
– ನಾಗರಾಜ್ ಭಟ್ ಟಿ ಆರ್
ದೇಶಪ್ರೇಮ ಪ್ರತಿಯೊಬ್ಬ ಪ್ರಜೆಗೂ ಇರಬೇಕಾದಂತಹ ಒಂದು ಮಹತ್ವದ ಅಂಶ. ದೇಶ ರಕ್ಷಣೆಯಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಕೇವಲ ದೇಶ ರಕ್ಷಣೆಯಷ್ಟೇ ಅಲ್ಲ ಸಮಾಜದ ರಕ್ಷಣೆಯಲ್ಲೂ ಇದರ ಪಾತ್ರ ಮುಖ್ಯವಾದುದು.ದೇಶಪ್ರೇಮ ಎಂದರೇನು ಎಂಬುದಕ್ಕೆ ಪ್ರಪಂಚದ ಹಲವು ದಾರ್ಶನಿಕರು ಒಂದೊಂದು ರೀತಿಯಲ್ಲಿ ವಿವರಣೆ ನೀಡುತ್ತಾರೆ. ಅಮೇರಿಕಾದ ಥಿಯೊಡರ್ ರೂಸ್ ವೆಲ್ಟ್ “ದೇಶಪ್ರೇಮ ಎಂದರೆ ದೇಶದ ಜೊತೆ ನಿಲ್ಲುವುದು.ಆದರೆ ದೇಶದ ಅಧ್ಯಕ್ಷ ಅಥವಾ ಯಾವುದೇ ಸಾರ್ವಜನಿಕ ಅಧಿಕಾರಿಯ ಜೊತೆ ನಿಲ್ಲುವುದಲ್ಲ” ಎನ್ನುತ್ತಾರೆ. ಮತ್ತೊಬ್ಬ ಅಮೇರಿಕಾದ ಸೈನಿಕ ನಾಥೆನ್ ಹೇಲ್ “ದೇಶಕ್ಕಾಗಿ ಕೊಡಲು ನನ್ನ ಬಳಿ ಕೇವಲ ಒಂದೇ ಜೀವ ಇರುವುದು ಎಂದು ಬಹಳ ಬೇಸರವಾಗುತ್ತದೆ” ಎಂದು ದೇಶಪ್ರೇಮದ ಬಗ್ಗೆ ವಿವರಿಸುತ್ತಾರೆ. ಆದರೆ ನಾವು ಭಾರತೀಯರು ಇದನ್ನು ದೇಶಪ್ರೇಮ ಎನ್ನಲಿಲ್ಲ ಬದಲಾಗಿ ದೇಶಭಕ್ತಿ ಎಂದೆವು.ಪದವೇ ಸೂಚಿಸುವಂತೆ ದೇಶದ ಮೇಲಿರುವ ಭಕ್ತಿಯೇ ದೇಶಭಕ್ತಿ.ಅಂದರೆ ದೇಶವನ್ನು ನಾವು ದೇವರಂತೆ ಕಂಡವರು ನಾವು.ಅದರಲ್ಲೂ “ಜನನಿ ಜನ್ಮಭೂಮಿಶ್ಚ ಸ್ವರ್ಗದಪಿ ಗರೀಯಸಿ” ಅಂದರೆ ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು ಎಂಬ ಧ್ಯೆಯ ವಾಕ್ಯದ ನೆರಳಲ್ಲಿ ಬೆಳೆದವರು ನಾವು.ಹಿಂದಿನ ರಾಮಾಯಣದ ಕಾಲದಲ್ಲಿಯೇ ದೇಶಭಕ್ತಿಯನ್ನು ಮೈಗೂಡಿಸಿಕೊಂಡವರು ನಾವು. ಬಹುಶಃ ಪ್ರಪಂಚದಲ್ಲಿ ಭಾರತೀಯರಾದ ನಾವು ಮಾತ್ರ ದೇಶವನ್ನು ಹೆತ್ತ ತಾಯಿ ಹಾಗೂ ದೇವರ ರೂಪದಲ್ಲಿ ಕಂಡವರು. ಬಹಳ ಹೆಮ್ಮೆಯ ವಿಚಾರ ಅಲ್ಲವೇ???
ಹೌದು, ಇದು ಹೆಮ್ಮೆಯ ವಿಚಾರ ಆದರೆ ಯಾವುದೋ ಕಾಲಕ್ಕೆ ಮಾತ್ರ.ಸದ್ಯದ ಪರಿಸ್ಥಿತಿಗಂತೂ ಅಲ್ಲವೇ ಅಲ್ಲ.ಕಾರಣ ಎಲ್ಲರಿಗೂ ಗೊತ್ತಿರುವಂತೆಯೇ ಅತ್ಯಾಚಾರ, ಒಳಜಗಳ,ಕೊಮುಗಲಭೆ ಇತ್ಯಾದಿ ಇತ್ಯಾದಿ…… ಇಂತಹ ಕಾರಣಗಳಿಂದ ಭಾರತೀಯರಲ್ಲಿ ದೇಶಭಕ್ತಿ ಕ್ಷೀಣಿಸುತ್ತಿರುವುದು ದುರಾದೃಷ್ಟವೇ ಸರಿ…..
ಅತ್ಯಾಚಾರದ ವಿಷಯ ಮಾತನಾಡುವುದಾದರೆ ಬಹಳ ಅಸಹ್ಯ ಎನಿಸುತ್ತದೆ.ಭಾರತವನ್ನು ತಾಯಿಯ ರೂಪದಲ್ಲಿ ಕಂಡಂತವರು ನಾವು. ನಮ್ಮ ಸಮಾಜದ ಪರಸ್ತ್ರೀಯನ್ನು ಸಹೋದರಿ ಹಾಗೂ ತಾಯಿಯ ರೂಪದಲ್ಲಿ ಕಾಣುತ್ತಿದ್ದ ಕಾಲವೊಂದಿತ್ತು.ಆದರೆ ಈಗ ಆ ಕಾಲ ಇಲ್ಲ.ಕೇವಲ ಒಂದು ರಾಜ್ಯದಲ್ಲೇ ದಿನಕ್ಕೆ ಹತ್ತು ಅತ್ಯಾಚರ ಪ್ರಕರಣ ಹಾಗೂ ಇಡೀ ದೇಶದಲ್ಲಿ ಸರಿಸುಮಾರು ೯೦ ರಿಂದ ೧೦೦ ಪ್ರಕರಣ ದಾಖಲಾಗುತ್ತಿದೆ ಎಂದರೆ ಏನರ್ಥ? ಪ್ರತಿ ವರ್ಷ ರಕ್ಷಾಬಂಧನ ಹಬ್ಬದಂದು ಸಹೋದರಿಯರಿಂದ ರಕ್ಷೆಯ ಬಂಧನವನ್ನು ಕಟ್ಟಿಸಿಕೊಳ್ಳುವ ನಾವು ಈಗೇಕೆ ಹೀಗೆ ಮಾಡುತ್ತಿದ್ದೇವೇ? ೬ ತಿಂಗಳಿನ ಹಸುಳೆಯಿಂದ ಹಿಡಿದು ೯೦ ವರ್ಷದ ಮುದುಕಿಯವರೆಗೆ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಎಂದರೆ ಎಂತಹ ವಿಪರ್ಯಸ ಅಲ್ಲವೇ? ಕಾಮುಕ ಮನಸ್ಸಿನ ಜನತೆಯ ಅಟ್ಟಹಾಸ ಎಲ್ಲೆ ಮೀರುತ್ತಿದೆಯಲ್ಲವೇ? ಇಂತಹ ಮನಸ್ಥಿತಿಯ ಜನರಲ್ಲಿ ದೇಶಭಕ್ತಿಯ ಬೇರು ಒಣಗಿ ಹೋಗಿರುತ್ತದೆ. ದೇಶದ ಬಗ್ಗೆ ಹಾಗೂ ಸ್ತ್ರೀಯರ ಬಗ್ಗೆ ನಿಜವಾಗಿಯೂ ಗೌರವ ಇದ್ದಂತವರು ಇಂತಹ ನೀಚ ಕೆಲಸಕ್ಕೆ ಇಳಿಯುವುದಿಲ್ಲ.
ಇನ್ನು ಒಳಜಗಳ ಅಂದರೆ ನಮ್ಮ ದೇಶದ ರಾಜ್ಯ ರಾಜ್ಯಗಳ ನಡುವಿನ ಕಿತ್ತಾಟ. ಇದು ದೇಶದ ಆಂತರಿಕ ಭದ್ರತೆಗೆ ತೊಡಕನ್ನುಂಟು ಮಾಡುವುದಲ್ಲದೇ ಜನರಲ್ಲಿ ವೈಶಮ್ಯ ಭಾವನೆಯನ್ನು ಬಿತ್ತುತ್ತದೆ.ಉದಾಹರಣೆಗೆ ನಮ್ಮ ಕರ್ನಾಟಕ ರಾಜ್ಯವನ್ನೇ ತೆಗೆದುಕೊಳ್ಳೋಣ. ರಾಜ್ಯದ ದಕ್ಷಿಣದಲ್ಲಿ ತಮಿಳುನಾಡಿನೊಂದಿಗೆ ಕಾವೇರಿ ವಿವಾದ, ಉತ್ತರದಲ್ಲಿ ಮಹಾರಾಷ್ಟ್ರದೊಂದಿಗೆ ಬೆಳಗಾವಿ ವಿವಾದ ಹಾಗೆಯೇ ನೆರೆಯ ಆಂಧ್ರದೊಂದಿಗೆ ಹೈದರಾಬಾದ್-ಕರ್ನಾಟಕ ವಿವಾದ. ಹೀಗೆ ಕೇವಲ ಒಂದೇ ರಾಜ್ಯ ೩-೪ ರಾಜ್ಯಗಳೊಡನೆ ಮನಸ್ತಾಪ ಇಟ್ಟುಕೊಂಡರೆ ದೇಶದ ಗತಿಯೇನು? ದೇಶ ರಕ್ಷಣೆಯ ವಿಷಯ ಎಲ್ಲಿಯ ಮಾತು? ನಾವೆಲ್ಲರೂ ಭಾರತೀಯರು ಎಂಬ ಭಾವನೆಯಿಂದ ಇಂತಹ ಒಳಜಗಳಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು.ಆದರೆ ಅದು ಇದುವರೆಗೂ ಸಾಧ್ಯವಾಗಿಲ್ಲ.ಏಕೆಂದರೆ ನಾವೆಲ್ಲರೂ ಭಾರತೀಯರು ಎನ್ನುವುದಕ್ಕಿಂತ ಮೊದಲು ನಾವು ಕನ್ನಡಿಗರು,ನಾವು ಮರಾಠರು, ನಾವು ತಮಿಳರು, ಮಲಯಾಳಿ,ತೆಲುಗು ಹೀಗೆ ಭಾಷೆಯ ಮುಖಾಂತರ ಬೇರೆ ಬೇರೆಯಾಗಿ ಗುರುತಿಸಿಕೊಳ್ಳುತ್ತೇವೆ.ಇದರಿಂದಾಗಿ ದೇಶದಲ್ಲಿ ಒಗ್ಗಟ್ಟಿನ ಸಮಸ್ಯೆ ತಲೆದೂರುತ್ತದೆ.ರಾಜ್ಯದ ಮೇಲೆ ನಿಷ್ಠೆ, ಭಕ್ತಿ,ಅಭಿಮಾನ ಎಲ್ಲವೂ ಇರಬೇಕು ಬೇಡ ಎಂದೇನಲ್ಲ ಆದರೆ ದೇಶವಿದ್ದರೆ ಮಾತ್ರ ರಾಜ್ಯವಿರುತ್ತದೆ ಎಂಬ ಚಿಕ್ಕ ಕಲ್ಪನೆಯಾದರೂ ಬೇಕಲ್ಲವೇ? ದೇಶವೇ ನಾಶವಾಗಿ ಹೋದರೆ ರಾಜ್ಯ , ಭಾಷೆ ಇದ್ದೂ ಏನು ಪ್ರಯೋಜನ?
ಕೋಮುಗಲಭೆಯ ವಿಷಯಕ್ಕೆ ಬಂದರೆ ನಮ್ಮ ದೇಶ ಅರ್ಧ ನಾಶವಾಗುತ್ತಿರುವುದು ಧರ್ಮಗಳ ಆಧಾರಿತ ಜಗಳಗಳಿಂದಲೇ ಎನ್ನಬಹುದು. ದೌರ್ಭಾಗ್ಯ ಎಂದರೆ ದೇಶದಲ್ಲಿ ಯಾವುದೇ ಒಂದು ಅಹಿತಕರ ಘಟನೆ ನಡೆದರೂ ಅದಕ್ಕೆ ಕೋಮುಗಲಭೆಯ ತೇಪೆ ಹಚ್ಚುತ್ತಿರುವುದು ನಮ್ಮ ರಾಜಕಾರಣಿಗಳು ಎಂಬುದು ಬಹಳ ನೋವಿನ ವಿಷಯ. ಯಾರನ್ನು ಕೇಳಿದರೂ ನಾನೊಬ್ಬ ಹಿಂದೂ, ನಾನೊಬ್ಬ ಕ್ರೈಸ್ತ, ನಾನೊಬ್ಬ ಸಿಖ್, ನಾನೊಬ್ಬ ಮುಸ್ಲಿಂ,ನಾನೊಬ್ಬ ಬೌದ್ಧ, ಜೈನ್ ಎನ್ನುತ್ತಾರೆಯೇ ವಿನಹ ಯಾರೂ ನಾನೊಬ್ಬ ಭಾರತೀಯ ಎಂದು ಹೇಳುವುದಿಲ್ಲ.ಜಾಗತಿಕ ಮಟ್ಟದಲ್ಲಿ ಭಾರತ ತನ್ನದೇ ಆದಂತಹ ಛಾಪನ್ನು ಹೊಂದಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಅದು ಈ ಧರ್ಮಗಳ ಕಾದಾಟದಿಂದಾಗಿ ಕುಂದುತ್ತಿದೆ. ನೆನಪಿಡಿ ಇಡೀ ಪ್ರಪಂಚದಲ್ಲಿ ನಮ್ಮ ಭಾರತ ಮಾತೆಯೊಬ್ಬಳೇ ತನ್ನ ಉದರದಲ್ಲಿ ಎಲ್ಲಾ ವಿಧವಾದ, ಎಲ್ಲಾ ಧರ್ಮದ ಜನಾಂಗದ ಜನರನ್ನು ಪೋಷಿಸುತ್ತಿರುವುದು.ಪ್ರಪಂಚದ ಇನ್ನಾವುದೇ ದೇಶ ಭಾರತ ಎಲ್ಲಾ ಧರ್ಮಗಳಿಗೆ ಕೊಟ್ಟಂತಹ ಸ್ಥಾನಮಾನ ಕೊಟ್ಟ ನಿದರ್ಶನಗಳಿಲ್ಲ. ಸರ್ವಧರ್ಮವನ್ನೂ ಸಮಾನ ರೀತಿಯಲ್ಲಿ ನೋಡುತ್ತಿದ್ದ ನಾವು ಇಂದೇಕೆ ಹೀಗೆ ಮಾಡುತ್ತಿದ್ದೇವೇ? ಜಾತಿ ಧರ್ಮ ಎಂದೇಕೆ ಕಿತ್ತಾಡುತ್ತಿದ್ದೇವೇ? ಧರ್ಮವನ್ನು ಪಕ್ಕಕ್ಕಿಟ್ಟು ದೇಶ ಮೊದಲು ಎಂಬ ಭಾವನೆ ಏಕೆ ನಮ್ಮಲ್ಲಿ ಬರುತ್ತಿಲ್ಲ?
ಮುಖ್ಯವಾಗಿ ನಮ್ಮಲ್ಲಿ ದೇಶಭಕ್ತಿಯ ಕೊರತೆಯುಂಟಾಗುತ್ತಿದೆ.ನಾವು ಎಲ್ಲ ಸ್ತ್ರೀಯರನ್ನು ಸಮಾನ ರೀತಿಯಲ್ಲಿ ಗೌರವಿಸಬೇಕಾಗಿದೆ.ಸ್ತ್ರೀಯರ ರಕ್ಷಣೆ ಮಾಡಬೇಕಾಗಿದೆ. ಧರ್ಮ ಜಾತಿಗಳ ಜಗಳ ಬಿಡಬೇಕು. ಪರಸ್ಪರ ಹೊಂದಾಣಿಕೆಯ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಸಿದ್ಧ ಭಾಷಣಕಾರರೊಬ್ಬರು ಹೇಳುವಂತೆ “ಜಾತಿಗಳು ಬೇಕು ಆದರೆ ಅವು ಮನೆಯ ಒಳಗಿದ್ದರೆ ಸಾಕು. ಮನೆಯಿಂದ ಹೊರಗಡೆ ಬಂದಾಗ ನಾನು ಆ ಜಾತಿ ಈ ಜಾತಿ ಎಂಬ ಭಾವನೆ ತೊಡೆದು ಹಾಕಿ ನಾನೊಬ್ಬ ಭಾರತೀಯ ಎಂಬ ಭಾವನೆಗೆ ಒಳಗಾಗಬೇಕು” ಆಗ ಮಾತ್ರ ಭಾರತ ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಿ ಮತ್ತೊಮ್ಮೆ ಜಗದ್ಗುರುವಾಗಲು ಸಾಧ್ಯ. “War and Cricket unites India” ಎಂಬ ಮಾತನ್ನು ಸುಳ್ಳು ಮಾಡೋಣ. ಕೇವಲ ಯುದ್ಧ ಹಾಗೂ ಕ್ರಿಕೆಟ್ ನಡೆದಾಗ ಮಾತ್ರಾ ಭಾರತೀಯರು ಒಗ್ಗೂಡುವುದಿಲ್ಲ ಎಲ್ಲಾ ಸಮಯದಲ್ಲೂ ಒಗ್ಗಟ್ಟಾಗಿರುತ್ತಾರೆ ಎಂದು ತೋರಿಸೋಣ.ಭಾರತ ಮೊದಲು ನಂತರ ಉಳಿದದ್ದು . ನಾವೆಲ್ಲರೂ ತಾಯಿ ಭಾರತಿ ಎಂಬ ಒಂದೇ ತಾಯಿಯ ಮಕ್ಕಳಾಗೋಣ…….
ಹೊಸ ಓದು : ನಾಶವಾಗುತ್ತಿದೆಯೇ ಭಾರತೀಯತೆ?
ನಿಮಗೆ ಇವೂ ಇಷ್ಟವಾಗಬಹುದು…



Nagaraja Vastaare article in avadhi. Excellent review of same question with different perspectives. Please read again.
http://avadhimag.online/2014/07/14/%e0%b2%ac%e0%b2%bf%e0%b2%8e%e0%b2%82%e0%b2%b6%e0%b3%8d%e0%b2%b0%e0%b3%80%e0%b2%af%e0%b2%b5%e0%b2%b0%e0%b3%81-%e0%b2%87%e0%b2%82%e0%b2%97%e0%b3%8d%e0%b2%b2%e0%b2%bf%e0%b2%b7%e0%b3%8d-%e0%b2%97/