ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೇಮಾ ಹೇಳಿದ ಬ್ರೇಕಪ್ ಕಥೆಗಳು

– ಹೇಮಾಲತಾ

ಯಾಕೋ ಇತ್ತೀಚಿಗೆ ಗ್ಲಾಸ್ ಬ್ರೇಕಿಂಗ್ ಸೌಂಡ್ಗಳೇ ಕೇಳಿಸ್ತಿವೆ, ಬಹುಷ್ಯ ಬ್ರೇಕಪ್ ನ ಮುನ್ಸೂಚನೆ ಇರಬೇಕು ಅಂತಾನೆ ಚಿತ್ರದ ನಾಯಕ .ಮೈಲೇಜ್ ಗಳಿಲ್ಲದೆ ಮಧ್ಯದಲ್ಲೇ ನಿಂತು ,ಅಲ್ಲೇ ಮುಗಿದ ಕತೆಗಳನ್ನು ಕೇಳಿದಾಗ ನನಗೂ ಅಂತದ್ದೆ ಸದ್ದು ಕೇಳಿಸಿದ ಅನುಭವ .
ಟಿಕ್ ಟಿಕ್ ಎಂದು ಮುಂದಮುಂದಕ್ಕೆ ಚಲಿಸುತ್ತ ಏರುತ್ತಿರುವ ನಿರ್ಧಾಕ್ಷಿಣ್ಯ ವಯಸು .ಒಬ್ಬೊಬ್ಬರೇ ಗೆಳತಿಯರು ಮದುವೆ, ಮಧುಚಂದ್ರ ,ನಾಮಕರಣ, ಗೃಹಪ್ರವೇಶ ಅಂತ ಸಂಭ್ರಮ ಪಡುತ್ತಿರುವಾಗ ಬದುಕು ಭಣಭಣ ಅನಿಸಿ ಖಾಲಿಖಾಲಿಯಾದಂತಹ ಭಾವ . ನಿನ್ನ ಜವಾಬ್ದಾರಿ ನಮ್ಮದು ಎಂದು ಮುಂದೆ ನಿಂತು ದಾರಿತೋರುವವರಿಲ್ಲದೆ, ಸ್ವಸಹಾಯಕ್ಕೆ,ಸ್ವಯಂವರಕ್ಕೆ ತಾನೇ ಮುಂದೆ ನಿಂತ ಹುಡುಗಿ .ಅದು matrimonial ಸೈಟ್.
ಆತ ಉದ್ದುದ್ದ ಓದಿನ ,ಹುಬ್ಬೇರಿಸುವ ನೌಕರಿಯ,ದೊಡ್ದಂಕಿ ಸಂಬಳದ ಸ್ಪುರದ್ರೂಪ ಚೆಲುವ. ಅವನಾಗೇ ಆಸಕ್ತಿ ತೋರಿಸಿ ಮದುವೆಗೆ ಪ್ರಸ್ತಾಪಿಸಿದಾಗ ಇಷ್ಟೆಲ್ಲಾ ದಿನ ಹುಡುಕಿದ್ದು, ಕಾದಿದ್ದು ಅವನಿಗೆ ಅನಿಸುವಷ್ಟು ಸಂತೃಪ್ತಿಯಿತ್ತು ಅವಳಲ್ಲಿ. ಒಪ್ಪಿಕೊಂಡ ತನ್ನ ಆಯ್ಕೆಯ ಬಗ್ಗೆ ಹೆಮ್ಮೆಯಾಯಿತು.
 
ನಿಶ್ಚಿತಾರ್ಥದ ದಿನಾಂಕ ಕೂಡ ನಿಗದಿಯಾಗಿ ಹತ್ತಿರಹತ್ತಿರ ಬಂದಂತೆ ಯಾವುದೋ ವಿಷಯಗಳ ಮಾಹಿತಿಗೆ ಸಂಪರ್ಕಿಸುತ್ತಿದ್ದವಳ ಮಾತಿನ ತುಂಬಾ ಇಣುಕುತ್ತಿದ್ದ ಅವ್ಯಕ್ತ ಭಯ,ಸುಸ್ತು !
ಅವನ ಪ್ರಶ್ನೆಗಳಿಗೆ, ಪರೀಕ್ಷೆಗಳಿಗೆ ಉತ್ತರಿಸುವಲ್ಲಿ,ವಿವರಿಸುವಲ್ಲಿ ಹೇಳಿಕೊಳ್ಳಲಾಗದ ಮುಜುಗರ, ಹೇವರಿಕೆಗೆ ಸಿಲುಕಿಕೊಂಡಿದ್ದು ಢಾಳಾಗಿ ಎದ್ದು ಕಾಣಿಸುತ್ತಿತ್ತು .
ಪದೇಪದೇ ಅವನು reassurence ಬೇಡುವ ಅದೇ ಪ್ರಶ್ನೆಯನ್ನು ತಿರುತಿರುಗಿ ಕೇಳುತ್ತಿದ್ದ , “ಇಂದಿನ ಕಾಲದ ಹುಡುಗಿಯರಲ್ಲಿ ಮುಗ್ದತೆ ಕಾಣೆಯಾಗುತ್ತಿದೆ , ನೀನು ದೈಹಿಕ ಪಾವಿತ್ರ್ಯತೆ ಕಾಯ್ದುಕೊಂಡಿರುವೆಯ ?”
ಸಾಂಪ್ರದಾಯಿಕ ವಾತಾವರಣದ ಬಹುತೇಕ ಗಂಡುಮಕ್ಕಳ ನಿರೀಕ್ಷೆ, ಅಪೇಕ್ಷೆ ಇಂತದ್ದೆ .ಅದರಲ್ಲಿ ಅತಿಶಯೋಕ್ತಿಯಾಗಲಿ, ಅಂತ ತಪ್ಪಾಗಲಿ ಅಷ್ಟೇನಿಲ್ಲ ಅಂದು ಕೊಂಡ ಅವಳು ” ಪಾವಿತ್ರ್ಯ ಕಾದಿರಿಸಿಕೊಂಡ ಒಳ್ಳೆಯ ಹುಡುಗಿ ನಾನು. ಅಂತಹ ಹಿನ್ನಲೆಯ ಹುಡುಗಿಯಲ್ಲ ” ಎಂದು ಮನವರಿಕೆಯಾಗುವಂತೆ ಆತ್ಮವಿಶ್ವಾಸದಲ್ಲಿ ಗಟ್ಟಿಯಾಗಿ ಹೇಳಿದಳು. ಮತ್ತದೇ ಪ್ರಶ್ನೆ ಪುನರಾವರ್ತನೆಯಾಗುವಾಗಲು ವಿಚಲಿತಳಾಗದೆ ತಾಳ್ಮೆಯಿಂದ ಭರವಸೆ ನೀಡಿದಳು .
ಅದರೊಂದಿಗೆ ಅವನ ಪರೀಕ್ಷೆಗಳು ಮುಗಿದಿರಲಿಲ್ಲ. ಮುಂದಿನ ದಿನ ಹೊಸ ಸಂದೇಹ . “ಅರೋಗ್ಯ ಸಂಭಂಧಿ ಕಾಯಿಲೆ ರೋಗಗಳೇನಾದರು ನಿನಗೆ ಇವೆಯ?” ನೇರವಾಗಿ ವಿಚಾರಿಸಿದ .
ದೈಹಿಕವಾಗಿ ಸದೃಡಳಾಗಿದ್ದೇನೆ, ಅಂತ ಯಾವುದೇ ಮಾರಣಾಂತಿಕ ಕಾಯಿಲೆ ತನಗಿಲ್ಲ ಎಂದಳು .
ಹಿಂದೊಮ್ಮೆ ನಿಶ್ಚಯವಾಗಿದ್ದ ಹುಡುಗಿಗೆ ಅಸ್ತಮ ಇದ್ದಿದ್ದನ್ನುಅವರ ಮನೆಯವರು ನಮ್ಮಿಂದ ಮುಚ್ಚಿಟ್ಟಿದ್ದರು, ಅದು ಹೇಗೋ ನಮಗೆ ತಿಳಿದು ಅಲ್ಲಿಗೆ ಆ ಸಂಬಂಧವನ್ನು ಕೈಬಿಟ್ಟೆವು , ಎಂತ ಮೋಸ ಮಾಡಿದ್ದರು ಅಲ್ಲವ ಅವಳನ್ನೇ ಕೇಳಿದ .
ಮದುವೆ ನಂತರದಲ್ಲಿ ಅರೋಗ್ಯ ಸಮಸ್ಯೆ ಉಂಟಾದರೆ ಹೆಂಡತಿಯನ್ನು ಅಲ್ಲೇ ತೊರೆದು ಹೋಗುತ್ತೀರಾ ಕೇಳಿಯೇ ಬಿಟ್ಟಳು ಅವಳು .
ಅವಳ ಪ್ರಶ್ನೆಗೆ ಬೆಣ್ಣೆ ಸವರುವವನಂತೆ “ಹಾಗಲ್ಲ ಮದುವೆಯ ನಂತರ ಏನೇ ಆದರು ಅದನ್ನು ಸ್ವೀಕರಿಸುತ್ತೇನೆ, ಆದರೆ ಗೊತ್ತಿದ್ದೂ ಗೊತ್ತಿದ್ದೂ ಸಮಸ್ಯೆ ಇರುವುದನ್ನು ಮುಂಚೆಯೇ ಯಾರು ಒಪ್ಪಿಕೊಳ್ಳೋಲ್ಲ ಅಲ್ಲವ? ಒಳ್ಳೆಯದ್ದು ಬೇಕು ಅಂತ ವಿಚಾರಿಸೋದು , ಮುಂಚೆಯೇ ಎಲ್ಲ ವಿಷಯ ಕೇಳಿ ತಿಳಿದುಕೊಳ್ಳೋದು ತಪ್ಪಾ? ” ಸಮಜಾಯಿಸಿ ನೀಡಿದ.
ತಮಗೆ ಬೇಕಾದಂತಹ ರೀತಿಯನ್ನು ನೇರಾನೇರ ಚರ್ಚಿಸಿ, ಹೆಚ್ಚೇ ಜಾಗ್ರತೆ, ಮುತುವರ್ಜಿ ವಹಿಸುವುದು ಸರಿ ಎಂದುಕೊಂಡು ಸುಮ್ಮನಾದಳು .
ಮತ್ತೊಂದು ದಿನ ಸೀರೆಯುಟ್ಟು ನಿಂತಾಗ ಹೊಟ್ಟೆಮೇಲೆ ಕಂಡ ಕಾಸಗಲದ ಮಚ್ಚೆಗೆ ಸಂಪೂರ್ಣ ವಿಚಾರಣೆಯೇ ನಡೆದುಹೋಯಿತು. ಅವಳಿಗೆ ಇರುಸು ಮುರುಸು ಶುರುವಾಗಿದ್ದು ಅಲ್ಲಿಂದಲೇ ಇರಬೇಕು .
ಪ್ರತಿ ದಿನವೋ ಹೀಗೆ ಒಂದೊಂದು ಹೊಸ ಪ್ರಶ್ನೆ,ಪ್ರಶ್ನೆ ಬೇಡುವ ಉತ್ತರ..ಅಂಗುಲ ಅಂಗುಲವೂ ವಿಮರ್ಶೆಗೆ ,ಪರೀಕ್ಷೆಗೆ,ವ್ಯಾಪಾರಕ್ಕೆ ಒಳಗಾಗುತ್ತಿದೆ ತಾನೊಂದು ಸರಕು ಅನಿಸುವಾಗ ಬೆಸ್ತು ಬೀಳುತ್ತಿದ್ದಳು.ಬೇರೆ ವಿಷಯಗಳಲ್ಲಿ ಸೂಕ್ತವಾಗಿಯೇ ಕಾಣುತ್ತಾನೆ ಮತ್ತು ಎಲ್ಲದಕ್ಕೂ ತರ್ಕ ಬದ್ದವಾದ ವಿವರಣೆಯನ್ನೇ ನೀಡುತ್ತಾನೆಯಾದ್ದರಿಂದ ಸರಿತಪ್ಪು ನಿರ್ಧರಿಸಲಾಗದ ತೊಳಲಾಟದ ಅತಂತ್ರ ಸ್ಥಿತಿಗೆ ತಲುಪಿದ್ದಳು.
ಅವಳು ನಿಜವಾಗಲು ಭಯಗೊಂಡಿದ್ದು ಅವನು ಈ ಹಿಂದೆ ಕೂಡ ನಿಶ್ಚಯವಾದ ಅದೆಷ್ಟೋ ಸಂಬಂಧಗಳನ್ನು ಬೇರೆಬೇರೆ ಕಾರಣಗಳಿಗೆ ಮುರಿದುಕೊಂಡಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳಲು ತೊಡಗಿದಾಗ.
ತನ್ನದೇ ಆಯ್ಕೆ ಸೋಲುವುದನ್ನು ಒಂದು ಕಡೆ ಒಪ್ಪಲಾರಳು, ಮತ್ತೊಂದು ಕಡೆ ಅದಾಗಲೇ ನಿಶ್ಚಿರ್ತಾರ್ಥದ ತನಕ ಬಂದು ,ಬಳಗದಲ್ಲೆಲ್ಲ ತಿಳಿದು ದಿನಾಂಕ ನಿಗದಿಯಾದಮೇಲೆ ಮುರಿದುಕೊಳ್ಳಲಾಗದು , ಮನೆಯ ಒತ್ತಡಗಳು ಮತ್ತೂ ಹತ್ತು ಹಲವು .
ಬುದ್ದಿ -ಮನಸು,ತರ್ಕ-ಭಾವುಕತೆ ,ಹೃದಯ -ಮಿದುಳು ಎಲ್ಲದಕ್ಕೂ ಸುಸ್ತು .
ಇಷ್ಟೆಲ್ಲಾ ಕೇಳಿದ ಮೇಲೆ ಮನದಲ್ಲಿ ಮೂಡಿದ್ದು ನನ್ನ ನಾಲಿಗೆಯಲ್ಲಿ ನಿರಾತಂಕ ಮೂಡಿಬಿಟ್ಟಿತು , -“ಬಾಳುವಿಕೆಗೆ ಅರ್ಹನಲ್ಲದ ವ್ಯಕ್ತಿ.. not worth …ಇದನ್ನು ಇಲ್ಲಿಗೆ ನಿಲ್ಲಿಸಿಬಿಡು …”
ಮುಂದಿನ ಕ್ಷಣ ಒಳಗುದ್ದಿದ ಪ್ರಶ್ನೆ! ಒಂದು ವೇಳೆ ನಂತರದಲ್ಲಿ ಎಲ್ಲ ಸರಿ ಹೋಗುವ ಹಾಗಿದ್ದರೆ?ಗೆಳತಿಯ ಮದುವೆ ಮುರಿದುಕೊಳ್ಳುವಂತ ಸಲಹೆ ನಾ ನೀಡಿದ್ದು ಎಷ್ಟು ಸಮಂಜಸ? ಪಾಪಪ್ರಜ್ಞೆಗೆ ಗೊಂದಲಕ್ಕೆ ಸಿಲುಕಿಕೊಂಡೆ.
ಆದರೆ ಬೇಡ ಎಂದು ಹಾಗೆ ನಿಶ್ಚಯವಾಗಿ ತಿಳಿಸಲು ನಿರ್ಧಿಷ್ಟ ಕಾರಣವು ಇತ್ತು .
ಕಣ್ಣ ಮುಂದಿದ್ದ ಬದುಕು ಹರಿದು ಚಿಂದಿಚಿಂದಿಯಾದ ಆ ಇನ್ನೊಬ್ಬ ಹುಡುಗಿಯ ಕತೆ ! ಆ ಹುಡುಗಿಯ ಕತೆಯಲ್ಲೂ ಹೀಗೆ … ಅವನು ಮದುವೆಗೆ ಮುಂಚೆಯೇ ಅವಳ ಕಾಲ್ ಹಿಸ್ಟರಿ ಹಿಡಿದು ನಿಂತ್ತಿದ್ದ. ವಿವರಿಸುವಂತೆ ಕೇಳಿದ್ದ. ಹಾಗೆ ನೋಡಿದರೆ ಹುಡುಗಿ ಅಂತ ಪೆದ್ದು ಆಗಿರಲಿಲ್ಲ.
ಎಷ್ಟೆಲ್ಲಾ ನಂಬಿ ಕನಸುಕಂಡು ಮನೆಕಟ್ಟಿದ್ದೆ ಎಂದು ಒಂದೆರಡು ಕ್ಷಣ ಅತ್ತಳು,ಎಂತ ಕ್ರಿಮಿನಲ್ ಕೆಲಸ ಇದು ಎಂದು ದಬಾಯಿಸಿದಳು ,ಈ ತರಹ ಮಾಡಲು ಯೋಚಿಸಲು ಸಾಧ್ಯವಿರುವ ವ್ಯಕ್ತಿಯನ್ನು ಸಂಬಂಧವನ್ನು ಇಲ್ಲಿಗೆ ನಿಲ್ಲಿಸುತ್ತೇನೆ ಸ್ಪಷ್ಟವಾಗಿ ಒರಲಿದಳು.
ನಾನಲ್ಲ ನನ್ನ ಕಸಿನ್ ತೆಗೆಸಿದ್ದು ,ಈ ವಿಷಯ ನಡೆದೇ ಇಲ್ಲವೆಂಬಂತೆ ಇಲ್ಲಿಗೆ ಬಿಟ್ಟಾಕು,ಏನು ಆಗೇ ಇಲ್ಲ ಅಂತ ಮರೆತುಬಿಡು ಎಂದೆಲ್ಲಾ ಮನವೊಲಿಸಿದ . ಗೊಂದಲದ ಅವಳು ಮನೆಯವರೊಂದಿಗೆ ನಡೆದ ವಿಷಯ ತಿಳಿಸಿದಾಗಲು ಹೋಗಲಿ ಬಿಡು ಏನೋ ಹುಡುಗು ಬುದ್ದಿ ಅದರಲ್ಲಿ ಅಂತದ್ದು ಏನು ಇಲ್ಲ ಎಂದೇ ತೇಲಿಸಿದರು .
ಅದರ ನಂತರವೂ ಹೀಗೆ ಶಾಪಿಂಗ್ ಎಂದು ಕರಕೊಂಡು ಹೋಗುತ್ತಿದ್ದವನು ರಸ್ತೆ ಮಧ್ಯೆ ಏನೇನೋ ಸೀನ್ ಸೃಷ್ಟಿ ಮಾಡಿ ಅಳಿಸಿ ರಾಂಪಾಡಿಸಿ ಕರೆತರುತ್ತಿದ್ದ .ಅಪ್ಪನಂತೆ,ಚಿಕ್ಕಪ್ಪನಂತೆ ಬಿಸಿರಕ್ತದ ಕೋಪ, ಚೂರು ಮುಂಗೋಪಿ,ಇವೆಲ್ಲ ವ್ಯಕ್ತಿತ್ವದ ಸಣ್ಣ ಸಮಸ್ಯೆ .ಮುಂದೆಲ್ಲ ಸರಿ ಹೋಗುತ್ತದೆ,ಅದು ಬಿಟ್ಟರೆ ಮಿಕ್ಕಿದ್ದೆಲ್ಲ ಸೂಕ್ತವಾಗಿದೆ ಎಂದೇ ಭಾವಿಸಿಕೊಂಡಳು .ಆದರೆ ಮದುವೆಯಾದ ನಂತರ ಪ್ರತಿಯೊಂದು ವಿಕೋಪಕ್ಕೆ ತಿರುಗುತ್ತಿತ್ತು . ಅವನಷ್ಟೇ ಅಲ್ಲ ಒಂದು ಕುಟುಂಬದ ಯೋಚನೆ, ವರ್ತನೆಗಳೆಲ್ಲವು ಒಂದೇ ತೆರನಾಗಿದ್ದವು.

ಜಗಳಕ್ಕೆ ಕದನಕ್ಕೆ ಕಾದು ಕೂತಂತ ಜಗಳಗಂಟ ಜನ, ದಿನ ಬೆಳಗಾದರೆ ಒಂದು ವ್ಯಾಜ್ಯ, ಅದು ಕಡಿಮೆ ಆಯಿತು ಇದು ಕಡಿಮೆ ಆಯಿತು ಆರೋಪ ವಾದ-ವಿವಾದ,ಶಿಕ್ಷೆ .ಸಾಮರಸ್ಯ ಶಾಂತಿ ಸಹಬಾಳ್ವೆ ಎಲ್ಲರ ನಿರೀಕ್ಷೆಯಾಗಿರುವುದಿಲ್ಲ .ಮನುಷ್ಯರು ಮೃಗಗಳಾಗುವುದು ,ನೋವು ಹಿಂಸೆಯಾಗುವುದು ಸಾಬೀತು ಪಡಿಸಲಾಗದ ಸೂಕ್ಷ್ಮ ಬದಲಾವಣೆ .
ತಮ್ಮ ಬಾಳಸಂಗಾತಿ ಹೀಗೀಗೆ ಇರಬೇಕೆಂಬ ಪರಿಕಲ್ಪನೆ ಕಂಡಿತ ಎಲ್ಲರಿಗು ಇರುತ್ತದೆ . ಹಲವು ಹತ್ತು ರೀತಿಗಳಲ್ಲಿ ವಧು ಅಥವಾ ವರರ ಕೌಟಂಬಿಕ ಹಿನ್ನಲೆ,ಮನೆತನ ,ಉದ್ಯೋಗ,ಆಸಕ್ತಿ,ಹವ್ಯಾಸ,ಅಭ್ಯಾಸಗಳ ಗಮನಿಸಿ,ಕೇಳಿ ತಿಳಿದುಕೊಂಡು,ಪರೀಕ್ಷಿಸಿ,ದೃಡಪಡಿಸಿಕೊಳ್ಳುತ್ತಾರೆ.
ಉದ್ಯೋಗ ಮತ್ತು ಬಾಳಸಂಗಾತಿ ನಮ್ಮ ಜೀವನದ ಉತ್ಕೃಷ್ಟತೆ ಮತ್ತು ಪರಿಪೂರ್ಣತೆ ನಿರ್ಧರಿಸುವ ಎರಡು ಪ್ರಮುಖ ಅಂಶಗಳು .ಹಾಗಾಗಿ ನಮ್ಮ ಭವಿಷ್ಯದ ನೆಮ್ಮದಿ ಮತ್ತು ಭದ್ರತೆಗಳ ಕಾಳಜಿ ವಹಿಸುವುದು ಅಗತ್ಯ ಕೂಡ ಹೌದು.
ಹುಡುಗ ಗೌರ್ಮೆಂಟ್ ನೌಕರಿಯಲ್ಲಿರಬೇಕು,ಹುಡುಗನ ಹತ್ತಿರ ಕಾರ್ ಇರಬೇಕು,ಮನೆಯಿರಬೇಕು,ನನ್ನ ಆಸಕ್ತಿಗಳನ್ನು ಪೋಷಿಸುವವನಾಗಿರಬೇಕು,ಕೆಲಸಕ್ಕೆ ಕಳುಹಿಸುವವನಾಗಿರಬೇಕು , ಹುಡುಗಿ ಸುಂದರವಾಗಿರಬೇಕು,ಒಳ್ಳೆ ಮನೆತನದಿಂದ ಬಂದವಳಾಗಿರಬೇಕು, ನಮ್ಮ ಮನೆಯವರ ಜೊತೆ ಕಲೆತು ಬೆರೆತು ಸಹಿಸಿಕೊಂಡು ಹೋಗುವಂತಹ ಸಹನಾಶೀಲಳಾಗಿರಬೇಕು ,ಅಮ್ಮನ ಜೊತೆ ಜಟಾಪಟಿ ಮಾಡದೆ ತಗ್ಗುವವಳಾಗಿರಬೇಕು, ಅಮ್ಮನಷ್ಟೇ ರುಚಿಯಾಗಿ ಅಡಿಗೆ ಮಾಡುವವಳಾಗಿರಬೇಕು , ಗಂಡ, ಮಕ್ಕಳ ನೆತ್ತಿ ಕಾಯುತ್ತ ಮನೆಯಲ್ಲೇ ಸಂಸಾರ ಕಟ್ಟುವ ಗೃಹಿಣಿಯಾಗಿರಬೇಕು …
ಒಬ್ಬೊಬ್ಬರಿಗೂ ಬಿನ್ನವಾದ ಈ ತರದ ಎಷ್ಟೋ ಬೇಕುಗಳ ಸಮೇತವೆ ಅನ್ವೇಷಣೆ ಕೂಡ ಶುರುವಾಗಿರುತ್ತದೆ.ನಮ್ಮ ಅಗತ್ಯ,ಮನೋಪ್ರವೃತ್ತಿ ಮತ್ತು ಮನೆಯ ವಾತಾವರಣಗಳಿಗೆ ಅನುಗುಣವಾಗಿ ಬಯಸುವುದು, ಹುಡುಕುವುದು ತಪ್ಪು ಎನ್ನಲಾಗದ ಅವಶ್ಯಕ ಸರಿ .
ಆದರೆ ಎಲ್ಲವು ಅತಿ ಮತ್ತು ತೀವ್ರತೆಯಲ್ಲೇ ಇರುತ್ತದೆ.
ಅರಿವೇ ತಂದು ಮೈಯ ಅಳತೆಗೆ ಹೊಲಿಸಿಕೊಳ್ಳುವುದು ಒಂದು ವಿಧ. ಹೊಲೆದು ಸಿದ್ದವಿರುವ ಅಂಗಿಯನ್ನು ಮೈಅಳತೆಗೆ ತಕ್ಕಂತೆ ಮಾರ್ಪಡಿಸಿ ತೊಡುವುದು ಮತ್ತೊಂದು ವಿಧ .
ಆದರೆ ಪರ್ಫೆಕ್ಟ್ ಆದ ಅಳತೆಯ ಸಿದ್ದ ಉಡುಪನ್ನು ಹಿಡಿದುಕೊಂಡು, ಅದಕ್ಕೆ ಪರ್ಫೆಕ್ಟ್ ಆದ,ಪರಿಪೂರ್ಣವಾದ ಮೈಯನ್ನು ಅರಸುತ್ತ, ಅಳೆಯುತ್ತ,ನಂತರವೂ ಸಿಕ್ಕಿದ್ದನ್ನು ಒತ್ತಡ ಪೂರ್ವಕವಾಗಿ, ಶೀಘ್ರವಾಗಿ ತುರುಕುತ್ತ ಬದುಕುವ ಜನರದ್ದು ಮೂರನೆಯ ವಿಧ .ಈ ವಿಧದಲ್ಲಿ ಬಟ್ಟೆ ಹರಿಯುವ, ದೇಹ ನಲುಗುವ ಸಂಭವವೇ ಹೆಚ್ಚು .
ನನ್ನ ದುಗುಡ ಆ ಮೂರನೆಯ ವರ್ಗದ ಜನರ ಮನೋಭಿಲಾಷೆ ಮತ್ತು ವರ್ತನೆಗಳ ಕುರಿತಾದದ್ದು .ಎಲ್ಲದರಲ್ಲೂ ಪರಿಶಿಷ್ಟವಾದುದು , ಶ್ರೇಷ್ಠವಾದುದನ್ನ ಸ್ವೀಕರಿಸಲು ಮಾತ್ರ ಅವರು ತಯಾರಿರುತ್ತಾರೆ .
ಸಾಕ್ಷಿ ಮತ್ತು ಸರ್ಟಿಫಿಕೇಟ್ಗಳ ರುಜುವಾತು ಕೇಳುವ ಇವರಲ್ಲಿ ಬಹುತೇಕರು ತಮ್ಮ ಬಗ್ಗೆಯೇ ಆತ್ಮವಿಶ್ವಾಸ ಮತ್ತು ನಂಬಿಕೆ ಇಲ್ಲದವರು.ಯಾವ ವಿಷಯದಲ್ಲೂ ಸಣ್ಣಪುಟ್ಟ ಏರುಪೇರುಗಳನ್ನು ನಿರೀಕ್ಷಿಸಲು ಅದರೊಂದಿಗೆ ಬದುಕನ್ನು ಸ್ವೀಕರಿಸಲು ಸಿದ್ದವಿರದ ಕರ್ಮಠ ಮನೋಸ್ಥಿತಿಯವರು.ವ್ಯಕ್ತಿಕೇಂದ್ರಿತ ,ಸ್ವಾರ್ಥಪೂರಿತ ಆದರ್ಶಗಳ ಬಿಟ್ಟರೆ ಮತ್ತೊಂದು ಇವರ ವ್ಯಕ್ತಿತ್ವದಲ್ಲಿ ಇರಲಾದರು. ಇನ್ನು ಹೆಚ್ಚು ಸೂಕ್ತವಾಗಿ ಹೇಳಬೇಕೆಂದರೆ ಯುದ್ಧ ಭೂಮಿಗೆ ಇಳಿಯದೆ,ಹೋರಾಡದೆ ಮುಂಚಿತವಾಗಿ ಗೆಲುವನ್ನ ಖಾತ್ರಿಪಡಿಸಿಕೊಳ್ಳುವ ಉತ್ತರಕುಮಾರರು .ತುಂಬಿಸುತ್ತಾ ತುಂಬಿಸುತ್ತಾ ಹೋದಷ್ಟು ಬೆಳೆಯುತಲೇ ಹೋಗುವ “ಬೇಕು ಬೇಕು”ಗಳು .ವಿವಾಹ ಎನ್ನುವುದು “ಅವಕಾಶವಾದಿ ಅನುಕೂಲಸಿಂಧು” ಎನ್ನುವ ಅರ್ಥ ಅವರ ಪ್ರಕಾರ .ಸಂಗಾತಿಯಿಂದ ಯಾವುದನ್ನ ನಿರೀಕ್ಷಿಸಬೇಕು,ಏನನ್ನು ಕೇಳಬೇಕು, ಹೇಗೆ ಕೇಳಬೇಕು ಎನ್ನುವ ಕನಿಷ್ಠ ಮಟ್ಟದ ಸೂಕ್ಷ್ಮತೆ ,ಸೌಜನ್ಯದ ಪರಿಜ್ಞಾನ ಸಹ ಇರದ ಇಂತಿಪ್ಪ ಜನರು ಶ್ರೇಷ್ಠ ಆಯ್ಕೆಯ ಜೊತೆ ವಿಪರೀತ ಆಶ್ವಾಸನೆಗಳ ಮೇಲೆ ಹಸೆ ಏರಲು ಸಿದ್ದವಿರುವಾಗ, ಅವರ ಪರಿಪೂರ್ಣತೆ ಎಷ್ಟು ಎಂದು ಕೇಳಿದರೆ ಅವರುಗಳೇ ಕೊಟ್ಟುಕೊಳ್ಳುವ ಮಾನದಂಡಗಳು ಅವವೇ ದೊಡ್ಡ ಓದು, ಉತ್ತಮ ಹುದ್ದೆ, ಹಣ ಅಂತಸ್ತು,ಒಬ್ಬನೇ ಮಗ ಎನ್ನುವ ಕಾರಣಗಳು .
ಪರೀಕ್ಷೆಗಳು , ವಿಚಾರಣೆಗಳು ಭದ್ರತೆಯ ಸಂಭವನೀಯತೆಯನ್ನು ನೀಡಬಲ್ಲದು ಹೊರತು ಸಾಧ್ಯತೆಯ ನಿಖರತೆ ಮತ್ತು ಗೆಲುವಿನ ಗ್ಯಾರಂಟಿಯನಲ್ಲ.
ಮದುವೆಯಾಗಿ ವಿದೇಶದಲ್ಲಿ ನೆಲೆಗೊಳ್ಳುವ NRI ಜೋಡಿಗಳೆಲ್ಲ ಸುಖವಾಗಿರೋದಿಲ್ಲ , ಮನೆ ಕಾರು ಇರುವ ಶ್ರೀಮಂತರ ಮಡದಿಯರು ಸಂತುಷ್ಟಿಯಿಂದ ಬಾಳುತ್ತಿರುವುದಿಲ್ಲ ,ಮುದ್ದಾದ ಹುಡುಗಿಯ ವರಿಸಿದ ಗಂಡಂದಿರು ನೆಮ್ಮದಿಯಿಂದ ಬದುಕುತ್ತಿರುವುದಿಲ್ಲ .
ಸಮಸ್ಯೆಯ ಹೂರಣ ಇರುವುದೇ ಜೀವನ ಮತ್ತು ಸಂಬಂಧಗಳ ಅರ್ಥ ಆಳ ತಿಳಿದುಕೊಳ್ಳದ ಮತ್ತು ರಮ್ಯವಾದ ಕಲ್ಪನೆ ಕನಸುಗಳನಷ್ಟೇ ಜೀವನ ಎಂದು ನಿಗದಿ ಮಾಡಿಕೊಂಡ ಬಾಲಿಶತನಗಳಲ್ಲಿ .ಸುಖದ ಹಾದಿಯನ್ನು ವಾಸ್ತವತೆಗಳ ಮೀರಿ ಬಯಸುವ ದುರಾಸೆಗಳಲ್ಲಿ.
ಓದು-ವಿದ್ಯೆ ಎಂದರೆ ಕೈತುಂಬಾ ಸಂಬಳವನ್ನು ಕೊಡಮಾಡುವ ಹುದ್ದೆಯನ್ನು ಹೊಂದಲು, ದುಡ್ಡು ಖರ್ಚುಮಾಡಿ ಪಡೆದುಕೊಳ್ಳುವ ಡಿಗ್ರೀ ಎನ್ನುವಲ್ಲಿಗೆ ವಿದ್ಯೆಯ ಮೌಲ್ಯ ,ಜ್ಞಾನರ್ಜನೆಯ ಅರ್ಥ ಸೀಮಿತಗೊಂಡಿದೆ .ಹಾಗಿರುವಾಗ ಮದುವೆ ಎನ್ನುವುದು ಸೆಕೆಂಡ್ ಟೈಮ್ ಸೆಟಲ್ಮೆಂಟ್ ನಂತೆ ಬಹಳಷ್ಟು ಜನರಿಗೆ ಕಾಣುತ್ತಿರುತ್ತದೆ .
ಎರಡು ನೋವುಗಳ ಮಧ್ಯೆ ಮೂಡುವ ಸಣ್ಣದೊಂದು ನಗು ಜೀವನ . ಆ ನೋವು ನಲಿವುಗಳ ಮಧ್ಯದ ಅವಧಿ ಕೆಲವರ ಬದುಕಿಗೆ ಹೆಚ್ಚು, ಕೆಲವರಿಗೆ ಕಡಿಮೆ…
ಬದುಕಿನ ತಿರುವುಗಳಲ್ಲಿ ಅಚಾನಕ್ ಎರಗುವ ಅಪಘಾತ, ಆಘಾತ, ದುರಂತ ಬವಣೆಗಳಲ್ಲಿ ಜೊತೆನಿಂತು ಹೋರಾಡುವ ಮನಸ್ಥಿತಿಯನ್ನು ಹೊಂದಿರುವ ಸಂಗಾತಿಯನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳುವ ,ಸ್ವಾಗತಿಸುವ ಆಚರಣೆ ಮದುವೆ .
ಆದರೆ ಚರ್ಚಿನ ಹಾಲ್ನಲ್ಲಿ ರಿಂಗ್ ಬದಲಾಯಿಸಿಕೊಂಡು ಚುಂಬಿಸಿಕೊಂಡ ಬಿಳಿ ಗೌನಿನ ಸಿಂಡ್ರೆಲ್ಲ ಮತ್ತು ರಾಜಕುಮಾರ ಹೂ ಎಸೆದು ಕಾರಿನಲ್ಲಿ ಮಧುಚಂದ್ರಕ್ಕೆ ತೆರಳಿದ ರಮ್ಯ ಕಲ್ಪನೆಗೆ ಮದುವೆಯ ದೃಶ್ಯ ನಿಂತುಬಿಡುತ್ತದೆ .
ಸ್ವರ್ಗದಂತೆ ಸಿಂಗಾರಗೊಂಡ ದೊಡ್ಡ ಪಾರ್ಟಿಹಾಲಿನಲ್ಲಿ ಕುಲುಕುಲು ನಗುತ್ತ ಬಳಗದವರು ನಡೆಸಿಕೊಟ್ಟ ಉತ್ಸವದ ಆಚೆಗೆ ಪ್ರತಿನಿತ್ಯದ ನೈಜ್ಯ ಬದುಕಿದೆ ಮತ್ತು ಸಂಬಂಧವನ್ನು ನಿಭಾಯಿಸಬೇಕಾದ ಅವಶ್ಯಕತೆಯಿದೆ ಎನ್ನುವುದು ಮರೆತು ಹೋಗುತ್ತದೆ .ಪಾತ್ರಗಳು ಬೇಡುವ ಜವಾಬ್ದಾರಿಗಳನ್ನು ಪೂರೈಸಬೇಕಾದ ಹೊಣೆ, ಒಬ್ಬರೊಬ್ಬರ ವ್ಯಕ್ತಿತ್ವದ ಲೋಪದೋಷಗಳಿಗೆ ಹೊಂದಿಸಿಕೊಳ್ಳಬೇಕಾದ ಶ್ರಮ ,ಚೌಕಟ್ಟಿಗೆ ತಕ್ಕಂತೆ ತಿದ್ದಿಕೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆ ಗಮನ ಹರಿಯುವುದೇ ಇಲ್ಲ .ಇಬ್ಬರ ಸಮಪ್ರಮಾಣದ ಪರಿಶ್ರಮವನ್ನು ಕೇಳುವ ಇದಕೆಲ್ಲ ಸಹನೆ, ತಾಳ್ಮೆ,ಸೂಕ್ಷ್ಮತೆಯ ಅಗತ್ಯವಿದೆ.ಪಡೆದುಕೊಳ್ಳಲು ಕೈ ಚಾಚುವ ಮೊದಲು ನೀಡುವ ಔದಾರ್ಯವಿರಬೇಕು. ಸಂಬಂಧ ಬೇಡುವುದು ಪ್ರೀತಿ, ನಂಬಿಕೆ , ಗೌರವ ,ಸಹಿಸಿಕೊಳ್ಳುವಿಕೆ, ಒಪ್ಪಿಕೊಳ್ಳುವಿಕೆಗಳನ್ನು ಮಾತ್ರ.ಸೂಕ್ಷ್ಮತೆಯ ಬೆಚ್ಚನೆಯ ಭರವಸೆಯನ್ನೇ ಕೊಡದೆ ಬರಿ ವರ್ಜಿನಿಟಿ ಸರ್ಟಿಫಿಕೇಟ್ ,ಹೆಲ್ತ್ ರಿಪೋರ್ಟ್ , ಆಸ್ತಿಯ ರಿಜಿಸ್ಟ್ರೇಷನ್ಗಳನ್ನು ಕೇಳುತ್ತ ಮುಂದುವರಿದರೆ ಸಂಬಂಧ ಖಾಲಿಯಾಗಲು ಎಷ್ಟು ಹೊತ್ತುಬೇಕು.
ಇಲ್ಲಿ ಸಮಸ್ಯೆ ಎಂದರೆ ಎಲ್ಲಿಂದ ಎಲ್ಲಿಗೆ ಹೋದರು ಸೂಕ್ಷ್ಮತೆಯ ಅರಿವಿರದ ಜನ ಮತ್ತು ಜಾಗಗಳು.ಸೂಕ್ಷ್ಮಗೆರೆಯ ಅಂತರದಲ್ಲಿಯೇ ನೋವು ಹಿಂಸೆಯಾಗುವುದು .
ಇಷ್ಟೆಲ್ಲಾ ವಿಶ್ಲೇಷಿಸುವ ಹೊತ್ತಿಗೆ ಆ ಹುಡುಗಿ ಸಂಬಂಧ ಸತ್ತ ಸುದ್ದಿ ಮುಟ್ಟಿಸಿದಳು.
ಆಶ್ಚರ್ಯವೆಂದರೆ ಸಂಬಂಧ ಮುಗಿಸಿದ್ದು ಅವಳಲ್ಲ ಬದಲಾಗಿ ಅವನು ! ನನ್ನ ತರ್ಕ ಊಹೆ ಸುಳ್ಳಾಗಿರಲಿಲ್ಲ.ಅವನು ನೀಡಿದ ಕಾರಣ “ಮದುವೆಯ ಮಾತುಗಳು ಶುರುವಾದಾಗಿಂದ ತನ್ನ ಆರೋಗ್ಯದಲ್ಲಿ ಉಂಟಾಗುತ್ತಿರುವ ಏರುಪೇರುಗಳು ಮದುವೆಗೆ ಒಳ್ಳೆಯ ಸೂಚನೆ ನೀಡುತ್ತಿಲ್ಲ ” ಎನ್ನುವುದು .ಭಾವನಾತ್ಮಕವಾಗಿ ಇನೊಬ್ಬರ ಬದುಕಲ್ಲಿ ಹೀಗೆಲ್ಲ ಆಟ ಆಡುವವರ ವಿರುದ್ಧ ಯಾವುದೇ ಖಾನೂನಿನ ಕ್ರಮ ಕೈಗೊಳ್ಳಲು ಸಾಧ್ಯವಿದೆಯ ಎಂದು ಅವಳು ಕೇಳಿದಾಗ ಜೋರು ನಕ್ಕುಬಿಟ್ಟೆ . ಅಂತ ಸಂಬಂಧದ ಬಂಧನದಲ್ಲಿ ಸಿಲುಕಿ ಮುಗಿಯುವ ಶಿಕ್ಷೆಯಿಂದ ತಪ್ಪಿಸಿಕೊಂಡ್ಡಿದ್ದಕ್ಕೆ ಅಭಿನಂದನೆ ಸಲ್ಲಿಸಿ ಪಾರ್ಟಿ ನೀಡಲು ಕೇಳಿದೆ.
ಶ್ರೇಷ್ಟತೆಯ ಖಾಯಿಲೆ ಮನೋರೋಗವಾಗಿ ,ಮಾನಸಿಕ ವ್ಯಸನ ಮತ್ತು ವಿಕೃತಿಗೆ ತಿರುಗುವುದು ಕೂಡ ಸೂಕ್ಷ್ಮಗೆರೆ …!!!!
ಪ್ರಿಯತಮ ಮತ್ತು ಮನೆಯವರು ನೋಡಿದ ಹುಡುಗನ ಮಧ್ಯದ ದ್ವಂದ್ವದಲ್ಲಿ ಸಿಲುಕಿ ವರನ ಬದುಕಲ್ಲಿ ಡ್ರಾಮ ಸೃಷ್ಟಿಸಿದ ಹುಡುಗಿ , ಪ್ರೇಮಿಗಳ ಪ್ರೀತಿ ಕುಸಿದು ಬಿದ್ದ ಮತ್ತಷ್ಟು ಬ್ರೇಕಪ್ ಕತೆಗಳು ಮುಂದಿನ ಬರಹಗಳಲ್ಲಿ …
 

‍ಲೇಖಕರು G

5 December, 2014

11 Comments

  1. Mamata Patil

    Awesome 🙂

  2. Anonymous

    super akka 75% nan life hagide

  3. shashikala M

    Hi Hemalatha,
    A very very true picture of what is happening around. good writing with real stuff Tyank you and looking forward eagerly to your next articles
    I read and re-read the article and recommended to my youngsters who are planning to get married
    Shashikala

  4. umesh desai

    yes this is good and contemporary..

  5. Harish O

    This will definitely help many of us Hema. Thanks for such an article… 🙂

  6. Anonymous

    ಅರಿವೇ ತಂದು ಮೈಯ ಅಳತೆಗೆ ಹೊಲಿಸಿಕೊಳ್ಳುವುದು ಒಂದು ವಿಧ. ಹೊಲೆದು ಸಿದ್ದವಿರುವ ಅಂಗಿಯನ್ನು ಮೈಅಳತೆಗೆ ತಕ್ಕಂತೆ ಮಾರ್ಪಡಿಸಿ ತೊಡುವುದು ಮತ್ತೊಂದು ವಿಧ .
    ಆದರೆ ಪರ್ಫೆಕ್ಟ್ ಆದ ಅಳತೆಯ ಸಿದ್ದ ಉಡುಪನ್ನು ಹಿಡಿದುಕೊಂಡು, ಅದಕ್ಕೆ ಪರ್ಫೆಕ್ಟ್ ಆದ,ಪರಿಪೂರ್ಣವಾದ ಮೈಯನ್ನು ಅರಸುತ್ತ, ಅಳೆಯುತ್ತ,ನಂತರವೂ ಸಿಕ್ಕಿದ್ದನ್ನು ಒತ್ತಡ ಪೂರ್ವಕವಾಗಿ, ಶೀಘ್ರವಾಗಿ ತುರುಕುತ್ತ ಬದುಕುವ ಜನರದ್ದು ಮೂರನೆಯ ವಿಧ .ಈ ವಿಧದಲ್ಲಿ ಬಟ್ಟೆ ಹರಿಯುವ, ದೇಹ ನಲುಗುವ ಸಂಭವವೇ ಹೆಚ್ಚು .
    ವಾವ್ ಎಂತಹ ಹೋಲಿಕೆ ಸೂಪರ್ ಹೇಮಾ ಅವರೇ

  7. D.Ravivarma

    ಪರೀಕ್ಷೆಗಳು , ವಿಚಾರಣೆಗಳು ಭದ್ರತೆಯ ಸಂಭವನೀಯತೆಯನ್ನು ನೀಡಬಲ್ಲದು ಹೊರತು ಸಾಧ್ಯತೆಯ ನಿಖರತೆ ಮತ್ತು ಗೆಲುವಿನ ಗ್ಯಾರಂಟಿಯನಲ್ಲ.
    ಮದುವೆಯಾಗಿ ವಿದೇಶದಲ್ಲಿ ನೆಲೆಗೊಳ್ಳುವ NRI ಜೋಡಿಗಳೆಲ್ಲ ಸುಖವಾಗಿರೋದಿಲ್ಲ , ಮನೆ ಕಾರು ಇರುವ ಶ್ರೀಮಂತರ ಮಡದಿಯರು ಸಂತುಷ್ಟಿಯಿಂದ ಬಾಳುತ್ತಿರುವುದಿಲ್ಲ ,ಮುದ್ದಾದ ಹುಡುಗಿಯ ವರಿಸಿದ ಗಂಡಂದಿರು ನೆಮ್ಮದಿಯಿಂದ ಬದುಕುತ್ತಿರುವುದಿಲ್ಲ .
    ಸಮಸ್ಯೆಯ ಹೂರಣ ಇರುವುದೇ ಜೀವನ ಮತ್ತು ಸಂಬಂಧಗಳ ಅರ್ಥ ಆಳ ತಿಳಿದುಕೊಳ್ಳದ ಮತ್ತು ರಮ್ಯವಾದ ಕಲ್ಪನೆ ಕನಸುಗಳನಷ್ಟೇ ಜೀವನ ಎಂದು ನಿಗದಿ ಮಾಡಿಕೊಂಡ ಬಾಲಿಶತನಗಳಲ್ಲಿ .ಸುಖದ ಹಾದಿಯನ್ನು ವಾಸ್ತವತೆಗಳ ಮೀರಿ ಬಯಸುವ ದುರಾಸೆಗಳಲ್ಲಿ.
    ಓದು-ವಿದ್ಯೆ ಎಂದರೆ ಕೈತುಂಬಾ ಸಂಬಳವನ್ನು ಕೊಡಮಾಡುವ ಹುದ್ದೆಯನ್ನು ಹೊಂದಲು, ದುಡ್ಡು ಖರ್ಚುಮಾಡಿ ಪಡೆದುಕೊಳ್ಳುವ ಡಿಗ್ರೀ ಎನ್ನುವಲ್ಲಿಗೆ ವಿದ್ಯೆಯ ಮೌಲ್ಯ ,ಜ್ಞಾನರ್ಜನೆಯ ಅರ್ಥ ಸೀಮಿತಗೊಂಡಿದೆ .ಹಾಗಿರುವಾಗ ಮದುವೆ ಎನ್ನುವುದು ಸೆಕೆಂಡ್ ಟೈಮ್ ಸೆಟಲ್ಮೆಂಟ್ ನಂತೆ ಬಹಳಷ್ಟು ಜನರಿಗೆ ಕಾಣುತ್ತಿರುತ್ತದೆ .
    ಎರಡು ನೋವುಗಳ ಮಧ್ಯೆ ಮೂಡುವ ಸಣ್ಣದೊಂದು ನಗು ಜೀವನ . ಆ ನೋವು ನಲಿವುಗಳ ಮಧ್ಯದ ಅವಧಿ ಕೆಲವರ ಬದುಕಿಗೆ ಹೆಚ್ಚು, ಕೆಲವರಿಗೆ ಕಡಿಮೆ…
    ಬದುಕಿನ ತಿರುವುಗಳಲ್ಲಿ ಅಚಾನಕ್ ಎರಗುವ ಅಪಘಾತ, ಆಘಾತ, ದುರಂತ ಬವಣೆಗಳಲ್ಲಿ ಜೊತೆನಿಂತು ಹೋರಾಡುವ ಮನಸ್ಥಿತಿಯನ್ನು ಹೊಂದಿರುವ ಸಂಗಾತಿಯನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳುವ ,ಸ್ವಾಗತಿಸುವ ಆಚರಣೆ ಮದುವೆ …
    ನಿಮ್ಮ ಬರಹದಲ್ಲಿ ಬದುಕಿನ ಸದ್ಯದ ಸಮಾಜದ ಸ್ಪಸ್ಟ ಚಿತ್ರಣವಿದೆ . ನಾವು ನಮ್ಮ ಸಮಾಜ ಎದುರಿಸುತ್ತಿರುವ ಸಾಮಾಜಿಕ ಸಂಘರ್ಷದ ನಗ್ನ ಚಿತ್ರಣ ವಿದೆ . ಕುಟುಂಬ ಅಥವಾ ವ್ಯಕ್ತಿಯ ಆರ್ಥಿಕ ಸಬಲತೆ ಭದ್ರತೆ, ಫ್ಯಾಮಿಲಿ ಸ್ಟೇಟಸ್ ಇನ್ನೆಲ್ಲ ವಿಷಯಗಳ ಹಿಂದಿಕ್ಕಿ ,ಧಿಕ್ಕರಿಸಿ, ಕಡೆಗಾಣಿಸಿ ,ಸಂಭಂದಗಳನ್ನು ಹುಡುಕುವ ,ಬೆಸೆಯುವ
    ಈ ಕಾಲಘಟ್ಟದಲ್ಲಿ ವೈವಾಹಿಕ ಸಂಭಂದಗಳು ಕೂಡ ಅರ್ಥ ಕಳೆದು kolluttive,ಅಸ್ಟೆ ಅಲ್ಲ ,ಅವು ವಿಕಾರ ರೂಪು ಪಡೆದು ಕೊಳ್ಳುತ್ತಿವೆ..avu ಕುಟುಂಬ ವ್ಯವಸ್ತೆ ಯ ಬೇರನ್ನೇ ಕಳೆದುಕೊಳ್ಳುತ್ತಿವೆ ..noda ನೋಡುತಿದ್ದಂತೆ ವೈವಾಹಿಕ ಜೀವನದ ಕೊಂಡಿ ಕಳಚಿಕೊಳ್ಳುತ್ತಿದೆ.. ಹತ್ತು ಹಲವು ಆಶೆ, ಕನಸು ,ಬಯಕೆ , ಹೊತ್ತು ಹುಟ್ಟಿಹಾಕಿ ಕೊಳ್ಳುವ ಸಂಭಂದಗಳು , ಬ್ರಮ ನಿರಶನ ಗೊಂಡು ಬದುಕು ಚಿದ್ರವಾಗುತ್ತಿದೆ .ಽನ್ತೆಯೆ ದಿನನಿತ್ಯ ನೂರಾರು ಡೈವೋರ್ಸ್ ಕೇಸ್ ಗಳು ಕೋರ್ಟಿ ನ ಮೆಟ್ಟ ಲೆರುತ್ತಿವೆ ಸಮಷ್ಯೆ ಗಳ ಸುಳಿಯಲ್ಲಿ ಸಿಕ್ಕು ಹೊರಬರ ಲಾಗದೆ ,ನೊಂದು ಬೆಂದು ,ಜಿಗುಪ್ಸೆಗೊಂಡು ,ಅನ್ಯ ದಾರಿಕಾಣದೆ ..ಇನ್ನು ಹಲವು ಆತ್ಮಹತ್ಯೆ ದಾರಿ ತುಳಿಯುತ್ತಿವೆ ..
    ನಾವು ಕಲಿಯುತ್ತಿರುವ ಶಿಕ್ಷಣ ವ್ಯವಸ್ತೆ ಯ ದೋಷವೋ ,ನಮ್ಮ ಹಿರಿಯರು ನಮಗೆ ತೋರುತ್ತಿರುವ ಮಾರ್ಗದ ದೋಷವೋ ,ಅಥವಾ ಹಿರಿಯರನ್ನು ಅವರ ಚಿಂತನೆಗಳನು ಒಪ್ಪದ ನಮ್ಮ ಈ ಕಾಲದ ಸಾಮಾಜಿಕ ಸಂಘರ್ಷ ಗಳು ಕಾರಣವೋ ,ಒಟ್ಟಾರೆ ಸಧ್ಯ ಈ ಸಂಭಂಧಗಳ ಬಗ್ಗೆ ,ಅವು ತಂದೊದ್ದುತ್ತಿರುವ ,ಸಮಷ್ಯೇ ಸಂಘರ್ಷ ಗಳ ಬಗ್ಗೆ ಒಂದು ಅರ್ಥ ಪೂರ್ಣ ಚಿಂತನೆ ನಡೆಯಬೇಕಿದೆ ..ವಿವಾಹ ದ ಅರ್ಥ, ವ್ಯಾಪ್ತಿ, ಮತ್ತು ಅದರ ಮೇಲೆ ಹೇರಿರುವ ಬಂಧನಗಳು , ಎಲ್ಲವುಗಳ ಬಗ್ಗೆ,ಒಂದು ವಿಶಾಲ ಅರ್ಥದಲ್ಲಿ , ಘಮ್ಬೀರ ಚಿಂತನೆ ನಡೆಯಬೇಕಾದುದು ಇಂದಿನ ಸಾಮಾಜಿಕ ಅನಿವಾರ್ಯತೆ ಇದೆ .. ನಿಮ್ಮ ಬರಹ ಈ ನಿಟ್ಟಿನಲ್ಲಿ ಹೊಸ ಬೆಳಕನ್ನು ,ಚೆಲ್ಲಿದೆ ..ಸತ್ಯದ ಚಿತ್ರಣವನ್ನು ಅನಾವರಣ ಮಾಡಿದೆ .. ಮುಂದಿನ ಬರಹದ ನಿರೀಕ್ಷೆಯಲ್ಲಿ ….

  8. mmshaik

    uttama lekhan..hemalata.

  9. jamuna

    superb 🙂

  10. udayakumar habbu

    I am really shocked to read modern matrimonial maladjustment where a prospective bride is treated as commodity, where she is subjected to all sorts of examinations and tests. But it is mandatory to undergo medical tests before one gets married. It is not only for satiation of sex a boy and a girl are tied in a matrimonial alliance. It is for healthy progeny they are wed locked. At the same time mutual trust should be built on studying mutual traits and eccentricities. All success of married life depends on mutual adjustments mutual tolerance of each other’s follies and foibles, weakness and strengths. Mutual love, respect, understandings lead to happy married life. I remember an alliance broken because the bridegroom lied about his parents, lied about his earlier alliance which was broken, because his dad was an H I V positive.Engagement was suspended.But the bridegroom appeared to be well mannered, good and kind. But appearances are deceptive.In olden days marriages were decided by respective parents and misunderstandings were settled by them or they were advised to adjust as marriage is a sacred thing.The brides were advised to reconcile to their fate.Any way marriage is a necessary evil.

  11. hema

    Thanks for one and all who took time to reply , respond and appreciate.
    @udayakumar habbu:Many a times even I have felt the need for HIV test being made compulsory before marriage.
    But what shocks me is people’s expectation from the life partner and their attitude of insensitivity towards relationships.Attitude matters for everything and I am sure it will be struggle on the other counterpart to live in peace with such people.
    I agree with you otherwise

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading