ಎಚ್ ಕೆ ಶರತ್
ನಾವು ಕೈ ಕೆರ್ಕಳೋಕೂ ಪುರಸೊತ್ತಿಲ್ಲದ ಮನುಷ್ಯ ಜೀವಿಗಳನ್ನು ಕ್ಷೌರದಂಗಡಿ ಸೇರಿದಂತೆ ಇನ್ನಿತರ ಕ್ಯೂ ನಿಲ್ಲುವ ಸ್ಥಳಗಳಲ್ಲಿ ಮಾತ್ರ ಕಾಣಲು ಸಾಧ್ಯ.
ಕರೆಂಟ್ ಬಿಲ್ ಕಟ್ಟೋಕೆ, ಅಂಗಡಿಗೆ ಏನಾದರೂ ತರೋಕೆ, ಹಿಟ್ಟು ಬಿಡಿಸೋಕೆ ಗಿರಣಿಗೆ ಹೋದ್ರೆ ಅಲ್ಲಿಗೆ ಕಡಿಮೆ ಎಂದರೂ ಕಾಲು ಡಜನ್ ಸಂಖ್ಯಾಬಲದ ಪುರಸೊತ್ತಿಲ್ಲದ ಮನುಷ್ಯ ಜೀವಿಗಳ ಆಗಮನವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ.
ಟೈಂಪಾಸ್ಗಾಗಿ ನಾನಾ ಸೈಡ್ ಬ್ಯುಸಿನೆಸ್ಗಳ ಮೊರೆ ಹೋಗುವ ಜೀವಗಳೂ ಸಹ ಕ್ಯೂ ನಿಲ್ಲುವ ಸಂದರ್ಭ ಎದುರಾದರೆ, ‘ನಾವು ಫುಲ್ ಬ್ಯುಸಿ ಸ್ವಾಮಿ’ ಎನ್ನುವ ಹಸಿ ಸುಳ್ಳನ್ನು ಹೊಸ ನಮೂನೆಯಲ್ಲಿ ಹೇಳುತ್ತವೆ.
ಬೆಳ್ಳಂಬೆಳಿಗ್ಗೆ ಕ್ಷೌರದಂಗಡಿಗೆ ದಾಂಗುಡಿ ಇಡುವ ಬಹುಪಾಲು ಮಂದಿ, ಕ್ಷೌರದಂಗಡಿಯ ಬಾಗಿಲು ತಳ್ಳಿದ ಕೂಡಲೇ ಕೇಳುವ ಮೊದಲ ಪ್ರಶ್ನೆ ‘ಲೇಟಾಗುತ್ತಾ?’ ಅದಾದ ಮೇಲೆ ಬರುವ ಉದ್ಘಾರ ‘ಅರ್ಜಂಟ್ ಕೆಲ್ಸ ಇತ್ತು’.
ಕರೆಂಟ್ ಬಿಲ್ ಕಟ್ಟೋಕೆ ಅಂತ ಎಲ್ಲರೂ ಕ್ಯೂನಲ್ಲಿ ನಿಂತಿರುವಾಗ ಅಲ್ಲಿಗೆ ಆಗಮಿಸುವ ಪುರಸೊತ್ತಿಲ್ಲದ ಮನುಷ್ಯ ಜೀವಿ, ಕ್ಯೂನ ಮುಂಚೂಣಿಯಲ್ಲಿ ನಿಂತಿರುವ ಮಿಕವೊಂದಕ್ಕೆ ಪೂಸಿ ಹೊಡೆದು ತನ್ನ ಕೈಯಲ್ಲಿರುವ ಕರೆಂಟ್ ಬಿಲ್ ಹಾಗು ಕಾಸನ್ನು ಆ ಮಿಕದ ಕೈಗೆ ಹಸ್ತಾಂತರಿಸಿ ಮೆಲ್ಲಗೆ ಅಲ್ಲಿಂದ ಕಾಲು ಕೀಳುತ್ತದೆ. ಆ ಮಿಕ ತನ್ನ ಕರೆಂಟ್ ಬಿಲ್ನೊಂದಿಗೆ ಪುರಸೊತ್ತಿಲ್ಲದ ಮನುಷ್ಯ ಜೀವಿಯ ಬಿಲ್ಲನ್ನೂ ಕಟ್ಟಿ ಕೌಂಟರ್ನಿಂದ ಹೊರ ಬಂದು ನೋಡಿದರೆ ಅಲ್ಲಿ ಹೊಗೆ ಬಿಡುವ ಕಾಯಕದಲ್ಲಿ ನಿರತವಾಗಿರುವ ಪುರಸೊತ್ತಿಲ್ಲದ ಮನುಷ್ಯ ಜೀವಿ ಕಣ್ಣಿಗೆ ಬೀಳುತ್ತದೆ.

ಕ್ಯೂನಲ್ಲಿ ನಿಂತು ಬಿಲ್ ಕಟ್ಟಲು ಮನಸ್ಸು ಮಾಡದ ಆ ಮನುಷ್ಯ ಜೀವಿಯ ಒಳ ಮರ್ಮ ಈಗ ಮಿಕದ ಅರಿವಿಗೆ ನಿಲುಕುತ್ತದೆ. ಮಿಕ ಗೊಣಗಿಕೊಂಡೇ ಚಿಲ್ಲರೆ ಹಾಗು ಬಿಲ್ ಕಟ್ಟಿದ ರಸೀದಿಯನ್ನು ಪುರಸೊತ್ತಿಲ್ಲದ ಮನುಷ್ಯ ಜೀವಿಗೆ ಹಸ್ತಾಂತರಿಸಿ ಕಾಲ್ಕೀಳುತ್ತದೆ.
ಏನಾದರೂ ಕೊಳ್ಳಲು ಅಂಗಡಿಗೆ ಹೋದ್ರೆ ಅಲ್ಲೂ ಅರ್ಜಂಟ್ ಗಿರಾಕಿಗಳ ಕಾರುಬಾರು ಶುರುವಾಗುತ್ತದೆ. ‘ಅರ್ಜಂಟಾಗಿ ಎಲ್ಲಿಗೋ ಹೋಗ್ಬೇಕು, ಬೇಗ್ಬೇಗ ಕೊಡ್ರಿ’ ಅನ್ನುವ ಡೈಲಾಗ್ ಅವರ ಬಾಯಿಯಿಂದ ಹೊರ ಹೊಮ್ಮುತ್ತದೆ.
ಈ ಪುರಸೊತ್ತಿಲ್ಲದ ಮನುಷ್ಯ ಜೀವಿಗಳನ್ನು ಕಂಡರೆ ಒಮ್ಮೊಮ್ಮೆ ನಗು ಬಂದರೆ, ಕೆಲವೊಮ್ಮೆ ಕೋಪವೂ ಪುಟಿದೇಳುತ್ತದೆ. ಇವರಿಂದಾಗಿ ನೇರಾನೇರ ಕಿರಿಕಿರಿ ಅನುಭವಿಸಿದರೆ ಸಿಡಿದೇಳುವ ಸರದಿ ನಮ್ಮದಾಗುತ್ತದೆ.
ಕ್ಷೌರ ಮಾಡಿಸಿಕೊಳ್ಳುವುದು, ಕರೆಂಟ್ ಬಿಲ್ ಕಟ್ಟುವುದು, ವಸ್ತು ಕೊಳ್ಳುವುದು ಪುರಸೊತ್ತಿಲ್ಲದ ಸಂದರ್ಭದಲ್ಲಿ ಮಾಡಬೇಕಾದ ಕಸುಬುಗಳಲ್ಲ ಎನ್ನುವ ಸಂಗತಿ ಎಲ್ಲರಿಗೂ ಗೊತ್ತು. ಪುರಸೊತ್ತಿದೆ ಎನ್ನುವ ಕಾರಣಕ್ಕಾಗಿಯೇ ಇಂತಹ ಘನಂದಾರಿ ಕಾರ್ಯಗಳನ್ನು ನಾವೆಲ್ಲ ಕೈಗೊಳ್ಳುತ್ತೇವೆ. ‘ಪುರಸೊತ್ತಿಲ್ಲ’ವೆಂದು ಬಿಲ್ಡಪ್ ಕೊಡುವ ಮಂದಿಯೂ ಪುರಸೊತ್ತು ಮಾಡಿಕೊಂಡೇ ಕ್ಷೌರದಂಗಡಿಯ ಕಡೆಗೆ ಸುಳಿಯುತ್ತಾರೆ. ಆದರೂ ‘ನಾವು ಫುಲ್ ಬ್ಯುಸಿ ಸ್ವಾಮಿ’ ಅಂತ ಬೂಸಿ ಬಿಡುತ್ತಾರೆ.
ಒಮ್ಮೆ ಹಿಟ್ಟು ಬಿಡಿಸಿಕೊಂಡು ಬರುವ ಸಲುವಾಗಿ ಗಿರಣಿಗೆ ಹೋಗಿದ್ದೆ. ಆ ಸಂದರ್ಭದಲ್ಲಿ ಅಲ್ಲಿಗೆ ಯಾರೂ ಬಂದಿರಲಿಲ್ಲ. ಇದ್ದಕ್ಕಿದ್ದಂತೆಯೇ ಅರವತ್ತರ ಆಸುಪಾಸಿನ ವ್ಯಕ್ತಿಯೊಬ್ಬರು ಬೈಕ್ನಲ್ಲಿ ಅಲ್ಲಿಗೆ ಬಂದರು. ಗಿರಣಿಯ ಮಾಲಿಕ ನನಗಿಂತಲೂ ತಡವಾಗಿ ಬಂದ ಅವರಿಗೆ ಮೊದಲು ಹಿಟ್ಟು ಬಿಟ್ಟುಕೊಟ್ಟರು. ಅಸಮಾಧಾನಗೊಂಡ ನಾನು, ‘ಮೊದ್ಲು ಬಂದಿದ್ದು ನಾನಲ್ವ’ ಅಂದೆ. ಅದಕ್ಕವರು, ‘ನೀನು ಅದ್ಹೆಂಗಯ್ಯ ಮೊದ್ಲು ಬಂದೆ? ಅವ್ರು ಇಲ್ಲಿಗೆ ಬಂದಾಗ ನೀನಿನ್ನೂ ಹುಟ್ಟಿಯೇ ಇರಲಿಲ್ಲ’ ಎಂದು ಛೇಡಿಸಿದರು. ಅವರ ಮಾತಿನ ಅರ್ಥ ಗೊತ್ತಾಗದೆ ಕೆಲ ಕಾಲ ಪೆಚ್ಚು ಮೋರೆ ಹಾಕಿಕೊಂಡೆ. ಸ್ವಯಂಘೋಷಿತ ಟ್ಯೂಬ್ಲೈಟಾದ ನನಗೆ ಕೊನೆಗೂ ಅವರ ಮಾತಿನ ಒಳಾರ್ಥ ಏನೆಂದು ತಿಳಿಯಿತು. ‘ಭೂಮಿಗೆ ಮೊದಲು ಆಗಮಿಸಿದ್ದು ಯಾರಯ್ಯ’ ಎನ್ನುವುದು ಅವರ ಪ್ರಶ್ನೆಯಾಗಿತ್ತು.






0 Comments