
ಪ್ರಸನ್ನ ಸಂತೆಕಡೂರು ಪುಸ್ತಕ ಮೋಹಿ.
ಓದಿದಷ್ಟೂ ಮುಗಿಯದ ಉತ್ಸಾಹದ ಅವರು ಓದಿದ ‘ಬೊಂಬಾಟ್ ಪುಸ್ತಕ’ವನ್ನು ಪ್ರತೀ ವಾರ ಅವಧಿ ಓದುಗರಿಗೆ ಪರಿಚಯಿಸಲಿದ್ದಾರೆ.
ಈ ಕಾದಂಬರಿಯನ್ನು ನಾನು ಮೊದಲ ದಿನವೇ ಕೊಂಡುಕೊಳ್ಳಲು ಮುಖ್ಯ ಕಾರಣ. ಹರೀಶ ಹಾಗಲವಾಡಿಯವರ “ನ್ಯಾಸ” ಎಂಬ ಅದ್ಭುತ ಕಾದಂಬರಿಯನ್ನು ನಾನು ಹಿಂದೆ ಓದಿ ಮೆಚ್ಚಿಕೊಂಡಿದ್ದು ಎಂದು ಹೇಳಬಹುದು.
ಲೇಖಕರ ಮೊದಲ ಕಾದಂಬರಿಯೇ ಅಷ್ಟು ಚೆನ್ನಾಗಿರುವಾಗ ಎರಡನೇ ಕಾದಂಬರಿಯ ಬಗ್ಗೆ ಓದುಗರ ನಿರೀಕ್ಷೆ ಖಂಡಿತ ಹೆಚ್ಚಾಗಿರುತ್ತದೆ. ಇಲ್ಲಿ ಮತ್ತೊಂದು ವಿಷಯ ಈ ಎರಡನೇ ಕಾದಂಬರಿಯ ಶೀರ್ಷಿಕೆ ‘ಋಷ್ಯಶೃಂಗ’ ಎಂದು ಇರುವುದು.
ಸಂತೇಕಡೂರಿನಲ್ಲಿ ನಮ್ಮ ಪಕ್ಕದ ಮನೆಯ ಸರೋಜಕ್ಕನವರು ನನ್ನ ಆತ್ಮೀಯರು ಮತ್ತು ಹಿತೈಷಿಗಳು. ಅವರ ತವರುಮನೆ ಇರುವುದು ಶೃಂಗೇರಿಯಲ್ಲಿ. ಅವರು ಶೃಂಗೇರಿಯ ಹತ್ತಿರ ಇರುವ ಕಿಗ್ಗದ ಋಷ್ಯಶೃಂಗೇಶ್ವರ ದೇವಸ್ಥಾನದ ಬಗ್ಗೆ ಮತ್ತು ಋಷ್ಯಶೃಂಗ ಮಹರ್ಷಿಯ ಬಗ್ಗೆ ನನಗೆ ಹೇಳುತ್ತಿದ್ದ ಕತೆಗಳು ಇಂದಿಗೂ ಜ್ಞಾಪಕವಿರುವುದು ಕಾದಂಬರಿಯ ಬಗ್ಗೆ ಕುತೂಹಲ ಮೂಡಲು ಇನ್ನೊಂದು ಕಾರಣ ಎಂದು ಹೇಳಬಹುದು. ಇದೇ ಋಷ್ಯಶೃಂಗ ಮಹರ್ಷಿಗಳಿಂದಲೇ ಶೃಂಗೇರಿಗೆ ಆ ಹೆಸರು ಬರಲು ಕಾರಣ ಎಂದು ಹೇಳುತ್ತಾರೆ.
ಅದ್ವೈತದ ಪ್ರತಿಪಾದಕರಾದ ಶ್ರೀಶಂಕರಾಚಾರ್ಯರು ಆನಂತರ ಶೃಂಗೇರಿಗೆ ಬಂದು ಶಾರದಾ ಪೀಠವನ್ನು ಸ್ಥಾಪಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಶ್ರೀಶಂಕರಾಚಾರ್ಯರ ಮತ್ತು ಶಾರದಾಂಬೆಯ ಭಕ್ತರಾಗಿದ್ದ ತರಾಸು ಮತ್ತು ಪುಟ್ಟಣ್ಣ ಕಣಗಾಲರು ತಮ್ಮ ಮನಸಿಗೆ ಬೇಜಾರು ಅಥವಾ ನೋವಾದಾಗ ಮೊದಲು ಶೃಂಗೇರಿಗೆ ಬಂದು ಸ್ವಲ್ಪ ದಿನ ಇದ್ದು ಹೋಗುತ್ತಿದ್ದರೆಂದು ಕೇಳಿದ್ದೇನೆ. ಪುಟ್ಟಣ್ಣ ಕಣಗಾಲರು ತಮ್ಮ ಕೊನೆಯ ದಿನಗಳಲ್ಲಿ ತಾವು ನಿರ್ದೇಶನ ಮಾಡುತ್ತಿದ್ದ ಚಲನಚಿತ್ರಗಳಿಗೆ ಆ ಜಗನ್ಮಾತೆ ಶಾರದಾಂಬೆಯೇ ದಾರಿತೋರಿಸುತ್ತಿದ್ದಾಳೆ ಎಂದು ನಿರ್ದೇಶನ ಜಗನ್ಮಾತೆ ಎಂದು ಹಾಕುತ್ತಿದ್ದರು.
ಬಾಲ್ಯದಿಂದಲೂ ತರಾಸು ಅವರ ಕಾದಂಬರಿಗಳನ್ನು ಪುಟ್ಟಣ್ಣ ಕಣಗಾಲರ ಚಲನಚಿತ್ರಗಳನ್ನು ಇಷ್ಟಪಡುತ್ತಿದ್ದ ನನಗೆ ಋಷ್ಯಶೃಂಗರ ಶೃಂಗೇರಿ ಎಂಬ ಊರು ಏನೋ ಮೋಡಿ ಮಾಡಿದೆ ಎಂದು ಹೇಳಿದರೆ ತಪ್ಪಾಗಲಾರದು. ಅದೇ ಕಾರಣದಿಂದ ಶೃಂಗೇರಿಗೆ ಸುಮಾರು ಐದಾರು ಸಲ ಹೋಗಿ ಬಂದಿದ್ದೇನೆ. ಕೆಲವು ಕಾದಂಬರಿಗಳ ಹೆಸರೇ ನಮ್ಮಲ್ಲಿ ಏನೋ ಹಳೆಯ ನೆನಪನ್ನು ತರುತ್ತವೆ. ಹರೀಶ ಹಾಗಲವಾಡಿಯವರ ‘ಋಷ್ಯಶೃಂಗ’ ಕಾದಂಬರಿಯ ಶೀರ್ಷಿಕೆ ನನ್ನ ಬದುಕಿನ ಈ ನೆನಪುಗಳನ್ನೆಲ್ಲಾ ಮತ್ತೊಮ್ಮೆ ಸ್ಮೃತಿಪಟಲದಲ್ಲಿ ತೇಲುವಂತೆ ಮಾಡಿತು.

ಡಾ. ಚಂದ್ರಶೇಖರ ಕಂಬಾರರ ಒಂದು ನಾಟಕದ ಹೆಸರು ಕೂಡ ‘ಋಷ್ಯಶೃಂಗ’. ಅದು ಆಧುನಿಕ ಕಾಲದ ನಾಟಕವಾದರೂ ಪುರಾಣದ ಕತೆಯ ಪ್ರಭಾವವೂ ಸ್ವಲ್ಪ ಇದೆ. ಅಲ್ಲಿಯೂ ಮುಖ್ಯ ಪಾತ್ರ ಪುರಾಣದ ಋಷ್ಯಶೃಂಗನ ಹಾಗೆ ಈ ಕಾದಂಬರಿಯ ಋಷ್ಯಶೃಂಗನ ಹಾಗೆ ತನ್ನ ಆತ್ಮಶೋಧನೆಯಲ್ಲಿ ತೊಡಗಿರುತ್ತದೆ.
ಹಾಗಾದರೆ, ಈ ಋಷ್ಯಶೃಂಗ ಮಹರ್ಷಿ ಯಾರು?
ಈ ಋಷ್ಯಶೃಂಗ ಮಹರ್ಷಿ ಕಾಶ್ಯಪ ವಿಭಾಂಡಕ ಎಂಬ ಮಹರ್ಷಿಯ ಮಗ. ಋಷ್ಯಶೃಂಗ ಮಹರ್ಷಿಗೆ ತಲೆಯ ಮೇಲೆ ಜಿಂಕೆಯ ಕೊಂಬುಗಳಿರುತ್ತವೆ ಅದಕ್ಕೆ ಆ ಹೆಸರು ಬಂದಿರುತ್ತದೆ. ಋಷ್ಯಶೃಂಗ ಮಹರ್ಷಿಗೆ ಜಿಂಕೆಯ ಕೊಂಬು ಏಕೆ ಬಂತು? ಋಷ್ಯಶೃಂಗ ಮಹರ್ಷಿಯ ಬಾಲ್ಯದ ಬದುಕು ಹೇಗಿತ್ತು? ತಿಳಿಯಲು ಕಾದಂಬರಿಯನ್ನು ಓದಬೇಕು.
ಋಷ್ಯಶೃಂಗ ಎಂದರೆ ಒಂದು ಜಾತಿಯ ಜಿಂಕೆ ಅಥವಾ ಆ ಜಿಂಕೆಯ ಕೊಂಬುಳ್ಳವನು ಎಂದಾಗುತ್ತದೆ. ಇಲ್ಲಿ ಪುರಾಣದ ಋಷ್ಯಶೃಂಗ ಮಹರ್ಷಿ ಪ್ರಸ್ತಾಪವಿರುವುದರಿಂದ ಇದು ಪುರಾಣದ ಕಾದಂಬರಿ ಎಂದು ಯಾರು ಭಾವಿಸಬಾರದು. ಇದೊಂದು ಆಧುನಿಕ ಸಾಹಿತ್ಯದ ಕಾದಂಬರಿ. ಇದು ಆಲ್ಬರ್ಟ್ ಕಮೂವಿನ ಪ್ರತಿಪಾದಿಸಿದ ಅಸಂಗತವಾದದ ಕಾದಂಬರಿ.
ಕಮೂವಿನ ‘ಸ್ಟ್ರೇಂಜರ್ ಅಥವಾ ಔಟ್ ಸೈಡರ್’ ಅಥವಾ ‘ಅನ್ಯ’ ಕಾದಂಬರಿಯನ್ನು ನೆನಪಿಸುವ ಕಾದಂಬರಿ. ಇಲ್ಲಿ ಲೇಖಕರು ಕಮೂವನ್ನು ಓದಿಕೊಂಡಿರಬಹುದು ಅಥವಾ ಇಲ್ಲದೆಯೇ ಇರಬಹುದು. ಆದರೆ ಕಮೂ ಪ್ರತಿಪಾದಿಸಿದ ಅಬ್ಸರ್ಡ್ ಸಿದ್ದಾಂತವನ್ನು ಇಲ್ಲಿ ಕಾಣಬಹುದು. ಕಾರಣ ಕಥಾನಾಯಕನ ಬದುಕಿಗೆ ಒಂದು ಅರ್ಥವೇ ಇಲ್ಲ ಎಂಬ ಭಾವ ಕಾದಂಬರಿಯಲ್ಲಿ ಕಾಣಬಹುದು.
ಬದುಕು ವ್ಯರ್ಥ, ಅಸಂಗತ, ನಿರರ್ಥಕ ಮತ್ತು ಇಲ್ಲಿ ಯಾವುದಕ್ಕೂ ನಿರ್ದಿಷ್ಟವಾದ ಅರ್ಥವಿಲ್ಲ ಎಲ್ಲವೂ ಅರ್ಥಹೀನ ಎಂಬುದು ಕಥಾನಾಯಕನ ಅಭಿಪ್ರಾಯ. ಅವನು ಸಮಾಜದೊಡನೆ ಬೆರೆಯುವುದಿಲ್ಲ. ಸಮಾಜದ ರೀತಿ ರೀವಾಜುಗಳು ಅವನಿಗೆ ಬೇಕಿಲ್ಲ. ಇದು ಕಮೂವಿನ ಅಪರಿಚಿತ ಅಥವಾ ಹೊರಗಿನವ ಎಂಬ ಭಾವವಿರುವ ಕಥಾನಾಯಕನಾದ ಮುರ್ಸೌಲ್ಟ್ ಬದುಕು ಹೀಗೆಯೇ ಇರುತ್ತದೆ.
ಋಷ್ಯಶೃಂಗ ಕಾದಂಬರಿಯ ಕಥಾನಾಯಕನ ಹೆಸರು ಕೂಡ ಪುರಾಣದ ಋಷ್ಯಶೃಂಗ ಆಗಿರುವುದು ಓದುಗರಿಗೆ ಸ್ವಲ್ಪ ಕುತೂಹಲ ಸೃಷ್ಟಿಸುತ್ತದೆ. ಇಲ್ಲಿ ಕಾದಂಬರಿಯ ನಾಯಕ ಆಧುನಿಕ ಋಷ್ಯಶೃಂಗನ ಬದುಕು ಪುರಾಣದ ಋಷ್ಯಶೃಂಗನ ಬದುಕಿನ ಜೊತೆಗೆ ತಳುಕು ಹಾಕಿಕೊಂಡಿರುವುದರಿಂದ ಸಂಪೂರ್ಣ ಕಾದಂಬರಿ ಓದಿ ಮುಗಿಸುವವರೆಗೂ ಅರ್ಥವಾಗುವುದಿಲ್ಲ.

ಈ ಕಾದಂಬರಿಯ ಮುಖಪುಟದಲ್ಲಿ ಒಬ್ಬ ಅಜ್ಞಾತ ಯುವಕ ಅಥವಾ ವ್ಯಕ್ತಿ ಗಗನಚುಂಬಿ ಕಟ್ಟಡಗಳ ಮಧ್ಯ ಏಕಾಂಗಿಯಾಗಿ ಸಾಗುತ್ತಿರುವ ಚಿತ್ರ ಕಾಣುತ್ತದೆ. ಇದು ಆಧುನಿಕ ಬೆಂಗಳೂರು ಅಥವಾ ಜಗತ್ತಿನ ಯಾವುದೇ ಆಧುನಿಕ ಮಹಾನಗರಗಳಲ್ಲಿ ಕಳೆದು ಹೋಗಿ ಒಂದು ರೀತಿ ಅನ್ಯಗ್ರಹ ಜೀವಿಗಳ ರೀತಿ ಬದುಕುತ್ತಿರುವ ಹೊಸ ಜನಾಂಗದ ಯುವಕರ ಬದುಕಿನ ಚಿತ್ರಣವೇ ಆಗಿದೆ.
ಇಲ್ಲಿ ಯುವಕ ಯುವತಿಯರಿಗೆ ಎಲ್ಲವೂ ಅಂತರ್ಜಾಲದಲ್ಲಿ ಫೋನಿನಲ್ಲಿಯೇ ಸಿಗುತ್ತದೆ ಎಂಬ ಭಾವ. ಇಲ್ಲಿ ಯಾವುದೂ ನಮ್ಮ ಹತೋಟಿಯಲ್ಲಿ ಇರುವುದಿಲ್ಲ. ನಮ್ಮ ಬದುಕನ್ನು ಬೇರೆ ಯಾವುದೋ ಕಾಣದ ಶಕ್ತಿ ನಿಯಂತ್ರಿಸುತ್ತಿರುವಂತೆ ಕಾಣುತ್ತದೆ. ಈ ಕಾದಂಬರಿಯಲ್ಲಿ ತುಮಕೂರು ಜಿಲ್ಲೆಯ ಹಳ್ಳಿಯೊಂದರಿಂದ ಬೆಂಗಳೂರಿಗೆ ಬಂದ ಯುವಕನೊಬ್ಬ ತನ್ನ ಬದುಕಿನ ಅರ್ಥವನ್ನು ಹುಡುಕಿಕೊಳ್ಳಲು ಹೋಗಿ ಸೋಲುವುದನ್ನು ಕಾಣಬಹುದು.
ನ್ಯಾಸ ಕಾದಂಬರಿಯಲ್ಲಿ ಅಧ್ಯಾತ್ಮದ ಮೂಲಕ ಬದುಕಿನ ಅರ್ಥವನ್ನು ಅನ್ವೇಷಿಸುವಂತೆ ಮಾಡಿರುವ ಹರೀಶ ಹಾಗಲವಾಡಿಯವರು ಇಲ್ಲಿ ಅಸ್ತಿತ್ವವಾದ ಮತ್ತು ಅಸಂಗತವಾದ ಮೂಲಕ ಬದುಕಿನ ಅರ್ಥವನ್ನು ಶೋಧಿಸಲು ಹೊರಟಂತೆ ಕಾಣುತ್ತದೆ.
ನ್ಯಾಸದಲ್ಲಿ “ಅಹಂಕಾರ ಮಮಕಾರಗಳನ್ನ ಮೀರದೆ ಸತ್ಯದ ದರ್ಶನವಾಗುವುದಿಲ್ಲ” ಎಂದು ಅವುಗಳನ್ನು ಮೀರಿ ಸತ್ಯದ ದರ್ಶನಕ್ಕೆ ಕಥಾನಾಯಕ ಪ್ರಯತ್ನಿಸುತ್ತಾನೆ. ಇಲ್ಲಿ ಪ್ರೇಮ, ಕಾಮ, ಸಿಗರೇಟು, ಕುಡಿತವೇ ಸತ್ಯದ ದರ್ಶನಕ್ಕೆ ದಾರಿ ಎಂದು ಭಾವಿಸಿ ಅದನ್ನು ಕಂಡುಕೊಳ್ಳಲು ಪ್ರಯತ್ನ ಪಡುವ ಚಿತ್ರಣವಿದೆ.

ಆಧುನಿಕ ಯುವಕ ಯುವತಿಯರಿಗೆ ಹಣದ ಜೊತೆ ಎಲ್ಲವೂ ಸುಲಭವಾಗಿ ಕೈಗೆ ಸಿಗುವ ಅವಕಾಶವಿದ್ದರೂ ಸಿಕ್ಕರೂ ಅದು ರುಚಿಸದೆ ಈ ಬದುಕು ಅರ್ಥವಿಲ್ಲದ್ದೂ ಇದು ನಿರರ್ಥಕ ಎಂಬ ಕಾಡುವ ಭಾವ. ಇದರಿಂದ ಸುಖವಿಲ್ಲ ಎಂದು ಸುಖವನ್ನು ಬೇರೆಲ್ಲೋ ಹುಡುಕಲು ಹೊರಡುತ್ತಾರೆ. ಹತ್ತಿರದಲ್ಲಿಯೇ ಇರುವ ಪ್ರೀತಿ ವಿಶ್ವಾಸಗಳನ್ನು ಕಾಣುವಲ್ಲಿ ಸೋಲುತ್ತಾರೆ.
ಇನ್ನೊಂದು ಕಡೆ ಆಧುನಿಕತೆ ತಂದಿಟ್ಟ ಏಕಾಂಗಿತನ ಜೊತೆಗೆ ಆಧುನಿಕ ಕಾಲದಲ್ಲಿ ಹುಟ್ಟಿರುವ ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸೋಲುವ ತಂದೆ ತಾಯಿಗಳು ಎಲ್ಲವೂ ಸೇರಿ ಬದುಕಿನ ಗೊಂದಲಗಳನ್ನು ಇನ್ನಷ್ಟು ಹೆಚ್ಚಿಸುತ್ತವೆ. ಇದು ಒಂದು ಕುಟುಂಬದ ಸಮಸ್ಯೆಯಲ್ಲ. ಇದು ವಿಶ್ವಾತ್ಮಕ ಸಮಸ್ಯೆ.
ಹಾಗಾದರೆ, ಬದುಕಿನ ಅರ್ಥವೇನು? ಮುಕ್ತ ಕಾಮವೊಂದೇ ಬದುಕಿನ ಗುರಿಯೇ? ಇಂತಹ ಒಂದು ಸಮಸ್ಯೆಯನ್ನು ಪುರಾಣದ ಋಷ್ಯಶೃಂಗ ಪಾತ್ರದ ಹಿನ್ನೆಲೆಯಲ್ಲಿ ಆಧುನಿಕವಾಗಿ ಸೃಷ್ಟಿಸಿರುವ ಹರೀಶ ಹಾಗಲವಾಡಿಯವರು ಯಶಸ್ವಿಯಾಗಿದ್ದಾರೆ.
ಇಲ್ಲಿನ ಕಥಾನಾಯಕ ‘ನ್ಯಾಸ’ ಕಾದಂಬರಿಯ ಕಥಾನಾಯಕನ ರೀತಿ ಲೇಖಕರ ಊರಿನವನೇ ಆಗಿರುವುದರಿಂದ ಇದು ಆತ್ಮಕತೆಯೇ ಎಂಬ ಪ್ರಶ್ನೆ ಓದುಗರಲ್ಲಿ ಮೂಡಿದರೂ ಅಚ್ಚರಿಯಿಲ್ಲ. ಇಲ್ಲಿ ನಿರೂಪಕ ಆತ್ಮಕತೆ ಎಂದು ಹೇಳುವ ಪ್ರಸಂಗ ಬಂದು ಇದು ಆತ್ಮಕತೆಯ ಭಾಗ ಎಂಬುದಕ್ಕೆ ಪೂರಕವಾದಂತೆ ಅನಿಸುತ್ತದೆ.
ಇದು ಆತ್ಮಕತೆಯಲ್ಲದಿದ್ದರೂ ನ್ಯಾಸದ ಸತ್ಯಪ್ರಕಾಶನೇ ಇಲ್ಲಿ ಋಷ್ಯಶೃಂಗನಾಗಿರುವಂತೆ ಭಾಸವಾಗುತ್ತದೆ. ಅಥವಾ ಆ ಪಾತ್ರವೇ ತನ್ನ ಇನ್ನೊಂದು ಮುಖವನ್ನು ತೋರಿಸುವಂತೆ ಕಾಣುತ್ತದೆ. ಇದಕ್ಕೆ ಮುಖ್ಯ ಕಾರಣ ಎರಡು ಕಾದಂಬರಿಯ ಒಂದೇ ಭೌಗೋಳಿಕ ಹಿನ್ನೆಲೆ. ಇದು ತುಮಕೂರು ಜಿಲ್ಲೆಯೇ ಗುಬ್ಬಿ ಸಮೀಪದ ಹರೀಶ್ ಅವರ ಐತಿಹಾಸಿಕ ಹಾಗಲವಾಡಿಯೋ ಅಥವಾ ಚೇಳೂರೋ ಇರಬೇಕು ಎಂದು ಅನಿಸುತ್ತದೆ.

ನ್ಯಾಸ ಒಂದು ದೊಡ್ಡ ಕಾದಂಬರಿ ಅದರ ಕಥಾವಸ್ತು ದೊಡ್ಡದು ಮತ್ತು ಪಾತ್ರಗಳು ತುಂಬಾ ಬರುತ್ತವೆ. ಋಷ್ಯಶೃಂಗ ಗಾತ್ರದಲ್ಲಿ ಅದಕ್ಕಿಂತ ಚಿಕ್ಕ ಕಾದಂಬರಿ. ನ್ಯಾಸ ಕಾದಂಬರಿ ಓದಿ ಮೆಚ್ಚಿಕೊಂಡ ಓದುಗರು ಈ ಕಾದಂಬರಿಯನ್ನ ಹೇಗೆ ಸ್ವೀಕರಿಸುತ್ತಾರೋ ಎಂದು ಕಾದು ನೋಡಬೇಕಿದೆ.
ನ್ಯಾಸದ ಕಥಾವಸ್ತು ಓರಿಯೆಂಟಲ್ ಅಥವಾ ಪೂರ್ವ ದೇಶಗಳ ಸಂಸ್ಕೃತಿ ಮತ್ತು ನಂಬಿಕೆಗಳ ಮೇಲೆ ರಚನೆಯಾದ ಕಾದಂಬರಿಯಾಗಿದೆ. ಇಲ್ಲಿ ಮೇಲ್ನೋಟಕ್ಕೆ ಭಾರತೀಯ ಪುರಾಣಗಳ ಪ್ರಭಾವ ಕಂಡರೂ ಇದು ಪಾಶ್ಚಾತ್ಯ ಅದರಲ್ಲೂ ಐವತ್ತು ಅರವತ್ತರ ದಶಕದ ಫ್ರೆಂಚ್ ಸಾಹಿತ್ಯದ ಪ್ರಭಾವ ಈ ಕಾದಂಬರಿಯಲ್ಲಿ ಎದ್ದು ಕಾಣುತ್ತದೆ. ಆ ಕಾರಣದಿಂದ ನ್ಯಾಸಕ್ಕೆ ಸಿಕ್ಕ ಒಂದು ವರ್ಗದ ಓದುಗರು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೋ ನೋಡಬೇಕು.
ಇನ್ನು ಕಾದಂಬರಿಯ ಮಿತಿಯ ಬಗ್ಗೆ ಹೇಳುವುದಾದರೆ ಇದು ನ್ಯಾಸದಷ್ಟೂ ಉತ್ತಮ ಮಟ್ಟದ್ದು ಎಂದು ಹೇಳಲು ಸ್ವಲ್ಪ ಕಷ್ಟ. ಪುಟಗಳ ಮಧ್ಯದಲ್ಲಿ ಕ್ಲಿಷ್ಟಕರವಾದ ಬಹಳಷ್ಟು ಇಂಗ್ಲಿಷ್ ಪದಗಳು ಬಂದಿರುವುದರಿಂದ ಸಾಮಾನ್ಯ ಓದುಗರಿಗೆ ಕಷ್ಟವಾಗುತ್ತದೆ. ಅದರಲ್ಲೂ ಕನ್ನಡ ಮಾಧ್ಯಮದಿಂದ ಬಂದಿರುವ ವಿದ್ಯಾರ್ಥಿಗಳು ಪದದ ಅರ್ಥವನ್ನು ಶಬ್ದಕೋಶದ ಮೂಲಕ ಹುಡುಕಬೇಕಾಗುತ್ತದೆ.
ಇದು ಪ್ರೌಢ ಓದುಗರಿಗೆ ಖಂಡಿತ ಇಷ್ಟವಾಗಬಹುದಾದ ಕಾದಂಬರಿ. ಹರೀಶ ಹಾಗಲವಾಡಿಯವರಿಗೆ ಮುಂದೆ ಹೆಚ್ಚು ಹೆಚ್ಚು ಬರೆಯಲು ತುಂಬಾ ಅವಕಾಶವಿದೆ. ಅವರಿಂದ ಇನ್ನು ಹೆಚ್ಚು ಕೃತಿಗಳನ್ನು ಕನ್ನಡ ಓದುಗರು ನಿರೀಕ್ಷಿಸ ಬಹುದಾಗಿದೆ. ಆ ಭರವಸೆಯನ್ನು ಅವರು ತಮ್ಮ ಮೊದಲ ಕಾದಂಬರಿಯಲ್ಲಿಯೇ ನೀಡಿದ್ದಾರೆ. ನ್ಯಾಸದಂತೆಯೇ ಈ ಕಾದಂಬರಿಯ ಪ್ರಕಾಶಕರು ಕೂಡ ಛಂದ ಪುಸ್ತಕದ ವಸುಧೇಂದ್ರ ಅವರು.






ನಮಸ್ತೆ, ನಿಮ್ಮ ಬರಹದುದ್ದಕ್ಕೂ ಕೃತಿಯ ಮೇಲಿನ ಪ್ರೀತಿ, ಅದನ್ನು ಉಳಿದವರಿಗೂ ಪರಿಚಯಿಸುವ ಹಂಬಲ ಎದ್ದು ಕಾಣುತ್ತಿದೆ. ಅದು ಖುಷಿಯ ವಿಷಯ. ಆದರೆ
’ಇಲ್ಲಿನ ಕಥಾನಾಯಕ ‘ನ್ಯಾಸ’ ಕಾದಂಬರಿಯ ಕಥಾನಾಯಕನ ರೀತಿ ಲೇಖಕರ ಊರಿನವನೇ ಆಗಿರುವುದರಿಂದ ಇದು ಆತ್ಮಕತೆಯೇ ಎಂಬ ಪ್ರಶ್ನೆ ಓದುಗರಲ್ಲಿ ಮೂಡಿದರೂ ಅಚ್ಚರಿಯಿಲ್ಲ. ಇಲ್ಲಿ ನಿರೂಪಕ ಆತ್ಮಕತೆ ಎಂದು ಹೇಳುವ ಪ್ರಸಂಗ ಬಂದು ಇದು ಆತ್ಮಕತೆಯ ಭಾಗ ಎಂಬುದಕ್ಕೆ ಪೂರಕವಾದಂತೆ ಅನಿಸುತ್ತದೆ.
ಇದು ಆತ್ಮಕತೆಯಲ್ಲದಿದ್ದರೂ ನ್ಯಾಸದ ಸತ್ಯಪ್ರಕಾಶನೇ ಇಲ್ಲಿ ಋಷ್ಯಶೃಂಗನಾಗಿರುವಂತೆ ಭಾಸವಾಗುತ್ತದೆ. ಅಥವಾ ಆ ಪಾತ್ರವೇ ತನ್ನ ಇನ್ನೊಂದು ಮುಖವನ್ನು ತೋರಿಸುವಂತೆ ಕಾಣುತ್ತದೆ. ಇದಕ್ಕೆ ಮುಖ್ಯ ಕಾರಣ ಎರಡು ಕಾದಂಬರಿಯ ಒಂದೇ ಭೌಗೋಳಿಕ ಹಿನ್ನೆಲೆ. ಇದು ತುಮಕೂರು ಜಿಲ್ಲೆಯೇ ಗುಬ್ಬಿ ಸಮೀಪದ ಹರೀಶ್ ಅವರ ಐತಿಹಾಸಿಕ ಹಾಗಲವಾಡಿಯೋ ಅಥವಾ ಚೇಳೂರೋ ಇರಬೇಕು ಎಂದು ಅನಿಸುತ್ತದೆ.’
– ಈ ಸಾಲುಗಳನ್ನು ಓದಿ ನಗು ಬಂತು. ಸರ್, ಕಥೆಯ ನಾಯಕ ಲೇಖಕರ ಊರಿನವನೇ ಆಗಿದ್ದ ಮಾತ್ರಕ್ಕೆ, ಕಥೆಯಲ್ಲಿ ಆತ್ಮಕಥೆಯ ಉಲ್ಲೇಖ ಬಂದ ಮಾತ್ರಕ್ಕೆ ಅದು ಆತ್ಮಕತೆ ಇರಬಹುದು ಎಂದು ಸಂದೇಹಿಸುವುದು ಅಥವಾ ಅದರ ನಾಯಕನಿಗೂ ಲೇಖಕನಿಗೂ ಹೋಲಿಸುವುದು ತುಂಬ ಸಿಲ್ಲಿ ಅನಿಸುತ್ತದೆ. ಯಶವಂತ ಚಿತ್ತಾಲರ ಹಲವು ಕಥೆಗಳ ನಾಯಕನ ಊರು ಚಿತ್ತಾಲರ ಊರೇ ಆದ ಹನೇಹಳ್ಳಿ ಅಥವಾ ಮುಂಬೈ. ಹಾಗೆಂದು ಅದೆಲ್ಲ ಅವರ ಆತ್ಮಕತೆ ಇರಬಹುದು ಎಂದು ಸಂದೇಹಿಸಿದರೆ ಹೇಗೆ ಹೇಳಿ? ಇದು ಅನವಶ್ಯಕ ಅಷ್ಟೇ ಅಲ್ಲ ಕೀಳು ಕುತೂಹಲದ ಮಾದರಿ ಅನಿಸುತ್ತದೆ. ಅದನ್ನೇ ನೀವು ನಿಮ್ಮ ಲೇಖನದ ಶೀರ್ಷಿಕೆಯನ್ನಾಗಿಯೂ ಕೊಟ್ಟಿರುವುದನ್ನು ಹೇಗೆ ಅರ್ಥಮಾಡಿಕೊಳ್ಳಬೇಕೋ ಗೊತ್ತಾಗ್ತಿಲ್ಲ. ಇದು ಕಾದಂಬರಿಯ ಪರಿಚಯವೋ ಅಥವಾ ಕಾದಂಬರಿಯ ನಾಯಕನಿಗೂ ಲೇಖಕನಿಗೂ ಇರುವ ಹೋಲಿಕೆಯ ತೌಲನಿಕ ಅಧ್ಯಯನವೋ ಅಂತ ಸಂದೇಹ ಬಂದುಬಿಡುತ್ತದೆ. ಮತ್ತು ಇದೇ ದಾರಿಯಲ್ಲಿ ಮುಂದುವರಿದರೆ, ಆ ಕಾದಂಬರಿಯಲ್ಲಿ ನಾಯಕನ ಜೊತೆ ಸಂಬಂಧ ಇರಿಸಿಕೊಳ್ಳುವ ಹುಡುಗಿ ಈಗ ಹೇಗಿದ್ದಾಳೆ? ಅವಳ ಅಡ್ರೆಸ್ ಕೊಡಬಹುದಾ ಎಂದು ಲೇಖಕರನ್ನು ಕೇಳುವ ಹಂತಕ್ಕೆ ತಲುಪಬಹುದು..
ಹಾಗೆಯೇ ಪುರಾಣದ ಋಷ್ಯಶೃಂಗನ ಕಥೆ ಏನು ಎಂದು ಈ ಕಾದಂಬರಿ ಓದಿದರೆ ಖಂಡಿತ ತಿಳಿಯುವುದಿಲ್ಲ. ಆ ಋಷ್ಯಶೈಂಗನ ಬಗ್ಗೆ ತಿಳಿದಿದ್ದರೆ ಈ ಕಾದಂಬರಿ ನಮ್ಮಲ್ಲಿ ಅನುರಣಿಸುವ ಧ್ವನಿಶಕ್ತಿ ಹೆಚ್ಚಬಹುದಷ್ಟೆ.
ಅದೇನೇ ಇರಲಿ, ನೀವು ಪುಸ್ತಕವನ್ನು ತುಂಬ ಪ್ರೀತಿಯಿಂದ ಓದಿರುವುದು ಬರಹದಲ್ಲಿ ತಿಳಿಯುತ್ತದೆ. ಅದಕ್ಕೆ ನಿಮಗೆ ಅಭಿನಂದನೆ..
ಸರ್, ನಿಮ್ಮ ಪುಸ್ತಕ ಪರಿಚಯ ನನಗೂ ಪುಸ್ತಕವನ್ನು (ಎರಡೂ) ಓದಬೇಕೆನ್ನುವ ಕುತೂಹಲವನ್ನು ಮೂಡಿಸಿದೆ. ಧನ್ಯವಾದಗಳು.