ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಳ್ಳಿ ಹೈದನ ತಲೆಕೆಡಿಸಿದವರಾರು?

ಹಳ್ಳಿ ಹೈದನ ಕಥೆ

– ಹರ್ಷ ಕುಗ್ವೆ

ಮೈಸೂರು- ಮಾನಂತವಾಡಿ ಮಾರ್ಗದಲ್ಲಿ ನಾಗರಹೊಳೆ ಅಭಯಾರಣ್ಯದ ಕಾಕನಕೋಟೆ ಕಾಡಿನ ನಡುವೆ ಇರುವ ಆ ಜೇನುಕುರುಬರ ಹಾಡಿಯ ಹೆಸರು ಬಳ್ಳೇ ಹಾಡಿ. ಈ ಹಾಡಿಯ ಕೃಷ್ಣಪ್ಪ ಮತ್ತು ಲಕ್ಷ್ಮಿ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳು. ಒಬ್ಬ ಗಂಡುಮಗ. ಆತ ರಾಜೇಶ. ಇಂದು ಸುವರ್ಣ ವಾಹಿನಿಯ ಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋನಲ್ಲಿ ಗ್ರಾಂಡ್ ಫಿನಾಲೆವರೆಗೂ ಹೋಗಿ ವಿಜಯಿಯಾಗಿ ಬಂದು ನಂತರದಲ್ಲಿ ಇನ್ನೂ ಬಿಡುಗಡೆಯಾಗದ ’ಜಂಗಲ್ ಜಾಕಿ’ ಸಿನಿಮಾದಲ್ಲಿ ಐಶ್ವರ್ಯಳೊಂದಿಗೆ ನಟಿಸಿ, ಇದೀಗ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮಾನಸಿಕ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿರುವ ’ಹಳ್ಳಿ ಹೈದ’ನೇ ಈ ರಾಜೇಶ. ಕೆ.ಆರ್. ಆಸ್ಪತ್ರೆಯ ವೈದ್ಯರಾದ ಸುಧೀರ್ ಅವರು ಟಿಎಸ್‌ಐಗೆ ನೀಡಿದ ಮಾಹಿತಿಯ ಪ್ರಕಾರ ರಾಜೇಶ್‌ಗೆ ’ಅಕ್ಯೂಟ್ ಮೇನಿಯಾ’ ಅಟ್ಯಾಕ್ ಅಗಿದೆ. ಇದೊಂದು ರೋಗವೇನಲ್ಲ. ಆದರೆ ಮನಸ್ಸಿನಲ್ಲಿ ಉಂಟಾದ ತೀವ್ರ ಮಾನಸಿಕ ತಳಮಳ, ಹೊಯ್ದಾಟಗಳು ಒಬ್ಬ ವ್ಯಕ್ತಿಗೆ ಈ ಮಾನಸಿಕ ಅಸ್ವಸ್ಥತೆಯ್ನನು ಉಂಟು ಮಾಡುತ್ತದೆ ಎನ್ನುತ್ತಾರವರು. ಕಾಡಿನ ಹಾಡಿಯಲ್ಲಿ ತನ್ನ ಗೆಣೆಕಾರರೊಂದಿಗೆ ಸ್ವಚ್ಛಂದವಾಗಿ ಆಡಿಕೊಂಡಿದ್ದ ಜೇನುಕುರುಬರ ಹುಡುಗನೊಬ್ಬನಿಗೆ ಇಂತಹ ಪರಿಸ್ಥಿತಿ ಬರಲು ಕಾರಣಗಳೇನು? ಯಾರು ರಾಜೇಶನ ಇಂದಿನ ಈ ಸ್ಥಿತಿಗೆ ಕಾರಣರಾರು? ಅದು ೨೦೧೦ನೇ ಇಸವಿಯ ಮೇ ತಿಂಗಳಿನಲ್ಲಿ ಸುವರ್ಣ ವಾಹಿನಿಯು ’ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಎಂಬ ರಿಯಾಲಿಟಿ ಶೋ ಸಾಕಷ್ಟು ಟಿಆರ್‌ಪಿ ಗಳಿಸಿಕೊಟ್ಟಿತ್ತು. ಅದರ ಹುರುಪಿನಲ್ಲೇ ’ಹಳ್ಳಿ ಹೈದ ಪ್ಯಾಟೆಗ್ ಬಂದ’ ಕಾರ್ಯಕ್ರಮವನ್ನು ಅಯೋಜಿಸಿದ ವಾಹಿನಿಯವರು ಅದಕ್ಕಾಗಿ ರಾಜ್ಯದ ನಾನಾ ಕಡೆಗಳ ಬುಡಕಟ್ಟು ಯುವಕ ಶಿಕಾರಿಗೆ ತೊಡಗಿಕೊಂಡರು. ಇದಕ್ಕಾಗಿ ಸೋಲಿಗ, ಸಿದ್ಧಿ, ಜೇನುಕುರುಬ ಆದಿವಾಸಿಗಳ ಸಂಘಟನೆಗಳ ಮುಖಂಡರನ್ನು ಸಂಪರ್ಕಿಸಿದರು. ಈ ಕಾರ್ಯಕ್ರಮದ ಮೂಲಕ ಆ ಬುಡಕಟ್ಟುಗಳ ಯುವಕರು ವಿಶ್ವಪ್ರಸಿದ್ಧರಾಗುತ್ತಾರೆಂದೂ, ಅವರ ಸಮಸ್ಯೆಗಳ ಬಗ್ಗೆಯೂ ಗಮನ ಸೆಳೆಯುತ್ತೇವೆಂದೂ ಹುರಿದುಂಬಿಸಲಾಯಿತು. ಇದನ್ನು ನಂಬಿದ ಬುಡಕಟ್ಟು ನಾಯಕರೂ ಸಹ ಸುವರ್ಣ ವಾಹಿನಿಗೆ ಬೇಕಾದ ಹುಡುಗರನ್ನು ಹುಡುಕಲು ನೆರವು ನೀಡಿದ್ದರು. ಈ ಪ್ರಕ್ರಿಯೆಯಲ್ಲೇ ಬುಡಕಟ್ಟು ಸಂಘದ ಸೋಮಣ್ಣ ಮತ್ತಿತರರೊಂದಿಗೆ ರಾಜೇಶ್ ಇರುವ ಹಾಡಿಗೂ ಈ ಪ್ಯಾಟೆ ಮಂದಿ ದಾಳಿ ನಡೆಸಿದ್ದರು. ರಾಜೇಶ ಬಹಳ ನಾಚಿಕೆ ಸ್ವಭಾವದವನಾಗಿದ್ದ. ಹಾಡಿಯ ಇತರ ಹುಡಗರಂತೆಯೇ ಅತ್ಯಂತ ಮುಗ್ಧನೂ ಆಗಿದ್ದ ಗಟ್ಟಿಗನೂ ಆಗಿದ್ದ. ಇದೇ ಹಾಡಿಯಲ್ಲಿ ಪದವಿ ಓದಿಕೊಂಡಂತಹ ರಮೇಶ್ ಅವರಂತಹ ಯುವಕರಿದ್ದರೂ ನಮಗೆ ಮೊಬೈಲ್ ಆಪರೇಟ್ ಮಾಡಲೂ ಗೊತ್ತಿರದ, ದಷ್ಟಪುಷ್ಟನಾಗಿರುವ ಅತ್ಯಂತ ಮುಗ್ಧ ಹುಡುಗ ಬೇಕು ಎಂದು ಹೇಳಿದ್ದರು ರಿಯಾಲಿಟಿ ಶೋ ಮುಖ್ಯಸ್ಥ ರಾಘವೇಂದ್ರ ಹುಣಸೂರು. ಇವರಿಗೆ ರಾಜೇಶನೇ ಒಳ್ಳೆಯ ಆಯ್ಕೆ ಎನ್ನಿಸಿದೆ. ಆದರೆ ಸಿಟಿ ಎಂದ ಕೂಡಲೇ ಬೆಚ್ಚಿ ಬೀಳುತ್ತಿದ್ದ ರಾಜೇಶನನ್ನು ಅದು ಹೆಗೋ ಮುಖಂಡರೆಲ್ಲಾ ಸೇರಿ ’ಇಡೀ ಸಮುದಾಯಕ್ಕೇ ಒಳಿತಾಗುವ’ ಬಣ್ಣದ ಮಾತನಾಡಿ ರಾಜೇಶನನ್ನು ಪುಸಲಾಯಿಸಿ ಒಪ್ಪಿಸಿದ್ದಾರೆ. ಕರೆದೊಯ್ಯುವ ದಿನ ಹರಕೆಯ ಕುರಿಗೆ ಸಿಂಗರಿಸುವಂತೆ ಹೂವಿನ ಹಾರ ಹಾಕಿ, ಹಾಡಿಯ ದೇವತೆ ಮಾಸ್ತ್ಯಮ್ಮನಿಗೆ ಪೂಜೆ ಮಾಡಿಸಿ ಜೀಪು ಹತ್ತಿಸಿದ್ದಾರೆ. ಇನ್ನೆನು ಜೀಪು ರಾಜೇಶನನ್ನು ಕೂರಿಸಿಕೊಂಡು ಹೊರಡಬೇಕು. ಅಷ್ಟರಲ್ಲಿ ಜೀಪಿನಿಂದ ಹಾರಿಬಿದ್ದ ರಾಜೇಶ್ ಸದಾ ಕಾಡಿನೊಳಕ್ಕೆ ಓಟಕಿತ್ತಿದ್ದಾನೆ. ಮತ್ತೆ ಅವನನ್ನು ಕರೆದುಕೊಂಡು ಬಂದು ಒಪ್ಪಿಸುವಲ್ಲಿ ಎಲ್ಲರಿಗೂ ಸುಸ್ತೋ ಸುಸ್ತು. ಮುಂದಿನ ಎಪಿಸೋಡು ಎಲ್ಲರಿಗೂ ಗೊತ್ತಿರುವಂತದ್ದೇ. ರಾಜೇಶ್ ಹಿಂದೆಂದೂ ನೋಡಿರದ ಬೆಂಗಳೂರು ಪ್ಯಾಟೆಗೆ ತಂದು ರಿಯಾಲಿಟಿ ಶೋನಡೆಸುವವರ ಮನಸ್ಸಿನ ವಿಕೃತ ಟಾಸ್ಕ್‌ಗಳಿಗೆ ರಾಜೇಶನೊಂದಿಗೆ ಇತರ ಬುಡಕಟ್ಟು ಹುಡಗರಿರನ್ನು ಗುರಿಪಡಿಸಲಾಗಿದೆ. ಪ್ರತಿ ಆದಿವಾಸಿ ಹುಡುಗನಿಗೆ ಒಬ್ಬೊಬ್ಬ ಪ್ಯಾಟೆ ಹುಡುಗಿಯರನ್ನು ಜೊತೆಯಾಗಿ (ಎಜೆ) ಬಿಡಲಾಗಿದೆ. ’ಆಧುನಿಕತೆ’ಯನ್ನೇ ಉಸಿರಾಡುವ ಈ ಹುಡುಗಿಯರು ಹಾಕುವ ತುಂಡು ಚಡ್ಡಿಗಳು, ವೇಷಭೂಷಣ ಎಲ್ಲವೂ ರಾಜೇಶನಂತ ಈ ಹಾಡಿಯ ಬಾಲಕರಲ್ಲಿ ಇನ್ನೆಂತಹ ಇರುಸುಮುರುಸು ಹುಟ್ಟುಹಾಕಿರಬಹುದು? ನಾಲಗೆಯ ಮೇಲೆ ಹಿಡತವೆ ಇರದ ಆ ಹುಡುಗಿಯರಿಗೆ ಈ ನಗರ ಜೀವನದ ’ನಾಗರೀಕತೆ’ ಗೊತ್ತಿಲ್ಲದ ಈ ’ದಡ್ಡ’ ಹುಡುಗರನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಮಾರ್ಗದರ್ಶನ ನೀಡಲು ಹೇಳಲಾಗಿದೆ. ಕಾಡನ್ನು ಬಿಟ್ಟು ಬಂದಿರುವ ಈ ಹುಡುಗರನ್ನು ಬ್ಯೂಟಿ ಪಾರ್ಲರುಗಳಿಗೆ ಕರೆದೊಯ್ದು ಅವರ ಮೈಮೇಲಿನ ಕೂದಲುಗಳನ್ನು (ವ್ಯಾಕ್ಸ್ ಮೂಲಕ) ಕೀಳಿಸಿ, ಫೇಷಿಯಲ್ ಮಾಡಿಸಿ, ತಲೆಗೂದಲಿಗೆ ಬಣ್ಣ ಬಳಿಸಿ ಅವರನ್ನು ವಿಚಿತ್ರವಾಗಿ ಕಾಣುವಂತೆ ಮಾಡಲಾಗಿದೆ. ಯಾರೋ ಅಪರಿಚಿತ ಹುಡುಕಿಯರ ಬಳಿ ಮೊಬೈಲ್ ನಂಬರ್ ಕೇಳುವ, (ಹೀಗೆ ನಗರವಾಸಿ ಹುಡುಗರು ಯಾರಾದರೂ ಮಾಡುತ್ತಾರಾ?!) ಬಾಡಿಗೆ ಮನೆ ಹುಡುಕಲು ಬಿಡುವ, ಭೇಧಿ ಮಾತ್ರೆಯೊಂದಿಗೆ ಹೊಟ್ಟೆ ತುಂಬ ತಿನ್ನಿಸಿ ಟಾಯ್ಲೆಟಿಗೆ ನುಗ್ಗದಂತೆ ತಡೆದು ಹಿಡಿದುಕೊಳ್ಳುವ, ಲೀಟರ್‌ಗಟ್ಟಲೆ ಬಾಳೆಹಣ್ಣಿನ ಜ್ಯೂಸ್ ಕುಡಿಸಿ ವಾಂತಿಯಾಗದಂತೆ ತಡೆಗಟ್ಟುವ, ಎಷ್ಟೋ ವಿದ್ಯಾವಂತ ನಗರವಾಸಿಗಳೇ ಹೋಗಲು ಮುಜುಗರವಾಗುವ ದೊಡ್ಡ ಮಾಲ್‌ಗಳಿಗೆ ಹೋಗುವ ಚಿತ್ರವಿಚಿತ್ರ ಟಾಸ್ಕ್ ನೀಡಲಾಗಿತ್ತು. ಈ ಮುಗ್ಧ ರಾಜೇಶ್‌ನಿಗೂ ಆಕೆಯ ಜೊತೆಗಿದ್ದ ಎಜೆ ಐಶ್ವರ್ಯಳಿಗೂ ಒಂದು ಹಂತದಲ್ಲಿ ಹೊಡೆದಾಟವಾಗುವಂತೆ ಮಾಡಿ ಅದನ್ನು ತೋರಿಸಿ ಟಿಆರ್‌ಪಿ ಹೆಚ್ಚಿಸಿಕೊಂಡಿದ್ದರು. ರೂಮಿನೊಳಗೆ ಹುಡುಗಿಯೊಂದಿಗೆ ಬಿಟ್ಟು ಶೌಚಾಲಯದೊಳಗೂ ರಹಸ್ಯ ಕ್ಯಾಮೆರಾಗಳನ್ನಿಟ್ಟು ಇವರ ವರ್ತನೆಗಳನ್ನು ಚಿತ್ರೀಕರಿಸಿಕೊಂಡು ನಂತರ ಎಡಿಟ್ ಮಾಡಿ ಪ್ರದರ್ಶಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಜ್ಞಾವಂತರಾದ ಎಷ್ಟೋ ಜನರಿಗೆ ಪಿಚ್ಚೆನಿಸಿತ್ತಲ್ಲದೆ ಆದಿವಾಸಿ ಹುಡುಗರನ್ನು ಈ ರೀತಿ ಅವಮಾನಿಸುತ್ತಿರುವ ಕುರಿತು ಅಲ್ಲಲ್ಲಿ ಅಸಮಾಧಾನವೂ ಕೇಳಿಬಂದಿತ್ತು. ಕೊನೆಹಂತದಲ್ಲಿ ಇಡೀ ಶೋನಲ್ಲಿ ರಾಜ್‌ಕುಮಾರ್ ಮತ್ತು ನಾಗೆಂದ್ರ ಎಂಬಿಬ್ಬರು ಹುಡುಗರು ಉತ್ತಮ ಪ್ರದರ್ಶನ ನೀಡಿದ್ದರೂ ವೀಕ್ಷಕರ ಮತದ ಸಹಾಯದಿಂದ ಅಂತಿಮವಾಗಿ ವಿಜೇತರಾದದ್ದು ರಾಜೇಶ್ ಮತ್ತಯ ಐಶ್ವರ್ಯ. ಹಾಂ, ವಾಹಿನಿಯವರು ಬುಡಕಟ್ಟಿನ ಜನರ ಸಮಸ್ಯೆಗಳ ಕುರಿತು ಗಮನ ಸೆಳೆಯುತ್ತೇವೆ ಎಂದೂ ಮಾತುಕೊಟ್ಟಿದ್ದರಲ್ಲ. ಹಾಗಾಗಿ ಜೇನುಕುರುಬರ ಸಮಸ್ಯೆಗಳ ಬಗ್ಗೆಯೂ ಅಲ್ಲಲ್ಲಿ ಮಾತನಾಡುವಂತೆ ನೋಡಿಕೊಂಡಿದ್ದರು. ರಾಜೇಶನಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದ ಪುನೀತ್ ರಾಜ್‌ಕುಮಾರ್ ತುಂಬಾ ಕಾಳಜಿಯಿಂದಲೇ ಮಾತನಾಡಿದ್ದರಾದರೂ ಇಡೀ ಕಾರ್ಯಕ್ರಮದ ಮುಗ್ಧ ಆದಿವಾಸಿಗಳ ಬದುಕಿನಲ್ಲಿ ಬೀರಬಹುದಾದ ಪರಿಣಾಮವನ್ನು ಗ್ರಹಿಸುವಲ್ಲಿ ಅವರೂ ಸೋತಿದ್ದರು. ಇತ್ತ ರಿಯಾಲಿಟಿ ಶೋನಲ್ಲಿ ರಾಜೇಶ ಪ್ರಖ್ಯಾತನಾಗುತ್ತಿದ್ದಂತೆ ಗಾಂಧಿನಗರದಲ್ಲಿ ಈ ಹುಡುಗನನ್ನು ಇಟ್ಟುಕೊಂಡು ಒಂದು ಸಿನಿಮಾ ಮಾಡಿದರೆ ಹೇಗೆ ಎಂಬ ಆಲೋಚನೆ ಬಂದಿದೆ. ಅದರಂತೆ ರಾಜೇಶ ಮನೆ ಸೇರಿದ ೨೦ ದಿನಗಳಲ್ಲಿ ನಿರ್ದೇಶಕ ರವಿ ಕಡೂರು ಬಳ್ಳೇ ಹಾಡಿಗೆ ಹೋಗಿ ರಾಜೇಶನನ್ನು ಸಿನಿಮಾ ’ಹೀರೋ’ಮಾಡುವೆನೆಂದು ಹೇಳಿ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ’ಕಾಡುಗಲ್ಲನ್ನು’ ಶಿಲೆಯಾಗಿಸಲು ಅವರು ಪ್ರಯತ್ನಿಸಿದ್ದಾರೆ. ಆದಿವಾಸಿ ಹುಡುಗರನ್ನೇ ಇಟ್ಟುಕೊಂಡು ಸಿನಿಮಾ ಮಾಡುವುದಾದರೆ ನೀನಾಸಂನಂತಹ ಸಂಸ್ಥೆಯಲ್ಲಿ ತರಬೇತಿ ಪಡೆದು ’ಪರಮಾತ್ಮ’ ಸಿನಿಮಾದ ಮೂಲಕ ಚಿತ್ರರಂಗಕ್ಕೂ ಪ್ರವೇಶಿಸಿರುವ ಪ್ರಶಾಂತ್ ಸಿದ್ಧಿಯಂತ ಅದ್ಭುತ ನಟರಿದ್ದರು. ಆದರೆ ನಿರ್ದೇಶಕರಿಗೆ ರಾಜೇಶನ ಖ್ಯಾತಿಯೇ ಮುಖ್ಯವಾಗಿತ್ತು. ಈ ನಡುವೆ ಸುವರ್ಣ ವಾಹಿನಿಯ ಕಛೇರಿಗೆ ರಾಜೇಶನನ್ನು ತಮ್ಮ ಮನೆಯಿಂದ ರವಿ ಕರೆದುಕೊಂಡು ಹೋದ ಸಂದರ್ಭದಲ್ಲಿ ಸಿನಿಮಾ ವಿಷಯ ವಾಹಿನಿಯವರ ಕಿವಿಗೆ ಬಿದ್ದು ಅಲ್ಲಿ ತಮ್ಮ ಅರಿವಿಗೇ ಬರದ ಕಾರಣ ವಾಹಿನಿಯವರು ನಿರ್ದೇಶಕರ ಮೇಲೆ ಮುನಿಸಿಕೊಂಡಿದ್ದಾರೆ. ತಾವು ಬೆಳಕಿಗೆ ತಂದ ’ಹುಡುಗನ್ನು ಇವರು ಬಳಸಿಕೊಳ್ಳುತ್ತಿರುವ ಕುರಿತು ಆದ ಅಸಮಧಾನ ಅದು. ಆದರೆ ರಾಜೇಶ ’ಡೈರೆಕ್ಟರ್’ ರವಿಯವರ ಬಳಿಯೇ ಇರುತ್ತೇನೆ ಎಂದಿದ್ದಾನೆ. ರಾಜೇಶನಿಗೆ ಹತ್ತು ಲಕ್ಷ ರೂಪಾಯಿ ಕೊಡುವ ಭರವಸೆಯನ್ನು ಚಿತ್ರ ನಿರ್ಮಾಪಕ-ನಿರ್ದೇಶಕರು ಮಾತನಾಡಿದ್ದಾರೆ. ಅಂತೂ ಕೊನೆಗೆ ೨೦೧೧ರ ಜನವರಿ ೨೪ ರಂದು ’ಜಂಗಲ್ ಜಾಕಿ’ ಸಿನಿಮಾದ ಚಿತ್ರೀಕರಣವೂ ಆರಂಭವಾಗಿದೆ. ಹೆಚ್ಚೂ ಕಡಿಮೆ ೬ ತಿಂಗಳವರೆಗೆ ಆಗಾಗ ನಡೆದ ಚಿತ್ರೀಕರಣ ಮುಗಿದ ಮೇಲೆ ಹಾಡಿ ಸೇರಿಕೊಂಡ ರಾಜೇಶನ ತಲೆಯಲ್ಲಿ ’ಸಿನಿಮಾದಲ್ಲಿ ತಾನು ಹೀರೋ ಆಗಿ ತೆರೆಯ ಮೇಲೆ ಅದ್ಭುತವಾಗಿ ಕಾಣಿಸಿಕೊಳ್ಳುವ ರಂಗುರಂಗಿನ ದೃಶ್ಯಗಳೇ ತುಂಬಿಕೊಂಡಿವೆ. ಈ ಸಿನಿಮಾಕ್ಕಾಗಿ ’ಅಭಿಮಾನಿಗಳು’ ತನ್ನ ಸಿನಿಮಾಕ್ಕಾಗಿ ತುಗಿಗಾಲಲ್ಲಿ ಕಾದುಕೊಂಡು ನಿಂತಿರುವ ದೃಶ್ಯವನ್ನು ಮನಸ್ಸಿಗೆ ತಂದುಕೊಂಡು ಅವನಿಗೆ ಉತ್ಸಾಹ ಉಮೇದು ಬಂದಿದೆ. ಈ ನಡುವೆ ಬಳ್ಳೇ ಹಾಡಿಗೆ ಸಮೀಪದ ಅಂತರಸಂತೆಯ ಜಾತ್ರೆಯಲ್ಲಿ ತನ್ನದೇ ಜೇನುಕುರುಬ ಸಮುದಾಯದ ಹುಡುಗಿಯೊಬ್ಬಳು ರಾಜೇಶನ ಕಣ್ಣಿಗೆ ಬಿದ್ದಿದ್ದಾಳೆ. ಅವಳು ಬೆಳ್ಳಗಿದ್ದ ಹುಡುಗಿ. ಹೇಗೂ ರಾಜೇಶನ ’ಪ್ಯಾಟೆ ಲೈಫು ಇಷ್ಟರಲ್ಲಾಗಲೇ ’ಸೌಂದರ್ಯ’ ಎಂದರೆ ನಾಡಿನ ಬಹುಸಂಖ್ಯಾತರ ಬಣ್ಣವಾದ ಕಪ್ಪು ಅಲ್ಲ, ಬೆಳ್ಳಗಿರುವುದು ಮಾತ್ರ ಎಂಬುದನ್ನು ತಿಳಿಸಿಕೊಟ್ಟಿತ್ತು. ಉಳಿದ ಜೇನುಕುರುಬ ಹುಡುಗಿಯರೆಲ್ಲ ಕಪ್ಪು ಇರುವಾಗ ಈ ಹುಡುಗಿ ಬೆಳ್ಳಗಿದ್ದದ್ದು ರಾಜೇಶನಿಗೆ ಆ ಹುಡುಗಿಯ ಮೇಲೆ ಮನಸ್ಸು ಮಾಡಲು ಕಾರಣವಾಗಿದೆ. ಪ್ಯಾಟೆ ಹುಡುಗಿಯನ್ನೇ ಮದುವೆಯಾಗಬಹುದಲ್ಲೋ ಅಂತ ಕೇಳಿದರೆ ’ನನ್ ಜೊತೆ ಅವರು ಪ್ಯಾಟೆಗೆ ಬಂದು ಇರಕಾಗಲ್ಲ. ಹಂಗಾಗಿ ನಮ್ಮಲ್ಲೇ ಬೆಳ್ಳಗಿದ್ದಾಳಲ್ಲ ಅವಳನ್ನ ಮದುವೆ ಆಗಣಂತ ಮನಸು ಮಾಡಿಕಂಡಿದೀನಿ ಎಂದು ಉತ್ತರಿಸಿದ್ದಾನೆ. ಹುಡುಗಿ ಬೆಳ್ಳಗಿದ್ದ ಮಾತ್ರಕ್ಕೆ ಪ್ಯಾಟೆ ಹುಡುಗಿಯರಂತೆ ಇರಲು ಸಾಧ್ಯವೇ? ರಿಯಾಲಿಟಿ ಶೋ ಮತ್ತು ಸಿನಿಮಾಗಳ ಹುಡುಗಿಯರು ’ಹುಡುಗಿಯರೆಂದರೆ ಹಿಂಗಿಂಗೆ ಇರಬೇಕು’ ಎಂದು ಹೇಳಿಕೊಟ್ಟಾಗಿತ್ತು. ಅದನ್ನೆಲ್ಲಾ ಈ ಹುಡುಗಿಯಿಂದ ನಿರೀಕ್ಷಿಸಲು ಹೇಗೆ ಸಾಧ್ಯ? ಪಾಪ ಆ ಹುಡುಗಿ ಕಾವ್ಯ ತೀರಾ ಮುಗ್ಧೆ. ರಾಜೇಶನ ಈ ಹೊತ್ತಿನ ಬದಲಾಗಿದ್ದ ಲೈಫ್‌ಸ್ಟೈಲ್‌ಗೆ ಹೊಂದಿಕೊಳ್ಳಲು ಆಕೆಗಾಗಲೇ ಇಲ್ಲ. ಆಗ ಆಕೆಯೊಂದಿಗೆ ತೀರಾ ಒರಟಾಗಿ ನಡೆದುಕೊಳ್ಳಹತ್ತಿದ್ದಾನೆ ಹೀರೋ ರಾಜೇಶ. ಆಕೆಯೊಂದಿಗೆ ಹೊಂದಿಕೊಳ್ಳದೇ ಹುಡುಗಿಯನ್ನು ಒಂದೂವರೆ ತಿಂಗಳಲ್ಲೇ ಮನೆಗೆ ಕಳಿಸಿಬಿಟ್ಟಿದ್ದಾನೆ ರಾಜೇಶ. ಹುಡುಗಿಯ ಅಪ್ಪ ಅಮ್ಮ ರಾಜೇಶನಿಗೆ ಬುದ್ಧಿ ಹೇಳಿದ್ದಾರೆ. ಪೋಲೀಸರಿಗೆ ದೂರು ನೀಡುತ್ತೇವೆಂದೂ ಹೇಳಿದ್ದಾರೆ.

ಅಮ್ಮನೊಂದಿಗೆ ಆಸ್ಪತ್ರೆಯಲ್ಲಿ

ಒಂದೆಡೆ ಹದಗೆಟ್ಟ ಸಂಸಾರ, ಕಾಡಿನ ರಿಯಾಲಿಟಿಗೆ ಮತ್ತೆ ಒಗ್ಗಿಕೊಳ್ಳಲಾಗದ ’ರಿಯಾಲಿಟಿ ಶೋ ಕಲಿಸಿದ್ದ’ ಪ್ಯಾಟೆ ಲೈಫು, ಮತ್ತೊಂದೆಡೆ ತನ್ನ ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ’ಅಭಿಮಾನಿಗಳು’. ದಿನಕಳೆದಂತೆಯೂ ರಾಜೇಶ ಸುತ್ತಲಿನ ಜನರಿಗೆ ಮುಖತೋರಿಸಲಾಗದ ಮಾನಸಿಕ ವಿಹ್ವಲತೆಗೊಳಗಾಗಿದ್ದಾನೆ. ದೂರದಿಂದ ಯಾರಾದರೂ ಕಂಡ ಕೂಡಲೇ ಕಾಡಿನ ಕಡೆ ಓಟ ಕೀಳತೊಡಗಿದ್ದಾನೆ. ಏಕೆಂದು ಅಮ್ಮ ಕೇಳಿದರೆ ’ಅಭಿಮಾನಿಗಳು’ ಸಿನಿಮಾದ ಬಗ್ಗೆ ಕೇಳುತ್ತಾರೆ. ಅದಕ್ಕೆ ಏನು ಹೇಳಲಿ? ಎಂಬ ಮರುಪ್ರಶ್ನೆ. ನಾಚಿಕೆ ಸ್ವಭಾವದ ಜೊತೆಗೇ ತೀವ್ರ ಮುಂಗೋಪಿತನವೂ ಆತನ ಸ್ವಭಾವದಲ್ಲಿದ್ದುರಿಂದ ರಾಜೇಶನ ಮಾನಸಿಕ ನಿಯಂತ್ರಣ ತಪ್ಪಿದ್ದಾನೆ. ಹುಚ್ಚನಂತೆ ವರ್ತಿಸುವುದು, ನಿಂತಲ್ಲಿ ನಿಲ್ಲದಂತಿರುವುದು, ಜೋರಾಗಿ ಕಿರಿಚುವುದು ಇತ್ಯಾದಿ ಹೆಚ್ಚಗಿದೆ. ಮನೆಯವರೆಲ್ಲ ದೇವರ ಮೊರೆಹೋದರೂ ಉಪಯೋಗವಾಗಿಲ್ಲ. ಒಂದು ದಿನ ಕಾಡಿನಲ್ಲಿ ಹತ್ತಾರು ಮೈಲು ಓಡಿ ಕೈಕಾಲು ಮುಖವೆಲ್ಲಾ ಮುಳ್ಳು ತರಿದು ರಕ್ತ ಹರಿದಿದೆ. ಅಂದು ನಾಲ್ಕಾರು ಜನರು ಸೇರಿ ಹಿಡಿದುಕೊಂಡರೂ ಎಲ್ಲರನ್ನೂ ಎತ್ತಿ ಬಿಸಾಕುವಷ್ಟು ಉಗ್ರಗೊಂಡಿದ್ದಾನೆ. ಅಂತಿಮವಾಗಿ ಹಾಡಿಯ ಜನರು, ಅಲ್ಲಿದ್ದ ಅರಣ್ಯ ಪಾಲಕರು ಅಕ್ಷರಶಃ ಹೆಡೆಮುರಿ ಕಟ್ಟಿ ಸರಗೂರಿನ ವಿವೇಕಾನಂದ ಸ್ಮಾರಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಅವನ ಆರ್ಭಟ ನೋಡಿ ವಿಶೇಷ ಕೊಠಡಿಯಲ್ಲಿ ಎರಡು ದಿನ ಇಡಲಾಗಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಲಾಗಿದೆ. ರಾಜೇಶನ ಈಗಿನ ಮಾನಸಿಕ ಸ್ಥಿತಿ ಇರುವ ಶುಷ್ರೂಶೆ ನೀಡಲು ತೀರಾ ಅಗತ್ಯವಾಗಿರುವುದು ಪ್ರಶಾಂತ ವಾತಾವರಣ ಮತ್ತು ಅಲ್ಲಿ ನಡೆಸುವ ತೀವ್ರವಾದ ಕೌನ್ಸೆಲಿಂಗ್‌ಗಳು. ಆದರೆ ರಾಜೇಶ ಆಸ್ಪತ್ರೆ ಸೇರಿದ ಬಗ್ಗೆಯೂ ಇನ್ನಿಲ್ಲದ ವಿವಾದಗಳನ್ನು ಹುಟ್ಟುಹಾಕಿ, ಅತಿರಂಜಕಗೊಳಿಸಿ ಟಿಆರ್‌ಪಿ ಹೆಚ್ಚಸಿಕೊಳ್ಳಲು ಬಯಸುವ ಟೀವಿ ಮಾಧ್ಯಮಗಳು ಅವನನ್ನು ಬಿಡುತ್ತಿಲ್ಲ. ತನ್ನ ಕಾಡಿನಲ್ಲಂತೂ ನೆಮ್ಮದಿಯಿಂದರಲು ಜೇನುಕುರುಬ ರಾಜೇಶನಿಗೆ ಬಿಡದ ನಮ್ಮ ಪ್ಯಾಟೆಯ ನಾಗರಿಕ ಸಮಾಜ ಮತ್ತು ಮಾಧ್ಯಮಗಳು ಕನಿಷ್ಠ ಈ ಮಾನಸಿಕ ಆಸ್ಪತ್ರೆಯಲ್ಲಾದರೂ ನೆಮ್ಮದಿ ನೀಡಬಾರದೇ? ಕೃಪೆ :  ದ ಸಂಡೆ ಇಂಡಿಯನ್ ಪತ್ರಿಕೆ]]>

‍ಲೇಖಕರು G

22 July, 2012

4 Comments

  1. shanthi k.a.

    ee reetiya artha heena reality show galanna nillisabeku.
    raajeshana sadhyada sthithi nodi besaravaaytu.aadare avara maneyavaru avanannu haage bittu bidade treatment kodisuttiruvudu khushiya vichaara.innadaroo avanannu bannada lokada beragu kaadadirali

  2. ಸಂದೀಪ್ ಕಾಮತ್

    ಚ್ಯಾನಲ್ ನವರು ಮುಂದಿನ ಹಳ್ಳಿ ಹೈದ ಸೀಸನ್ ಗಾಗಿ ಹುಡುಗರನ್ನು ಹುಡುಕ್ತಾ ಇರಬಹುದು!

  3. Hi

    Swayamkrutha aparada aste

  4. ಶಿವಶಂಕರ್

    ಇವತ್ತು ಎಲ್ಲವೂ ವ್ಯಾಪಾರದ ಸರಕಾಗುತ್ತಿರುವುದು ನಮ್ಮ ನಾಗರೀಕತೆಯ ಅಸಹ್ಯದ ಮುಖ! ಜನರನ್ನು ತಮ್ಮಪಾಡಿಗೆ ಬಿಡದೆ ಬಣ್ಣದ ಕನಸು ತೋರಿಸಿ ರಾಜೇಶನಂತವರ ತಲೆ ಕೆಡಿಸುವವರು ಮಾದ್ಯಮದವರೇ! ಇನ್ನಾದರೂ ಅರ್ಥಹೀನ ಜನರನ್ನು ದಾರಿ ತಪ್ಪಿಸುವ, ಸಂಸ್ಕೃತಿಯನ್ನು ವಿಕೃತಗೊಳಿಸುವ ಪ್ರಯತ್ನಗಳನ್ನು ನಿಲ್ಲಿಸಲಿ! ಹಣ ಮಾಡಲು ಬೇರೆಬೇರೆ ಮಾರ್ಗಗಳಿವೆ!
    ~ಎಸ್.ಜಿ.ಶಿವಶ್ಂಕರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading