ಪುರಾಣ ಕಾಲದಲ್ಲೂ ರಕ್ತ ಬೀಜಾಸುರರಿದ್ದರಲ್ಲವೇ?
ಜಯಶ್ರೀ ಕಾಸರವಳ್ಳಿ
ಯಾವುದೇ ಪುರಾಣ ತೆಗೆದುಕೊಂಡರೂ ರಾಕ್ಷಸರ ಅಟ್ಟಹಾಸವಿಲ್ಲದೇ ಕತೆ ಮುಂದುವರೆಯುವುದಿಲ್ಲ. ಪುರಾಣ ಕಾಲದಲ್ಲಿ ರಾಕ್ಷಸ ಸಂಹಾರವೆನ್ನುವುದು ಸಾಮಾನ್ಯ ಬದುಕಿನ ಅವಿಭಾಜ್ಯ ಅಂಗ ಹಾಗೂ ಅನಿವಾರ್ಯ ಸ್ಥಿತಿ ಎಂದೇ ನಾವೆಲ್ಲಾ ಹೆಚ್ಚು ಪ್ರಶ್ನಿಸಿಕೊಳ್ಳದೇ ಒಮ್ಮತದಿಂದಲೇ ಒಪ್ಪಿಕೊಂಡ, ಕತೆ ಸರಾಗವಾಗಿ ಓಡಲು ಪೂರಕವಾದ ಸತ್ಯವಾಗಿತ್ತು. ಕೆಲವೊಮ್ಮೆ ಊಧ್ರ್ವಮುಖವಾಗಿ ಚಲಿಸುವ ಕಾಲ, ಚಲಿಸುವ ರಭಸದಲ್ಲಿ ಪಾಪಿಷ್ಠನ ಕಾಲ್ತುಳಿತಕ್ಕೆ ಸಿಕ್ಕಿ, ಅಧೋನ್ಮುಖವಾಗಿ ಇಳಿಯುವುದೂ ಉಂಟು ಎಂದು ನಮ್ಮನ್ನೆಲ್ಲಾ ಸಲಹಿದ ನನ್ನತ್ತೆ ಮಗಳು ಹೇಳುತ್ತಿದ್ದದ್ದು ನೆನಪು. ಮಕ್ಕಳಾಟಿಕೆಯಲ್ಲಿ ಕತೆಗಾಗಿ ಕೆಲವು ಕಿವಿಗೆ ಹಿತವಾದ ಸುಳ್ಳುಗಳನ್ನು ಅವಳೇ ಸೃಷ್ಟಿಸುತ್ತಿದ್ದಳೋ, ಕಾಲಮಾನದ ಚಿತ್ರವಿಚಿತ್ರ ನಡಾವಳಿಯಲ್ಲಿ ಅಸಂಭವಗಳೂ ಸಂಭವನೀಯವಾದ್ದರಿಂದ ಪುರಾಣದಲ್ಲೇ ಇಂತಹವುಗಳು ಉಂಟೋ ಪುರಾಣ ಹೆಚ್ಚು ಅರಿಯದ ನನಗಂತೂ ತಿಳಿದಿಲ್ಲ. ಆದರೆ ಅಂತಹ ಕತೆಗಳು ಕೇಳಲು ಮಜವಾಗಿರುತ್ತಿದ್ದವು. ಎಂದೋ ಶಾಪಗ್ರಸ್ತ ಹೆಣ್ಣಿಗೆ ಇನ್ಯಾರಿಂದಲೋ ಶಾಪ ವಿಮುಕ್ತಿ, ಎಂದೋ ಸತ್ತ ಯಾರದ್ದೋ ತಾಯಿಗೆ ಇನ್ಯಾರಿಂದಲೋ ಮರುಹುಟ್ಟು….. ಮುಂದೆ ಹೋದ ಕತೆ ಇದ್ದಕ್ಕಿದ್ದಂತೆ ಹಿಂದೆ ಸರಿದ ಹಾಗೂ, ಹಿಂದೆ ಸರಿದ ಕತೆ ಇದ್ದಕ್ಕಿದ್ದಂತೆ ನಾಗಾಲೋಟದಲ್ಲಿ ಮತ್ತೆಲ್ಲೋ ಓಟ ಕಿತ್ತ ಹಾಗೂ ಕತೆ ಹೆಣೆಯುವುದರಲ್ಲಿ ನಾವು ಅದೆಷ್ಟು ನಿಸ್ಸೀಮರೆಂದು ನಮ್ಮ ಪುರಾತನರೇ ತೋರಿಸಿಕೊಟ್ಟಿದ್ದಾರೆ.

ಇದು ಹಳೆ ಕತೆಯಾಯಿತು, ನಾವೀಗ ಇಪ್ಪತ್ತೊಂದನೇ ಶತಮಾನದ ಆಧುನಿಕ ಯುಗದಲ್ಲಿದ್ದೇವೆ ಅಂದುಕೊಂಡಿದ್ದೆವಲ್ಲಾ ಅದೇ ಎಡವಟ್ಟಾಯಿತು. ಹೆಣ್ಣು ಮಕ್ಕಳು, ಗಂಡು ಮಕ್ಕಳೆಂಬ ತಾರತಮ್ಯವಿಲ್ಲದೇ ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡಿ ಸಮಾಜದ ದೃಷ್ಟಿಯಲ್ಲಿ ಹೆಣ್ಣು ಮಗಳಿಗೂ ಮರ್ಯಾದೆಯ ಸ್ಥಾನ ನೀಡುತ್ತೇವೆ, ಸಂಸಾರದ ನೊಗ ಹೊತ್ತು ಬಸವಳಿಯುವ ಗಂಡನಿಗೆ ಕೈ ಹಿಡಿದ ಹೆಂಡತಿಯೂ ಸಾಥ್ ಕೊಟ್ಟರೆ ಅಂತಹ ಸಂಸಾರ ಸುಖಮಯವಾಗಿರುತ್ತೆ, ಗಂಡು-ಹೆಣ್ಣು ಇಬ್ಬರೂ ದುಡಿಯುತ್ತಿದ್ದರೆ, ಗಂಡಹೆಂಡತಿಯರಲ್ಲಿ ಅನಾವಶ್ಯಕ ಜಗಳವಿರುವುದಿಲ್ಲ, ಸಾಮರಸ್ಯ ತುಂಬಿ ತುಳುಕುತ್ತೆ, ಆರ್ಥಿಕ ಸ್ವಾವಲಂಬಿಯಾಗಿದ್ದರೆ ಪೈಸೆ, ಪೈಸೆಗೂ ಹೆಣ್ಣು ಗಂಡಿನ ಮುಂದೆ ಹೀನಾಯವಾಗಿ ಕೈ ಒಡ್ಡಬೇಕಿಲ್ಲ, ತನ್ನ ಖರ್ಚನ್ನ ತಾನೇ ನಿಭಾಯಿಸುವಷ್ಟು ಆಕೆ ಜಾಣೆಯಾಗಿರುತ್ತಾಳೆ, ಆರ್ಥಿಕ ಕುಸಿತವೋ, ಕೆಲಸ-ಕಾರ್ಯದಲ್ಲಿ ಯಾವುದೇ ಕಲಾಪ ಬಂದು ಹಿಡಿದ ಕೆಲಸ ಎಡವಟ್ಟಾದರೆ, ಒಬ್ಬನದ್ದೇ ಸಂಬಳವೆಂದು ಗಂಡು ಕಂಗೆಟ್ಟು ತಲೆ ಮೇಲೆ ದಿಕ್ಕೇ ತೋಚದಂತೆ ಕೈ ಹಿಡಿದು ಕೂರಬೇಕಿಲ್ಲ, ಅಂತಹ ಅನಿವಾರ್ಯ ಸಂದರ್ಭದಲ್ಲಿ ಆರ್ಥಿಕ ಬೆಂಬಲ ನೀಡಿ ನೈತಿಕ ಹೊಣೆ ಹೊರಲು ಸರ್ವ ವಿಧದಲ್ಲಿ ಸಹಾಯಕ್ಕೆ ನಿಲ್ಲಲು ಹೆಂಡತಿ ಇರುತ್ತಾಳೆ – ಹೀಗೆ ಹಲವು ಲೆಕ್ಕಾಚಾರದಲ್ಲಿ ಹೆಣ್ಣನ್ನು ಹೆಣ್ಣು ಎಂದು ಭಾವಿಸದೇ ಹೆಣ್ಣು ಮಕ್ಕಳಿಗೂ ಸಮಾನ ವಿದ್ಯಾಭ್ಯಾಸ ಕೊಟ್ಟೆವಲ್ಲ……..!
ಇದೂ ಹಳೇ ಕತೆಯಾಯಿತು, ಹಿಸ್ಟರಿ ರಿಪೀಟ್ಸ್ ಎಂದ ಕಾರ್ಲ್ ಮಾಕ್ಸ್ನನ್ನು ಅನುಕರಿಸಿ ಮುಗ್ಗರಿಸಿದ ಅದೆಷ್ಟೋ ರಾಷ್ಟ್ರಗಳೂ ತೆಪ್ಪಗೆ ಕಾಲು ಮುದುರಿ ಬೆಕ್ಕಿನ ಮರಿಯಂತೆ ಮಿಣ್ಣಗೆ ಕುಳಿತ್ತಿದ್ದನ್ನು ತಣ್ಣಗೆ ಕೇಳಿಯೂ ಕೇಳದಂತೆ, ಕೆಲವರಾದರೂ ಅಸಮಾಧಾನದಿಂದ ಕಣ್ಣೊರೆಸಿಕೊಂಡಿದ್ದನ್ನ ನಾವೂ ಕಂಡೂ ಕಾಣದಂತೆ ಉದಾಸೀನದಿಂದಲೇ ಅಂತವರನ್ನೆಲ್ಲಾ ಬದಿಗೊತ್ತಿ ಔದ್ಯೋಗೀಕರಣ, ಜಾಗತೀಕರಣವೆಂಬ ಹೊಸ ಹೊಸ ಕನಸಿನಲ್ಲಿ ನಮ್ಮ ಮಕ್ಕಳನ್ನು ನಾವೇ ತಕ್ಕಡಿಗೆ ಹಾಕಿ ತೂಗುತ್ತಾ ಐಷಾರಾಮದ ಜೀವನದ ಬೆನ್ನೆಟ್ಟಿ ಓಡುವ ಮಕ್ಕಳೊಂದಿಗೆ ಸ್ವರ್ಧೆಯ ಕಣದಲ್ಲಿ ನಿಂತು ನಾವೂ ಓಡುತ್ತಾ, ಎಂದಿನಿಂದಲೂ ನಂಬಿದ್ದ ಹಳೇ ಮೌಲ್ಯಗಳೆಲ್ಲಾ ಏಕಾಏಕಿ ಅರ್ಥಹೀನವೆನ್ನಿಸಿ, ಮುಂದುವರೆದ ರಾಷ್ಟ್ರಗಳನ್ನೇ ದೊಡ್ಡ ದೊಡ್ಡ ಕಣ್ಣು ಬಿಟ್ಟು ನಿಟ್ಟಿಸಿ, ಅವರು ಪೀಟ್ಜಾ ತಿಂದರೆಂದು ನಾವೂ ರಬ್ಬರ್ ತರ ಅದನ್ನು ಕಿಸಿದು ಕಿಸಿದು ತಿನ್ನುತ್ತಾ, ಅವರು ಪ್ಲಾಸ್ಟಕ್ ಕಪ್ನಲ್ಲಿ ಪೆಪ್ಸಿ ಕುಡಿದರೆಂದು ಹುಚ್ಚರಂತೆ ಅದನ್ನೇ ಕುಡಿಯುತ್ತಾ, ನಮ್ಮ ಸಂಸ್ಕೃತಿಯನ್ನು ಮುಲಾಜಿಲ್ಲದೇ ಮೂಲೆಗೆಸೆಯುತ್ತಾ, ಬೀದಿ ಮಾರಿಯನ್ನು ನಾವಾಗಿಯೇ ಸ್ವಾಗತಿಸಿ ಮೈ ಮೇಲೆ ಎಳೆದುಕೊಂಡು, ಬಹು ರಾಷ್ಟ್ರಗಳ ಸಂಸ್ಕೃತಿಯನ್ನು ಅಳವಡಿಸಿಕೊಳ್ಳದಿದ್ದರೆ ಬದುಕೇ ಧುಸ್ಸಾದ್ಯವೆನ್ನುವ ವಿಪರೀತ ಕಲ್ವನೆಯನ್ನೇ ವಾಸ್ತವವೆಂದು ನಂಬಿ, ಮಾಲ್ ಸಂಸ್ಕೃತಿಯ ರಾಶಿ ಪ್ಲಾಸ್ಟಿಕ್ಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಪೇರಿಸಿಡುತ್ತಲೇ, ಒಂದು ಕಾರಿನವರು ಎರಡು ಕಾರಿನವರಾಗಿ, ಎರಡು ಮನೆಯವರಿಗೆ ಮೂರನೇ ನಿವೇಶನದ ಅಗತ್ಯಗಳ ಆಮಿಷ ಒಡ್ಡುತ್ತಾ, ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸಿ, ಬಡವರನ್ನು ಹೀನಾಯವಾಗಿ ಕೆಳಗೆ ತಳ್ಳಿ ನಿಶ್ಚಿಂತರಾಗುತ್ತಾ, ಕಳೆದು ಹೋಗುತ್ತಿರುವ ಮಧ್ಯಮ ವರ್ಗಗಳ ಆರೋಗ್ಯಕರ ಹೋರಾಟ ಮನೊಭಾವದ ಜೀವನೋತ್ಸಹದ ಗೈರು ಹಾಜರಿಯಲ್ಲಿ ಅವತರಿಸಿದ ತಂತ್ರಯುಗದ ಹೊಸ ರೋಗಗಳಾದ ಅಪನಂಬಿಕೆ, ನಿರುತ್ಸಾಹ, ಭಯ, ತವಕ, ತಲ್ಲಣ, ಏಕಾಂಗಿತನ, ನಿರಾಶೆ, ಹತಾಶೆ, ವ್ಯಸನ, ಖಿನ್ನತೆಗಳ ಅರ್ಥವೇ ಆಗದೇ ಪೇಚಾಡುತ್ತಾ ನಮ್ಮ ಮುಂದೆ ನೆರಳಿನಂತೆ ಸರಿದು ಹೋಗುವ ಮಕ್ಕಳಲ್ಲಿ ಇನ್ನೂ ಕನಸಿಗೆ ಅವಕಾಶವಿದೆಯೇ ಎಂಬ ಅವಕಾಶವಾದಿಯಾಗಿ ಹಳಿ ತಪ್ಪಿದ ಮಕ್ಕಳೊಡನೆ ಹಾದಿ ತಪ್ಪಿ ಅಚ್ಚ ಸೂರ್ಯನ ಬೆಳಕಿನಲ್ಲಿ ಪೆಚ್ಚುಪೆಚ್ಚಾಗಿ ಹಾಡ ಹಗಲೇ ತಡವುತ್ತಾ ದಾರಿ ಹುಡುಕಿ ತೆವಳಿದ್ದೆವಲ್ಲಾ……!
ಇದೂ ಹಳೇ ಕತೆಯಾಯಿತು, ಅನಗತ್ಯ ಅಸಮಾನತೆಯಿಂದ ನರಳುವ ಸಂದರ್ಭವೇ ಮೂಡದ ಒಂದು ಸಮಾಜದಲ್ಲಿ ಎಲ್ಲವೂ ಸಲೀಸು ಎಂದು ನಾವು ನಂಬಿದ್ದು ಕೈ ಕೊಟ್ಟಿತು. ಕಾಂಚಾಣ ಅಧ್ವಾನವಾಗಿ ಅಂಗೈಯಲ್ಲಿ ನತರ್ಿಸಲು ಶುರುವಾದಾಗ, ಹೆಡೆಮುರಿಗೆ ಕಟ್ಟಿ ಒಳಗೇ ಬಚ್ಚಿಟ್ಟಿದ್ದ ಹಾವು ಮೈ ಒದರಿ ಎದ್ದು ನಿಂತಿದ್ದೆ ತಡ, ಹಿರಿಯರು ಕಿರಿಯರು ವ್ಯತ್ಯಾಸವೇ ಇಲ್ಲದ, ನಾನು ತಾನೆಂಬ ಭೇದಭಾವವಿರದ, ಹೆತ್ತವರು ದೊಡ್ಡವರೆಂಬ ಮರ್ಯಾದೆಯೂ ಇಲ್ಲದ ದುಡಿ ದುಡಿ ಎಂಬ ಭಾವರಹಿತ ಬದುಕಿನಲ್ಲಿ ಸಿಲುಕಿ, ಜನರಿಂದ, ಹೆತ್ತವರಿಂದ, ಕೈ ಹಿಡಿದವಳಿಂದ ಎಂದು ಸರ್ವರಿಂದಲೂ ದೂರವಾಗಿ ಸéೀರೋ ಭಾವನೆಯ ಒಂಟಿತನದಲ್ಲಿ ಮೊಳೆತ ಒಂದೇ ಒಂದು ವಿಷವೇ ಬೃಹದಾಕಾರವಾಗಿ ಬೆಳೆದು, ತಾರತಮ್ಯವಿಲ್ಲವೆಂದು ನಾವು ಭಾವಿಸಿದ್ದ ಬದುಕಿನಲ್ಲಿ ಅಸಾದಾರಣವಾದ ತಾರತಮ್ಯ ಭುಗಿಲೆದ್ದು, ನಿನಗಿಂತ ನಾನೇನೂ ಕಮ್ಮಿಯಿಲ್ಲವೆಂಬ ಅಹಂಕಾರ, ತಾತ್ಸಾರ, ನಿಕೃಷ್ಟ, ಅಸಡ್ಡೆ, ಅಶಾಂತಿ, ಅಸಮಾಧಾನ, ಅಸೂಯೆ, ಸಂಶಯ, ದ್ವೇಷ, ಶಂಕೆ, ತಿರಸ್ಕಾರ ಮುಗಿಲೆತ್ತರ ಬೆಳೆದು, ನೋಡುನೋಡುತ್ತಿದ್ದಂತೇ ಮಕ್ಕಳು ಹೇಡಿಗಳಂತೆ ನೇಣಿಗೆ ಶರಣು, ರೋಸಿ ಹೋದ ಮನಸ್ಥಿತಿಗೆ ಏನೂ ಸಿಗದ್ದಿದ್ದರೆ ಉಟ್ಟ ಲುಂಗಿ, ದುಪ್ಪಟ್ಟ, ಸ್ಕಾಪರ್್ಗಳಿಗೇ ಪ್ರಾಣಾರ್ಪಣೆ, ಯಾವುದೋ ಅಸಹಜ ಸಾವು, ಮತ್ತೆಲ್ಲೋ ಕೊಲೆ, ಹಗಲೇ ಸುಲಿಗೆ, ರೇಪ್ ಎಂಬ ಹೊಸ ಸಂಸ್ಕೃತಿಯ ಉದಯವನ್ನ ಬೆರಗಾಗಿ ವೀಕ್ಷಿಸಿದ್ದೆವಲ್ಲಾ……..!
ಇದೂ ಹಳೇ ಕತೆಯಾಯಿತು, ದಿನನಿತ್ಯದ ರಂಜನೆಯಂತೆ ಬಂದೆರಗುವ ಇಂತಹ ಸುದ್ದಿಗಳೇ ಬದುಕನ್ನು ಆಳತೊಡಗಿದಾಗ ಪರಿತ್ಯಕ್ತ ಮನಸ್ಸಿಗೆ ಇಷ್ಟೇ ರುಚಿಸದೇ ಇದಕ್ಕೂ ಮೀರಿದ ಮನೋರಂಜನೆಯನ್ನ ಹಲವಾರು ರೀತಿಯಲ್ಲಿ ಬೇಡಿ ಅಭಿವ್ಯಕ್ತಿಸುತ್ತಿದ್ದಂತೇ ಅದಕ್ಕೆಂದೇ ಕಾದು ಕುಳಿತು ಅಂತಜರ್ಾಲದ ತಾಣಗಳಲ್ಲಿ, ಸಿನಿಮಾಗಳಲ್ಲಿ ಸುಪ್ತ ಬಯಕೆಯ ವಿಕೃತಿಗಳನ್ನ ತಿರುಚಿ ಮುರುಚಿ ಕೀಳು ಅಭಿರುಚಿಯಲ್ಲಿ ಸುಲಭವಾಗಿ ಭಿತ್ತರಿಸಿ, ಅಸಹನೆಯಿಂದ ಗಬ್ಬೆದ್ದುಹೋದ ಅತೃಪ್ತ ಮನಸ್ಸಿನ ವಿಲಕ್ಷಣ ಬಯಕೆಗಳನ್ನ ಈಡೇರಿಸುವುದರೊಂದಿಗೇ ಬಿಸಿ ರಕ್ತದ ಹಲವರನ್ನು ಹಾದಿ ತಪ್ಪಿಸಿ ಅಂತರ್ಪಿಶಾಚಿಯನ್ನಾಗಿಸಿ, ತ್ರಿಶಂಕು ಸ್ಥಿತಿಯಲ್ಲಿ ಓಲಾಡಿಸುತ್ತಿರುವಾಗ, ಒಂದಷ್ಟು ಭಂಡ ಯುವಕರಿಂದ ತುಂಬಿದ ದೇಶದ ಮುನ್ಚೂಣಿ ಹಿಡಿದ ಮತ್ತಷ್ಟೇ ಭಂಡರ ಒಂದು ರಾಷ್ಟ್ರ ನಮ್ಮದಾಯಿತು ಎಂದು ಹೆಮ್ಮೆಯಿಂದ ನಮ್ಮ ಬೆನ್ನು ನಾವೇ ತಟ್ಟುಕೊಳ್ಳುವಂತಾದ ವಿಪರ್ಯಾಸದಲ್ಲಿ ಕಣ್ಣಕಣ್ಣು ಬಿಟ್ಟು ಕೂರುವುದು ಬಿಟ್ಟು ಇನ್ನೇನೂ ಉಳಿದಿಲ್ಲವೆಂಬಂತೆ ಅಸಹಾಯಕತೆಯಲ್ಲಿ ಕೈ ಕೈ ಹೊಸಕಿಕೊಳ್ಳುತ್ತಾ ವಿಧಿಯಿಲ್ಲದೇ ನಾವೂ ಕುಳಿತ್ತಿದ್ದೆವಲ್ಲಾ…..!
ಇದೂ ಹಳೇ ಕತೆಯಾಯಿತು, ಅರೆನಿದ್ರಾವಸ್ಥೆಯಲ್ಲಿ ಕುಳಿತು ಔದಾಸೀನ್ಯದಿಂದ ಇಂಟರ್ನ್ಯಾಷನಲ್ ಬ್ರಾಂಡ್ ಲೇಸ್ ಮತ್ತು ಕುರ್ಕುರೆ ಮೆಲ್ಲುತ್ತಾ ಇದಕ್ಕಿಂತಲೂ ರೋಚಕತೆ ಇದೆಯೇ ಎಂದು ತುಡಿಯುವ ಹಂಬಲದಲ್ಲಿದ್ದ ಅರೆಪ್ರಜ್ಞೆಯ ಇಡೀ ಸಮುದಾಯದ ಜಾಗೃತ ಮನಸ್ಸನ್ನ ಬಡೆದು ಎಬ್ಬಿಸುವುದಕ್ಕೆ ಕೇವಲ ಒಂದು ಚಾಲನೆ ಬೇಕಿತ್ತು. ಪ್ರಸ್ತುತ ವ್ಯವಸ್ಥೆಯಿಂದ ಸತ್ತ ಪ್ರತಿ ಮನುಷ್ಯನ ಸುಪ್ತಪ್ರಜ್ಞೆಯೊಳಗೆ ಪ್ರಾಯಶಃ ದ್ರವಿಸುವ ತಪ್ತ ಮನಸ್ಸೆಂಬೋದು ಇನ್ನೂ ಅರೆಜೀವದೊಂದಿಗೆ ಉಳಿದಿತ್ತು. ಖಿಚಿಣ ಟಿರಣ ಊಣಟಚಿಟಿಣಥಿ ಜಜಚಿಜ…… ಎಂದು ಆ ಯುವಕ ಶುರುಮಾಡಿದ ಕತೆಗೆ ನಾವು ಇದೂ ಹಳೇ ಕತೆಯಾಯಿತು ಎಂದು ನೋಡಲಿಲ್ಲ, ಆದ್ರ್ರ ಹೃದಯದಿಂದ ನಮ್ಮ ಕತೆಯನ್ನೇ ಅವನು ಬಿಚ್ಚುತ್ತಿದ್ದಾನೆಂದು ದೇಶಕ್ಕೆ ದೇಶವೇ ಒದ್ದೆ ಕಣ್ಣಿನಿಂದ ನೋಡಿತು. ಆ ದಿನ ಯಾರು ಆ ಬಸ್ಸಿಗೆ ತಗುಲಿ ಹಾಕಿಕೊಂಡಿದ್ದರೂ ಇದಕ್ಕಿಂತ ಭಿನ್ನ ಕತೆ ಮೂಡಲು ಸಾಧ್ಯವಿರಲಿಲ್ಲವೆಂಬುವುದನ್ನು ಅವನು ಒಂದು ನಿಟ್ಟುಸಿರಿನಲ್ಲಿ ತಣ್ಣಗೆ ಉಸುರಿದಾಗ, ಬೆಚ್ಚಿ ಬಿದ್ದು ನಾವು ಅದಾಗ ನಮ್ಮ ಸುತ್ತ ಕಣ್ಣಾಡಿಸಿದೆವಲ್ಲಾ……!
ಆಗ ನಮಗೆ ಅರಿವಾದದ್ದು ಅವನ ಕತೆಯೂ ಹಳತು, ಆದರೆ ಅಷ್ಟು ಜನರ ಮುಂದೆ ನಿವೇದಿಸಿಕೊಂಡ ಆ ಸಂವೇದನೆ ಮಾತ್ರ ಹೊಸತು….. ಸತ್ತ ನಮ್ಮ ಸಂವೇದನೆಯನ್ನು ಉದ್ದೀಪಿಸುವುದರ ಮೂಲಕ ಅವನು ಏನು ಸಂದೇಶ ಮುಟ್ಟಿಸುತ್ತಿದ್ದಾನೆ? ಪ್ರಾಯಶಃ ಉಳಿದದ್ದೆಲ್ಲಾ ಹಾಗೇ ಇದೆ, ಆದರೆ ಸತ್ತಿರುವುದು ನಮ್ಮ ಮನುಷ್ಯತ್ವ್ವ ಮಾತ್ರವೆಂದೇ? ನಾವು ಯಾವುದು ಹಳೇ ಕತೆ ಎಂದು ಬದಿಗೆ ತಳ್ಳುತ್ತಿದ್ದವೋ ಅದೆಲ್ಲವೂ ಸೇರಿದ ಒಂದು ವಾಸ್ತವ ಇಲ್ಲಿದೆ ಎಂದೇ? ಯಾವ ರಕ್ತ ಭೂಮಿಗೆ ಬಿದ್ದರೆ ಕೇಡು ಎಂದು ಹೋರಾಡಿದ್ದರೋ ಅಂತಹ ಅಸಂಖ್ಯ ರಕ್ತದ ಹನಿಗಳ ಓಕುಳಿಯಲ್ಲಿ ಓಲಾಡುವ ನೆಲದಲ್ಲಿ ಇಂದು ನಾವಿದ್ದೇವೆಂದೇ? ದೇವರು-ದಿಂಡರು, ಪಾಪ-ಪುಣ್ಯ, ಪೂಜೆ-ಪುನಸ್ಕಾರ, ಜನ್ಮ-ಪುನರ್ಜನ್ಮ, ಸಾಧು-ಸಂತರು, ಸ್ವರ್ಗ-ನರಕ ಎಂದು ಹಲವು ಸಂಸ್ಕೃತಿಗಳ ವೈಭವವನ್ನು ಮೆರೆಯುವ ನಾವು, ಆಚಾರ ವಿಚಾರ, ಉಡುಗೆ ತೊಡುಗೆ ಎಂದು ಹಲವು ವಿಭಿನ್ನ ಸಂಪ್ರದಾಯಗಳನ್ನು ಸಂಭ್ರಮದಿಂದ ಕೊಂಡಾಡುವ ನಾವು, ವಾಸ್ತವದಲ್ಲಿ ನಮ್ಮ ಅಸ್ತಿತ್ವವನ್ನೇ ಮರೆತೆವೇ? ದೇಶದ ಮುಂಚೂಣಿಯಲ್ಲಿರುವವರು, ಧರ್ಮಾಧಿಕಾರಿಗಳು, ಅಧಿಕಾರದ ಮದದಲ್ಲಿ ಅರ್ಥಹೀನ ನುಡಿಮುತ್ತುಗಳನ್ನು ಉದುರಿಸುತ್ತಿರುವಾಗಲೂ, ತನ್ನ ಅಸಹಾಯಕತೆಯೇ ಇಡೀ ದೇಶದ ಅಸಹಾಯಕತೆ ಎಂದು ಆ ಯುವಕ ಸಾರುತ್ತಿರುವಾಗಲೂ, ಚಾನಲ್ಗಳ ಮೇಲೆ ಚಾನಲ್ಗಳು ಸರದಿ ಪ್ರಕಾರ ಪ್ರಚೋದಕ ವರದಿ ಒಪ್ಪಿಸುವಾಗಲೂ ನಿಸ್ಸಹಾಯಕರಾಗಿ ನೋಡುತ್ತಾ ಕುಳಿತ ನಾವು ಏನೂ ಮಾಡಲಾಗದ್ದಕ್ಕೂ ಮತ್ತೆ ಕಾರಣ – ಅದೇ ರಕ್ತ ಹೊತ್ತಿರುವ ನಾವೂ ಈ ಮಣ್ಣಿನವರೆಂಬುವುದೇ…..? ಅಥವಾ ನಮ್ಮದು ಭರತಖಂಡವಲ್ಲವೇ…? ಇಲ್ಲೂ ಕೂಡ ಎಲ್ಲಾ ಪುರಾಣಗಳ ಅಂತ್ಯದಂತೆ ಕ್ಷುದ್ರ ಜಂತುಗಳ ಸಂಹಾರಕ್ಕಾಗಿ ಮತ್ತೊಂದು ಪವಾಡಸದೃಶವಾದ್ದು ಹುಟ್ಟಿಬರಬಹುದೆಂಬ ದೂರದ ನಿರೀಕ್ಷೆಯೇ……?






0 Comments