ಮಜ್ಜಿಗೆ ಮಹಿಮೆ

ಸುಧಾಕರ ಜೈನ್ ಹೊಸಬೆಟ್ಟು ಗುತ್ತು
ಹುಳಿ ಇದ್ದೂ ಬಿಳಿ ಯಾರಿದ್ದಾರೆ ಎಂದು ಕೇಳಿದರೆ ಇಡೀ ಜಗತ್ತಿಗೆ ಜಗತ್ತೇ ಮಜ್ಜಿಗೆ ಎಂದು ನನ್ನ ಹೆಸರನ್ನು ಉಚ್ಛರಿಸುತ್ತದೆ. ನನ್ನ ಆಯುಷ್ಯ ಹೆಚ್ಚುತ್ತಾ ಹೋದಂತೆ ನನ್ನೊಳಗಿನ ಹುಳಿ ಹೆಚ್ಚಾಗುತ್ತಾ ಹೋಗುತ್ತದೆ. ಹಿಂದಿನ ಜನ್ಮದಲ್ಲಿ ನಾನು ಹಾಲಾಗಿದ್ದೆ. ಈಗ ಮಜ್ಜಿಗೆಯಾಗಿದ್ದೇನೆ. ಆದರೆ ಈ ಮಜ್ಜಿಗೆಯಾಗುವುದಕ್ಕಿಂತ ಮೊದಲ ಯೌವನದ ಪ್ರಾಯದಲ್ಲಿ ನಾನು ಗಟ್ಟಿ ಮೊಸರಾಗಿದ್ದೆ.
ಶ್ರೀ ಕೃಷ್ಣನ ಕೈಯ ಕಡೆಗೋಲಿನೊಡೆನೆ ಮದುವೆಯಾಯ್ತು. ಕಡೆಗೋಲಿಗೆ ನನ್ನನ್ನು ನಾನು ಸಂಪೂರ್ಣವಾಗಿ ಒಪ್ಪಿಸಿಕೊಂಡು ಪ್ರೀತಿಯ ಮಥನಕ್ಕೊಳಗಾದೆ. ಕಡೆಗೋಲಿನೊಡನೆ ಸುದೀರ್ಘವಾದ ದಾಂಪತ್ಯದ ಫಲವಾಗಿ ಒಂದು ಗಂಡು ಮಗುವೂ ಆಯ್ತು. ಭಾರವಿದ್ದರೂ ಯಾವುದರಲ್ಲೂ ಮುಳಗದೆ ಇರುವ, ಗಟ್ಟಿ ಇದ್ದರೂ ಕಾಠಿಣ್ಯ ಇಲ್ಲದೆ ಮೃದುವಾಗಿರುವ ಆತನಿಗೆ ಬೆಣ್ಣೆ ಎಂದು ಹೆಸರಿಟ್ಟೆ.
ಬದುಕು ಮಾಗಬೇಕು ಎಂಬ ಉದ್ದೇಶದಿಂದ ಮಗನ ಯೌವನದಲ್ಲೇ ಅಗ್ನಿ ಸಂಸ್ಕಾರ ಮಾಡಿಸಿದ ಫಲವಾಗಿ ಇಂದು ಸದೃಡ ತುಪ್ಪವಾಗಿದ್ದಾನೆ. ಮೊಸರಾಗಿದ್ದ ನಾನು ಕಡೆಗೋಲಿನ ಮಥನದಿಂದಾಗಿ ಮಜ್ಜಿಗೆಯಾದೆ.
ನೂರು ಯಾಗ ಮಾಡಿ ಸ್ವರ್ಗವನ್ನೇರುವಂತಹ ಸಮಯ ವ್ಯರ್ಥದ ಸಾಹಸ ಮಾಡಲು ಹೋಗಲೇ ಇಲ್ಲ. ಅದಕ್ಕೆ ಬದಲಾಗಿ ನಾನು ಎಲ್ಲಿ ಇರುತ್ತೇನೋ ಅಲ್ಲೇ ಸ್ವರ್ಗ ನಿರ್ಮಾಣ ಮಾಡಿದೆ. ಯಾರ ಗಂಟಲಿಗಿಳಿಯುತ್ತೇನೋ ಅವರಿಗೆ ಸ್ವರ್ಗಾನುಭವವನ್ನು ಕೊಡುತ್ತಾ ಭೂ ಲೋಕದಲ್ಲಿ ಮೆರೆಯುತ್ತಿದ್ದೇನೆ.
ಸ್ವರ್ಗದ ಅಧಿಪತಿಯಾದಂತಹ ದೇವೆಂದ್ರನೇ ಒಂದು ಒಪ್ಪಂದವನ್ನು ಮಾಡಿಕೊಂಡಿದ್ದಾನೆ. ಯಾವಾಗಲಾದರೂ ಮಜ್ಜಿಗೆಯನ್ನು ಕುಡಿಯಬೇಕೆಂದಾದಾಗ ನೇರವಾಗಿ ಧರೆಗಿಳಿದು ಬರುತ್ತೇನೆ, ದಯಪಾಲಿಸ ಬೇಕೆಂದು ಕೇಳಿಕೊಂಡಿದ್ದಾನೆ.
ಹೀಗೆಲ್ಲಾ ನನ್ನ ಮಹಿಮೆಯನ್ನರಿತ ಬೆಳ್ಳುಳ್ಳಿ, ಇಂಗು, ಶೂಂಟಿ, ಲವಣಾದಿಗಳು ನನ್ನ ಸಖ್ಯವನ್ನು ಭಯಸಿ ಸಂದರ್ಭಕ್ಕನುಸಾರವಾಗಿ ನನ್ನೊಡನೆ ಐಕ್ಯವಾಗುತ್ತಾರೆ. ಹೀಗೆ ಲೋಕದಲ್ಲಿ ಯಾರೆಲ್ಲಾ ಮಜ್ಜಿಗೆಯನ್ನು ಪ್ರೀತಿಸಿ ಸೇವಿಸಿಕೊಂಡು ಬರುತ್ತಾರೋ ಅವರನ್ನೆಲ್ಲಾ ಪೊರೆಯುತ್ತಾ ಬಂದಿದ್ದೇನೆ. ಯಾರದು ನನ್ನನ್ನು ಭೇಟಿಯಾಗುದಕ್ಕೆ ಬಂದಿದ್ದಾರಂತಲ್ಲ. ಬರಲಿ ಆಸ್ಥಾನಕ್ಕೆ.





” ಹೀಗೆ ಲೋಕದಲ್ಲಿ ಯಾರೆಲ್ಲಾ ಮಜ್ಜಿಗೆಯನ್ನು ಪ್ರೀತಿಸಿ ಸೇವಿಸಿಕೊಂಡು ಬರುತ್ತಾರೋ ಅವರನ್ನೆಲ್ಲಾ ಪೊರೆಯುತ್ತಾ ಬಂದಿದ್ದೇನೆ. ”
ಫ್ರೀತಿಸಿ ಸೇವಿಸಬಂದವರನ್ನೆಲ್ಲ ಪೊರೆಯುವ ಗುಣ ಭೂಲೋಕದಲ್ಲಿ ಹೀಗೆ ಕುಹಕಗಳಿಲ್ಲದೇ ಸಾಧ್ಯವಾಗಿದ್ದರೆ ಸ್ವರ್ಗ ಇನ್ನೊಂದು ಯಾಕಿರುತ್ತಿತ್ತು??
beautiful write up
ಒಂದಕ್ಕೊಂದು ಕೊಂಡಿ ಸೂಪರ್ ಆಗಿದೆ.☺