಯಾಗಿ ಕರೆಯುವ, ಕರೆದಾಗ ಬಂದವರ ಕುಶಲೋಪರಿಗಳನ್ನು ವಿಚಾರಿಸಿಕೊಳ್ಳುವ ಯೋಗವು ನನ್ನ ಪಾಲಿನದ್ದಾಗಿತ್ತು. ಪರಿಣಾಮ ಅವರ ಜೊತೆಗೆ ಬಂಧವೊಂದು ಬೆಸೆದುಕೊಂಡಿತು.

ಬಂಧವೊಂದು ನೆಪವಾಗಲು ಕಾರ್ಯ ನಿಮಿತ್ತ ಆಗಾಗ ಅವರು ನಾನು ಕಾರ್ಯ ನಿರ್ವಹಿಸುತ್ತಿದ್ದ ವಿದ್ಯಾ ಸಂಸ್ಥೆಗೆ ಬರುತ್ತಿದ್ದರು. ಆದರದು ಅವರಿಗಾಗಿ ಆಗಿರಲಿಲ್ಲ. ಬದಲಿಗೆ ಅವರ ಸ್ನೇಹಿತರ, ಪರಿಚಿತರ ಇತರ ಆಪ್ತರ ಒತ್ತಡಕ್ಕೆ ಕಟ್ಟುಬಿದ್ದು ಅಡ್ಮಿಶನ್ ಗೆಂದು ನನ್ನ ಬಳಿಗೆ ಬರುತ್ತಿದ್ದರು. ನನ್ನ ಚೇಂಬರ್ ನಲ್ಲಿ ಅದಾಗಲೇ ಜನರಿದ್ದಾರೆಂದಾದರೆ ನಾನೇ ಅವರನ್ನು ಒಳಕ್ಕೆ ಕರೆಯಿಸಿ ಕುಳ್ಳಿರಿಸುತ್ತಿದ್ದೆ. ಹಾಗೆ ಬಂದು ಕುಳಿತವರ ಮನದೊಳಗೆ ಅದ್ಯಾವುದೋ ಹಾಡು ಗುನುಗುತ್ತಿತ್ತು.. ಹೊಸತೊಂದು ರಾಗ ಸಂಯೋಜನೆಯು ರೂಪವನ್ನು ತಳೆಯುತ್ತಿತ್ತು. ಪರಿಣಾಮ ಮೆಲ್ಲಗೆ ಅವರ ಬೆರಳುಗಳು ಮೇಜನ್ನು ತಾಳ ರೂಪವಾಗಿ ಕುಟ್ಟುತ್ತಿರುತ್ತಿದ್ದವು. ಜೊತೆಗೆ ಮಂದಿಗಳೊಂದಿಗೆ ನಾನು ವ್ಯವಹರಿಸುತ್ತಿರುವುದನ್ನೂ ಗಮನಿಸುತ್ತಿದ್ದರು.

ಸುಗಮ ಸಂಗೀತದಂತೆ ಮತ್ತವರ ಹಾಡುಗಳ ಕುರಿತಾಗಿ ಅವರ ಬಳಿ ಚರ್ಚಿಸುತ್ತಿರಲು, ಮಾತಿನ ನಡುವೆ, ‘ಅಲ್ಲಾರಿ, ಈ ಒಂದು ಹುಡ್ಗೀದು ಅಡ್ಮಿಶನ್ ಮಾಡ್ಸಿ’ ಎಂದು ಹೇಳುವಾಗ ಅವರ ಧ್ವನಿಯಲ್ಲಿನ ಕಾಳಜಿ, ಕಳಕಳಿ ಸ್ಪಷ್ಟವಾಗಿ ಸೂಸುತ್ತಿತ್ತು. ಹೀಗೆ ಪ್ರತೀ ಶೈಕ್ಷಣಿಕ ವರ್ಷ ಬಂದಾಗಲೂ ಮುಂಗಾರಿನಂತೆ ಅಶ್ವಥ್ ಬೆರಗೆಂಬ ಸುಗಮ ಸಂಗೀತ ಲೋಕದ ಗಾನ ಚಕ್ರವರ್ತಿಯ ಆಗಮನವಾಗುತ್ತಿತ್ತು. ಒಮ್ಮೆ ಅವರ ಬಳಿ ಮಾತನಾಡುತ್ತಲಿರುವಾಗ ನನ್ನ ಸಣ್ಣದೊಂದು ಬೇಡಿಕೆಯಿದೆ ಎಂದಂದೆ- ‘ಹೇಳ್ರಿ, ಏನದು?’ ಕೇಳಿದರು.

‘ನಿಮ್ಮೆದುರು ಹಾಡೊಂದನ್ನು ಹಾಡಾಬೇಕು. ಅದು ನನ್ನ ಆತ್ಮ ತೃಪ್ತಿಗಾಗಿಯಷ್ಟೇ’ ಎಂದು ಭಿನ್ನವಿಸಿಕೊಂಡೆ. ‘ಅರೇ, ಅದಕ್ಕೇನಂತೆ ನಾಳೆ ಮಧ್ಯಾಹ್ನ ಮೂರಕ್ಕೆ ಮನೆಗೆ ಬಂದ್ಬಿಡಿ’ ಎಂದು ಹೇಳುತ್ತಾ, ‘ಈ ಹುಡುಗಂಗೂ ಅಡ್ಮಿಶನ್ ಮಾಡ್ಸಿಪ್ಪಾ, ತುಂಬಾ ಬಡವ’ ಎಂದು ವಿದ್ಯಾರ್ಥಿಯ ಅಂಕಪಟ್ಟಿಯನ್ನು ನನ್ನ ಮುಂದಿಟ್ಟು ತಮ್ಮ ಟಿಪಿಕಲ್ ನಗು ನಕ್ಕು ಹೊರಟರು.

ಹೇಳಿದ್ದ ಸಮಯಕ್ಕಿಂತ ಮುಂಚಿತವೇ ಅವರ ಮನೆಯ ಬಳಿ ತಲುಪಿದ್ದೆ. ಮಧ್ಯಾಹ್ನದ ಹೊತ್ತು ಬೇರೆ, ಮೊದಲೇ ಹೋಗಿ ಕಾಟ ಕೊಡುವುದು ಬೇಡ ಎಂದು ಕಾಫಿಗಾಗಿ ಪಕ್ಕದಲ್ಲಿದ್ದ ದರ್ಶಿನಿಗೆ ಹೋದೆ. ಅಂತೂ ಬರಲು ಹೇಳಿದ ಸಮಯಕ್ಕಿಂತ ಐದು ನಿಮಿಷ ಮುಂಚಿತವಾಗಿ ಅವರ ಮನೆ ಬಾಗಿಲನ್ನು ಬಡಿದೆ. ತುಸು ಹೊತ್ತಿನ ಬಳಿಕ ಅವರ ಪತ್ನಿ ಬಂದು ಬಾಗಿಲನ್ನು ತೆರೆದು ಏನೆಂದು ಕೇಳಿದ್ದಕ್ಕೆ ಉತ್ತರಿಸಿದೆ- ಕುಳಿತುಕೊಳ್ಳಲು ಹೇಳಿ ಅಶ್ವಥ್ ರನ್ನು ಕರೆಯಲು ಅವರ ಕೋಣೆಯತ್ತ ಹೆಜ್ಜೆ ಹಾಕಿದರು. ಮಧ್ಯಾಹ್ನದ ವಿಶ್ರಾಮದಲ್ಲಿದ್ದ ಅಶ್ವತ್ ಸರ್ – ಪಂಚೆಯನ್ನು ಸರಿಯಾಗಿ ಕಟ್ಟಿಕೊಳ್ಳುತ್ತ, ಆಕಳಿಸಿಕೊಂಡು ಹೊರಕ್ಕೆ ಬಂದು, ‘ಕರೆಕ್ಟ್ ಸಮಯಕ್ಕೆ ಬಂದ್ರಿ. ಊಟ ಆಯ್ತೆ?’ ಎಂದು ಕೇಳಿ ಉತ್ತರವನ್ನೂ ಪಡೆದು ಅವರ ಮನೆಯವರಿಗೆ ಕಾಫಿ ಬೆರೆಸಲು ಹೇಳಿದರು.

ಹಾಗೂ ಹೀಗೂ ಮಾತನಾಡುತ್ತಲಿರುವಾಗಲೇ ಸರಕ್ಕನೆ ಒಳಕ್ಕೆ ಹೋಗಿ ತಮ್ಮ ಹಾರ್ಮೋನಿಯಂ ಅನ್ನು ತಂದು ನೆಲದಲ್ಲಿ ಕುಳಿತರು. ನಾನೂ ಅವರ ಮುಂದೆ ಕುಳಿತೆ. ಕಪ್ಪು-ಬಿಳಿಗಳ ಮೇಲೆ ಕೈಯಾಡಿಸಿ ಹೊಮ್ಮಿಸಿದ ರಾಗವು ಮಧ್ಯಾಹ್ನಕ್ಕೊಂದು ಭಾವುಕ ಮಾಹೋಲನ್ನು ಕಟ್ಟಿಕೊಟ್ಟಿತು. ಥಟ್ ಎಂದು ಹಾರ್ಮೋನಿಯಂ ಅನ್ನು ನನ್ನತ್ತ ಸರಿಸಿ, ‘ಹಾಡಿ..’ ಎಂದರು. ಆ ಒಂದು ಕ್ಷಣದ ಅನುಭವ ವರ್ಣಿಸಲಾಗದ್ದು. ಬಿಳಿ ಕಪ್ಪು ಮೆಟ್ಟಿಲುಗಳ ಮೇಲೆ ಕೈಯಾಡಿಸಿ ಹಾಡಬೇಕೆಂದುಕೊಂಡ ಹಾಡಿನ ಏರು-ತಗ್ಗುಗಳನ್ನು ಮನದಲ್ಲೇ ಹಾಡಿಕೊಂಡು ಕೊನೆಗೆ ಕಪ್ಪು ಒಂದರಲ್ಲಿ ಶ್ರುತಿ ಹಿಡಿದೆ.

ಕವಿ ಎಮ್.ಎನ್ ವ್ಯಾಸ ರಾವ್ ಬರೆದ ಪದ್ಯಕ್ಕೆ ಅಶ್ವಥ್ ಸರ್ ಸಂಯೋಜಿಸಿದ ‘ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ ನನ್ನೆದೆಯ ಕಡಲೇಕೋ ಬೀಗುತಿಹುದು’ ಹಾಡನ್ನು ಹಾಡಿದೆ. ಚೆನ್ನಾಗಿ ಹಾಡಿದ್ರಿ, ಹಾಡುತ್ತೀರಿ ಎಂದು ಹೇಳಿ ಹೆಚ್ಚಿನ ಅಭ್ಯಾಸಕ್ಕೆಂದು ಜಯಶ್ರೀ ಅರವಿಂದ್ ಅವರ ಬಳಿಗೆ ಕಳುಹಿಸಿದರು. ಅವರ ಮಾತಿನಂತೆ ಜಯಶ್ರೀ ಅರವಿಂದರ ಬಳಿಗೂ ಹೋಗಿದ್ದೆ, ಅವರು ಹೆಚ್ಚಿನ ಕಲಿಕೆಗೆ, ಅಭ್ಯಾಸಕ್ಕೆ ಬರಲೂ ಹೇಳಿದ್ದರು. ಆದರೆ ಯಾಕೋ ಯೋಗ ಕೂಡಿ ಬರಲಿಲ್ಲ. ಪಡಕೊಂಡು ಬಂದದ್ದೇ ಇಷ್ಟು ಎಂದು ಅಷ್ಟಕ್ಕೇ ತೃಪ್ತನಾದೆ.

ನನಗೆ ದಕ್ಕಿದ ಸಿ.ಅಶ್ವಥ್ ಅವರ ಜೊತೆಗಿನ ಅನುಭವಗಳನ್ನು ಆಗಾಗ ಮೆಲುಕು ಹಾಕುವುದಿದೆ. ಈಗಲೂ ಯಾರಾದರೂ ಹಾರ್ಮೋನಿಯಂ ಅನ್ನು ನನ್ನ ಮುಂದೆ ಇಟ್ಟಾಗ… ಮನೆಯಲ್ಲಿ ಎಲ್ಲರೂ ಜೊತೆ ಸೇರಿ ಸಂಗೀತ ಸಂಭ್ರವನ್ನು ಅನುಭವಿಸುವ ಹೊತ್ತಲ್ಲಿ ಹಾರ್ಮೋನಿಯಂ ಅನ್ನು ಹಿಡಿಯುವಾಗಲೆಲ್ಲ… ಪಟ್ ಎಂದು ಸಿ.ಅಶ್ವಥ್ ಅವರು ನೆನಪಾಗುತ್ತಾರೆ. ಸಾದಾ ಸೀದಾ ವ್ಯಕ್ತಿತ್ವದ ಅವರೊಬ್ಬ ನಿಗರ್ವಿ. ಸಂಗೀತಕ್ಕಾಗಿ ಏನೂ ಮಾಡಲು, ಹೊಸತೊಂದನ್ನು ಕಟ್ಟಲೂ ಸದಾ ಸಿದ್ಧರಿದ್ದ ಅವರು ‘ಕನ್ನಡವೇ ಸತ್ಯ’ ಎಂದು ಉಸಿರಾಡಿ ನಮಗೂ ಉಸಿರಾಡಲು ಕಲಿಸಿದವರು. ನೊಂದು ದಣಿದ ಜೀವಗಳ ಎದೆಗೆ ಈ ಮಣ್ಣಿನ ಮಿಶ್ರರಾಗಗಳ ರಸ ಕಂಪನ್ನು ಹರಿಸಿ ತಣಿಸಿದ ಅಶ್ವಥ್, ಉತ್ತಮ ರುಚಿ-ವಾಸನೆಗಳ ಮಹತ್ತನ್ನು ಅರಿತು ಅನುಭವಿಸುತ್ತಿದ್ದ ಭಾವಜೀವಿ. ಶಿಸ್ತು ಹಾಗೂ ಅಚ್ಚುಕಟ್ಟುತನಗಳಿಗಂತೂ ಅವರಿಗ ವರೇ ಸಾಟಿ.

ಕೊನೆತನಕವೂ ಸ್ವಸ್ಥವಾಗಿಯೇ ಇದ್ದರು ಭಾವಜೀವಿ ಅಶ್ವಥ್. ನಿರ್ಗಮಿಸಿಲೊಂದು ಕಾರಣ ಬೇಕಿತ್ತು, ಹಾಗಾಗಿ ಅಸ್ವಸ್ಥಗೊಂಡರು. ಕವಿ ಬಿ.ಆರ್.ಲಕ್ಷ್ಮಣ್ ರಾವ್ ಅವರ ಸಾಲುಗಳಿಗೆ ರಾಗ ಸಂಯೋಜಿಸಿ, ‘ಹೋಗಿ ಬರುವೆ ನನ್ನ ನಲ್ಲೆ ಬಳಿಯೇ ಕಾದಿರು, ಸಾವಿರಾರು ಮೈಲಿ ಇರಲಿ ಮತ್ತೆ ಬರುವೆನು’ ಎಂದು ಭಾವಪೂರ್ಣವಾಗಿ ಅವರೇ ಹಾಡಿದ್ದರಲ್ಲ… ಕಾಯುವಿಕೆಯೊಳಗೆ ಮೂಡುವ ನಿರೀಕ್ಷೆಗಳಲ್ಲಿ ಸುಖಗಳೂ ಅಡಗಿರುತ್ತವೆ.

‍ಲೇಖಕರು Avadhi

June 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: