ಅರಕಲಗೂಡು ಜಯಕುಮಾರ್
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ 50ವರ್ಷಗಳ(1966) ಇತಿಹಾಸವಿದೆ, ಅದೇ ರೀತಿ ಪರಿಷತ್ತಿನ ಕಟ್ಟಡಕ್ಕೆ ಸರಿ ಸುಮಾರು 15ವರ್ಷಗಳ ಇತಿಹಾಸವಿದೆ. ಹೆಚ್ ಬಿ ಜ್ವಾಲನಯ್ಯನವರ ಅಧ್ಯಕ್ಷತೆಯಿಂದ ಆರಂಭಗೊಂಡ ಪರಿಷತ್ತಿಗೆ ಇದುವರೆಗೂ 9ಮಂದಿ ಅಧ್ಯಕ್ಷರುಗಳು ಆಗಿ ಹೋಗಿದ್ದಾರೆ. 10ನೇ ಅಧ್ಯಕ್ಷರಾಗಿ ಡಾ|| ಎಚ್ ಎಲ್ ಜನಾರ್ಧನ್ ಪರಿಷತ್ತಿನ ಹಾಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ ಹೆಗ್ಗಳಿಕೆಯಿದೆ, ಜಿಲ್ಲೆಯ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಳ್ಳುವಲ್ಲಿ ಸಾಹಿತ್ಯಾಭಿಮಾನಿಗಳು, ಸಾಹಿತಿಗಳು, ಸಾರ್ವಜನಿಕರ ಸಹಕಾರದಿಂದಾಗಿ ಈ ಹಿಂದಿನ ಅಧ್ಯಕ್ಷರುಗಳು ನೆನಪಿನಲ್ಲುಳಿಯುವ ಅನೇಕ ಶಾಶ್ವತ ಕೆಲಸಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಪರಿಷತ್ತನ್ನು ಸ್ಥಾಪಿಸುವ ಕಾರ್ಯದಿಂದ ಹಿಡಿದು, ನಿವೇಶನ, ಕಟ್ಟಡ ಗಳು ಆಗಿ ಹಲ್ಮಿಡಿಯನ್ನು ಗುರುತಿಸುವ ಸ್ಮಾರಕ ನಿಮರ್ಿಸುವ ಕೆಲಸಗಳು ಮತ್ತು ಸಾಂಸ್ಕೃತಿಕವಾಗಿ ಅನೇಕ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಚಟುವಟಿಕೆಯಲ್ಲಿ ಪರಿಷತ್ತು ತನ್ನದೇ ಆದ ರೀತಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದೆ.
ಜಿಲ್ಲೆಯ ಎಲ್ಲಾ ಚಟುವಟಿಕೆಗಳಲ್ಲೂ ರಾಜಕೀಯವನ್ನೇ ಹಾಸಿ ಹೊದ್ದು ಮಲಗುವಂತಹ ಪರಿಸ್ಥಿತಿಯಲ್ಲಿಯೂ ಸಹಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಜಕೀಯದ ಬಣ್ಣದಿಂದ ಹೊರತಾಗಿ ತನ್ನ ಚಟುವಟಿಕೆಗಳನ್ನ ನಿರಂತರವಾಗಿ ಮಾಡಿಕೊಂಡು ಬಂದಿರುವುದು ಅಚ್ಚರಿಯ ಸಂಗತಿಯೇ ಹೌದು. ಇದುವರೆಗೂ ಸಾಹಿತ್ಯ ಪರಿಷತ್ತಿನ ಅದಿಕಾರದ ಚುಕ್ಕಾಣಿಯನ್ನು ಸಮಾಜ ಸೇವಕರು, ಸಾಹಿತಿಗಳು, ರಾಜಕಾರಣಿ, ಪತ್ರಕರ್ತ ಮತ್ತು ಸರ್ಕಾರಿ ಅದಿಕಾರಿಗಳು ಹಿಡಿದಿದ್ದರೂ ಸಹಾ ಅಲ್ಲಿ ರಾಜಕಾರಣದ ಸೋಂಕು ತಾಗಿಲ್ಲ ಆದರೆ ಸಾಂಸ್ಕೃತಿಕ ಭಿನ್ನಾಭಿಪ್ರಾಯಗಳು ಇರಬಹುದು ಆದರೆ ಅದ್ಯಾವುದು ಪರಿಷತ್ತಿನ ಮೇಲೆ ಕಲ್ಲು ತೂರುವಷ್ಟರ ಮಟ್ಟಿಗೆ ಹೋಗಿಲ್ಲ. ಹಾಗಿದ್ದಾಗ್ಯೂ ಜಿಲ್ಲೆಯ ಪ್ರಮುಖ ಸಾಂಸ್ಕೃತಿಕ ಕೇಂದ್ರ, ಕನ್ನಡಿಗರ ಭಾವನಾತ್ಮಕ ಸೆಲೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಕಲ್ಲು ಬಿದ್ದಿರುವುದು ಅತ್ಯಂತ ವಿಷಾದನೀಯಕರ ಸಂಗತಿ.

ಸಾಹಿತ್ಯ ಪರಿಷತ್ತು ಭವನ ಹಾಸನ ಹೃದಯಭಾಗದ ಮುಖ್ಯ ರಸ್ತೆಯ ಪಕ್ಕದಲ್ಲೇ ಸ್ಥಾಪಿತವಾಗಿದೆ, ಕಾರ್ಯಕ್ರಮ ನಡೆಸುವ ಸಭಾಂಗಣ, ಪರಿಷತ್ತಿನ ಸಭೆ ನಡೆಯುವ ಸಭಾಗಣ, ಪದಾಧಿಕಾರಿಗಳ ಕೊಠಡಿಗಳು, ಅಧ್ಯಕ್ಷರ ಕೊಠಡಿ, ಗ್ರಂಥಾಲಯ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಹೊಂದಿರುವ ಜೊತೆಗೆ ಸುಸಜ್ಜಿತವಾದ ಉದ್ಯಾನವನ, ಕೂರುವ ಬೆಂಚುಗಳು, ಹೋರಾವರಣದ ಸಭಾವೇದಿಕೆಯನ್ನು ಹೊಂದಿದೆ. ಪರಿಷತ್ತಿಗೆ ಧ್ವಜಕಟ್ಟೆ ಬಂದಿದೆ, ಹೊಯ್ಸಳ ಲಾಂಛನ, ಕುವೆಂಪು ಪ್ರತಿಮೆ ಸ್ಥಾಪನೆಯಾಗಿರುವುದು ಪರಿಷತ್ತಿನ ಕಟ್ಟಡದ ಸೌಂದರ್ಯಕ್ಕೊಂದು ಕಳೆ ತಂದಿದೆ.
ಜಿಲ್ಲೆಯ ಸಮಾಜ ಮುಖಿ ಕಾರ್ಯಕ್ರಮಗಳು, ಚಿಂತನೆಗಳು, ಸಂವಾದ ಕಾರ್ಯಕ್ರಮಗಳು, ಪರಿಷತ್ತಿನ ಚಟುವಟಿಕೆಗಳು, ಕನ್ನಡ ನಾಡು ನುಡಿಗೆ ಪೂರಕವಾದ ಅನೇಕ ಕಾರ್ಯಕ್ರಮಗಳು ಪರಿಷತ್ತಿನ ಕಟ್ಟಡದಲ್ಲಿ ನಡೆಯುತ್ತಿವೆ. ನಾಡಿನ ನೂರಾರು ಮಂದಿ ಖ್ಯಾತ ಸಾಹಿತಿಗಳು, ಗಣ್ಯರು ಹಾಗೂ ಸಾಧಕರು ಪರಿಷತ್ತಿಗೆ ಬಂದಿದ್ದಾರೆ, ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಜಿಲ್ಲೆಯ ಸಾಂಸ್ಕೃತಿಕ ಕೇಂದ್ರವಾಗಿ ಸಾಮಾಜಿಕ ತುಡಿತವಿಟ್ಟುಕೊಂಡ ಕಾರ್ಯಕ್ರಮಗಳು ಸಹಾ ಇಲ್ಲಿ ಜರುಗಿವೆ ಎಂಬುದು ಗಮನಾರ್ಹ ಸಂಗತಿ.
ಪರಿಷತ್ತಿನ ಆಡಳಿತಕ್ಕಾಗಿ ಪ್ರತೀ ಮೂರು ವರ್ಷಕ್ಕೊಮ್ಮೆ ಜರುಗುವ ಚುನಾವಣೆಗಳಲ್ಲೂ ರಾಗ ದ್ವೇಷಗಳಿಲ್ಲದ ಒಂದು ವೇಳೆ ಇದ್ದರೂ ಅದು ಚುನಾವಣೆಗೆ ಮಾತ್ರ ಸೀಮಿತವಾಗಿ ಉಳಿದಂತೆ ಸಮಾನವಾಗಿ ಎಲ್ಲರೂ ಪಾಲ್ಗೊಳ್ಳುವಂತೆ ಸಾಹಿತ್ಯ ಪರಿಷತ್ತು ತನ್ನ ಕಾರ್ಯ ಚಟುವಟಿಕೆಯನ್ನು ಮಾಡಿಕೊಂಡು ಹೋಗುತ್ತಿದೆ, ಹೀಗಿದ್ದಾಗ್ಯೂ ಕನ್ನಡ ಸಾಹಿತ್ಯ ಪರಿಷತ್ತು ಭವನಕ್ಕೆ ಕಲ್ಲು ಬಿದ್ದಿದ್ಯಾಕೆ?
ಹೆಚ್ ಬಿ ಜ್ವಾಲನಯ್ಯನವರ ಕಾಲದಲ್ಲಿ ಪರಿಷತ್ತಿನ ಸ್ಥಾಪನೆ, ಮಾ. ಹನುಮಂತೇಗೌಡರ ಅವಧಿಯಲ್ಲಿ ನಿವೇಶನ, ಹರಿಗೋಪಾಲ್ ಅವಧಿಯಲ್ಲಿ ಸುಸಜ್ಜಿತ ಕಟ್ಟಡವಾದ ನಂತರ ಅನೇಕ ಅಭಿವೃದ್ದಿ ಕೆಲಸಗಳು ಉಳಿದ ಅಧ್ಯಕ್ಷರುಗಳ ಅವಧಿಯಲ್ಲಿ ಆಗುತ್ತಾ ಹೋಗಿವೆ. ಪರಿಷತ್ತಿಗೆ ಅಧ್ಯಕ್ಷರಾಗಿ ಬಂದವರ ತೊಡಗಿಸಿಕೊಳ್ಳುವಿಕೆ ಮತ್ತು ಇಚ್ಚಾಶಕ್ತಿಯೂ ಸಹಾ ಪರಿಷತ್ತಿಗೆ ತನ್ನದೇ ಆದ ಗೌರವ, ಸ್ಥಾನಮಾನಗಳನ್ನು ಸಾರ್ವಜನಿಕ ವಲಯದಲ್ಲಿ ಉಳಿಸಿಕೊಂಡು ಬಂದಿರುವುದು ಹೆಗ್ಗಳಿಕೆಯೇ ಸರಿ.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆಯ ಮೂಲಕ ಜಿಲ್ಲೆಯ ಜನಮನದಲ್ಲಿ ಬೇರೂರವಂತಹ ಕೆಲಸ ಮಾಡಿದೆ. ಹಾಲಿ ಅಧ್ಯಕ್ಷರಾಗಿರುವ ಕವಿ ಹೃದಯದ ವೈದ್ಯರಾದ ಡಾ ಎಚ್ ಎಲ್ ಜನಾರ್ಧನ್ ಜಿಲ್ಲಾ ಮಟ್ಟದ ಸಕರ್ಾರಿ ಅದಿಕಾರಿಯಾಗಿದ್ದರೂ ಸಹಾ ಯೋಜಿತವಾಗಿ ಕನ್ನಡದ ಕೆಲಸಗಳನ್ನು ರೂಪಿಸುವ ಮೂಲಕ ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಯಾರನ್ನು ನಿರ್ಲಕ್ಷಿಸದೇ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದುವರೆಗೂ ಜಿಲ್ಲೆಯ ಇತಿಹಾಸದಲ್ಲಿ ಎಲ್ಲಾ ತಾಲೂಕುಗಳಲ್ಲಿ ಸಾಹಿತ್ಯ ಸಮ್ಮೇಳನ ನಡೆಸಿದ ಉದಾಹರಣೆ ಇರಲಿಲ್ಲ, ಹಾಗೆಯೇ ಜಿಲ್ಲೆಯಲ್ಲಿ ಅತೀ ಹೆಚ್ಚು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿದ ಉದಾಹರಣೆಯೂ ಇರಲಿಲ್ಲ ಹೀಗಿರುವಲ್ಲಿ ನಿರಂತರವಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಯನ್ನು ಮಾದರಿಯಾಗಿ ನಡೆಸಿದ ಕೀತರ್ಿಗೆ ಡಾ ಹೆಚ್ ಎಲ್ಲ ಜನಾರ್ಧನ್ ಭಾಜನರಾಗಿದ್ದಾರೆ.
ಕನ್ನಡದ ಪ್ರಥಮ ಶಾಸನ ದೊರಕಿದ ಸ್ಥಳವನ್ನು ಗುರುತಿಸಿ ಸ್ಮಾರಕ ನಿಮರ್ಿಸುವ ಕಾರ್ಯವನ್ನು ಹಿಂದಿನ ಅಧ್ಯಕ್ಷರಾದ ಹೆಚ್ ಬಿ ಮದನಗೌಡ ನಿರ್ವಹಿಸಿದರೆ, ಅದೇ ಸ್ಥಳದಲ್ಲಿ ಹಲ್ಮಿಡಿ ಕನ್ನಡ ಭವನ ನಿಮರ್ಾಣ ಮತ್ತು ಇತರೆ ಅಭಿವೃದ್ದಿ ಕೆಲಸಗಳು ಜನಾರ್ಧನ್ ನೇತೃತ್ವದಲ್ಲಿ ಆಗುತ್ತಿದೆ. ಹಲ್ಮಿಡಿ ಗ್ರಾಮವನ್ನು ಐತಿಹಾಸಿಕ ಸ್ಥಳವನ್ನಾಗಿ ಮಾಡುವ ನಿಟ್ಟಿನಲ್ಲಿ ಹಾಗೂ ಪ್ರವಾಸಿ ಕೇಂದ್ರವನ್ನಾಗಿ ಮಾಡುವ ದಿಸೆಯಲ್ಲಿ ಮಹತ್ವದ ಹಲ್ಮಿಡಿ ಉತ್ಸವ ವನ್ನು ನಡೆಸಲು ಅಧ್ಯಕ್ಷರ ನೇತೃತ್ವದ ತಂಡ ನಿರ್ಧರಿಸಿದೆ ಹಾಗೂ ಅದನ್ನು ಕಾರ್ಯರೂಪಕ್ಕೆ ತರುವ ಕ್ರಿಯೆಗಳು ಆರಂಭಗೊಂಡಿವೆ.
ಡಾ|| ಜನಾರ್ಧನ್ ಜಿಲ್ಲಾಧ್ಯಕ್ಷರಾದ ನಂತರ ಜನಪದ ಮತ್ತು ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಜಿಲ್ಲಾ ಮಟ್ಟದ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಜಾನಪದ ತಜ್ಞ ಎಸ್ ಕೆ ಕರೀಂಖಾನ್ ಮತ್ತು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಹೆಸರಿನಲ್ಲಿ ಸ್ಥಾಪಿಸಿ ನೀಡಲಾಗುತ್ತಿದೆ. ಡಾ. ಅನಕೃ ಜನ್ಮ ಜಯಂತಿ ಆಚರಣೆ, ಅನಕೃ ಹೆಸರಿನ ಪ್ರಶಸ್ತಿ ಸ್ಥಾಪನೆ, ಪೂರ್ಣ ಚಂದ್ರ ತೇಜಸ್ವಿಯವರ ಮಾಸಿಕ ಸಪ್ತಾಹ ಕಾರ್ಯಕ್ರಮ ಹಾಗೂ ಎಲ್ಲಾ ದತ್ತಿ ಕಾರ್ಯಕ್ರಮಗಳನ್ನು ಪರಿಷತ್ತು ಯಶಸ್ವಿಯಾಗಿ ಮಾಡಿದೆ. ಖ್ಯಾತ ಸಂಗೀತ ನಿದರ್ೇಶಕ ಹಂಸಲೇಖ ಮತ್ತವರ ದೇಸೀ ತಂಡವನ್ನು ಜಿಲ್ಲೆಗೆ ಕರೆಸಿ ದೇಸೀ ಉತ್ಸವವನ್ನು ಜಿಲ್ಲೆಯ ಜನತೆಗೆ ಸವಿಯಲು ಅವಕಾಶ ಮಾಡಿದ ಹೆಗ್ಗಳಿಕೆಯೂ ಸಹಾ ಸಂದಿದೆ.
ರಾಜ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧಿಕ ಸಂಚಿಕೆಯಾಗಿ ಕನ್ನಡ ನುಡಿ ಹೊರಬರುತ್ತಿದೆ, ಅದೇ ಮಾದರಿಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಲಕ ಹೊಯ್ಸಳ ಸಿರಿ ಎಂಬ ತ್ರೈಮಾಸಿಕ ಸಂಚಿಕೆಯನ್ನು ಜಿಲ್ಲೆಯ ಬರಹಗಾರರಿಗಾಗಿಯೇ ಮೀಸಲಾಗಿರಿಸಿ ಹೊರತರುತ್ತಿರುವುದು ದಾಖಲಾರ್ಹ ಸಂಗತಿ. ಪರಿಷತ್ತಿನ ಹೊಯ್ಸಳ ಸಿರಿ ಸಂಚಿಕೆಯನ್ನು ಯಾವುದೇ ಲಾಭದ ಉದ್ದೇಶವಿಲ್ಲದೇ ಅತ್ಯಂತ ಕಡಿಮೆ ಜಾಹೀರಾತು ಮೂಲಕ ಹೊರತರಲಾಗುತ್ತಿದೆ. ಪರಿಷತ್ತಿನ ಕಾರ್ಯಕ್ರಮಗಳ ವಿವರ ಮತ್ತು ಲೆಕ್ಕ ಪತ್ರಗಳ ವಿವರವನ್ನು ಪರಿಷತ್ತಿನ ಸಂಚಿಕೆ, ಅಂತಜರ್ಾಲ ಪುಟ ದಲ್ಲಿ ಮುಕ್ತವಾಗಿ ಪ್ರಕಟಿಸುತ್ತಿದೆಯಲ್ಲದೇ ಸಾರ್ವಜನಿಕ ಸೂಚನ ಫಲಕದಲ್ಲೂ ಅವಗಾಹನೆಗೆ ಹಾಕಲಾಗುತ್ತಿದೆ.
ಈ ಅವಧಿಯಲ್ಲಿ ಇದುವರೆಗೂ ಜಿಲ್ಲೆಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದ ಅಪರೂಪದ ಗಣ್ಯರು ಸಾಹಿತಿಗಳು ಪಾಲ್ಗೊಂಡಿರುವುದು ಸಹಾ ಹೆಮ್ಮೆಯ ಸಂಗತಿ. ಪರಿಷತ್ತು ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಚಟುವಟಿಕೆಯ ಜೊತೆಗೆ ಸಾರ್ವತ್ರಿಕ ಸಾಮಾಜಿಕ ಸೇವೆಯಲ್ಲೂ ಕೈಜೋಡಿಸಿದೆ. ಇತ್ತೀಚಿನ ಲೋಕಸಭೆ ಮತ್ತು ವಿಧಾನ ಸಭಾ ಚುನಾವಣೆ ವೇಳೆ ಮತದಾನ ಜಾಗೃತಿಗಾಗಿ ದೇಶದ ಹೆಮ್ಮೆಯ ಕ್ರೀಡಾಕಲಿ ಜಿಲ್ಲೆಯ ಹೆಗ್ಗಳಿಕೆಯ ಪುತ್ರನಾದ ಪ್ಯಾರಾಲಿಂಪಿಕ್ ಬೆಳ್ಳಿ ಹುಡುಗ ಎಚ್ ಎನ್ ಗಿರೀಶ್ ರನ್ನು ಕರೆಸಿ ಹಾಸನ ನಗರದಲ್ಲಿ ಮತದಾರನ ಬಳಿಗೆ ಹೋಗಿದ್ದು ಅವಿಸ್ಮರಣೀಯ ಸಂಗತಿ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕಳೆದ ವಾರ ಪರಿಷತ್ತಿನ ಪದಾಧಿಕಾರಿಗಳು ಮತ್ತು ಸದಸ್ಯರಿಗಾಗಿ ವಾಹನ ಚಾಲನ ಪರವಾನಗಿ ಮತ್ತು ಸುರಕ್ಷತೆ ವಾಹನ ಚಾಲನೆ ಉಪನ್ಯಾಸ ಕಾರ್ಯಕ್ರಮವನ್ನು ಹಾಸನ ನ್ಯಾಯಾಲಯ, ವಕೀಲರ ಪರಿಷತ್ತು ಹಾಗೂ ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಏರ್ಪಡಿಸಿತ್ತು. ಒಂದು ಸಾವಿರಕ್ಕೂ ಹೆಚ್ಚು ಮಂದಿ ಪರಿಷತ್ತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಯೋಜನ ಪಡೆದರು. ಈ ಕಾರ್ಯಕ್ರಮದ ಮರುದಿನವೇ ಪರಿಷತ್ತಿನ ಕಟ್ಟಡದ ಕಿಟಕಿ ಗಾಜುಗಳನ್ನು ಕಿಡಿಗೇಡಿಗಳು ವಿಕೃತ ಮನೋಭಾವದಿಂದ ಒಡೆದು ಹಾಕಿದ್ದಾರೆ ಆ ಮೂಲಕ ತಮ್ಮ ಹೇಡಿತನವನ್ನು ಪ್ರದಶರ್ಿಸಿದ್ದಾರೆ. ಕಲ್ಲು ಮತ್ತು ದೊಣ್ಣೆಯಿಂದ ಕಿಟಕಿ ಗಾಜುಗಳನ್ನು ಒಡೆದಿರುವುದು ಸಾಂಸ್ಕೃತಿಕ ಕೇಂದ್ರದ ಮೇಲೆ ಸ್ವಾರ್ಥ ಹಿತಾಸಕ್ತಿಗಳು ನಡೆಸಿದ ಅಮಾನವೀಯ ಅತ್ಯಾಚಾರದಂತೆ ಭಾಸವಾಗುತ್ತಿದೆ.ಅಲ್ಲದೇ ಸದರಿ ಕಾರ್ಯಕ್ರಮದ ಮರುದಿನವೇ ಪರಿಷತ್ತಿಗೆ ಕಲ್ಲು ಬಿದ್ದಿರುವುದು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ. ಜಿಲ್ಲಾ ಪೋಲೀಸ್ ಆಡಳಿತ ಈ ದಿಸೆಯಲ್ಲಿ ತನಿಖೆಯನ್ನು ತೀವ್ರ ಗೊಳಿಸಿದಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚುವುದು ಕಷ್ಟವಾಗಲಾರದರು ಅಲ್ಲವೇ?
ಈ ಘಟನೆಯಿಂದ ಜಿಲ್ಲೆಯ ಸಾಂಸ್ಕೃತಿಕ ವಲಯದಲ್ಲಿ ಮತ್ತು ಸಾರ್ವತ್ರಿಕ ವಲಯದಲ್ಲಿ ಅತೀವ ಬೇಸರ ಉಂಟಾಗಿದೆ. ಪರಿಷತ್ತು ಸಮಾಜ ಮುಖಿಯಾಗಿ ಸಾಹಿತ್ಯ-ಸಾಂಸ್ಕೃತಿಕ ವಲಯದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದೆ ಆದರೆ ಅದನ್ನು ಸಹಿಸದ ದುಷ್ಟ ಶಕ್ತಿಗಳು ಇಂಥ ಹೀನ ಕೃತ್ಯವನ್ನು ಎಸಗಿವೆ. ಈ ಮೊದಲು ಒಂದು ವರ್ಷದ ಹಿಂದೆ ಪರಿಷತ್ತು ಆವರಣದಲ್ಲಿ ಜಾನಪದ ಪರಿಷತ್ತು ಆಹಾರ ಮೇಳ ಆಯೋಜಿಸಿದ್ದಾಗ ಅಲ್ಲಿ ಮಾಂಸಹಾರ ಮಾರಾಟವಾಯಿತು ಎಂಬ ಕಾರಣಕ್ಕೆ ಸುದ್ದಿಯ ಕೇಂದ್ರ ಬಿಂದುವಾಗಿದ್ದ ಪರಿಷತ್ತು ಈಗ ತನ್ನ ಕಟ್ಟಡದ ಮೇಲೆ ನಡೆದ ಭೌತಿಕ ದಾಳಿಯಿಂದಾಗಿ ಸುದ್ದಿಯಲ್ಲಿದೆ. ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಜಿಲ್ಲಾ ಕಸಾಪ ಅಧ್ಯಕ್ಷ ಡಾ|| ಎಚ್ ಎಲ್ ಜನಾರ್ಧನ್ ವ್ಯಕ್ತಿಗತ ದ್ವೇಷವಿದ್ದರೆ ತನ್ನ ಮೇಲೆ ದಾಳಿ ನಡೆಸಲಿ ಅದನ್ನು ಸಹಿಸುತ್ತೇನೆ ಆದರೆ ಕನ್ನಡಿಗರ ಭಾವನೆಯ ಸಾಂಸ್ಕೃತಿಕ ಕೇಂದ್ರದ ಮೇಲೆ ನಡೆದ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ ಎಂದಿರುವುದು ಅವರಿಗೆ ಆಗಿರುವ ನೋವನ್ನು ತೋರಿಸುತ್ತದೆ. ಪರಿಷತ್ತು ಕಟ್ಟಡದ ಮೇಲೆ ಕಲ್ಲು ತೂರಿದ ದುಷ್ಟರು ಯಾರೇ ಆಗಿರಲಿ ಶೀಘ್ರವಾಗಿ ಅವರನ್ನು ಪತ್ತೆ ಹಚ್ಚಬೇಕು ಪರಿಷತ್ತಿನ ಹೆಸರಿಗೆ ಮಸಿ ಬಳಿಯುವ ಸ್ವಾರ್ಥ ಹಿತಾಸಕ್ತಿಗಳು ಕ್ರಿಯೆಗಳು ಎಂದಿಗೂ ಸಫಲವಾಗದು ಅದನ್ನು ಕಿಡಿಗೇಡಿಗಳು ಅರಿತರೆ ಸಾಂಸ್ಕೃತಿಕ ಕೇಂದ್ರದ ಹಿರಿಮೆ ಇನ್ನೂ ಹೆಚ್ಚುವುದು ಎಂಬುದು ದಿಟವಲ್ಲವೇ?






0 Comments