ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೂ..ಹೀಚು..ಮಿಡಿಯನ್ನೇ ಹರಿದು ಮುಕ್ಕುವ ಸೈತಾನರು

– ಡಾ ಎಸ್ ಬಿ ಜೋಗುರ

ಒಂದು ವಾರದಲ್ಲಿ ಹತ್ತಾರು ಕಡೆ ಇನ್ನೂ ಮೊಗ್ಗು.. ಹೀಚು.. ಮಿಡಿಯಂತಿರುವ ಎಳೆಯ ಬಾಲೆಯರನ್ನು ಅತ್ಯಾಚಾರಗೈದು ಹರಿದು ಮುಕ್ಕುವಂತೆ ವ್ಯವಹರಿಸುವ ಸೈತಾನರ ಮನ:ಸ್ಥಿತಿಯನ್ನು ನೋಡಿದರೆ ಮನುಷ್ಯನ ಬೆಳವಣಿಗೆಯ ತೀವ್ರತೆಯೊಂದಿಗೆಯೇ ಆತನ ಮನೋವಿಕೃತಿ ಕೂಡಾ ಕವಲೊಡೆಯತೊಡಗಿದೆ ಎನಿಸುತ್ತದೆ. ಕಾಮಕ್ಕೆ ಕಣ್ಣಿಲ್ಲ ಮಾತ್ರವಲ್ಲ, ಅದಕ್ಕೆ ಪ್ರಜ್ಞೆಯೂ ಇಲ್ಲ ಎನ್ನುವುದು ನಾಲ್ಕು..ಆರು ವರ್ಷದ ಹಸುಳೆಗಳ ಮೇಲೆ ನಡೆದ ಬಲತ್ಕಾರದ ಪ್ರಕರಣಗಳನ್ನು ಗಮನಿಸಿದಾಗ ಖಾತ್ರಿಯಾಗುತ್ತದೆ. ಸಾಲದೆಂಬಂತೆ ಈ ಅತ್ಯಾಚಾರದಲ್ಲೂ ಜಾತಿಯ ಸೆಡವು ಬೇರೆ. ಕೆಳ ಸ್ತರಗಳ ಬದುಕನ್ನು ಹಾಸುಂಡು ಎಸೆಯುವ ಬಾಳೆ ಎಲೆಯಷ್ಟೇ ನಿಕೃಷ್ಟವಾಗಿ ಪರಿಗಣಿಸುವ ಸಮೂಹಗಳು ಈಗಲೂ ನಮ್ಮ ನಡುವೆಯೇ ಬದುಕಿವೆ ಎನ್ನುವುದು ಇನ್ನೊಂದು ದೊಡ್ಡ ವಿಪಯರ್ಾಸ..! ನಮ್ಮ ಸಾಮಾಜಿಕ ವ್ಯವಸ್ಥೆ ಜಾತಿಯಾಧಾರಿತ ದೌರ್ಜನ್ಯಗಳನ್ನು ಚರಿತ್ರೆಯುದ್ದಕ್ಕೂ ಸಾಂಸ್ಕೃತಿಕ ಮುಖವಾಡದ ಹೆಸರಲ್ಲಿ ಸಂಪೋಷಿಸಿಕೊಂಡು ಬಂದಿರುವುದಿದೆ.
ಮರಾಠಾ ಪೇಶ್ವೆಯರ ಆಳ್ವಿಕೆಯಲ್ಲಿ ಪೂನಾ ನಗರದಲ್ಲಿ ಕೆಳಜಾತಿಗಳು ಊರೊಳಗೆ ಪ್ರವೇಶ ಮಾಡಬೇಕಿದ್ದರೆ ಬೆಳಿಗ್ಗೆ 9 ಗಂಟೆಯ ಒಳಗೆ ಮತ್ತು ಮಧ್ಯಾಹ್ನ 3 ಘಂಟೆಯ ನಂತರ ಅವಕಾಶವಿರಲಿಲ್ಲ. ಕಾರಣ ಅವರ ಶರೀರದ ನೆರಳು ಬೆಳಿಗ್ಗೆ ಮತ್ತು ಸಾಯಂಕಾಲ ಲಂಬ ರೂಪದಲ್ಲಿ ಬೀಳುವುದರಿಂದ ಅದು ಮೇಲಿನ ಜಾತಿಗಳಿಗೆ ಸೋಂಕಿದರೆ ಮೈಲಿಗೆಯಾಗುವದೆಂಬ ಖತರನಾಕ್ ನಂಬುಗೆಯನ್ನು ಪ್ರತಿಸ್ಠಾಪಿಸಲಾಗಿತ್ತು. ಹಾಗೆಯೇ ಕೇರಳದಲ್ಲಿ ಪುಲಿಯನ್ ಎನ್ನುವ ಕೆಳ ಜಾತಿಯ ವ್ಯಕ್ತಿ ಮೇಲಿನ ಜಾತಿಯವನೊಡನೆ ಮಾತನಾಡಬೇಕಿದ್ದರೆ 96 ಹೆಜ್ಜೆಗಳ ಅಂತರವನ್ನು ಕಾಯಬೇಕಿತ್ತು, ತಮಿಳುನಾಡಿನ ಶಾನಾರ್ ಎನ್ನುವ ಕೆಳಜಾತಿಯ ವ್ಯಕ್ತಿ ಮೇಲಿನ ಸ್ತರಗಳ ಜೊತೆಗೆ ವ್ಯವಹರಿಸುವಾಗ 24 ಹೆಜ್ಜೆಗಳ ಅಂತರದಲ್ಲಿರಬೇಕು. ಹೀಗೆ ಗೋಡೆೆಗಳನ್ನು, ಅಂತರಗಳನ್ನು, ಮೇಲು ಕೀಳುಗಳನ್ನು ಕಾಪಾಡಿಕೊಂಡು ಬರುವುದನ್ನೇ ಒಂದು ಪರಂಪರೆಯೆಂದು ಪಾಲಿಸಿಕೊಂಡು ಬಂದಿರುವದಿದೆ. ಇವತ್ತಿನವರೆಗೂ ಎಂಜಲೆಲೆಯ ಮೇಲಿನ ಉರುಳಾಟವೂ ಸಹ್ಯವೇ ಎಂದು ಪ್ರತಿಪಾದಿಸುವ ಪರಿಪಾಠ ಈ ಬಗೆಯ ಪರಂಪರೆಯ ಪಟ್ಟಿಯಿಂದ ಹೊರತಾಗಿಲ್ಲ.

ಈಚೆಗೆ ಉತ್ತರ ಪ್ರದೇಶದ ಬದೌಲಿ ಎನ್ನುವಲ್ಲಿ ಇಬ್ಬರು ದಲಿತ ಯುವತಿಯರನ್ನು ಅತ್ಯಾಚಾರಗೈದು ನೇಣು ಬಿಗಿದಿರುವ ಕ್ರಮ ಅತ್ಯಂತ ತುಚ್ಚವಾದುದು. ಕಷ್ಟವೋ.. ಸುಖವೋ ಬದುಕುವ ಹಕ್ಕು ಎಲ್ಲರಿಗೂ ಇದೆ. ಅವರ ಶರೀರದ ಮೇಲೆ ಬಲವಂತವಾಗಿ ಸವಾರಿ ಮಾಡುವ ಹಕ್ಕನ್ನು ಅನುಭವಿಸುವ ಜೊತೆಗೆ ಅವರ ಪ್ರಾಣವನ್ನೇ ನಿಗಟುವ ಸೈತಾನಿ ಗುಣಕ್ಕೆ ಆ ಭಂಡತನವನ್ನು ತಂದು ಕೊಟ್ಟವರಾರು..? ಮತ್ತದೇ ಜಾತಿಪದ್ಧತಿ. ಕೆಲ ಪತ್ರಿಕೆಗಳು ಈ ಬಗೆಯ ಘಟನೆಗೆ ಬಯಲು ಶೌಚಾಲಯದ ಸ್ಥಿತಿಯೇ ಕಾರಣ ಎಂದವು. ಆದರೆ ಆ ಬಗೆಯ ಅಸಹಾಯಕತೆಯನ್ನು ಹೀಗೆ ಹರಿದು ಮುಕ್ಕಲಿಕ್ಕಾಗಿಯೇ ಬಳಸಬೇಕು ಎಂದೇನಾದರೂ ಇದೆಯೇ..? ಬಿ.ಬಿ.ಸಿ. ಸುದ್ದಿ ಸಂಸ್ಥೆಯ ಎದುರಲ್ಲಿ ಬಿಹಾರ ಮೂಲದ ಒಬ್ಬ ಪೋಲಿಸ್ ಅಧಿಕಾರಿ ಹೇಳುವ ಹಾಗೆ ಈ ಬಯಲು ಶೌಚಾಲಯದ ಹಿನ್ನೆಲೆಯಲ್ಲಿಯೇ ಕಳೆದ ವರ್ಷ ಸುಮಾರು 400 ರಷ್ಟು ಲೈಂಗಿಕ ದೌರ್ಜನ್ಯದ ಪ್ರಕರಣಗಳು ಜರುಗಿರುವುದಿದೆ ಎಂದಿರುವದಿದೆ. ಇರಬಹುದು ಆದರೆ ಬಯಲು ಶೌಚಾಲಯದಂಥಾ ಅಸಹಾಯಕತೆಯನ್ನು ಹೀಗೆ ಲೈಂಗಿಕ ಶೋಷಣೆಗೆ ಬಳಸುವುದು ಎಷ್ಟು ಸರಿ..? ಕ್ಷಮಿಸಿ.. ಸೈತಾನರ ಮೆದುಳ ಮುಂದೆ ಯುಕ್ತಾಯುಕ್ತತೆಯ, ಸರಿ-ತಪ್ಪುಗಳ ಪ್ರಶ್ನೆ ಎಲ್ಲಿ ಬಂತು..?
ಈ ಬದೌಲಿ ಘಟನೆ ನಡೆದು ಎರಡು ದಿನಗಳೊಳಗಾಗಿ ಪಶ್ಚಿಮ ಬಂಗಾಲದ ಮಿದ್ನಾಪುರದ ರಾಧಾಕೃಷ್ಣಪುರ ಎಂಬ ಗ್ರಾಮದಲ್ಲಿ ಏಳು ವರ್ಷದ ಶಾಲಾ ಬಾಲಕಿಯೋರ್ವಳನ್ನು ಅತ್ಯಾಚಾರಗೈದು ಹಾಳುಬಾವಿಯಲ್ಲಿ ಎಸೆಯಲಾಗಿದೆ. ಸುದೈವಕ್ಕೆ ಆ ಬಾಲಕಿ ಅಸುನೀಗಿಲ್ಲ ಸಾಕಷ್ಟು ಗಾಯಗಳ ನಡುವೆಯೂ ಆಕೆ ಬದುಕಿ ಉಳಿದಿರುವುದೇ ಪವಾಡ..! ಕಳೆದ ಗುರುವಾರವಷ್ಟೇ 6 ನೇ ತರಗತಿಯಲ್ಲಿ ಓದುವ ಇನ್ನೋರ್ವ ಆದಿವಾಸಿ ಬಾಲಕಿಯನ್ನು ಮೂವರು ಅಪ್ರಾಪ್ತ ಬಾಲಕರು ಅತ್ಯಾಚಾರಗೈದಿರುವದಿದೆ. ಈ ಘಟನೆ ಕೂಡಾ ಪಶ್ಚಿಮ ಬಂಗಾಲದ ಚಂಬುರಾ ಎನ್ನುವ ಗ್ರಾಮದಲ್ಲಿ ಜರುಗಿದೆ. ಇಲ್ಲಿರುವ ಆದಿವಾಸಿಗಳ ಕಾಂಗರೂ ನ್ಯಾಯ ಪಂಚಾಯತಿಯಲ್ಲಿ ಇನ್ನೂ ಜಂಗಲ್ ಲಾ ಜಾರಿಯಲ್ಲಿದೆ. ಆರು ತಿಂಗಳ ಹಿಂದೆ ಇದೇ ಕಾಂಗರೂ ನ್ಯಾಯಪಂಚಾಯತಿ 20 ವರ್ಷದ ಓರ್ವ ಆದಿವಾಸಿ ಮಹಿಳೆಯನ್ನು ಗ್ಯಾಂಗ್ ರೇಪ್ ಮಾಡುವಂತೆ ಆದೇಶಿಸಿತ್ತು. ಈಗಲೂ ಈ ಕಾಂಗರೂ ಪಂಚಾಯತಿ 6 ನೇ ತರಗತಿಯಲ್ಲಿ ಓದುವ 14 ವರ್ಷದ ಬಾಲಕಿಯ ಅತ್ಯಾಚಾರದ ವಿಷಯವಾಗಿಯೂ ಅಂಥದೇ ಅಸಂಬದ್ಧವಾದ ತೀರ್ಪನ್ನು ನೀಡಿರುವದಿದೆ. ಆ ಮೂವರು ಅತ್ಯಾಚಾರ ಮಾಡಿರುವ ಹುಡುಗರು ಮೂರು ಮಡಿಕೆ ತುಂಬಾ ಆದಿವಾಸಿಗಳ ತಾಂಡಾದಲ್ಲಿ ತಯಾರಿಸಲಾಗುವ ಮದ್ಯವನ್ನು ತಂದು ಪಂಚಾಯತಿಗೆ ಒಪ್ಪಿಸಿದರೆ ಆಯ್ತು. ಬಾರಾ ಖೂನ್ ಪೂರಾ ಮಾಫé್..! ಅಷ್ಟು ಮಾತ್ರವಲ್ಲ ಹುಡುಗಿಯ ತಂದೆಯನ್ನು ಕರೆಯಿಸಿ ತಪ್ಪಿಯೂ ಯಾವುದೇ ಪೋಲಿಸ್ ಸ್ಟೇಷನ್ನಲ್ಲಿ ದೂರನ್ನು ದಾಖಲಿಸಬಾರದು ಹಾಗೆ ಒಂದೊಮ್ಮೆ ತಮ್ಮ ಮಾತು ಮೀರಿ ಕಂಪ್ಲೇಂಟ್ ಮಾಡಿದರೆ ಅವರ ಮನೆಗೆ ಬೆಂಕಿ ಹಚ್ಚುವದಾಗಿ ಹೆದರಿಸಿದರು. ಆ ಬಾಲಕಿಯ ತಂದೆ ಮಾತ್ರ ಇವರ ಧಮಕಿಗೆ ಹೆದರದೇ ಹತ್ತಿರದ ಪೋಲಿಸ್ ಸ್ಟೇಷನ್ನಿಗೆ ದೂರು ನೀಡಿದ. ಇದನ್ನು ತಿಳಿದದ್ದೇ ಪಂಚಾಯತದ ಎಲ್ಲ ಲೀಡರುಗಳು ಗಾಯಬ್ ಆಗಿರುವದಿದೆ.
ಇದಕ್ಕಿಂತಾ ಅಸಹ್ಯವಾದ ಇನ್ನೊಂದು ತೀರ್ಪನ್ನು ಇಂಥಾ ಜಂಗ್ಲೀ ಪಂಚಾಯತನ ಕಮಂಗಿ ಲೀಡರ್ ಗಳು ನೀಡಿರುವುದಿತ್ತು. ಕಳೆದ ಜನೆವರಿ ತಿಂಗಳಲ್ಲಿ 20 ವರ್ಷದ ಓರ್ವ ಆದಿವಾಸಿ ಯುವತಿ, ಆದಿವಾಸಿಯಲ್ಲದ ಒಬ್ಬನೊಂದಿಗೆ ಸಂಬಂಧ ಬೆಳೆಸಿದ ಕಾರಣ ಇದೇ ಜಂಗ್ಲೀ ಪಂಚಾಯತಿ ಆಕೆಯ ಮೇಲೆ 50 ಸಾವಿರ ರೂಪಾಯಿ ದಂಡವನ್ನು ವಿಧಿಸಿರುವದಿತ್ತು. ಆಕೆ ಆ ಮೊತ್ತವನ್ನು ಕೊಡಲು ವಿಫéಲಳಾದಾಗ ಆಕೆಯ ಮೇಲೆ 13 ಜನರು ಸಾಮೂಹಿಕ ಅತ್ಯಾಚಾರ ಮಾಡಿದರು. ಹೀಗೆ ಸಾಮೂಹಿಕ ಅತ್ಯಾಚಾರ ಘಟಿಸುವಲ್ಲಿ ಇದೇ ಜಂಗ್ಲೀ ಪಂಚಾಯತದ ಹಿರಿಯರ ಆಜ್ಞೆಯಾಗಿತ್ತು ಎನ್ನುವುದು ಇನ್ನೊಂದು ಅಚ್ಚರಿ ಈಗ ಅವರೆಲ್ಲರೂ ಕಂಬಿಯ ಹಿಂದಿರುವುದು ಸಮಾಧಾನದ ವಿಷಯವಾದರೂ ಮಮತಾ ಬ್ಯಾನಜರ್ಿಯಂಥಾ ದಿಟ್ಟ ಮಹಿಳೆ ಪಶ್ಚಿಮ ಬಂಗಾಲದ ಮುಖ್ಯ ಮಂತ್ರಿಯಾಗಿರುವಾಗಲೂ ಹೀಗೆ ನಿರಂತರವಾಗಿ ಮಹಿಳೆಯ ಮೇಲೆ ದೌರ್ಜನ್ಯಗಳು ಮಾತ್ರ ಜರುಗುತ್ತಿರುವುದು ವಿಶಾದನೀಯ. ಇದು ಕೇವಲ ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ದೆಹಲಿ, ಕರ್ನಾಟಕ, ತಮಿಳು ನಾಡು ಮಾತ್ರವಲ್ಲ ಇಡೀ ದೇಶದುದ್ದಕ್ಕೂ ಒಂದು ವ್ಯಾಪಕವಾದ ಪಿಡುಗಾಗಿ ಪರಿಣಮಿಸುತ್ತಿದೆ. ಕಾರಣ ನೈತಿಕ ಅಧ:ಪತನ. ಇಂದು ನೈತಿಕ ಭ್ರಷ್ಟಾಚಾರ ಹಿಂದೆಂದಿಗಿಂತಲೂ ಹೆಚ್ಚಾಗಿ ಕಾಣುತ್ತಿದೆ. ಯಾವುದೇ ಬಗೆಯ ಅಪವರ್ತನೆಗಳು ಕೂಡಾ ನಮ್ಮ ಯುವಜನಾಂಗಕ್ಕೆ ಅಪರಾಧಿ ಕೃತ್ಯಗಳಾಗಿ ತೋರುತ್ತಿಲ್ಲ.
ಮನೆಯಲ್ಲಿ ಪಾಲಕರಾಗಲೀ.. ಶಾಲೆಯಲ್ಲಿ ಶಿಕ್ಷಕರಾಗಲೀ.. ನೆರೆಹೊರೆಯಲ್ಲಿಯ ಹಿರಿಕರಾಗಲಿ ಬುದ್ದಿ ಮಾತನ್ನು ಹೇಳುವ ವಾತಾವರಣವೇ ಈಗ ಉಳಿದಿಲ್ಲ. ಹೈಸ್ಕೂಲ್ ಮೆಟ್ಟಿಲು ಏರುತ್ತಿರುವಂತೆಯೇ ಎಲ್ಲ ಬಗೆಯ ಅಪವರ್ತನೆಗಳ ಸಹವಾಸ ಆರಂಭವಾಗುತ್ತಿದೆ. ನಮ್ಮ ಆಧುನಿಕ ತಂತ್ರಜ್ಞಾನ ನಮಗೆ ವರವಾದ ಹಾಗೆಯೇ ಶಾಪವಾಗಿರುವುದೂ ಇದೆ. ಅವರ ಮೊಬೈಲಲ್ಲಿ ಬೆರಳ ತುದಿಯಲ್ಲಿಯೇ ನೀಲಿ ಚಿತ್ರಗಳು ಮನಬಂದಂತೆ ಕುಣಿದಾಡುವಂತಿರುವಾಗ ಅದನ್ನು ನೋಡುವ ಮನ:ಸ್ಥಿತಿ ನೆಟ್ಟಗೆ ಉಳಿಯುವದಾದರೂ ಹೇಗೆ..? ಆ ಉಪಕರಣಕ್ಕೆ ವಯಸ್ಸಿನ ಹಂಗಿಲ್ಲ ಇದ್ದದ್ದನ್ನು ಇದ್ದಂತೆಯೇ ತೋರುತ್ತದೆ. ಈ ಬಗೆಯ ಅತ್ಯಾಚಾರದ ಪ್ರಕರಣಗಳಲ್ಲಿ ದೆಹಲಿಯ ಘಟನೆಯಿಂದ ಹಿಡಿದು ಮೊನ್ನೆ ಪಶ್ಚಿಮಬಂಗಾಲದಲ್ಲಿ ಆದಿವಾಸಿ ಬಾಲಕಿಯ ಮೇಲೆ ಜರುಗಿದ ಅತ್ಯಾಚಾರದವರೆಗೂ ಅತ್ಯಂತ ವಿಕೃತ ತಾಂಡವವಾಡಿದವರೆಂದರೆ ಈ ಅಪ್ರಾಪ್ತ ಆರೋಪಿಗಳು ಎನ್ನುವ ಹೇಳಿಕೆಗಳು ಮಾಧ್ಯಮಗಳಲ್ಲಿ ಹೇರಳವಾಗಿದ್ದವು.
ಮೊನ್ನೆ ಉತ್ತರಪ್ರದೇಶದ ಪತ್ತೇಪುರ ಜಿಲ್ಲೆಯಲ್ಲಿ 5 ನೇ ತರಗತಿಯಲ್ಲಿ ಓದುತ್ತಿರುವ 12 ವರ್ಷದ ಬಾಲಕನೋರ್ವ ತನ್ನ ನೆರೆಮನೆಯ ತನ್ನದೇ ವಯಸ್ಸಿನ ಬಾಲಕಿಯನ್ನು ಕರೆದು ಟಾಫéಿ ಕೊಡುವುದಾಗಿ ಹೇಳಿ ಆಕೆಯ ಮೆಲೆ ಅತ್ಯಾಚಾರ ಎಸಗಿರುವುದಿದೆ. ಆ ಬಾಲಕಿಯ ತಂದೆ-ತಾಯಿ ಇಬ್ಬರೂ ಮನೆಯಲ್ಲಿಲ್ಲದ ಗಳಿಗೆಯನ್ನು ನೋಡಿ ಈ ಅಪ್ರಾಪ್ತ ಬಾಲಕ ಇಂಥಾ ಕೃತ್ಯವನ್ನು ಎಸಗಿರುವುದಿದೆ. ಆ ಬಾಲಕ ಈಗಿನ್ನೂ ಕೇವಲ 5 ನೇ ತರಗತಿ ಅದಾಗಲೇ ಅತ್ಯಾಚರದ ಪ್ರಕರಣ.. ನಮ್ಮ ಸಾಮಾಜಿಕ ಪರಿಸರ ಅದೆಷ್ಟು ಕಲುಷಿತವಾಗಿದೆ ಎನ್ನಲಿಕ್ಕೆ ಇಂಥಾ ಬೇಕಾದಷ್ಟು ಉದಾಹರಣೆಗಳು ದೊರೆಯುತ್ತವೆ.
ನಮ್ಮ ಮನೆಯ ಎದುರಲ್ಲಿ ಒಂದು ಶಾಲೆಯಿದೆ. ಅದು ಸೂಟಿಯಿರುವಾಗ ಅದರ ವರಾಂಡದಲ್ಲಿ ಕುಳಿತು ಇನ್ನೂ ಸರಿಯಾಗಿ ಮೀಸೆ ಮೂಡದ ನಾಲ್ಕೈದು ಪೋರರು ಹಾಯಾಗಿ ದಮ್ ಎಳೆಯುತ್ತಿರುತ್ತಾರೆ. ಕೆಲ ಬಾರಿ ಉಮೇದಿಗಾಗಿ ಸಿಳ್ಳೂ ಹೊಡೆಯುತ್ತಾರೆ ಆದರೆ ಯಾರೂ ಅವರಿಗೆ ಹೇಳುವ ಧೈರ್ಯ ಮಾಡಿಲ್ಲ. ನಾನು ಧೈರ್ಯ ಮಾಡಿಯೂ ಪ್ರಯೋಜನವಾಗಿಲ್ಲ. ನಮಗ್ಯಾಕೆ..? ಅನ್ನೋ ಮಾತು ಎಲ್ಲ ವಿಷಯಗಳಲ್ಲೂ ಒಳ್ಳೆಯ ಪರಿಣಾಮವನ್ನು ಕೊಡುವದಿಲ್ಲ. ಯುವಕರು ದಾರಿ ತಪ್ಪುವಾಗ ಹೇಳುವುದು ಸಮಾಜದಲ್ಲಿಯ ಪ್ರತಿಯೊಂದು ನಿಯೋಗಿಯ ಕರ್ತವ್ಯ. ಅಂದರೆ ಕುಟುಂಬ, ಶಾಲೆ, ನೆರೆಹೊರೆ, ಮಾಧ್ಯಮ ಹೀಗೆ ಪ್ರತಿಯೊಂದು ಘಟಕವೂ ಯುವಕರನ್ನು ತಿದ್ದುವ, ರೂಪಿಸುವ ದಿಶೆಯಲ್ಲಿ ಹೊಣೆಗಾರಿಕೆಯನ್ನು ಹೊರಬೇಕು. ನಮಗೆ ಪುರಸತ್ತೇ ಇಲ್ಲ ಎನ್ನುವ ಮಾತು ಭವಿಷ್ಯದಲ್ಲಿ ಅಪಾಯಕಾರಿ ಜನಾಂಗವನ್ನು ರೂಪಿಸುವ ಸಾಧ್ಯತೆಯಿದೆ. ಕೊನೆಯ ಪಕ್ಷ ನಮ್ಮ ನಮ್ಮ ಸಂತಾನವಾದರೂ ಸೈತನರಾಗದಿರಲಿ.

‍ಲೇಖಕರು G

9 June, 2014

1 Comment

  1. n.sujatha

    ಅತ್ಯಾಚಾರ ಎಂಬ ಪದ ಕೇಳಿದರೇನೆ ನೋವಾಗುತ್ತದೆ. ಯಾಕಿಷ್ಟು ಕ್ರೂರತೆ ತೋರುತ್ತಾನೆ ಮನುಷ್ಯ ಎನಿಸುತ್ತದೆ. ಮುಗ್ದ ಪುಟಾಣಿ ಹೆಣ್ಣು ಮಗುವಿನಿಂದ ಹಿಡಿದು ವಯಸ್ಸಾದವರನ್ನು ಬಿಡದೆ ಕಾಡುವ ಇಂಥ ಕ್ರೂರಿಗಳಿಗೆ ಯಾವ ಶಿಕ್ಷೆ ಕೊಟ್ಟರು ಸಾಲದು.. ಉತ್ತಮ ಲೇಖನ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading