– ಸಂಗಮೇಶ ಡಿಗ್ಗಿ
ಅದೇ ಹಳೆಯ ಕಚ್ಚಾ ಡಾಂಬರಿನ ಮೇಲೆ ತಗ್ಗು ದಿನ್ನೆಗಳನ್ನು ದಾಟುತ್ತಾ ದಿನ ತುಂಬಿದ ಬಸುರಿಯಂತೆ ಬಂದು ನಿಂತಿತು ಕೆಂಪು ಬಸ್ಸು. ಅದು ಹಾಕಿದ ಬ್ರೇಕ್ನ ಗಕ್ಕನೆ ಶಬ್ದಕ್ಕೆ ಮಲಗಿದ್ದ ನಾಯಿ ಕ್ಷಣಮಾತ್ರದಲ್ಲಿ ಎದ್ದು ನಿಂತು ಸೋಮಾರಿತನದ ಮೈ ಮುರಿಯಿತು. ಬಸ್ ಡ್ರೈವರ್ ಹೆಗಲ ಮೇಲೆ ಇದ್ದ ಟವೆಲ್ ಜಾಡಿಸಿ ಸರಿಮಾಡಿಕೊಂಡು ಪಾನ್ ಬೀಡಾ ಅಂಗಡಿಯತ್ತ ಹೆಜ್ಜೆ ಬೆಳೆಸಿದ.
ವಯಸ್ಸಾದ ಪ್ರಯಾಣಿಕನೊಬ್ಬ ಅಂಗೈಯಲ್ಲಿ ಹಿಡಿದು ಹಸಿಯಾಗಿದ್ದ ಚೀಟಿಯನ್ನು ತೋರಿಸುತ್ತಾ ಈ ಅಡ್ರೆಸ್ ಗೆ ಮತ್ತೆ ಯಾವ ಕಡೆ ಹೋಗಬೇಕು ಎಂದು ಬಗಲಲ್ಲಿನ ಚೀಲ ಸರಿಮಾಡಿಕೊಂಡ. ಕಂಡಕ್ಟರ್ ಚಿಲ್ಲರೆ ಕೊಡಿ ಎಂದು ಗಂಟುಬಿದ್ದ ಮಹಿಳೆಯರನ್ನು ಸಂಭಾಳಿಸುವದರಲ್ಲಿ ಬ್ಯಸಿಯಾಗಿ ಕಡೆಗೆ ಹತ್ತರ ಒಂದು ನೋಟನ್ನು ಕೊಟ್ಟ ಇದರಲ್ಲಿ ನಾಲ್ವರು ಸಮನಾಗಿ ಹಂಚಿಕೊಳ್ಳಿ ಎಂದು ತನ್ನ ವಾಸನೆಯಿಂದಲೆ ನಾನು ಇಲ್ಲಿ ನಿಶ್ಚಿಂತನಾಗಿ ಇದ್ದೆನೆ ಎನ್ನುವಂತೆ ಕರೆಯುವ ಶೌಚಾಲಯಕ್ಕೆ ಮೂತ್ರ ಬಾಧೆ ತೀರಿಸಲು ಹೊರಟ.
ಅಲ್ಲೊಂದು ಇಲ್ಲೊಂದು ಸೀಟಿನಲ್ಲಿ ಕುಳಿತು ವಿರಾಜಮಾನವಾಗಿ ಕುಳಿತಿದ್ದ ಪ್ರಯಾಣಿಕರು. ಪರಾತ್ನಲ್ಲಿ ನಿಂಬೆಹುಳಿ, ಶೇಂಗವನ್ನು ಸಾಲಾಗಿ ಜೋಡಿಸಿ ‘ಯಾರ್ರಿ ಟೈ ಪಾಸ್ ಕಡ್ಲೆಕಾಯಿ’ ಎನ್ನುತ್ತಾ ಅತ್ತ ಇತ್ತ ಒಡಾಡುತ್ತಾ ಗಿರಾಕಿಗಾಗಿ ಅಲೆದಾಡುವ ಉದ್ದನೆಯ ಕಕೂದಲು ಬಿಟ್ಟ ಹುಡುಗ. ಆತನನ್ನೆ ಮಿಕಿಮಿಕಿ ನೋಡುತ್ತಾ ನಿಂಬೆಹುಳಿಗಾಗಿ ಬಾಯಲ್ಲಿ ಜೋಲ್ಲು ಸುರಿಸುವ ಬಾಲಕನನ್ನು ಕಂಡು ಹತ್ತಿರ ಹೋದ. ಚೇ ಬೇಡ ಎಂದು ಆತನನ್ನು ಸಿಂಡರಿಸಿ ನೋಡುತ್ತಾ ರೇಷಿಮೆಯ ಸೇರಗಿನಿಂದ ಬಾಯಿ ಒರೆಸಿದ ತಾಯಿ. ತುಂಬಾ ದೂರದ ಪ್ರಯಾಣ ಮಾಡಿದವರು ಕಿಸೆಯಲ್ಲಿನ ಚಿಲ್ಲರೆಗಾಗಿ ತಡಕಾಡುತ್ತಾ ‘ಏ ತಮ್ಮಾ ಬಾ ಇಲ್ಲಿ’ ಎಂದು ಬೊಚ್ಚು ಬಾಯಿ ತೆರೆದು ಶೇಂಗಾ ಖರೀದಿ ಮಾಡಿದ ಅಜ್ಜ. ಅಲ್ಲಿಗೆ ಮತ್ತೆ ಬೇರೆ ಬಸ್ನಲ್ಲಿ ‘ಯಾರ್ರಿ ಟೈ ಪಾಸ್ ಕಡ್ಲೆಕಾಯಿ’ ಎನ್ನಲು ಹೊರಟ.
ಇಸ್ತ್ರಿ ಮಾಡಿದ ಬಟ್ಟೆತೊಟ್ಟು ನೀಟಾಗಿ ತಲೆ ಬಾಚಿಕೊಂಡ ಕೈಯಲ್ಲಿ ಪತ್ರಿಕೆ ಹಿಡಿದ ವ್ಯಕ್ತಿ ಬಸ್ಸೊಳಗೆ ಹತ್ತಿ ಕುಳಿತ. ಅವನ ಹಿಂದಿನ ಯುವಕನೊಬ್ಬ ಕಿಟಕಿಯ ಗಾಜು ಸರಿಸಿ ಇಡೀ ರುಂಡವನ್ನು ಹೊರಹಾಕಿ ಬಾಯಲ್ಲಿನ ಕೆಂಪು ಗುಟಕಾದ ರಸವನ್ನು ಕಾರಂಜಿಯಂತೆ ಸಿಂಪಡಿಸಿ ‘ಸರ್ ಸ್ವಲ್ಪ ಕೊಡಿ ಎಂದು ಪತ್ರಿಕೆಯತ್ತ ಕಣ್ಣು ಹಾಯಿಸಿದ. ವಿಧಿಯಿಲ್ಲದೇ ಒಲ್ಲದ ಮನಸ್ಸಿನಿಂದ ಒಳಪುಟವನ್ನು ದಾನಶೂರ ಕರ್ಣನಂತೆ ಅಲ್ಲದಿದ್ದರೂ ಜಿಪುಣ ಮಾಸ್ತಾರನ ಹಾಗೆ ಕೊಟ್ಟ. ತಾನು ಮುಖಪುಟದಲ್ಲಿನ ಹೊಟ್ಟೆ ಉಬ್ಬಿಕೊಂಡು ಆಗೋ ಇಗೋ ಬ್ಲಾಸ್ಟ್ ಆಗುವಂತೆ ಕಾಣುತ್ತಿದ್ದ ರಾಜಕಾರಣಿಯ ಚಿತ್ರದತ್ತ ಕಣ್ಣಾಡಿಸಿದ. ಸರ್ ‘ಸಿನಿ ಪುರವಾಣಿ ಕೋಡ್ತೀರಾ ಎಂದ ಮಗದೊಬ್ಬ. ಮತ್ತೊಬ್ಬ ಬಂದವನೇ ಸೀದಾ ನಡುವಿನ ಪುಟಕ್ಕೆ ಕೈ ಹಾಕಿ ಹಲ್ಲುಗಿಂಜುತ್ತಾ ಈಯಮ್ಮ ಬಾರಿ ಚನ್ನಾಗಿ ಅಕಂಣ ಬರೆಯುತ್ತಾಳಲ್ಲವೇ ಅಂದ. ತನ್ನ ಮೆಚ್ಚಿನ ನಟಿಯ ದೇಹಸೌಂದರ್ಯವನ್ನು ವಿಕ್ಷಿಸಲು ಬ್ಯೂಸಿಯಾಗಿದ್ದ ಯುವಕ ಹಗಲಲ್ಲೆ ರಾತ್ರಿಯ ಕನಸು ಕಾಣತೊಡಗಿದ. ಇನ್ನೊಬ್ಬ ತನ್ನ ಗ್ರಹಗತಿ ತಿಳಿಯಲು ಭವಿಷ್ಯ ನೋಡತೋಡಗಿದ. ಮಕರ ರಾಶಿ ಯತ್ತ ಕಣ್ಣಾಡಿಸಿದವನೆ ಮೀಸೆಯ ತುದಿ ತಿರುವಿದ. ಈ ದಿನ ನೀವು ತುಂಬಾ ಸಂತಸದಲ್ಲಿರುವಿರಿ ಕಾರಣ ಬಡಜನರಿಗೆ ಸಹಾಯ ಮಾಡುವಿರಿ. ಶ್ರೀ ದುರ್ಗಾದೇವಿಯ ಶ್ಲೋಕ ಓದಿ”

ಬರುವಾಗ ನೀಟಾಗಿ ಮಧುವಣಗಿತ್ತಿಯಂತೆ ಬಂದ ಪತ್ರಿಕೆ ಹರಿದು ಹಂಚಿಹೋಗಿ ಕೈ, ಕಾಲು, ಮುಂಡವನ್ನು ಬೇರ್ಪಟ್ಟು ಅಂಗಡಿಯಲ್ಲಿ ತೂಗು ಹಾಕಿದ ಕೋಳಿಯ ಅವಯವಗಳಂತೆ ತನ್ನ ಬಟ್ಟೆಯನ್ನು ಬಿಚ್ಚಿದಂತೆ ತೋರುತ್ತಿತ್ತು. ಅದರ ಮಾಲೀಕ ಸರ್ ಸ್ವಲ್ಪ ಪತ್ರಿಕೆ ಕೋಡ್ತಿರಾ ಎಂದು ಅಂಗಲಾಚಿದ ಬಳಿಕ ಮತ್ತೆ ಅದು ಸುಸ್ತಾದ ಮಧುವಣಗಿತ್ತಿಯಂತೆ ತೋರಿ ರದ್ದಿಯಾದ ಹಾಳೆಯಂತೆ ಬ್ಯಾಗ್ನ ಒಳಗೆ ಅಡಗಿತು.
ಮಣಭಾರದ ಪಾಟೀಚೀಲವನ್ನು ಹೋತ್ತುಕೊಂಡು ಬಂದ ಆರೇಳು ಪುಟಾಣಿಗಳು ಮುಂದಿನ ಸೀಟ್ಗೆ ಯುದ್ಧಮಾಡಿ ಸೋತುಹೋದರು. ವಾರದ ಹಿಂದೆ ತೊಳೆದು ಸಾಕ್ಸ್ ತನ್ನು ಸುವಾಸನೆಯನ್ನು ಬಸ್ನ ತುಂಬೆಲ್ಲಾ ಪಸರಿಸಿದರೂ ಲಕ್ಷಗೊಡದೆ ಕವಕವ ಮಾತನಾಡುತ್ತಾ ಬ್ಯಾಗ್ನ್ನು ಆಂಟಿಯ ಮೇಲೆ ಹೋರೆಸಿ ಇಂಗ್ಲೀಷ್ ಮ್ಯಾಡಮ್ ಡಿಂಪಲ್ಳ ಬಗ್ಗೆ ಕಾಮೆಂಟರಿ ಶುರು ಮಾಡಿದರು.
ಮುಂದಿನ ಬಾಗಿಲಿನಿಂದ ತಲೆಗೆ ಮಲ್ಲಿಗೆ ಹೂವ ಮಡಿದು ಬಂದ ಯುವತಿಯ ಮೈಯಿಂದ ಜಾಸ್ಮಿನ್ ಸೆಂಟಿನ ವಾಸನೆ ಗಮ್ಮನೆ ಮೂಗಿಗೆ ಬಡಿದು ಸಾಕ್ಸ್ನ ಚಿಂತೆ ಮರೆಸಿತು. ಕಂಬ ಹಿಡಿದು ನಿಂತ ಅವಳ ಶೋಚನೀಯ ಸ್ಥಿತಿಯನ್ನು ಕಂಡ ಕಾಲೇಜು ಯುವಕ ಭಾರತದ ಮಹಿಳೆಯ ಅನುಭವಿಸುತ್ತಿರು ಕಷ್ಟವನ್ನು ಕಂಡು ಸೀಟು ಬಿಟ್ಟುಕೊಟ್ಟು ಸಮಾಜಸೇವೆ ಮಾಡಿದವನಂತೆ ಹೆಮ್ಮೆಯಿಂದ ಒಮ್ಮೆ ತನ್ನ ಹೇರ್ ಸ್ಟೈಲ್ನ್ನು ಸರಿಮಾಡಿಕೊಂಡ.
ಡ್ರೈವರ್ ಬನಿಯನ್ ಕಾಣುವ ರೀತಿ ಗುಂಡಿ ಬಿಚ್ಚಿ ಸೀಟಿನಲ್ಲಿ ಕುಳಿತ. ಎದುರಿನ ಕನ್ನಡಿಯಲ್ಲಿ ತನ್ನ ಮುಖವನ್ನೊಮ್ಮೆ ನೋಡಿ ಕನ್ನಡಿಯನ್ನು ಅದೇ ಟವಲ್ನಿಂದ ಒರೆಸಿದ. ಗೇರ್ ಹಾಕಿದವನೇ ಒಮ್ಮಲೇ ಜೋರಾಗಿ ಹಾರ್ನ ಮಾಡಿದ. ಎಲ್ಲಿಂದಲೂ ಬಂದ ಅನೇಕ ಜನ ಲಗುಬಗೆಯಿಂದ ಸಿಕ್ಕ ಸ್ಥಳದಲ್ಲಿ ಬಾಜು ಇರುವ ಪ್ರಯಾಣಿಕರನ್ನು ನೋಡಿ ಕೆಕ್ಕರಿಸಿ ವಕ್ಕರಿಸಿಕೊಂಡರು. ಬಸ್ ನಿಲ್ದಾಣವನ್ನು ದಾಟಲು ಸಜ್ಜಾಗುತ್ತಿದ್ದಂತೆ ಓಡಿಬಂದ ಯುವಕರು ಬಸ್ನ್ನು ಹಿಡಿದು ಬಾಗಿಲಲ್ಲಿ ಜೋತಾಡತೊಡಗಿದರು. ಕಂಡಕ್ಟರ್ ಇವರೆಲ್ಲರನ್ನು ದಾಟಿ ಶೀಟಿ ಹೊಡೆದು ಗ್ರಿನ್ ಸಿಗ್ನಲ್ ಕೊಡುವುದರ ಮೂಲಕ ಟೀಕೆಟ್ ಟೀಕೆಟ್ ಎಂದು ಬಡಬಡಿಸುತ್ತಾ ಹೆಂಗಳೆಯರ ಮದ್ಯದಲ್ಲಿ ಕಣ್ಮರೆಯಾದ.
ಮತ್ತೆ ಅದೇ ಡಾಂಬರಿನ ಮೇಲೆ ತನ್ನ ಪ್ರಯಾಣವನ್ನು ಆರಂಭಿಸಿತು ಆ ಕೆಂಪು ಬಸ್ನ್ನು ದಿಟ್ಟಿಸಿ ನೋಡುತ್ತಾ ಲೈಟ್ಕಂಬಕ್ಕಾಗಿ ಹುಡುಕಲು ತೆರಳಿತು ಅದೇ ನಾಯಿ.





hellow diggi chanagide kahani.keep on write k?
thanks sister
nimma baraha chennagide brother
ಸೋಗಸಾಗಿದೆ ಗುರು… ಅದೇ ಬಸ್ ಹತ್ತಿ ಊರಿಗೆ ಹೋಗೊಣ ನಾಳೆ.