ಒಂದು ಚಾರಣದ ಕಥೆ
ಪಲ್ಲವಿ ರಾವ್
ಅದೇನೋ ನನ್ನ ಪಾಲಿಗೆ ಪ್ರವಾಸವೆಂದರೆ ಹಿಮಾಲಯ.ಮೈ ಕೊರೆಯುವ ಚಳಿ, ಆಗಸಕ್ಕೆ ಮುತ್ತಿಕ್ಕುವ ಶಿಖರಗಳು,ಅಮ್ಮನ ಬೈಗುಳದಂತೆ ಚೂರೇ ಚೂರು ಮೈ ಬೆಚ್ಚಗಾಗುವುದರಲ್ಲಿ ತಂಪಿನಿಂದ ಮೈ ನೇವರಿಸುವ ಸೂರ್ಯ,ಶಿಸ್ತಿನ ಕವಾಯಿತು ನಡೆಸುವಂತೆ ತೋರುವ ಪೈನ್ ಮರಗಳು,ಕಾಲಕೆಳಗಿನ ಹೂವಿನ ಚಾದರ,ನನ್ನ ಪಾಲಿಗೆ ಕಾಲ ನಿಂತುಬಿಡುವುದು ಹಿಮಾಲಯದ ಪುಟ್ಟ ಪುಟ್ಟ ಹಳ್ಳಿಗಳಲ್ಲಿ.ದೂರದ ಹಿಮಾಲಯಕ್ಕೆ ನೀಡುವ ಭೇಟಿಗಳುವರುಷವಿಡೀ ಬೆಂಗಳೂರನ್ನು ಸಹಿಸಿಕೊಳ್ಳುವ ಶಕ್ತಿ ಕೊಡುವುದಂತೂ ಸುಳ್ಳಲ್ಲ.ಮೈಮನಸ್ಸುಗಳ ಕೊಳೆಯೆಲ್ಲಾ ತೊಳೆದುಹೋಗುವಂತೆ,ಹಿಮಶಿಖರಗಳ ತಪ್ಪಲಿನ ಶುಧ್ದ ಗಾಳಿಗೆ ತೆರೆದುಕೊಂಡು,ಕರೆಂಟು-ಫೋನೂ ಒಂದೂ ಇಲ್ಲದ ಹಳ್ಳಿಗಳಲ್ಲಿ,ರಾತ್ರಿ ನಕ್ಷತ್ರ ಎಣಿಸುತ್ತ,ಹೊದ್ದ ಭಾರದ ಹೊದಿಕೆಯಿಂದ ಮುಖವೆತ್ತಿದರೆ ಟೆಂಟಿನಾಚೆ ಕಾಣುವ “ಇಲ್ಲೇ ಇದೀನಿ ಮಲ್ಗವ್ವ,ಬೆಳಿಗ್ಗೇನೂ ಇಲ್ಲೇ ಇರ್ತೀನಿ ಅನ್ನುವ ಬೆಳ್ಳನೆ ಶಿಖರಗಳ ಕಲ್ಪನೆಯಲ್ಲಿಯೇ ವರುಷವಿಡೀ ಕಳೆಯುವ ನನ್ನ ನೂರೆಂಟು ರಗಳೆಗಳಿಗೆ ಕಾಟಗಳಿಗೆ,ಗಂಡನ ಉತ್ತರ ‘ಹಿಮಾಲಯದ ಹೆಸರೇ ಕೇಳದ ಪುಟ್ಟ ಊರಿನ ರಮ್ಯ ಚಿತ್ರ ಮತ್ತಲ್ಲಿಗೆ ಖಂಡಿತ ಕರೆದೊಯ್ಯುವುದಾಗಿ ಆಶ್ವಾಸನೆ.

ಇದೊಂದು ಶುಧ್ಧ ಬ್ಲಾಕ್ಮೇಲ್ ತಂತ್ರವೆಂದು ಅರಿವಿದ್ದರೂ,ಆ ಕ್ಷಣ ಗೂಗಲ್ ತೆರೆಯಲು ಓಡುವ,ಇದ್ದಬದ್ದ ಬ್ಲಾಗುಗಳಲ್ಲಿ ಹುಡುಕಾಡುವ ನನ್ನ ಸ್ವಭಾವದ ಪರಿಚಯ ಚೆನ್ನಾಗಿರುವುದರಿಂದ ನಮ್ಮ ಮನೆಯಲ್ಲಿ ಹಿಮಾಲಯ ಜಗಳಗಳನ್ನು ತಡೆಯಲು ಆಮಿಷವಾಗಿಯೂ,ಜಗಳದ ನಂತರ ತಪ್ಪೊಪ್ಪಿಗೆಯ ಕಾಣಿಕೆಯಾಗಿಯೂ,ಟಿ.ವಿ. ನೋಡುವಾಗ ಅಲ್ಲಿ ತೋರಿಸುವ ಅದ್ಯಾವುದೊ ಯದ್ವಾತದ್ವಾ ಎಕ್ಸ್ಪೆನ್ಸಿವ್ ಜಾಗಕ್ಕಿಂತ ನಾವು ನೋಡಿದ ಹಿಮಾಲಯದ ಪುಟ್ಟ ಕೆರೆ,ಕೆರೆಯಲ್ಲಿ ಕಂಡ ಶಿಖರದ ನೆನಪಾಗಿಯೂ,ವಿದೇಶಗಳನ್ನು ಸುತ್ತಿ ಬರುವ ಮಿತ್ರರೆದುರು ಫೋಟೋಗಳನ್ನಿಟ್ಟು ನಾವೇನೂ ಕಡಿಮೆ ಇಲ್ಲ ಎನ್ನುವ ತಂತ್ರವಾಗಿಯೂ,ಸುಖಾಸುಮ್ಮನೆ ದುಡ್ಡು ಸುರಿದು ಕೊಂಡ ಕೇಜಿ ಭಾರದ ಹೊಸ ಜಾಕೆಟ್ಟಿನ ಸಮರ್ಥನೆಯ ಮಂತ್ರವಾಗಿಯೂ ಬಳಕೆಯಾಗುತ್ತಿರುತ್ತದೆ.ಇಂತಹ ಹಿಮಾಲಯದ ಹುಚ್ಚಿನ ನಮಗೆ ಉತ್ತರಾಂಚಲದ ಜಿಲ್ಲೆಯೊಂದರಲ್ಲಿ ಜಿಲ್ಲಾಧಿಕಾರಿಯಾಗಿರುವ ಅಪ್ಪಟ ಕನ್ನಡತಿ ಗೆಳತಿ ಸೌಜನ್ಯಳಿಂದ ಅವಳೂರಿನ ಶಿಖರಗಳನ್ನು ನೋಡಲು ಬರುವಂತೆ ಆಹ್ವಾನ ಬಂದಾಗ ಮನೆಯೆಲ್ಲ ಕುಣಿದಾಡುವ ಖುಷಿ.

ಜಾಕೆಟ್-ಸ್ವೆಟರ್ಗಳಿಂದ ಬಿರಿಯುತ್ತಿದ್ದ ಸೂಟ್ಕೇಸುಗಳಿಗೆ ಬೀಗ ಜಡಿದು, ಚಾರಣಕ್ಕೆಂದೇ ಕೊಂಡ ಶೂಸುಗಳಿಗೆ ಲೇಸು ಬಿಗಿದು, ಪುಟ್ಟ ಮಗಳನ್ನು ಅಮ್ಮನ ಮಡಿಲಲ್ಲಿರಿಸಿ, ನೆಟ್ವರ್ಕ್ ಸಿಕ್ಕರೆ ಪೋನ್ ಮಾಡುತ್ತೇನೆ ಅಂತ ಹೇಳಿ ದೆಹಲಿ ಸೇರಿದಾಗ ,ಧಗಧಗ ಉರಿಯುವ ಮೇ ತಿಂಗಳ ಸೂರ್ಯ. ಅಲ್ಲಿಯೇ ಓದಿ, ಕೆಲಸವನ್ನೂ ಮಾಡಿದ ನನಗೆ ದೆಹಲಿಯ ಉರಿ ಸೆಖೆ,ಸೆಖೆಯನ್ನೂ ಮೀರಿಸುವಂತೆ ಮೈ ಉರಿಸುವ ಸಾರಾಸಗಟು ‘ಮದ್ರಾಸೀ ಟ್ಯಾಗು’ ಎಲ್ಲವುದರಿಂದ ದೆಹಲಿ ಅಂದರೆ ನನ್ನ ಮತ್ತು ಹಿಮಾಲಯದ ಮಧ್ಯೆ ಇರುವ ಅನಿವಾರ್ಯ ವಿರಹ. ಅಂತೂ ಡೆಹ್ರಾಡೂನಿಗೆ ಹೋಗುವ ಪುಟ್ಟ ವಿಮಾನವೇರಿದಾಗ,ಪಕ್ಕದಲ್ಲೇ ಪತಿಯಿದ್ದರೂ ಅವನು ಬರೀ ಪ್ರಿಯನಾಗಿದ್ದಾಗ ಅವನನ್ನು ನೋಡುವಾಗ ಆಗುತ್ತಿದ್ದ ವಿಚಿತ್ರ ಪುಳಕ!! ಕಾರಣ ಮಾತ್ರ, ಹಿಮಶಿಖರಗಳ ಕನಸು. ಕಂಡಕಂಡಲ್ಲಿ ನನ್ನದೇ ಲೋಕದಲ್ಲಿ ಕಂಪ್ಲೀಟ್ ಆಗಿ ಕಳೆದುಹೋಗಬಲ್ಲ ನನ್ನ ಅಪಾರ ಸಾಮರ್ಥ್ಯದ ಅರಿವಿರುವ ಪತಿರಾಯ ಅಪ್ಪಟ ಪ್ರಿಯಕರನಂತೆ ಕೈ ಅದುಮಿದ.
ನನ್ನೆಲ್ಲ ಕನಸುಗಳ ಆಂಟಿ ಥೀಸಿಸ್ನಂತೆ ಉರಿಯುತ್ತಿತ್ತು ನಮ್ಮ ಮೊದಲ ಸ್ಟಾಪ್ ಹೃಷಿಕೇಷ. ಮಂದಾಕಿನಿಯ ಮಡಿಲಲ್ಲಿದ್ದರೂಹೃಷಿಕೇಷದ ತುಂಬ ಧರ್ಮದ ಧಗೆ, ಸುಡು ಬಿಸಿಲಿನ ಬೇಗೆ. ನೂರೆಂಟು ಆಶ್ರಮಗಳು, ಜೇಬಲ್ಲಿರುವ ಕನಸಿಗನುಗುಣವಾಗಿ ಕೈವಲ್ಯ ತೋರುವ ಬಾಬಾಗಳು, ಭಾರತದ ಆಧ್ಯಾತ್ಮದ ಬಗ್ಗೆ ಭಯಂಕರ ರೊಮ್ಯಾಂಟಿಕ್ ಕಲ್ಪನೆಗಳನ್ನಿರಿಸಿಕೊಂಡು ಸ್ಪಿರಿಚ್ಯುಯಲ್ ಟೌಟ್ಗಳ ಕೈಗೆ ಸಿಕ್ಕಿ ಆತ್ಮ ಮತ್ತು ಸಮ್ಮಾನ ಎರಡನ್ನೂ ಕಳೆದುಕೊಂಡಂತೆ ತೋರುತ್ತಿದ್ದ ಕೇಸರಿಧಾರಿ ಫಿರಂಗಿಗಳು, ಎಲ್ಲರ, ಎಲ್ಲವುದರ ಪಾಪ ತೊಳೆಯುತ್ತ ಸೊರಗಿದ ದೇವಗಂಗೆ. ಯಾಕೋ ಗಂಗೆಯ ತಂಪುನೀರೊಂದನ್ನು ಬಿಟ್ಟರೆ, ಹೃಷಿಕೇಷದ ನೆಲ ಗಾಳಿ ಜನ ಎಲ್ಲವೂ ನಮ್ಮ ಕಾರ್ಕಳ ಮಂಗಳೂರಿನಂತೆ ಬೆವರಿಳಿಸುತ್ತಿತ್ತು. ಗೆಸ್ಟ್ಹೌಸಿನ ಕೆಳಗೇ ಹರಿಯುತ್ತಿದ್ದ ಗಂಗೆಯಾಗಲೀ, ಬರಿ ಕಾಲಿನಲ್ಲಿ ನಡೆಯಲು ಆಹ್ವಾನಿಸುತ್ತಿದ್ದ ಬೆಳ್ಳನೆಯ ಮರಳಾಗಲೀ ನನ್ನಲ್ಲಿ ಗೆಲುವು ತುಂಬಲು ಶಕ್ಯವಾಗಲಿಲ್ಲ.ನನ್ನ ಸಪ್ಪೆಮುಖ ನೋಡಿಸಂಜೆ ಗಂಗೆಯಲ್ಲಿ ರಾಫ್ಟಿಂಗ್ಗೆ ಕರೆದೊಯ್ಯುವುದಾಗಿಯೂ, ಅದು ಅತಿ ದೊಡ್ಡ ಮತ್ತು ದೂರದ ರಾಫ್ಟಿಂಗ್ ಎಂದೂ ಸಮಾಧಾನಿಸಲು ನನ್ನವನು ಪ್ರಯತ್ನಿಸಿದ. ಉಹುಂ ಯಾಕೋ ಓಕ್ ಮರಗಳೂ, ಹಳದಿ ಹೂಗಳೂ, ಮೋಡದ ಮರೆಯಲ್ಲಿ ಕಣ್ಣು ಮಿಟುಕಿಸುವ ಅಚ್ಚ ಬಿಳಿಯ ಬೆಟ್ಟಗಳೂ ಇದ್ದರೆ ಮಾತ್ರ ಹಿಮಾಲಯ ಎಂದು ಗಟ್ಟಿಯಾಗಿ ನಂಬಿದ ನನ್ನ ಚೇತನಕ್ಕೆ, ಹೃಷಿಕೇಷದ ಧಗೆ, ಜನ ಅಕಸ್ಮಾತ್ ಇರುವುದೇ ನಿಜವಾದರೆ ಅವನಿರಲು ಸರಿಯಾದ ಮನೆ ಹಿಮಾಲಯವೇ ಎಂದು ನಂಬಿರುವ ನನ್ನನಂಬಿಕೆಗಳನ್ನೇ ಗೇಲಿ ಮಾಡಲು ಹೊರಟವರಂತೆ ಹೃಷಿಕೇಷದ ಉದ್ದಗಲಕ್ಕೂ ಕತ್ತಲು-ಕೊಳೆ ತುಂಬಿದ ಮಂದಿರಗಳಲ್ಲಿ ವಾಸ ಮಾಡಲು ಬಂದಿರುವ ಹರಿಹರಾದಿಗಳು ಎಲ್ಲವೂ ಅಸಹನೆ ಮೂಡಿಸತೊಡಗಿತು.

ಈ ಅಸಹನೆಯ ದೆಸೆಯಿಂದಲೇ ಸುಮಾರು 24 ಕಿಲೋಮೀಟರಿನಷ್ಟು ದೂರಕ್ಕೆ ಗಂಗೆಯ ರುದ್ರರಮಣೀಯ ಬಾಗುಬಳುಕುಗಳಲ್ಲಿ ಕರೆದೊಯ್ಯುವ ರಾಫ್ಟಿಂಗ್ ಕೂಡಾ ಮನಸ್ಸಿನಲ್ಲಿ ಅಷ್ಟು ಅದ್ಭುತವಾಗಿ ದಾಖಲಾಗಲಿಲ್ಲ. ಅಷ್ಟೇನೂ ಚೆನ್ನಾಗಿ ಈಜಲು ಬಾರದ ನನ್ನ ಭಯ, ಇದೀಗ ಬಾಯ್ತೆರೆದು ನಮ್ಮನ್ನು ದೋಣಿಯ ಸಮೇತ ಆಪೋಷನ ತೆಗೆದುಕೊಳ್ಳುವ ಎತ್ತರದ ರಿಪಲ್ಸ್ಗಳೂ,ಅದನ್ನು ಅನುಭವಿಸುವುದೇ ಬದುಕಿನ ಪರಮೋಚ್ಚ ಗುರಿಯೆನ್ನುವಂತೆ ಕಿರಿಚಾಡುತ್ತಿದ್ದ ಜನರೂ ಎಲ್ಲವುದರ ಬಗ್ಗೆ ಅರ್ಥಹೀನ ಇರಿಟೇಷನ್ ಶುರುವಾಯಿತು. ಎಷ್ಟರಮಟ್ಟಿಗೆ ಅಂದ್ರೆ ಇಳಿಯುತ್ತಿದ್ದಂತೆ ಜೀವದಾಯಿನಿ, ಮಾಯಿ, ದೇವತೆ ಅಂತೆಲ್ಲ ಕರೆಸಿಕೊಳ್ಳುವ ಗಂಗಮ್ಮ ಅಮ್ಮನಂತೆ ತಣ್ಣಗೆ ಜುಳುಜುಳು ಹರಿಯುವುದು ಬಿಟ್ಟು, ನುಂಗಲು ಬಾಯಿತೆರೆದು ಕುಳಿತ ಮಾರಮ್ಮನ ಅವತಾರದಲ್ಲಿ ಹಾಗೆಲ್ಲ ಯದ್ವಾತದ್ವಾ ಹರಿಯುವುದೇ ಅಪರಾಧವೆಂದೂ, ಅವಳು ಹಾಗೆಲ್ಲ ಹರಿಯುವುದರಿಂದಲೇ ಮಂಗ ಮಾನವರಿಗೆ ರಾಫ್ಟಿಂಗ್ನಂತಹ ಸೂಯಿಸೈಡಲ್ ಐಡಿಯಾಗಳು ಬರುತ್ತವೆಂದೂ ಅಸಂಬಧ್ಧವಾಗಿ ಗೊಣಗಲಾರಂಭಿಸಿದೆ.ಕಂಗಾಲಾದ ಪತಿರಾಯ ಫೋನ್ ಹಿಡಿದು ಹೊರ ನಡೆದರೆ, ನಾನು ರಾಫ್ಟಿಂಗ್ನಿಂದ ಒದ್ದೆಯಾದ ಬಟ್ಟೆ ಬದಲಿಸಲೂ ಮನಸ್ಸಿಲ್ಲದೆ, ಒದ್ದೆಮರಳಿನಿಂದ ಚುಚ್ಚುತ್ತಿದ್ದ ಬಟ್ಟೆಯಲ್ಲೇ ಇರಲೂ ಮನಸ್ಸಾಗದೆ,ಕಾಡುವ ಸೆಖೆ,ಕಾಣದ ಹಿಮ,ಭಾರೀ ತೂಕದ ಸೂಟ್ಕೆಸಿನ ಹೊಟ್ಟೆ ಬಗೆದರೂ ಸಿಗದ ಸಿಂಪಲ್ ಹತ್ತಿಯ ಬಟ್ಟೆಗಳು, ಎಲ್ಲಾ ಅಸಹನೆಯನ್ನೂ ಸೂತ್ರಬಧ್ಧವಾಗಿ ಹೊರಹಾಕಲೂ ತಿಳಿಯದ ನನ್ನ ಭಾಷಾಬಡತನ ಎಲ್ಲವುದರಿಂದ ಥೇಟು ಕಿರಗೂರಿನ ದಾನಮ್ಮ ಅವತಾರ ತಳೆದಿದ್ದಂತೂ ಸುಳ್ಳಲ್ಲ.

ಮರುದಿನ ಅಂಟುವ ಸೆಕೆಗೆ ಬೇಡವೇ ಬೇಡ ಎಂದು ನಿರಾಕರಿಸುತ್ತಿದ್ದ ಕಾಲಿಗೆ ಬುದ್ಧಿಹೇಳಿ,ಜೀನ್ಸ್ ತೊಡಿಸಿ, ಹುಡುಕಿ ಹುಡುಕಿ ಇದ್ದಿದ್ದರಲ್ಲೇ ತೆಳು ಅನಿಸಿದ ತುಂಬು ಕೈನ ಟೀಷರ್ಟ್ ತೊಟ್ಟು,ಮುಂದಿನ ಪಯಣಕ್ಕೆ ಕಾರೊಳಗೆ ಲಗೇಜ್ ತುಂಬುತ್ತಿದ್ದ ನನ್ನ ನೋಡಿ ಕಿರಿ ಚಡ್ಡಿ, ತೋಳಿಲ್ಲದ ಅಂಗಿ ತೊಟ್ಟು ಅಲ್ಲೇ ಅಲೆದಾಡುತ್ತಿದ್ದ ವಿದೇಶಿ ಜೋಡಿಯೊಂದು ಮುಗುಳ್ನಗೆ ಬೀರಿತು.ಬಹುಷಃ ನನ್ನ ವೇಷ ಅವರ ಕಣ್ಣಿಗೆ ಅಪ್ಗಾನಿಸ್ಥಾನದ ಕಡು ಧಗೆಯಲ್ಲಿಯೂ ಮೈಮುಚ್ಚಿ ಬಟ್ಟೆ ಧರಿಸಿ,ನಡೆದಾಡುವ ಹೆಂಗಳೆಯರಂತೆಯೇ ಕಂಡಿರಬಹುದು. ಮುಗುಳ್ನಕ್ಕಿದ್ದರೆ ,ಅವರಿಗೂ ಮಾತನಾಡುವ ಕಾರಣ ಕೇಳುವ ಹುಕಿಯಿತ್ತೇನೋ, ಮಾಮೂಲಾಗಿದ್ದರೆ ನಕ್ಕು ಮಾತಾಡಿಸಿ ಪೂರ್ವಾಪರಗಳನ್ನೆಲ್ಲ ವಿಚಾರಿಸುತ್ತಿದ್ದ ನನಗೆ ಅಂದು ಮಾತ್ರ ಅವರ ನಗು ನನ್ನ ಪೆದ್ದುತನವನ್ನೂ, ಆಗಲೆ ನೀರಿಳಿಯುತ್ತಿದ್ದ ಮುಖವನ್ನೂ ಹಂಗಿಸಿದಂತೆನ್ನಿಸಿ , ಮುಗುಮ್ಮಾಗಿಯೇ ಕೆಲಸ ಮುಂದುವರೆಸಿದೆ.ಮುಗುಳ್ನಗಲೂ ಬಾರದ ಮುಷುಂಡಿಯೆಂದುಕೊಂಡರೇನೊ, ಮುಂದೆ ಹೋದರು. ಛೆ, ವಿದೇಶೀಯರೆದುರು ಭವ್ಯ ಭಾರತದ ಫ್ರೆಂಡ್ಲಿ ಇಮೇಜ್ ಹಾಳು ಮಾಡಿದ ಗಿಲ್ಟ್ ಕಾಡಿತಾದರೂ, ಹ್ಯಾಗ್ಯಾಗೋ ದೇಶದ ಮರ್ಯಾದೆ ತೆಗೆಯುವ ಮಹಾನುಭಾವರೆದುರು ನನ್ನ ತಪ್ಪು ನಗಣ್ಯ ತಾಯಿ ಭಾರತಿ ಕ್ಷಮಿಸುತ್ತಾಳೆ ಹ್ಯಾಗೂ ತಾಯಿ ತಾನೆ ಅಂತ ಸಮಾಧಾನ ಮಾಡಿಕೊಂಡೆ.

ಹೃಷಿಕೇಷ ದೂರವಾದಂತೆ,ನನ್ನ ಮೂಡೂ ತಣ್ಣಗಾಗಲಾರಂಭಿಸಿತು.ಹಾಗಂತ ಸೆಕೆಯೇನೂ ಕಡಿಮೆಯಾಗಲಿಲ್ಲ. ುತ್ತರಾಂಚಲದ ಕಣಿವೆ ತಿಟ್ಟುಗಳಲ್ಲಿ, ಹೆದ್ದಾರಿ ಸುಡು ಬಿಸಿಲಿನಿಂದ ಸುಸ್ತಾದ ಹಾವಿನಂತೆ ಮಲಗಿತ್ತು.ಪ್ರಪಂಚದ ಅಂಚಿನವರೆಗೂ ಇದೆಯೇನೋ ಅನ್ನುವಂತ ಎಷ್ಟು ಸವೆಸಿದರೂ ಮುಗಿಯದ ಹಾದಿ.ಗುಡ್ಡವಿಳಿದು, ಗುಡ್ಡಹತ್ತಿ, ಮತ್ತೊಂದು ಗುಡ್ಡವಿಳಿದು ಮತ್ತೆ ಹತ್ತಿ, ಓಹ್ ನಮ್ಮ ಡ್ರೈವರ್ ಸಾಹೇಬ ಅದ್ಯಾವುದೋ ಗುಡ್ಡ ತೋರಿಸಿ, ಅದರಾಚೆಗಿನ ಗುಡ್ಡ ಇಳಿದು ಮುಂದೆ ಹೋದರೆ ನಾವು ತಲುಪಬೇಕಾದ ಜಾಗ ತಲುಪುತ್ತೇವೆ ಅನ್ನುತ್ತಿದ್ದ.ಗಗನಚುಂಬಿ ದೇವದಾರು ಓಕ್ ಮರಗಳಿರಲಿ, ಹುಲ್ಲೂ ಕಾಣಸಿಗದ ಬೋಳು ಗುಡ್ಡಗಳು, ಕಾರಿನಿಂದ ತಲೆ ಹೊರಗೆ ಹಾಕಿದರೆ ಸುಟ್ಟುಬಿಡುವುದಾಗಿ ಹೆದರಿಸುತ್ತಿದ್ದ ಕೋಪಿಷ್ಟ ಸೂರ್ಯ, ಕಿಲೋಮೀಟರುಗಳ ಕೆಳಗೆ ಆಳದಲ್ಲೆಲ್ಲೊ ಹರಿಯುವ ಗಂಗವ್ವನ ಅಕ್ಕ ತಂಗಿಯರು ಉರಿವ ಬಿಸಿಲಿಗೆ ಬಣ್ಣ ಕಳೆದುಕೊಂಡಂತೆ ತೋರುತ್ತಿದ್ದ ಪೇಲವ ಅಂಗಡಿ-ಮನೆಗಳ ಚಿಕ್ಕ ಊರುಗಳು, ಘಂಟೆಗಳು ಕಳೆದರೂ ದೃಶ್ಯಗಳು ಬದಲಾಗದೆ,ಈ ಅಂಕುಡೊಂಕಿನ ಹಾದಿಯಲ್ಲಿ ನಿರಂತರವಾಗಿ ಗುಡ್ಡ ಹತ್ತಿಳಿಯುವುದೊಂದೇ ಸತ್ಯ ಉಳಿದೆಲ್ಲ ಮಿಥ್ಯ ಅನ್ನುವಂತೆ ಕಾಲ ಸ್ಥಬ್ದವಾಗಿತ್ತು. ಉತ್ತರಾಂಚಲದ ಭಯಂಕರ ಘಾಟಿಗಳನ್ನೂ, ಚೂರೇಚೂರು ಆಯ ತಪ್ಪಿದರೂ ಶಿವನ ಕಾಲ ಬುಡಕ್ಕೇ ಸೇರಿಸಿಬಿಡಬಹುದಾದ ಭಯಂಕರ ಪ್ರಪಾತಗಳನ್ನೂ, ಆಗೀಗ ಕಾಣ ಸಿಗುವ ಕಣಿವೆಗುರುಳಿದ ದುರದೃಷ್ಟವಂತ ಕಾರು-ಬಸ್ಸು. ಟ್ರಕ್ಕುಗಳ ಪಳಯುಳಿಕೆಗಳನ್ನೂ ನೋಡಿಯೇ ಅನುಭವಿಸಬೇಕು.
ವರ್ಷವಿಡೀ, ಇಲ್ಲಿನ ಹೆದ್ದಾರಿ ನಿಗಮಕ್ಕೆ ದಾರಿಗಳನ್ನು ಸರಿಪಡಿಸುವ ಕೆಲಸ.ಪ್ರಮುಖ ಪುಣ್ಯಕ್ಷೇತ್ರಗಳಾದ ಬದರಿ, ಕೇದಾರ ಯಮುನೋತ್ರಿ, ಗಂಗೋತ್ರಿಗಳಿಗೆ ಇದೇ ಮಾರ್ಗದಿಂದ ಪ್ರಯಾಣಿಸಬೇಕು. ಅಲ್ಲದೆ, ಒಮ್ಮೆ ಇಲ್ಲಿನ ಹಿಮದೇಗುಲಗಳ ಬಾಗಿಲು ತೆರೆದರೆ ಭಾರತದ ಮೂಲೆಮೂಲೆಯಿಂದ ಶ್ರಧ್ಧಾಳುಗಳನ್ನು ಹೊತ್ತ,ವಾಹನಗಳ ದಟ್ಟಣೆ ಇಲ್ಲಿ ಶುರುವಾಗುತ್ತದೆ.ಆ ಸಮಯದಲ್ಲಿ ಪದೇ ಪದೇ ನಡೆಯುವ ಭೂಕುಸಿತ,ರಸ್ತೆಗಡ್ಡಬಿದ್ದ ಭಾರೀ ಗಾತ್ರದ ಕಲ್ಲುಮಣ್ಣಿನ ರಾಶಿಯನ್ನು ಪಕ್ಕಕ್ಕೆಸರಿಸುವ ಕೆಲಸ, ಕೆಲವೊಮ್ಮೆ ದಿನಗಟ್ಟಲೇ ತಮ್ಮ ವಾಹನಗಳಲ್ಲೇ ಕುಳಿತಿರಬೇಕಾದ ಅನಿವಾರ್ಯತೆ,ಮೈಲುದ್ದದ ವಾಹನಗಳ ಸಾಲು,ಎಲ್ಲವೂ ಸಾಮಾನ್ಯ ದೃಶ್ಯ.ಆದರೆ ನಾವು ಹೊರಟಾಗ ಇನ್ನೂ ಪ್ರವಾಸೀ ಸೀಸನ್ ಶುರುವಾಗಿರಲಿಲ್ಲ.ಸಾಮಾನ್ಯವಾಗಿ ಅಪಘಾತ ನಡೆಯುವ ಭಯವಿರುವ ತಿರುವುಗಳಲ್ಲಿ , ಬಲವಾದ ಉಕ್ಕಿನ ಕಂಬಿಗಳನ್ನು ಬಿಗಿದಿದ್ದರೂ , ಕಣಿವೆಗಳ ಆಳವನ್ನು ನೋಡಿದಾಗ ಜೀವ ಬಾಯಿಗೆ ಬರುತ್ತಿತ್ತು. ನಮ್ಮ ಚಾಲಕನಾದರೋ, ಆ ರಸ್ತೆಗಳಲ್ಲಿ ಶೂಮ್ಯಾಕರ್ನೊಂದಿಗೆ ಸ್ಪರ್ಧೆಗಿಳಿದವನಂತೆ ಯದ್ವಾ ತದ್ವಾ ವೇಗದಲ್ಲಿ ಕಾರು ಚಲಾಯಿಸುತ್ತಿದ್ದ. ಆ ವೇಗ, ಆ ತಿರುವುಗಳು, ಎದುರಿಗೆ ಇವನಂತೆಯೇ ಯಮನೊಂದಿಗೆ ಸವಾಲಿಗಿಳಿದವನಂತೆ ಬರುವ ಅತಿ ವೇಗದ ಚಾಲಕ, ಸಡನ್ ಆಗಿ ಹಾಕುತ್ತಿದ್ದ ಬ್ರೇಕ್ಗಳು, ಕೆಲವು ಕಡೆ ಇನ್ನೇನು ಪ್ರಪಾತಕ್ಕೆ ಬಿದ್ದು ಬಿಟ್ಟೆವೇನೋ ಅನ್ನುವಂತೆ ರಸ್ತೆಯಂಚಿಗೆ ಸಾಗಿ ಮತ್ತೆ ಜೀವನ್ಮುಖಿಯಾಗುತ್ತಿದ್ದ ನಮ್ಮ ಕಾರು.
ಪತಿದೇವರಿಗೆ ಕಂಪ್ಲೈಂಟ್ ಮಾಡೋಣವೆಂದರೆ ಅವರು ನೆಮ್ಮದಿಯಾಗಿ, ಚಾಲಕನೊಂದಿಗೆ ಮಾತಿಗಿಳಿದಿದ್ದರು.ನನಗೋ ಅವನ ಗಮನ ಅತ್ತಿತ್ತ ಸರಿದು, ನಾನು ಕಣಿವೆ ಸೇರುವ ಭಯ. ಪದೇಪದೇ ಕಣ್ಣು ಮುಚ್ಚುತ್ತಿದ್ದ ನನ್ನ ಆತಂಕ ಗಮನಿಸಿಸದ ಸಾಹೇಬರು ಟಿಪಿಕಲ್ ಬ್ಯೂರೋಕ್ರಾಟ್ ಶೈಲಿಯಲ್ಲಿ ಆಶ್ವಾಸನೆ ನೀಡಿಯೇ ಬಿಟ್ಟರು. “ ಹಿ ನೋಸ್ ಹಿಸ್ ಜಾಬ್, ಸೌಜನ್ಯ ಪರ್ಸನಲ್ ಡ್ರೈವರ್ ಅವನು,ನೀನು ಸ್ವಲ್ಪ ನಿದ್ರೆ ಮಾಡು !!! ನನಗೆ ಮಾತ್ರ ಹೀಗಾಗತ್ತ, ಎಲ್ಲರಿಗೂ ಆಗತ್ತ ಗೊತ್ತಿಲ್ಲ, ನನಗಂತೂ ನಾನು ನಿದ್ರಿಸದೆ ಎಚ್ಚರದಿಂದ ಇದ್ದರೆಮಾತ್ರ ನಾನು ಕುಳಿತ ವಾಹನ ಅಪಘಾತವಾಗುವುದಿಲ್ಲ ಅನ್ನುವ ನಂಬಿಕೆ . ಇದನ್ನು ಬಸ್ಸು, ಕಾರು, ದೇಶ, ವಿದೇಶ ಎನ್ನದೆ ಕಟ್ಟುನಿಟ್ಟಾಗಿ ಬೇಧಭಾವವಿಲ್ಲದೆ ಪಾಲಿಸುವ ನಾನು ಉತ್ತರಾಂಚಲದ ರಸ್ತೆಗಳಲ್ಲಿ ನಿದ್ರೆ ಮಾಡಲು ಚಾನ್ಸೇ ಇರಲಿಲ್ಲ. ಏನಾದರಾಗಲಿ ಎಂದು ಗಟ್ಟಿ ಮನಸು ಮಾಡಿಕೊಂಡು, ಸಿನೆಮದ ಸ್ಪೆಷಲ್ ಸೌಂಡ್ಎಫೆಕ್ಟಿನೊಂದಿಗೆ ಬಡಿಯುತ್ತಿದ್ದ ಹೃದಯಕ್ಕೆ ಆಲ್ ಈಸ್ ವೆಲ್ ಎಂದು ಸಮಾಧಾನ ಹೇಳಿಕೊಂಡು, ದಾರಿಯುಧ್ಧಕ್ಕೂ ಸಿಗುವ ಪ್ರಯಾಗಗಳನ್ನು ಎಣಿಸುತ್ತ, ಈ ಯಮ ಸದೃಶ ರಸ್ತೆಗಳಿಗೂ, ಲಯಕಾರಕ ಶಿವನ ಊರಿಗೆ ಇದನ್ನು ಬಳಸಿಯೇ ಹೋಗಬೇಕಾದ ಅನಿವಾರ್ಯತೆಗೂ , ಏನಾದರೂ ಸಂಬಂಧವಿದೆಯೇ ಎಂದು ಯೋಚಿಸುತ್ತಿದ್ದಂತೆಯೇ ರುದ್ರಪ್ರಯಾಗದ ಪಿಟ್ ಸ್ಟಾಪ್ ಬಂದಿತ್ತು.
ತೀರ್ಥಯಾತ್ರಿಗಳಿಗೆ ರುದ್ರಪ್ರಯಾಗ ಪ್ರಮುಖ ಹಾಲ್ಟಿಂಗ್ ಪಾಯಿಂಟ್. ಇಲ್ಲಿಂದಲೇ ರಸ್ತೆಗಳು ಬದರಿ ಮತ್ತು ಕೇದಾರದೆಡೆಗೆ ಕವಲೊಡೆಯುತ್ತವೆ.ಸಾಮಾನ್ಯವಾಗಿ ಪ್ರವಾಸಿಗರು ತಮ್ಮಹೆಚ್ಚಿನ ಲಗೇಜುಗಳನ್ನು ಇಲ್ಲಿಯೇ ಇರಿಸಿ,ಬದರಿ ಅಥವಾ ಕೇದಾರಕ್ಕೆ ತೆರಳುತ್ತಾರೆ. ಆಫ್ ಸೀಸನ್ ಆದ್ದರಿಂದ ಪ್ರವಾಸಿಗರಿಲ್ಲದೆ ಬಣಗುಡುತ್ತಿದ್ದ ಈ ಧೂಳೀಕೃತ ಜಿಲ್ಲಾಕೇಂದ್ರಕ್ಕೂ, ನಾನು ಕಲ್ಪಿಸಿಕೊಂಡ ರುದ್ರಪ್ರಯಾಗದ ಚಿರತೆಯ ಪುಸ್ತಕಕ್ಕೂ ಯಾವ ಸಾಮ್ಯವೂ ಕಾಣಲಿಲ್ಲ. ಅಲ್ಲೊಂದು, ಇಲ್ಲೊಂದು ಪೈನ್ ಮರಗಳಿದ್ದರೂ, ಚಿರತೆಯೊಂದು ಅಡಗಬಲ್ಲ, ಭೇಟೆಗಾಗಿ ಕಾಯಬಲ್ಲ ಪರಿಸರ ಕಾರ್ಬೆಟ್ನೊಂದಿಗೆ ಕಾಣೆಯಾಗಿದೆ ಅನ್ನಿಸಿತು.
ನಮ್ಮ ಊಟದ ನಂತರ ಅದರ ಹೊಟ್ಟೆಯನ್ನೂ ತುಂಬಿಸಿದ್ದಕ್ಕೋ , ಅಥವಾ ಚಾಲಕ ಮಹಾಶಯರಿಗೆ ನಿದ್ದೆ ಭಾರವಾಗಿದ್ದಕ್ಕೋ ಏನೋ ನಮ್ಮ ಕಾರು ನಿಧಾನವಾಗಿ ಓಡಲಾರಂಭಿಸಿತು. ಬದರಿ, ಓಖೀಮಟದ ದಾರಿಯಲ್ಲಿ ಮೇಲೇರುತ್ತಿದ್ದಂತೆ ಅಲ್ಲೊಂದು, ಇಲ್ಲೊಂದು ಛೀಲ್ ಪೈನ್ಗಳು ಕಾಣಲಾರಂಭಿಸಿದವು.ಒಂದೊಂದೇ ಡಿಗ್ರಿ ಕಡಿಮೆಯಾದ ಉರಿ ನಾವು ಚಹ ಬ್ರೇಕಿಗೆ ನಿಲ್ಲಿಸುವಾಗಾಗಲೇ ಟಿಪಿಕಲ್ ಹಿಮಾಲಯದ ಛಳಿಗಾಳಿಯಾಗಿ ಬದಲಾಗಿತ್ತು.ಬೆಂಗಳೂರು ಬಿಟ್ಟಮೇಲೆ ಮೊದಲಬಾರಿಗೆ ಮುಗುಳ್ನಗು ಅರಳಿದ ನನ್ನ ಮುಖ ನೋಡಿ ಖುಷಿಯಾದ ಗಂಡ ಕಣ್ಣುಮುಚ್ಚಿ ನಡೆಯಲು ಹೇಳಿದ. ಚಹ ಶಾಪಿನ ಅಂಚಿಗೆ ಕೈ ಹಿಡಿದು ಕರೆದೊಯ್ದ.ಕೆಳಗೆಲ್ಲೋ ಹರಿಯುತ್ತಿದ್ದ ಗಂಗೆಯ ಚಿಕ್ಕಮ್ಮನ ಮಗಳ ಜೋಗುಳ. ಕಣ್ಣುತೆರೆದೊಡನೆ ಅಂತದ್ದೇನೂ ಕಾಣಲಿಲ್ಲ. ಬುದ್ದೂ ಎಂದು ದೂರದ ಅಂಚಿಗೆ ಕೈ ತೋರಿದ. ಆಹ್ , ಅಲ್ಲಿತ್ತು, ನಾನು ನೋಡಬಂದ ನಂದಾದೇವಿ ರೇಂಜ್. ಮೋಡದ ಮರೆಯಲ್ಲಿ ಹೌದೋ ಅಲ್ಲವೋ ಅನ್ನುವಂತೆ ಮಸುಕು ಮಸುಕಾಗಿ ಕಾಣುತ್ತಿದ್ದ ಬೆಳ್ಳಿ ಶಿಖರಗಳು..ಕಣ್ತುಂಬಿಕೊಳ್ಳುವಷ್ಟರಲ್ಲಿ ಮತ್ತೆ ಮೇಘದ ಮರೆ. ಇಲ್ಲಿಂದ ಮೇಲೆ ಮೇಲೆ ಏರುತ್ತಿದ್ದಂತೆ ಛಳಿ ಜಾಸ್ತಿಯಾಯಿತು.
ಈ ತಿರುವಿನಲ್ಲಿ ಕಂಡು, ಆ ತಿರುವಿನಲ್ಲಿ ಮತ್ತೆ ದೂರವಾದಂತೆ ಕಾಣುತ್ತಿದ್ದ ಬೆಳ್ಳಿಬೆಟ್ಟಗಳು ಕೈ ಬೀಸಿ ಕರೆಯಲಾರಂಭಿಸಿದವು.ಅಲ್ಲಿಯವರೆಗೂ ಓಡುವ ಸ್ಪೀಡೋಮೀಟರಿನ ಮೇಲೆ ಕಣ್ಣು ನೆಟ್ಟು, ಎದೆಯ ಮೇಲೆ ಕೈಯ್ಯನಿಟ್ಟು ಕುಳಿತಿದ್ದ ನನಗೆ ಯಾಕೋ ಚಾಲಕ ಅತಿ ನಿಧಾನವಾಗಿ ಕಾರೋಡಿಸುತ್ತಿದ್ದಾನೆ ಅನಿಸಲಾರಂಭಿಸಿತು. ಹೊರಗೆ ದಟ್ಟವಾಗುತ್ತಿದ್ದ ಪೈನ್ ಕಾಡುಗಳ ನಡುವಿಂದ ಸುಳಿಯುತ್ತಿದ್ದ ಕತ್ತಲೂ ಇದಕ್ಕೆ ಕಾರಣ. ಬಿಸಿಲ ಬೇಗೆಯಿಂದ ಕಂಗಾಲಾದ ಕಾರು ಪಾಪ ಸಣ್ಣಗೆ ಸುರಿಯುತ್ತಿದ್ದ ಮಳೆಯನ್ನು ಎಂಜಾಯ್ ಮಾಡಿಕೊಂಡು ಚಲಿಸುತ್ತಿತ್ತೇನೋ,ಅಂತೂ ಓಖಿಮಟ ತಲುಪಿದಾಗ ಕಾರಿನ ಹೆಡ್ಲೈಟ್ ಆನ್ ಆಗಿತ್ತು.ಇನ್ನೂ 40 ಕಿಲೋಮೀಟರ್ ದೂರದಲ್ಲಿತ್ತು ನಮ್ಮ ಗಮ್ಯ. ಅಲ್ಲಿಂದ ಮುಂದೆ, ಎಲೆಕ್ಟ್ರ್ಸಿಟಿ,ಫೋನ್, ನಲ್ಲಿಯಲ್ಲಿ ಸುರಿವ ಬಿಸಿನೀರು ಎಲ್ಲವುದಕ್ಕೂ ಗುಡ್ ಬೈ. ಸುರಿವ ಮಳೆಯ ಮಧ್ಯೆ, ಟಾರೆಲ್ಲ ತೊಳೆದು ಹೋದ ರಸ್ತೆಯಲ್ಲಿ , ಕತ್ತಲನ್ನು ಸೀಳುತ್ತ, ಕಾರು ಮುಂದೆ ಹೋಯ್ತು. ನನಗೋ ಕೊರೆವ ಚಳಿಯಲ್ಲಿ, ಕಿಟಕಿ ತೆರೆದು, ಹಿಮ ಶಿಖರಗಳು ಹಿಂಬಾಲಿಸಿ ಬಂದವೋ ಇಲ್ವೋ ಅನ್ನುವ ಚಿಂತೆ. ಅದೇ ತಲೆಬಿಸಿಯಲ್ಲಿ ಮತ್ತೊಂದು ಘಂಟೆ ಪಯಣಿಸಿದ ಮೇಲೆ ಕತ್ತಲ ಗರ್ಭದಲ್ಲೆಲ್ಲೋ ಕಾರುನಿಂತಿತು. ಮಳೆ ಕಡಿಮೆಯಾಗಿತ್ತು. ಗಡಗಡ ನಡುಗುವಂತೆ ಮಾಡುವ ಛಳಿ. ಮಸುಕು ಮಸುಕು ಬೆಳಕಿನಲ್ಲಿ ಕೆಳಗಿಳಿದವಳನ್ನು ಸ್ವಾಗತಿಸಿದ್ದು ಸಾಲು ಸಾಲಾಗಿ ನಿಂತ ಝಸ್ಕರ್ ರೇಂಜ್.ನನ್ನ ಹಿಂಬಾಲಿಸಿದ ಹಿಮಗಿರಿ ತನ್ನೆಲ್ಲ ಧವಳಸಿರಿಯೊಂದಿಗೆ ಅಗಾಧವಾಗಿ ಎದುರಿಗೆ ನಿಂತು ಸ್ವಾಗತಿಸುತ್ತಿತ್ತು. ಇಂತಹ ಸೌಂದರ್ಯವನ್ನು ಒಡಲಲ್ಲಿ ಕಾಪಿಟ್ಟ ಹಿಮಾಲಯದೊಂದಿಗೆ ಮುನಿಸಾದರೂ ಹೇಗೆ ಸಾಧ್ಯ? ಮಸುಕು ಬೆಳಕಲ್ಲಿ ಫಳಫಳನೆ ಹೊಳೆಯುತ್ತಿದ್ದ ಹಿಮಶಿಖರಗಳು ಇಡೀ ಎರಡು ದಿನದ ಸೆಕೆ, ಅಸಹನೆ , ಸುಸ್ತು ಮುನಿಸು ಎಲ್ಲವುದನ್ನು ನೋಡಿ ಮುಗುಳ್ನಗುವಾಗ ನಾನೂ ಪ್ರಸನ್ನವದನೆ.
ಪ್ರಪಾತದ ಅಂಚಿನಲ್ಲಿ, ಶಿಖರಗಳಿಗೆದುರಾಗಿ ಕಟ್ಟಿದ್ದ ಗೆಸ್ಟ್ಹೌಸಿಗಿದ್ದಿದ್ದು ಶತಕದ ಇತಿಹಾಸ. ಎರಡೇ ಕೋಣೆಯ ಪುಟ್ಟ ಗೆಸ್ಟ್ ಹೌಸಿನಲ್ಲಿ ಇಂದಿರಾಗಾಂಧಿ, ಹತ್ತೆಂಟು ವರ್ಷಗಳ ಹಿಂದೆ ಸೋನಿಯಾ ಎಲ್ಲರೂ ಉಳಿದಿದ್ದರಂತೆ. ಅಲ್ಲಿನ ಮೇಟಿ, ಅಡುಗೆಗಿದ್ದ ಹುಡುಗನೊಂದಿಗೆ ಮಾತನಾಡುತ್ತಿದ್ದ ನನ್ನವನು “ಟ್ರೆಕಿಂಗ್ ಮಾಡಬೇಕಾದರೆ ಬೆಳಿಗ್ಗೆ ಬೇಗ ಏಳಬೇಕು. ನೀನು ಇಲ್ಲಿಯೇ ಬೆಟ್ಟದ ಕುಶಲೋಪರಿ ಕೇಳುತ್ತಾ ನಿಂತರೆ ಹಿಮಗಾಳಿಗೆ ಜ್ವರ ಬರಬಹುದು” ಅಂದ. ಅವನು ಹೇಳಿದ್ದು ನಿಜ. ಸಡನ್ ಆಗಿ ಅತಿ ಎತ್ತರದ ಹವಾಮಾನಕ್ಕೆ ತೆರೆದುಕೊಂಡರೆ, ಯಾವಾಗ ಬೇಕಾದರೂ ಬೀಸಿ ದಿಕ್ಕುಗೆಡಿಸಬಹುದಾದ ಹಿಮಗಾಳಿಗೆ ತಾಪಮಾನ ಮೈನಸ್ಗೆ ಕುಸಿದು ವಿಷಮಶೀತ ಜ್ವರ ಬರುವ ಅಪಾಯವಿದೆ.
ನಾವು ಎದ್ದಾಗಿನ್ನೂ ನಕ್ಷತ್ರಗಳು ಕಣ್ಣು ಮಿಟುಕಿಸುತ್ತಿದ್ದವು. ಹಿಮಾಲಯದ ಚಾರಣಗಳ ಸಮಸ್ಯೆಯೇ ಅದು. ಕೆಲವೊಮ್ಮೆ ಸೂರ್ಯ ಹುಟ್ಟುತ್ತಿದ್ದಂತೆಯೇ ಮುಖ ಮರೆಸಿಕೊಳ್ಳುತ್ತಾನೆ. 10-11 ಘಂಟೆಗೇ ಬೆಳಕು ಮಾಯವಾಗಬಹುದು. ಸಾಧ್ಯವಾದಷ್ಟೂ ಬೇಗ ಚಾರಣ ಾರಂಭಿಸಿದರೆ ಮಾತ್ರ ಗುರಿ ತಲುಪುವುದು ಸಾಧ್ಯ. ದುಗಲ್ಬಿಟ್ಟದಿಂದ ನಮ್ಮ ಚಾರಣಗಳು ಅಂತಹ ಕಷ್ಟದ್ದೇನೂ ಆಗಿರಲಿಲ್ಲ. ಆದರೂ ಹಲವಾರು ಬಾರಿ ಹಿಮಾಲಯದ ಕಣ್ಣುಮುಚ್ಚಾಲೆಯಾಟದಲ್ಲಿ ಪೆಂಗಾಗಿರುವ ನಮಗೆ ಮತ್ತದೇ ಅನುಭವ ಬೇಕಾಗಿರಲಿಲ್ಲ. ಹಾಗಾಗಿ ಬೆಳಿಗ್ಗೆ 3ಘಂಟೆಗೇ ಎದ್ದು , ಒಂದಿಷ್ಟು ಬ್ರೆಡ್ಡು, ಒಣಹಣ್ಣು ಕಟ್ಟಿಕೊಂಡು, ಕಾಫಿಯಲ್ಲದಿದ್ರೂ ಕುಡಿಯಲು ಬಿಸಿ ಚಹಾವಾದರೂ ಸಿಕ್ಕಿದ್ದರೆ ಅಂತ ತಹತಹಿಸುತ್ತ, ಮಾರ್ಗದರ್ಶಿಯ ಟಾರ್ಚ್ ಬೆಳಕಲ್ಲಿ ಹೊರಟೆವು.ಪಕ್ಕಾ ಚಾರಣಿಗರ ದೃಷ್ಟಿಯಲ್ಲಿ ಅಂತಹ ಮಹತ್ವ ಪಡೆದಿಲ್ಲದ ಚಂದ್ರಶಿಲಾ ಪೀಕ್ಗೆ ದುಗಲ್ ಬಿಟ್ಟಾದಿಂದ 3-4 ಘಂಟೆಗಳ ಚಾರಣ. ಮಧ್ಯದಲ್ಲೇ ಸಿಗುವ ತುಂಗಾನಾಥದಲ್ಲಿ ಶಿವನ ಬಾಹು ಬಿದ್ದಿತ್ತಂತೆ. ಹಾಗಾಗಿ ಇಲ್ಲೊಂದು ಅರ್ಜುನ ನಿರ್ಮಿಸಿದ ಎನ್ನಲಾದ ದೇವಾಲಯವಿದೆ. ಹಿಮಾಲಯದ ಪ್ರತಿ ಊರಿಗೂ ಇಂತದ್ದೊಂದು ದೈವತ್ವದ ನಂಟಿರುವುದು, ಒಂದು ಕಥೆ ಇರುವುದು ಸಾಮಾನ್ಯ.
ಬದರಿಗೆ ತೆರಳುವ ಕೆಲ ಯಾತ್ರಿಕರು ಇಲ್ಲಿಗೂ ಬರುವುದುಂಟು.ಕಲ್ಲಿನ ಮೆಟ್ಟಿಲುಗಳ ಹಾದಿ , ಸುತ್ತ ಅರಳಿದ ರೋಡೊಡೆಂಡ್ರಾನ್ಗಳ ಚಪ್ಪರ, ಮಧ್ಯೆ ತಿರುವುಗಳಲ್ಲಿ ಇಣುಕುವ ಶಿಖರಗಳು, ಪ್ರತಿ ಅರ್ಧ ಕಿಲೋಮೀಟರಿಗೂ ಬಣ್ಣ ಬದಲಿಸುವ ರೋಡೋಡೇಂಡ್ರಾನ್ಗಳು.ನನಗೋ ಆ ಹೂ ಪೊದರುಗಳ ಮಧ್ಯೆ ಸಣ್ಣ ಶಬ್ದವಾದರೂ ನಮ್ಮ ನವಿಲನ್ನು ಹೋಲುವ ಸುಂದರ ಹಕ್ಕಿ ಮೋನಲ್ ಕಾಣುವ ಆಸೆ.ಒಂದೆರಡು ಬಾರಿ ಕಾಣ ಸಿಕ್ಕಿದರೂ,ನಾನು ಕ್ಯಾಮರ ತೆಗೆದು ಫೋಕಸ್ ಮಾಡುವಷ್ಟರಲ್ಲಿ , ಪೊದೆಯ ಹಿಂದೆ ಮಾಯ. ತುಂಗಾನಾಥ ದೇಗುಲದವರೆಗೂ ಅಚ್ಚುಕಟ್ಟಾದ ಮೆಟ್ಟಿಲುಗಳಿವೆ.ಚಹ ಕುಡಿಯಲೆಂದು ಪುಟಾಣಿ ಅಂಗಡಿಯೊಂದರಲ್ಲಿ ನಿಂತೆವು. ವರ್ಷದ ಆರುತಿಂಗಳು ಇಲ್ಲೇ ಇರುವ ರಾಮ್ಸಿಂಗನ ಸಂಸಾರ ಇರೋದು ಕೆಳಗೆಲ್ಲೋ ಕಣಿವೆಯ ಊರಲ್ಲಿ. ಮರದ ಹಲಗೆಗಳ ಪುಟ್ಟ ಮನೆ ಕಮ್ ಅಂಗಡಿ ಸರ್ಕಾರದ್ದಂತೆ.ಅದನ್ನೂ ಹರಾಜಿನಲ್ಲಿ ಹಿಡಿಯಬೇಕು ಅಂದ. ಮ್ಯಾಗಿ ಬೇಯುವ ಘಮಕ್ಕೆ ಹಸಿವು ಕೆರಳಿದರೂ ಇನ್ನೂ ಹತ್ತಲಿದ್ದ ಎತ್ತರ ಬೇಡ ಅಂದಿತು.ಬರೀ ಚಹ ಕುಡಿದ ನಮಗೆ ಬಿಸ್ಕೆಟ್ ಆದರೂ ತಿನ್ನುವಂತೆ ರಾಮ್ಸಿಂಗ್ ಒತ್ತಾಯಿಸಿದ. ದಶಕಗಳ ಹಿಂದೆ ಅವನ ಅಂಗಡಿಯನ್ನೂ ಮುಚ್ಚುವಂತೆ 15-20 ಅಡಿ ಎತ್ತರಕ್ಕೆ ಬೀಳುತ್ತಿದ್ದ ಹಿಮದಿಂದ, ತುಂಗಾನಾಥ ದೇಗುಲ ಸಂಪೂರ್ಣ ಮುಚ್ಚುತ್ತಿತ್ತೆಂದೂ, ಈಗ 5-10 ಆಡಿ ಹಿಮ ಬೀಳುವುದೂ ಕಷ್ಟ ಎಂದು ದಿಗಿಲು ಹುಟ್ಟಿಸಿದ.
ಮುಂದೆ ತುಂಗಾನಾಥದವರೆಗೂ ಗ್ರೀನ್ ಹೌಸ್ ಎಫೆಕ್ಟ್, ಕೈಗಾರಿಕೀಕರಣ, ಹಿಮಾಲಯದ ಒಡಲು ಬಗೆಯುತ್ತಿರುವ ದೈತ್ಯ ಜಲವಿದ್ಯುತ್ ಯೋಜನೆಗಳು ಎಲ್ಲವುದರ ಬಗ್ಗೆ ಚರ್ಚಿಸುತ್ತಾ, ತುಂಗಾನಾಥ ತಲುಪಿಯೇ ಬಿಟ್ಟಿದ್ದೆವು. ಸುಮಾರು ಚಾರಣಿಗರು ಇಲ್ಲಿನ ಪುಟ್ಟ ಅಂಗಡಿ-ಕಮ್ ರೆಸ್ಟ್ಹೌಸ್ಗಳಲ್ಲಿ ಉಳಿದು ಸೂರ್ಯೋದಯಕ್ಕೆ ಚಂದ್ರಶಿಲೆ ತಲುಪುತ್ತಾರೆ. ಅರ್ಜುನ ನಿರ್ಮಿತ ಎನ್ನಲಾಗುವ ತುಂಗಾನಾಥ ಈ ವರ್ಷದ ದರ್ಶನಕ್ಕಿನ್ನೂ ಮುಕ್ತವಾಗಿರಲಿಲ್ಲ. ತುಂಗಾನಾಥ ಪಕ್ಕಾ ಬಳಪದ ಕಲ್ಲಿನ ಚಪ್ಪಡಿಗಳನ್ನು ಪೇರಿಸಿ ನಿರ್ಮಿತವಾಗಿರುವ ದೇಗುಲ. ತುಂಬಾ ಹಳೆಯದಾದರೂ ಸದೃಢವಾಗಿದೆ. ಸುತ್ತ ಪುಟ್ಟ ಹಸಿರು ಪಾಚಿ, ಜರಿಗಿಡ ಬೆಳೆದ ಬಂಡೆಗಳು, ಅಲ್ಲೊಂದು ಇಲ್ಲೊಂದು ಜಿನುಗುವ ಪುಟಾಣಿ ಜರಿ, ಜಟಾಧಾರಿ ಶಿವನ ಜಟೆಯಷ್ಟೆ ಏಕೆ, ನಖಶಿಖಾಂತವಾಗಿ ಅಲಂಕರಿಸುವಂತೆ ಪೈಪೋಟಿಯ ಮೇಲೆ ಹುಟ್ಟಿದ್ದ ಪುಟ್ಟ ಹಳದಿ-ಪಿಂಕ್ ಹೂವುಗಳು.ಇಂತಹ ಸುಂದರ ಪರಿಸರದಲ್ಲಿ ಮುಚ್ಚಿದ್ದ ದೇಗುಲದ ಹಿಂದೆ ಶಿವನಿದ್ದರೂ ಇರಬಹುದೇನೋ ಅನ್ನಿಸಿತು. ಕೈಲಾಸದ ಕುಶಲೋಪರಿ ಕೇಳುವ ಮನಸ್ಸಿದ್ದರೂ , ಸಮಯಾಭಾವದಿಂದ ಅವನಿಗೊಂದು ಅರ್ಜೆಂಟಿನ ಬೈ ಹೇಳಿ ಹೊರಟೆವು. ಕಾರಣ ಹತ್ತಲಿದ್ದ ಚಂದ್ರಶಿಲೆಗೆ ಮೆಟ್ಟಿಲುಗಳಿರಲಿಲ್ಲ ಮತ್ತು ಹತ್ತುವ ದಾರಿ ನಿಧಾನಕ್ಕೆ ಬಳಸಿಕೊಂಡು ಎತ್ತರಕ್ಕೇರದೆ ಸಡನ್ ಆಗಿ ಎತ್ತರಕ್ಕೇರಿತ್ತು ಮತ್ತು ಕಡಿದಾಗಿಯೂ ಇತ್ತು.
ಚಾರ್ ಧಾಮ ದರ್ಶನಕ್ಕೆಂದು ಬರುವವರು ಕೆಲವು ಸಾರಿ ತುಂಗಾನಾಥನನ್ನೂ ಭೇಟಿಯಾಗುವುದುಂಟು, ಆದರೆ ಈ ವರ್ಷದ ಪುಣ್ಯಾರ್ಥಿಪ್ರವಾಹ ಇನ್ನೂ ಶುರುವಾಗಿರಲಿಲ್ಲ. ನಮ್ಮಂತೆ ಚಾರಣ ಪ್ರಿಯರು ಮಾತ್ರ ಅಲ್ಲಲ್ಲಿ ಭೇಟಿಯಾಗುತ್ತಿದ್ದರು.ತುಂಗಾನಾಥದಿಂದ ಚಂದ್ರಶಿಲೆ ಕೇವಲ 4 ಕಿಮೀ. ಆದರೆ ರಸ್ತೆ ಏರುಮುಖವಲ್ಲದೆ ಸಾಕಷ್ಟು ಕಡಿದಾಗಿತ್ತು ಮತ್ತು ನನ್ನೊಳಗೆ ಸಾಕಷ್ಟು ಬೆಂಗಳೂರಿನ ಫಾಸ್ಟ್ ಫುಡ್ ಶೇಖರವಾಗಿತ್ತು. ಸದಾ ಕ್ಯಾಲೋರಿ ಕೌಂಟ್ ಮಾಡುತ್ತಾ , ಅರ್ಧ ಆಯುಷ್ಯವನ್ನು ಜಿಮ್ಮಿಗರ್ಪಿಸಿರುವ ಸಾಹೇಬರೇನೋ ಸುಲಭವಾಗಿ ಹತ್ತುತ್ತಿದ್ದರು. ನಾನು ಮಾತ್ರ ದೈಹಿಕ ಶ್ರಮಕ್ಕೆ ಸದಾ ಕುಂಟುನೆವ ಹೇಳುತ್ತ, ಉದರಮಹಾದೇವಿಗೆ , ಒಮ್ಮೆ ನಾನಾಥರದ ಡಯೆಟ್ಗಳ ಅನಾವೃಷ್ಟಿಯನ್ನೂ, ಇನ್ನು ಕೆಲವೊಮ್ಮೆ ಬದುಕುವುದೇ ತಿನ್ನುವುದಕ್ಕೆ ಅಂತ ಕೆಲವೇ ಸೆಕೆಂಡುಗಳಲ್ಲಿ ಕೇಜಿಗಟ್ಟಲೇ ಕೆಲೋರಿಯನ್ನು ತುಂಬುವ ಪೈಕಿ. ಹೀಗಾಗಿ ನಡುನಡುವೆ ಪೋಟೋ ತೆಗೆಯುವ ನೆವದಲ್ಲಿ , ಉಸಿರು ಸುಧಾರಿಸಿಕೊಳ್ಳುತ್ತ ನಡೆಯಬೇಕಾಯಿತು. ಸಾಹೇಬರಿಗೋ, ನಾನಲ್ಲೆ ದ್ರುಪದ ಪುತ್ರಿಯಂತೆ ಪ್ರಾಣ ತ್ಯಜಿಸಿದರೆ ಅನ್ನುವ ಭಯ. ನಿಮಗೊಂದು ಗುಟ್ಟು ಹೇಳ್ಲಾ, ಗಂಡ ಎಷ್ಟು ಪ್ರೀತಿಸುತ್ತಾನೆ ಅಂತ ತಿಳಿಯೋ ಇಷ್ಟ ಇದ್ರೆ ಲೈಫಲ್ಲಿ ಒಮ್ಮೆಯಾದ್ರೂ ಯಾವುದಾದರೂ ಚಾರಣ ಮಾಡಿ.ಪ್ರೀತಿಯ ಮಳೆ ಸುರಿಯುತ್ತದೆ !
ನನಗೆ ಉತ್ಸಾಹ ಕುಗ್ಗದಂತೆ ಆಗಲೇ ಚಂದ್ರಶಿಲೆಯನ್ನು ಕಾಂಕರ್ ಮಾಡಿ ಕೆಳಗಿಳಿಯುತ್ತಿದ್ದ ಚಾರಣಿಗರು, ಇನ್ನು ಸ್ವಲ್ಪವೇ ದೂರ , ವ್ಯೂ ತುಂಬ ಚೆನ್ನಾಗಿದೆ ಅಂತ ಹುರಿದುಂಬಿಸಿದ್ರು.ಅಂತೂ, ಇಂತೂ ಚಂದ್ರಶಿಲೆಯ ಮೇಲೇರುವಾಗಲೇ ಸೂರ್ಯ ಯಾಕೋ ಆಟಾ ಮಾಝೀ ಸಟಕ್ಲೀ ಅಂತ ಸಿಂಗಂ ಡೈಲಾಗು ಹೊಡೆಯುವವನಂತೆ ಗುರ್ರ್ ಅನ್ನುತ್ತಿದ್ದ. ಹಿಮಾಲಯದ ಚಾರಣಗಳಲ್ಲಿ ನಿಮಗೆ ಅದೆಂತ ಅದ್ಭುತ ದೃಶ್ಯಗಳು ನೋಡಲು ದೊರೆತರೂ , ಅದನ್ನು ಲೆನ್ಸನಿಂದ ಸೆರೆ ಹಿಡಿಯಲು ಸಾಧ್ಯವಾಗುವುದು ಸಿಂಗಂಸೂರ್ಯ ಸಾಹೇಬರ ಕೃಪೆ ಇದ್ದರೆ ಮಾತ್ರ. ಒಂದೋ ಬೆಳಕೇ ಇಲ್ಲದೆ ಮಬ್ಬು ಚಿತ್ರಗಳು ಮೂಡತ್ತೆ, ಇಲ್ಲಾ ಒವರ್ ಎಕ್ಸ್ಪೋಸ್ ಆಗಿ ಚಿತ್ರ ಕುಲಗೆಡತ್ತೆ. ಹೀಗಾಗಿ ನನ್ನೊಳಗಿನ ಛಾಯಾಗ್ರಾಹಕಿಗೆ ತೃಪ್ತಿಯಾಗದಿದ್ದರೂ, ಚಂದ್ರಶಿಲೆಯಿಂದ ಇಡಿಯ ನಂದಾದೇವಿ ರೇಂಜ್ ಚೆನ್ನಾಗಿ ಕಾಣಿಸುತ್ತಿತ್ತು. ಸುತ್ತೆಲ್ಲ ಮಂಜು ಮುಸುಕಿದ ಪರ್ವತಾವಳಿ, ಸಡನ್ ಆಗಿ ರೋಮ್ಯಾಂಟಿಕ್ ಮೂಡಿಗೆ ತಿರುಗಿ , ಕೆಂಪಗೆ, ಬೆಚ್ಚಗೆ ಕಾಣತೊಡಗಿದ್ದ ಆಕಾಶದ ಸಿಂಗ್ಂ,ನಮಗಿಂತ ಇಂಚು ದೂರದಲ್ಲಿ ಭೂಮಿಭಾನು ಸೇರಿದೆಯೇನೋ ಅನ್ನಿಸುವ ಕೊನೆಯಿಲ್ಲದ ಶಿಖರಗಳು. ಚಂದ್ರಶಿಲೆಯ ಆ ತುದಿ, ಮೈಲುಗಟ್ಟಲೇ ಹರಡಿಕೊಂಡಿದ್ದ ನಂದಾದೇವಿಯ ಸಂಸಾರ, ಚಿನ್ನದ ವರ್ಣದಲ್ಲಿ ಕಂಡದ್ದನ್ನೆಲ್ಲಾ ತೋಯಿಸುತ್ತಾ,ಆಟವಾಡುತ್ತಿದ್ದ ಸೂರ್ಯ, ಕೈಗೆಟುಕುವಂತೆ ಹರಡಿದ್ದ ಬಿಳಿಯ ಬಾಂಬೆಮಿಠಾಯಿ ಮೋಡಗಳು, ಕೆಳಗೆ ನಾವಿಬ್ಬರು, ಕೆಲ ಕ್ಷಣಗಳ ಮಟ್ಟಿಗಾದರೂ ಕಾಲ ಸ್ತಬ್ಧವಾದ ಭಾವ ಮೂಡಿಸಿದ್ದು ಸುಳ್ಳಲ್ಲ..
ಚಂದ್ರಶಿಲೆಯಲ್ಲಿ ದೇಗುಲ ಅಂತದ್ದೇನಿಲ್ಲ. ಆದರೆ ಅಲ್ಲೇ ಸಿಗುವ ಚಪ್ಪಟೆ ಬಳಪದ ಕಲ್ಲನ್ನು ಲಗೋರಿ ಆಟಕ್ಕೆ ಜೋಡಿಸಿದಂತೆ ಜೋಡಿಸಿ ಅದಕ್ಕೊಂದು ಭಗವಾಧ್ವಜ ವಿರಿಸಿದ್ದರು. ಯಾಕೋ ನನಗಾ ನಿರಾಕಾರ ನಿಸರ್ಗದೇವ ತುಂಬ ಪ್ರಿಯನಾದ. ಅವನಿಗೆ ಅಥವಾ ಮುನಿಸಿನಿಂದ ಗುಡ್ಡದ ಮೇಲೇರಿ ಕುಳಿತ ದೇವಿಗೆ ಒಂದು ಸಲ್ಯೂಟ್ ಹೊಡೆದೆ. ನೋಡಿದ್ಯಾ, ಆ ನಿನ್ನ ಚಿನ್ನದ ಗುಡಿಗಳಲ್ಲಿ ಉಸಿರು ಕಟ್ಟಿ, ಹಾರಕುಂಕುಮ,ಬಲಿ, ಉರುಳು ಲಕ್ಷಾಂತರ ರೂಪಾಯಿಗಳ ಸೇವೆಯ ಕಾಟ ತಾಳಲಾರದೆ,ದೂರ ಬಂದು ಎಂತಹ ಜಾಗದಲ್ಲಿ ಕುಳಿತಿದ್ದೇನೆ ಅಂತ ಕಣ್ಣು ಮಿಟುಕಿಸಿದಂತಾಯಿತು. ದೆಹಲಿಯ ಒಂದಿಷ್ಟು ಹುಡುಗರು ರಾತ್ರಿ ಇಡೀ ಡ್ರೈವ್ ಮಾಡಿದ್ದರೂ, ಬೆಳ್ಳಂಬೆಳಿಗ್ಗೆ ಗುಡ್ಡ ಹತ್ತಿ ಬಂದಿದ್ರು, ತಮ್ಮೊಂದಿಗೆ ತಂದಿದ್ದ ವಿಪರೀತ ಬೆಲೆಯ ಲೆನ್ಸುಗಳಲ್ಲಿ ನಿಂತು ಬಗ್ಗಿ, ಮಲಗಿ ಸರ್ಕಸ್ ಮಾಡುತ್ತ ಕ್ಲಿಕ್ಕಿಸಲಾರಂಭಿಸಿದರು. ಅಷ್ಟರಲ್ಲಾಗಲೇ ಸೂರ್ಯ ನಂದಾದೇವಿಯ ಪೋಟೊ ತೆಗೆಯಲು ಎಕ್ಸ್ಪೋಷರ್ ಅಡ್ಜಸ್ಟ್ ಮಾಡಲು ಶುರು ಮಾಡಿದ್ದ. ನಮ್ಮ ಆರ್ಡಿನರಿ ನಿಕಾನ್, ಕ್ಯಾನನ್ಗಳಲ್ಲಿ ಅವನ ಲೆವೆಲ್ಲಿನ ಎಕ್ಸ್ಪೋಷರ್ ಅಡ್ಜಸ್ಟ್ಮೆಂಟ್ ಸಾಧ್ಯವೇ ಇರ್ಲಿಲ್ಲ. ಅಷ್ಟಾದ್ರೂ ಆ ಹುಡುಗರು ಪೋಟೊಷಾಪ್ ಮೇಲಿನ ಅಪಾರ ನಂಬಿಕೆಯಿಂದ ಕ್ಕಿಕ್ಕಿಸಿಯೇ ಕ್ಲಿಕ್ಕಿಸಿದರು.ಕೊನೆ ಕೊನೆಗೆನಂದಾದೇವಿ ಮತ್ತು ಸೂರ್ಯದೇವನ್ನು ಅವರ ಪಾಲಿಗೆ ಬಿಟ್ಟ ಹುಡುಗರ ಕ್ಯಾಮಾರಕ್ಕೆ ಅಲ್ಲಿನ ಕಲ್ಲು, ಹುಲ್ಲು, ನಾವಿಬ್ಬರೂ ಎಲ್ಲರೂ ಮಾಡೆಲ್ಗಳಾದೆವು.
ಫೋಟೋಸೆಷನ್ ಮುಗಿಯುವಷ್ಟರಲ್ಲಿ ಹೊಟ್ಟೆ ತಾಳ ಹಾಕುತ್ತಿತ್ತು. ತಂದ ತಿಂಡಿಯನ್ನೆಲ್ಲ ದೆಹಲಿಯ ಧೀರರೊಂದಿಗೆ ಹಂಚಿಕೊಂಡು, ನಿಸರ್ಗ, ಚಾರಣ, ಫೊಟೋಗ್ರಫಿ, ಅಂತ ಪರಸ್ಪರ ಕೊರೆತ ಮುಗಿಸುವಾಗಲೇ ಮೋಡಗಳು ದಟ್ಟೈಸಲಾರಂಭಿಸಿದವು.ಯಾವ ಕ್ಷಣದಲ್ಲಾದರೂ ನಂದಾದೇವಿಯವರು, ಸಿಂಗಂ ಸರ್ಗೋಸ್ಕರ ಟಿಪ್ ಟಿಪ್ ಬರಸಾ ಪಾನಿ ಶುರು ಮಾಡುವ ಎಲ್ಲಾ ಲಕ್ಷಣಗಳೂ ಕಾಣಲಾರಂಭಿಸಿದವು.ಮನಸ್ಸಿಲ್ಲದ ಮನಸ್ಸಿನಲ್ಲಿ ನಂದಾದೇವಿಯ ಅಗಾಧ ಸೌಂದರ್ಯವನ್ನು ಮನದುಂಬಿಕೊಂಡು ಇಳಿಯಲಾರಂಭಿಸಿದೆವು. ಮಂಜು ಮುಸುಕಿದ ಹಾದಿಯಲ್ಲಿ, ಮೈ ಕೊರೆವ ಛಳಿಯಲ್ಲಿ, ಒಂದೇ ಛತ್ರಿಯಲ್ಲಿ ನಾವಿಬ್ಬರೂ ಥೇಟು ರಾಜ್ಕಪೂರ್, ನರ್ಗೀಸ್ಗೆ ಸೈಡು ಹೊಡೆಯುತ್ತಾ ಇಳಿದಿದ್ದು ಇನ್ನೊಂದು ಮಿಲ್ಸನ್ ಬೂನ್ಸ್ ಕಥೆ. ಮರುದಿನ ಭೇಟಿ ನೀಡಿದ್ದಂತೂ ಥೇಟಾನುಥೇಟು ಸ್ವರ್ಗ ದಿಯೋರಿತಾಲ್. ಅದರ ಬಗ್ಗೆ ಇನ್ಯಾವತ್ತಾದ್ರೂ ಬರಿತೀನಿ ಅಯ್ತಾ.








ಪ್ರವಾಸ ಕಥನಗಳನ್ನ ಇಂಟರೆಸ್ಟಿಂಗ್ ಆಗಿ ಬರೆಯುವುದು ದೊಡ್ಡ ಚಾಲೆಂಜ್. ಬೋರಿಂಗ್ ಅನಿಸ್ಲಲ. ಮಧ್ಯೆ ಮಧ್ಯೆ ನಗು ಮೂಡಿಸುತ್ತಾ ಓದಿಕೊಳ್ಳುವಂತೆ ಬರೆದಿದ್ದೀರಿ.
fine chennagide
Tumba chennagi vivarisi baredidhira….
70 ರದಶಕದಲ್ಲಿ ನಾನು ಅತಿಿ ಹೆಚ್ಚು ಪ್ರವಾಸ ಲೇಖನ ಬರೆದಿದ್ದದ್ದು ನೆನಪಿಗೆ ಬಂತು.ಅಭಿನಂದನೆಗಳು
ದ್ವಿಾ ಪ್ಪ್ರ್ವಾವಾ
ಹಿಮಾಲಯವನ್ನ ಹತ್ತಿರದಿಂದ ಕಂಡಂತ ಖುಷಿಯಾಯ್ತು ನಿಮ್ಮ ಬರಹ ಓದಿ
ಪ್ರೀತಿಯಿಂದ ಓದಿದ ,ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ. ಬರೆಯುವುದನ್ನೆ ಮರೆತ ನನಗೆ ಹೊಸ ಬರಹಕ್ಕಿಷ್ಟು ಸ್ಪೂರ್ತಿ ದೊರೆತಿದೆ.ಥ್ಯಾಂಕ್ಸ್ ಅ ಲಾಟ್.
Enjoyed reading a lot. please write more