ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಹಸಿವು ತತ್ತಿಯೊಡೆದು ಸಾವಿರಾರು ಮಿಡಿನಾಗರಗಳು’ – ಗಿರೀಶ್ ಹಂದಲಗೆರೆ

ಕೊಲೆಯ ಸುದ್ದಿ

ಗಿರೀಶ್ ಹಂದಲಗೆರೆ


ಅದು ಹೊನ್ನಾರು ಮುಂಗಾರು
ಆರಂಭದ ಕಾಲ
ಮಹಾ ಮೌನ ಮುರಿದ ಬೀಜ
ಬಿರಿಯುವ ಸಮಯ
ಯಾರೋ ಇರಿದ ಸದ್ದು !
 
ಹಾಡು ಹಗಲೇ
ನಮ್ಮ ಹೊಲಗಳ ಕಗ್ಗೊಲೆ!
ನಡೆದುಹೋಯಿತು
ಯಾರೋ ಬಂದರು
ಮಹಜರು ಮಾಡಿ ಮುಖವನ್ನೂ
ಬಿಡದೆ ಸೀಳಿ
ಮುಳ್ಳು ತಂತಿಯ ಸುತ್ತಿ
ಪರಿಹಾರ ಹಣ ಕೈಗಿತ್ತರು
ಮಣ್ಣಿಗಿಳಿದ ನಮ್ಮಬೇರಕತ್ತರಿಸಿ
ಬೇಲಿಯೇ ಎದ್ದುಹೊಲಮೇಯುವಾಗ
 
ಹತ್ಯೆಯ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ
ಹೊಲದ ನೆರೆ ಹೊರೆಯ
ಹಳ್ಳ ತೊರೆ ಸೊರಗಿ ಬತ್ತಿಹೋದವು
ಹರಿವಿಲ್ಲದ ಕೆರೆ ಕಟ್ಟೆ
ಆತ್ಮಹತ್ಯೆ ಮಾಡಿಕೊಂಡವು
ಮೇವಿಲ್ಲದಗೋವುಗಳ ಮುಕ್ಕೋಟಿ ದೇವರುಉಳಿಸಲಿಲ್ಲ
ಅನಾಥ ಸ್ವರ ಹುಡುಕಿ ಹೊರಟಿವೆ
ಕೋಗಿಲೆ ಗುಬ್ಬಿ ಗೊರವಂಕ ಸೋಗೆ
ಊರುಕೇರಿಯ ತುಂಬಾ
ಸೂತಕದ ಛಾಯೆ
 
ಷಡ್ಯಂತ್ರಕ್ಕೆ ಬಲಿಯಾದ
ಹೊಲದ ಎದೆಯಮೇಲೆ ಈಗ
ಮೇಕ್ ಇನ್ ಇಂಡಿ ಯಾ
ಸಮಾಧಿ ಕಟ್ಟಲಾಗಿದೆ
ಹೊಗೆ ಉಗುಳುತ್ತಿರುವ ಚಿಮಿಣಿ
ಕಣ್ಣಿಂದ ಕನಸು ಸುಟ್ಟ ಕಮಟು ವಾಸನೆ
ಹೊತ್ತು ತಿರುಗುತ್ತಿದೆ ಅಮಾಯಕ ಗಾಳಿ
 
ಸೀಳು ನಾಲಗೆಯ ಚಾಚುತ್ತಿದೆ
ಹಸಿದ ಹೆದ್ದಾರಿಯ ಹೆಬ್ಬಾವು
 
ರಾಗಿ ಜೋಳ ತೊಗರಿ..
ಅನ್ನದ ಕಣಜಗಳ ಕೊಂದ
ಕೊಲೆಯ ರಹಸ್ಯ ಮುಚ್ಚಿಡಬಹುದು
ಕನಸಿನಲ್ಲೂ ನಡೆದಾಡುವ
ಹಸಿವ ಮುಚ್ಚಿಡಬಹುದೇ
 
ಹಸಿವು ತತ್ತಿಯೊಡೆದು
ಸಾವಿರಾರು ಮಿಡಿನಾಗರಗಳು
ಮೆರವಣಿಗೆ ಹೊರಡಲಿವೆ …
 

‍ಲೇಖಕರು G

20 June, 2015

8 Comments

  1. smitha

    Olledide.

  2. kalavathi.S

    ಕೊನೆಯ ಸಾಲುಗಳಲ್ಲಿದೆ ಕಟು ವಾಸ್ತವ, ಅನುಭವಿಸುವವರಿಗೇ ಗೊತ್ತು ಅದರ ನೋವ. ತಿಳಿ ಹೇಳುವವರಾರು ಈ ಪರಿಸ್ಥಿತಿಯ ಅರಿವಿದ್ದೂ ಷಡ್ಯಂತ್ರ ನೆಡೆಸುವವಗೆ? ಎಂತ ಸುಂದರ ಕವನ!

  3. Hema Sadanand Amin /mumbai

    havisivu samvedane thattidhe..

  4. Uday Itagi

    ಹಸಿವು ತತ್ತಿಯೊಡೆದು
    ಸಾವಿರಾರು ಮಿಡಿನಾಗರಗಳು
    ಮೆರವಣಿಗೆ ಹೊರಡಲಿವೆ …
    Beautiful lines!

  5. girijashastry

    wow beautiful poem.

  6. Vinod Kumar VK

    ಎಂತ ಚೆಂದದ ಪದ್ಯ.. ಎಷ್ಟು ಮಾರ್ಮಿಕವಾಗಿದೆ.. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಮಾರಣ ಹೋಮ ಯಾರಿಗೂ ಅರ್ಥವಾಗುತ್ತಿಲ್ಲವೆಂದೇನಲ್ಲ.. ಆದರೆ ಎಲ್ಲರೂ ವ್ಯಕ್ತಿ ಪೂಜೆಯಲ್ಲಿ ಬ್ಯುಸಿಯಾಗಿದ್ದಾರೆ.. ನಮೋ ನಮಃ!!

  7. mmshaik

    uttama vastavika kavite..

  8. Beeru Devaramani

    Ati sundaravada saalugalalli melaiside vaibhaveekaranada nruthya,adhbhutavagi moodi bandide Pada balakeya Saahithya..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading