ಸುಜಾತಾರ ನೀಲಿ ಮೂಗಿನ ನತ್ತು: ಹಾಸನ ಸೀಮೆಯ ಹಳ್ಳಿ ಚಿತ್ರಗಳು
ಪ್ರೊ. ಶಿವರಾಮಯ್ಯ
ಹಾಸನ ಜಿಲ್ಲೆ ಅರೆ ಮಲೆನಾಡು ಸೀಮೆ. ಆಲೂರು ತಾಲೂಕಿನ ಮರ್ಸು ಹೊಸಳ್ಳಿ ಎಂಬುದೊಂದು ಊರು. ಕೃಷಿ ಪ್ರಧಾನ ಬದುಕು ಆ ಊರಿನದು. ಇದು `ನೀಲಿ ಮೂಗಿನ ನತ್ತು’ ಲೇಖಕಿ ಹೆಚ್.ಆರ್. ಸುಜಾತಾರ ಹುಟ್ಟೂರು. ಈ ಸಂಕಲನದ ಕಥೆಗಳ ಕೇಂದ್ರ ಬಿಂದು ಸಹ.
ಇವರು ತಮ್ಮ ಬಾಲ್ಯದ ನೆನಪಿನ ಗಣಿಗೆ ಇದರಲ್ಲಿ ದಾಳಿ ಇಟ್ಟಿದ್ದಾರೆ. ಆ ಊರು, ಕೇರಿ, ಕೊಟ್ಟಿಗೆ, ತಿಪ್ಪೆಗುಂಡಿ, ಗದ್ದೆ, ತೋಟ, ತೆವರು, ತಿಟ್ಟುಗಳನ್ನು ಹತ್ತಿ ಇಳಿವ ಸುಜಾತಾರ ಮಣ್ಣಿನ ನುಡಿ ಆ ಎಲ್ಲದರ ಗಂಧ ಘಮಲನ್ನು ಹೊತ್ತು ವಾಚಕರಿಗೆ ಮತ್ತು ಬರಿಸುತ್ತದೆ. ಇವರು ತಮ್ಮ ಬಾಲ್ಯದ ನೆನಪುಗಳೆಂಬ ಲಕ್ಷ ನಕ್ಷತ್ರದ ನವಿಲನ್ನು ತಬ್ಬಿ ಹಿಡಿದು `ಈ ಕಣ್ಣು ನೋಡಿ, ಈ ಬಣ್ಣ ನೋಡಿ, ಈ ಮಾಟ ಈ ಮೋಡಿ ಎಲ್ಲಾದರೂ ಕಂಡಿರಾ?’ ಎಂಬ ಮೆಲು ನುಡಿಯಲ್ಲಿ ಸೋಜಿಗ ಹುಟ್ಟಿಸುತ್ತಾರೆ. ಮಲೆನಾಡಿನ ಗಿಡ್ಡ ದನಗಳ ಪಂಚ ಗವ್ಯದ ಜೀವಾಮೃತ ಚಿಮುಕಿಸಿ ನೀಲಿ ಮೂಗಿನ ನತ್ತಿಗೆ ಅಕ್ಕಸಾಲಿಯ ಹೊಳಪು ನೀಡುತ್ತಾರೆ.
ಶಿಲ್ಪಿಯಾದವನು ಕಲೆಯನಲ್ಲದೆ ಶಿಲೆಯನ್ನೇನು ಸೃಷ್ಟಿಸಬಲ್ಲನೆ ಎಂಬಂತೆ ಸುಜಾತಾರ ಅಭಿಜಾತ ಕಲೆ ಅವರ ಮೂಗಿನ ನತ್ತಿನಲ್ಲಿ ಒಪ್ಪ ಹಾಕಿದ ನಕ್ಷತ್ರದಂತೆ ಮಿನುಗುತ್ತದೆ. ಮರ್ಸುಹೊಸಳ್ಳಿ ಎಂಬ ಹೆಸರಿಗೆ ಅನ್ವರ್ಥವಾಗಿ ಎಲೆ ಮರೆಯಂತಿದ್ದ ಇವರ ಹುಟ್ಟೂರು ಪ್ರಸ್ತುತ ನೆನಪಿನ ಚಿತ್ರಗಳ ಮೂಲಕ ಅನಾವರಣಗೊಂಡಿದೆ.
ಆ ಊರಿನ ಹತ್ತೂ ಸಮಸ್ತರು ದನಕರು ಆಡು ಕುರಿ ಕೋಳಿ ಪ್ರಾಣಿ ಪಕ್ಷಿ ಸಮಸ್ತವೂ ಇಲ್ಲಿ ಮೆರವಣಿಗೆ ಹೊರಟಂತಿದೆ. ಇಡೀ ಊರಿಗೆ ಊರೇ ಸುಜಾತಾರ ಎದುರು ಬಂದು `ಇಲ್ಲಿ ತಂಕ ಎಲ್ಲಿದ್ದೆ ನಮ್ಮವ್ವ, ನನ್ನ ಬಗ್ಗೆ ತನ್ನ ಬಗ್ಗೆ ಒಂದಿಷ್ಟು ಬರೆಯವ್ವಾ’ ಎಂದು ಕಕ್ಕುಲಾತಿಯಿಂದ ಕೇಳುತ್ತಿರುವಂತಿದೆ. ಆ ಪ್ರೀತಿ ಮಳೆಯಲ್ಲಿ ಮಿಂದ ಈ ಹೆಣ್ಣು ಮಗಳು ಮರೆವು ಆಲಸ್ಯ ದಣಿವರಿಯದೆ ಮರು ಸೃಷ್ಟಿಗೆ ಕೈ ಹಾಕುತ್ತಾರೆ.
ಅಲ್ಲಿ ನೂರು ಸ್ವರ ನೂರು ತರ ಕೇಳಿ ಬರುತ್ತಿದೆ. ಇಂತಿದು ಹಾಸನ ಸೀಮೆ ಗ್ರಾಮಾಯಣದ ಕಥನ. ತನ್ನ ಮೂಗಿನ ನತ್ತ ಅಡ ಹಾಕಲು ಬಂದ ನೀಲಿ; ತವರು ಹಂಬಲದ ಅಬ್ಬನದ ಅತ್ತೆ; ಗಂಡಸಿನಂತೆ ಗಾಡಿ ಹೊಡೆಯುವ ಶಿವಮ್ಮ; ಪೂರ್ವಿಕಳಾದರೂ ಪ್ರತ್ಯಕ್ಷ ದರ್ಶನ ನೀಡುವ ಹೊನ್ನಳ್ಳಿ ಅಮ್ಮ; ಇರುಳೆಲ್ಲಾ ಗೆಯ್ಯುವ ಮೂಗ ಬಸವನ ಹಿಂದೆ ತಿರುಗುತ್ತ ಕತೆ ಹೇಳುವ ದೆವ್ವ; ಅನ್ವರ್ಥನಾಮ ಹೊಂದಿದ ಬೂತಾಳಿ, ಕಡ್ಡಿ ಪುಡಿ ಸಣ್ಣರು; ಆಲೂರಿಗೆ ಹೊಸದಾಗಿ ಆಲೂಗಡ್ಡೆಯ ಬೆಳೆಯನ್ನು ಪರಿಚಯಿಸುವ ಗೌಡ್ರು; ಸುಳ್ಳೇ ತನ್ನ ಮನೆ ದೈವದಂತಿರುವ ಸುಳ್ಳಕ್ಕಿ; ತನ್ನ ಗಂಡನಿಗೆ ಬಡಿದ ಸಿಡ್ಲ ಮಾರಮ್ಮನಿಗೆ ಶಾಪ ಹಾಕುವ ಬೋರಮ್ಮ..
..ಹೆರಿಗೆಗೆ ಬಂದ ಹೆಂಗಸಿನ ಮೇಲೆ ಹರಿಹಾಯುವ ನರ್ಸು; ಸಹಜ ಹೆರಿಗೆ ಮಾಡಿಸುವ ಸೂಲಗಿತ್ತಿ; ಬೋರಮ್ಮನ ಬರಡು ಬಾಳಿಗೆ ಜೀವರಸ ಹರಿಸಲು ತನ್ನ ಗಂಡ ಯಾಲಕ್ಕಿಗೆ ಅನುವು ಮಾಡಿ ಕೊಡುವ ಹೊಂಬಾಳೆ; ಕಲ್ಲು ಹೊಡೆದು ಬದುಕು ಸಾಗಿಸುವ ಗಟ್ಟಿಗಿತ್ತಿ ಓಬವ್ವ; ಹೊಕ್ಕುಳ ಕೆಳಗಿನ ಪೋಲಿ ಬೈಗುಳಕ್ಕೆ ಹೆಸರಾದ ಮಾಲಣ್ಣ; ಹೆಂಡ್ತಿಕೈಲಿ ಹೊಡ್ಸಿಕೊಂಡರೂ ತಾನೇ ಹೊಡೆಯುತ್ತಿರುವಂತೆ ಬಾಯಿ ಮಾಡುವ ದಾಸಯ್ಯ; ತೊಂಡುಮೇಯುತ್ತದೆಂದು ಪರ ಊರಿಗೆ ಮಾರಿದರೂ ಕಣ್ಣಿ ಕಿತ್ತುಕೊಂಡು ಹೊಸಳ್ಳಿಗೆ ಬರುವ ಹಸು ಕುರುಬೋಳಿ; ಊರು ದನ ಕಾಯುವ ದೊಡ್ಡನ ನಂದಗೋಕುಲ; ಮೈಸೂರು ದಸರ ಎಷ್ಟೊಂದು ಸುಂದರ ಎಂದು ಹಾರಿ ಹೋಗಿ ನೋಡಿ ಬರುವ ಅಜ್ಜಿಯ ಗಿಣಿರಾಮ; ಕಳಕಳಿಯಿಂದ ಊರ ಒಳಿತನ್ನು ಕಾಯುವ ಜಡೆಮುನಿ, ದೆವ್ವಗಳು; ಪಾಳು ಬಿದ್ದು ಮೂರಾಬಟ್ಟೆಯಾಗಿ ಮಾತಾಡಿಕೊಳ್ಳುವ ಮಾಯಕದ ಮನೆಗಳು, ಹೀಗೆ ಊರಿಗೆ ಊರೇ ಇಲ್ಲಿ ವರ್ಣರಂಜಿತ ಮೆರವಣಿಗೆ ಹೊರಟಂತಿದೆ.
ಸುಜಾತಾರ ಕಥನಗಳಲ್ಲಿ ವಿಶಿಷ್ಟವಾಗಿ ಒಟ್ಟೈಸಿದ ಅಷ್ಟಾದಶ ವರ್ಣನೆಗಳಿಂದ ಕೂಡಿ ಗಮನ ಸೆಳೆಯುತ್ತದೆ `ಕರುಳುಬ್ಬರದ ಹೊಂಬೆಳಕು’. ಕುವೆಂಪು ಅವರ `ಅಜ್ಜಯ್ಯನ ಅಭ್ಯಂಜನ’ದಂತಿದೆ ಇದರಲ್ಲಿ ಬರುವ ಅಜ್ಜಮ್ಮಾರ ದೀವಳಿಗೆ ಆಚರಣೆ. ದೀವಳಿಗೆ ಹಬವ್ಬು ಸುಗ್ಗಿ ಕಾಲದಲ್ಲಿ ಬರುತ್ತದೆ. ಈ ಹಬ್ಬವನ್ನು ಊರಿಗೆ ಊರೇ ಹೇಗೆ ಆಚರಿಸುತ್ತದೆ ಎಂಬುದನ್ನು ಈ ಕಥನದಲ್ಲಿ ಕಟ್ಟಿಕೊಡುತ್ತಾರೆ. ಆ ದಿನ ಕೋಳಿ ಕೂಗುವ ಹೊತ್ತಿಗೆ ಎದ್ದ ಆ ಊರು ತಿಪ್ಪಮ್ಮನ ಪೂಜೆ ಮುಗಿದು ಅವಳನ್ನು ಸಾಗು ಹಾಕುವವರೆಗೆ ಎಡೆಬಿಡದೆ ಚಟುವಟಿಕೆಯಿಂದ ಮೆರೆಯುತ್ತದೆ. ಸೃಷ್ಟಿ ಸಮಸ್ತವೂ ಅದರಲ್ಲಿ ಭಾಗಿಯಾಗುತ್ತದೆ. ಅಂದು ಸಕಲ ಪುರಾತನರಾದ ಯಜಮಾನಿ ಅಜ್ಜಮ್ಮಾರು ವಹಿಸುವ ಪಾತ್ರ ಮನಮುಟ್ಟುವಂತಿದೆ. ಆ ದಿನ ಮಕ್ಕಳು ಮರಿಗಳಿಗಲ್ಲದೆ ದನಕರುಗಳಿಗೂ ಸ್ನಾನ ಮಡಿ ಆಗುತ್ತದೆ. ನಡುನಡುವೆ ಪಟಾಕಿಗಳು ಚಟಪಟಗುಟ್ಟುತ್ತವೆ. ಎಲ್ಲಿ ನೋಡಿದರೂ ಕರುಳುಬ್ಬರದ ಹೊಂಬೆಳಗು ಚೆಲ್ಲಾಡುತ್ತದೆ. ಅದ ನೋಡುವ ಕಣ್ಗಳ ಪುಣ್ಯ; ಮಾತಾಡುವ ಬಾಯ್ಗಳ ರಸಾಯನ;
ಈ ಜನತಾ ಪ್ರಜ್ಞೆಯಲ್ಲಿ ವೈಚಾರಿಕ ಜಾಗೃತಿ ಜೀವ ಪಡೆದು ಮೂಡುವ ರೀತಿ ಅನನ್ಯ. ದೀಪಾವಳಿಯ ದಿನ ಬಲಿ ಚಕ್ರವರ್ತಿಯು ವಿಷ್ಣುವಿನ ಅವತಾರಿ ವಾಮನನನ್ನು ಆದರದಿಂದ ಬರಮಾಡಿಕೊಂಡು ಪೂಜಿಸುವುದು; ಅವನು ಬಲಿಯನ್ನು ಮೂರಡಿ ಭೂಮಿ ಬೇಡುವುದು; ಶುಕ್ರಾಚಾರ್ಯರು ಬೇಡ ಬೇಡವೆಂದು ಅಡ್ಡ ಬಂದರೂ ದಾನ ಕೊಡುವುದು; ದಾನ ಪಡೆದ ವಾಮನ ಭೂಮಿಗೊಂದು ಪಾದ, ಆಕಾಶಕ್ಕೊಂದು ಪಾದ ಇಟ್ಟು ಅಳೆದು ಇನ್ನೊಂದು ಪಾದವನ್ನು ಎಲ್ಲಿಡಬೇಕೆಂದು ಕೇಳಲು ಬಲಿಯ ಸಮ್ಮತಿಯ ಮೇರೆಗೆ ಅವನ ತಲೆಯ ಮೇಲಿಟ್ಟು ಆತನನ್ನು ಪಾತಾಳಕ್ಕೆ ಮೆಟ್ಟಿದ್ದು ಇತ್ಯಾದಿ ಇದು ಕಥೆ.
ಋಜು ಸ್ವಭಾವದ ನಮ್ಮ ಹಳ್ಳಿಗರಿಗೆ ಇಂಥ ಕಥೆ ಬೇಕಿಲ್ಲ. ವಾಮನ ಮಾಡಿದ್ದು ಮೋಸ. ಆದ್ದರಿಂದ ಅವನ ಪಾತ್ರ ಇಲ್ಲಿ ಗೈರುಹಾಜರಿ. ಕಥನದ ಮುಕ್ತಾಯವೇ ಅದನ್ನು ಹೇಳುತ್ತದೆ; `ಬಲಿ ಪಾಡ್ಯಮಿ ದಿಸ ಮನೆಮನಿಗೆ ಬಂದ ಬಲಿಚಕ್ರವರ್ತಿ ಈ ದೀವಳಿಗೆ ಹಬ್ಬ ಮಾಡೋ ಈ ಊರಿನ ಪ್ರಜೆಗಳ ಕಂಡು ತಾನೂ ಊಟದ ಮನೆ ಮೆಟ್ಲ ಮೇಲೆ ಕಾಲು ನೀಡಕಂಡು ಕೂರನು. ಅಲ್ಲಿಂದ ದೇವರ ಮನೆ, ಕೊಟ್ಟಿಗೆ, ಅಡುಗೆಮನೆ ತಯ್ಯಾರಿಯ ಕಾಣತಾ… ಹಾಕೋ ಎಡೆ ರುಚಿ ನೋಡಿ ಹೋಗದೂ ಅಲ್ಲದೆ ವಾಮನನ ಪ್ರವೇಶವೇ ಇಲ್ಲದಿರ ಈ ಊರಿನ ಜನರ, ಹಸುಮಗಿನ ಬುದ್ಧಿಗೆ ಬೆರಗಾಗಿ ಬೆರಳ ಮೂಗಿನ ಮೇಲೆ ಇಟ್ಕಂಡು ನೋಡತಾ ಕೂರೋನು. (ಪುಟ:129) ಹೀಗೆ ಸಂಭ್ರಮಿಸುವ ದೀವಳಿಗೆ ಆಚರಣೆಯ ಕಂಡು ಬಲಿಚಕ್ರವರ್ತಿಯೇ ಬೆರಗಾಗಿ ಅಜ್ಜಮ್ಮಾರು ಪೂಜಿಸುವ ತಿಪ್ಪಮ್ಮ ಮುಂತಾದ ದೇವಾನುದೇವತೆಗಳಿಗೆ ಭಕ್ತಿಯಿಂದ ಕೈಮುಗಿದು ಅತ್ತ ಕಾಣದಂತೆ ಮಾಯವಾಗುವನು. ಹೀಗೆ ಜೀವ ವಿರೋಧಿ ವೈದಿಕ ಪುರಾಣ ಕಥೆಯನ್ನು ಪರಿವರ್ತಿಸಿ ಸದ್ದಿಲ್ಲದೆ ಜೀವಪರವಾದ ದ್ರಾವಿಡ ಸಂಸ್ಕøತಿ ಸಂಕಥನವನ್ನಾಗಿಸುತ್ತಾರೆ.
ನೀಲಿ ಮೂಗಿನ ನತ್ತು ಸಂಕಲನದ ಮತ್ತೊಂದು ಹೊನ್ನಗರಿಯೆಂದರೆ `ಚಿತ್ರ ಸಂತೆಯೊಳಗೊಂದು ದೀಪಾವಳಿ’. ಒಮ್ಮೆ ಲೇಖಕರು ನಗರದಲ್ಲಿ ನಡೆವ ಚಿತ್ರಸಂತೆಗೆ ಹೋಗುವರು. ಅಲ್ಲಿ ಊರಿಗೆ ಹೋಗಲು ಬಸ್ ಚಾರ್ಜ್ ಆದರೂ ಸಾಕು ಎಂದು ಪ್ರಾರ್ಥಿಸಿದ ಒಬ್ಬ ಅಮೆಚೂರ್ ಕಲಾವಿದ ಚಿತ್ರಿಸಿರುವ ಯುವತಿಯೊಬ್ಬಳ ಚಿತ್ರಪಟವನ್ನು ಕೊಳ್ಳುವರು. ಅದನ್ನು ತಂದು ಮನೆಯಲ್ಲಿ ಬೇರೊಬ್ಬ ಕಲಾವಿದ ಚಿತ್ರಿಸಿರುವ ಚಿತ್ರದೊಂದಿಗೆ ತುಲನೆ ಮಾಡಿ ನೋಡುವರು. ಹಾಗೆ ನೋಡುತ್ತ ನೋಡುತ್ತ ಅವರ ನೆನಪು ತಟ್ಟನೆ ತನ್ನೂರಿನ ದೀಪಾವಳಿಯ ದಿನ ನೆನಪಾಗುವುದು; ಅಂದು ಇವರ ಮನೆಯಲ್ಲಿ ದೀಪಾವಳಿಯ ಸಂಭ್ರಮದ ಆಚರಣೆ ನಡೆಯುತ್ತಿದ್ದರೆ, ಅವರ ಎದುರು ಮನೆಯ ಕಿಟಕಿಯಲ್ಲಿ ಕಂಡ ಎರಡು ಮಕ್ಕಳ ಮೇಲೆ ಇವರ ಕಣ್ಣು ಕೀಲಿಸುತ್ತವೆ. ಆ ಮಕ್ಕಳು ಕರೆದರೂ ಆ ಕಿಟಕಿ ಫ್ರೇಮಿನಿಂದ ಈಚೆ ಬರಲೊಲ್ಲವು; ಬೆಳಿಗ್ಗೆ ಆಳುಗಳ ಮೂಲಕ ತಿಳಿದ ವಿಷಯ ಏನೆಂದರೆ ಅಂದು ಸಂಜೆ ಅವರ ಮನೆಯಲ್ಲಿ ನಿಟ್ಟುಪವಾಸ. ಆ ಕಾರಣದಿಂದ ಮಕ್ಕಳನ್ನು ಮನೆಯಿಂದ ಹೊರಗೆ ಬಿಟ್ಟಿಲ್ಲ.
ಈಗ ಆ ಮನೆಯಾಗಲಿ ಆ ಮಕ್ಕಳಾಗಲಿ ಯಾರೂ ಇಲ್ಲ. ಮನೆ ಕೂಡ ನೆಲಸಮ. ಆದರೆ ಆ ಮಕ್ಕಳ ದೈನ್ಯ ಮುಖ ಮಾತ್ರ ಇವರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಈಗ ಅವರ ಚಿತ್ತ ಮತ್ತೆ ಚಿತ್ರ ಸಂತೆಯ ಆ ಕಲಾವಿದನತ್ತ ಅರಿಯುತ್ತದೆ. `ಬಡತನಕ್ಕೂ ಕಲೆಗೂ ಸಂಬಂಧವಿದೆಯೇ? ಮಯಸ್ಸಿಗೂ ಕಲಾತ್ಮಕ ಅನುಭವಕ್ಕೂ ತಾಳೆಯಾಗುತ್ತದೆಯೇ?'(ಪುಟ-121) ಹೀಗೆ ಸಂತೆಯಿಂದ ತಂದ ಚಿತ್ರಪಟವೊಂದರ ನೆಪದಿಂದ ಲೇಖಕರ ಸಮಾಜೋ ಆರ್ಥಿಕ ದೃಷ್ಟಿ ಧೋರಣೆ ಏನೆಂದು ತಿಳಿಯುವುದರೊಂದಿಗೆ ಇವರು ಯಾರ ಪರ ಎಂಬುದು ನಮ್ಮ ಅರಿವಿಗೆ ಬರುತ್ತದೆ. ಬೇಂದ್ರೆಯವರ ಮಾತಿನಲ್ಲಿ ಹೇಳುವುದಾದರೆ ಈ ಬರವಣಿಗೆಯ ಭಾವ `ರೇಶಿಮೆ ಪಕ್ಕ ನಯ, ಮುಟ್ಟಲಾರೆ ಭಯ’ ಎಂಬಂತಿದೆ.
ಈ ಬದುಕು ಎಂಬುದು ಮಾಯಾಮಂತ್ರಗಾನ (Magical realism)ದಂತೆ. ಅದನ್ನು ಹಿಡಿವ ಬಿಡುವ ಆಟ ನಡೆದೇ ಇದೆ. ಯಾರೊ ಅಂದರಂತೆ `ದೆವ್ವಗಳಿಲ್ಲದ ಊರು ಅದೆಂಥ ಊರು?’ ಎಂದು. ನಿಜ. ಮ್ಯಾಕ್‍ಬೆತ್ ನಾಟಕದ ಮಾಟಗಾತಿಯರು((Whiches)); ಸರಸಮ್ಮನ ಸಮಾಧಿಯ ದೆವ್ವ; ಕುಸುಮ ಬಾಲೆಯ ಜೋತಮ್ಮಗಳು; ಹೇಗೊ ಹಾಗೆ ಸುಜಾತಾರ `ನೀಲಿ ಮೂಗಿನ ನತ್ತಿನಲ್ಲಿ’ ಪ್ರತ್ಯಕ್ಷವಾಗುವ ಪೂರ್ವಿಕಳಾದ ಹೊನ್ನಳ್ಳಿ ಅಮ್ಮ, ಮೂಗ ಬಸವನ ಹಿಂದೆ ಇರುಳೆಲ್ಲ ಸುತ್ತುವ ದೆವ್ವ; ಜಡೆ ಮುನಿಯೊಂದಿಗೆ ಊರ ಒಳಿತನ್ನು ಹಾರೈಸುವ ದೆವ್ವಗಳು; ಇವೆಲ್ಲವೂ ಗಾಳಿ ದೇವತೆಗಳಾಗಿ ಮನುಕುಲಕ್ಕೆ ಒಳಿತನ್ನು ಮಾಡುವ ದೈವಗಳೇ; ಕೆಡುಕು ಎಂಬುದು ಏನಿದ್ದರೂ ಮನುಷ್ಯನೊಳಗೇ ಹೊರತು ಹೊರಗಿಲ್ಲ ಎಂಬುದನ್ನು ಇವು ಸಾಬೀತುಪಡಿಸುವ ಮಾಯಾ ಶಕ್ತಿ ವಿಶೇಷಗಳು. ನಮ್ಮ ಜನತಾ ಪ್ರಜ್ಞೆಯಲ್ಲಿ ಸದಾ ಹರಿದು ಬರುತ್ತಿರುವ ಈ ಅಕಳಂಕ ವೈಚಾರಿಕ ಧಾರೆಯನ್ನು ಸುಜಾತಾ ತಣ್ಣಗೆ ಹಿಡಿದಿಡುತ್ತಾರೆ.
ಕಥಾ ತಂತ್ರದ ದೃಷ್ಟಿಯಿಂದ ನೋಡಿದರೆ ಸುಜಾತಾ ಜನಪದ ಅಜ್ಜಿ ಹೇಳುವ ಕಥಾ ತಂತ್ರವನ್ನು ಚೆನ್ನಾಗಿ ದುಡಿಸಿಕೊಳ್ಳುತ್ತಾರೆ. ಇಲ್ಲಿ ಪಶು ಪಕ್ಷಿ ಪ್ರಾಣಿಗಳೂ ಮನುಷ್ಯರಂತೆಯೇ ವರ್ತಿಸುತ್ತವೆ; ಲೋಕದ ಕಷ್ಟ ಸುಖವನ್ನು ಅನುಭವಿಸುತ್ತವೆ. ಅದಕ್ಕೊಂದು ಉದಾಹರಣೆ `ದಸರಾ ನೋಡಿ ಬಂದ ಗಿಳಿ’ ಎಂಬ ರೂಪಕಾತ್ಮಕ ಕಥನ. ಬಾಲ್ಯ ಕಾಲದಲ್ಲಿ ಮೈಸೂರಿಗೆ ಹೋದ ಅನುಭವವನ್ನು ಗಿಳಿಯಲ್ಲಿ ಪರಕಾಯ ಪ್ರವೇಶ ಮಾಡಿದ ಲೇಖಕರು ಮೈಸೂರನ್ನು ಸೋಜಿಗದ ಹೊಳಲು ಎಂಬಂತೆ ಆಪ್ಯಾಯಮಾನವಾಗಿ ಚಿತ್ರಿಸುತ್ತಾರೆ.
ಮೈಸೂರು ನಗರ ಎಷ್ಟೊಂದು ಸುಂದರ! ಅದನ್ನು ತನ್ನ ಬಾಲ್ಯದ ರಸ ರೋಮಾಂಚನವನ್ನಾಗಿ ಇನ್ನೂ ಅಚ್ಚಳಿಯದೆ ತಮ್ಮ ಸುಪ್ತ ಚಿತ್ತದಲ್ಲಿ ಅಚ್ಚೊತ್ತಿದಂತಿದೆ. ಈಗ ಅದಿ ಗಿಳಿಯ ಕಣ್ಣ ನೋಟದಲ್ಲಿ ಇನ್ನೂ ಹಸುರಾಗಿ ಅಭಿವ್ಯಕ್ತಿ ಪಡೆಯುತ್ತದೆ. ಸುಜಾತಾರ ಕಥನ ಶೈಲಿಗೆ ಅವರದೇ ಆದ ವಿಶಿಷ್ಟ ಛಾಪು ಬಿದ್ದಿದೆ. ಹಾಸನ ಸೀಮೆಯ ಆಡು ನುಡಿಯಲ್ಲಿ ಅವರು ಲೀಲಾ ಜಾಲವಾಗಿ ಬರೆಯಬಲ್ಲರು. ನಂಜನಗೂಡು ಸೀಮೆಯ ಆಡುನುಡಿಯನ್ನು ದೇವನೂರು ಮಹಾದೇವ ಬಳಸಿದಂತೆ ಇವರು ತಮ್ಮ ಅಭಿವ್ಯಕ್ತಿಗೆ ಆ ಪ್ರಾದೇಶಿಕ ನುಡಿಗಟ್ಟನ್ನು ಅಥೆಂಟಿಕ್ಕಾಗಿ ದುಡಿಸಿಕೊಂಡಿದ್ದಾರೆ.
ಈ ವಸ್ತು ಈ ನುಡಿಗಟ್ಟಿನಲ್ಲಲ್ಲದೆ ಅಭಿವ್ಯಕ್ತಿ ಪಡೆಯಲಾದು ಎಂಬಂತಿದೆ ಈ ಬರಹಗಳ ವಸ್ತು ಮತ್ತು ತಂತ್ರ ವಿನ್ಯಾಸ. ಅದಕ್ಕೆ ನಿದರ್ಶನ ಹೇಳುವುದಾದರೆ ಅಜ್ಜಮ್ಮಾರು ಆಚರಿಸುವ ದೀವಳಿಗೆ. ಆ ವಿವರ ನೋಡಿ: “ಆ ಐದು ಸಗಣಿ ಗುಡ್ಡೆ ಈಗ ಹೂವಿನ ಅಕರಾಳ ರೂಪದ ಗುಡ್ಡೆಯಂಗೆ ಕಾಣತಲೆ….. ಕೈನೂ ತಲೆನೂ ಅಜ್ಜಮ್ಮನ ಕೈಯಿಂದ ಬೇಡಿ ವರ ಪಡಕಂತಲೇ, ಆ ದೇವರು ಅನ್ನೋ ದೇವ ಹೂವೆ, ಶ್ರೀಕೃಷ್ಣನ ಮುಂದೆ ಕೈ ಮುಗುದು ನಿಂತ ಪಂಚ ಪಾಂಡವರಂಗೆ ತೆಪ್ಪಗೆ ಕೈಯೊಡ್ಡಿ ಅಜ್ಜಿ ಹೇಳಿದಂಗೆ ಕೇಳಿ ದೇವ ರೂಪವ ಪಡೆಯವು”. (ಪುಟ:128)
ಇದು `ನರಭಕ್ತಿ ಅಳಿದರೆ ಎಲ್ಲಿಯದು ಹರಶಕ್ತಿ’ ಎಂಬ ಕುವೆಂಪು ವಾಣಿಗೆ ಭಾಷ್ಯ ನುಡಿದಂತಿದೆ. ಕಾಣದ ದೈವವ ಎಲ್ಲೊ ಯಾತ್ರೆ ಜಾತ್ರೆ ಗುಡಿ ಚರ್ಚು ಮಸೀದಿಗಳಲ್ಲಿ ವೃಥಾ ಹುಡುಕುವ ಮಂದಿ ಅಜ್ಜಿಯ ಈ ತಿಪ್ಪಮ್ಮನ ಪೂಜೆ ನೋಡಬೇಕು; ಕುವೆಂಪು ಅವರ ಗೊಬ್ಬರ ಕವಿತೆಯನ್ನು ಓದಬೇಕು. ಇಲ್ಲಿ ವೈದಿಕ ದೈವಗಳ ಪುಡಿಗುಟ್ಟಿ ನಿಸರ್ಗ ಪೂಜೆಗೆ ಮುಂದಾಗುವುದು ಜನಪದ ಪ್ರಜ್ಞೆ . ಅದು ಅಣುರೇಣು ತೃಣಕಾಷ್ಠದಲ್ಲೂ ದೈವೀಸಾಕ್ಷಾತ್ಕಾರ ಪಡೆಯುವಂತಹುದು.
ಪರ ಊರಿಗೆ ಮಾರಿದ ಹಸು ಕುರುಬೋಳಿ ಅಲ್ಲಿಂದ ಕಣ್ಣಿ ಕಿತ್ಕಂಡು ತನ್ನ ಊರು ಮನೆ ಕೊಟ್ಟಿಗೆಗೆ ಬಂದಾಗ ಊರು ಮೂಗಿನ ಮೇಲೆ ಬೆಳ್ಳಿಟ್ಕಂಡು ನಿಂತಿತ್ತು. “ಒಳ್ಳೇ ಕುರುಬೋಳಿ ಕಣೆ ಇದು…” “ಪಾಪಾ, ಹಸಾದ್ರೇನು ಅದು ಊರ ಮಗಳಲ್ವಾ?”ಮತ್ತೆ ಬಂದುಬುಡ್ತಲ್ಲ ತೆಗಿ, ಅದು ನಮ್ಮಂಗೆ ಅಲ್ವಾ? “ಅಯ್ಯೋ, ಎಷ್ಟು ಗಾರು ಹೊಡ್ಕ ಬಂದ್ಲೋ ಏನೋ?” “ಹೂಂ…ಅಲ್ಲಿ ಅಗಳೆ, ಕಣ್ಣಿ ಕಿತ್ಕಂದು ಬಂದೋಳೆ. ಕತ್ತಲ್ಲಿ ಹಗ್ಗ ನೇತಾಡ್ತಿಲ್ವಾ? ಅಲ್ಲೋಡು.” “ಓ, ಈ ಅರಬ್ಬೆಯ ಹೊಸುಬ್ರು ಕೈಲಿ ಬಗ್ಸಕಾದಾದಾ? ಅವ್ವಾ! ನಮ್ಮೂರ್ನೇ ಮೇಸದೋಳು ಅವ್ಳು” ಹಿಂಗೆ ನೂರೆಂಟು ಪ್ರಶ್ನೆ ಉತ್ತರವ ಹುಡುಕಿ ಮಾತಾಡ್ತ ಮಾತಾಡ್ತಾ, ಊರು ಅನ್ನದು ಮನೆ ಬಾಗಿಲ ಒಳ್ಗೆ ಹೋಗಿದ್ದೆ ಬಾಗ್ಲ ಹಾಕಂತು.( ಪುಟ 45) ಇದು ಸುಜಾತಾರ ದೇಸಿಗೆ ಇನ್ನೊಂದು ನಿದರ್ಶನ.
ಸ್ತ್ರೀ ಸಂವೇದನಾಶೀಲ ಚಿಂತಕರಾದ ಶ್ರೀಮತಿ ಬಿ.ಎನ್.ಸುಮಿತ್ರಾಬಾಯಿಯವರು ನಮ್ಮ ಲೇಖಕಿಯರು ಜೆಂಡರ್ ಐಡೆಂಟಿಟಿಯನ್ನು ಮೀರಿ ಸಾಹಿತ್ಯ ರಚನೆ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ನೆಲೆಯಲ್ಲಿ ನೋಡಿದರೆ, ಸುಜಾತಾರ ನೀಲಿಮೂಗಿನ ನತ್ತು ಸಂಗ್ರಹವು ಇದೊಂದು ಕೇವಲ ಮಹಿಳಾ ರಚನೆ ಎಂಬ ಹಣೆಪಟ್ಟಿಯನ್ನು ಮೀರಿ ನಿಲ್ಲುವಂತಿದೆ. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಸುಜಾತಾ ಅವರ ಪ್ರಾದೇಶಿಕ ಭಾಷಾ ಪ್ರಯೋಗ ತನ್ನದೇ ಆದ ಛಾಪಿನಿಂದ ವಾಚಕರನ್ನು ಮಂತ್ರಮುಗ್ಧರನ್ನಾಗಿಸುವ ಸಾಮಥ್ರ್ಯವನ್ನು ಹೊಂದಿದೆ. ಉದಾಹರಣೆಗೆ, ದಸರಾ ನೋಡಿ ಬಂದ ಗಿಳಿಯೊಡನೆ ಊರ ಹುಡುಗರ ಸಂವಾದ ಇಂತಿದೆ:
“ಎಲ್ಲಿಗೋಗಿದ್ಲಾ ಗಿಣ್ರಾಮ” “ಊರ ತಿರಗಾಕೆ” ಇದು ಕತ್ತನ್ನ ಮ್ಯಾಕೆ ಎತ್ಕಂದು ಉತ್ರ ಹೇಳತು. ಅಜ್ಜಿ ಬೇರೆ ಸಾರಿ ಸಾರಿ ಹೇಳ್ ಕಳಿಸಿದ್ಲಲ್ಲಾ….ತಲೆ ಬಗ್ಗುಸ್ಬೇಡ ಕನಪ್ಪಾ ಅನಕಂದು. “ಅರಮನೆ ನೋಡದಾ” “ಹೋ” “ದೇವಸ್ಥಾನ ನೋಡದಾ?” ದೇವರ ಮುಂದಿನ ಗರುಡಗಂಬ ನೋಡದಾ?” ಹೋ” “ಬೆಟ್ಟ ನೋಡದಾ?” “ಹೋ” “ಅರಮನೆ ನೋಡದಾ?” “ಹೋ” “ಅದರ ಮೇಲಿನ ಅಟ್ಟಾ ನೋಡದಾ?” “ಹೋ” “ಅರಮನೆ ಸುತ್ತಲೂ ಕಳಸ ಎಸ್ಟವೆ ನೋಡದಾ.. ಆಂ…?” “ಹೋ…..”
ಇದರ ಮೇಕ ಕಂಡು, ತಲೆ ಎತ್ಕಂದೆ ಮಾತಾಡೊ ಗಿಳಿ ಕಂಡು ಇವ್ರಿಗೆ ಈಗ ಸಿಟ್ಟು ಬಂತು. ಚೋಟುದ್ದ ಈತೆ. ನಮ್ಮುಂದಲೆ ತಿರಕೆ ಜಂಭ ಮಾಡತೀತಲ್ಲಾ…. ಹಾಂ! ಇದರ ಜಂಭದ ಕೊಟ್ಟ ಎಂಗಾರ ಮಾಡಿ ಮುರಿಯಾನ ತಡಿ ಅಂದಿದ್ದೆ. ಕಾಣದರಂಗೆ ಹುಡುಗ್ರು ಒಬ್ಬೊಬ್ಬರು ಒಂದೊಂದು ಮಾತ ಕೇಳಕೆ ಶರುವಾದರು. ಅಂಗೇಯ…(ಪುಟ:166)
ಸುಜಾತ ಇದುವರೆಗೆ ಜತನ ಮಾಡಿಟ್ಟುಕೊಂಡಿದ್ದ ತಮ್ಮ ಬಾಲ್ಯದ ನೆನಪುಗಳ ಭಂಡಾರವನ್ನು ಈಗ ಒಮ್ಮೆಗೆ ಬಗೆದು ಅಲ್ಲಿರುವ ಮುತ್ತು ರತ್ನಗಳನ್ನು ನಮ್ಮ ಮುಂದೆ ಹರಡಿದ್ದಾರೆ.
ಈ ಬರಹಗಳು ಗಾಂಧೀಜಿ ಪರಿಕಲ್ಪನೆಯ ಗ್ರಾಮ ಸ್ವರಾಜ್ಯ ಮಾದರಿಗಳಾಗಿ ಕಂಡು ಬರುತ್ತವೆ. ಕಳೆದ ಕಾಲದ ಊಳಿಗಮಾನ್ಯ ಸಂಸ್ಕೃತಿಯ ಕೆನೆಪದರದಂತಿರುವ ಇವು ಸುಜಾತಾರ ಮರ್ಸುಹೊಸಹಳ್ಳಿಯ ಓಣಿಯಲ್ಲೇ ಇನ್ನೂ ಅಲೆಯುತ್ತಿವೆ, ನಿಜ. ಆದರೆ ಇವರು ಇಷ್ಟಕ್ಕೇ ವಿರಮಿಸದೆ ಜಾತೀಯತೆಯ ವಾಸನೆ ಹೊಡೆಯುವ, ವರ್ಗವೈಷಮ್ಯದ ಬೀಜ ಬಿದ್ದಿರುವ, ಪಕ್ಷ ರಾಜಕಾರಣ ಹತ್ತಿ ಉರಿಯುವ, ಸ್ವಾರ್ಥ ಧೂರ್ತತನದ ಭೂತ ಕುಣಿಯುತ್ತಿರುವ ನಾಡಿನ ಹಾಳು ಹಳ್ಳಿಗಳಿಗೆ ಬಿದ್ದಿರುವ ದುಸ್ವಪ್ನಗಳನ್ನು ಕೂಡ ಧ್ಯಾನಿಸಿ ಬರೆಯಬೇಕಾದ ಬದ್ಧತೆಯನ್ನು ಅವರು ಮುಂದೆ ಬೆಳಸಿಕೊಳ್ಳಲಿ ಎಂದು ಈ ಮೂಲಕ ಹಾರೈಸುತ್ತೇನೆ.





0 Comments