ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹುಡ್ಗೀರು ತಮ್ಮ ನಲ್ಮೆಯ ಹುಂಬಂಗೆ ಕೆಜಿಗಟ್ಟಲೆ ಬಣ್ಣ ಕೊಡಿಸ್ತಾರ

ಶಿವು ಮೋರಿಗೇರಿ

ಅದ್ಯಾಕೋ ಏನೋ ಧಿಡೀರನೆ ನಾಳೆ ಬಣ್ಣ ಆಡ್ತಾರಲ್ಲಾ ! ಅಂತ ನೆನಪಾಗಿಬಿಡ್ತು. ಈ ಬೆಂಗ್ಳುರಾಗ ಮಲ್ಟಿ ನ್ಯಾಷನಲ್ ಸಿಸ್ಟಮ್ ನೊಳಗ ಬಣ್ಣ ಆಡ್ತಾರ ಅನ್ನೋದೇನೂ ನನಿಗ್ಯ ಗೊತ್ತೈತಿ, ಹಂಗಂತ ನಮ್ಮೂರಗ ಹೆಂಗ ಹೋಳಿಹಬ್ಬನ ಮಾಡ್ತೀವಿ ಅಂತ ನಿಮಿಗೆ ಹೇಳಬೇಕು ಅನ್ನಿಸಿದ್ದಕ್ಕೂ ನಮ್ಮೂರಿನ ಕೆಲವು ನೆನಪುಗಳನ್ನ ಮತ್ತೆ ಮೆಲುಕು ಹಾಕೋಕು ಇದೊಂದು ನೆವ ಅಷ್ಟ. ಖರೇವಂದ್ರೂ ನಂ ಕಡಿಗೆ ಶಿವರಾತ್ರಿ ಅಮವಾಸಿ ಕಳದ ಎರಡ ದಿನ ಆತಪಾ ಅಂದ್ರ ಸಾಕು ಅಲ್ಲಿಂದನಾ ಹೋಳಿ ಹುಣಿವಿ ಆಚರಣಿ ಹೆಂಗ ನಡಿತೈತಿ ಅಂದ್ರ, ನಮ್ಮೂರಾಗಿದ್ದೂ ಈ ಹಬ್ಬಾನ ಆಚರಿಸಲಿಲ್ಲಾಂದ್ರ ಔನಾ ದೊಡ್ಡ ಪಾಪಿ ನಮ್ಮ ಲೆಕ್ಕದಾಗ.

ಹೇಳಬೇಕಪಾ ಅಂದ್ರ ಇವತ್ತಿಲಿಂದ ಹೋಳಿ ಹುಣಿವಿ ಚಾಲೂ ಆತು ಅಂತ ಗೊತ್ತಾದ ದಿನ, ಸಂಜಿಮುಂದ ಏಳುವರಿ ಎಂಟು ಗಂಟಿಗೆ ನಮ್ಮೋಣಿಯ ಬೈಲಾಗ ಸಾಲಿ ಹುಡ್ರೆಲ್ಲಾ ಸೇರಿಕಂಡು ಲಬ್ ಲಬೋ, ಲಬ್ ಲಬೋ ಅಂತ ಬಾಯಿ ಬಾಯಿ ಬಡಕಂಡು ಹೊಯ್ಕೋಳ್ಳಾಕ ಚಾಲೂ ಮಾಡ್ತಾರ. ಮೊದ್ಲು ಔರೋರ ಒಳಗಾ ಇದ್ದ ತಮ್ಮ ಪ್ರೆಂಡ್ಸ್ ಹೆಸರೇಳಿ ‘ಈಗಿನ್ನ ಇದ್ದೆಲ್ಲೋ, ನೆಗದುಬಿದ್ದು ಹೋದೆಲ್ಲೋ’ ಅಂತ ಹೊಯ್ಕಣಾಕ ನಿಂತೋರು, ಹಂಗಾ ದಾರಿಯೊಳಗ ಯಾರಾದ್ರೂ ಹೋಗೋ ಬರೋರನ್ನ ನೋಡಿದ ಕೂಡ್ಲೆ ಅವರ ಹೆಸರೇಳಿ ಹೊಯ್ಕೋತಾರೆ. ಇಲ್ಲಿಂದ ಒಂದೆರೆಡು ದಿನ ಇನ್ನೂ ಯುವಕರ ಪಾಳ್ಯ ಯಾವ ಅನಾಹುತಕ್ಕೂ ಕೈ ಹಾಕಿರಲ್ಲ.

ಆದ್ರ ಯಾವಾಗ ಸಂಜಿಮುಂದ ನಮ್ಮ ಹುಡ್ರೆಲ್ಲಾ ಹದಿನೈದು ಇಪ್ಪತ್ತು ಜನ ಸೇರಿದ ಹೊತ್ತಿನಾಗ ಕರೆಂಟು ಹೋಗಿತ್ತು ಅಂದ್ರ, ಅಲ್ಲಿಂದ ನಡಸ್ತೀವಿ ಅಸಲಿ ಹೋಳಿ ಹುಣಿವಿ ಕಾರ್ ಬಾರು. ಮೊದಲು ಎಲ್ಲಾ ಹುಡ್ರು ಸೇರ್ಕಂಡು ಕತ್ತಿ ಹಿಡಿಯೋ ಕಾರ್ಯಕ್ರಮ ಹಮ್ಮಿಕೋತೀವಿ. ನಮ್ಮೂರಾಂಬೂರಾ ಬೆದಕಿದರೂ ಸನೇಕ ಎಂಟು ಕತ್ತಿಗುಳಿಲ್ಲ, ಅವುನ್ನ ಹುಡುಕಾಕ ನಮ್ಮಂಥಾ ಹರೇದ ಕತ್ತಿಗುಳೆಲ್ಲಾ ನಿಂತಿರ್ತೀವಿ. ಎಂಟತ್ತು ಮಂದೀದು ಒಂದು ಗುಂಪು ಮಾಡಿಕೊಂಡು, ಎಲ್ಲಾದ್ರೂ ಕತ್ತಿ ಕಣ್ಣಿಗೆ ಕಾಣ್ತು ಅಂದ್ರ ರೌಂಡಾಗಿ ಹೋಗಿ ಕಬ್ಬಡ್ಡಿಯೊಳಗ ಕೈ ಹಾಕಿ ಬಲಿ ತಗೋತೀವಲ್ಲಾ, ಥೇಟ್ ಹಂಗಾ ಎಲ್ಲಾರೂ ಸುತ್ತು ನಿಂತು ಹೋಗಿ ಕತ್ತಿನ ಹಿಡದುಬಿಡ್ತೀವಿ. ಈ ಟೈಮಿನಾಗ ಕತ್ತಿಗುಳೂ ಯಾಕಾ ನಮಿಗಿನ್ನ ಬಾಳ ಹುಷಾರಿ ಇರ್ತಾವು ಅನ್ನಿಸ್ತೈತಿ. ಯಾವಾಗ ಎಂಟತ್ತು ಹುಡ್ರು ಗುಂಪು ನೋಡಿದ ಕೂಡ್ಲೆ ಕತ್ತಿಗುಳು, ಕೊರ್ರೋ ಮರ್ರೋ ಅಂತ ಓಡಿ ಬಿಡ್ತಾವೆ. ಅಷ್ಟೆಲ್ಲಾ ಹುಷಾರಿ ಇದ್ರೂ ಒಮ್ಮೊಮ್ಮಿ ಮರಮಸಿಲೆ ಹೋಗಿ ಕತ್ತಿನ ಹಿಡಿದ ಕೂಡ್ಲೆ ಹುಲಿ ಹಿಡಿದೋರಂಗ ಎಲ್ಲಾ ಹುಡ್ರೂ ಆ ಕತ್ತಿ ಮ್ಯಾಲ ಮುಗಿಬಿದ್ದುಬಿಡ್ತೀವಿ. ಅದೇನಾದ್ರೂ ಕೊಸರಾಡ್ತೋ, ನಮ್ಮ ಗುಂಪಿನಾಗ ಇದ್ದ ಯಾವನದೋ ಒಬ್ಬನದು ಲುಂಗೀನ ಗಪ್ಪನೆ ಎಳಕೊಂಡು ಕತ್ತಿಯ ಕೊಳ್ಳಿಗೆ ಹಗ್ಗದ ಹಾಂಗ ಹಾಕಿ ಬಿಗಿ ಹಿಡಿದುಬಿಡ್ತೀವಿ.

ಈಗ ಕತ್ತೇನು ಸುಮ್ಮನ ನಿಂದ್ರತೈತಿ, ಸಮಸ್ಯೇನಂದ್ರ, ‘ಲೇ ಕತ್ತಿ ಕಟ್ಟಾಕ ನನ್ನ ಲುಂಗೀನ ಬೇಕಿತ್ತೇನ್ಲೆ ಹಲ್ಕಟ್ಟ ಸೂ..ಮಗ್ನ’ ಅಂತ ನಮ್ಮದಾ ಹುಡ್ಗ ನಮ್ಮಪ್ಪೋಜಿಟ್ಟಾ ನಿಂತುಬುಡ್ತಾನ. ಸಮಸ್ಯೆ ಇಷ್ಟಾ ಆದ್ರ ‘ಯಾಕ ಬೈಕ್ಯ ಹೊಗಲೇ’ ಅಂತಂದು ಸುಮ್ಮನಾಗಿಬುಡಬೌದು. ಆದ್ರ ಬರೀ ಚಡ್ಡೀಲಿ ಬೈತಿದ್ದ ಔನು ತನ್ನ ಮಗ್ಗುಲು ಇದ್ದೋನ ಲುಂಗಿ ಬಿಚ್ಚಿಬಿಡ್ತಾನೆ., ಔನು ಇನ್ನೊಬ್ಬನ ಲುಂಗಿ ಎಳಿಯೋದು,ಇದು ಹೀಂಗಾ ಮುಂದುವರಿತಿರಬೇಕಾದ್ರ, ಕತ್ತಿ ಹಿಡಕೊಂಡೋನು ಯಾರಾನ್ನ ಒಬ್ನು, ‘ಲೇ  ನೀವಿಂಗಾ ಹೊಡದಾಡ್ಕಂತ ನಿಂತ್ರ ಕತ್ತಿ ತಪ್ಪಿಸಿಕೊಂಡು ಹೊಕೈತ್ರಲೇ’ ಅಂತ ಜೋರಾಗಿ ಕೂಗಿದ ಕೂಡ್ಲ, ಎಲ್ಲಾರೂ ತಮ್ಮ ಕೈಗೆ ಯಾರ ಲುಂಗಿ ಸಿಗುತ್ತೋ ಅದನ್ನಾ ಸುತ್ತಿಕೊಂಡು ಹಾಳು ಹೊಲದ ಕಡಿಗೆ ಕತ್ತಿನ ಹೊಡ್ಕೊಂಡು ಹೋಗಿ ಎಲ್ಲಾರು ಒಂದೊಂದು ರೌಂಡ್ ಜರ್ನಿ ಮಾಡ್ತೀವಿ. ಗುಂಪಿನಾಗ ಇರೋ ಎಲ್ಲರ ಮೆರವಣಿಗಿ ಮುಗಿಯೊಷ್ಟತ್ತಿಗೆ ಕತ್ತಿ ಮೆತ್ತಗಾಗಿರತೈತಿ. ‘ಲೇ ಕತ್ತಿ ಸತ್ತುಗಿತ್ತೀತು ಹೋಗ್ಲಿ ಬಿಡ್ರಲೇ’ ಅಂತೇಳಿ ಎಲ್ಲರೂ ಅಲ್ಲಿಂದ ಕತ್ತಿನ ಕೈ ಬಿಟ್ರ ಅದುವರಿಗೂ ಎಲ್ಲರನ್ನೂ ಹೊತ್ಕಂಡು ತಿರುಗಾಡಿದ ಕತ್ತಿ ಸುಮ್ಮನ ನಿಂತಿರತೈತಿ. ಇದನ್ನ ನೋಡಿದಾಗ ಮಾತ್ರ ಜೀವ ಚುರ್ ಅಂತೈತಿ. ನಮ್ಮೂರಾಗ ಹಿಂಗ ನಡಿತೈತಂತಾನಾ, ಹೋಳಿ ಹುಣಿವಿ ಚಾಲೂ ಆಗ್ತಿದ್ದಂಗನಾ ನಮ್ಮೂರಿನ ಒಡ್ರು ತಮ್ಮ ಕತ್ತಿಗಳನ್ನ ಮನಿಮುಂದೇನಾ ಕಟ್ಟಿಕೋತಿದ್ರು. ಅದ್ರಾಗೂ ಅದಾ ಮನಿ ಹುಡ್ರನ್ನಾ ನಮ್ಮ ಗುಂಪಿಗೆ ಸೇರಿಸ್ಕಂಡು ಗೂಟಕ್ಕೆ ಕಟ್ಟಿರೋ ಕತ್ತೀನಾ ಕಳವೀಲೆ ಬಿಚ್ಚಿಸೋ ಡೀಲೂ ನಡಿಸಿಬಿಡತಿದ್ವಿ. ಅವಾಗೆಲ್ಲಾ ನಮ್ಮನ್ನ ಎಷ್ಟು ಬೈತಾರೆ ಅಂದ್ರ, ಅದನ್ನ ಯಾರಿಗೂ ಹೇಳಬಾರ್ದು ಬಿಡ್ರಿ.

ಹಿಂಗ ಚಾಲೂ ಆಗಿರೋ ಹೋಳಿ ಹುಣುವಿ ಮೂರು ನಾಕುದಿನ ಹಿಂಗಾ ಸಾಗುತಿರತೈತಿ, ಆಮ್ಯಾಲ ಇದ್ದಕ್ಕಿದ್ದಂಗನಾ ಇಡೀ ಊರಾಗಿನ ಯುವಕರೆಲ್ಲಾ ಔರೋರ ಓಣ್ಯಾಗ ಮೀಟಿಂಗ್ ಮಾಡ್ಕಂಡು ತಪ್ಪು ಮಾಡಾಕ ಹೊತ್ತು ಕಾಯ್ತಾ ಇರ್ತೀವಿ, ಅದ್ರಾಗ ಒಂದು ದಿನ, ನಮ್ಮೇರಿಯಾದ ಕಣಗಳ ಸಾಲಿಗೆ ಹೋಗಿ ಒಂದೂ ಕಣಾನೂ ಬಿಡದಂಗಾ ಎಲ್ಲಾ ಕಣಗುಳ ಕಂಡಿ (ಮುಳ್ಳ ಬಾಗಿಲು ಅಥವಾ ಗೇಟ್ ಗಳು)ಗಳನ್ನ ಸರಹೊತ್ತಿನಾಗ ಹೊತ್ಕೊಂಡು ಬಂದು ಊರಾಚೆ ಗ್ರಾಮ ಪಂಚಾಯ್ತಿಯೋರು ಕಟ್ಟಿಸಿರೋ ಹೆಣ್ಮಕ್ಳ ಪೈಕಾನಿಗೆ ಹಂದ್ರ ಹಾಕಿದಂಗ್ಹ ಒಂದರ ಮ್ಯಾಲೊಂದು ಇಟ್ಟು ಬಂದಿರತೀವಿ. ತಿರುಗು ಮುಂಜಾಲೆ ನಮ್ಮೋಣಿ ಜನಾ ಔರೋರ ಕಣಗುಳಿಗೆ ಹೋಗಿ ಕಂಡಿಗಳು ಇಲ್ಲದ್ದ ನೋಡಿ  ‘ಯಾವನಾ ಬೋ..ಮಕ್ಳು, ಸೂ,,,ಮಕ್ಳು, ಇನ್ನೂ ಏನೇನೋ ಬೈಕೋತ ಕಣಗಳ ಸಾಲಿನ ಎಲ್ಲಾ ಕಡಿನೂ ಹುಡ್ಕಿ ಕೊನಿಗೆ ಅವು ಸಿಕ್ಕ ಮ್ಯಾಗ ಕಂಡಿ ಕಳ್ಕೊಂಡಿರೋರೆಲ್ಲಾ ಸೇರಿ ಹೆಣ್ಮಕ್ಕಳ ಪೈಕಾನಿಯ ಹಂದ್ರಾನ ಕೆಳಗಿಳಿಸ್ಕಂತಾರ. ಆಗ್ಲೂ ಅಲ್ಲಿದ್ದೋರು ಬೈಯ್ಯೋದನ್ನ ಕೇಳಾಗ ಎಲ್ಡು ಕಿವಿ ಎದ್ದುಕ್ಕೂ ಆಗಲ್ಲಬಿಡ್ರಿ. ವಿಚಿತ್ರ ಅಂದ್ರ ಆ ಗುಂಪಿನಾಗ ನಾವೂ ನಿಂತಿರತೀವಿ. ಯಾವ ಮನಷ್ಯ ನಮ್ಮನ್ನ ಬಾಳಾ ಬೈತಾನೋ ಅವತ್ತು ರಾತ್ರಿ ಔರ ಮನಿಗೆ ಒಂದಾದ್ರೂ ತೊಂದ್ರಿ ಕೊಡ್ತೀವಿ ಇದು ಕಟ್ಟಿಟ್ಟ ಬುತ್ತಿ. ಇಂಥಾ ವಿಚಾರ ನಮ್ಮ ಯಜಮಾನ್ರುಗಳಿಗೂ ಗೊತ್ತಿರತೈತಿ ಹಂಗಾಗಿ ಬೈಯೋವಾಗ ಹುಡ್ರಿದ್ದರೆ, ‘ಲೇ ಹುಡ್ರಾ, ಇಂಥಾವೆಲ್ಲಾ ಬುಟ್ಟು ಬ್ಯಾರೆ ಏನರಾ ಹೋಳಿ ಹುಣಿವಿ ಆಡ್ರಲೇ’ ಅಂತ ಮೆತ್ತಗ ಬುದ್ದಿ ಹೇಳಾಕ ಬರತಾರ.

ಇನ್ನು ಮತ್ತೊಂದು ದಿನ ಇಡೀ ಓಣೆಲ್ಲಾ ಮಕ್ಕಂಡಿಂದೆ ಹುಡ್ರೆಲ್ಲಾ ಸೇರಿ ಓಣ್ಯಾಗಿನ ಮನಿ ಮನಿಗೂ ತಿರುಗಿ ಯಾರ್ಯಾರ ಮನಿಮುಂದೆ ಏನೇನು ಸಾಮಾನು ಹೊರಗಿಟ್ಟರ್ತಾರೋ ಎಲ್ಲವನ್ನೂ ಎತ್ತಿಕೊಂಡು ಹೋಗಿ ನಮ್ಮೋಣಿ ನೀರಿನ ಟ್ಯಾಂಕಿ ಮ್ಯಾಲೋ, ಹಾಳು ಹೊಲಗುಳಾಗೋ, ಯಾವುದಾದ್ರೂ ಮರಗುಳಿಗೋ ನೇತಾಕಿ ಬಂದು ಬಿಡ್ತಿವಿ. ಇದ್ರಾಗ ಮನಿಮುಂದೆ ಬಟ್ಟಿ, ಬುಟ್ಟಿ, ಕಟ್ಟಿಗಿ, ಪುಟ್ಟಿ ಮುಚ್ಚಿರೋ ಕೋಳಿ, ಏನಂದ್ರ ಏನೂ ಬಿಡಲ್ಲ. ಯಾರಾದ್ರೂ ಮನಿಮುಂದೆ ಏನೂ ಸಿಗ್ಲಿಲ್ಲಪಾ ಅಂದ್ರ, ಅಂಥೋರ ಮನಿ ಮುಂದೆ ಒಂದು ಪುಟ್ಟಿ ಸಗಣಿ ಮಡಿಕೆನಾ ಒಡದು ಬಂದುಬಿಡ್ತೀವಿ.  ಸೈಕಲ್ಲು, ಬಂಡಿಯ ಗಾಲಿ, ಗಳೇವಿನ ಸಮಾನು, ಒಂದಾ ಮಾತಿನಾಗ ಹೇಳಬೇಕಂದ್ರ ಅವತ್ತು ರಾತ್ರಿ ಕಣ್ಣಿಗೆ ಕಂಡಿದ್ದೆಲ್ಲಾ ಮಾಫಿ.  ಮತ್ತೆ ಮುಂಜಾಲೆದ್ದು ಓಣ್ಯಾಗ ಎಲ್ಲಾರೂ ಬೈತಾನೇ ಇರ್ತಾರ. ‘ರಾತ್ರಿ ಬಾಳಾ ಹೊತ್ತು ಎದ್ದಿದ್ನೋ, ಸಿಗಲಿಲ್ಲ ನನ್ನ ಕೈಗೆ’ ಅಂತ ಹೇಳಿಕೋತನೇ ಬೈತಿರತಾರ. ನಮಿಗೇನೂ ಗೊತ್ತಾ ಇಲ್ಲೇನೋ ಅನ್ನುವಂಗ ‘ಇಲ್ಲಪ್ಪಾ ನಾವು ದೇವ್ರಾಣಿ ನಿನ್ನ ಹೋಳಿ ಹುಣ್ವಿ ಆಡಿಲ್ಲ’ ಅಂದುಬಿಡ್ತೀವಿ.

ಇಂಥಾ ಫಜೀತಿಗುಳು ಬಾಳ ಓವರ್ ಆತಪಾ ಅಂತ ನಮಿಗನ್ನಿಸಿದ ದಿನ ಹೋಳಿ ಹುಣಿವಿ ಮತ್ತೊಂದು ಗಂಭೀರ ಸ್ವರೂಪ ಕೊಟ್ಟುಬಿಡ್ತೀವಿ. ಹೆಂಗಪಾ ಅಂದ್ರ ಅಷ್ಟೊತ್ತಿಗಾಗ್ಲೆ ನಮ್ಮ ಮ್ಯಾಗ ಯಾವ ಯಾವ ಮನಿಯಾರು ಭರ್ಜರಿ ಸಿಟ್ಟಾಗ್ಯಾರ ಅನ್ನಾದನ್ನ ತಿಳಕಂಡು ಅಂಥಾ ಮನಿಯೋರ ಮನವೊಲಿಸಿ ರಾಮಾಯಣ, ಮಹಾಭಾರತ, ಯಾವುದಾದ್ರೂ ಒಂದರ ಯಾವುದಾ ಒಂದು ಸನ್ನಿವೇಶದ ವೇಷ ಹಾಕಿ ರಾತ್ರಿ ಬಂಡಿಕಟ್ಟಿ ಊರತುಂಬ ಮೆರವಣಿಗಿ ಮಾಡಿ ಸೈ ಅನ್ನಿಸ್ಕಂಡುಬಿಡ್ತೀವಿ.  ಇದ್ರ ನಡುವಿ ನಂಕಡಿಗೆ ಹಿಡಂಬಿ ಮೆರವಣಿಗಿನೂ ಅಡ್ಡಡ್ಡ ನಡಸ್ತೀವಿ. ನಾಳೆ ಹೋಕಳಿ ಅಂದ್ರ ಇವತ್ತಿನಂಗ ನಮ್ಮೂರಿನ ಮಲ್ಡಿ ದುರ್ಗಮ್ಮನ ಗುಡಿ ಮಗ್ಗುಲಾಗಿನ ಕಟ್ಟಿಮ್ಯಾಗ ಹೋಳಿ ಕಾಮನ್ನ ಕುಂದ್ರಿಸಿರ್ತಾರ. ವಾರೆಹ್ವಾ! ಬಾಯಿಯೊಳಗ ದೊಡ್ಡ ಹರೆ (ಬಂಡೆ)ಯನ್ನಿಟ್ಟುಕೊಂಡು ರೌಸಿಲೆ ಕುಂತಿರೋ ಆ ಮೂರ್ತಿನ ನೋಡಾದು ಅಂದ್ರ ಅದೊಂಥರಾ ಹಿಗ್ಗು. ರಾತ್ರಿಯೆಲ್ಲಾ ಹಿಂಗಾ ಏನೇನೋ ತರಲೇ ಮಾಡಿಕೊಂಡು ಬೆಳಗಾಮುಂಜಾಲೆ ಕಾಮನ್ನ ಬಾಯಿ ಬಾಯಿ ಬಡಕಂಡು ಸುಟ್ಟು ಆಮ್ಯಾಲೆ ನಿಂದ್ರತೀವಿ ಬಣ್ಣ ಆಡಾಕ ಆ ಖದರ್ರು, ಮರಿಲಾರದ ಆ ಹುರುಪು, ಇಡೀ ಊರಿಗೂರೇ ಕಾಮನಬಿಲ್ಲಾಗೋದು, ಇಂಥಾ ಊರಾಗೂ ಇವತ್ತಿಗೂ ಒಂದು ಹನಿನೂ ಬಣ್ಣ ಹಾಕಿಸಿಕೊಳ್ಳದಂಗಿರೋ ಗೂಬೆಯಂಥಹ ಮುದುಕನೊಬ್ಬನು, ಬಣ್ಣ ಆಡಾಕ ನಿಂತ ಪ್ರತಿಯೊಬ್ಬರ ಬಟ್ಟೆಯನ್ನೂ ಹರಿದು, ಕಿತ್ತು, ಚಿಂದಿಮಾಡಿ, ನಮ್ಮೂರಿನ ಎಲೆಕ್ಟ್ರಿಕ್ ಲೈನ್ ಗಳಿಗೆ ಎಸೆದು ಕೇಕೆ ಹೊಡೆಯೋದು, ತನ್ನ ಪ್ರೀತಿ ತೋರಿಸಿಕೊಳ್ಳೋಕೆ, ವ್ಯಕ್ತಪಡಿಸೋಕೆ, ಹುಡ್ಗೀರು ತಮ್ಮ ನಲ್ಮೆಯ ಹುಂಬಂಗೆ ಕೆಜಿಗಟ್ಟಲೆ ಬಣ್ಣ ಕೊಡಿಸೋದು, ಅಬ್ಬಬ್ಬಾ ! ಒಂದಾ ಎರಡಾ ಹೇಳಬೇಕಿರೋದು.

ನಾನು ಈ ಬಣ್ಣದ ಹಬ್ಬಾನ ಯಾಕೆ ಅಷ್ಟು ಕಚ್ಚಿಕೋತೀನಿ ಅಂದ್ರ ನೂರಾರು ಜಾತಿಗುಳು ಇರೋ ನಮ್ಮೂರು ಹೋಳಿ ಹುಣ್ಣಿಮಿಯ ಬಣ್ಣ ಹುಗ್ಗೋ ಟೈಂ ಮುಗಿಯೋವರಿಗಾದ್ರೂ ಒಂದೇ ಮನಿಯೊಳಗಿನ ಅಣ್ಣ ತಮ್ಮಂದಿರ ಥರಾ ಮೆರಿತೀವಿ. ಊರ ಗೌಡ್ರಲಿಂದ ಹಿಡದು ಐದನೇ ಕ್ಲಾಸೋದೋ ಯಾವದೇ ಸಣ್ಣ ಹುಡಗನ್ನವರೆಗೂ ಆ ಟೈಂನೊಳಗ ಇಕ್ವೆಲ್ ಆಗಿರ್ತೀವಿ. ಅಂದಂಗ್ಹ, ನಮ್ಮಕಡಿಗೆ, ಹಿಡಂಬಿ ಮೆರವಣಿಗಿನೂ, ಇನ್ನಷ್ಟು ಆಚರಣೀನೂ, ಬಣ್ಣದ ಹಬ್ಬದ ದಿನ ಹೊಂದಾದ ಜೋಡಿಗುಳ ಕಲರವವನ್ನೂ, ಹಬ್ಬ ಮುಗಿದ ಮಾರನೇ ದಿನದ ನಮ್ಮೂರಿನ ವ್ಯವಸ್ಥೆನೂ ಇನ್ನೊಮ್ಮಿ ಹೇಳ್ತೀನ್ರೀ.

 

‍ಲೇಖಕರು avadhi

17 March, 2014

2 Comments

  1. amardeep.ps

    ಶಿವೂ, ಹೆಚ್. ಬಿ. ಹಳ್ಳಿಯ ನಮ್ ಓಣಿ ಕೆ. ವಿ. ಓ ಆರ್. ಕ್ವಾಟ್ರಸ್….ನಲ್ಲಿ ನಾವು ಮಾಡುತ್ತಿದ್ದ ಚೇಷ್ಟೆಗಳು ನೆನಪಾದವು. ಹೋಳಿ ಹಬ್ಬದ ದಿನ ನಮ್ಮ ಓಣಿಯ ರಂಗ ಕಲಾವಿದ ಪಿ. ಗೋವಿಂದ್ ಇವರು ಚಟ್ಟ ಕಟ್ಟಿದ ಹೆಣದ ಮುಂದೆ ಅಳುವ ಭರ್ಜರಿ ಮೆರವಣಿಗೆಯಲ್ಲಿ ಅದ್ಭುತವಾಗಿ ನಟಿಸುತ್ತಿದ್ದರು.. ದುರಾದೃಷ್ಟ ಒಂದೂವರೆ ಎರಡು ವರ್ಷವಾಯ್ತು ಅವರು ತೀರಿ ಹೋದರು…

  2. kusumabaale

    Holi hunivi maadidangha aat bidapa.id odi.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading