-ಐಕೆ ಬೊಳುವಾರು
ಇವತ್ತು ಜನವರಿ 2 .ಸಫ್ದರ್ ಹಶ್ಮಿ ಹುತಾತ್ಮರಾದ ದಿನ. 37 ವರ್ಷಗಳ ಹಿಂದೆ ನಾಟಕ ಪ್ರದರ್ಶನ ಮಾಡುತ್ತಿದ್ದಾಗಲೇ ಗೂಂಡಾಗಳಿಂದ ಹಲ್ಲೆಗೆ ಒಳಗಾಗಿ ಹತ್ಯೆಯಾದ ಸಫ್ದರ್ ಹಶ್ಮಿ ಕೊಲೆಯನ್ನು ಪ್ರತಿಭಟಿಸಿ, ನಾವು ಮೂಡುಬಿದಿರೆಯಲ್ಲಿ ಚದುರಂಗ ಕಲಾವಿದರು ಹಶ್ಮೀ ಕುರಿತಾಗಿ ಬೀದಿನಾಟಕ ಪ್ರದರ್ಶಿಸಿದ್ದೆವು.
ನಾಟಕದಲ್ಲಿ ಹಿರಿಯ ಕಥೆಗಾರ ಫಕೀರ್ ಮೊಹಮ್ಮದ್ ಕಟಪಾಡಿ, ಪತ್ರಕರ್ತ ಧನಂಜಯ ಮೂಡುಬಿದಿರೆ, ವಿಶ್ವಂಭರ, ಪ್ರಕಾಶ, ಸಂತೋಷ್ ಕುಮಾರ್, ಕೃಷ್ಣರಾಜ ಮೊದಲಾದವರು ಭಾಗವಹಿಸಿದ್ದೆವು. ಅದೇ ಸಂದರ್ಭದಲ್ಲಿ ನಾನು ಬರೆದ ಬರಹ ಒಂದನ್ನು ಮುಂಗಾರು ಪತ್ರಿಕೆಯಲ್ಲಿ (08-01-1989) ಪ್ರಕಟಿಸಿದ್ದರು. ಅದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ
2026 ಜನವರಿ 2, ಶಹಾದತ್ ದಿವಸ್.
1989 ಬಾಗಿಲು ತೆರೆದ ಮೊದಲ ವಾರದಲ್ಲಿ ಮಹಾ ದುರಂತವೊಂದು ನಮ್ಮೆದುರು ಸಂಭವಿಸಿ ಹೋಯಿತು. ಅದು ಸಫ್ದರ್ ಹಶ್ಮಿಯ ಕಗ್ಗೊಲೆ.
ಬೀದಿ ನಾಟಕ ಆಡುತ್ತಿದ್ದ ಹಶ್ಮಿ ಗೆಳೆಯರ ಗುಂಪನ್ನು ದಿಲ್ಲಿಯ ಪುಡಾರಿಯೊಬ್ಬನ ಬಾಡಿಗೆ ಗೂಂಡಾಪಡೆ ಬೆನ್ನಟ್ಟಿ ಓಡಿಸಿ ಮಚ್ಚಿನಿಂದ ಕಡಿದು ಕೊಂದ ಘಟನೆ ಇಡೀ ದೇಶ ಎತ್ತ ಸಾಗುತ್ತದೆ ಎಂಬುದರ ದಿಕ್ಸೂಚಿ ಆಗಿದೆ. ಶೋಷಣೆಯ ವಿರುದ್ಧ ಧರ್ಮಯುದ್ಧದಲ್ಲಿ ಪ್ರಾಣ ಬಲಿ ಕೊಟ್ಟ ಹಶ್ಮಿಯ ಬಗ್ಗೆ ಇದೊಂದು ಸ್ಮರಣೆ.
ಮತ್ತೊಮ್ಮೆ ಗುಂಡು ಹಾರಿಸಿ.
ಜನಂ ಎಂದರೆ ಜನ ನಾಟ್ಯ ಮಂಚ್, ಇವರ ಎಲ್ಲ ನಾಟಕಗಳು ಜನರ ನೋವಿನ ಕುರಿತಾಗಿದ್ದವು. ಆ ನಾಟಕಗಳ ಎಲ್ಲ ಪಾತ್ರಗಳು ಮುಂದೆ ಬರಲಿರುವ ದುರಂತದ ಕುರಿತಾದ ಮುನ್ಸೂಚನೆಗಳನ್ನು ನೀಡುತ್ತಿದ್ದವು.

ಜನಂ ಪ್ರದರ್ಶಿಸುತ್ತಿದ್ದ ಯಶಸ್ವಿ ನಾಟಕ ಹತ್ಯಾರೇ… ( ಕನ್ನಡದಲ್ಲಿ ಇದೇ ನಾಟಕ ಆಲಿಘರ್ ಹೆಸರಿನಲ್ಲಿ ಹಲವು ಪ್ರದರ್ಶನಗಳನ್ನು ಕಂಡಿದೆ.)
ನಾಟಕದ ಬಾಡಿಗೆ ಗೂಂಡಾ ಪಾತ್ರಧಾರಿ ಹೇಳುತ್ತಾನೆ. ಯಾರು ನನ್ನನ್ನು ಕರೆದದ್ದು? ಇನ್ನೊಮ್ಮೆ ಕರೆಯಿರಿ! ಯಾರ ಮನೆ ಹಂಚುಪುಡಿ ಮಾಡಬೇಕು? ಯಾರ ಅಂಗಡಿ ಬೀಗ ಒಡೆಯಬೇಕು? ಯಾರ ಮನೆ ಹುಡುಗಿಯನ್ನು ಎತ್ತಿಕೊಂಡು ಬರಬೇಕು? ಹಿಂದೂಗಳನ್ನು ಮುಸ್ಲಿಮರಿಂದ ಕೊಲ್ಲಿಸಬೇಕಾ? ಅಥವಾ ಮುಸ್ಲಿಮರನ್ನು ಹಿಂದೂಗಳಿಂದ ಸಾಯಿಸಬೇಕಾ? ಯಾವ ಕೆಲಸ ಬೇಕಾದರೂ ಚಿಟಿಕೆ ಹೊಡೆಯೋ ಹೊತ್ತಿನಲ್ಲಿ ಮಾಡಿ ಮುಗಿಸುತ್ತೇನೆ. ಆದರೆ ಪೂರ್ತಿ ಚಾರ್ಜು ಕೊಡಬೇಕಾಗುತ್ತದೆ ಪೂರ್ತಿ ಚಾರ್ಜು….
ನಾಟಕದ ಪಾತ್ರಧಾರಿಯ ಮಾತುಗಳು ನಿಜವಾಗಿಯೂ ನಿಜವಾದವು. ನಾಟಕ ಪ್ರದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ಯೇ ಬಾಡಿಗೆ ಗೂಂಡಾಗಳಿಂದ ಹಲ್ಲೆಗೀಡಾಗಿ ಆಸ್ಪತ್ರೆಗೆ ಸೇರಿಸಲ್ಪಟ್ಟ ರಾಷ್ಟ್ರದ ಖ್ಯಾತ ರಂಗನಟ, ಬೀದಿ ನಾಟಕ ಚಳುವಳಿಯ ನೇತಾರ, ಸಪ್ಧರ್ ಹಶ್ಮಿ ಮೃತ್ಯುವಿಗೀಡಾದರು.
ಪ್ರಜ್ಞಾವಂತ ನಾಗರಿಕರೆಲ್ಲರೂ ತಲೆತಗ್ಗಿಸ ಬೇಕಾದಂತಹ ಕೃತ್ಯವು ಉದ್ದೇಶಪೂರ್ವಕವಾಗಿಯೇ ನಡೆದುಹೋಯಿತು.
ಜನಪರ ಬೀದಿ ನಾಟಕ ಚಳುವಳಿಯ ಮುಖ್ಯ ಕಾರ್ಯಕರ್ತ, ಮಾನವ ಹಕ್ಕುಗಳ ರಕ್ಷಣೆಗಾಗಿ ಅವುಗಳನ್ನು ಜನರ ಬಳಿಗೆ ಕೊಂಡೊಯ್ದು ತಿಳಿಯಪಡಿಸುತ್ತಿದ್ದ ನಿರಂತರ ಹೋರಾಟಗಾರ -ಸಫ್ದರ್ ಹಶ್ಮಿ -ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಶಾಲಾ ಕಾಲೇಜು ದಿನಗಳಲ್ಲಿಯೇ ಸಕ್ರಿಯ ರಂಗ ಚಳುವಳಿಯಲ್ಲಿ ಪಾಲ್ಗೊಳ್ಳುತ್ತಿದ್ದ ‘ಸಫ್ದರ್’ ತನ್ನ ಗೆಳೆಯರೊಂದಿಗೆ ‘ಜನ ನಾಟ್ಯ ಮಂಚ್’ ತಂಡವನ್ನು ಹುಟ್ಟು ಹಾಕಿ 14 ವರ್ಷಗಳಿಂದಲೂ ಬೀದಿ ನಾಟಕಗಳನ್ನು ಪ್ರದರ್ಶಿಸುತ್ತಾ ರಾಷ್ಟ್ರದ ಎಲ್ಲೆಡೆಯ ರಂಗಕಲಾವಿದರ ಅಭಿಮಾನಗಳಿಗೆ ಪಾತ್ರರಾದವರು.
1983 ರಲ್ಲಿ ಭೋಪಾಲ ರಂಗಮಂಡಲದಲ್ಲಿ ನಡೆದ ಬೀದಿ ನಾಟಕ ಕಾರ್ಯಾಗಾರದ ಶಿಬಿರಾರ್ಥಿಯಾಗಿ ಬಂದಿದ್ದ ‘ಸಫ್ದರ್ ‘ನಮ್ಮೊಂದಿಗೆ ಹೇಳಿದ್ದರು.
ಜನರ ನೋವು ನಲಿವುಗಳಿಗೆ ಸ್ವಂದಿಸಬೇಕಾಗಿರುವ ಬೀದಿ ನಾಟಕದ ಸ್ಕ್ರಿಪ್ಟ್ ರಚನೆ ಒಬ್ಬ ಲೇಖಕನದ್ದಾಗ ಬೇಕಾಗಿಲ್ಲ. ಹಾಗಾಗಿ ನಾವು ಜನಂ ಸದಸ್ಯರುಗಳು ಒಟ್ಟು ಸೇರಿ ಒಂದು ವಿಷಯದ ಬಗ್ಗೆ ಚರ್ಚಿಸುತ್ತೇವೆ. ಬಳಿಕ ಅದಕ್ಕೆ ಕಲಾತ್ಮಕ ರೂಪ ಬರುವಂತೆ ಸ್ಕ್ರಿಪ್ಟ್ ರಚಿಸುತ್ತೇವೆ. ಹಲವು ಸಮಾನ ಮನಸ್ಕರ ಯೋಚನೆಗಳು ಇಲ್ಲಿರುವುದರಿಂದ ನಮ್ಮ ಹೆಚ್ಚಿನ ನಾಟಕಗಳು ಮೌಲಿಕವೂ, ಕಲಾತ್ಮಕವೂ, ಜನಪರವೂ ಆಗಿ ಉಳಿದುಕೊಂಡಿದೆ.
ಹೌದು….. ವಿಷಯವನ್ನು ಹೇಳಿಬಿಟ್ಟರೆ ಸಾಕು ಎನ್ನುವ ನಿರ್ಲಕ್ಷತನ ಜನಮ್ ನ ನಾಟಕಗಳಲ್ಲಿ ಎಂದೂ ಕಾಣಿಸಿಕೊಂಡದ್ದಿಲ್ಲ. ನಾಟಕದ ಕಲಾತ್ಮಕ ಅಂಶಗಳನ್ನು ಇವರೆಂದೂ ನಿರ್ಲಕ್ಷಿಸಿದ್ದಿಲ್ಲ. ಜನಂ ನ ನಾಟಕಗಳು ಸರಳವಾಗಿ ನಿರ್ಮಲವಾಗಿರುತ್ತದೆ. ಭಾವನೆಗಳನ್ನು ಕಲಕುತ್ತವೆ. ಸಹಜವಾಗಿರುತ್ತವೆ. ಹುರುಪಿನಿಂದ ಮನರಂಜನೆಯನ್ನು ಒದಗಿಸುತ್ತದೆ. ಹೀಗಾಗಿ ಗ್ರಾಮೀಣ ಹಾಗೂ ನಗರದ ಎಲ್ಲಾ ಪ್ರೇಕ್ಷಕರಿಗೂ ಇವು ಪ್ರಿಯವಾಗುತ್ತದೆ.
ರಂಗ ಚಳುವಳಿಗೆ ಹೊಸ ಭಾಷೆಯನ್ನು ನೀಡುವಲ್ಲಿ ಜನಮ್ ನ ಪಾತ್ರ ಮಹತ್ತರವಾದದ್ದು.
1973ರ ಸೆಪ್ಟೆಂಬರ್ ನಲ್ಲಿ ದೆಹಲಿಯಲ್ಲಿ ಬಂಗಾಳಿ ಮಾತನಾಡುವ ಪ್ರದೇಶದಲ್ಲಿನ ತಾತ್ಕಾಲಿಕ ಸಭಾಂಗಣದಲ್ಲಿ ಉತ್ಪಲ್ ದತ್ತರ -ಮೃತ್ಯೂರ್ ಊಡಿತ್- ಬಂಗಾಳಿ ನಾಟಕವನ್ನು ಪ್ರದರ್ಶಿಸುವುದರ ಮೂಲಕ ನಾಟಕ ರಂಗವನ್ನು ಪ್ರವೇಶಿಸಿದ ಜನಮ್ ಮುಂದೆ ತುರ್ತುಪರಿಸ್ಥಿತಿ ವರೆಗೂ ನಾಟಕಮಂದಿರಗಳಲ್ಲಿ, ಕೈಗಾರಿಕಾ ಪ್ರದೇಶಗಳಲ್ಲಿ, ಮಧ್ಯಮ ವರ್ಗದ ಬಡಾವಣೆಗಳಲ್ಲಿ ಪ್ರದರ್ಶಿಸುತ್ತಿದ್ದಿತು. ತುರ್ತು ಪರಿಸ್ಥಿತಿಯ ಬಳಿಕ ಆರ್ಥಿಕವಾಗಿ ಅಸಮರ್ಥವಾದ ಜನನಾಟ್ಯ ಮಂಚ್ ಹೊಸ ಮಾರ್ಗವನ್ನೇ ರೂಪಿಸಿಕೊಂಡಿತು.
ಖರ್ಚಿಲ್ಲದೆ ಜನರನ್ನು ನೇರವಾಗಿ ತಲುಪಬಲ್ಲ ನಾಟಕಗಳು ಬೇಕೆಂದು ತೀರ್ಮಾನಿಸಿದ ಜನಮ್ ನ ಸದಸ್ಯರು ಒಟ್ಟಾಗಿ ರೂಪಿಸಿದ ಮೊದಲ ನಾಟಕ ಕೈಗಾರಿಕಾ ಬಾಂಧವ್ಯವನ್ನು ಕುರಿತಾದ “ಮೆಶೀನ್” ಎಂಬ ಬೀದಿ ನಾಟಕ. ಇದನ್ನು 1978 ರ ನವೆಂಬರ್ ನಲ್ಲಿ ನಡೆದ ರ್ಯಾಲಿಯಲ್ಲಿ ಪ್ರದರ್ಶಿಸಿದಾಗ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಜನ ನೋಡಿದರು.
ಅಂದಿನಿಂದ ಇಲ್ಲಿಯವರೆಗೆ ಜನಂ ಬಹಳಷ್ಟು ಹೊಸ ನಾಟಕಗಳನ್ನು ರಚಿಸಿ ರಾಜಧಾನಿ ಅಲ್ಲದೆ ರಾಷ್ಟ್ರದ ಬೇರೆ ಬೇರೆ ಸ್ಥಳಗಳಲ್ಲಿ ಪ್ರದರ್ಶಿಸಿದೆ.
ದೆಹಲಿ ಸಾರಿಗೆ ಸಂಸ್ಥೆಯ ಪ್ರಯಾಣ ದರ ಏರಿಕೆಯ ಕುರಿತಾದ ‘DTC ಕೀ ದಾಂಧಲೀ’ ಕೋಮು ಗಲಭೆಗಳ ಪರಿಣಾಮಗಳನ್ನು ನಿಷ್ಠುರವಾಗಿ ಹೇಳುವ ‘ಹತ್ಯಾರೇ’ ಮಹಿಳೆಯರ ಮೇಲಾಗುತ್ತಿರುವ ಶೋಷಣೆ ಕುರಿತಾದ ‘ಔರತ್’ ಪೊಲೀಸ್ ದೌರ್ಜನ್ಯದ ಬಗ್ಗೆ ತಿಳಿಯಪಡಿಸುವ ‘ಪೊಲೀಸ್ ಚರಿತ್ರಂ’ ನಿರುದ್ಯೋಗ ಸಮಸ್ಯೆಯ ‘ಗಾಂವ್ ಸೆ ಶಹರ್ ತಕ್’ ಚುನಾವಣಾ ಅವ್ಯವಹಾರಗಳನ್ನು ಗೇಲಿ ಮಾಡುವ ‘ಆಯಾ ಚುನಾವ್’ ಮುಂತಾದ ನಾಟಕಗಳು ಜನ ನಾಟ್ಯ ಮಂಚ್ ಗೆ ಜನಪ್ರಿಯತೆಯನ್ನು ತಂದು ಕೊಟ್ಟಿದೆ.
ಸಫ್ದರ್ ನ ಬದುಕಿನ ಸಂಗಾತಿ ಮಾಲಾಯ್ ಶ್ರೀ ಹಶ್ಮಿಹೇಳುತ್ತಾರೆ.
ಸಫ್ದರ್ ಗೆ ಗೊತ್ತಿತ್ತು.ಹಿಂಸೆಯ ಜಗತ್ತಿ ನಲ್ಲಿ ಯಾವನೇ ಒಬ್ಬ ಬದುಕಿ ನೋವು ಅನುಭವಿಸುತ್ತಿದ್ದರೂ ಅದು ಎಲ್ಲರ ಬದುಕೇ ಆಗಿರುತ್ತದೆ ಎಂದು.
ಹಾಗಾಗಿ ಆತ ತನ್ನ ಖಾಸಗಿ ಬದುಕಿನ ಅಪಾಯಗಳ ಬಗ್ಗೆ ಯಾವತ್ತೂ ತಲೆಕೆಡಿಸಿಕೊಂಡದ್ದೇ ಇಲ್ಲ. ಆತನ ಚಿಂತನೆ ಕೆಳವರ್ಗದವರ ಅನ್ಯಾಯಕ್ಕೆ ಒಳಗಾದವರ ರೈತ ಕಾರ್ಮಿಕರ ಬಗ್ಗೆ ಮಾತ್ರ ಆಗಿತ್ತು. ರಂಗಕರ್ಮಿಯೊಬ್ಬನ ಹತ್ಯೆಯಿಂದಾಗಿ ಒಟ್ಟು ರಂಗ ಚಳುವಳಿ ಅಥವಾ ಜನಪರ ಹೋರಾಟಗಳು ನಿಂತು ಹೋಗುತ್ತವೆ ಎಂದು ಯಾರೂ ತಿಳಿಯಬೇಕಾಗಿಲ್ಲ. ಒಬ್ಬ ಸಫ್ದರ್ ಬದಲಾಗಿ ಸಾವಿರ ಸಫ್ದರ್ ಗಳು ಜನಪರ ರಂಗ ಚಳುವಳಿಯಲ್ಲಿ ಶಕ್ತಿಯುತವಾಗಿ ಪಾಲ್ಗೊಳ್ಳುತ್ತಾರೆ. ಏಕೆಂದರೆ ಜನಮ್ ನ ಮೊದಲ ಬೀದಿ ನಾಟಕ “ಮಶೀನ್ “ನ ಕೊನೆಯಲ್ಲಿ ಬರುವ ಆಶಯದ ಮಾತುಗಳು ಅದೇ ಆಗಿದ್ದವು. (ಕನ್ನಡದಲ್ಲಿ -ಯಂತ್ರಗಳು- ಹೆಸರಿನಲ್ಲಿ ನಾವು ಬೀದಿ ನಾಟಕವಾಗಿ ಹಲವು ಊರುಗಳಲ್ಲಿ ಪ್ರದರ್ಶಿಸಿದ್ದೆವು.)
ಇನ್ನೊಮ್ಮೆ ಹಾರಿಸು ಗುಂಡು…..
ಗುಂಡಿನ ಬೆಂಕಿ ಮಳೆ ಸುರಿತಾನೆ ಇರಲಿ.. ಆದರೆ ಈ ಬೆಂಕಿಯಿಂದ ಪ್ರತಿಭಟನೆಯ ಬೆಂಕಿ ಎಂದೂ ನಂದಲಾರದು. ಬದಲಾಗಿ ಇನ್ನಷ್ಟು ಹೆಚ್ಚಾದೀತು. ಒಬ್ಬ ಸತ್ತರೆ ಹತ್ತು ಜನ ಬಂದಾರು. ಹತ್ತು ನೂರಾದೀತು. ನೂರು, ಸಾವಿರ, ಲಕ್ಷ ,ಕೋಟಿ, ಕೋಟಿಗಳಾಗಿ ಎದ್ದು ಬಂದಾರು,
08-01-1989 ಮುಂಗಾರು






0 Comments