ಹೇಮಲತಾ
ನಾಳೆ ಸಿ-ಸೆಕ್ಷನಲ್ಲಿ ಡೆಲಿವರಿ. ಅವಳು ಹೇಳುತ್ತಿದ್ದಾಳೆ ಅತ್ತೆ ಮನೆ ಕಡೆಯವರು ಮಗು ನೋಡಲು ಬರುವುದು ಅನುಮಾನ ಇದೆ, ಮನೆ ತುಂಬಾ ಡ್ರಾಮಾ.
ಕಡೆ ಪಕ್ಷ ಮಗುವಿನ ದೆಸೆಯಿಂದಲಾದರು ಅವಳಿಗೆ ‘ಅವನು’ ಸಂಪೂರ್ಣ ಸಿಗಲಿ. ನಾನು ಹಾರೈಸುತ್ತೇನೆ.
ತುಂಬಿದ ದಿನಗಳಲ್ಲೇ ಎಷ್ಟು ಬಾರಿ ಡೈವೋರ್ಸ್ ಮಾತನಾಡಿದ್ದಳು, ಒಂಟಿ ಪೇರೆಂಟಿಂಗ್ ಬಗ್ಗೆ ಒಂದಷ್ಟು ಧೈರ್ಯ ತೋರಿದ್ದಳು. .. ಮಗು ಹೆತ್ತ ಪರಿತ್ಯಕ್ತೆಯ ಕಷ್ಟವನ್ನ ನಾ ಇಲ್ಲಿನ ವಾತಾವರಣದ ಹಿನ್ನಲೆಯಲ್ಲಿ ಊಹಿಸಬಲ್ಲೆ… ನಾ ಕಳವಳಗೊಂಡಿದ್ದೆ. ಯಾರಿಗೂ ಬೇಡವಾಗಿ, ಯಾರಿಗೂ ಸೇರದವರಾಗಿ ಬದುಕೋದು ಕಷ್ಟ. ಮಗು ಶಕ್ತಿಹೀನ ದಾಂಪತ್ಯದ ಆಶಾಕಿರಣವಾಗುತ್ತದೋ, ಅಥವಾ ಅಸ್ಥಿರ ಕೊಂಡಿಯಾಗುತ್ತದೋ ಪ್ರಶ್ನೆ ಎದ್ದಾಗಲೆಲ್ಲ, ಹಲವರು ಹೇಳೋದು ಒಂದು ಮಗುವಾಗಿ ಬಿಡಲಿ ಅವನೆಂದು ಮತ್ತೆ ಬಿಟ್ಟು ಕೊಡಲಾರ. ಅದೊಂದು ಭರವಸೆ ಕೂಡ.
“ಯಾವ ಮಗು ಬೇಕು ನಿನಗೆ ?”
“ಹೆಣ್ಣು ಮಗುವೆ ಬೇಕು”
“ಗಂಡು ಮಗುವಾಗಲಿ ಕಣೇ ನಿನಗೆ, ಹೆಣ್ಣಾಗಿ ನಾವು ಅನುಭವಿಸುತ್ತಿರೋದು ಸಾಕಷ್ಟಿದೆ ಅಲ್ವಾ”
ಮತ್ತೊಬ್ಬಳು ಗೆಳತಿಗೆ ಮದುವೆ ಗೊತ್ತಾಗಿದೆ. ನಿಶ್ಚಿತಾರ್ಥದಿಂದ ಮದುವೆಯವರೆಗಿನ ನಾಲ್ಕು ತಿಂಗಳಲ್ಲಿ ಅವನು ಈಚೆ ಅಂತ ಕರೆದುಕೊಂಡು ಹೋಗಿದ್ದು ಎರಡೇ ಸಲ, ಅದು ಒಂದಷ್ಟು ಜಗಳ ರಂಪಾಟಗಳ ತರುವಾಯ.
ಕಥೆ ಕೇಳು ನಗುತ್ತ ಹೇಳತೊಡಗಿದಳು, ಅವರಿಗೆ ಮದುವೆ ಇಷ್ಟವಿರಲಿಲ್ಲವಂತೆ, ಮರಾಠಿ ಹುಡುಗಿಯೊಬ್ಬಳು ಕೈ ಬಿಟ್ಟು ಹೋದನಂತರ ಮೂರು ವರ್ಷದಿಂದ ಅದರ ನೋವಲ್ಲೆ ಇದ್ದರಂತೆ, ಮನೆಯವರ ಬಲವಂತಕ್ಕೆ ಈ ಮದುವೆಗೆ ಒಪ್ಪಿರೋದು…ಇಷ್ಟವಿಲ್ಲದ್ದಿದ್ದರೆ ಮುರಿದುಕೊಂಡು ಬಿಡಿ, ಯಾರ ಬದುಕು ನರಕವಾಗುವುದು ಬೇಡ ಅಂದಿದ್ದಕ್ಕೆ ಹಾಗೇನಿಲ್ಲ ನನಗೆ ಸ್ವಲ್ಪ ಸಮಯ ಕೊಡು, ಮದುವೆ ಆದ ಮೇಲೆ ಸರಿ ಹೋಗುತ್ತೇನೆ ಅಂದರು.
ಅವಳ ನಗುವಿನಲ್ಲಿದ್ದ ವಿಷಾದ ಕಾಡುತ್ತಲೇ ಇದೆ.
ಐದು ವರ್ಷದ ಹುಡುಕಾಟದಲ್ಲಿ ಎಲ್ಲ ಕೂಡಿ ಬಂದು ಕುದುರಿರುವ ಸಂಬಂಧ… ಮುಂದಕ್ಕಾದರೂ ಸರಿ ಹೋಗುತ್ತಾ ನೋಡಬೇಕು ಮಾತಾಡಿಕೊಂಡೆವು…
ಏನಾದರು ಮಾಡಿಕೊಳ್ಳಲಿ, ನನ್ನ ಪಾಡಿಗೆ ನನ್ನ ಬಿಟ್ಟು, ತಂಟೆಗೆ ಬರದಂತೆ ಇದ್ದು ಬಿಟ್ಟರೆ ಸಾಕು ಅನ್ನುವಲ್ಲಿಗೆ ಸಂಬಂಧಗಳ expectation ಬಂದು ನಿಂತಿದೆ .. ಬಹುತೇಕ ಸಂಬಂಧಗಳ ಗಟ್ಟಿತನ ಕಡಿಮೆ. ನನ್ನ ಕೆಲಸ, ನನ್ನ ಕನಸು, ನನ್ನ ಬದುಕು ನನ್ನ ಪಾಲಿಗೆ ಎಂದಿನಂತೆ ಉಳಿದರೆ ಹೇಗೋ ಬದುಕಿಬಿಡುತ್ತೇನೆ. ಕೊನೆಗೆ ನಮಗೆ ನಾವೇ! ಅನ್ನುವಲ್ಲಿಗೆ ಈಗೊಂದಿಷ್ಟು ಜನರು ಹೆಚ್ಚು ಪ್ರಾಕ್ಟಿಕಲ್ ಆಗಿರೋ ಹಾಗೆಯೂ ಕಾಣುತ್ತಿದೆ.
ಅವಳು ಇನ್ನೊಬ್ಬಳು ಅವನನ್ನು ಪೀಡಿಸಿ ಕೇಳುತ್ತಿದ್ದಳು, ಚೂರು ಅವಕಾಶ ಸಿಕ್ಕರೆ ಸಾಕು ತಗುಲಿಕೊಂಡು, ಗಂಟೆಗಟ್ಟಲೆ ಕೊರೆಯಲು ತುದಿಗಾಲಲ್ಲಿ ನಿಂತು ಕಾಯುವ ಅಸಂಖ್ಯ ಹುಡುಗರ ಮಧ್ಯೆ ನೀನು ಯಾತರದವ?
ಭೇಟಿಯ ಮಾತಿರಲಿ ನನ್ನ ಮಿಸ್ ಕಾಲ್ ನೋಡಿಯಾದರೂ ಒಂದು ರಿಪ್ಲೈ ಕೊಡಬಹುದು ಅಲ್ವಾ …
ಮಾತಾಡಬೇಕು, ಹಂಚಿಕೊಳ್ಳಬೇಕು, ನೋಡಬೇಕು ಏನು ಅನಿಸೋದೇ ಇಲ್ಲವ ನಿನಗೆ… ನಿನ್ನಷ್ಟಕ್ಕೆ ನೀನು!
“ನಾನಿರೋದೆ ಹೀಗೆ” ಬೇಕಾದರೆ ಇರು ಇಲ್ಲ ಹೋಗು ಅನ್ನೋ ಧಾಟಿಯಲ್ಲಿತ್ತು ಅವನ ಉತ್ತರ…
ಅವನು ಪ್ರೀತಿಸದ್ದಿದ್ದರೆ ಹೋಗಲಿ, ನೀನು ಪ್ರೀತಿಸುತ್ತೀಯ ಅಲ್ಲವ? ಕಡೆವರೆಗೂ ಪ್ರಯತ್ನಿಸುತ್ತಲೇ ಇರು, ಎಂದಾದರು ಒಮ್ಮೆ ಒಲಿಯಲೂಬಹುದು…
ಆಹಾ ಎಂತ ತಪಸ್ಸು !
ಪ್ರತಿ ಸಿನಿಮ, ಧಾರವಾಹಿಗಳಲ್ಲೂ ಇದನ್ನೇ ಕಲಿಸೋದು, ಒಲ್ಲದ ಗಂಡನನ್ನು ಕೃತಾರ್ಥ ಸೇವೆ, ತ್ಯಾಗಗಳಿಂದ ಒಲಿಸಿಕೊಳ್ಳಬೇಕಾದ ಮನೆಮಗಳ ಗುಣಗಳು…
ಅರೆ ಏನಾಗಿದೆ ಇವರಿಗೆಲ್ಲ…
ಟೈಟಾನಿಕ್ ನಂತ ಸಿನಿಮ ನೋಡಿದಾಗ, ಒಂದು ಸೊಗಸಾದ ಪ್ರೇಮ ಕಾವ್ಯ ಕೇಳಿದಾಗ, ವೃದ್ದ ದಂಪತಿಗಳ ಅನ್ಯೋನ್ಯತೆ ನೋಡಿದಾಗ ಸಾಮಾನ್ಯರ ಪ್ರೇಮಾಕಾಂಕ್ಷೆಗಳು ಅರಳಿ ಒಮ್ಮೆಯಾದರು ಇಂತ ರಮ್ಯ ಪ್ರೇಮದಲ್ಲಿ ಮುಳುಗಿ ಜೀವನ ಪಾವನಗೊಳಿಸಿಕೊಳ್ಳಬೇಕು, ಅನ್ನೋ ತುಡಿತ ಇವರಲ್ಲಿ ಎಂದು ಮೂಡಿಯೇ ಇರೋದಿಲ್ವ?
ಎಲ್ಲರು ಹೀಗೆ ಅಂತ ಅಲ್ಲ, ತಲೆಮೇಲಿನ ಕರಗ ಮಾಡಿಕೊಂಡು ತಿರುಗುವ ಹುಡುಗರು ಒಂದು ಕಡೆಯಾದರೆ, ಕಾಲ ಬುಡದ ಪ್ರೇಮ ಚಿಲುಮೆಯಲ್ಲಿ ತೊಯ್ಯದೆ ನಾಜೂಕು ಜಿಗಿಯುವ ಕೆಲವರು ಹೀಗೆ. ಅಥವಾ ಪ್ರೇಮದ ಅಪೇಕ್ಷೆ ಎಲ್ಲರಲ್ಲೂ ಇದ್ದು ಪ್ರೀತಿಸುವ ಸಾಮರ್ಥ್ಯದಲ್ಲೇ ಕೊರತೆಗಳು ಇದೆಯಾ?
ತಾಳಿಯ ಗಂಟು ಬಿದ್ದಮೇಲೆ ಮುಗಿದಂತೆ ಅನ್ನುವ ನಿರ್ಧಾಕ್ಷಿಣ್ಯವೇ ಪ್ರೇಮದ ಕರೆಗೆ ಕಿವುಡಾಗಿಸಿ ಬಿಡುತ್ತದ. ಜೀವನದ ಜಂಜಾಟದಲ್ಲಿ, ಪ್ರೀತಿ-ಪ್ರೇಮ ಆಡಿ ಮುಗಿದ ವಸ್ತುವಿನಂತೆ ಅನಾಕರ್ಷಕವಾಗಿ ಕಂಡು ಅಸಡ್ಡೆಗೆ ನೂಕಲ್ಪಡ್ದುತ್ತದ. ದುಡ್ಡು, ವೇಗ, ಅಮೋದಗಳು ಭಾವನೆಗಳ ಕಲ್ಮಶಗೊಳಿಸಿವೆಯ. ಆದರು ಅವನಿಗೆ ಇರುವ ಲಿಬರ್ಟಿ ಇವಳಿಗೆ ಇಲ್ಲ? ಅವರಿವರು ವಹಿಸಿಕೊಂಡು ಕಡ ಹೇಳುತ್ತಾರೆ. ಒಂಟಿ ಬೆಳೆದ ಹುಡುಗ ಕಣೆ ಅವನು, ಹೆಣ್ಣುಮಕ್ಕಳ ಜೊತೆ ಹೇಗೆ ಪ್ರೀತಿಯಿಂದಿರಬೇಕು ಕಲಿತವನಲ್ಲ ಕೊಂಚ ತಾಳು!
ಒಂದು ಮಗು ಅಂತ ಆಗಿಬಿಡಲಿ ಎಲ್ಲ ಸರಿ ಹೋಗುತ್ತದ ತಡಿ .
ಒಂದತ್ತು ವರ್ಷ ಭೂಮಿಯಂತೆ ಸಹಿಸಿಕೋ, ಅವನನ್ನು ಸುದಾರಿಸಿ, ಸಲಹು. ಮಿಕ್ಕ ಹತ್ತು ವರ್ಷ ನಿನ್ನನ್ನು ಅವನು ಸಾಕುತ್ತಾನೆ… ವಯಸ್ಸಾಗುತ್ತ ಅವಲಂಬಿಸುತ್ತಾನೆ, ಬೆಲೆ ಅರಿತುಕೊಳ್ಳುತ್ತಾನೆ ಆದರೆ ಸ್ವಲ್ಪ ತಾಳ್ಮೆಯಿಂದ ಕಾಯಿ.
ಅದೇ ಅವಳಲ್ಲಿ frigidity ಸಮಸ್ಯೆ ಚೂರೇ ಸುಳಿದರು ಸಾಕು ಹೌಹಾರಿ, ರಂಪಾಡಿಸಿ, ಯಾವುದನ್ನೂ ಇನ್ಯಾವುದಕ್ಕೋ ತಳುಕುಹಾಕಿ ಅನುಮಾನಿಸಿ ಅವಮಾನಿಸುವ ಅವನು ಮೃಗ. ಸಿಕ್ಕ ಪ್ರತಿ ಸನ್ನಿವೇಶದಲ್ಲೂ ಪ್ರೇಮ ಸಾಬೀತು ಪಡಿಸಬೇಕು. ಎಚ್ಚರ ವಹಿಸಬೇಕು!
ರಾಮನ ಆಗಮನಕ್ಕೆ ಕಾಯುವ ಶಬರಿಯ ತಾಳ್ಮೆ, ಇವನಲ್ಲಿಯ ಪ್ರೇಮಾಗಮನಕ್ಕೆ ಕಾಯುವ ಅಭಿಸಾರಿಕೆಯಾಗಿ ತಣ್ಣಗೆ ಇರಬೇಕ. ಅಷ್ಟೆಲ್ಲ ಸಮಯವಿದೆಯ? ಯಾರನ್ನು ಯಾರು ಸಾಕಬೇಕಾದ, ಅವಲಂಬಿಸಬೇಕಾದ ಅಗತ್ಯವಿಲ್ಲದಾಗಲೂ ಕೇವಲ ಪ್ರೇಮದ ಕಾಯುವಿಕೆಯನ್ನ ಸಹಿಸಬೇಕ? ದೀರ್ಘ ವರ್ಷಗಳ ತಪಸ್ಸಿಗೆ ಜಾಗ ಮಾಡಿಕೊಡುವಷ್ಟು ಇಂದು ಎಲ್ಲರಿಗು ಆಯಸಿದೆಯ?
ಬಯಕೆ ಹಾಗೆಯೇ ಇತ್ತು ..
ಅಂತವನೊಬ್ಬನ ಪ್ರತಿ ಕಣವನ್ನು ಮೋಹಿಸಬೇಕು, ಹಗಲು ರಾತ್ರಿ ಧ್ಯಾನದಲ್ಲಿ ಮುಳುಗೇಳಬೇಕು.
ಅವನು ಹೇಗಿರುತ್ತಾನೆಂದರೆ ಮಗುವ ಕಂಡರೆ ಮೂಡುವ ಮಮತೆ ಮೂಡುತ್ತದೆ, ಅಪ್ಪನನ್ನು ನೋಡಿದಂತ ಕಕ್ಕುಲಾತಿ ಜಿನುಗುತ್ತದೆ, ಮೇಸ್ಟರ ಮೇಲಿನ ಗೌರವದ ಬೆರಗು, ಸ್ನೇಹಿತನ ಬಳಿಯ ಸಲುಗೆ ತನ್ನತಾನೆ ಚಿಮ್ಮುತ್ತದೆ, ಇಡಿ ಆಯುಷ್ಯವನ್ನ ಪ್ರೀತಿಗೆ ಮುಡುಪಿಡುತ್ತೇನೆ ಎನ್ನುವ ಸೋಫಿಯ ಹುಚ್ಚು ಅಮಲೇರುತ್ತದೆ.
ಹಾಗೆಲ್ಲ ಕನಸುವಂತೆ ಮಾಡುವವ ಇದ್ದಾನ?
ಇದ್ದರೇನಂತೆ, ಅವನಿಗೆ ಇರಬೇಕಲ್ಲ ಅದೇ ಹಪಿಹಪಿ.
ಪ್ರೇಮವೆನ್ನೋದು ಅಭಾವಕ್ಕೆ ನೂಕಿ ಜಗತ್ತಿನಾದ್ಯಂತ ಕಾಡುತ್ತಿರುವ ಅನಾವೃಷ್ಟಿ .
ಅತಿ ಹೆಚ್ಚು ಅಲೆಯೆದ್ದು, ಕುಣಿದು ತಿರಸ್ಕೃತಗೊಂಡ ಅತಿವೃಷ್ಟಿ.





NANNA BADUKALLIDDANE.. HEEGE KANASUVANTE MADUVA HUDUGA
Hemalatha,
Tumba chennagi bariteera.
I have not seen any posts offlate from you.
You got married or something?