ದೀಕ್ಷಿತಾ ಆಚಾರ್ಯ
ಹೆಣ್ಣು ಅಂದರೆ ಅಂದ ಹೆಣ್ಣು ಅಂದರೆ ಚಂದ ಹೊರಗಿಂದ ಮಾತ್ರವಲ್ಲ, ಮನದ ಒಳಗಿಂದಲೂ.. ಹೆಣ್ಣನ್ನು ಹೊಗಳಲು ಹೊರಟರೆ ಮೊದಲು ಎಲ್ಲರೂ ಸೌಂದರ್ಯವನ್ನೇ ಗಣಿಸಿದರೆ ಅದು ಕೇವಲ ಬಾಹ್ಯಕ್ಕಷ್ಟೇ.. ಹೌದು ಯಾಕಂದರೆ ನಮ್ಮ ನಿಮ್ಮ ಮನೆಯೊಳಗೆ ಇರುವ ಮಹಿಳೆ ಯಾವತ್ತೂ ತನ್ನ ಸೌಂದರ್ಯ ಹೊಗಳಲಿ ಎಂದು ಬಯಸುವುದಿಲ್ಲ ಕಾರಣ ಅವಳ ಸೌಂದರ್ಯ ಮುಖಕ್ಕಿಂತ ಹೆಚ್ಚು ಇರುವುದು ಮನಸಲ್ಲಿ. ಅಕ್ಕನಾಗಿ, ತಂಗಿಯಾಗಿ, ತಾಯಿಯಾಗಿ, ಸತಿಯಾಗಿ ಎಲ್ಲವನ್ನು ಎಲ್ಲರನ್ನೂ ಅಚ್ಚುಕಟ್ಟಲ್ಲಿ ನಿರ್ವಹಿಸುವ ಅವಳಿಗೆ ಬೇಕಾದುದು ಒಂದಷ್ಟು ಪ್ರೀತಿ ಒಂದಷ್ಟು ಕಾಳಜಿ.
ಪುಟ್ಟದೊಂದು ಹೆಣ್ಣು ಮಗು ಮನೆಯಲ್ಲಿದ್ದರೆ ಆ ಖುಷಿಯೇ ಬೇರೆ. ಅವಳ ಮಾತು, ಅವಳ ತುಂಟಾಟಿಕೆ, ಅವಳ ಉಡುಗೆ ಅಲಂಕಾರ ಎಲ್ಲವನ್ನೂ ತೊಟ್ಟು ನೋಡುವಾಗ ಅವಳೊಂದು ಹೂ ಮೊಗ್ಗಿನಂತೆ ಮತ್ತೆ ಬೆಳೆದು ಮೈ ನೆರೆದಾಗ ಅವಳು ಈಗ ತಾನೇ ಅರಳಲು ಹೊರಟಂತೆ ಮತ್ತೆ ಮೈ ತುಂಬಿ ಯೌವನಕ್ಕೆ ಬಂದಾಗ ಅರಳಿ ನಿಂತ ಎಲ್ಲರು ನೋಡುವ ಹೂವಂತೆ. ಇದಕ್ಕಿಂತಲೂ ಹೆಚ್ಚು ಅಂದ ಚಂದವಿರುವುದು ಅವಳ ಬೆಳೆಯುವ ಮನದಲ್ಲಿ ಮತ್ತು ಮನಸ್ಥಿತಿ ಗಳಲ್ಲಿ. ಪುಟ್ಟದಾಗಿರುವಾಗ ತಾನೇ ಈ ಮನೆಗೆ ರಾಣಿ ಎಂಬಂತೆ ಖುಷಿಯಲ್ಲಿ ಓಡಾಡುವ ಅವಳು ಮೆಲ್ಲಗೆ ಮೈ ನೆರೆಯುತ್ತ ನೋವುಗಳನ್ನು ಒಂದೊಂದಾಗಿ ಕಾಣುತ್ತ ಮತ್ತವನ್ನೆಲ್ಲ ಕುತೂಹಲದಿಂದ ಅರಿಯುತ್ತಾ ಅನುಭವಿಸುತ್ತ ಪಕ್ವವಾಗಿ ಬಿಡುತ್ತಾಳೆ.
ಇನ್ನು ಮದುವೆ ಅನ್ನೋ ಘಟ್ಟ ಬಂದಾಗ ಮನಸ್ಸು ಎಷ್ಟು ತೊಳಲಾಡುತ್ತದೆ ಅಂದರೆ ಅಲ್ಲೂ ಅವಳ ಮನಸ್ಸು ಒಂದೆಡೆ ಹೊಸ ಮನೆ ಸೇರುವ ಖುಷಿಯಲ್ಲಿದ್ದರೆ ಇನ್ನೊಂದೆಡೆ ತವರು ತೊರೆಯುವ ನೋವೇ ಜಾಸ್ತಿ. ಇನ್ನು ಸೊಸೆಯಾಗಿ ಸೇರಿದ ಮನೆಯಲ್ಲಿ ಸಂತೋಷದಲ್ಲಿ ಕಳೆಯುವ ಕೆಲವರಿದ್ದರೆ ಅವರಿವರ ನಡುವೆ ಹೇಳದೆ ಮನ್ಸಲ್ಲೇ ನೋವನ್ನು ಅನುಭವಿಸುವವರು ಹಲವು.
ಇದೆಲ್ಲ ಕಳೆದು ತಾಯಿ ಅನ್ನೋ ಪಟ್ಟ ಬಂದಾಗ ಆಕೆ ಈ ಮುಂಚೆಗಿಂತ ಪೂರ್ಣವಾಗಿ ಬದಲಾಗಿ ಬಿಡುತ್ತಾಳೆ. ಭಾನು ಭುವಿ ಒಂದಾಗುವಷ್ಟು ತೀವ್ರವಾದ ಹೆರಿಗೆ ನೋವಲ್ಲು ಅವಳ ಕಂದನ ಮುಂದೆ ಅದೆಲ್ಲವನ್ನೂ ಮರೆಯುವ ಶಕ್ತಿ ಹೆಣ್ಣಿಗೆ ಮಾತ್ರ ಇದೆ. ತಾಯಿಯಾದ ಮೇಲೆ ಅವಳನ್ನು ನಿಂದಿಸುವ ಮಾತು ಎಲ್ಲಿದೆ ಹೇಳಿ ಹಾಗೆಯೆ ವರ್ಣಿಸಲೂ ಮಾತುಗಳಿಲ್ಲ.
ಜೊತೆಗೆ ನಿಲ್ಲುವ ಭುಜವೊಂದಿದ್ದರೆ ಯಾವುದೇ ಕೆಲಸವನ್ನು ಆಕೆ ನಿಭಾಸಿಬಲ್ಲಳು, ಯಾರು ಇಲ್ಲದೆಯೂ ಸಶಕ್ತವಾಗಿ ಬದುಕಬಲ್ಲಳು. ಎಲ್ಲವನ್ನು ಎಲ್ಲರನ್ನೂ ಎದುರಿಸಬಲ್ಲಳು ಯಾಕಂದರೆ ಆಕೆ ಹೆಣ್ಣು. ಭುವಿಯಷ್ಟೇ ಪವಿತ್ರವಾದವಳು ಉಳಿಸುವವಳು ಪೊರೆಯುವವಳು ಬೆಳೆಸುವವಳು ತಂಪು ಉಣಿಸುವವಳು.. ಜೀವನದುದ್ದಕ್ಕೂ ನಾನಾ ರೀತಿಯಲ್ಲಿ ಬೆಳೆಯುವ ಅವಳು ಹೋಗು ಹೋಗುತ್ತಾ ಮನದಲ್ಲೇ ಬದಲಾಗುತ್ತಾ ಹೋಗುತ್ತಾಳೆ. ಮತ್ತೆ ಇದೆಲ್ಲವೂ ಚಂದ.
ಮತ್ತು ಜಿ.ಯಸ್ ಶಿವರುದ್ರಪ್ಪರವರ ಕವಿತೆಯಂತೆ
ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?
0 ಪ್ರತಿಕ್ರಿಯೆಗಳು