ರೂಪಲಕ್ಷ್ಮಿ
ಯಾವುದೋ ವಿಷ ಗಳಿಗೆಯಲ್ಲಿ ಅಪ್ಪನೋ, ಅಮ್ಮನೋ ಅಪರಾಧ ಮಾಡಿ ಜೈಲು ಸೇರಿರುತ್ತಾರೆ. ಅಪ್ಪನೇ ಅಮ್ಮನನ್ನು ಸಂಶಯಿಸಿ ಕೊಲೆ ಮಾಡಿರುತ್ತಾನೆ ಅಥವಾ ಅಮ್ಮನೇ ಅವನನ್ನು ಕೊಲೆ ಮಾಡಿರಬಹುದು. ಯಾವುದೋ ಕುಟುಂಬದ ಆಸ್ತಿ ಜಗಳವೋ, ಇನ್ನಾವುದೋ ದ್ವೇಷಕ್ಕೆ, ಇಡೀ ಕುಟುಂಬಕ್ಕೆ ಕುಟುಂಬವೇ ನಾಶವಾಗಿಬಿಡಬಹುದು. ಈ ಜಗಳ, ದೊಂಬಿ, ದ್ವೇಷ, ಅಸೂಯೆಗೆ ಬಲಿಯಾಗುವವರು ಮಾತ್ರ ಅವರ ಪುಟ್ಟ, ಪುಟ್ಟಮಕ್ಕಳು. ಈ ಮಕ್ಕಳು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾರೆ. ನಿರಾಳವಾಗಿ, ನೆಮ್ಮದಿಯಾಗಿ ತಮ್ಮ ಬಾಲ್ಯವನ್ನು ಕಳೆಯಬೇಕಾದ ಈ ಮಕ್ಕಳ ಜೀವನ, ಇಂತಹ ಘಟನೆಗಳಿಂದ ಕಮರಿಹೋಗಿಬಿಡುತ್ತದೆ. ತಪ್ಪೇ ಮಾಡದಿದ್ದರೂ, ಹೇ! ಇವರು ಆತನ ಮಗಳು / ಆಕೆಯ ಮಗ ಎಂಬುದೇ ಇವರ ದೊಡ್ಡ ಅಪರಾಧವಾಗಿಬಿಡುತ್ತದೆ. ಇಂತಹ ಮಕ್ಕಳನ್ನು ನಮ್ಮ ಸಮಾಜವು ದೂರವಿಟ್ಟುಬಿಡುತ್ತದೆ. ಇಂತಹ ಸಂದರ್ಭಗಳಲ್ಲಿ, ಅಪರಾಧಿಗಳ ಮಕ್ಕಳು ಕೂಡ ಅಪರಾಧಿಗಳಾಗುವುದೇ ಹೆಚ್ಚು.
ರಿಸರ್ವ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ‘ಮಣಿ’ ಎಂಬುವವರು ಸೆಂಟ್ರಲ್ ಜೈಲಿನ ಮುಂದೆ ಹಾದು ಹೋಗುವಾಗ, ಅಪರಾಧಿಗಳ ಮಕ್ಕಳು ಅಳುತ್ತಾ ಜೈಲಿನ ಮುಂದೆ ಇರುವುದನ್ನು ಗಮನಿಸಿ, ಇಂಥ ಮಕ್ಕಳಿಗೆ ಏನಾದರೂ ಅನುಕೂಲ ಮಾಡಬೇಕೆಂದು ಹೇಳಿ, ತಮ್ಮ ಬ್ಯಾಂಕಿನ ಕೆಲಸದಿಂದ ನಿವೃತ್ತಿ ಹೊಂದಿ, ನಿವೃತ್ತಿಯ ಹಣದಿಂದ ಹಿಡಿದು, ತಮ್ಮ ಮನೆಯನ್ನು ಕೂಡ ಈ ಮಕ್ಕಳಿಗಾಗಿಯೇ ಮೀಸಲಿಟ್ಟರು. ಇವರ ಪತ್ನಿ ಕೂಡ ಇವರ ಈ ಎಲ್ಲಾ ಕೆಲಸಗಳಲ್ಲಿ ಜೊತೆಗೂಡಿದ್ದು ಗಮನಾರ್ಹ. ೧೯೯೯ ರಲ್ಲಿ ಇಂತಹ ಪುಟ್ಟ ಮಕ್ಕಳಿಗಾಗಿಯೇ ‘ಸೋಕೇರ್ ಇಂಡ್’ ಸಂಸ್ಥೆಯನ್ನು ಹುಟ್ಟುಹಾಕಿದರು. ಇತ್ತೀಚೆಗೆ ಸುಮಾರು ೬ ತಿಂಗಳ ಹಿಂದೆ ತೀರಿಕೊಂಡರು ಎನ್ನುವ ಮಾಹಿತಿ ಗೆಳೆಯರೊಬ್ಬರು ನೀಡಿದರು. ಈ ಸಂಸ್ಥೆಯ ಹೆಚ್ಚಿನ ಮಾಹಿತಿಗಾಗಿ (http://www.socareind.org/) ಜಾಲತಾಣವನ್ನು ನೋಡಬಹುದು. ಕೇವಲ ೫ ಮಕ್ಕಳಿಂದ ಪ್ರಾರಂಭವಾದ ಈ ಸಂಸ್ಥೆ, ಇಂದು ೧೭೧ ಮಕ್ಕಳು ಇದ್ದು, ಲಗ್ಗೆರೆಯಲ್ಲಿ ೧೧೦ ಗಂಡು ಮಕ್ಕಳಿಗಾಗಿ, ರಾಜಾಜಿನಗರದಲ್ಲಿ ೬೦ ಹೆಣ್ಣು ಮಕ್ಕಳಿಗಾಗಿ ಹಾಸ್ಟೆಲ್ ನಡೆಸುತ್ತಿದೆ.
ಅರ್ಥಪೂರ್ಣ ಹುಟ್ಟುಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ನಮ್ಮ ಫೇಸ್ ಬುಕ್ ಗೆಳೆಯರ ಗುಂಪು ಸೇರಿದ್ದು ರಾಜಾಜಿನಗರದಲ್ಲಿರುವ ಈ ‘ಸೋಕೇರ್ ಇಂಡ್’ ನಲ್ಲಿ. ನಾವು ೧೫ ಮಂದಿ ಅಲ್ಲಿಗೆ ತೆರಳಿದಾಗ ಸುಮಾರು ೧೨ ಗಂಟೆ. ಗೇಟ್ ತೆರೆಯುತ್ತಿದ್ದಂತೆ ಎಲ್ಲಾ ಮಕ್ಕಳು ಕೇರಮ್ ಆಡುತ್ತಿದ್ದದ್ದು, ಅವರ ‘ಕಲರವ’ ಒಂದು ಪುಟ್ಟ ಶಾಲೆಯ ಹಾಗೆಯೇ ಕಂಡಿತು. ಕೆಲವರ ಬಳಿ ಕೇರಮ್ ಆಡಲು ಸ್ಟ್ರೈಕರ್ ಇರಲಿಲ್ಲ, ಆದರೆ ಪಾನ್ ನಿಂದಲೇ ಆಡುತ್ತಿದ್ದರು. ಹೊರಗೆ ಆಡಲು ಬಿಡುವುದಿಲ್ಲವೇ? ಎಂಬ ನನ್ನ ಪ್ರಶ್ನೆಗೆ ಪುಟಾಣಿಯೊಬ್ಬಳು ‘ಸಂಜೆಗೆ ಬಿಡುತ್ತಾರೆ’ ಎಂದುತ್ತರಿಸಿದಳು. ಅಲ್ಲಿಯೇ ಅಷ್ಟು ಮಕ್ಕಳ ‘ಶೂ’ ರಾಕ್, ಶಟಲ್ ರಾಕೆಟ್ ಗಳು, ಬಾಲ್ ಗಳು ಎಲ್ಲವೂ ಇದ್ದವು. ಗುಂಪಿನಲ್ಲಿನ ಒಂದಷ್ಟು ಮಂದಿ ಅಲ್ಲಿಯೇ ಮಕ್ಕಳೊಟ್ಟಿಗೆ ಕೇರಮ್ ಆಡಲು ಕುಳಿತರು, ಶನಿವಾರ, ಭಾನುವಾರ ಇಸ್ಕಾನ್ ನಿಂದ ಊಟ ಬರುವುದಿಲ್ಲವಾದ್ದರಿಂದ ಅಲ್ಲಿಯೇ ಅಡುಗೆ ತಯಾರಾಗುತ್ತಿತ್ತು. ವಯಸ್ಸಾದ ಮಹಿಳೆಯೊಬ್ಬರು (ಸುಮಾರು ೭ ವರ್ಷಗಳಿಂದ ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ), ಇಬ್ಬರು ಪುಟ್ಟ ಮಕ್ಕಳ ಸಹಾಯದಿಂದ ಬೀಟ್ ರೂಟ್ ಪಲ್ಯವನ್ನು ತಯಾರು ಮಾಡುತ್ತಿದ್ದರು. ಇತ್ತೀಚೆಗಷ್ಟೇ ಸೇರಿರುವ ಮತ್ತೊಬ್ಬಳು ಮಹಿಳೆ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು.
ಶನಿವಾರ, ಭಾನುವಾರವೆಂದರೆ ಈ ಮಕ್ಕಳಿಗೆ ಬೆಳಿಗ್ಗೆಯಿಂದ ತಮ್ಮ ಬಟ್ಟೆ ಒಗೆದುಕೊಳ್ಳುವ, ಅಡುಗೆಗೆ ಸಹಾಯ ಮಾಡುವ, ತಲೆ ಸ್ನಾನ ಮಾಡುವ ಸಂಭ್ರಮ. ಅಡುಗೆಗೆ ಲಾಟರಿ ಮೂಲಕ ಇಬ್ಬರನ್ನು ಆಯ್ದು ಸಹಾಯಕ್ಕೆ ಕರೆದುಕೊಳ್ಳುತ್ತಾರೆ. ಹತ್ತಿರದ ಈಸ್ಟ್ ವೆಸ್ಟ್ ಶಾಲೆ, ನಿರ್ಮಲಾ ರಾಣಿ ಶಾಲೆ ಗಳಲ್ಲಿ ಈ ಮಕ್ಕಳು ಓದುತ್ತಿದ್ದಾರೆ. ಇವರಲ್ಲಿ ಶಾಲೆಗೆ ೯೫% ತೆಗೆದುಕೊಳ್ಳುವ ಮಕ್ಕಳು ಇದ್ದಾರೆ. ಸೋಕೇರ್ ನನ್ನು ನೋಡಿಕೊಳ್ಳುತ್ತಿರುವ ಹಿರಿಯರು (ಹೆಸರು ತಿಳಿಯಲಿಲ್ಲ), ಮೊದಲಿಗೆ ನಮಗೆ ಹೇಳಿದ್ದು – ಇದೊಂದು ಅನಾಥಾಶ್ರಮವಲ್ಲ! ಇಲ್ಲಿರುವವರಿಗೆ ಕುಟುಂಬ, ಬಂಧು ಬಳಗ ಎಲ್ಲವೂ ಇದೆ. ಆದರೆ ಯಾವುದೋ ಸಂದರ್ಭದಲ್ಲಿ ಅಪರಾಧ ಮಾಡಿ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವಂಥವರ ಮಕ್ಕಳು, ಈ ಒಂದೇ ಕಾರಣಕ್ಕಾಗಿ ಸಮಾಜದ ಮುಖ್ಯವಾಹಿನಿಯಿಂದ ದೂರವಾಗಬಾರದು ಎನ್ನುವ ನಿಟ್ಟಿನಲ್ಲಿ, ಇವರನ್ನು ಇಲ್ಲಿಟ್ಟುಕೊಂಡು ಸಲಹುತ್ತಿದ್ದೇವೆ’ ಎಂದರು.
ಸರ್ಕಾರದ ಯಾವುದೇ ಸಹಾಯ, ಸವಲತ್ತುಗಳಿಲ್ಲದೆ, ಪರಿಚಯವಿರುವ ವ್ಯಕ್ತಿಗಳಿಂದಲೇ ಹಣ ಸಂಗ್ರಹ ಮಾಡಿ ೧೭೧ ಮಕ್ಕಳನ್ನು ಸಲಹುತ್ತಿದ್ದಾರೆ. ಶೃಂಗೇರಿ ಶಾರದಾ ಪೀಠವು ಇತ್ತೀಚೆಗೆ ಇವರ ಈ ಸಮಾಜ ಸೇವೆಯನ್ನು ಗಮನಿಸಿ, ತಾವು ಕೂಡ ಇದರಲ್ಲಿ ಭಾಗಿಯಾಗಲು ಮುಂದೆ ಬಂದಿದ್ದಾರೆಂದು, ಇಸ್ಕಾನ್ ಸಂಸ್ಥೆಯು ಕೂಡ ಈ ಮಕ್ಕಳಿಗೆ ವರ್ಷದ ಸುಮಾರು ೨೭೫ ದಿವಸಗಳ ಕಾಲ ಊಟದ ವ್ಯವಸ್ಥೆ ಮಾಡಿದ್ದಾರೆ ಎಂದು ಕೂಡ ವಿವರಿಸಿದರು. ಹಾಗೆಯೇ ‘ಇಷ್ಟೆಲ್ಲಾ ಧಾರ್ಮಿಕ ಸಂಸ್ಥೆಗಳು ನಮಗೆ ಸಹಾಯ ಮಾಡುತ್ತಿದ್ದಾರೆಂದು, ನಮ್ಮನ್ನು ದಯವಿಟ್ಟು ಯಾವುದೇ ಧರ್ಮಕ್ಕೆ ಸೇರಿಸಬೇಡಿ. ಯಾವುದೇ ಅಪರಾಧಕ್ಕೆ ಜಾತಿಭೇದವಿಲ್ಲ. ಇಲ್ಲಿ ಕ್ರಿಶ್ಚಿಯನ್ ರು ಇದ್ದಾರೆ, ಮುಸ್ಲಿಮರು ಇದ್ದಾರೆ, ಹಿಂದೂಗಳು ಇದ್ದಾರೆ. ಇಲ್ಲಿ ಮಕ್ಕಳನ್ನು ಸೇರಿಸಿಕೊಳ್ಳುವಾಗ ನಾವು ಎಂದಿಗೂ ಅವರ ಜಾತಿಯನ್ನು ಕೇಳಿಯೇ ಇಲ್ಲ. ಜಾತ್ಯಾತೀತವಾಗಿ ಮಕ್ಕಳನ್ನು ಮುಖ್ಯವಾಹಿನಿಯಲ್ಲಿ ಬೆರೆತುಕೊಳ್ಳುವಂತೆ ಬೆಳೆಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅಲ್ಲಿನ ಹಿರಿಯರು ಹೇಳಿದಾಗ ಬಹಳ ಆನಂದವಾಯಿತು. ಪ್ರತಿಯೊಬ್ಬ ಮಗುವಿನ ಹಿನ್ನೆಲೆ ಬಗ್ಗೆ ತನಗೆ ತಿಳಿದಿದ್ದರೂ ಕೂಡ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವವರ ಮಕ್ಕಳಾದ್ದರಿಂದ ಹಾಗೂ ಇದು ಅತ್ಯಂತ ಸೂಕ್ಷ್ಮದ ವಿಷಯವಾದುದರಿಂದ, ಹೆಚ್ಚಿಗೆ ಇದರ ಬಗ್ಗೆ ವಿವರಿಸಲಾರೆ ಎಂದು ಅವರು ಹೇಳಿದ್ದು, ಅರೇ! ಎಷ್ಟೊಂದು ಕಳಕಳಿ ಇವರಿಗೆ ಈ ಮಕ್ಕಳ ಬಗ್ಗೆ! ಎಂದೆನಿಸಿತು.
ಈ ‘ಸೋಕೇರ್’ ನೋಡಿಕೊಳ್ಳುವ ಮತ್ತೊಬ್ಬ ಹಿರಿಯ ಮಹಿಳೆ ‘ಶ್ರೀಮತಿ ಆಶಾ’, ಅಲ್ಲಿನ ಯಾವುದೋ ಮಗುವನ್ನು ಆಸ್ಪತ್ರೆಗೆ ಸೇರಿಸಲು ಬಂದಿದ್ದವರು ಕೂಡ ಮಾತನಾಡಲು ಸಿಕ್ಕಿದರು. ಆಕೆ ಈ ಮಕ್ಕಳ ಬಗ್ಗೆ, ಈ ಮಕ್ಕಳಿರುವ ವಿಷಮ ಪರಿಸ್ಥಿತಿ ಬಗ್ಗೆ ಹೇಳಿದ ಮಾತುಗಳಂತೂ ಮನ ಕಲಕಿಬಿಟ್ಟಿತು. ನಮ್ಮ ಮಕ್ಕಳನ್ನು ಯಾವುದೇ ನೆಗೆಟಿವ್ ಶೇಡ್ ಗಳು ತಾಕದಂತೆ ಬೆಳೆಸುವ ನಾವು, ಶಾಲೆಯಲ್ಲಿಯೂ ಕೂಡ ನಮ್ಮ ಮಕ್ಕಳಿಗೆ ಶಿಕ್ಷಕರು ಶಿಕ್ಷಿಸಬಾರದು, ಬೈಯಬಾರದು, ಎಂದು ಅಪೇಕ್ಷಿಸುವ ನಾವು, ಸ್ವಲ್ಪ ಏನಾದರೂ ಹೆಚ್ಚು ಕಡಿಮೆಯಾದರೆ ಆಕಾಶ ಭೂಮಿ ಒಂದು ಮಾಡುವ ನಾವು, ಇಂತಹ ಮಕ್ಕಳನ್ನು ಒಮ್ಮೆ ನೋಡಿದರೆ, ಇವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡರೆ ಬಹುಶಃ ನಾವೆಷ್ಟು ಸುಖಿಗಳು ಎನಿಸಬಹುದೇನೋ? ಈ ಮಕ್ಕಳಿಗೆ ಕೌನ್ಸೆಲಿಂಗ್ ನ ಅವಶ್ಯಕತೆ ಬಹಳವಿದೆ. ಕೆಲವು ಕೌನ್ಸೆಲಿಂಗ್ ಸೆಂಟರ್ ಗಳಿಂದ, ಕೌನ್ಸೆಲಿಂಗ್ ಮಾಡಲು ಬರುತ್ತಿದ್ದಾರೆ. ಆ ಕೌನ್ಸೆಲಿಂಗ್ ಮಾಡಲು ಬರುವವರಿಗೆ, ಈ ಮಕ್ಕಳ ಮೇಲೆ ಪ್ರಯೋಗ ಮಾಡಲು ಅವಕಾಶ ದೊರೆತು, ಕಲಿಯುವ ಅವಕಾಶವಿದೆಯೇ ಹೊರತು ಅದರಿಂದ ಈ ಮಕ್ಕಳಿಗೆ ಅಂತಹ ಪ್ರಯೋಜನ ಕಂಡುಬಂದಿಲ್ಲ. ಅವರ ಅಪ್ಪ, ಅಮ್ಮ ಮಾಡಿದ ಅಪರಾಧಗಳನ್ನೆಲ್ಲಾ ಈ ಮಕ್ಕಳಿಗೆ ಹೇಳಿ, ಅವರನ್ನು ಇನ್ನಷ್ಟು ಕುಗ್ಗುವಂತೆ ಮಾಡಿಬಿಡುತ್ತಾರೆ. ಹಾಗಾಗಿ ನಿಮಗೆ ಪರಿಚಯವಿರುವ, ಅನುಭವಿ ಕೌನ್ಸೆಲ್ಸರ್ಸ್ ಇದ್ದರೆ ಹೇಳಿ’ ಎಂದರು.
ಈಗಿನ ಸಮಾಜದಲ್ಲಿ, ಮಕ್ಕಳನ್ನು ಬೆಳೆಸುವುದು ಎಷ್ಟು ಕಷ್ಟ? ಎಂಬರಿವು ಇರುವವರಿಗೆ ನಮ್ಮ ಕಷ್ಟದ ಅರಿವಾಗುತ್ತದೆ. ಈ ಮಕ್ಕಳಂತೂ ಸಣ್ಣ ಎಳವೆಯಲ್ಲಿಯೇ ಎಲ್ಲದರ ಬಗ್ಗೆ ಮಾಹಿತಿ ಹೊಂದಿರುತ್ತಾರೆ ಆದರೆ ತಾವು ಏನು ಮಾಡುತ್ತಿದ್ದೇವೆ? ತಪ್ಪೋ? ಸರಿಯೋ? ಎಂಬುದರ ಅರಿವಿರುವುದಿಲ್ಲ. ಇವರಿಗೆ ನೈತಿಕತೆಯಿಂದ ಹಿಡಿದು ಲೈಂಗಿಕ ಶಿಕ್ಷಣದವರೆಗೂ, ಪ್ರತಿಯೊಂದನ್ನು ವಿವರಿಸಿ, ಅವರ ಜವಾಬ್ದಾರಿಗಳು, ಕೆಟ್ಟ, ಒಳ್ಳೆಯ ಸ್ಪರ್ಶದ ಬಗ್ಗೆ ತಿಳುವಳಿಕೆ ಮೂಡಿಸುವುದು ಅತ್ಯಂತ ಜರೂರಿ ಕೆಲಸವಾಗಿರುತ್ತದೆ. ಎಷ್ಟೋ ಮಕ್ಕಳು ಕೇವಲ ಐಸ್ಕ್ರೀಮ್, ಚಾಕೋಲೇಟಿಗೆ ಏನು ಬೇಕಿದ್ದರೂ ಮಾಡಿಬಿಡುತ್ತಾರೆ. ಅವರಿಗೆ ತಾವು ಮಾಡುತ್ತಿರುವುದು ತಪ್ಪು! ಎಂಬುದೇ ತಿಳಿದಿರುವುದಿಲ್ಲ. ಪಿಕ್ ಪಾಕೆಟ್, ಕಳ್ಳತನ, ಕೊಲೆ, ಅನೈತಿಕ ಸಂಬಂಧಗಳು / ಸಂಭೋಗಗಳು, ಇವರಿಗೆ ಅಸಹ್ಯವೆಂದಾಗಲೀ, ತಪ್ಪೆಂದಾಗಲೀ ಅನಿಸುವುದಿಲ್ಲ. ನಾವು ಆಶ್ಚರ್ಯ ಪಡುವಂತಹ ಅಥವಾ ಹೆದರುವಂತಹ ಇಂತಹ ವಿಷಯಗಳೆಲ್ಲವೂ ಇವರಿಗೆ ಸಾಮಾನ್ಯ ವಿಷಯಗಳಾಗಿರುತ್ತವೆ. ಇದರಿಂದ ಇವರನ್ನು ಹೊರಗೆ ತರುವುದು ನಮ್ಮ ಈ ಸಂಸ್ಥೆಯ ಮುಖ್ಯ ಕರ್ತ್ಯವ್ಯವಾಗಿದೆ. ಅದಕ್ಕೆ ಆದಷ್ಟು ಸಮಾಜದ ಜನರ ಸಹಾಯ ದೊರೆತರೆ, ಈ ಮಕ್ಕಳನ್ನು ಕೂಡ ನಮ್ಮ ಮಕ್ಕಳಂತೆಯೇ ಬೆಳೆಸಬಹುದು ಎಂಬುದು ಅವರ ‘ಆಶಾ’ವಾದವಾಗಿತ್ತು.
ಇಷ್ಟೇ ಅಲ್ಲದೆ, ಈ ಮಕ್ಕಳು ಅನಾಥಾಶ್ರಮದಲ್ಲಿ ಬೆಳೆಯದೇ, ಒಂದಿಷ್ಟು ಕಾಲ ತಮ್ಮ ಕುಟುಂಬದವರೊಡನೆ ಬೆಳೆದಿರುವುದರಿಂದ ಕೂಡ, ನಮಗೆ ಇದೇ ರೀತಿಯ ಬಟ್ಟೆ ಬೇಕು, ಬಿಂದಿ ಬೇಕು, ಬಳೆ ಬೇಕು, ಶಾಲೆಯಲ್ಲಿ ನೃತ್ಯಕ್ಕೆ ಇದೇ ಸರ ಬೇಕು ಎಂದೆಲ್ಲಾ ತಾವು ಬಂದೊಡನೆ ಒಂದು ಪಟ್ಟಿ ನೀಡುತ್ತಾರೆ. ಇಂತಹ ಸಣ್ಣ, ಪುಟ್ಟ, ಅವಶ್ಯ ವಸ್ತುಗಳನ್ನು ಕೂಡ (ನಮ್ಮ ಮಕ್ಕಳಾಗಿದ್ದರೆ ಕೊಡಿಸುತ್ತಿರಲಿಲ್ಲವೇ?) ಅವರಿಗೆ ಕೊಡಿಸಬೇಕು ಎಂದೆಲ್ಲಾ ಅವರು ತಾವು ಪಡುವ ಪರಿಪಾಟಲನ್ನು ವಿವರಿಸುತ್ತಲೇ ಹೋದರು. ತಲೆ ಮೇಲೆ ಕಿರೀಟದಂತಿದ್ದ ‘ಹೇರ್ ಬ್ಯಾಂಡ್’ ಹಾಕಿದ್ದ ಹುಡುಗಿಯೊಬ್ಬಳನ್ನು ನಾನು ‘ಎಲ್ಲಿ ಕೊಂಡುಕೊಂಡೆ?’ ಎಂದು ಕೇಳಿದಾಗ ‘ನಮ್ಮನೆಯಿಂದ ತಂದೆ’ ಎಂದುತ್ತರಿಸಿದಳು. ನನ್ನಲ್ಲಿ ಮೂಡಿದ ಅನೇಕ ಪ್ರಶ್ನೆಗಳಿಗೆ ನಾನು ಕಡಿವಾಣ ಹಾಕಬೇಕಾಯಿತು. ಕೇಳಲು ಮುಜುಗರ ಪಡುತ್ತಲೇ, ಆದರೂ ಕುತೂಹಲದಿಂದ, ಆ ಹುಡುಗಿ ತಪ್ಪು ತಿಳಿಯದಂತೆ ‘ಎಷ್ಟು ವರ್ಷಗಳಿಂದ ಇಲ್ಲಿ ಓದುತ್ತಿದ್ದೀ?’ ಎಂದೆ. ಆಕೆ ಸುಮಾರು ‘೭ ವರ್ಷಗಳಿಂದ’ ಎಂದಳು. ಅಲ್ಲಿಗೆ ನನ್ನ, ಅವಳ ಪ್ರಶ್ನೋತ್ತರ ಕಾರ್ಯಕ್ರಮ ಮುಗಿಯಿತು.
ಮೇಲ್ನೋಟಕ್ಕೆ ಆ ಮಕ್ಕಳು ಎಲ್ಲರೊಂದಿಗೆ ಬೆರೆಯುವರು, ಖುಷಿಯಿಂದ ಇರುವವರು ಎಂಬ ಅನಿಸಿಕೆ ಮೂಡಿದರೂ ಕೂಡ, ಪ್ರತಿಯೊಬ್ಬರೂ ಕೀಳರಿಮೆಯಿಂದ ನರಳುತ್ತಿದ್ದಾರೆ ಎಂಬುದು ಅರ್ಥವಾಗುತ್ತಿತ್ತು. ಅದರಲ್ಲೂ ಹೈಸ್ಕೂಲ್ ಮಕ್ಕಳಂತೂ ಕ್ಯಾಮೆರಾ ಅವರ ಮುಂದೆ ಹಿಡಿದರೆ ಸಾಕು, ಮುಖ ಮುಚ್ಚಿಕೊಳ್ಳುತ್ತಿದ್ದರು. ನಾಚಿಕೆಯೋ, ಸಂಕೋಚವೋ,ಕೀಳರಿಮೆಯೋ ಅರಿವಾಗಲಿಲ್ಲ. ನಿಮ್ಮಲ್ಲಿ ಚಂದ ಓದುವವರು ಯಾರು? ಎಂದು ನಾನು ಪ್ರಶ್ನೆ ಕೇಳಿದಾಗ ಒಂದಿಬ್ಬರು ಮಾತ್ರ ಕೈ ಎತ್ತಿದರು. ೯೫% ಮಾರ್ಕ್ಸ್ ತೆಗೆದುಕೊಳ್ಳುವವರಂತೆ. ಹೆಚ್ಚಿನ ಮಕ್ಕಳು ಬಳ್ಳಾರಿ ಜಿಲ್ಲೆಯಿಂದ ಬಂದವರು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರಿಗೆ ತಮ್ಮ ಅಸ್ತಿತ್ವದ ಬಗ್ಗೆ , ಹಕ್ಕು, ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ತುರ್ತಿನ ಕೆಲಸ. ಇಲ್ಲದಿದ್ದರೆ, ಇದೇ ಮನಸ್ಥಿತಿಯಲ್ಲಿ ಹೊರಬಂದರೆ, ಇನ್ನಷ್ಟು ಕುಗ್ಗಿಬಿಡುತ್ತಾರೆ.
೫ ಮಕ್ಕಳಿಂದ ಶುರುವಾದದ್ದು ೧೭೧ ಮಕ್ಕಳಿಗೆ ಬಂದು ನಿಂತಿದೆ ಎಂದು ಅವರು ವಿವರಿಸುತ್ತಿದ್ದಾಗ, ಚಪ್ಪಾಳೆ ತಟ್ಟಲೆಂದು ಎತ್ತಿದ ನನ್ನ ಕೈಗಳು, ಅಲ್ಲಿಗೆ ನಿಂತು ಬಿಟ್ಟವು. ೧೭೧ ಮಕ್ಕಳೆಂದರೆ, ೧೭೧ ಅಪರಾಧಗಳು! ಅದು ಕೂಡ ಜೀವಾವಧಿ ಶಿಕ್ಷೆ ದೊರೆದಂತಹ ಮಹಾಪರಾಧಗಳು! ಇವರು ಇಷ್ಟು ಮಕ್ಕಳನ್ನು ಸಲಹುತ್ತಿದ್ದಾರೆ ಎಂದು ಇವರ ಸಮಾಜ ಸೇವೆಗೆ ಹೆಮ್ಮೆ ಪಡಬೇಕೋ? ೧೭೧ ಕ್ರೈಮ್ ಗಳು ನಮ್ಮ ಸಮಾಜದಲ್ಲಿ ನಡೆದಿರುವುದರ ಬಗ್ಗೆ ಬೇಸರ ಪಡಬೇಕೋ? ಎಂದೆಲ್ಲಾ ಕಿರಿಕಿರಿಯಾಗಿ, ಇಂತಹ ಅಪರಾಧಗಳು ನಡೆಯದಂತೆ, ನಾವೇನು ಮಾಡಬಹುದು? ಎಂದೆಲ್ಲಾ ಯೋಚಿಸಿ, ಮನ ಹಣ್ಣುಹಣ್ಣಾಗಿಬಿಟ್ಟಿತು. ಕಾಲವೇ ಇದಕ್ಕೆ ಪರಿಹಾರ!











ಮನಸ್ಸನ್ನು ವಿಚಾರಕ್ಕೆ ಹಚ್ಚುವ ಲೇಖನ
ಎರಡು ಮೂರು ವಿಷಯಗಳನ್ನು ಬಿಟ್ಟುಬಿಟ್ಟಿದ್ದೇನೆ – ೧. ಈ ಮಕ್ಕಳು ಓದುತ್ತಿರುವ ಶಾಲೆಗಳ ಪ್ರಿನ್ಸಿಪಾಲ್ ರಿಗೆ ಇಂತಹ ಹಿನ್ನೆಲೆಯಿಂದ ಬಂದಿರುವ ಮಕ್ಕಳನ್ನು ತೆಗೆದುಕೊಳ್ಳಲು ನಿಜವಾಗಿಯೂ ಧೈರ್ಯ ಬೇಕು. ಆ ಶಾಲೆಗಳಿಗೆ ನಮನ ಹೇಳುವುದನ್ನು ಬಿಟ್ಟುಬಿಟ್ಟೆ ! (ಹೆಸರುಗಳನ್ನು ಹೇಳಿದರೆ, ಇನ್ನೆಲ್ಲಿ ಅಲ್ಲಿಯ ಉಳಿದ ಮಕ್ಕಳ ಅಪ್ಪ, ಅಮ್ಮಂದಿರು ಗಲಾಟೆ ಮಾಡುವುರೋ? ಎನ್ನುವ ಭಯದಿಂದ ಹೆಸರುಗಳನ್ನು ಹೇಳಿಲ್ಲ! ).
೨. ನನ್ನ ಮರೆಗುಳಿತನದಿಂದ ಗುಲ್ಬರ್ಗ ಹೋಗಿ ಬಳ್ಳಾರಿ ಜಿಲ್ಲೆಯಾಗಿಬಿಟ್ಟಿದೆ. ಇದನ್ನು ತಿದ್ದಿದ Anil ಗೆ ಧನ್ಯವಾದಗಳು ೩. ಸಾಫ್ಟ್ ವೇರ್ ಇಂಜಿನಿಯರ್ ಗಳೆಂದರೆ ಮೂಗು ಮುರಿಯುವವರಿಗೆ – ಬಹಳಷ್ಟು ಇಂಜಿನಿಯರ್ ಗಳು, ಈ ಸಂಸ್ಥೆ ನಡೆಸಲು ಹಣ ದೇಣಿಗೆ ನೀಡಿದ್ದಾರೆ. ಅದರ ಬಗ್ಗೆ ಹೇಳುತ್ತಾ, ಆ ಹಿರಿಯರು ‘ ನಿಮಗೆಲ್ಲರಿಗೂ ಟೈಮ್ ಅಂದರೆ ಹಣ ಆಗಿಬಿಟ್ಟಿದೆ, ಈಗಿನ ಟ್ರೆಂಡ್ ಅದೇ ರೀತಿ ಆಗಿರುವುದರಿಂದ, ನಿಮಗ್ಯಾರಿಗೂ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನು ತಪ್ಪೆಂದು ಹೇಳಲಾಗದು. ಕಾಲದ ಜೊತೆಗೆ ನಾವು ಕೂಡ ಓಡಬೇಕಾಗುವುದು. ಆದರೆ ಮುಂದೆ ಹೇಗೆ? ಏನೂ? ಎಂದು ಹೇಳುವುದು ಎಂದು ಸಂಕಟ ಪಟ್ಟರು ! ಇದಕ್ಕೂ ಕೂಡ ನಾವ್ಯಾರೂ ಉತ್ತರಿಸಲಾಗಲಿಲ್ಲ. ನಾವೆಲ್ಲ ಒಂದಷ್ಟು ಹಣ ನೀಡಿಬಿಟ್ಟರೆ ನಮ್ಮ ಜವಾಬ್ದಾರಿ ಮುಗಿಯಿತು ಎಂದುಕೊಳ್ಳುತ್ತೇವೆ! ಆದರೆ…. ಆಲ್ಲಿ ಆ ಹಣವನ್ನು ಸರಿಯಾಗಿ ನಿರ್ವಹಿಸುವವರು ಕೂಡ ಬಹಳ ಕಡಿಮೆ ಜನರಿದ್ದಾರೆ. ಇಚ್ಛೆಯುಳ್ಳವರು ಆ ಸಂಸ್ಥೆಯವರನ್ನು ಭೇಟಿ ಮಾಡಿ, ತಮ್ಮ ಕೈಲಾದ ಸಹಾಯ ಮಾಡಿದರೆ, ನನ ಬರಹದ ಉದ್ದೇಶ ನೆರವೇರುವುದು
Nanna nenapina prakara idu 1990 ra asupasinalli shuruvada shale/ mane. idannu nodikolluthidda vralli vobbaru eegilla. intha seve madalu dhairya beku.
– ಜಗತ್ತಿನಲ್ಲಿ ನಮಗೆ ತಿಳಿಯದಂತೆ ಎಷ್ಟೋ ಸಮಾಜಮುಖಿಯಾಗಿ ಚಿಂತಿಸುವ ಮನಸುಗಳಿವೆ ಅಂತಹವರನ್ನು ಜಗತ್ತಿಗೆ ಪರಿಚಯಿಸುವ ತಮ್ಮ ಕಾರ್ಯ ಸ್ತುತ್ಯಾರ್ಹ.
nijakkU…olleya mattu anukaraneeya krama…..andukolluttene….chennagide madam nim lekhana….