ಸೂರಿ
ಎಲ್ಲೀವರೆಗೂ ತಡೆದು ಹಿಡಿಯಬಹುದು ಶಕ್ತಿಯನ್ನು.
ನನ್ನ ಗುಜರಾತೀ ಗೆಳೆಯ ಹೇಳಿದ ಒಂದು ಕತೆಯಿಂದ ಶುರುಮಾಡುತ್ತೇನೆ. ಇಂಥವನ್ನು ನಾನು ನಗರ ಜಾನಪದ ಕತೆಗಳೆಂದು ಕರೆಯುತ್ತೇನೆ.
ಒಬ್ಬ ಮಾರ್ವಾಡಿ. ದಿನಾ ಬೆಳಿಗ್ಗೆ ಕರಾರುವಕ್ಕಾಗಿ ಹತ್ತು ಗಂಟೆಗೆ, ತನ್ನ ಮನೆಯಿಂದ ಮೂರು ಒಂದೂವರೆ ಮೈಲು ದೂರವಿರುವ ತನ್ನ ಅಂಗಡಿಗೆ ಹೋಗುತ್ತಾನೆ. ಜೊತೆಯಲ್ಲಿ ತನ್ನ ಹೆಂಡತಿಯನ್ನೂ ಕರೆದುಕೊಂಡು ಹೋಗುತ್ತಾನೆ. ಆದರೆ ಇವರಿಬ್ಬರೂ ಒಟ್ಟಿಗೆ ಹೋಗಿದ್ದನ್ನು ಯಾರೂ ನೋಡಿಲ್ಲ. ವಾಡಿಕೆ ಏನೆಂದರೆ, ಗಂಡ ಮುಂದೆ ಮುಂದೆ ನಡೆಯುತ್ತಾನೆ. ಹೆಂಡತಿ ಒಂದು ಹತ್ತು ಹೆಜ್ಜೆ ಹಿಂದೆ ಹಿಂಬಾಲಿಸುತ್ತಾಳೆ. ಹತ್ತು ಹೆಜ್ಜೆ ಮುಂದೆ ನಡೆದ ಗಂಡ ಒಂದರೆ ಕ್ಷಣ ನಿಲ್ಲುತ್ತಾನೆ. ಕೆಲ ಕ್ಷಣಗಳ ನಂತರ, ಹಿಂದಿನಿಂದ ನಡೆದು ಅವನನ್ನು ತಲುಪಿದ ಹೆಂಡತಿ ಅವನ ಬೆನ್ನ ಹಿಂದೆ ನಿಂತು ‘ಹೂಂ’ ಅನ್ನುತ್ತಾಳೆ. ಗಂಡ ಮತ್ತೆ ಮುಂದೆ ನಡೆಯುತ್ತಾನೆ, ಹಿಂದೆ ನೋಡದೆ. ಮತ್ತೆ ಹತ್ತು ಹೆಜ್ಜೆ. ಮತ್ತೆ ಕಾಯುವ ಸರದಿ. ಮತ್ತೆ ಹೆಂಡತಿಯ ಹೂಂಕಾರ. ಮತ್ತೆ ಹತ್ತು ಹೆಜ್ಜೆ. ಹೀಗೆ ಸಾಗುತ್ತದೆ ಇವರಿಬ್ಬರ ಮೆರವಣಿಗೆ, ಅಂಗಡಿ ಮುಟ್ಟುವ ತನಕ.
ಒಂದು ಸಾರಿ ಏನಾಯ್ತಪಾ ಅಂದರೆ, ಹತ್ತು ಹೆಜ್ಜೆ ಮುಂದೆ ನಡೆದ ಗಂಡ, ಹೆಂಡತಿ ಹಿಂದೆ ಬಂದು ಹೂಂಕರಿಸುವುದನ್ನೇ ಕಾಯಬೇಕಲ್ಲ, ಕಾಯುತ್ತಾ ನಿಂತ. ವಾಡಿಕೆಯ ಸಮಯ ಮೀರಿತು. ಹೆಂಡತಿಯ ಹೂಂಕಾರ ಕೇಳಲಿಲ್ಲ. ಗಂಡ ಮತ್ತೂ ಕಾದ. ಹೆಂಡತಿಯ ಹೂಂಕಾರ ಬರಲಿಲ್ಲ. ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಗಂಡ ಹಿಂತಿರುಗಿ, ತಾನು ನಡೆದು ಬಂದ ದಾರಿಯ ಕಡೆಗೆ ನೋಡಿದ. ರಸ್ತೆ ತುಂಬಾ ಜನ. ರಸ್ತೆ ತುಂಬಾ ಮುಖಗಳು. ಇವರಲ್ಲಿ ತನ್ನ ಹೆಂಡತಿ ಯಾರು? ಇಷ್ಟು ಮುಖಗಳಲ್ಲಿ ತನ್ನ ಹೆಂಡತಿಯ ಮುಖ ಯಾವುದು? ಅವಳ ಮುಖವೇ ನೆನಪಿಗೆ ಬರುತ್ತಿಲ್ಲ. ಅವಳ ಮುಖದ ಪರಿಚಯವಿರಲಿಲ್ಲ. ಮನೆಯಲ್ಲೂ ಹೆಂಡತಿಯ ಮುಖ ನೋಡಿದ ನೆನಪಿಲ್ಲ. ಹೆಂಡತಿಯ ದನಿಯ ಪರಿಚಯವೂ ಇಲ್ಲ. ಕೇವಲ ಅವಳ ಹೂಂಕಾರ ಮಾತ್ರ ಗೊತ್ತು. ಮನೆಯಲ್ಲಿ ಆಕೆ ಒಂದು ನೆರಳು ಮಾತ್ರ. ಮನೆಯ ಆಕೆಗೆ ಒಂದು ರೂಪವಿಲ್ಲ, ಒಂದು ದನಿಯಿಲ್ಲ. ಪೋಲೀಸಿಗೆ ಹೋಗಿ ದೂರು ಕೊಟ್ಟರೆ ಏನಂತ ಕೊಡಬೇಕು? ಹೆಂಡತಿ ಹೇಗಿದ್ದಾಳೆ, ಅವಳ ಮುಖದ ಬಣ್ಣವೇನು, ಎಷ್ಟು ಎತ್ತರ ಇದಾಳೆ, ಇತ್ಯಾದಿ ಅಂತ ಪೋಲೀಸರು ಕೇಳಿದರೆ ಏನುತ್ತರ ಕೊಡಲಿ? ಹೋಗಲಿ ಅವಳ ಹೆಸರೇನು ಅಂತ ಕೇಳಿದರೆ ಏನು ಹೇಳಲಿ? ನಡು ರಸ್ತೆಯಲ್ಲಿ ನಿಂತ ಗಂಡ ದಳದಳ ಬೆವೆತ. ಹೆಂಡತಿ ಕಳೆದು ಹೋದದ್ದಕ್ಕಲ್ಲ, ಪೋಲೀಸರಿಗೆ ಏನುತ್ತರ ಕೊಡುವುದು ಎಂಬ ಗಾಬರಿಯಲ್ಲಿ. ಮುಂದೆ ಹೆಜ್ಜೆ ಹಾಕಲು ತಿರುಗಿದ, ಅವನ ಬೆನ್ನ ಹಿಂದೆ ಎಂದಿನ ಹೂಂಕಾರ ಕೇಳಿತು. ಗಂಡನ ಹಾಯೆಂದು ಉಸಿರಿಟ್ಟು ಮುಂದೆ ನಡೆದ. ಮತ್ತೆ ಹತ್ತು ಹೆಜ್ಜೆ, ಕಾಯುವ ಸರದಿ, ಹೆಂಡತಿ ಹೂಂಕಾರ. ಜೀವನ ಸಾಗುತಿತ್ತು. ಇಬ್ಬರೂ ಸುಖವಾಗಿ ಬಾಳಿ ಬೆಳಗಿದರು.
ಒಂದು ದೊಡ್ಡ ಮರ. ಅದರ ನೆರಳಿನಲ್ಲೇ ಒಂದು ಸಣ್ಣ ಸಸಿ. ಸೃಷ್ಟಿಯ ಸಕಲ ಜೀವಿಗಳಂತೆ ಈ ಪುಟ್ಟ ಸಸಿಗೂ ಬೆಳೆಯ ಬೇಕೆಂಬ ಆಸೆ. ಆದರೆ ಈ ದೊಡ್ಡ ಮರ ಅದಕ್ಕೆ ಅವಕಾಶ ಕೊಟ್ಟಿಲ್ಲ, ಕೊಡುತ್ತಿಲ್ಲ. ತನ್ನ ನೆರಳನ್ನು ಚಾಚಿ ಆ ಪುಟ್ಟ ಸಸಿಯನ್ನು ಒತ್ತಿಟ್ಟಿದೆ. ಪುಟ್ಟ ಸಸಿಗೆ ಗೊತ್ತು, ತಾನು ಬೆಳೆಯ ಬೇಕಾದರೆ ತನಗೆ ಸೂರ್ಯನ ಬೆಳಕು ಅಗತ್ಯವೆಂದು. ದೊಡ್ಡ ಗಿಡದ ಎಲೆಗಳ ಸಂದಿಗಳಿಂದ ಸೋಸಿ ಬರುವ ಸೂರ್ಯನ ಬೆಳಕನ್ನು ಇಷ್ಟಿಷ್ಟೇ ಕುಡಿದ ಪುಟ್ಟ ಸಸಿ ಬೆಳೆಯುತ್ತದೆ. ಬೆಳೆಯುತ್ತದೆ. ಬೆಳೆಯುತ್ತಾ ಬೆಳೆಯುತ್ತಾ ಒಂದು ದಿನ ದೊಡ್ಡ ಮರವನ್ನೂ ಮೀರಿ ಬೆಳೆದು ಸೂರ್ಯನತ್ತ ಮುಖ ಚಾಚಿ ಬದುಕುತ್ತದೆ.

ಶತಮಾನಗಳಷ್ಟು ಕಾಲ ಮನುಷ್ಯ ಯಾವುದೋ ಒಂದು ಅಂಗವನ್ನು ಉಪಯೋಗಿಸಿವುದನ್ನು ನಿಲ್ಲಿಸಿಬಿಟ್ಟ ಅಂತಿಟ್ಟುಕೊಳ್ಳಿ, ಒಂದು ಕಾಲ ಘಟ್ಟದಲ್ಲಿ ಹುಟ್ಟುವ ಮನುಷ್ಯನಿಗೆ ಆ ಅಂಗವೇ ಇರುವುದಿಲ್ಲ ಅಂತ ಕೇಳಿದ್ದೇನೆ. ಅಂದರೆ ಇವತ್ತಿನಿಂದ ನಾವು, ಅಂದರೆ ಇಡೀ ಮನುಷ್ಯ ಕುಲ, ನಮ್ಮ ಎಡಗೈಯನ್ನು ಉಪಯೋಗಿಸಿವುದು ನಿಲ್ಲಿಸಿದಲ್ಲಿ, ಅದೆಂದೋ ಮುಂದೆ ಹುಟ್ಟುವ ಮಕ್ಕಳಿಗೆ ಎಡಗೈಯೇ ಇರುವುದಿಲ್ಲವಂತೆ. (ಮನುಷ್ಯ ತನಗಿದ್ದ ಬಾಲವನ್ನು ಕಳೆದು ಕೊಂಡದ್ದೂ ಹೀಗೇ ತಾನೇ?) ಹೀಗೇ ಗಂಡಸು ಬುದ್ಧಿಯನ್ನು ಉಪಯೋಗಿಸುವುದನ್ನು ನಿಲ್ಲಿಸಿದಲ್ಲಿ ಮುಂದೊಂದು ತಲೆಮಾರಿನಲ್ಲಿ ಗಂಡೆಂಬ ಜೀವಿಗೆ ಬುದ್ಧಿಯೇ ಇರುವುದಿಲ್ಲವೇ?
ಇಷ್ಟೆಲ್ಲಾ ಯಾಕೆ ಹೇಳಿದೆನೆಂದರೆ, ರಂಗ ಶಂಕರದಲ್ಲಿ ಮೊನ್ನೆ ಒಂದಿಷ್ಟು ನಾಟಕದ ಗೆಳೆಯರ ಜೊತೆ ಮಾತನಾಡುತ್ತಿದ್ದೆ. ರಂಗ ಶಂಕರದ ಪ್ರೋಗ್ರಾಮಿಂಗ್ ವಿಭಾಗದಲ್ಲಿ ಒಂದು ಜಾಗ ಖಾಲಿಯಾಗಿದ್ದು ಅದಕ್ಕೆ ಹುಡುಗರನ್ನು ಆರಿಸಿಕೊಳ್ಳಬೇಕೋ, ಹುಡುಗಿಯನ್ನು ಆರಿಸಿಕೊಳ್ಳಬೇಕೋ ಎಂಬ ಮಾತಿಗೆ ಮಾತು ಬಂದು, ಕೊನೆಗದು, ಸೃಷ್ಟಿಯಲ್ಲಿ ಗಂಡಸು ಅನ್ನೋ ಜೀವದ ಕತೆ ಮುಗೀತಾ ಬಂತೇ? ಎನ್ನುವಲ್ಲಿಗೆ ಬಂದು ನಿಂತಿತು. ಇವತ್ತು, ಈಗಿನ ಪ್ರಪಂಚದಲ್ಲಿ ಹೆಣ್ಣು ಮಕ್ಕಳ ಐಕ್ಯೂ ಹೆಚ್ಚು. ಹೆಣ್ಣು ಹೆಚ್ಚು ಹೆಚ್ಚು ಬುದ್ಧಿವಂತಳಾಗುತ್ತಾ ನಡೆದಿದ್ದಾಳೆ. ಸಾಧಾರಣ ಐಕ್ಯೂ ಪರೀಕ್ಷೆಯಲ್ಲಿ ಗಂಡಸಿಂಗಿತಾ ಹೆಂಗಸು ಐದು ಹೆಚ್ಚಿಗೆ ಮಾರ್ಕ್ಸ್ ಗಳನ್ನು ಪಡೆಯುತ್ತಿದ್ದಾಳೆ.
2014ರ ಪೀಯೂಸಿ ಪರೀಕ್ಷೆಯ ಫಲಿತಾಂಶವನ್ನೇ ನೋಡಿ. ಶೇಖಡಾ 66ರಷ್ಟು ಹೆಣ್ಣು ಮಕ್ಕಳು ಪಾಸಾಗಿದ್ದಲ್ಲಿ, ಗಂಡು ಹುಡುಗರ ಸಂಖ್ಯೆ ಶೇಖಡಾ 55. (ಇದು ಪ್ರತಿ ವರ್ಷದ ಸಂಪ್ರದಾಯ) ಮತ್ತೊಂದು ದಾಖಲೆಯ ಪ್ರಕಾರ ಹೆಣ್ಣು ಮಕ್ಕಳ ಕಾರ್ಯಕ್ಷಮತೆ ಹೆಚ್ಚು, ಹಾಗಾಗಿ ಹೆಚ್ಚು ಹೆಚ್ಚು ಕಾರ್ಪೋರೇಟ್ ಕಂಪೆನಿಗಳು ಬಯಸುವುದು ಹೆಣ್ಣು ಮಕ್ಕಳನ್ನೇ. ಅಂದರೆ ಒಂದಂತೂ ಖಂಡಿತ. ಗಂಡಸೆಂಬ ಜೀವಿಯ ಬುದ್ಧಿಮತ್ತೆ ಮೆತ್ತಗಾಗುತ್ತಿದೆ. ಇದು ಯಾಕೆ ಹೀಗೆ. ಶತಮಾನಗಳಿಂದ ಹೆಣ್ಣನ್ನು ತುಳಿದಿಟ್ಟ ಚರಿತ್ರೆ ನಮ್ಮದು. ಜಗತ್ತಿನ, ಭಾರತದ ಅಷ್ಟೇಕೆ ಕರ್ನಾಟಕದ ಅನೇಕ ಮೂಲೆಗಳಲ್ಲಿ ಇದು ಇನ್ನೂ ನಡೆದಿದೆ. ನಮ್ಮ ಚರಿತ್ರೆ ತೋರಿಸಿರುವಂತೆ, ಅಥವಾ ನಮ್ಮ ಅಶ್ಲೀಲ ಜೋಕುಗಳು ಅಥವಾ ನಮ್ಮ ಅಶ್ಲೀಲ ವ್ಯಾಪಾರಿ ಸಿನೆಮಾಗಳು ತೋರಿಸಿರುವಂತೆ ಹೆಣ್ಣು ದಡ್ಡಿಯಲ್ಲ. ಶತಮಾನಗಳಿಂದ ಆಕೆಯ ಬುದ್ಧಿಯನ್ನು ತುಳಿಯಲಾಗಿದೆ. ಈ ಬುದ್ಧಿಗೆ ಚಿಗುರೇಳಲು ಒಂದು ಅವಕಾಶ ಬೇಕಿತ್ತು ಅಷ್ಟೇ.
ಹೆಣ್ಣಿನ ಈ ಸ್ಫೋಟ ದಿಢೀರ್ ಅಂತು ಅಲ್ಲವೇ ಅಲ್ಲ. ಇಷ್ಟಿಷ್ಟಾಗಿ ಅದು ಬೆಳೆದು, ಇಷ್ಟಿಷ್ಟಾಗಿ ಸವಾಲುಗಳನ್ನು ಸ್ವೀಕರಿಸಿ, ಇಷ್ಟಿಷ್ಟಾಗಿ ಬದುಕನ್ನು ಸ್ವೀಕರಿಸಿ ಈಗ, ಇಪ್ಪತ್ತೊಂದನೆಯ ಶತಮಾನದಲ್ಲಿ, ಗಂಡೆಂಬ ಜೀವಿಗಿಂತಾ ಬೆಳೆದು ನಿಂತಿದೆ ಅಥವಾ ನಿಲ್ಲುವ ಹಟ ತೊಟ್ಟಿದೆ. ಈಗ ಮೇಲೆ ಹೇಳಿದ ಕತೆಗಳಲ್ಲಿ ಒಂದು ಹೊಸ ಅರ್ಥ ಹೊಳೆಯಬಹುದು, ಅಲ್ಲವೇ?
ಉದಯವಾಣಿಯ ಸೂರಿ ಅಂಕಣ ‘ಅಂದಂದಿಗೆ ‘






very nice..liked it
konege ranga shankarakke hudugiyanne tegedukondira?
ಹೂಂ….
Houdu…
ಬರೀ ಹೆಣ್ಮಕ್ಳೇ ಕಾಮೆಂಟಿಸಿದ್ದಾರಲ್ಲ. ಮೇಲುಗಳಿಗೆ ಮೇಲೆನಿಸಲಿಲ್ಲವೇ.
yes,,, its a fact