ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೊಂದು Me too … ಚರ್ಚೆ

ಪ್ರಸಾದ್ ರಕ್ಷಿದಿ 

ಮಿ..ಟೂ ದಾರಿ ತಪ್ಪುತ್ತಿದೆ, ಕೆಲವರು ಇದನ್ನು ಬ್ಲಾಕ್ ಮೇಲ್ ತಂತ್ರವಾಗಿಸುತ್ತಿದ್ದಾರೆ. ಎಷ್ಟೋ ವರ್ಷಗಳ ಹಿಂದೆ ನಡೆದ ಘಟನೆಯನ್ನು ಈಗ ನೆನಪಿಸಿಕೊಂಡು ಚಾರಿತ್ರ ಹನನ ಮಾಡುತ್ತಿದ್ದಾರೆ. ಆಗ ಮಾಡಿದ್ದು ತಪ್ಪೇ ಆದರೂ ಈಗ ಅವರು ಒಂದು ಉನ್ನತ ಸ್ಥಾನದಲ್ಲಿರುವಾಗ ಅದನ್ನು ಹೇಳಿ ಮುಜುಗರ ಮಾಡುವುದು ಸರಿಯೇ?. ಒಬ್ಬ ವ್ಯಕ್ತಿ ಈಗ ಒಳ್ಳೆಯವನಾಗಿದ್ದರೆ ಅವನನ್ನು ಎಂದೋ ಮಾಡಿದ ತಪ್ಪಿಗೆ ಶಿಕ್ಷಿಸಬೇಕೆ ? ಹೀಗೆಲ್ಲ ನನ್ನ ಅನೇಕ ಗೆಳೆಯರು ಪ್ರಶ್ನೆ ಮಾಡುತ್ತಲೇ ಇದ್ದಾರೆ.
ಈ ಬಗ್ಗೆ ನಿನ್ನೆ ನಮ್ಮ ಗೆಳೆಯರ ಸಡುವೆ ಒಂದು ಸಣ್ಣ ಸಂವಾದ ನಡೆಯಿತು.

ಬಹುಷಃ ನನಗೆ ತಿಳಿದಂತೆ ಪ್ರತಿಯೊಬ್ಬ ಹೆಣ್ಣು ಮಗಳಿಗೂ ತನ್ನ ಜೀವನದಲ್ಲಿ ಒಬ್ಬನಿಂದಲಾದರೂ ಈ ರೀತಿಯ ಕೆಟ್ಟ ಅನುಭವ ಆಗಿರುತ್ತದೆ. ಇಷ್ಟು ಕಾಲ ನೂರಾರು ಜನರು ಅದನ್ನು ಹೇಳಲು ಹೆದರುತ್ತಿದ್ದರು. ಈಗಲೂ ಹೇಳುತ್ತಿಲ್ಲ. ಶಾಲೆ, ಕಾಲೇಜು, ಕೆಲಸದ ಸ್ಥಳಗಳು, ಬಸ್ಸು ಇವುಗಳಿರಲಿ ಮನೆಗಳೊಳಗೇ ಹೆಚ್ಚಿನ ಸಂದರ್ಭದಲ್ಲಿ ಹತ್ತಿರ ಬಂಧುಗಳಿಂದಲೇ ನಡೆದಿರುತ್ತದೆ.

ಹೀಗಿರುವಾಗ ಮೀ ಟೂ ಎಂದಾಗ ಮೂಗು ಮುರಿಯುವುದಾಗಲೀ, ಗೇಲಿ ಮಾಡುವುದಾಗಲೀ ಏಕೆ ? ಕೆಲವು ವರ್ಷಗಳ ಹಿಂದಿನ ಘಟನೆ ನಮ್ಮೂರಿನಲ್ಲಿ ಒಬ್ಬ ಹೆಂಗಸೊಬ್ಬಳನ್ನು ಕೆಣಕಿದ ಅದು ಗಲಾಟೆಯಾಗಿ ಪಂಚಾಯತಿಗೆ ಬಂತು. ಕೆಲವರು ಸೇರಿ ಆತನಿಗೆ. “ನನಗೂ ಅವಳಿಗೂ ಮೊದಲು ಸಂಬಂಧ ಇತ್ತು” ಎಂದು ಹೇಳಿಸಿ ಆ ಹೆಂಗಸು ತನ್ನ ದೂರನ್ನೇ ವಾಪಸ್ ಪಡೆಯುವಂತೆ ಮಾಡಿದರು. ಅಂದರೆ ಬ್ಲಾಕ್ ಮೇಲ್ ತಂತ್ರವನ್ನು ಗಂಡಸೂ ಉಪಯೋಗಿಸಬಲ್ಲ ಮತ್ತು ಹೆಣ್ಣಿನ ಪಾವಿತ್ರ್ಯ , ಶೀಲದ ಹೆಸರಿನಲ್ಲಿ ಅದೇ ಹೆಚ್ಚಾಗಿ ನಡೆದಿರುವುದು.

ಹೌದು ಕೆಲವು ಬಾರಿ ಮಹಿಳೆಯರು ಕೂಡಾ ಬ್ಲಾಕ್ ಮೇಲ್ ತಂತ್ರವನ್ನು ನಾನಾ ಕಾರಣಗಳಿಂದ ಪ್ರಯೋಗಿಸಿದ್ದಿದೆ. ಅದೇ ಸಾರ್ವತ್ರಿಕವಲ್ಲ
.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ಗಂಡು ಸಹಜವಾಗಿಯೇ ಆಕ್ರಮಣಕಾರಿ. ಪ್ರಕೃತಿಯೇ ಅವನನ್ನು ಆ ರೀತಿ ಸೃಷ್ಟಿಸಿದೆ. ಇದನ್ನು ದೌರ್ಭಲ್ಯವೆಂದು ಪರಿಗಣಿಸಿ, ಸಣ್ಣ ವಯಸ್ಸಿನಿಂದಲೇ ಸಾಮಾಜಿಕ ನಡವಳಿಕೆಯನ್ನು ಗಂಡಿಗೆ ತಿಳಿಹೇಳಬೇಕು. ತಿದ್ದಬೇಕು, ಇದು ತಂದೆ ತಾಯಂದಿರ, ಸಮಾಜದ ಜವಾಬ್ದಾರಿ.

ಒಂದು ವಿಚಾರವನ್ನು ನಾವಿಲ್ಲಿ ಗಮನಿಸಬೇಕು. ಹೆಣ್ಣು ಮೋಸ ಮಾಡಲು ಸಾಧ್ಯ. ದೈಹಿಕವಾಗಿ ಶಕ್ತಳಾಗಿದ್ದರೆ, ಗಂಡಿನ ಮೇಲೆ ಹಲ್ಲೆಯನ್ನೂ ಮಾಡಬಹುದು. ಆದರೆ ಅತ್ಯಾಚಾರ ಮಾಡಲಂತೂ ಸಾಧ್ಯವೇ ಇಲ್ಲ.

ಹಾಗಾದರೆ ನಾವೇನು ಮಾಡಬಹುದು. ಯಾರ ಮೇಲಾದರೂ ಆಪಾದನೆ ಬಂದರೆ ಅದು ಸುಳ್ಳಾಗಿದ್ದರೆ ಧೃಡವಾಗಿ ನಿರಾಕರಿಸೋಣ. ಅದರ ವಿರುದ್ಧ ಹೋರಾಡೋಣ. ತಪ್ಪಿದ್ದರೆ ಅದನ್ನು ಒಪ್ಪಿಕೊಂಡು ಕ್ಷಮೆ ಕೋರೋಣ, ಮತ್ತು ಅದನ್ನೇ ಉದಾಹರಣೆಯಾಗಿ ಇಟ್ಟುಕೊಂಡು ಮುಂದೆ ಮುಜುಗರವಾದಂತೆ ಇಂದೇ ಎಚ್ಚರವಹಿಸಿ-ತಿದ್ದಿಕೊಳ್ಳಿ ಎಂದು ಯುವಕರಿಗೆ ಹೇಳೋಣ.

‍ಲೇಖಕರು avadhi

16 October, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading