ಚಿಕ್ಕಮಗಳೂರು ಕನ್ನಡ ಸಾಹಿತ್ಯ ಸಮ್ಮೇಳನ ವಿವಾದಕ್ಕೀಡಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ನಿಲುವು ಚರ್ಚೆಗೆ ಒಳಗಾಗಿದೆ.
ಈ ಹಿನ್ನೆಲೆಯಲ್ಲಿ ‘ಅವಧಿ’ಯಲ್ಲಿ ಹಲವು ಲೇಖನ ಪ್ರಕಟವಾಗಿದ್ದು ಚಿಕ್ಕಮಗಳೂರಿನವರೇ ಆದ ಹಿರಿಯ ಪತ್ರಕರ್ತ ಕಂಕ ಮೂರ್ತಿ ಅವರ ನೋಟ ಇಲ್ಲಿದೆ.
ಕಂಕ ಮೂರ್ತಿ
# ಕಲ್ಕುಳಿ ಅವರನ್ನು ನಾನು 83 ರಿಂದ ಬಲ್ಲೆ. ಕೊಪ್ಪದಲ್ಲಿ ಸಿರಿಮನೆ ಆರಂಭಿಸಿದ್ದ ವಾರಪತ್ರಿಕೆಗೆ ಅವರು ಶೃಂಗೇರಿಯಿಂದ ಬರೀತಿದ್ರು. ಕೊಪ್ಪ ಕಾಲೇಜ್ ಯೂನಿಯನ್ ಲೀಡರ್ ಆಗಿದ್ದ ನಾನೂ ಬರೀತಿದ್ದೆ. ಅವರು ಆಗಾಗ ಕೊಡುತ್ತಿದ್ದ ಸ್ವಲ್ಪ ಹಣ ನನ್ನ ಹೊಟ್ಟೆಯ ಹಸಿವನ್ನು ಇಂಗಿಸ್ತಾ ಇತ್ತು. ಅಷ್ಟಕ್ಕಾಗಿ ನಾನು ಈಗಲೂ ಅವರಿಗೆ ಕ್ರತಜ್ಞ. ನಂತರ ನಾನು ಕಮ್ಯುನಿಸ್ಟರ ಸಂಪರ್ಕಕ್ಕೆ ಸಿಕ್ಕ ನಂತರ ಅವರಿಂದ ದೂರವಾದೆ.
# ಕಲ್ಕುಳಿ ಮಲೆನಾಡಿನ ಸಮಸ್ಯೆಗಳ ಹೋರಾಟದಲ್ಲಿ ತೊಡಗಿಸಿಕೊಂಡರು. ‘ತುಂಗಾ ಉಳಿಸಿ’ ಅದರಲ್ಲಿ ಪ್ರಮುಖವಾದದು. ಆದರೆ ಅದು ಬೇರೆ ಧಾರೆಗೆ ಅವಕಾಶ ನೀಡಿತು ಎಂಬ ವಿವಾದಕ್ಕೆ ನಾನು ಹೋಗಲಾರೆ. ತುಂಗೆಯ ರಕ್ಷಣೆಯಲ್ಲಿ ಆ ಹೋರಾಟ ಪ್ರಮುಖವಾಗಿತ್ತು ಎನ್ನುವುದು ನಿಜ.
# ಅದೇ ಸಂದರ್ಭದಲ್ಲಿ ಮಲೆನಾಡನ್ನೇ ನೋಡದಿದ್ದ ಬೆಂಗಳೂರಿನ ಕೆಲವು ಅವಿವೇಕಿಗಳು ಮಲೆನಾಡಿನಲ್ಲಿ ರೈತರರಿಂದ ಭಾರೀ ಶೋಷಣೆ ನಡೆಯುತ್ತಿದೆ ಎಂದು ಹುಯಿಲೆಬ್ಬಿಸಿ ನಕ್ಸಲರನ್ನ ಅಪರೋಕ್ಷವಾಗಿ ಬೆಂಬಲಿಸತೊಡಗಿದಾಗ ಮಲೆನಾಡಿನವರೇ ಆದ ನಾವು ಕೆಲವರು ಆ ಮಿಥ್ಯೆಯನ್ನು ಬದಿಗೆ ಸರಿಸಲು ಸ್ವಲ್ಪ ಮಟ್ಟಿಗೆ ಯತ್ನಿಸಿದೆವು. ರೈತರು, ದಲಿತ ಮುಖಂಡರ ನಿಯೋಗ ಅಲ್ಲಿಗೆ ತೆರಳಿ ಎರಡು ದಿನ ಅಧ್ಯಯನ ಮಾಡಿ ರೈತರ ಸ್ಥಿತಿಗತಿ ಬಗ್ಗೆ ಅಂದಿನ ಧರಂ ಸಿಂಗ್ ವಿವರವಾದ ವರದಿ ಸಲ್ಲಿಸಿತು.
ಅದಿರಲಿ…
# ಸಾಹಿತ್ಯ ಸಮ್ಮೇಳನದ ವಿಷಯಕ್ಕೆ ಬಂದರೆ ಅಪ್ಪಟ ಸಾಹಿತಿಗಳೇ ಅದರ ಅಧ್ಯಕ್ಷರಾಗಬೇಕು ಹಾಗೆ ಆಯ್ಕೆ ಮಾಡುವಾಗ ಅವರ ಸಾಹಿತ್ಯ ಕೃಷಿ ಆಧರಿಸಿ ಹಿರಿತನದ ಆಧಾರದ ಮೇಲೆ ಆಯ್ಕೆ ಮಾಡಬೇಕು ಎನ್ನುವುದು ನನ್ನ ಸಾಮಾನ್ಯ ತಿಳುವಳಿಕೆ. ತಪ್ಪಿದ್ದರೆ ಕ್ಷಮಿಸಿ. ಪ್ರಮುಖವಾಗಿ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಕಲ್ಕುಳಿ ಕೇವಲ ಒಂದು ಕೃತಿ ಬರೆದಿದ್ದಾರೆ ಎನ್ನುವುದು ನನ್ನ ತಿಳುವಳಿಕೆ.
# ನಾನು ಬಲ್ಲಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿಯೇ ಗುರಿತಿಸಿಕೊಂಡು ಕೃಷಿ ಮಾಡಿದ ಹಿರಿಯರು ಬಹಳ ಮಂದಿ ಇದ್ದಾರೆ. ಬೆಳವಾಡಿ ಮಂಜುನಾಥ್, ಪ್ರಖರ ಚಿಂತಕ ಎಚ್.ಎಂ.ರುದ್ರಸ್ವಾಮಿ. ಬಿ.ಎಂ.ಪುಟ್ಟಯ್ಯ ಇತ್ಯಾದಿ.
# ನನಗೆ ಬಂದ ಮಾಹಿತಿಯಂತೆ ಬಿಎಂ ಪುಟ್ಡಯ್ಯ ಹೆಸರ ಪ್ರಸ್ತಾವನೆ ಬಂತಂತೆ. ಪುಟ್ಡಯ್ಯ ಅವರನ್ನು ನಾನು ಅವರ ಕಾಲೇಜು ದಿನಗಳಿಂದ ಬಲ್ಲೆ. ಕಡುಕಷ್ಟದಲ್ಲಿ ಬೆಳೆದವರು. ಚಿಕ್ಕಮಗಳೂರಿನ ಮಾರ್ಕೇಟ್ ರಸ್ತೆಯಲ್ಲಿ ಅವರ ಹಾಸ್ಟೆಲ್ ಒಂದು ಕೊಂಪೆಯಂತೆ ಇತ್ತು. ನಾನು ‘ಗಿರಿ ವಾರ್ತೆ’ ಪತ್ರಿಕೆಯಲ್ಲಿ ವರದಿ ಮಾಡಿದೆ. ಮರುದಿನ ಒಂದು ಚಳವಳಿ ಕೂಡ ನಡೆಸಿದೆವು. ಕಷ್ಟದಿಂದ ಬೆಳೆದ ಪುಟ್ಟಯ್ಯ ಇಂದು ದೊಡ್ಡ ಹೆಸರು. ಪ್ರಬಲ ದಲಿತ ಚಿಂತಕ. ಹತ್ತಾರು ಪುಸ್ತಕ ಬರೆದಿದ್ದಾರೆ. ಮೂಡಿಗೆರೆಯವರು. ಮೂಡಿಗೆರೆಯವರಾದ ಕುಂದೂರ್ ಅಶೋಕ್ ಇದನ್ನು ಏಕೆ ಗಮನಿಸಲಿಲ್ಲ. ಬೇಕಂತಲೇ ಅವರ ಹೆಸರನ್ನು ಬದಿಗೆ ಸರಿಸಲಾಯಿತೆ? ಇದರ ಹಿಂದೆ ಯಾವ ಪಟ್ಟಭದ್ರ ಹಿತಾಸಕ್ತಿ ಕೆಲಸ ಮಾಡಿದೆ ಎನ್ನುವುದು ನನ್ನ ಪ್ರಶ್ನೆ.
# ಪುಟ್ಟಯ್ಯ ಅಥವಾ ಹಿರಿಯ ಸಾಹಿತಿಯೊಬ್ಬರನ್ನು ಆಯ್ಕೆ ಮಾಡಿ, ಕಲ್ಕುಳಿ ಅಂತಹ ಚಳವಳಿಗಾರರನ್ನು ವಿಚಾರ ಸಂಕಿರಣಕ್ಕೆ ಆಹ್ವಾನಿಸಿದ್ದರೆ ವಿವಾದ ಆಗುತ್ತಿರಲಿಲ್ಲವೇನೋ?
# ನಾಯಕತ್ವ ಜನ ಸಮುದಾಯದಿಂದ ಹುಟ್ಡುತ್ತದೆ. ಸಾಹಿತ್ಯ ಅಂತರಂಗದಿಂದ ಅರಳುತ್ತದೆ. ಡೋಲು ಭಾರಿಸುವರಿಂದ ಕೇವಲ ಭ್ರಮೆ ಸೃಷ್ಡಿ ಆಗುತ್ತದೆ.
# ಅಂತಿಮವಾಗಿ, ತೀರ್ಮಾನವನ್ನು ಜನರಿಗೆ ಬಿಡಬೇಕು. ಒಂದು ಕಾರಣ ಇಟ್ಟುಕೊಂಡು ಸಮ್ಮೇಳನ ನಿಲ್ಲಿಸುವವರು ನಾಳೆ ಹೀಗಿಯೇ ಬರೆಯಿರಿ ಎಂದು ಹುಕುಂ ಹೊರಡಿಸಬಹುದು.
0 ಪ್ರತಿಕ್ರಿಯೆಗಳು