ಡಾ ಶಿವಾನಂದ ಕುಬಸದ
ಭೀಮನು ಇದಿರಿಗಿ ನಿಂತಾ | ಐನೂರು ಮಂದಿಗೆ ಮಲತಾ
ಬಾಲನು ಮಾಡಿದ ಕಸರತ್ತಾ | ಕುದರಿ ಕಡದನೋ ಹತ್ತಾ
ರಾಮನ ಕಡಿತ ವಿಪರೀತಾ | ಕಾವಲಿ ಹರಿದಿತೋ ರಕ್ತಾ
ಸಾವಿರ ಆಳಿನ ಒಬ್ಬ ಮಲತಾ | ಕೂಗತಾನ ಕಡಿ ಕಡಿರೆಂತ ||
ಲಾವಣಿಯ ಈ ನಾಲ್ಕೇ ಸಾಲುಗಳನ್ನು ಓದುತ್ತ ಓದುತ್ತ ಮೈ ರೋಮಾಂಚನಗೊಳ್ಳುತ್ತದೆ. ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾದ ಲಾವಣಿಗಳಲ್ಲಿ ಇದೂ ಒಂದು. ಹಾಗೆ ನೋಡಿದರೆ, ಬಾಯಿಂದ ಬಾಯಿಗೆ ಊರಿಂದ ಊರಿಗೆ ಹರಿದಾಡಿದ ಇಂಥ ಲಾವಣಿಗಳು ಸ್ವಾತಂತ್ರ್ಯ ಸಂಗ್ರಾಮದ ಅವಿಭಾಜ್ಯ ಅಂಗಗಳಾಗಿದ್ದವು. ಮೊದಲು ಕಥೆಗಳನ್ನು ಬರೆದು ಹಾಡುತ್ತಿದ್ದ ಲಾವಣಿಕಾರರು ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ದೇಶಭಕ್ತಿಯ, ದೇಶಭಕ್ತರ ಸಂಗತಿಗಳನ್ನು ಪರಿಣಾಮಕಾರಿಯಾಗಿ ಊರಿಂದೂರಿಗೆ ಬಿತ್ತರಿಸುವ ‘ಮಾಧ್ಯಮಪ್ರತಿನಿಧಿ’ಗಳಾಗಿ ಮಾರ್ಪಾಟಾದರು. ಈ ಲಾವಣಿ ಬರೆದವನ ಹೆಸರು ಗೊತ್ತಿಲ್ಲವಾದರೂ ಮಾಡಿದ ಪರಿಣಾಮ ಮಾತ್ರ ಅದ್ಭುತ. ಬಿಳಿಯರ ನಿರ್ಜೀವ ಕಡತಗಳ ಧೂಳು ತಿಂದ ಪುಟಗಳಲ್ಲಿ ಒಂದಿಷ್ಟು ಬಂಡಾಯಗಾರರ ಯಕಶ್ಚಿತ್ ಸಾವಿನಂತೆ ದಾಖಲಿಸಿಕೊಳ್ಳಬಹುದಾಗಿದ್ದ ಈ ಘಟನೆಯನ್ನು ಸ್ವಾತಂತ್ರ್ಯ ಹೋರಾಟದ ಅವಿಸ್ಮರಣೀಯ ಘಟನೆಯನ್ನಾಗಿಸಿದ ಕೀರ್ತಿ ಆ ಲಾವಣಿಕಾರನಿಗೆ ಸಲ್ಲುತ್ತದೆ. ಹೌದು,ಅದೊಂದು ದಾರುಣ ಅಂತ್ಯ ಕಂಡ ಸಮರ. ಅದು ಹಲಗಲಿ ಬಂಡಾಯ.
೧೮೫೭ ನವಂಬರ್ ೨೯ ರ ಮಧ್ಯರಾತ್ರಿ, ಪರತಂತ್ರ ಇಂಡಿಯಾದ ಮುಧೋಳ ಸಂಸ್ಥಾನದ ಅಧೀನದಲ್ಲಿ ಬರುವ ಒಂದು ಸಣ್ಣ ಹಳ್ಳಿ ಹಲಗಲಿಯ ಹೆಬ್ಬಾಗಿಲಲ್ಲಿ ೬೦೦ ಕುದುರೆಗಳ ಖುರಪುಟದ ಸದ್ದು. ಕುದುರೆಯೇರಿದ ಬ್ರಿಟಿಷ ಸೈನಿಕರು ದಂಡೆತ್ತಿ ಬಂದದ್ದು ಹಲಗಲಿಯ ಬೇಡರೆಂಬೋ ಸ್ವಾಭಿಮಾನಿಗಳನ್ನು ಬಗ್ಗು ಬಡಿಯಲು. ತಮ್ಮ ಚಕ್ರಾಧಿಪತ್ಯಕ್ಕೆ ಎದುರಾದವನ್ನು ಯುಕ್ತಿಯಿಂದಲೋ, ಕುಯುಕ್ತಿಯಿಂದಲೋ, ದಾಳಿಯಿಂದಲೋ ಸೋಲಿಸಿ ಇಡೀ ಇಂಡಿಯವನ್ನು ಕಬಳಿಸಿದ್ದ ಬ್ರಿಟಿಷರಿಗೆ ೫೦೦ ಜನಸಂಖ್ಯೆಯ ಈ ಗ್ರಾಮದ ಜನ ಸವಾಲಾಗಿದ್ದರು.
ಅದಕ್ಕೊಂದು ಹಿನ್ನೆಲೆ ಇದೆ.
೧೮೫೭ರ ಮೇ ತಿಂಗಳಲ್ಲಿ ಜರುಗಿದ ಸಿಪಾಯಿ ದಂಗೆಯನ್ನು ಭಾರತ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೆಜ್ಜೆ ಎಂದೇ ಪರಿಗಣಿಸಲಾಗುತ್ತದೆ. ಆ ದಂಗೆಯಿಂದ ಪಾಠ ಕಲಿತ ಆಂಗ್ಲರು, ಅದೇ ವರ್ಷದ ಸಪ್ಟಂಬರ ೧೧ ರಂದು ‘ಶಸ್ತ್ರಾಸ್ತ್ರ ನಿಯಂತ್ರಣ ಕಾಯ್ದೆ’ ಯನ್ನು ಜಾರಿಗೆ ತಂದರು. ಅದರನ್ವಯ ಭಾರತದ ಪ್ರಜೆಗಳ್ಯಾರೂ ಯಾವುದೇ ರೀತಿಯ ಶಸ್ತ್ರವನ್ನು ಹೊಂದುವಂತಿಲ್ಲ. ಅಕಸ್ಮಾತ್ ಹೊಂದಿದ್ದರೂ ಅದಕ್ಕೆ ಸರಕಾರದಿಂದ ಅನುಮತಿ ಹೊಂದಬೇಕು. ಕೊಡಲಿ, ಕುಡುಗೋಲು ಮುಂತಾದ ದಿನಬಳಕೆಯ, ಜೀವನಾವಶ್ಯಕ ಸಲಕರಣೆಗಳೂ ಇದರ ವ್ಯಾಪ್ತಿಯಿಂದ ಹೊರತಾಗಿರಲಿಲ್ಲ! ಆಂಗ್ಲರಿಗೆ ಮಾತ್ರ ಈ ಕಾಯ್ದೆಯಿಂದ ಸಂಪೂರ್ಣ ವಿನಾಯತಿ !!
ವಿಲಾಯತಿಯಿಂದ ಹುಕುಮ ಕಳುವಿದರ ಕಂಪನಿ ಸರಕಾರಾ
ಎಲ್ಲ ಜನರ ತರಿಸಿ ಜೋರ ಮಾಡಿ ತರಬಾಕ ಹತ್ಯಾರ
ಮುಚ್ಚಿ ಇಟ್ಟವ್ರಿಗಿ ಮೂರ ವರ್ಷ ಬೇಡಿ ಹಾಕ್ರಿ ಪೂರಾ
ಕೊಡದೆ ದಿಟಾಯಿ ಮಾಡಿದವರನ ಕಡದಹಾಕ್ರಿ ಟಾರಾ

ಈ ಶಾಸನವನ್ನು ಭಾರತದ ಈ ಭಾಗದಲ್ಲಿ ಜಾರಿಗೆ ತರುವ ಹೊಣೆ ದಕ್ಷಿಣ ಮರಾಠಾ ವಿಭಾಗದ ಕಮಾಂಡರ್ ಆಗಿದ್ದ ಲೆಫ್ಟಿನಂಟ ಕರ್ನಲ್ ಮಾಲ್ಕಂ ಮೇಲಿತ್ತು. ಅವನ ಮುಖಾಂತರ ಬೆಳಗಾವಿಯ ಮ್ಯಾಜಿಸ್ಟ್ರೇಟ್ ಜಿ.ಬಿ. ಸೆನೆಟ್ ಕರ್ ಈ ಕಾರ್ಯದ ಹೊಣೆ ಹೊರುತ್ತಾನೆ. ಆಗಿನ ಮುಧೋಳ ಮಹಾರಾಜರ ಕಾರಭಾರಿಯಾದ ಕೃಷ್ಣರಾವರವರ ಜೊತೆ ಸಮಾಲೋಚಿಸಿ ಸಂಸ್ಥಾನದ ಎಲ್ಲರೂ ಶಸ್ತ್ರಗಳನ್ನು ಒಪ್ಪಿಸುವಂತೆ ಆಜ್ಞೆ ಹೊರಡಿಸಿದರು. ಪ್ರಾರಂಭದಲ್ಲಿ ಮುಧೋಳ ಮಹಾರಾಜರು ಹಾಗೂ ಅವರ ಆಸ್ಥಾನಿಕರು ಇದಕ್ಕೆ ಪ್ರತಿಭಟನೆ ಮಾಡಿದರೂ ಬ್ರಿಟಿಷರ ದೊಡ್ಡಶಕ್ತಿಯ ಎದುರು ತಮ್ಮ ಆಟ ನಡೆಯಲಾರದೆಂದು ತೀರ್ಮಾನಿಸಿ, ಹಾವು ಸಾಯದ ಕೋಲು ಮುರಿಯದ ‘ಜಾಣತನ’ ಪ್ರದರ್ಶಿಸಿ ತಮ್ಮ ಆಯುಧಗಳಿಗೆ ಪರವಾನಿಗೆ ಪಡೆದು ಸುಖದಿಂದ ಇರುವ ವಿಚಾರ ಮಾಡಿಕೊಂಡುಬಿಟ್ಟರು .
ಸಂಸ್ಥಾನದ ಸೈನಿಕರಲ್ಲಿ ಮುಖ್ಯ ಭಾಗವಾದ ಬೇಡರು ಮಾತ್ರ ಇದಕ್ಕೆ ಸಮ್ಮತಿಸುವುದಿಲ್ಲ. ಆಯುಧಗಳೆಂದರೆ ತಮಗೆ ದಿನ ನಿತ್ಯ ಆಹಾರ ಒದಗಿಸುವ ಸಾಧನಗಳೆಂದೂ ತಲೆತಲಾಂತರದಿಂದ ಅವು ತಮ್ಮ ಕುಲದೇವತೆಗಳೆಂದೂ ಆಯುಧಗಳಿಲ್ಲದೆ ತಾವು ಬದುಕುವುದು ಅಸಾಧ್ಯವೆಂದೂ, ಹಾಗಾಗಿ ತಾವು ತಮ್ಮ ಆಯುಧಗಳನ್ನು ಒಪ್ಪಿಸುವುದಿಲ್ಲವೆಂದೂ, ಗುಡುಗುತ್ತಾರೆ. ಕಾರಭಾರಿ ಕೃಷ್ಣರಾವ್ ಬುದ್ಧಿ ಹೇಳಲು ಹಲಗಲಿ ಗ್ರಾಮಕ್ಕೆ ಬಂದರೆ, ತಾವು ಆಯುಧಗಳನ್ನು ಒಪ್ಪಿಸುವುದು ಸಾಧ್ಯವೇ ಇಲ್ಲವೆಂದೂ, ಬೇಕಾದರೆ ಹೋರಾಡಿ ಸಾಯುತ್ತೇವೆ, ನಮ್ಮ ಸ್ವಾಭಿಮಾನದ, ಗೌರವದ ಸಂಕೇತವಾದ ಆಯುಧಗಳನ್ನು ಮಾತ್ರ ಕೊಡುವುದಿಲ್ಲವೆಂದೂ ಅವನನ್ನು ತಿರುಗಿ ಕಳಿಸಿದರು .
ಹತಿಯಾರ ಕೊಡಲಾಕ ಹೆಂಗಸಾಗಿ ಬಳಿ ಇಟ್ಟಿಲ್ಲ ಕಯ್ಯಾಗ
ಯಾಕ ಬಂದಿರಿ, ಜೀವ ಹೋದರೂ ಕೊಡೂದಿಲ್ಲ
ಸುಮ್ಮನ ಹೋಗರಿ ಈಗ ||
ಸಂಧಾನದ ಎಲ್ಲ ಬಾಗಿಲುಗಳೂ ಹೀಗೆ ಮುಚ್ಚಿಕೊಂಡು ಬಿಡುತ್ತವೆ. ಮುಧೋಳ ಮಹಾರಾಜರ ಶೂರ ಸೈನಿಕನಾದ ಬಾಬಾಜಿ ಬಿನ್ ಸಾವಜಿ ನಿಂಬಾಳ್ಕರ್ ಎಂಬಾತ ಈ ಬೇಡರಿಗೆ ಮಾರ್ಗದರ್ಶಕನಾಗಿ ನಿಲ್ಲುತ್ತಾನೆ. ಬೇಡರ ಹಿರಿಯರನ್ನು ಹುರಿದುಂಬಿಸಿ ಯುಧ್ಧಕ್ಕೆ ಸನ್ನದ್ಧರನ್ನಾಗಿಸಿದ. ಬೇಡರ ಪ್ರಮುಖರಾದ ಪೂಜಾರಿ ಹನುಮ, ಜಡಗಾ, ಬಾಲಾ, ರಾಮ ಎನ್ನುವ ಯುವಕರು ತಮ್ಮ ಸಮುದಾಯದ ಸ್ವಾಭಿಮಾನದ ಸಂಕೇತವಾಗಿ ಹೋರಾಡಲು ವೀರ ಪ್ರತಿಜ್ಞೆ ಮಾಡಿದರು.
ಪೂಜಾರಿ ಹನುಮ ಬಾಲಾ ಜಡಗ ರಾಮ
ಮಾಡಿಯಾರ ಮಸಲತ್ತು
ಕೈಯಾನ ಹತಿಯಾರ ಕೊಡಬಾರದು ನಾವು
ನಾಲ್ಕು ಮಂದಿ ಜತ್ತು
ಸುತ್ತಲಿನ ಎಲ್ಲ ಬೇಡರು ಇವರಿಗೆ ಬೆಂಗಾವಲಾಗಿ ನಿಂತು ಹೋರಾಡುವ ನಿರ್ಧಾರ ಮಾಡಿದರು. ಸುದ್ದಿ ತಿಳಿದ ಆಂಗ್ಲರು ವಿಜಾಪುರದಿಂದ ಅಶ್ವದಳ ತಂದು ಹಲಗಲಿಯ ಮೇಲೆ ಲಗ್ಗೆ ಹಾಕಿದರು. ೧೮೫೭ ನವಂಬರ್ ೨೯ ರ ರಾತ್ರಿ ವೇಳೆ ಹಲಗಲಿಯನ್ನು ಸುತ್ತುವರಿದ ಆಂಗ್ಲ ಸೇನೆ ಸಣ್ಣ ಗ್ರಾಮವಾದ ಹಲಗಲಿಯ ಜನ ಇವರ ಮೇಲೆ ಮುಗಿಬಿದ್ದ ರೀತಿಯಿಂದ ಗಾಬರಿಯಾಗಿಬಿಟ್ಟರು. ಹೆಣ್ಣು ಗಂಡುಗಳೆನ್ನದೆ ಇಡೀ ಊರಿನ ಜನ ಹೋರಾಡುವುದನ್ನು ಕಂಡು ಅವರಿಗೆ ಅಚ್ಚರಿಯಾಯಿತು.
ಒಳಗಿನ ಮಂದಿ ಒತ್ತರಲೇ ಹೊಡದರ
ಮುಂಗಾರಿ ಮಳೆ ಸುರಿದಂಗ
ಹೊರಗಿನ ಮಂದಿ ಗುಂಡ ಹತ್ತಿರಕ ತಿರಗ್ಯಾರ ಆವಾಗ

ಎದುರಾಳಿಗಳ ಬಲ ಹೆಚ್ಚಾದಾಗ ಹಿಂದೆ ಸರಿದಂತೆ ಮಾಡಿದ ಆಂಗ್ಲರು ಬಾಗಲಕೋಟ, ಕಲಾದಗಿ, ಹಾಗೂ ಬೆಳಗಾವಿಗಳಿಂದ ಇನ್ನಷ್ಟು ಸೈನ್ಯ ತರಿಸಿ ಮರುದಿನ ಮತ್ತೆ ಎಗರಿದರು. ಆದರೂ ಬಲಾಡ್ಯರಾದ ಬ್ರಿಟಿಷರ ವಿರುಧ್ಧ ಬೇಡರ ಹೋರಾಟ ಅಸಮಾನ್ಯವೇ ಆಗಿತ್ತು. ಜಡಗಾ- ಬಾಲಾ ಎಂಬ ವೀರ ಬೇಡರ ಜೋಡಿ ರಕ್ತದ ಹೊಳೆಯನ್ನೇ ಹರಿಸಿತು. ಅದನ್ನು ಲಾವಣಿಕಾರ ವರ್ಣಿಸಿದ ರೀತಿಯೇ ರೋಮಾಂಚಕ. ಜಡಗಾ ಹೊಡೆದ ಏಟಿಗೆ ಆಂಗ್ಲ ಅಧಿಕಾರಿ ಹ್ಯಾವಲಾಕ್ ನೆಲಕಚ್ಚಿದ. ಅದರಿಂದ ಕೋಪಗೊಂಡ ಅಲೆಕ್ಸಾಂಡರ್ ಕೆರ್ರ್ ಎಂಬಾತ ಇಡೀ ಊರಿಗೆ ಬೆಂಕಿ ಇಡುವಂತೆ ತನ್ನ ಸೈನಿಕರಿಗೆ ಆದೇಶ ನೀಡಿದ. ಸುತ್ತಲೂ ಸೈನಿಕರು ಮುತ್ತಿ ರಾತ್ರಿ ಇಡೀ ಊರಿಗೆ ಬೆಂಕಿ ಇಟ್ಟರು. ಹತ್ತಿಕಟಗಿಯಲ್ಲಿ ಬಚ್ಚಿಟ್ಟುಕೊಂಡಿದ್ದವರು ಅಲ್ಲೇ ಸುಟ್ಟು ಕರಕಲಾದರು. ಮನೆ, ಗುಡಿಸಲುಗಳಲ್ಲಿ ಮಲಗಿದ್ದ ಹೆಂಗಸರು ಮಕ್ಕಳು, ಮುದುಕರು ಸುಟ್ಟು ಬೂದಿಯಾದರು. ಬ್ರಿಟಿಷರ ಅಟ್ಟಹಾಸ ಬೆಳಗಾಗುವವರೆಗೂ ಸಾಗಿತು. ಬೇಡರ ಕೃಷಿ ಉಪಕರಣಗಳು ಆಹಾರ ಪದಾರ್ಥಗಳು ಮನೆಯಲ್ಲಿ ದಿನನಿತ್ಯ ಬಳಸುತ್ತಿದ್ದ ವಸ್ತುಗಳು, ಸ್ರೀಯರ ಮಂಗಳಸೂತ್ರ, ಬೀಸುವ ಕಲ್ಲು ಅಂದರೆ ಹಲಗಲಿ ಬೇಡರ ಊರಿನಲ್ಲಿ ಮನೆಗಳಲ್ಲಿ ಸಿಕ್ಕ ಸಿಕ್ಕ ವಸ್ತುಗಳೆಲ್ಲವನ್ನು ಬ್ರಿಟಿಷರು ದೋಚಿದರು.
ಯಾರು ಯಾರು ಇಲ್ಲವಾಯಿತು | ಊರೆಲ್ಲ ಲೂಟಿ ಆಗಿ ಹೋತು ||
ಮಂದಿ ಮನಿ ಹೊಕ್ಕು ಹುಡುಕಿತು | ದನಕರ ಲಯಾ ಆತು ||
ಸಣ್ಣ ಕೂಸುಗಳು ಹೋದವು ಸತ್ತು | ಬೆಂಕಿ ಹಚ್ಯಾರ ಊರ ಸುಟ್ಟತು ||
ಕತ್ತಿ ಕುದರಿ ಮತ್ತ ಮಾಣಿಕ ಯಾವದು ಬಿಡಲಿಲ್ಲ |
ಬೆಳ್ಳಿ ಬಂಗಾರ ಹರಳಿನುಂಗುರ ಹೊನ್ನುಂಗುರ ಗೋಲ |
ಸರಗಿ ಸರ್ದಳಿ ಬುಗುಡಿ ಬಾವಲಿ ಬಿಡಲಿಲ್ಲಾ |
ಕಡಗ ಕಂಕಣ ನಡುವಿನ ಡಾಬ ನಡಕಟ್ಟು ರುಮಾಲ |
ಉಪ್ಪ ಎಣ್ಣಿ ಅರಿಶಿಣ ಜೀರಿಗಿ ಅಕ್ಕಿ ಸಕ್ಕರೆ ಬೆಲ್ಲ |
ಗಂಗಳ ಚರಿಗಿ ಮಂಗಳಸೂತ್ರ ತಗೊಂಡು ಹೋದರು ಬೀಸುಕಲ್ಲಾ |
ಬೂದಿ ಮಾಡ್ಯಾರ ಹಲಗಲಿ ಸುಟ್ಟ ಹಲಗಲಿ ಗುರ್ತ ಎಳ್ಳಷ್ಟು |
ಕಾಣಸ್ತ ಹೋದಿತೋ ಕೆಟ್ಟು ವರ್ಣಿಸಿ ಹೇಳಲಿ ಎಷ್ಟು ||
ಹೋರಾಟದ ಕೊನೆಗೆ ಉಳಿದದ್ದು ಸುಟ್ಟು ಬೂದಿಯಾದ ಹಲಗಲಿ ಎಂಬ ಶೂರರ ಊರು ಮಾತ್ರ. ಅಷ್ಟಕ್ಕೇ ಬಿಡದ ಆಂಗ್ಲರು ಇನ್ನೂರೈವತ್ತು ಜನರನ್ನು ಬಂಧಿಸಿ ಸೆರೆಗೆ ಅಟ್ಟಿದರು. ಮುಂಚೂಣಿಯಲ್ಲಿ ನಿಂತು ಹೋರಾಡಿದ ಜಡಗಾ, ಬಾಲಾ, ರಾಮ, ಹನುಮ ಮೊದಲ್ಗೊಂಡು ಹದಿಮೂರು ಜನರನ್ನು ವಿಚಾರಣೆಗೆ ಗುರಿಪಡಿಸುವ ನಾಟಕವಾಡಿ, ದಿನಾಂಕ ೧೧-೧೨-೧೮೫೭, ಶುಕ್ರವಾರ ‘ಸಂತೆಯ ದಿನ’ ಮುಧೋಳದ ‘ಉತ್ತರ ಗೇಟ್’ ಎಂದು ಈಗ ಕರೆಯಿಸಿಕೊಳ್ಳುವ ಸ್ಥಳದಲ್ಲಿ ಹಾಡೇ ಹಗಲು ಗಲ್ಲಿಗೇರಿಸಿದರು, ಅವರ ವಿರುದ್ಧ ಬಂಡಾಯ ಮಾಡಿದವರ ಗತಿ ಏನಾಗುತ್ತದೆ ಎಂಬುದನ್ನು ಜಾಹೀರು ಮಾಡಲು. ಮುಂದೆ ಮೂರು ದಿನ ಬಿಟ್ಟು ಮತ್ತೆ ಆರು ಜನರನ್ನು ಹಲಗಲಿಯಲ್ಲಿ ಗಲ್ಲಿಗೇರಿಸಿದರು. ಇತಿಹಾಸದ ಒಂದು ರಕ್ತಸಿಕ್ತ ನಿಷ್ಕರುಣಿ ಅಧ್ಯಾಯ ಕೊನೆಗೊಂಡಿತು.
ಹೀಗೆ, ಅನೇಕ ಸಾವುಗಳಲ್ಲಿ ಪರ್ಯವಸಾನಗೊಂಡ ಸ್ವಾಭಿಮಾನದ ಒಂದು ಹೋರಾಟ ತನಗರಿವಿಲ್ಲದೆ ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ದಾಖಲೆಯಾಗಿಬಿಟ್ಟಿತು.
ಇದನ್ನು ದಾಖಲಿಸಿದ ಅನಾಮಧೇಯ ಲಾವಣಿಕಾರನಿಗೊಂದು ಗೌರವ ತುಂಬಿದ ಕೃತಜ್ಞತೆ.
ಕೊನೆಗೆ ಒಂದೆರಡು ಪ್ರಶ್ನೆಗಳು.
-ಒಂದು ದೊಡ್ಡ ಶಕ್ತಿಯ ವಿರುದ್ಧ ಹೋರಾಟಕ್ಕಿಳಿದ ಆ ಬೇಡರಿಗೆ ತಾವು ಸೋಲುವುದು ಖಚಿತ ಎಂದು ಗೊತ್ತಿರಲಿಲ್ಲವೆ?
-ಸೋತರೆ ತಾವು ಸಾಯುತ್ತೇವೆಂದು ಗೊತ್ತಿರಲಿಲ್ಲವೆ?
-ಉಳಿದ “ಜಾಣರಂತೆ” ತಾವೂ ಆಯುಧಗಳನ್ನು ‘ಕೊಟ್ಟಂತೆ ಮಾಡಿ’ ಬದುಕಬಹುದೆಂದು ಗೊತ್ತಿರಲಿಲ್ಲವೆ?
ಇವೆಲ್ಲಕ್ಕೂ ಒಂದೇ ಉತ್ತರ
“ಗೊತ್ತಿತ್ತು”
ಆದರೂ ಅವರು ಹೋರಾಟ ಮಾಡಿದ್ದು ತಮ್ಮ ಹಕ್ಕಿಗಾಗಿ, ಸ್ವಾಭಿಮಾನಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಎನ್ನುವುದನ್ನು ನೆನೆದಾಗ ರೋಮಾಂಚನವಾಗುತ್ತದೆ. ಧನ್ಯತೆಯ ಗೌರವದ ಭಾವ ಮೂಡುತ್ತದೆ.
(ಸಾಧಾರ)






Sad part is we are now taking our freedom for granted
ಬರಹ ತುಂಬಾ ಹರಿತವಾಗಿದೆ ಸರ್.
ಓದಿ ಮೈ ರೋಮಾಂಚನಗೊಂಡಿತು.
ಐತಿಹಾಸಿಕ ಘಟನೆಗಳು
ಸ್ವಾಭಿಮಾನದ ಕುರುಹುಗಳು.
Dear Kubsad
I cannot resist to surrender myself to your article of halagali revolt
Many more such incidences will come out if we have aptitude to read n search them
My heartfelt congratulations to ur skillful description
All d best
Carry on my fren
Gd day
ಚೆಂದದ ಬರಹ.
ಹಲಗಲಿ ಬೇಡರ ನಾಡ ಪ್ರೇಮ, ಸ್ವಾಭಿಮಾನಗಳು ನಿಜಕ್ಕೂ ಸ್ಫೂರ್ತಿದಾಯಕ. ಡಾಕ್ಟ್ರೆ, ಹಿಂದೊಮ್ಮೆ ನನ್ನ ವಿನಥಿಯ ಮೇರೆಗೆ ನೀವೇ ಕಳಿಸಿಕೊಟ್ಟ ಈ ಲಾವಣಿಯ ಪೂರ್ನಪಾಠವನ್ನು ನಾನು ಟೈಪು ಮಾಡಿ ಒಂದೆಡೆ ಇಟ್ಟುಕೊಂಡಿದ್ದೇನೆ. ನನಗದು ಏನೆಲ್ಲಾ ಸ್ಫೂರ್ತಿ ಕೊಡುತ್ತದೆ ಅಂತೀರಿ…
ವ್ಹಾ ಸರ್… ಓದೊಮುಂದ ಒಂಥರಾ ಉತ್ಕಟ ದೇಶ ಭಕ್ತಿಯ ಅನುಭವ ಆಗ್ಲಿಕತ್ತಿತ್ತು.
ತಮ್ಮ ಅನುಮತಿ ಇದ್ರ , ತಮ್ಮ ಈ ಉತ್ತಮ ಬರಹಕ್ಕೆ, ಐತಿಹಾಸಿಕ ಘಟನೆಗೆ ನಾಟಕದ ರೂಪ ಕೊಡುವಾಸೆ…
ಡಾ. ಸಿ. ಏನ್. ರಾಮಚಂದ್ರ , ಸರ್ ಬರೆದ ಲೇಖನ ಹಾಗೂ ಲಾವಣಿಯ ತರ್ಜುಮೆಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ
https://www.google.co.in/url?sa=t&rct=j&q=&esrc=s&source=web&cd=10&cad=rja&uact=8&ved=0CEkQFjAJahUKEwi34rDQwpvIAhXUC44KHYDkCJA&url=http%3A%2F%2Fdrcnr.blogspot.com%2F2010%2F11%2Fbedas-of-halagali.html&usg=AFQjCNEIErvutwUlBP0Xq0zRgohq2VhhIg&sig2=1ZY8qOnn8iljpsjHlpN1KQ
ಆಸಕ್ತರಿಗಾಗಿ “ಲಾವಣಿ”ಯ ಪೂರ್ಣ ಪಾಠ
-ಪಲ್ಲಾ –
ಹೊತ್ತು ಬಂದಿತು ಮತ್ತ ನೋಡಿರಿ ಕಟ್ಟಿ ಹಿಡಿವ ಜನಕ
ಶಿಟ್ಟಿನ ಮಂದಿ ಭಂಟರ ಹಲಗಲಿ ಮುಟ್ಟಲಿಲ್ಲ ದಡಕ
೧ನೆ ನುಡಿ
ವಿಲಾಯತಿಯಿಂದ ಹುಕುಮ ಕಳುವಿದರ ಕಂಪನಿ ಸರಕಾರಾ
ಎಲ್ಲ ಜನರ ತರಿಸಿ ಜೋರ ಮಾಡಿ ತರಬಾಕ ಹತ್ಯಾರ
ಕತ್ತಿ ಕಟಾರಿ ಕೈ ಚೂರಿ ಬಾಕು ಗುರ್ದಿ ಸುರಾಯಿ ಚಕ್ರ
ಬಾಲಿಯ ಬರ್ಚಿ ಬಿಚ್ಚುಗತ್ತಿ ನೋಡ ಬಾಣ ಬಿಲ್ಲಿನವರಾ
ಪಟಾತ ಪಿಸ್ತುಲ ಕರುಲಿ ತೇಗಾ ಚಾಪಗೊಡ್ಲಿ ಶಸ್ತ್ರಾ
ತೋಪು ತುಬಾಕಿ ಹೊಡವು ಮದ್ದ ಗುಂಡ ಬಿಡ ಬ್ಯಾಡ್ರಿ ಚೂರಾ
ಮುಚ್ಚಿ ಇಟ್ಟವ್ರಿಗಿ ಮೂರ ವರ್ಷ ಬೇಡಿ ಹಾಕ್ರಿ ಪೂರಾ
ಕೊಡದೆ ದಿಟಾಯಿ ಮಾಡಿದವರನ ಕಡದಹಾಕ್ರಿ ಟಾರಾ
|| ಚ್ಯಾಲ ||
ಬೇಡಿದಾ ಕ್ಷಣಕ ತಾವು ತಂದು
ಕೊಡತಾರ ಹಿಡಿ ಹಿಡೀರ್ ಎಂದು
ವತ್ನ ಕೊಡತೆವ್ ಅನ್ನರಿ ವೊಂದ ಒಂದು
ತಂದು ಕೊಡತಾರ ತಮ್ಮ ಕುಸಿಲಿಂದು
ಬಂದಿತು ಹುಕುಮ ಹೀಂಗ್ ಎಂದು
ದನಗರ ಸಾರಿದರ ಮುಂದು
ಶೂರ ಶಿಪಾಯಿ ಜನರ ತಾವು ತಿಳಿದು
ಅಳತಾರ ಕನ್ನಿಗಿ ನೀರ ತಂದು ||ಯೇರ||
ಬಹಳ ಚಿಂತಿ ಆಗಿ ದುಃಖದಿಂದ ಅವರು ಬಿದ್ದರ್ ಅಣ್ಣ ನೆಲಕ
||೨ನೆ ನುಡಿ||
ಹೇಳುತ ಹುಕುಮಾ ಕೆಳವರ ತಂದ ತಂದ ಕೊಟ್ಟಾರ ಆವಾಗ
ಬಹಳ ಬೆಲಿವು ಹೆಚ್ಚಿನ ಹತಾರ ಮುಚ್ಚಿ ಇಟ್ಟರ ವೊಳಗ
ಸಾಲ ಸಮದ ಮಾಡಿ ದನಕರ ಮಾರಿ ತಂದಿನ್ನಿ ಹಬ್ಬದಾಗ
ನೋಡ ನೋಡ ಹ್ಯಾಂಗ ಕೊಡುನ್ ಅಂತ ಹುಗಿದ್ ಇಟ್ಟರ ನೆಲದಾಗ
ಶೂರ ಚಟೆಗಾರು ಜಾಯಿತ ಸಾಹೇಬ ಬಂದಾರ ಆವಾಗ
ಸಂದಿಯ ಗೊಂದಿ ವೊಂದು ಉಳಿಯದ ಅಂಗ ಹೊಕ್ಕು ಹುಡಿಕೆರ್ ಮನಿಯಾಗ
ತೆಪ್ಪಿತ್ ಉಪಾಯಿ ಇನ್ನ ಮಾತರ ಮಾಡುನ ಅಂತರ ಹ್ಯಾಂಗ
ವೋಬ್ಬರಕ್ ಒಬ್ಬರ ಚ್ಯಾಡ ಹೇಳತಾರ ವರ್ಮ ಸಾಧಿಸಿದ ಹಾಂಗ
||ಚ್ಯಾಲ||
ಜ್ಯಾಡಿಸಿ ಹೋದವೋ ಎಲ್ಲ
ನಾಡ ಒಳಗೆ ಏನು ಉಳಿಲಿಲ್ಲಾ
ಅಜ್ಜ ಮುತ್ತೆರ ಹಿಡುವ ಪಿಸ್ತುಲ
ಕಾಸದ್ ಓದರ ಕತ್ತಿಯ ಡಾಲಾ
ಕವಚ ಬೆಳ್ಳಿಯ ಮಕಮಾಲಾ
ರತ್ನದ ಹಿಡಿಕಿವ ಹೋದವು ಎಲ್ಲಾ
||ಯೇರಾ||
ಹೋದ ಹತಾರಕ ಹೊಟಿಬ್ಯಾನಿ ಹಚ್ಚಿಕೊಂಡ ನಿಂತರ ಸಾವುದಕ
೩ನೆ ನುಡಿ
ಹಲ್ಲ ಕಿತ್ತಿದಾ ಹಾವಿನ ಪರಿಯು ನಮಗ ಆದಿತ್ ಅಲ್ಲಾ
ರಂಡಿ ಮುಸುಕ ಹಾಕಿ ತಿರಿಗಿದರ ನಮ ಮಾನ ಉಳಿಯುವುದಿಲ್ಲಾ
ಮಗ್ಗಳದಾಗಿನ ಹೇಣ್ತಿ ಕೊಟ್ ಹಾಂಗ ಅತಿ ಹೇಡಿ ಆದೇವ್ ಅಲ್ಲಾ
ಸತ್ತ ಹೆನಕ ಶೃಂಗಾರ ಮಾಡಿದ ಪರಿ ಆದಿತಲ್ಲಾ
ಸಾವಕಾರು ನಮ್ಮ ಜೀವ ಹೊದೀತ್ ಅಂತ ಚಿಂತಿ ಮಾಡೇರ್ ಅಲ್ಲಾ
ಹಗಲಿ ಮನಿ ಹೊಕ್ಕ ಹಣಾ ವೋದರ್ ಕೇಳವರ್ ಯಾರ್ ಇಲ್ಲಾ
ಪುಂಡ ಪಾಳೆಗಾರ ಪಚ್ಚ್ಯಾ ವಜೀರರು ಪಂತ ಹಿಡಿಯಲಿಲ್ಲಾ
ದಂಡನ್ ಆಳುವ ದೊರಿ ದೌಲತರ್ ಅಂಜಿ ಕುಳಿತರ್ ಅಲ್ಲಾ
||ಚ್ಯಾಲ||
ದೇವರ ತಂದ ಪಡಿಪಾಟಾ
ಬೆಂಕಿ ಹತ್ತಿ ಆದರೋ ನಷ್ಟಾ
ಅಧಿಕಾರ ಉಳಿಯಲಿಲ್ಲ ಯೆಳ್ಳ ಅಷ್ಟಾ
ಕೇಡಗಾಲ ಬಂದಿತು ಕನಿಷ್ಟ
ಹೆಂಗಸ್ ಶೀರಿಯ ವುಟ್ಟ
ಸೊಂಡ ಒಣಗಿ ಅದೀತೋ ಬೊಬ್ಬಾಟಾ
ಅಂದ ಹಾಂಗ್ ಅತೀ ಸ್ತ್ರೀಯರ ಕ್ರೀಡಾದ್ ಆಟಾ
ಭಂಟರಿಗೆ ಬಂದಿತೋ ಬಿಕ್ಕಷ್ಟ || ಯೇರ ||
೪ ನೆ ನುಡಿ
ಹಲಗಲಿ ಅಂಬುವ ಹಳ್ಳಿ ಮುಧೋಳ ರಾಜ್ಯದಾಗ ಇತ್ತು
ಪೂಜೇರಿ ಹನುಮ ಬಾಲ ಜಡಗ ರಾಮ ಮಾಡ್ಯಾರ ಮಸಲತ್ತ
ಕೈನ ಹತಾರ ಕೊಡಬಾರದೋ ನಾವು ನಾಲ್ಕ ಮಂದಿ ಜತ್ತ
ಹತಾರ ಹೋದಿಂದ ಬಾರದ ನಮ್ಮ ಜೀವ ಸತ್ತ ಹೋಗೋದು ಗೊತ್ತು
ಸುತ್ತೀನ ಹಳ್ಳಿ ಮತ್ತು ದೊರಿಗಳಿಗೆ ತಿಳ್ಸೇರ ಹೀಂಗ್ ಆತು
ಮಾಡರಿ ಜಗಳ ಕೂಡ ಇರತೆವು ಕುಮುಕಿ ಯಾವತ್ತು
ವೋಳಗಿಂದ್ ಒಳಗಾ ವಚನ ಕೊಟ್ಟರು ಬ್ಯಾಡರು ಎಲ್ಲ ಕಲಿತು
ಕಾರಕೂನನ ಕಪಾಳಕ ಬಡದರ ಶಿಪಾಯಿ ನೆಲಕ ಬಿತ್ತು
|ಚ್ಯಾಲ ||
ದುಃಖದಿಂದ ಅವರು ಅಲ್ಲಿಗ್ ಹೋಗಿ
ಸಾಹೇಬಗ ಹೇಳಿದರ ಕೂಗಿ
ಕೇಳಿ ಸಾಹೇಬ ಯುದ್ಧ ಸಿಟ್ಟಿಗಿ
ತಿರಿಗಿ ಹೋದ ಆವಾಗ ಕಲಾದಗಿ
ಕರ್ಸಿ ಕೃಷ್ಣ ನಾಯಕಗೌಡ ಕುಂದರಗಿ
ಕರಶ್ಯಾನ ಸಂಧಾನಕ್ ಆಗಿ
ಹತಿಯಾರ ಕೊಡಲಾಕ ಹೆಂಗಸಾಗಿ ಬಳಿ ಇಟ್ಟಿಲ್ಲ ಕಯ್ಯಾಗ
ಯಾಕ ಬಂದಿರಿ, ಜೀವ ಹೋದರೂ ಕೊಡೂದಿಲ್ಲ
ಸುಮ್ಮನ ಹೋಗರಿ ಈಗ ||
||ಯೇರ||
ಹಟಾ ಮಾಡಬಾರದು ನಿಮ್ಮ ಹತಾರ ಕೊಡ್ರಿ ಸಾಹೆಬನ್ ವಶಕ
ಶಿಡಿಲನ ಹಂತ ಗುಂಡ ಹೊಡವುತ ಕತ್ತಿಲಿ ಕಡದರ ವೋಲತ್ ಅಂಗ
ನಡುಗಿತು ಬ್ಯಾಡಕಿ ಕೆನ್-ಧೂಳೆ ಹರಿದ್-ಅಂಗ ಕಡದಾಟವು ಹ್ಯಾಂಗ
ಕೇಡಗಾಲ ಬಂದಿತ ನಡವಿ ಶಿಕ್ಕರೋ ಬಿಡಸವರ್ ಯಾರ್-ಈಗ
ಚಟೆಕಾರರು ಚಾಟಿ ಮಾಡುತ ನಡದರ ಗುಡಗಾದ ||ಇಳದ||
ಅಗಸಿಗಿ ಬಂದು ನಿಂತಿತು
ಹೆಬಲಕ್ ಸಾಹೇಬಂದು ತಾವು ನಿಂತು
ಹೇಳತಾರ ಬುದ್ಧಿಯ ಮಾತು
ಕೊಡತೆವ್ ಕವಲ ಈ ಹೊತ್ತು
ಹೋಗಬ್ಯಾಡರಿ ವೆರ್ತಾ ನೀವು ಸತ್ತು || ಯೇರ ||
ಯೆಂಬು ಮಾತಿಗೆ ನಂಬಿಗೆ ಸಾಲದ ಹಣಮ ಬಂದ ಮುಂದಕ
೭ ನೆ ನುಡಿ
ಜಡಗ ಹೇಳತಾನ ಹೊಡಿ ಇವರನಾ ಈಗ ಘಾತಕರೋ ಯಿವರಾ
ಇಸವಸ ಘಾತಾ ಮಾಡಿ ನಂಬಗಿಲೆ ಮಾಡತಾರು ಫೀತುರಾ
ಮಾಸ ಮಾಡಿ ಬಲ ದೇಶ ತಗೋತರ ಮುಂದ ನಮಗ ಗೋರಾ
ಅಂದ ಹೊಡದಾರೋ ವೊಂದು ಗುಂಡಿಗೆ ಆದ ಸಾಹೇಬ ಟಾರಾ
ಕಾರ್ ಸಾಹೇಬ ಬೆಂಕಿ ಚೂರ ಆಗಿ ತಾನು ಲೂಟಿ ಮಾಡ ಅಂದ ವೂರ
ಹುರಪಿಲಿ ಹೊಡದರ ಮಳೆ ಆದ ಹಾಂಗ ಗುಂಡ ಸುರದವು ಭರಪೂರ
ಹಣಮ ಹೇಳತೇನ ಗುಂಡ ಹೊಡದರ ಕೆಡವುನ್ ಅಷ್ಟು ಬಾರಾ
ಮುನ್ನೂರ್ ಮಂದಿಯನ್ನ ಮೆಗೆ ಬಿಟ್ಟ ಆಗ ನೋಡರಿ ಜೋರಾ
||ಚ್ಯಾಲ ||
ಭೀಮನು ಇದಿರಿಗಿ ನಿಂತಾ | ಐನೂರು ಮಂದಿಗೆ ಮಲತಾ
ಬಾಲನು ಮಾಡಿದ ಕಸರತ್ತಾ | ಕುದರಿ ಕಡದನೋ ಹತ್ತಾ
ರಾಮನ ಕಡಿತ ವಿಪರೀತಾ | ಕಾವಲಿ ಹರಿದಿತೋ ರಕ್ತಾ
ಸಾವಿರ ಆಳಿನ ಒಬ್ಬ ಮಲತಾ | ಕೂಗತಾನ ಕಡಿ ಕಡಿರೆಂತ ||
ನಾಲ್ಕು ಮಂದಿ ಹೇಂಗ ಕಡದ ಸತ್ತರೋ ಭಂಟರ್ ಅನಸೆರ ಜನಕ
೮ ನೆ ನುಡಿ
ಯಾರು ಕೇಳಲಿಲ್ಲ ಆರು ಗುಂಡ ತಾಕಿ ಹಣಮ ಬಿದ್ದ ನೆಲಕ
ಚೀರಿ ಆಡುತ ಜನ ಸುತ್ತುಗಟ್ಟಿತೋ ಅಂಜಿಕೊಂಡು ಜೀವಕ
ಶೂರ ವೊಬ್ಬ ಬಹಳ ಜೋರ ಮಾಡಿದನ ಹತಾರ ತಗೊಳುದಕ
ಯೇರಿ ಬರು ಕುದರಿ ಕಾಲ ಕಡದನೋ ಸ್ವಾರ ಬಿದ್ದ ನೆಲಕ
ರಾಮಿ ಗುಂಡಿಲಿ ಜೋರ ಮಾಡಿ ಹೊಡದಳೋ ಮೂರ ಮಂದಿ ಶಿರಕ
ಆರ ಕುದರಿಯ ಕಡದ ಸಿಡದಳೋ ಬಾಲನ ಸೂರಾಯಕ
||ಚ್ಯಾಲ||
ಯಾರು ಯಾರು ಇಲ್ಲವಾಯಿತು | ಊರೆಲ್ಲ ಲೂಟಿ ಆಗಿ ಹೋತು ||
ಮಂದಿ ಮನಿ ಹೊಕ್ಕು ಹುಡುಕಿತು | ದನಕರ ಲಯಾ ಆತು ||
ಸಣ್ಣ ಕೂಸುಗಳು ಹೋದವು ಸತ್ತು | ಬೆಂಕಿ ಹಚ್ಯಾರ ಊರ ಸುಟ್ಟತು ||
ನಷ್ಟ ಆತಿ ನೋಡರಿ ಇವತ್ತು ನಾ ಹೇಳತೇನ ಈ ಮಾತು
ಇಷ್ಟೆಲ್ಲಾ ಅಳವ್ ಆಗಿ ಹೋದಿತೋ ಮುಟ್ಟಲಿಲ್ಲ ಯಾತಕ್ಕ
೯ ನೆ ನುಡಿ
ಕತ್ತಿ ಕುದರಿ ಮತ್ತ ಮಾಣಿಕ ಯಾವದು ಬಿಡಲಿಲ್ಲ |
ಬೆಳ್ಳಿ ಬಂಗಾರ ಹರಳಿನುಂಗುರ ಹೊನ್ನುಂಗುರ ಗೋಲ |
ಸರಗಿ ಸರ್ದಳಿ ಬುಗುಡಿ ಬಾವಲಿ ಬಿಡಲಿಲ್ಲಾ |
ಕಡಗ ಕಂಕಣ ನಡುವಿನ ಡಾಬ ನಡಕಟ್ಟು ರುಮಾಲ |
ಕುಬಸ ಶೀರಿ ಹಪ್ಪಳ ಸಂಡಿಗಿ ಕುರ್ಚಿಗಿ ಕುಡಗೋಲ
ಕೊಡಲಿ ಕೋಟಿ ಕುಡ ಕಬ್ಬಿಣ ಮಸರ ಬೆಣ್ಣಿ ಹಾಲ
ಉಪ್ಪ ಎಣ್ಣಿ ಅರಿಶಿಣ ಜೀರಿಗಿ ಅಕ್ಕಿ ಸಕ್ಕರೆ ಬೆಲ್ಲ |
ಗಂಗಳ ಚರಿಗಿ ಮಂಗಳಸೂತ್ರ ತಗೊಂಡು ಹೋದರು ಬೀಸುಕಲ್ಲಾ |
ಹಾಳಾಗಿ ಹೋದಿತೋ ಇಷ್ಟು ವರ್ಣಿಸಿ ಹೇಳಲು ಎಷ್ಟು
ಎಲ್ಲ ತಗೊಂಡರೋ ಶಿಕ್ಕ ಅಷ್ಟು ಸರ್ದ ನಿಂತರೋ ವೂರಿಗೆ ಕೊಳ್ಳಿ ಇಟ್ಟು |
ಬೂದಿ ಮಾಡ್ಯಾರ ಹಲಗಲಿ ಸುಟ್ಟ ಹಲಗಲಿ ಗುರ್ತ ಎಳ್ಳಷ್ಟು |
ಕಾಣಸ್ತ ಹೋದಿತೋ ಕೆಟ್ಟು ವರ್ಣಿಸಿ ಹೇಳಿದೆನು ಎಷ್ಟು ||
ಕುರ್ತಕೋಟಿ ಕಲ್ಮೇಶನ ದಯದಿಂದ ಹೇಳುದ ಕೇಳುದಕ
ಸಾಕಷ್ಟು ಬಾರಿ ಹಲಗಲಿಯ ಶೂ ಧೀರ ಬೇಡರ ಕುರಿತು ಓದಿದ್ದರೂ, ಪೂರ್ಣವಿವರ ಸಿಕ್ಕಿರಲಿಲ್ಲ..ಸ್ವಾಭಿಮಾನಿ ,ಶೂರರ ಬಗ್ಗೆ ನಿಮ್ಮ ಲಾವಣಿ ಮಿಶ್ರಿತ ಬರಹ ಚಂದದ ಕೊಡುಗೆ.
ಹಾಗೇ ಮೂಧೋಳದಲ್ಲಿ ಬಸ್ ನಿಲ್ದಾಣದ ಬಳಿ ಇರುವ ಜಡಗಾ ಬಾಲಾರ ವೀರಗಲ್ಲು ಸಂತೆಯ ವ್ಯಾಪಾರಸ್ಥರ ಚಪ್ಪರ ಹಾಕುವ ಸಾಧನವಾಗಿರವದ ಕಂಡು ,ವಿಷಾದವಾಗುತ್ತದೆ
Nice article. Crisp without loosing intensity and meaning. This is the story of response of have nots visa vi haves when faced with extreme difficulties. People who are well to do have always ditched the cause when faced with slightest difficulty leaving behind other group of society. This is repeating since time immemorial. Otherwise the course of nation and humanity would have been different
Sir , many of the people born and brought up in Mudhol doesn’t know this incident. Thanks for your efforts to make people aware of this BRAVE INCIDENT. Very beautifully narrated. Expecting more and more such articles.
ಬಹಳ ಚೆಂದದ ಲೇಖನ. ಅಭಿನಂದನೆಗಳು ಸರ್
Wonderfull history reminded
ಹಲಗಲಿ ಬೇಡರ ಕತೆ ನಮ್ಮ ಸಿಲ್ಯಾಬಸ್ ಗೆ ಇತ್ತಾದರೂ ..ಈಗ ನಿಮ್ಮ ಬರಹದಲ್ಲಿ ಓದಿದಾಗ ..ಇತಿಹಾಸ ಮತ್ತೊಮ್ಮೆ ಕಣ್ಮುಂದೆ ಬಿಚ್ಚಿಕೊಳ್ಳುತ್ತ ಹೋಯಿತು…ಅದ್ಭುತ ಬರಹ ಸರ್