ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೊಂದು ೨೦೦೦ರ ಭೂಕಂಪದ ನೆನಪು

ಕಣಾದ ಮೇಟಿಕುರ್ಕೆ

ಅಂದು 2000ನೇ ಇಸವಿ ದಿನಾಂಕ ನೆನಪಿಲ್ಲ, ಮಾವ(ಅಮ್ಮನ ಕಜಿನ್)ನ ಉಪನಯನದ ದೇವರ ಸಮಾರಾಧನೆ ಇತ್ತು. ಸಾಮಾನ್ಯ ಇಂತಹ ಸಮಾರಂಭ ಎಲ್ಲಾ ಇದ್ದಾಗ ಸ್ಕೂಲ್ಗೆ ಹೋಗೋ ಮನುಷ್ಯ ನಾನಲ್ಲ ತಪ್ಪುಸ್ಕೊಳ್ಳೋಕೆ ಒಳ್ಳೆ reason ಅಲ್ವ? ಏನ್ ಕಾರಣಾನೋ ನೆನಪಿಲ್ಲ ಒಟ್ನಲ್ಲಿ ನನ್ನಪ್ಪ ನೀಲಿ ಜರ್ಕಿನ್ ಹಾಕ್ಕೊಂಡು ತಮ್ಮ ಬಜಾಜ್ ಬೈಕ್ ಅಲ್ಲಿ ಅಂತೂ ಇಂತೂ ನನ್ನ ಸ್ಕೂಲ್ಗೆ ಅಟ್ಬಿಟ್ಟು ಬಂದ್ರಪ್ಪಾ. ನಾ ಸ್ಕೂಲಲ್ಲಿ ಇದ್ದಿದ್ರಿಂದ ಭೂಕಂಪದ ಸಮಯದಲ್ಲಿ ಮನೇಲಿ ಏನಾಯ್ತೋ ದೇವರೇ ಬಲ್ಲ. ಸರಿ ವಾಪಸ್ ಸ್ಕೂಲ್ಗೆ ಬರೋಣ… ಎಂದಿನಂತೆ ಪ್ರಾರ್ಥನೆ ಮುಗಿಸಿ ಕ್ಲಾಸ್ ಅಲ್ಲಿ ಪಾಠ ಕೇಳುಸ್ಕೊಂಡು(!!!???) ಕೂತಿದ್ವಿ. ಆಗೆಲ್ಲ ನಿಮಗೆ ಗೊತ್ತಲ್ಲ ಈ whatsappu ಎಲ್ಲ ಇರ್ಲಿಲ್ಲ ಬರೀ ದಂಟಿನ ಸೊಪ್ಪು ಸಬ್ಸಿಗೆ ಸೊಪ್ಪು ಅಷ್ಟೇ ವಿಶೇಷ…. ಮೆಸೇಜ್ ಮಣ್ಣುಮಸಿ ಎಂತದ್ದೂ ಕೂಡ ಇರ್ಲಿಲ್ಲ. ಈ ಭಾಗ್ಯಮ್ಮ ಶೇಷಮ್ಮ ಸೀತಮ್ಮನೋರ ಬಾಯಿಂದ ಹರಡಿದ್ದ ಭೂಕಂಪದ ಸುದ್ದಿ ನಮ್ಮ ಶಾಲೆಯ ಆಯಮ್ಮನೋರ ಕಿವಿಗೆ ಐನ್ ಸ್ಟಿನ್ ನನ್ನೂ ಬೆರಗುಗೊಳಿಸುವಂತೆ ಬೆಳಕಿಗಿಂತ ವೇಗವಾಗಿ ಬಂದು ತಲುಪಿತ್ತು.

ಕೆಲ ಕ್ಷಣದಲ್ಲೇ ಆ ಸುದ್ದಿ ಶಾಲೆಯಲ್ಲಿನ ಎಲ್ಲ ಕಿವಿಗಳನ್ನೂ ತಲುಪಿತ್ತು. ನಾವೆಲ್ಲಾ ಗಾಬರಿಯಿಂದ ಶಾಲೆಯ ಮೈದಾನಕ್ಕೆ ಬಂದು ಹಾಜರಾಗಿದ್ವಿ. ನಮ್ಮ ಹೆಡ್ ಮಾಸ್ತರರು ಬಂದು ಮಕ್ಕಳೇ ಏನೂ ಹೆದ್ರುಬೇಡಿ ಯಾರ್ಗೂ ಏನೂ ಆಗಲ್ಲ, ಮನೇಲೂ  ಡೋಂಟ್ ವರಿ ಅಂತ ಹೇಳಿ ಅಂತ ನಿಜವಾದ ‘ಎರಡು ಮಾತಿ’ನ ಭಾಷಣ ಮುಗಿಸಿ ಶಾಲೆಗೆ ರಜೆ ಕೊಟ್ಟು ಮನೆಗೆ ಹುಷಾರಾಗಿಹೋಗಿ ಅಂತ ಹೇಳಿ ಅವರೂ ಹೊರಟ್ರು.
ನಾನು ಸೇಫ್ :
ಆ ಕಡೆ ಈ ಕಡೆ ನೋಡೋದ್ರೋಳ್ಗೆ ಇಡೀ ಸ್ಕೂಲು ಖಾಲಿ ಆಗಿ ಬಿಕೋ ಅಂತಿತ್ತು. ನಮ್ ಸ್ಕೂಲಲ್ಲಿ ಓದುತ್ತಿದ್ದೋರೆಲ್ಲ ಅಲ್ಲೇ ರಾಜಾಜಿನಗರ ಸುತ್ತಮುತ್ತ ಇದ್ದೋರು ನಡ್ಕೊಂಡೋ ಬಸ್ಸಲ್ಲೋ ಒಟ್ನಲ್ಲಿ ಹೇಗೋ ಹೊರಟ್ಬಿಟ್ರು. ನಮ್ಮನೆ ಇದ್ದದ್ದು ವಿಜಯನಗರದ ಗೋವಿಂದರಾಜನಗರದಲ್ಲಿ ಬಸ್ ವ್ಯವಸ್ಥೆ ಅಷ್ಟಕ್ಕೇ ಅಷ್ಟೇ… ಏನ್ ಮಾಡ್ಲಿ ಅಂತ ಯೋಚನೆ ಮಾಡ್ಕೊಂಡು ಅಲ್ಲೇ ನಿಂತಿದ್ದೆ ಆಗ ನಮ್ಮ ಶಾಲೆಯ ಆಯಮ್ಮನವರು ಇಲ್ಲೇನೋ ಮಾಡ್ತಿದ್ಯಾ ಮನೆಗೆ ನಡಿ ಇಲ್ಯಾರು ಇರಲ್ಲ ಅಂದ್ರು, ತಕ್ಷಣ ಅವರ ಮನೆ ನನ್ನ ಅತ್ತೆಯ ಮನೆಯಿಂದ ಎರಡ್ ಬೀದಿ ಆಚೆ ಇದ್ದದ್ದು ನೆನಪಾಗಿ ದಾರೀಲಿ ಹೋಗ್ತಾ ನನ್ನನ್ನು ಸ್ವಲ್ಪ ಅತ್ತೆ ಮನೆ ಹತ್ರ ಬಿಟ್ಹೋಗಿ ಅಂತ ಕೇಳ್ಕೊಂಡೆ… ಸ್ಕೂಲಿಂದ ನಡೆದುಕೊಂಡು ಹೋದ್ರೆ 5 ನಿಮಿಷದಲ್ಲಿ ಸೇರಬಹುದಾಗಿದ್ದ ನನ್ನ ಅತ್ತೆ(ಕಮಲಾ ಮೇಟಿಕುರ್ಕೆ)ಯ ಮನೆಗೆ ಸುರಕ್ಷಿತವಾಗಿ ತಲುಪಿಸಿ ಹೊರಟರು.
ನಾನೇನೋ ಸುರಕ್ಷಿತವಾಗಿ ನನ್ನತ್ತೆ ಮನೆ ಸೇರ್ಕೊಂಡೆ ಆದ್ರೆ ಆ ವಿಷಯಾನ ಮನೆಗೆ ತಿಳಿಸಬೇಕು ಅನ್ನೋ ಅಷ್ಟು ಬುದ್ದಿ ಇರ್ಲಿಲ್ಲ… ಆಗ ಇನ್ನೂ ಮೂರ್ನೇ ಕ್ಲಾಸು
ಟೆನ್ಶನ್ :
ನಮ್ ಸ್ಕೂಲ್ ಒಂತರ ಸೂಪರ್ ಕಣ್ರೀ ಈಗಿನ ಶಾಲೆಗಳ ತಾರಾ ದಿನಪೂರ್ತಿ ಕೂರುಸ್ಕೊಂಡು ಬ್ಲೇಡ್ ಹಾಕ್ತಿರ್ಲಿಲ್ಲ, 7:30ಕ್ಕೆ ಶುರು ಆದ್ರೆ 11:30ಕ್ಕೆ ಮುಗೀತು. ತಿಂಡಿ ತಿನ್ಕೊಂಡು ಹೊರಟ್ರೆ ಊಟಕ್ಕೆ ವಾಪಸ್… ಥೂ ವಿಷಯಕ್ಕೆ ಬಾರಪ್ಪ ಊಟ ತಿಂಡಿ ಅಂತೆ ಬೇಕಾ ಇವೆಲ್ಲಾ ಈಗ? ಎಂದಿನಂತೆ ನನ್ನಮ್ಮ 11:30 ಅಷ್ಟೊತ್ತಿಗೆ ನನ್ನ ಕರ್ಕೊಂಡು ಹೋಗಕ್ಕೆ ಸ್ಕೂಲ್ ಹತ್ರ ಬಂದಿದ್ದಾರೆ ಅವತ್ತು ಮನೆ ಕಡೆ ಫಂಕ್ಷನ್ ಇದ್ದಿದ್ರಿಂದ ನನ್ನ ಚಿಕ್ಕಮ್ಮ ಕೂಡ ಅವರ ಜೊತೆ ಬಂದಿದ್ರು… ಆದ್ರೆ ಅವರಿಗೆ ಅಲ್ಲಿ ಶಾಕ್ ಕಾದಿತ್ತು, ಸ್ಕೂಲ್ ಒಳ್ಗೆ ಒಂದು ನೊಣಾನು ಇಲ್ಲ, ಅಲ್ಲೇ ಯಾರೋ ಹೂವೋ ಹಣ್ಣೋ ಮಾರೋರ ಬಳಿ ವಿಚಾರಿಸಿದಾಗ ವಿಷಯ ಈಈತರಾ ಅಂತ ತಿಳಿಸಿದ್ದಾರೆ… ನಾನ್ ನೋಡಿದ್ರೆ ಅಲ್ಲೆಲ್ಲೂ ಇಲ್ಲಾ… ತೊಗೊಳಪ್ಪ ಫುಲ್ ಟೆನ್ಶನ್.  ಮ(೦)ಗರಾಯ ಎಲ್ಲಿ ಹೋದನೋ ಅಂತ… ಸರಿ ಆಗ ಈ 1ರೂ ಫೋನ್ ಕೂಡ ಇರ್ಲಿಲ್ಲ ಮನೆಗೆ/ಅಪ್ಪನ ಆಫೀಸಿಗೆ ಸುದ್ದಿ ಮುಟ್ಸೋಣ ಅಂತ ಫೋನ್ ಮಾಡಕ್ಕೆ ನನ್ನ ಅತ್ತೆ ಮನೆಗೆ ಅಮ್ಮ ಬರ್ತಾರೆ ನೋಡಿದ್ರೆ ನಾನಲ್ಲಿ ನನ್ನ ಅಕ್ಕ ಸ್ಪರ್ಶಾಳ ಜೊತೆ ಆರಾಮಾಗಿ ಆಟಾಡ್ಕೊಂಡು ಅವರ ಮನೆಯಲ್ಲೇ settle ಆಗಿದ್ದೆ. ನನ್ನ ಅಮ್ಮ ನನ್ನ ನೋಡಿದ್ ತಕ್ಷಣ ಸ್ವಲ್ಪ ನಿರಾಳರಾದ್ರು ಅಂತ ಕಾಣ್ಸುತ್ತೆ, ಫೋನ್ ಮಾಡಿ ವಿಷಯ ತಿಳಿಸಿಲ್ಲ ಅಂತ ಬೈದ್ರೋ ಇಲ್ಲವೋ ನೆನಪಿಲ್ಲ. ಇಲ್ಲಾ ಅಂತಲೇ ಅಂದ್ಕೋತೀನಿ, ಒಟ್ನಲ್ಲಿ ಮಗ ಆರಾಮಾಗಿ ಇದ್ದ ಅನ್ನೋ ಖುಷಿ ಅವರಿಗೆ.
ಸರಿ ಹೇಗೂ ಫಂಕ್ಶನ್ ಇತ್ತಲ್ಲಾ ಹಾಗೆ ಆ ವಾರ ಏನೋ ರಜೆ ಇತ್ತು ಅಂತ ಕಾಣುತ್ತೆ, ನನ್ನ ಜೊತೆ ಅಮ್ಮಿ(ಸ್ಪರ್ಷ)ನೂ ರೆಡಿ ಮಡ್ಸ್ಕೊಂಡು ನಮ್ಮನೆಗೆ ಇಬ್ರನ್ನೂ ಆಟೋದಲ್ಲಿ ಕರ್ಕೊಂಡು ಹೊರಟ್ರು.
ಇಷ್ಟಕ್ಕೇ ಮುಗಿಲಿಲ್ಲ ಮನೆ ಹತ್ರ ಹೋದ್ರೆ ಮನೆ ಮುಂದೆ ಒಂದ್ 100 ಜನ ಗುಂಪು ಕಟ್ಕೊಂಡು ನಿಂತಿದ್ದಾರೆ. ಮತ್ತೆ ಒಂದ್ ಕ್ಷಣ ಆತಂಕ ಯಾಕಂದ್ರೆ ಮನೇಲಿ ಅಜ್ಜ ಅಜ್ಜಿ ಇಬ್ರೆ ಇದ್ರು ಅವರಿಗೇನಾದ್ರೂ ಆಗಿದ್ರೆ ಅಂತ… ಪುಣ್ಯ ಅವರಿಗೇನೂ ಆಗಿರಲಿಲ್ಲ, ಮನೆ ಪಕ್ಕ ಒಂದು  ಆಸ್ಪತ್ರೆ ಇತ್ತು ಆ ೫ ಮಹಡಿ ಕಟ್ಟಡದಲ್ಲಿ ಏನೋ ಬಿರುಕು ಬಿಟ್ತಿತ್ತಂತೆ ಅದು ಭೂಕಂಪದಿಂದಲೇ ಆಗಿದ್ದು ಅನ್ನೋ ಸುಳ್ ಸುದ್ದಿ ನಮ್ ಬೀದಿಗೆಲ್ಲ ಹಬ್ಬಿತ್ತು.. ಆ ಬಿಲ್ಡಿಂಗ್  ಕಟ್ಟಿದಾಗ್ಲಿಂದ್ಲೂ ಆ ಬಿರುಕು ಹಾಗೇ ಇತ್ತು… ಒಟ್ನಲ್ಲಿ ಈ ಶೇಷಮ್ಮ ಸೀತಮ್ಮನೋರ್ ಜೊತೆ ಶೇಷಣ್ಣ ರಾಮಣ್ಣನೋರು ಸೇರ್ಕೊಂಡು ಭೂಕಂಪದ ಸುದ್ದೀನ ಸುನಾಮಿಯಂತೆ ಹಬ್ಬಿಸಿದ್ದಂತೂ ನಿಜ.
ರೆಸ್ಕ್ಯೂ ಪ್ಲಾನು :
ಆದ್ರೆ ಬೆಳಗ್ಗಿಂದ ಅದೇನೋ ಕಂಪನ ಅಂತಾರಲ್ಲ ಅಷ್ಟೇ ಆಗಿದ್ದು. ಇನ್ನೊಂದ್ 24 ಗಂಟೇಲಿ ಯಾವುದೇ ಅವಘಡ ಸಂಭವಿಸಬಹುದೆಂದು tv, ರೇಡಿಯೋದಲ್ಲಿ ಒದ್ರುತಿದ್ರು. ನಾನು-ಅಮ್ಮಿ ಅದಕ್ಕೆ ತಕ್ಕಂತೆ ನಮ್ಮ ತುರ್ತು ಯೋಜನೆ ಅನ್ನು ಸಿದ್ಧ ಮಾಡಿದ್ವಿ. ಅದೇನು ನೋಡಣ ಬನ್ನಿ
ಮನೆಯೊಂದು ಮೂರು ಬಾಗಿಲು ಅಂತಾರಲ್ಲ, ನಿಜಕ್ಕೂ ನಮ್ ಮನೆಗೆ 3 ಬಾಗಿಲು ಇತ್ತು ಮುಂಬಾಗಿಲು, ಹಿತ್ತಿಲ ಬಾಗಿಲ ಜೊತೆ ಪಕ್ಕದಲ್ಲೂ ಒಂದು ಬಾಗಿಲಿತ್ತು. ಅದರಿಂದ ಆಚೆ ಹೋದ್ರೆ ತೋಟ ವಿಶಾಲವಾಗಿತ್ತು so ಭೂಕಂಬ ಆದ್ರೆ ಅಲ್ಲಿಗೆ ಓಡಿಹೋಗಬೇಕು ಅಂತ ನಿರ್ಧಾರ ಮಾಡಿ ಎಲ್ಲರಿಗೂ ಸುಲಭವಾಗಿ ಸಿಗುವ ಚಿಲಕ ಹಾಕಿ ನಾವೆಲ್ರೂ ಹಾಲಲ್ಲೆ ಮಲಗಿಕೊಂಡ್ವಿ(ಹಠ ಮಾಡಿ ಮಲಗೋಕ್ಕೆ ಹೇಳಿದ್ವಿ ಅನ್ನಬಹುದು), ಮೇಟಿಕುರ್ಕೆ ಜಮಖಾನ ಏನಿಲ್ಲಾ ಅಂದ್ರೂ ಅದ್ರು ಮೇಲೆ ಆರಾಮಾಗಿ ಒಂದು 10-12 ಜನ ಮಲಗೋ ಅಷ್ಟು ವಿಶಾಲವಾಗಿತ್ತು. ನಮ್ಮ ಮನೆಯ ಮೇಲೆಯೇ ನನ್ನ ಇನ್ನೊಬ್ಬ ಅತ್ತೆ(ಹೇಮೀ ಅತ್ತೆ)ಯ ಮನೆ ಇತ್ತು ಅವರ ಮಕ್ಕಳೂ ಕೂಡ ನಮ್ಮಂತೆಯೇ ಯೋಜನೆ ರೂಪಿಸಿಕೊಂಡಿದ್ರು ಯುದ್ಧವನ್ನು ಎದುರಿಸೋಕ್ಕೆ. ಪುಣ್ಯ ಯಾವುದೇ ಅವಘಡ ಸಂಭವಿಸಲಿಲ್ಲ…
ಆದರೆ ಈಗ ಅವನ್ನೆಲ್ಲ ನೆನೆಸಿಕೊಂಡರೆ ನಗು ಬರುತ್ತೆ but ಆ ಸಣ್ಣ ವಯಸ್ಸಿನಲ್ಲಿ ಆತಂಕ ದುಗುಡ ಎಲ್ಲ ಸಹಜವೇ ಅಲ್ವೇ. ಹೀಗೆಲ್ಲಾ ಆಗಿದ್ದು ಒಂತರಾ ಮರೆಯಲಾರದ ಘಟನೆಯಾಗಿ ತಲೇಲಿ 30×40 site ಬುಕ್ ಮಾಡಿ ಮನೆ ಮಾಡ್ಕೊಂಡ್ಬಿಟ್ಟಿದೆ. ಹಾಗಾಗಿ ಎಲ್ಲೇ ಭೂಕಂಪ ಆದ್ರೂ ಈ ಘಟನೆ ಒಂದ್ ಸಲ ನೆನಪಾಗೇ ಆಗುತ್ತೆ…
ಬೇಸರದ ವಿಷಯವೆಂದರೆ ನೆನ್ನೆ ನಮ್ಮ ನೆರೆಯ ರಾಷ್ಟ್ರ ನೇಪಾಳದಲ್ಲಿ ಭಯಾನಕವಾಗಿ ಭೂಕಂಪನವಾಗಿ ಸುಮಾರು 2000 ಜನ ಮೃತಪಟ್ಟು ಬಹಳಷ್ಟು ಜನರು ಮನೆಮಟ ಕಳೆದುಕೊಂಡು ಪರದಾಡುತ್ತಿದ್ದಾರೆ ಅಂತ ಸುದ್ದಿ ಬಂದದ್ದು. ಆದಷ್ಟು ಬೇಗ ಅವರೆಲ್ಲರಿಗೂ ಸೂರು ಸಿಗುವಂತಾಗಲಿ ಎಂದು ಪ್ರಾರ್ಥಿಸುತ್ತಾ ನನ್ನ ಭೂಕಂಪದ ನೆನಪಿಗೆ ಈ ಲೇಖನವನ್ನೂ ಸೇರಿಸಿಕೊಳ್ಳುತ್ತೇನೆ. ಹಾಗೆಯೇ ಮತ್ತೆ ಈ ನೆನಪುಗಳು ಮರುಕಳಿಸದಿರಲಿ ಎಂದು ಆಶಿಸುತ್ತೇನೆ.
 

‍ಲೇಖಕರು G

1 May, 2015

2 Comments

  1. Sachin B S

    Writing style chennagansthu. Serious katheli kooda humor tandiro reethi. Part by part aagi story na divide maadid reethi kooda chennagide. Erad moor kade spelling mistake ansthu. Overall article ninna anubhava na haage eega earthquake aagiro Nepal chetarskol’li anno amshagalu odhugana manassu muttatte.

  2. Arun Purandar

    hithaanubhava needuvanthide, prayatna munduvareyali

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading