ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ.
ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ, ದಿನದ ದುಡಿಮೆಯ ದಣಿವು ನೀಗಿಸಿ ಮನಸು ಹಗುರಮಾಡಿಕೊಳ್ಳವ, ಸ್ವಾರಸ್ಯಕರ ಮಾತುಗಾರರು, ಸೋಮಾರಿಕಟ್ಟೆಯಲ್ಲಿ ಕುಳಿತು, ಕತೆಗಳ ಪೋಷಾಕು ತೊಡಿಸಿ ಹರಟೆಯ ರೂಪದಲ್ಲಿ ಹೇಳುವ ಪ್ರಯತ್ನವೂ ಇದಾಗಿದೆ.
ಮಲೆನಾಡಿನ ಬೈನೆ ಸೇಂದಿಯ ಅಡಸಾಲೆಗಳಲ್ಲಿ ಧಗಧಗಿಸುವ ಬೆಂಕಿಯ ಸುತ್ತ ಕುಳಿತು ಸಂಜೆಯ ಪಾನಗೋಷ್ಟಿಗಳನ್ನು ಉತ್ತೇಜನದಾಯಕವಾಗಿಸಲು ಹೇಳಿದ ʻಗುಂಡು ಪಾರ್ಟಿʼಯ ಕಥಾ ಪ್ರಸಂಗಗಳಾಗಿರಲೂಬಹುದು.
ಜನಪದ ಕತೆಗಳಂತೆ ಜನರ ಬಾಯಿಂದ ಬಾಯಿಗೆ ಹರಿದುಬಂದು ʻಕೇಳು ಕತೆʼ ಗಳಾಗಿ ಗಾಳಿಯಲ್ಲಿ ತೇಲಾಡಿ ಹೋಗುವ ಇಂತಹಾ ಪ್ರಸಂಗಗಳು ಹಲವಾರು.ಓದುಗರಿಗೆ ಹಿತವಾಗುವಂತಹಾ ಈ ಎಲ್ಲಾ ಪ್ರಸಂಗಗಳ ಹ್ಯೂಮರ್ ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲದೆಂಬುದನ್ನು ಮನಗಂಡು ʻಹಗ್ರಾಣದ ಕತೆʼಗಳ ರೂಪ ಕೊಟ್ಟು ಇಲ್ಲಿ ಪ್ರಸ್ತುತಪಡಿಸಲಾಗಿದೆ.
ಅಂಕಣ – ೧ ೧
ಆ ಹೋಬಳಿ ಕೇಂದ್ರದ ಅಂಗಡಿ ಬೀದಿಯಲ್ಲಿ ಕಾಫಿ ಟೀ ಬಯಸುವವರಿಗೆ ಇದ್ದದ್ದು ಒಂದೇ ಜಾಗ…ಅದು ಕುಂಟಬೇರಿ ಹೋಟೆಲು. ಕಾಸರಗೋಡು ಮೂಲದವನಾದ ಆ ಕುಂಟ ಬೇರಿ ಎಂಬುವವನು ಅದು ಯಾವಾಗ ಈ ಮಲೆನಾಡಿನ ಮೂಲೆಯ ಊರಿಗೆ ಬಂದು ತಳ ಊರಿದನೋ, ನಮ್ಮ ತಲೆಮಾರಿನವರಿಗೆ ಯಾರಿಗೂ ತಿಳಿಯದು.
ಒಂದೆರಡು ಖಾಸಗಿ ಬಸ್ಸುಗಳು ಒಂದು ಹೋಗುತ್ತಿದ್ದ ಆ ಕಾಲಕ್ಕೆ ಅದೇ ಫೇಮಸ್ಸು. ಆ ಪ್ರದೇಶಕ್ಕೆ ಅಪರೂಪವೆನಿಸುವ ಗೋಳಿಬಜಿ, ಬನ್ಸ್ ಜತೆಗೆ ಚಿಕ್ಕ ಗಾಜಿನ ಲೋಟದಲ್ಲಿ ಕುಂಟಬೇರಿ ಕೊಡುತ್ತಿದ್ದ ಟೀಯ ರುಚಿ ಜನರಿಗೆ ಹತ್ತಿತ್ತು.
ಕುಸಲಕ್ಕಿ ಅನ್ನದೊಂದಿಗೆ ನೀಡುತ್ತಿದ್ದ ಉಪ್ಪು ಮೀನಿನ ಗೊಜ್ಜು, ಹಂಚಿನ ಮೇಲೆ ಹುರಿದ ಮಸಾಲೆ ಬೆರೆತ ಹುರುಕಲು ಮತ್ತಿ ಮೀನಿನ ರುಚಿಯ ಬಗ್ಗೆ ಜನ ಮೆಚ್ಚಿ ಕೊಂಡಾಡುತ್ತಿದ್ದರು.
ಆದರೆ ಒಂದು ಸಮಸ್ಯೆ ಒಕ್ಕಲಿಗರಂತೆಯೇ ಬಹು ಸಂಖ್ಯಾತರಾದ ಲಿಂಗಾಯಿತರಿಗೆ ಅದರಿಂದೇನೂ ಪ್ರಯೋಜನವಿರಲ್ಲಿಲ್ಲ.
ಮುಖ್ಯರಸ್ತೆಯಲ್ಲಿ ಮೇಲೆ ಕೆಳಗೆ ಹಾದು ಹೋಗುವ ಬಸ್ಸುಗಳು ಜನರನ್ನು ಇಳಿಸಿ, ಹತ್ತಿಸಿಕೊಳ್ಳಲು ಕ್ಷಣಕಾಲ ನಿಂತು ಮುಂದೆ ಹೋಗುತ್ತಿದ್ದುದಂರಿದ ಅಲ್ಲಿ ಜನ ಒಂದೆಡೆ ಸೇರುವಂತಾಗಿತ್ತು.
ಕುಂಟಬೇರಿಯ ಹೋಟಲು ಅಡ್ಡರಸ್ತೆಯಲ್ಲಿ ಒಂದೆರಡು ಮಾರು ದೂರದಲ್ಲಿದ್ದುದರಿಂದ ಮುಖ್ಯರಸ್ತೆಯ ಹಿಂಬದಿಯ ಗಲ್ಲಿಯಲ್ಲಿ ಸಾರಾಯಿ ಅಂಗಡಿಗೆ ಹತ್ತಿರವಾಗುವಂತೆ ಹಂದಿ ಮಾಂಸ, ಕೋಳಿ ಮಾಂಸದ ಚಾಕಣ ಮಾಡಿ ಮಾರುತ್ತಿದ್ದ ಸ್ಧಳೀಯ ಭಗವಾನ್ ಎಂಬುವವನಿಗೆ ತನ್ನ ಅಂಗಡಿಯ ಎದುರಿಗೆ ಮುಖ್ಯರಸ್ತೆಯಲ್ಲಿ ಒಂದು ಹೋಟೆಲಿನ ಅಗತ್ಯವಿದೆ ಎಂಬುದು ಮುನವರಿಕೆಯಾಯಿತು .ಅವನು ತಡ ಮಾಡಲಿಲ್ಲ. ಮುಖ್ಯರಸ್ತೆಯ ಕಡೆಯಿಂದ ಪ್ರವೇಶಕ್ಕಿದ್ದ ಕಿರುಬಾಗಿಲನ್ನು ತೆಗೆಸಿಹಾಕಿ ಅಂಗಡಿ ಬಾಗಿಲಿನಂತೆ ವಿಸ್ತಾರಗೊಳಿಸಿ ʻಭಗವಾನ್ ಕಾಫಿ ಕ್ಲಬ್ʼ ಎಂಬ ಬೋರ್ಡ್ ತಗಲುಹಾಕಿಬಿಟ್ಟ. ಮಲೆನಾಡಿಗೆ ವಿಶಿಷ್ಟವೆನಿಸಿದ ಗೆಣಸು,ಕೆಸ, ಕಳಲೆ ಮುಂತಾದವುಗಳ ಸಾರು ಮಾಡಿ ಮದ್ಯಾಹ್ನದ ಊಟವನ್ನು ಕೊಡತೊಡಗಿದ. ಮಾಂಸದ ರುಚಿ ಹಿಡಿದವರಿಗೆ ಹೇಗೋ ಹಿಂದಿನ ಒಪ್ಪಾರಿನಂತ ಸ್ಥಳದಲ್ಲಿ ಕುಳಿತು ಊಟದೊಂದಿಗೆ ತಮಗೆ ಬೇಕಾದದ್ದನ್ನು ಅತಿರಿಕ್ತವಾಗಿ ತರಿಸಿಕೊಂಡು ತಿನ್ನುವ ವ್ಯವಸ್ಥೆ ಇದ್ದೇಇತ್ತು.
ಹಾಗಾಗಿ ಲಿಂಗಾಯತರಾದಿಯಾಗಿ ಎಲ್ಲರೂ ಆ ಕಡೆಗೆ ಆಕರ್ಷಿತರಾಗತೊಡಗಿದ್ದರು.
ಸುತ್ತಮುತ್ತಲಿನ, ಕಾಡೊಳಗಿನ ಬಹುತೇಕ ಹಳ್ಳಿಗಳ ಸಂಬಂಧ ಆ ಊರಿನೊಂದಿಗೆ ಕರುಳು ಬಳ್ಳಿಯಂತೆ ಹೆಣೆದುಕೊಂಡಿತ್ತು. ಅದರಿಂದ ಕೇಂದ್ರಸ್ಥಾನದಲ್ಲಿದ್ದ ಆ ಊರಿಗೆ ಬೆಳೆಯುವ ಎಲ್ಲಾ ಅವಕಾಶಗಳಿದ್ದವು.
ಕಾಲಕ್ರಮೇಣ ಹೈಸ್ಕೂಲ್ ಬಂದಿತು. ….ಆಸ್ಪತ್ರೆ ಬಂದಿತು….ದನದ ಆಸ್ಪತ್ರೆ ಬಂದಿತು……..ಸೊಸೈಟಿಯೂ…….
ಹೀಗೆ ಆ ಊರು ಸಣ್ಣ ಪಟ್ಟಣದ ರೂಪು ಪಡೆದಂತೆ ಅಂಗಡಿ ಬೀದಿಯೂ ರಸ್ತೆಯುದ್ದಕ್ಕೆ ಮೇಲೆ ಕೆಳಗೆ ಬೆಳೆಯತೊಡಗಿತು. ಹಿಂದಿದ್ದ ಬೀದಿಯಲ್ಲಿ ಅವಕಾಶವಿಲ್ಲದ್ದರಿಂದ ತಗ್ಗಿನ ಕಡೆಗೆ ಹರಿದಿದ್ದ ರಸ್ತೆಯ ಆಸುಪಾಸಿನಲ್ಲಿ ಮನೆಗಳೇಳತೊಡಗಿದವು. ಅಲ್ಲಿಯೂ ಹೊಸದಾಗಿ ಒಂದೆರಡು ಅಂಗಡಿ ಮಳಿಗೆಗಳಾದವು.
ಜನರ ಓಡಾಟ ಜಾಸ್ತಿಯಾಯಿತು. ಅಂತೆಯೇ ಆ ರಸ್ತೆಯಲ್ಲಿ ಹಾಯ್ದು ಮೇಲೆ ಕೆಳಗೆ ಓಡಾಡುವ ಬಸ್ಸುಗಳ ಸಂಖ್ಯೆಯೂ ಜಾಸ್ತಿಯಾಯಿತು.
ಅಷ್ಟರಲ್ಲಿ ಕುಂಟಬೇರಿ ಹೋಟಲು ಮಂಕಾಗಿತ್ತು. ʻಊರಿಗೊಬ್ಬಳೇ ಪದ್ಮಾವತಿʼ ಎಂಬಂತೆ ಭಗವಾನ್ ಕಾಫಿ ಕ್ಲಬ್ ವಿಜೃಂಭಿಸುತ್ತಿತ್ತು. ಬೆಳಗ್ಗೆ, ಸಂಜೆ ಬಸ್ಸುಗಳು ಬಂದು ನಿಂತುಹೋಗುವ ವೇಳೆ ಅಲ್ಲಿ ನೂಕುನುಗ್ಗಲು ಜಾಸ್ತಿಯಾಗಿ, ಜನ ಅಲ್ಲಿಗೆ ಇನ್ನೊಂದು ಹೋಟಲಿನ ಅಗತ್ಯವಿದೆ ಎಂದು ಮಾತಾಡಿಕೊಳ್ಳತೊಡಗಿದರು.
ಅದು ಹೇಗೆ ವಾಸನೆ ಬಡಿಯತೋ, ದೂರದ ಯಾವುದೋ ಪೇಟೆಯ ಹೋಟೆಲಿನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಪ್ಯಾರ್ಲ ನೀಲಕಂಠ ಒಂದು ದಿನ ಬಟ್ಟೆ ಗಂಟು ಹಿಡಿದುಕೊಂಡು ತನ್ನ ಹೆಂಡತಿ ಹಾಗೂ ಪುಟ್ಟದೊಂದು ಮಗುವಿನೊಂದಿಗೆ ಅಲ್ಲಿ ಇಳಿದೇಬಿಟ್ಟ. ಬಹಳ ವರ್ಷ ಒಲೆಯಮುಂದೆ ನಿಂತು ಅಡುಗೆ ಮಾಡಿದ ಅವನ ಶರೀರ ಸೀದು ಕರುಕಲಾದಂತೆ ಕಾಣುತ್ತಿದ್ದುದ್ದರಿಂದ ಜನ ಅವನನ್ನು ಪ್ಯಾರ್ಲ ನೀಲಕಂಠ ಎಂದೇ ಕರೆಯತೊಡಗಿದ್ದರು. ಆದರೆ ಅವನ ಹೆಂಡತಿ ಮಹಾದೇವಿ ಮೈಕೈ ತುಂಬಿಕೊಂಡು ಆಕರ್ಷಕವಾಗಿದ್ದಳು.
ತಗ್ಗಿನ ಕಡೆ ರಸ್ತೆ ಬದಿಯಲ್ಲಿ ಹೊಸದಾಗಿ ನಿರ್ಮಾಣವಾಗಿದ್ದ ಮನೆಯ ಒಂದು ಪಾರ್ಶ್ವದಲ್ಲಿ ʻಮಹಾದೇವಿ ಮೆಸ್ʼಎಂಬ ಬೋರ್ಡು ತಗಲುಹಾಕಿ ನೀಲಕಂಠ ಹೋಟೆಲು ಆರಂಭಿಸಿಯೇ ಬಿ,ಟ್ಟ.
ಮಲ್ಲಿಗೆ ಇಡ್ಲಿ,ಉದ್ದಿನ ವಡೆ, ಮಸಾಲೆ ವಡೆ, ಪುಳಿಯೋಗರೆ, ಉಪ್ಪಿಟ್ಟು ಕೇಸರಿ ಬಾತು ಹೀಗೆ, ಉಳಿದೆರಡು ಹೋಟೆಲುಗಳಗಿಂತ ಭಿನ್ನವಾದ ಪೇಟೆಯ ತಿಂಡಿಗಳನ್ನು ಮಾಡತೊಡಗಿದ.
ಬಸ್ ನಿಲ್ಲುತ್ತಿದ್ದ ಜಾಗದಿಂದ ದೂರದಲ್ಲಿ ತಗ್ಗಿನಲ್ಲಿದ್ದ ಆ ಹೋಟಲಿಗೆ ಜನ ಮೊದ ಮೊದಲಿಗೆ ಸುಳಿಯಲಿಲ್ಲ. ತನ್ನ ರುಚಿಯಾದ ಖಾದ್ಯಗಳನ್ನು ಮುಂದಿನ ರೂಮಿನ ಬೆಂಚಿನ ಮೇಲೆ ಇಟ್ಟುಕೊಂಡು ಗಿರಕಿಗಳಿಗಾಗಿ ಕಾಯುತ್ತಾ,ಪ್ಯಾರ್ಲ ನೊಣ ಹೊಡೆಯುತ್ತಿದ್ದರೆ, ಮಹಾದೇವಿ ಮಾಡಲು ಕೆಲಸವಿಲ್ಲದೆ, ಮಗುವನ್ನು ಕೂರಿಸಿಕೊಂಡು ಬಾಗಿಲು ತೊಳೆಯುತ್ತಾ, ಮುಂದಿನ ಅಂಗಳ ಸಾರಿಸಿ ರಂಗೋಲಿ ಇಡುತ್ತಾ ಕಾಲ ಕಳೆಯುತ್ತಿದ್ದಳು.
ʻಇವನ್ಯಾಕಪ್ಪಾ ಇಲ್ಲಿ ಬಂದು ಹೋಟಲು ಮಾಡಕೆ ಹೋದ ʼಎಂದು ಜನ ಮಾತಾಡಿಕೊಂಡರು.
ಬೆಳ್ಳಗೆ ಎಟರಿಂದ ಎಟೂವರೆಯ ಒಳಗೆ ಮೇಲೆ ಪೇಟೆಯ ಕಡೆಯಿಂದ ಮೂರು ಹಾಗೂ ಕೆಳಗಿನಿಂದ ರಾತ್ರಿ ಬೇರೆ ಬೇರೆ ಊರುಗಳಲ್ಲಿ ಉಳಿದಿದ್ದ ʻಹಾಲ್ಟಿಂಗ್ ಗಾಡಿʼಗಳು ಬಂದು ಭಗವಾನ್ ಕಾಫಿ ಕ್ಲಬ್ ಮುಂದೆ ಕಾಫಿ ತಿಂಡಿಗೆ ನಿಲ್ಲುತ್ತಿದ್ದುದರಿಂದ ಅಲ್ಲಿ ನೂಕು ನುಗ್ಗಲಾಗುತ್ತಿತ್ತು.
ಪ್ರಯಾಣಿಕರು ಹಾಗೂ ಡ್ರೈವರ್, ಕಂಡಕ್ಟರ್ ಕಾಫಿ ತಿಂಡಿ ಮುಗಿಸಿ ಬಸ್ ಹೊರಡಲು ಸ್ವಲ್ಪ ಸಮಯ ಇರುತ್ತಿದ್ದುದರಿಂದ ಪೇಟೆಯ ಕಾಲೇಜಿಗೆ ಹೋಗುತ್ತಿದ್ದ ʻಬಸ್ ಪಾಸ್ ಹುಡುಗರುʼ ಬಸ್‌ನಿಂದ ಇಳಿದು ತಗ್ಗಿನ ಕಡೆಗೆ ರಸ್ತೆಯಲ್ಲಿ ನಡೆದು ಮೆಸ್ ಪಕ್ಕದ ಅಂಗಡಿಯಲ್ಲಿ ಚಾಕ್ಲೇಟ್ ತೆಗೆದುಕೊಳ್ಳುವ ನೆಪದಲ್ಲಿ ಮಹಾದೇವಿಯ ದರ್ಶನ ಪಡೆದು ತಮ್ಮ ಕುತೂಹಲ ತಣಿಸಿಕೊಂಡು ಬರುತ್ತಿದ್ದರು.
ಹಾಗೂ ಹೀಗೂ ಮಹಾದೇವಿ ಮೆಸ್‌ನ ತಿಂಡಿಯ ವಾಸನೆ ಬಸ್ನವರಿಗೂ ಹೊಡೆಯತೊಡಗಿತು.
ಅವತ್ತು ಸಂತೆದಿನ. ಡ್ರೈವರ್ ರಂಗಪ್ಪನ ಹಾಲ್ಟಿಂಗ್ ಗಾಡಿ ಸ್ವಲ್ಪ ತಡವಾಗಿ ಬಂದಿತ್ತು. ಭಗವಾನ್ ಹೋಟೆಲ್ ರಷ್ ಆಗಿತ್ತು. ರಂಗಪ್ಪ ಹೆಚ್ಚು ಹೊತ್ತು ಸಾವಕಾಶವಾಗಿ ಕಾಯುವಂತಿರಲಿಲ್ಲ. ಕಂಡೆಕ್ಟರ್ ಕರೆದುಕೊಂಡು ಮಹಾದೇವಿ ಮೆಸ್ ಕಡೆ ಹೊರಟ.
ಸ್ನಾನ ಮುಗಿಸಿ ಹಣೆ ತುಂಬಾ ವಿಭೂತಿ ಧರಿಸಿದ್ದ ಮಹಾದೇವಿ ಕೂದಲು ಸಿಕ್ಕು ಬಿಡಿಸಿಕೊಳ್ಳುತ್ತಾ ಹೊರ ಬಂದವಳು ಬಸ್ ಸಿಬ್ಬಂದಿ ತನ್ನ ಹೋಟೆಲು ಕಡೆಯೇ ಬರುವುದು ಕಂಡು ಪುಲಕಿತಳಾದಳು. ಆರೈಕೆ ಮಾಡುತ್ತಿದ್ದ ಕೂದಲಿಗೆ ತಲೆಯ ಹಿಂಬದಿ ಕ್ಲಿಪ್ ಹಾಕಿ ಕೂದಲನ್ನು ನೀಳವಾಗಿ ಬೆನ್ನ ಮೇಲೆ ಹರಡಿಕೊಳ್ಳುತ್ತ ಒಳಹೋಗಿ ಬೆಂಚು ಕುರ್ಚಿ ಒರೆಸಿ ಜಗ್‌ನಲ್ಲಿ ಕುಡಿಯುವ ನೀರು ಗ್ಲಾಸು ಇಟ್ಟು ಅಣಿ ಮಾಡಿದಳು.
ಮಹಾದೇವಿ ನಗು ನಗುತ್ತಾ ಲಗುಬಗೆಯಿಂದ ಬಡಿಸಿದ ಇಡ್ಲಿ, ಉದ್ದಿನ ವಡೆಯನ್ನು ಕಾಯಿ ಚಟ್ಣಿಯ ಜೊತೆಗೆ ಚಪ್ಪರಿಸಿ ತಿನ್ನುವುದನ್ನು ಪ್ಯಾರ್ಲ ನೀಲಕಂಠ ಒಳಬಾಗಿಲಿನಿಂದಲೇ ನೋಡಿದ.
ತಿಂಡಿಯ ರುಚಿಯೋ, ಮಹಾದೇವಿಯ ಉಪಚಾರವೋ, ಅಂತೂ ಡ್ರೈವರ್ ಹಾಗೂ ಕಂಡಕ್ಟರ್ ಹೊರಡುವಾಗ ಬಹಳ ಖುಷಿಯಾಗಿದ್ದರು. ಬಾಗಿಲ ಬಳಿ ಬಂದ ನೀಲಕಂಠ ʻತಿಂಡಿಗೆ ಇಲ್ಲಿಗೇ ಬನ್ನಿ ಅಣ್ಣ, ನಿಮಗೆ ಸ್ಪೆಶಲ್ ಆಗಿ ಮಾಡಿಕೊಡ್ತೀನಿʼ ಎಂದ.
ಮರುದಿನ ರಂಗಪ್ಪನ ಬಸ್ಸು ಮಹಾದೇವಿಯ ಹೋಟೆಲ್ ಮುಂದೆಯೇ ನಿಂತುಕೊಂಡಿತು. ಕ್ರಮೇಣ ಆ ಬಸ್ಸು ಅಲ್ಲಿಯೇ ನಿಲ್ಲುವುದು ರೂಢಿಯಾಯಿತು.
ರಷ್ ನೆಪ ಮಾಡಿಕೊಂಡು ಬೇರೆ ಬಸ್ಸಿನ ಪ್ರಯಾಣಿಕರೂ ಸಿಬ್ಬಂದಿಗಳೂ ಇತ್ತ ಕಡೆಯೇ ಬರತೊಡಗಿದರು. ಇನ್ನು ಬಸ್‌ಪಾಸ್ ನ ಕಾಲೇಜು ಹುಡುಗರಂತೂ ಅಲ್ಲಿ ಖುಷಿಯಿಂದ ಠಳಾಯಿಸತೊಡಗಿದರು.
ಬರು ಬರುತ್ತ ಎಲ್ಲಾ ಬಸ್ಸುಗಳೂ ಅಲ್ಲಿಯೇ ನಿಲ್ಲತೊಡಗಿ ಪೇಟೆಯೇ ಅಲ್ಲಿಗೆ ಶಿಷ್ಟ್ ಆದಂತೆ ತೋರತೊಡಗಿತು.
ನೀಲಕಂಠನ ಅಡುಗೆಯ ರುಚಿಯ ಜೊತೆಗೆ ಮಹಾದೇವಿಯ ಉಪಚಾರವೂ ಸೇರಿ ಮಹಾದೇವಿ ಮೆಸ್ ಮನೆ ಮಾತಾಗ ತೊಡಗಿತು.
ಬರೀ ಬಸ್ ಸಿಬ್ಬಂದಿ, ಪ್ರಯಾಣಿಕರು ಅಷ್ಟೇ ಅಲ್ಲ, ವಾರದ ಸಂತೆಗೆ ಬರುವ ಹಳ್ಳಿಯ ಜನರೂ ಮಹಾದೇವಿ ಮೆಸ್ಸಿನ ಸೆಳೆತಕ್ಕೆ ಒಳಗಾಗತೊಡಗಿದರು.
ಮನೆಯಲ್ಲಿ ಹೆಂಗಸರು ಮಾಡಿದ ರೊಟ್ಟಿ, ಹುರುಳಿಕಾಳು ಚಟ್ನಿ, ಗೊಡ್ಡುಗಾರ ತಿಂದು ನಾಲಿಗೆ ಜಡ್ಡುಹಿಡಿದುಹೋಗಿದ್ದ ಅವರಿಗೆ, ಪ್ಯಾರ್ಲ ನೀಲಕಂಠನ, ತೆಂಗಿನಕಾಯಿ ಹಸಿಮೆಣಸಿನಕಾಯಿ ಹಾಕಿ ತೆಳ್ಳಗೆ ಮಾಡಿ ಇಡ್ಲಿ ವಡೆಯೊಂದಿಗೆ ಬಡಿಸುತ್ತಿದ್ದ ಚಟ್ನಿ ಆಪ್ಯಾಯಮಾನವಾಗತೊಡಗಿತು.
ಬಸ್ ಸಿಬ್ಬಂದಿಯಾಗಲೀ, ಇತರ ಜನರಾಗಲೀ ಮಹಾದೇವಿ ಬಡಿಸಿದ್ದನ್ನು ಮರುಮಾತಾಡದೇ ತಿಂದು ಹೊಗಳಿದರು. ನೀಲಕಂಠ ಹಾಗೂ ಮಹಾದೇವಿ ಎಷ್ಟು ಬಿಡುವಿಲ್ಲದಂತಾದರೆಂದರೆ ಒಮ್ಮೊಮ್ಮೆ, ಹಿಂದಿನ ದಿನ ಉಳಿದಿದ್ದ ವಡೆಯನ್ನು, ರಾತ್ರಿಯ ಸಾರು ಕುದಿಸಿ ಅದರ ಮೇಲೆ ಸುರಿದು ʻಇನ್ನೂ ಚಟ್ನಿ ಆಗಿಲ್ಲ ಕನ್ ತಗಳ್ಳಿʼಎಂದು ಬಡಿಸುತ್ತಿದ್ದರು. ಮಹಾದೇವಿಯ ಉಪಚಾರದ ಮಾತು ಕೇಳುತ್ತಾ ಜನ ಅದನ್ನು ಚಪ್ಪರಿಸಿಕೊಂಡು ತಿಂದು ʻಇನ್ನಷ್ಟು ಸಾಂಬಾರ್ ಹಾಕುʼ ಎನ್ನುತ್ತಿದ್ದರು. ಆಗ ಮಹಾದೇವಿ ʻಸಾಂಬಾರ್ ಮುಗಿತು, ಚಟ್ನಿ ಆಗಿತೆ ತಗಳ್ಳಿʼಎಂದು ಬೆಳಗ್ಗೆಯೇ ಮಾಡಿಟ್ಟಿರುತ್ತಿದ್ದ ಚಟ್ನಿ ಬಡಿಸುತ್ತಿದ್ದಳು.
ಬಸ್ ಪಾಸ್ ಹುಡುಗರಂತೂ ಮಹಾದೇವಿಯ ಚಲನವಲನಗಳನ್ನು ನೋಡುತ್ತಾ, ಒಮ್ಮೊಮ್ಮೆ ಬೈ ಟೂ ಟೀ ಕುಡಿಯುತ್ತಾ, ಸಂಭ್ರಮ ಪಡುತ್ತಿದ್ದರು. ಟೀ ಪಡೆಯುವಾಗ ಅವಳ ಕೈ ಬೆರಳ ತುದಿ ತಾಕಿದರೂ ಸಾಕು, ಪುಲಕಗೊಳ್ಳುತ್ತಿದ್ದರು.
ಸ್ನಾನ ಮಾಡಿ ನೀಳ ಕೂದಲನ್ನು ಬೆನ್ನ ಮೇಲೆ ಹರಡಿ ಹಣೆಗೆ ವಿಭೂತಿಯೆಳೆದ ಆಕೆಯ ಆಕರ್ಷಕ ನಿಲುವಿನ ಬಗ್ಗೆಯೇ ಹುಡುಗರ ಚರ್ಚೆಗಳಾಗುತ್ತಿದ್ದವು.
ಶಿವಶರಣರ ಬಗ್ಗೆ ಪಠ್ಯದಲ್ಲಿ ಓದಿದ್ದ ಅವರು ʻಒಳ್ಳೆ ಅಕ್ಕಮಹಾದೇವಿ ಇದ್ದಂಗಿದಾಳೆ ಕಣ್ರೊʼ ಎಂದು ಮಾತಾಡಿಕೊಳ್ಳುತ್ತಿದ್ದರು. ಬರೀ ಮಾತಷ್ಟೇ ಅಲ್ಲ, ಯಾರೋ ಒಬ್ಬ ಪೆಯಿಂಟ್ ತಂದು ಬೋರ್ಡಿಗೆ ʻಅಕ್ಕʼ ಸೇರಿಸಿ ʻಅಕ್ಕಮಹಾದೇವಿ ಮೆಸ್ʼ ಮಾಡಿದ. ಅದರ ಕೆಳಗೆ ಪ್ರೊ. ಪ್ಯಾರ್ಲ ನೀಲಕಂಠ ಎಂದೂ ಬರೆದರು.
ಬಹುಕಾಲದಿಂದ ನೆಲೆಯಾಗಿದ್ದ ಕುಂಟುಬೇರಿ, ಹೋಟೆಲು ಬಾಗಿಲು ಹಾಕಿಕೊಂಡು ಬೇರೆ ನೆಲೆ ಹುಡುಕಿಕೊಂಡು ಹೋದ. ಭಗಬಾನ್ ಸಾರಾಯಿ ಕುಡಿಯುವವರಿಗೆ ಚಾಕಣ ಒದಗಿಸಿಕೊಂಡು ದಿನ ದೂಡತೊಡಗಿದ.
ಇತ್ತ ಕಡೆ ಅಕ್ಕಮಹಾದೇವಿ ಹೋಟೆಲಿನಲ್ಲಿ ಜನ, ಮಹಾದೇವಿ ಏನು ಬಡಿಸಿದರೂ ಚಪ್ಪರಿಸಿಕೊಂಡು ತಿಂದು ʻಆಹಾʼ ಎಂದುಕೊಳ್ಳುತ್ತಾ ಎದ್ದು ಹೋಗುವಷ್ಟು ಒಗ್ಗಿಹೋದರು.
ಬೆಳಗ್ಗೆ ಎಂಟರಿಂದ ಒಂಬತ್ತು ಗಂಟೆ ಅವರಿಗೆ ʻಪೀಕ್ ಹವರ್ʼ.ಆಗ ಜನರನ್ನು ನಿಭಾಯಿಸುವುದು ಅವರಿಗೆ ಕಷ್ಟವಾಗುತ್ತಿತ್ತು. ಕೋಳಿ ಕೂಗುವ ಮುನ್ನವೇ ಎದ್ದ ನೀಲಕಂಠ ತಿಂಡಿ ಮಾಡಿ , ಅಡುಗೆಮನೆಗೂ, ಹೊರಗೆ ಜನ ಕೂರುವ ಹಾಲ್ ಗೂ ಮಧ್ಯದಲ್ಲಿ ಒಂದಕ್ಕೊಂದು ಜೋಡಿಸಿಟ್ಟಿದ್ದ ಬೆಂಚುಗಳ ಮೇಲೆ ಇಡುತ್ತಿದ್ದ.
ಅವತ್ತು ವಾರದ ಸಂತೆ. ಇನ್ನೇನು ಸ್ವಲ್ಪವೇ ಹೊತ್ತಿನಲ್ಲಿ ಬಸ್ಸುಗಳು ಬಂದು ನಿಂತುಕೊಳ್ಳುತ್ತವೆ. ಬಂದವರನ್ನು ನಿಭಾಯಿಸಿ ಕಳಿಸಿದರೆ ಸಾಕು ಎಂದುಕೊಳ್ಳುತ್ತಾ ಮಹಾದೇವಿ ಒಳಗೆ ಹೊರಗೆ ಓಡಾಡುತ್ತಾ, ಬರುವ ಗಿರಾಕಿಗಳನ್ನು ನಿಭಾಯಿಸಲು ಸಿದ್ಧತೆ ಮಾಡಿಕೊಳ್ಳತೊಡಗಿದಳು.
ಅದರ ಮಧ್ಯೆ ಮಗು ಏಕೋ ಬೆಳಗ್ಗೆಯಿಂದ ಅಳುತ್ತಾ ಕಿರಿಕಿರಿ ಮಾಡುತ್ತಿತ್ತು. ದಿನವೂ ಕೈಗೆ ಕೊಟ್ಟದ್ದನ್ನು ಹಿಡಿದುಕೊಂಡು ಆಟವಾಡುತ್ತಾ ಕೂತಿರುತ್ತಿದ್ದ ಅದು ಮಹಾದೇವಿಯ ಸೀರೆ ಹಿಡಿದು ಜಗ್ಗುತ್ತಾ ಅಳುತ್ತಲೇ ಅವಳೊಂದಿಗೇ ತಿರುಗತೊಡಗಿತು.
ಅವಳಿಗೆ ಮಗುವನ್ನು ರಮಿಸಲು ಸಮಯವಿರಲಿಲ್ಲ. ಬಸ್ಸುಗಳು ಬರುವ ಸದ್ದು ಕೇಳತೊಡಗಿತು.
ʻಏನ್ ಹೊಟ್ಟೆ ಗಿಟ್ಟೆ ನೋವೋ ಏನೋ… ಹಿಂಗ್ ಕೈ ಬುಡ್ಡೆ ಇದ್ರೆ ಹೆಂಗ್ ಮಾಡ್ಲಿʼಎಂದುಕೊಳ್ಳುತ್ತಾ ಎತ್ತರದಲ್ಲಿ ಕೂರಿಸೋಣವೆಂದು ನೋಡಿದಳು. ಬೆಂಚಿನ ತುಂಬಾ ಪದಾರ್ಥ ಜೋಡಿಸಿತ್ತು.ಇಡ್ಲಿ ಕುಕ್ಕೆ, ವಡೆ ಕುಕ್ಕೆ, ಉಪ್ಪಿಟ್ಟು ಕೇಸರಿಬಾತಿನ ಪಾತ್ರೆ, ಚಟ್ನಿಯ ಬಕೆಟು, ಕಡೆಯಲ್ಲಿ ಬಾಳೆಎಲೆ ಪಿಂಡಿ…….ಸಾಮಾನು ಅತ್ತಿತ್ತ ಸರಿಸಿದಳು. ಬೆಂಚ್ ಮೇಲಿದ್ದ ಚಟ್ನಿ ಬಕೆಟ್ ತೆಗೆದು ಬೆಂಚಿನ ಅಡಿಗಿಟ್ಟು ಜಾಗಮಾಡಿ ಅಳುವ ಮಗುವನ್ನು ಕೂರಿಸಿದಳು.
ಗಿರಾಕಿ ಬಂದು ಕೂರತೊಡಗಿದರು. ಡ್ರೈವರ್ ರಂಗಪ್ಪ ಕಂಡಕ್ಟರೊಂದಿಗೆ ಬಂದು ತನ್ನ ಮಾಮೂಲಿ ಮೂಲೆ ಬೆಂಚಿನ ಮೇಲೆ ಆಸೀನನಾದ. ಹೋಟೆಲು ಜನರಿಂದ ತುಂಬಿ ಹೋಯಿತು. ಒಳಗೆ ಬೆಂಚಿನ ಮೇಲೆ ಕೂರಿಸಿ ಬಂದ ಮಗು ತಾರಕ ಸ್ವರದಲ್ಲಿ ಅಳತೊಡಗಿತು. ಎಲ್ಲ ಟೇಬಲಿಗೂ ನೀರಿನ ಜಗ್ಗು, ಲೋಟಗಳನ್ನಿಟ್ಟು, ಮಹಾದೇವಿ ಪ್ಲೇಟುಗಳಿಗೆ ತಿಂಡಿ ಹಾಕಿಕೊಂಡು ಬರಲು ಒಳಗೆ ಓಡಿದಳು.
ಬೆಂಚಿನ ಮೇಲೆ ಕೂತ ಮಗು ಅಂಡೆತ್ತಿ ಕುಣಿಯುತ್ತಾ ರಚ್ಚೆ ಮಾಡುತ್ತಿದೆ. ಹತ್ತಿರ ಹೋಗಿ ನೋಡಿದಳು. ಮಗು ಬೇಧಿ ಮಾಡಿಕೊಂಡುಬಿಟ್ಟಿದೆ.
ಬೆಂಚಿನ ಮೇಲೆ ಮಗು ನೀರು ನೀರು ಬೇಧಿ ಮಾಡುತ್ತಲೇ ಇದೆ. ಜೋಡಿಸಿದ ಬೆಂಚುಗಳ ಮಧ್ಯದ ಗ್ಯಾಪಿನಲ್ಲಿ ಹರಿದ ಬೇಧಿ ಕೆಳಗಿಟ್ಟ ಕಾಯಿ ಚಟ್ನಿಯ ಬಕೀಟನೊಳಗೆ ಇಳಿಯುತ್ತಿದೆ.
ʻಈಗ ಏನ್ ಮಾಡದು? ಹೊರಗೆ ಗಿರಾಕಿ ಕೂತ್ಬಿಟ್ಟಿದಾರೆ. ಅವರಿಗೆ ಬರೀ ಇಡ್ಲಿ ವಡೆ ಕೊಡಕಾಗುತ್ತಾ?ʼ ಎನ್ನುತ್ತಾ ಚಡಪಡಿಸಿದಳು.
ಬಂದು ಕೂತಿರುವವರನ್ನು ʻತಿಂಡಿ ಇಲ್ಲ ಹೋಗಿʼ ಎಂದು ಹೇಳಿ ಗಿರಾಕಿಗಳನ್ನು ಕಳೆದುಕೊಳ್ಳಲು ಆಗುತ್ತಾ?
ಯೋಚಿಸುತ್ತಲೇ ಚಟ್ನಿ ಬಕೇಟು ಹೊರಗೆಳೆದುಕೊಂಡಳು. ಏನೋ ನಿರ್ಧಾರ ಕೈಗೊಂಡವಳಂತೆ ಅದರೊಳಗೆ ಸೌಟು ಹಾಕಿ ಚನ್ನಾಗಿ ತಿರುವಿದಳು. ಮಗುವಿನ ಬೇಧಿ ಕಾಯಿಚಟ್ನಿಯೊಂದಿಗೆ ಬೆರೆತುಹೋಯಿತು.
ಇಡ್ಲಿ ವಡೆಯ ಮೇಲೆ ಚಟ್ನಿ ಸುರಿದು ಗಿರಾಕಿಗಳಿಗೆ ಅಳುಕಿನಿಂದಲೇ ಬಡಿಸಿದಳು. ಒಳಬಾಗಿಲ ಬಳಿ ನಿಂತು ಭಯದಿಂದ ಎಲ್ಲರ ಮುಖ ನೋಡತೊಡಗಿದಳು.
ಅವಳು ಎಣಿಸಿದ್ದಂತೆ ಭಯಪಡುವಂತದ್ದೇನೂ ಆಗಲಿಲ್ಲ. ಜನ ಎಂದಿನಂತೆ ಚಪ್ಪರಿಸಿಕೊಂಡು ತಿನ್ನುತ್ತಿದ್ದಾರೆ. ಮಹಾದೇವಿ ಅದನ್ನು ನೋಡುತ್ತಾ ಮೈಮರೆತವಳಂತೆ ನಿಂತಿದ್ದಳು.
ʻಇನ್ನೊಂದಿಷ್ಟು ಚಟ್ನಿ ಹಾಕಮ್ಮಾʼ ಎಂದು ಆಚೆ ಅಂಚಿನಲ್ಲಿದ್ದ ಗೌಡರೊಬ್ಬರು ಮೀಸೆಗಂಟಿಕೊಂಡಿದ್ದ ಚಟ್ನಿಯನ್ನು ನಾಲಿಗೆಯಿಂದ ನೆಕ್ಕಿಕೊಳ್ಳುತ್ತಾ ಕೇಳುತ್ತಿದ್ದರು. ಓಡಿಹೋಗಿ ಚಟ್ನಿ ಮಗ್ ಕೈಗೆ ತೆಗೆದುಕೊಂಡಳು. ʻಹಂಗೇ ಇನ್ನೊಂದು ಇಡ್ಲಿ ತಗೊಂಡು ಬಾʼ ಎಂದರು ಆ ಗೌಡರು.
ʻ ಇದೇನಮ್ಮಿ, ಚಟ್ನಿ ದಿನಕ್ಕೊಂದು ರುಚಿ ಮಾಡ್ತೀರಿ! ಇವತ್ತೊಳ್ಳೆ ಪರಿಮಳ ಐತೆ…ಅದೇನ್ ಹಾಕ್ತೀರಿ ಹೇಳು! ಮನೇಲಿ ನಮ್ಮ ಹೆಂಗಸ್ರಿಗೂ ಹೇಳಿ ಮಾಡುಸ್ತೀನಿ!ʼ ಎಂದು ಕಂಡಕ್ಟರ್ ತಾರೀಫ್ ಮಾಡುತ್ತಿದ್ದ..
ದಿನಕ್ಕಿಂತಾ ಒಂದು ಇಡ್ಲಿ, ಒಂದು ವಡೆ ಹೆಚ್ಚಿಗೆ ತಿಂದ ಡ್ರೈವರ್ ರಂಗಪ್ಪ ಕೈ ತೊಳೆದು ಗಲ್ಲಾ ಬಳಿ ಬಂದು ಮಹಾದೇವಿ ಕೊಟ್ಟ ಪೇಪರ್ ತುಂಡಿನಿಂದ ಕೈ ಒರೆಸುತ್ತಾ ʻಆಹಾ! ನಿನ್ ಕೈ ರುಚಿಯೇ ರುಚಿ!ʼ ಎಂದ.
ಪರಿಸ್ಥಿತಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಮಹಾದೇವಿ ಓಡಿಹೋಗಿ ಮಗುವನ್ನೆತ್ತಿಕೊಂದು ಬಚ್ಚಲು ಕಡೆ ನಡೆಯತೊಡಗಿದಳು.






0 Comments