ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಿನ್ನೆಲೆಗೆ ಸರಿದ ಅಲಮೇಲು ಅಯ್ಯರ್…

ಗಿರಿಜಾ ಶಾಸ್ತ್ರಿ

ನಮ್ಮ “ಸೃಜನಾ” ಮುಂಬಯಿ ಕನ್ನಡ ಲೇಖಕಿಯರ ಬಳಗದ ಹಿರಿಯ ಸದಸ್ಯೆ ಅಲಮೇಲು ಅಯ್ಯರ್ ಕಾಲವಶರಾಗಿದ್ದಾರೆ. ಹಿಂದಿಯಿಂದ ಕೆಲವು ಬರಹಗಳನ್ನು‌ ಬಹಳ ಸಮರ್ಥವಾಗಿ ಅನುವಾದ ಮಾಡಿದ್ದರು. ತಮ್ಮ ಸಾಮರ್ಥ್ಯದ ಅರಿವೇ ಅವರಿಗಿರಲಿಲ್ಲ. ಸದಾ ಹಿಂಜರಿಕೆ, ಸಂಕೋಚ.

ತಮ್ಮದೇ ಮೇಲುಗೈ ಸಾಧಿಸುವ ಹಟವಾದಿಗಳ, ನಮ್ಮಂತಹ ಕೆಲವು ಘಟವಾಣಿಗಳ ನಡುವೆ ಅವರ ಸೊಲ್ಲು ಅಡಗಿಹೋಗಿತ್ತು. ಹಿಂದೆ ಹಿಂದೆ ಸರಿಯುತ್ತಲೇ ಹೋದರು. ಬಹಳ ಬುದ್ಧಿವಂತೆ, ಮಹಾ ಸೂಕ್ಷ್ಮದ ಮಹಿಳೆ ! ಅವರನ್ನು ನಾನು ಯಾಕೋ ಬಹಳ ಹಚ್ಚಿಕೊಂಡಿದ್ದೆ. ಅಮೇರಿಕಾಕ್ಕೆ ಹೊರಡುವ ಮುನ್ನ ಅವರಿಗೆ ಒಂದು ಕರೆಯನ್ನಾದರೂ ಮಾಡಬೇಕಿತ್ತು. ಹಾಳು ಲೌಕಿಕ ತಾಪತ್ರಯಗಳು. “ಪಾಪ” ಚೂರಿಯಾಗಿ ಇರಿಯುತ್ತಿದೆ.

ಕ್ಷಮಿಸಿಬಿಡಿ ಆಂಟಿ ನಿಮಗೆ ತಿಳಿಸದೇ ಬಂದುಬಿಟ್ಟೆ’ ಅವರೇ ಹೆಚ್ಚು ಕರೆಮಾಡುತ್ತಿದ್ದರು. ಯಾವಾಗ ಫೋನ್ ಮಾಡಿದರೂ “ನೀವು ಬಿಝಿಯೇನೋ” ಎನ್ನುವ ಸಂಕೋಚದಿಂದಲೇ ಸಣ್ಣಗೆ ನಡುಗುವ ದನಿಯಿಂದ ಮಾತು ಪ್ರಾರಂಭಿಸುತ್ತಿದ್ದರು. ನಾನು “ಬರೆದಿರೋದು ಸರಿಯಿಲ್ಲವೇನೋ ..ನನಗೆ ಬರೋಲ್ಲ” ಎಂಬ ಪಲ್ಲವಿಯಿಂದಲೇ ಮಾತು‌ ಮುಗಿಯುತ್ತಿತ್ತು. ಅವರಿಗೆ ಒಳ್ಳೆಯ ಹಿಂದಿ ಬರುತ್ತಿತ್ತು. ಅದು ಮುಂಬಯಿಯ ಕಾಲೀ ಪೀಲಿ ಹಿಂದಿಯಲ್ಲ.

ಮೈಥಿಲಿ ಶರಣಗುಪ್ತನ ಹಿಂದಿ! ಅವರ ಮಗಳು ಮದುವೆಯಾದದ್ದೂ ಉತ್ತರಭಾರತೀಯರ ಸುಸಂಸ್ಕೃತ ಮನೆತನದವರೊಬ್ಬರನ್ನು. ಮನಶ್ಶಾಸ್ತ್ರಜ್ಞ ರಿರಬೇಕು. ಮಗಳೂ ಕೂಡ ಅದೇ ಕ್ಷೇತ್ರದಲ್ಲಿ ಪರಿಣತಿಹೊಂದಿದ್ದಳು. ಹೀಗಾಗಿ ಅವರ ಹಿಂದಿ ಇನ್ನೂ ಮಝಬೂತಾಗಿತ್ತು. “ಕ್ಯಾರೇ, ತೂರೇ, ಆಪಣ್” ಎನ್ನುವ ಕೆಟ್ಟ ಮುಂಬಯಿ ಹಿಂದಿ ಮಾತನಾಡುತ್ತ ಶೋಕಿಹೊಡೆಯುತ್ತಿದ್ದ ನಮಗೆ ಅವರ ಘನವಾದ ಹಿಂದಿಯ ಘಮಲು ಹತ್ತಲೇ ಇಲ್ಲ. ಖಾಲಿ ಪಾತ್ರೆಗಳು ಗಲಗಲ ಸದ್ದು ಮಾಡಿದ್ದೇ ಮಾಡಿದ್ದು. ಸೃಜನಾ ಸಭೆ ಸೇರುತ್ತಿದ್ದ ಸಂದರ್ಭಗಳಲ್ಲಿ ಅಪರೂಪಕ್ಕಾದರೂ ಮೆಲು ದನಿಯಲ್ಲಿ ಸೂಚಿಸುತ್ತಿದ್ದ ಅವರ ಸಲಹೆಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಯಾಕೆಂದರೆ ಮುಂಬಯಿ ಕನ್ನಡ ಲೋಕದಲ್ಲಿ ಅವರಿಗೊಂದು ಅಚ್ಚೊತ್ತಿದ, ಸ್ವಾಯತ್ತ ಹೆಸರು (branded name) ಇರಲಿಲ್ಲ.

ಇಂದಿನ ಮಾರುಕಟ್ಟೆಯಲ್ಲಿ ಗುಣಮಟ್ಟಕ್ಕಿಂತ ಬ್ರ್ಯಾಂಡ್ ತಾನೇ ಚಲಿಸುವುದು? “ಹಚ್ಚಿಟ್ಟ ಹಣತೆ’ ಎಂಬ ನಮ್ಮ ಸದಸ್ಯೆಯರ ಆತ್ಮಕಥಾನಕ ಸಂಗ್ರಹದಲ್ಲಿ ಅವರು ಬರೆದುಕೊಟ್ಟ ಆತ್ಮಕಥಾನಕದ ಪುಟಗಳನ್ನು ಗಾತ್ರದ ನೆಪವೊಡ್ಡಿ ನಿರ್ದಾಕ್ಷಿಣ್ಯವಾಗಿ ಕತ್ತರಿಸಲಾಗಿತ್ತು. ಈ ಸಂಗತಿಯನ್ನು ನನಗೆ ತಿಳಿಸುತ್ತಲೇ “ಆದರೆ ನೀವು ಇದನ್ನು ಯಾರಿಗೂ ಹೇಳಬಾರದು, ಮೀಟಿಂಗ್ ನಲ್ಲಿ ಈ ವಿಷಯ ಬರಬಾರದು ಪ್ಲೀಸ್ “ಎಂದು ಫೋನಿನಲ್ಲಿ ಕೇಳಿಕೊಂಡಿದ್ದರು. ಸೃಜನಾ ಯೋಜನೆಯಡಿ ಪ್ರಕಟಿಸಲಾಗುವ ಬರಹಗಳ, ಕೈಗೊಳ್ಳುವ ಕಾರ್ಯಕ್ರಮಗಳ ಗುಣಮಟ್ಟದ ವಿಷಯವಾಗಿ ನಾನು “ಏಕ್ ಮಾರ್ ದೋ ತುಕಡಾ”ಎಂದು ಖಂಡಿಸುತ್ತಿದ್ದ ರೀತಿ ಅವರಿಗೆ ಚೆನ್ನಾಗಿಯೇ ಗೊತ್ತಿತ್ತು. ಅನೇಕ ಸಲ ಅದನ್ನು ಮೆಚ್ಚಿಕೊಂಡು “ನಿಮ್ಮ ಹಾಗೆ ಧೈರ್ಯ ಇರಬೇಕು ನೋಡಿ, ನೀವು ಹೇಳಿದ್ದು ಸರಿಯಾಗಿಯೇ ಇದೆ” ಎಂದು‌ ಫೋನ್ ಮಾಡಿ ಹೇಳುತ್ತಿದ್ದರೇ‌ ವಿನಃ, ಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ಖುಲ್ಲಂಖುಲ್ಲ ಮಂಡಿಸುತ್ತಿರಲಿಲ್ಲ. ಅವರೇ ಏಕೆ ಹೆಚ್ಚಿನ ಸದಸ್ಯೆಯರು ಇಂದಿಗೂ ಹಾಗೆಯೇ ಇದ್ದಾರೆ. ನನ್ನದು ಒಂಟಿದನಿ ಎನಿಸಿದಾಗೆಲ್ಲಾ ಅಲಮೇಲು ಆಂಟಿ ಫೋನ್ ಮಾಡಿ ಉತ್ಸಾಹ ತುಂಬುತ್ತಿದ್ದರು. ಹುರಿದುಂಬಿಸುತ್ತಿದ್ದರು. ಕೊನೆಯ ಬೆಂಚಿನಲ್ಲಿ ಮುದುರಿ ಕುಳಿತಿರುತ್ತಿದ್ದ ಅವರನ್ನು “ಅನುವಾದ ಎಷ್ಟು ಚೆನ್ನಾಗಿದೆ. ನಿಮ್ಮ ಕನ್ನಡ ಸೂಪರ್” ಎಂದೆಲ್ಲಾ ನಾವು ಕೆಲವು ಗೆಳತಿಯರು ಅವರನ್ನು ಮೊದಲ ಸಾಲಿಗೆ ಎಳೆದುಕೊಂಡು‌ ಬರಲು ಬಹಳ ಪ್ರಯತ್ನಿಸಿದ್ದೆವು. ಅಲಮೇಲು ಆಂಟಿಯೆಂದರೆ ಅವರ ಮುತ್ತು ಪೋಣಿಸಿದಂತಹ ಅಕ್ಷರವೇ ಕಣ್ಣ ಮುಂದೆ ಬರುತ್ತದೆ.

ಒಮ್ಮೆ ಅಂಧೇರಿಯ ಅವರ ಮನೆಗೆ ನಾನು ನನ್ನ ಸೋದರ ಸೊಸೆ ಸೌಮ್ಯಳ ಜೊತೆಗೆ ಹೋಗಿದ್ದೆ. “ಏನಿಲ್ಲ, ಚಳಿಗಾಲದಲ್ಲಿ ಬೆಚ್ಚಗಿರುತ್ತೆ , ಹೊದ್ದುಕೊಳ್ಳಿ” ಎಂದು, ಬೇಡ ಬೇಡ ಎಂದು ಕೈ ಅಡ್ಡ ಹಿಡಿದ ಅವರಿಗೆ, ಶಾಲನ್ನು ಬಲವಂತದಿಂದ ಹೊದೆಸಿದ್ದೆವು. ಸಂಕೋಚದಿಂದ ಮುದುರಿ ಹೋಗಿದ್ದರು. ಶಾಲನ್ನು ಹೊದೆದು ಕೊಂಡಾಗಲೆಲ್ಲಾ ನಮ್ಮ ನೆನಪಾಗಿರಬೇಕು.

ಯಾವ ಕಷ್ಟವನ್ನೂ ಹೇಳಿಕೊಳ್ಳದ ಸಜ್ಜನರಲ್ಲಿ ಸಜ್ಜನರು ಅವರು. ಮನೆಯಲ್ಲಿ ಕೂಡ ಯಾರ‌ ಬಗ್ಗೆಯೂ‌ ಅವರಿಗೆ ಆಕ್ಷೇಪವಿರಲಿಲ್ಲ. “ಆಂಟಿ, ನೀವು ನೇರವಾಗಿ ಹೇಳಿಬಿಡಿ…ನೀವು ಯಾಕೆ ಮಾತನಾಡೋಲ್ಲ” ಎಂದು ಅನೇಕ ಸಲ ಅವರ ಮೇಲೆ ಕೋಪಗೊಂಡಿದ್ದೆ.

‘ಇನ್ನು ಮೇಲೆ ನೀನು ನನ್ನ ಮೇಲೆ ಕೋಪಗೊಳ್ಳುವ ಕಾರಣವೂ ಇಲ್ಲ. ನಾನು ನಿನ್ನ ಮೇಲೆ ಪ್ರೀತಿಯ ಮಳೆಯನ್ನೂ ಎರೆಯಲಾರೆ’ ಎಂದು ಬದುಕಿಗೆ ಮುಖ ತಿರುಗಿಸಿ ಹೊರಟುಬಿಟ್ಟಿದ್ದಾರೆ. ಮುಂಬಯಿಯಲ್ಲಿ ಈಗ ಮಳೆ ಧೋ ಧೋ ಸುರಿಯುತ್ತಿದೆ. ನಾನು ಅಲ್ಲಿದ್ದಿದ್ದರೆ ನನ್ನ ಕಣ್ಣುಗಳನ್ನು ಮಳೆಯ ಧೋ….ನಲ್ಲಿ ಮರೆಮಾಚಿಕೊಳ್ಳಬಹುದಿತ್ತು.
ಹೋಗಿ ಬನ್ನಿ ಆಂಟಿ. ನಿಮ್ಮ ಒಳ್ಳೆಯತನವನ್ನು ಮುಂಬಯಿ ಕನ್ನಡ ಲೋಕ ಎಂದಿಗೂ ಮರೆಯುವುದಿಲ್ಲ.

‍ಲೇಖಕರು Admin

23 July, 2022

1 Comment

  1. ಲಲಿತಾ ಸಿದ್ಧಬಸವಯ್ಯ

    ಇನ್ನೊಬ್ಬರಿಗೆ ಮಾತನಾಡಲು ಆಸ್ಪದವನ್ನೇ ಕೊಡದ ಘಟವಾಣಿಯರು ಎಲ್ಲಾ ಸಂಸ್ಥೆಗಳಲ್ಲೂ ಇದ್ದೇ ಇರುತ್ತಾರೆ. ಬಾಯಿದ್ದವರು ಬರದಲ್ಲೂ ಗೆದ್ದರು ಎನ್ನುವ ಹಾಗೆ ಹೇಗೋ ಚಲಾವಣೆಗೆ ಬಂದು ಬಿಡುತ್ತಾರೆ. ಇವರ ಅಬ್ಬರದಲ್ಲಿ ಅನೇಕರ ದನಿ‌ ಉಡುಗಿ ಬಿಡುತ್ತದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading