ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಹಾರಿಕೊಂಡು ಹೋದವನು', ಎಸ್ ದಿವಾಕರ್ ಅವರ ಕಥೆಯ ಬಗ್ಗೆ ಒಂದಿಷ್ಟು

ಫಣಿಕುಮಾರ್ ಟಿ ಎಸ್

ಕವಿತೆ ಯಾವುದೇ ಓದುಗನನ್ನು ಆಕರ್ಷಿಸಲು ಬಹುಮುಖ್ಯ ಕಾರಣ ಅದು ಪ್ರತಿಫಲಿಸುವ ನಿಗೂಢ ಅರ್ಥ ರೇಖೆ. ಪ್ರಚೋದನೆಯ ಭಾವತರಂಗಗಳನ್ನು ಪ್ರವಹಿಸುತ್ತಲೇ ತಲ್ಲಣಗೊಳಿಸುವ ಆಸಕ್ತಿಯನ್ನು ಶಕ್ತಿಶಾಲಿಯಾದ ಒಂದು ಕವಿತೆ ಓದುಗನಲ್ಲಿ ಮೂಡಿಸುತ್ತದೆ. ಅವನ ಭಾವನೆಯೊಂದಿಗೆ ಸಾಮ್ಯತೆ ಹೊಂದುತ್ತಲೇ ತನ್ನ ಸ್ವಾಮ್ಯವನ್ನು ಉಳಿಸಿಕೊಳ್ಳುವ ಕವಿತೆ ತಡೆದ ಉಸಿರಲ್ಲಿ ಚೈತನ್ಯ ತುಂಬುವ ಜೀವಬಿಂದು.
ಕಥೆಯ ವಿಷಯ ಸ್ವಲ್ಪ ಭಿನ್ನ. ತನ್ನ ಹಂದರ; ಪಾತ್ರಗಳು; ಹುರುಳಿನಿಂದ ಅದು ಹೆಚ್ಚು ವಿಷದ. ಗಹನತೆಯೂ ಸಹ ಕಥೆಗೆ ಸ್ಪಷ್ಟ ಪರಿಕಲ್ಪನೆಯನ್ನು ನೀಡುತ್ತದೆ. ಹಂದರದಲ್ಲಿ ಬೆರೆತ ಪಾತ್ರಗಳು ಒಡೆದು ಕವಲಾದಾಗ ಅದು ಹೆಚ್ಚು ಶಕ್ತಿಶಾಲಿ; ಹೆಚ್ಚು ರಚನಾತ್ಮಕ. ಆದರೂ, ಕಥೆ; ಕವಿತೆ – ಈ ಎರಡರ ಒಟ್ಟಾರೆ ಆಶಯ ಓದುಗನನ್ನು ಚಿಂತನೆಗೆ ಹಚ್ಚುತ್ತಲೇ ಕಲ್ಪನೆಯ ಚರಮ ಸೀಮೆಗೆ ಕರೆದೊಯ್ಯುವುದು. ಅಂತ್ಯದಲ್ಲಿ ಜಿನುಗುವ ರಸರೂಪದಿಂದ ಅವನಲ್ಲೊಂದು ತಾದಾತ್ಮ್ಯ ಭಾವವನ್ನು ಸ್ಥಾಪಿಸುವುದು.
ಕವಿತೆಯ ನಿಗೂಢ ಬೆರಗು; ಕಥೆಯೊಂದರ ನಿರಭ್ರ ಹಂದರ ಹದವಾಗಿ ಬೆರೆತೋ ಅಥವಾ ಕವಿತೆಯ ಗೋಪ್ಯತೆಗೂ ದಕ್ಕದೇ, ಕಥೆಯ ವಿಸ್ತಾರಕ್ಕೂ ಸಿಕ್ಕದೇ ಮಧ್ಯ ಹಾದಿಯಲ್ಲಿ ಸಾಗುವ; ಹೊಸದೊಂದು ಕಲ್ಪನೆಯನ್ನು ಸೃಷ್ಟಿಸುವ, ನಮ್ಮ ಮಟ್ಟಿಗೆ ಹೆಚ್ಚು ಪ್ರಚಲಿತವಲ್ಲದ ಆಕರ್ಶಕ ಪ್ರಬೇಧವೊಂದಿದೆ. ಭಾವನೆಯ ಅಭಿವ್ಯಕ್ತಿಯನ್ನು ಕೆಲವೇ ಪದಗಳಿಗೆ ಸಮೀಕರಿಸಿ ಅಚ್ಚುಕಟ್ಟಾಗಿ ಹಿಡಿದಿಟ್ಟು ಕವಿತೆಯೊಂದರ ಸಹಜ ಬೆರಗನ್ನು ಕಲ್ಪಿಸುವ ಅತಿ ಸಣ್ಣ ಕತೆಗಳ ಲೋಕ ಅದು. ಇದನ್ನು ಕಥೆ; ಕವಿತೆಗಳೆರಡರ ಮಧ್ಯ ಭಾವ ಎನ್ನುವುದಾದರೆ ತಪ್ಪಿಲ್ಲ. ಆದರೆ, ಈ ಮಧ್ಯ ಪ್ರಬೇಧ ಓದುಗನಲ್ಲಿ ಮೂಡಿಸುವುದು ಮಾತ್ರ ಶಿಖರೋನ್ಮಾದವೇ. ಇಂತಹ ಕಥೆಗಳ ಸೃಷ್ಟಿಕರ್ತನಲ್ಲಿ ನಾವು ಕಾಣುವುದು ಅದ್ಭುತವಾದ ಸೃಜನ ಶೀಲ ಕಾವ್ಯ ಪ್ರಜ್ಞೆ; ಜೊತೆ ಜೊತೆಗೇ ಸಹನಶೀಲ ವೈಚಾರಿಕ ಮನಸ್ಸು.

ಕನ್ನಡದಲ್ಲಿ ಇಂತಹ ಪ್ರಬೇಧಕ್ಕೆ ಹೊಸ ಆಯಾಮ ನೀಡಿದವರಲ್ಲಿ; ಇದನ್ನು ನಮ್ಮ ಭಾಷೆಗೆ ಅಧಿಕೃತವಾಗಿ ಪ್ರಚುರಪಡಿಸಿದವರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವವರು ಎಸ್.ದಿವಾಕರ್. ಜಗತ್ತಿನ ಅತಿ ಸಣ್ಣ ಕತೆಗಳು ಎಂಬ ಸಂಕಲನವನ್ನು ಹೊರತಂದ ಮೇಲೆ ಮತ್ತೊಮ್ಮೆ ಹಲವು ದೇಶಗಳ ಐವತ್ತೆಂಟು ಅತಿ ಸಣ್ಣ ಕತೆಗಳ ಸಂಕಲನವನ್ನು ಹಾರಿಕೊಂಡು ಹೋದವನು ಪುಸ್ತಕದಲ್ಲಿ ಅವರು ನೀಡಿದ್ದಾರೆ. ಜಗತ್ತಿನ ಮೂಲೆ ಮೂಲೆಗಳಲ್ಲಿ ಪ್ರಕಟವಾದ ಅತ್ಯುತ್ಕೃಷ್ಟ ಲೇಖನಗಳನ್ನು; ಲೇಖಕರನ್ನು ಕನ್ನಡದ ಓದುಗರಿಗೆ ಪರಿಚಯ ಮಾಡಿಸುವ ಮಹತ್ಕಾರ್ಯವನ್ನು ಅವರು ಎಂದಿನಿಂದಲೂ ಮಾಡುತ್ತಲೇ ಬಂದಿದ್ದಾರೆ. ಅಂತಹ ಪ್ರತಿ ಕೃತಿ, ಕಥೆ, ಲೇಖಕರ ಪರಿಚಯದಲ್ಲೂ ದಿವಾಕರ್ ಅವರು ತಮ್ಮ ಜೀವನಪ್ರೀತಿಯ ಶೋಧಕದಿಂದ ಅಂತ:ಕರಣವನ್ನು ಬಸಿದು ನೀಡಿದ್ದಾರೆ. ಅದು ಅವರ ವೈಶಿಷ್ಟ್ಯತೆ, ಸ್ವೋಪಜ್ಞತೆಗೆ ಸಾಕ್ಷಿ ಹೌದು.
ದಿವಾಕರ್ರವರ ಇತ್ತೀಚಿನ ಪುಸ್ತಕ ‘ಹಾರಿಕೊಂಡು ಹೋದವನು’ – ಆಂಗ್ಲ, ಚೀನಿ, ಜಪಾನ್, ಜರ್ಮನ್, ಬೆಂಗಾಲಿ, ಮಲೆಯಾಳಿ, ಉದರ್ು, ಸ್ಪೈನ್ – ಇಂತಹ ಭಾಷೆಯೆನ್ನದೇ ಜಗತ್ತಿನ ಮೂಲೆಮೂಲೆಗಳಲ್ಲಿ ಪ್ರಸಿದ್ಧವಾಗಿರುವ ಅತಿ ಸಣ್ಣ ಕತೆಗಳ ಗುಚ್ಛ. ಅವರು ಆಯ್ಕೆ ಮಾಡಿಕೊಂಡಿರುವ ಪ್ರತಿ ಕಥೆಯಲ್ಲೂ ನಾವು ಯಾವುದನ್ನು ಕ್ಷುಲ್ಲಕ ಎಂದು ನಿರ್ಲಕ್ಷಿಸಿ ಮುಂದೆ ಸಾಗಿರುತ್ತೀವೆಯೋ ಅದರಲ್ಲಿನ ಅತ್ಯಂತ ಸೂಕ್ಷ್ಮ ವಿವರಗಳನ್ನು ಘನವಾದ ಅರ್ಥಗಾರಿಕೆಯಿಂದ ಗ್ರಹಿಸಿ, ಚಿತ್ರಿಸಿದ ಕಸುಬುಗಾರಿಕೆ ಇದೆ. ಪ್ರತಿ ಸಾಲಿನಲ್ಲೂ ಮಾನವೀಯ ಗುಣವಿದೆ, ಅಂತ:ಕರಣದ ಸ್ಪರ್ಷವಿದೆ, ಜೀವನ ಪ್ರೀತಿಯಿದೆ, ಚೈತನ್ಯಶೀಲ ಆಧ್ಯಾತ್ಮಿಕತೆಯಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಪ್ರತಿ ಕಥೆಯಲ್ಲೂ ನಮ್ಮತನದ ಗುಣವಿದೆ. ಇಂತಹ ಕಥೆಗಳನ್ನು ಹೆಕ್ಕಿ ತಂದಿಡುವಾಗ ಲೇಖಕನಲ್ಲಿ ದಾರ್ಶನಿಕ ಮನಸ್ಥಿತಿಯ ಹೊಳಹು ಪ್ರಖರವಾಗಿರಬೇಕು. ದಿವಾಕರ್ರವರಲ್ಲಿ ಅದು ಇರುವ ಕಾರಣಕ್ಕೇ ಈ ಕಥೆಗಳು ಒಟ್ಟಾಗಿವೆ.
ಜರ್ಮನಿಯ ಪ್ರಖ್ಯಾತ ಕವಿ, ನಾಟಕಕಾರ ಬರೋಲ್ಟ್ ಬ್ರೆಕ್ಟ್ ರಚಿಸಿದ ‘ಮಿಸ್ಟರ್ ಕೆ ಯ ಅಚ್ಚುಮೆಚ್ಚಿನ ಪ್ರಾಣಿ’ ಎಂಬ ಕಥೆಯಿದೆ. ಒಂದು ಪುಟವೂ ಮೀರದ ಈ ಕಥೆಯಲ್ಲಿ ಪ್ರಾಣಿಯಲ್ಲಿಯೂ ಮನುಷ್ಯನನ್ನು ಮೀರಿದ ಸಹಾನುಭೂತಿ, ಆಪ್ಯಾಯಮಾನತೆ, ಜೀವನ ಮೌಲ್ಯಗಳ ಗುಣವಿದೆ ಎಂಬುದನ್ನು ರುಜುವಾತು ಮಾಡುತ್ತಾ ಓದುಗನಲ್ಲಿ ಒಳನೋಟದ ಜಾಗೃತಿಗೆ ಪ್ರೇರೇಪಣೆಯನ್ನು ಒದಗಿಸುತ್ತಾರೆ. ಸ್ಪ್ಯಾನಿಷ್ ಲೇಖಕಿ ಅನಾ ಮರೀಯಾ ಶೂಅ ಬರೆದ ಅರ್ಧ ಪುಟದ ‘ಕಥನ ಪ್ರಬೇಧಗಳು’-ರಲ್ಲಿ ಕ್ರಿಯಾಶೀಲತೆಗೆ ಅನಿವಾರ್ಯತೆಯ ಸಂಕೋಲೆ ಸೃಷ್ಟಿಯಾದರೆ ಸಿದ್ಧ ಚೌಕಟ್ಟುಗಳು ವ್ಯಕ್ತಿಯಲ್ಲಿ ಮೂಡಿಸುವ ಹತಾಶ ಮನೋಭಾವವನ್ನು ಅತ್ಯಂತ ನವಿರಾಗಿ ನಿರೂಪಿಸಲಾಗಿದೆ. ರೊಬತರ್ೋ ಕೆಸಾದನ ‘ಲೇಖಕ’ ಕಥೆಯಲ್ಲಿನ ಬಾರ್ತೋಲೋ ತೆರ್ಸರೋನಲ್ಲಿ ಲೇಖಕನಾಗಬೇಕೆಂಬ ತೀರದ ಹಂಬಲ ಅವನ ಕೊಲೆಯಲ್ಲಿ ಪರ್ಯಾವಸಾನವಾಗುತ್ತದೆ ಎಂದು ಹೇಳುತ್ತಲೇ, ವ್ಯಕ್ತಿಯೊಬ್ಬನ ಆಶಯ, ಆಕಾಂಕ್ಷೆಗಳಿಗೂ ಅವನು ಧರಿಸುವ ಮುಖವಾಡಕ್ಕೂ ಇರುವ ಭಿನ್ನತೆಯನ್ನು ನಿರೂಪಿಸುತ್ತಾ ವಿಷಾದವನ್ನು ಸೃಷ್ಟಿಸುತ್ತಾರೆ. ಇನ್ನು ಫ್ರಾನ್ಸ್ನ ಮಾರ್ಸೆಸ್ ಮಾರಿಯನ್ ಬರೆದ ‘ಸಂಖ್ಯೆಯಿಲ್ಲದ ಗೋರಿಗಳು’ ಎಂಬ ಕಥೆ ಯೂರೋಪಿನಲ್ಲಿ ಕೈಗಾರಿಕಾ ಕ್ರಾಂತಿ ಮೂಡಿಸಿದ ಸಾಮಾಜಿಕ ಸ್ಥಿತ್ಯಂತರ ಪರ್ವವನ್ನು ಕಣ್ಮುಂದೆ ಇಡುತ್ತದೆ. ಯಂತ್ರಗಳ ಅಬ್ಬರದಲ್ಲಿ ಮಾನವೀಯ ಅಂತ:ಕರಣಕ್ಕೆ ಜಾಗವಿಲ್ಲದೇ ಕಥಾ ನಾಯಕ ದಿಯಾಗೋ ಮೆಲಾಮಂತೆಯ ಸಾವೂ ಕೂಡಾ ಹೇಗೆ ಅತಿ ಕ್ಷುಲ್ಲಕವಾಗಿ ಆಂತರ್ಯವನ್ನು ಕಲಕುತ್ತದೆ ಎಂಬುದನ್ನು ಕೆಲವೇ ಪದಗಳಲ್ಲಿ ಅದ್ಭುತವಾಗಿ ಈ ಕಥೆ ನಿರೂಪಿಸುತ್ತದೆ. ತ್ಯಾವೋ ಹ್ಯುಯೆ ಚಿನ್ ಬರೆದ ಚೀನೀ ಕಥೆ -ಪಾವೋ-ಯುನಲ್ಲಿ ಪ್ರತಿಧ್ವನಿಸುವ ಆಂತರ್ಯದೊಂದಿಗಿನ ವೈಫಲ್ಯದ ಸೆಣೆಸಾಟ; ಬೆಂಗಾಲಿ ಕವಿ ಬನಫೂಲ್ ಬರೆದ ಕಥೆ, ‘ದರ್ಜೆ’ಯಲ್ಲಿ ಸಾಮಾಜಿಕ ಸಂಘರ್ಷಗಳು; ಉತ್ಕರ್ಷಗಳು ವ್ಯಕ್ತಿಯೊಬ್ಬನ ಹೊಟ್ಟೆಪಾಡಿಗೆ ಹೇಗೆ ಪೂರಕ ಎನ್ನುವ ವಿಡಂಬನೆ; ಉರ್ದು ಕವಿ ಸಾದತ್ ಹಸನ್ ಮಂಟೋವಿನ ‘ಮಿಷ್ಟೀಕು’ ಕಥೆ – ದೇಶ ವಿಭಜನೆಯ ಸಂದರ್ಭದಲ್ಲಿನ ದ್ವೇಷಯುಕ್ತ ಸಾಮುದಾಯಿಕ ಮನಸ್ಥಿತಿಗಳನ್ನು ಎರಡೇ ಸಾಲುಗಳಲ್ಲಿ ಗಟ್ಟಿಯಾಗಿ ಪ್ರತಿಧ್ವನಿಸುತ್ತದೆ.
ಹೀಗೆ ಪುಸ್ತಕದ ಪ್ರತಿಯೊಂದು ಕಥೆಯಲ್ಲಿಯೂ ದಿವಾಕರ್ರವರು ಉಣಬಡಿಸುವುದು ಅಂತ:ಕರಣದ ರಸದೌತಣ. ಪ್ರತಿಯೊಂದರಲ್ಲೂ ಕಾಣುವ ತರ್ಕಾತೀತ ಘಟನೆಗಳು ಕವಿತೆಯೊಂದರ ಅಪ್ಯಾಯಮಾನ ದಿಗ್ಬ್ರಮೆಯನ್ನು ಮತ್ತು ಕಥೆಯೊಂದರ ಸ್ಫುಟತ್ವದ ಭಾವಗಳನ್ನು ಏಕಕಾಲದಲ್ಲಿ ಅನುಭವಕ್ಕೆ ದಕ್ಕಿಸುತ್ತವೆ. ಈ ಕಥೆಗಳಲ್ಲಿ ಆಯಾ ಕಾಲದ ಸಾಮಾಜಿಕ ಸ್ಥಿತಿಗತಿಗಳು ಪ್ರಕಟಗೊಂಡರೂ ಅವುಗಳು ಪ್ರತಿಪಾದಿಸುವ ಜೀವನ ಮೌಲ್ಯಗಳು, ಸಮಗ್ರತೆ, ತಾಜಾತನಗಳ ಅನನ್ಯತೆಯಿಂದ ಸಾರ್ವಕಾಲಿಕವಾಗಿ ಉಳಿಯಲು, ಜೀವನ ಪ್ರೀತಿಯ ಸಂದೇಶವನ್ನು ಸಾರಲು ಶಕ್ತವಾಗುತ್ತವೆ. ಗಾಢವಾಗಿ ಮನಸ್ಸನ್ನು ತಟ್ಟುತ್ತವೆ.
ಅಪ್ಪಟ ಮೌಲ್ಯಯುಕ್ತವಾದ 58 ಅತಿ ಸಣ್ಣ ಕತೆಗಳನ್ನು ಕನ್ನಡದ ಓದುಗರಿಗೆ ದಿವಾಕರ್ ಮತ್ತೊಮ್ಮೆ ನೀಡಿದ್ದಾರೆ. ಹಾರಿಕೊಂಡು ಹೋದವನು ವಿಶಿಷ್ಟ ಕೃತಿಯಾಗಿ ಕನ್ನಡದ ಓದುಗನ ಮನಸ್ಸಿನಲ್ಲಿ ಸಾರ್ವಕಾಲಿಕವಾಗಿ ಉಳಿಯುವ ಎಲ್ಲಾ ಅರ್ಹತೆಯನ್ನೂ ಹೊಂದಿದೆ.

‍ಲೇಖಕರು G

11 June, 2014

1 Comment

  1. Manjuanath. S

    I am a big fan of Mr. Diwakar. I just want to read this at the earliest possible time. Thanks for the article which privides such wonderful information about the great work of Mr. Diwakar.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading