
ಜಿ ಎನ್ ನಾಗರಾಜ್
“ಹರಾಮಖೋರರ ಕರಾಮತ್ತರಿತನು ಟಿಪ್ಪು ಸುಲ್ತಾನನು ನಿಮಿಷದಲಿ
ಅರೇ ಹಮಾರೇ ನಮ್ಮಖ್ಖರಾಮ ಕರೆಸೋ ಕಾಮ್ಮೆಂದ ಮನಸಿನಲಿ
ಸ್ವರಾಜ್ಯ ರಕ್ಷಣೆಗೋಸ್ಕರ ಸುಲ್ತಾನ್ ರಣಾಗ್ರಕ್ಹೊರಟನು ರೋಷದಲಿ
ಪರಂಗಿ ಸೋಲ್ಜರ್ ಮಧ್ಯದಿ ತುರಂಗ ಬಿಟ್ಟನು ತ್ವರಿತದಲಿ”
ಇದು ಶ್ರೀರಂಗ ಪಟ್ಟಣದ ಲಾವಣಿ-ಜಾನಪದ ಕವಿಯೊಬ್ಬ ಟಿಪ್ಪು ಸುಲ್ತಾನನ ವೀರ ಕಾಳಗವನ್ನೂ ಅವನ ಸರ್ಕಾರದಲ್ಲಿದ್ದ ಹಲವರ ಮೋಸ,ಒಳಸಂಚಿನಿಂದಾಗಿ ರಣರಂಗದಲ್ಲಿ ಮಡಿದುದನ್ನೂ ಜನ ತಲೆದೂಗುವಂತೆ ವರ್ಣಿಸುತ್ತದೆ. ಇಂತಹ ಜಾನಪದ ಲಾವಣಿ ಅಥವಾ ಕಾವ್ಯಗಳು ಮೈಸೂರು ಮಹಾರಾಜರ ಬಗ್ಗೆ ರಚನೆಯಾಗಿದ್ದರ ಬಗ್ಗೆ ಜಾನಪದ ಸಂಗ್ರಹಣಾ, ಸಂಶೋಧನಾ ಪುಸ್ತಕಗಳಲ್ಲಿ ಕಣ್ಣಿಗೆ ಬಿದ್ದಿಲ್ಲ.
ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಮುಂತಾದವರನೇಕರನ್ನು, ಸಿಪಾಯಿ ದಂಗೆಯ ನಾಯಕರನ್ನು ಪರಕೀಯ ಆಕ್ರಮಣದ ವಿರುದ್ಧ ಹೋರಾಡಿದ ವೀರರೆಂದು, ದೇಶಪ್ರೇಮಿಗಳೆಂದು ಗೌರವಿಸುವಾಗ ಟಿಪ್ಪೂ ಸುಲ್ತಾನನ್ನು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಮಡಿದ ವೀರಾಗ್ರಣಿಯೆಂದು ದೇಶಪ್ರೇಮಿಯೆಂದು ಕರೆಯಲು ಸಂಕೋಚವೆತಕ್ಕೆ ?
ಕೋಮವಾದದ ವಿಷಪೂರಿತ ಮನಸ್ಸಲ್ಲದೆ ! ಟಿಪ್ಪು ಯುದ್ದ ಮಾಡಿದ್ದು ದೇಶಪ್ರೇಮಕ್ಕಾಗಿ ಅಲ್ಲ ಕೇವಲ ತನ್ನ ರಾಜ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ ಎಂಬ ವಾದ ಹೂಡಲಾಗುತ್ತಿದೆ. ಹಾಗಾದರೆ ಚೆನ್ನಮ್ಮ, ಲಕ್ಷ್ಮೀ ಬಾಯಿ ಮುಂತಾದವರು ಯುದ್ಧ ಮಾಡಿದ್ದು ಮತ್ಯಾಕೆ ? ಅವರೂ ಅದೇ ಕಾರಣಕ್ಕಾಗಿ ಅಲ್ಲವೇ ?
ಟಿಪ್ಪೂ ಸುಲ್ತಾನನ್ನು ಬ್ರಿಟಷರು ಮೈಸೂರು ಹುಲಿ ಎಂದು ೊಪ್ಪಿಕೊಂಡದ್ದು ಸುಖಾ ಸುಮ್ಮನೆ ಅಲ್ಲ ಮೈಸೂರು ಸಂಸ್ಥಾನವನ್ನು ಬಗ್ಗು ಬಡೆದು ವಶಪಡಿಸಿಕೊಳ್ಳಲು ಬ್ರಿಟಿಷರಿಗೆ ನಾಲ್ಕು ಯುದ್ಧಗಳು ಬೇಕಾಯಿತು. ಸುಮಾರು 33 ವರ್ಷಗಳ ದೀರ್ಘ ಕಾಲದಲ್ಲಿ ನಡೆದ ಯುದ್ಧಗಳು ಎಂಬುದನ್ನು ನೆನಪಿನಲ್ಲಿಟ್ಟಕೊಳ್ಳಬೇಕು. ಈ ಯುದ್ಧದಲ್ಲಿ ರಾಜ್ಯದ ಕೆಲ ಭಾಗಗಳನ್ನು ಬ್ರಿಟಿಷರಿಗೆ ಒಪ್ಪಿಸುವುದಕ್ಕಿಂತ ತನ್ನ ಎಳೆ ಮಕ್ಕಳನ್ನೆ
ಒತ್ತೆಯಾಗಿ ಕೊಟ್ಟ ಟಿಪ್ಪು ಸುಲ್ತಾನನಂತಹ ಉದಾಹರಣೆ ಭಾರತದಲ್ಲಿ ಎಲ್ಲೂ ಕಾಣುವುದಿಲ್ಲ.ಅದರ ಬಗ್ಗೆ ಕರುಳು ಕರಗುವ ಚಿತ್ರವೊಂದನ್ನು ಇಂದಿಗೂ ಶ್ರೀರಂಗಪಟ್ಟಣದ ಅರಮನೆಯ ಗೋಡೆಗಳ ಮೇಲೆ ನೋಡಬಹುದು.
ಈ ಯುದ್ಧಗಳಲ್ಲಿ ಮರಾಠರು,ನಿಜಾಮರುಗಳೆಲ್ಲಾ ಸೇರಿ ಒಟ್ಟಾಗಿ ಟಿಪ್ಪುವಿನ ಮೇಲೆ ಬಿದ್ದರೂ ಕೂಡ ಟಿಪ್ಪೂವನ್ನು ಸೋಲಿಸಲು ಇಷ್ಟೊಂದು ಪ್ರಯಾಸ ಪಡಬೇಕಾಯಿತು ಎಂಬುದೇ ಅವನ ಹಿರಿಮೆಯನ್ನು ತೋರಿಸುತ್ತದೆ. ಬ್ರಿಟಷರು ಅಬ್ಬಾ ! ಇನ್ನು ಈ ದೇಸವನ್ನು ವಶಪಡಿಸಿಕೊಳ್ಳುವುದು ಸರಾಗವಾಯಿತು ಎಂದು ಉದ್ಗಾರವೆತ್ತಿದ್ದರೆ ಮತ್ತು ಟಿಪ್ಪೂ ಬಗ್ಗೆ ಅತ್ಯಂತ ಕುತ್ಸಿತ ಟೀಕೆಗಳನ್ನು , ಸುಳ್ಳುಗಳ ಅಪಪ್ರಚಾರ ಮಾಡಿದ್ದರೆ ಅದಕ್ಕೆ ಕಾರಣವೂ ಕೂಡ ಟಿಪ್ಪೂವಿನ ದೃಢವಾದ ಸಂಘರ್ಷದಲ್ಲಿಯೇ ಅಡಗಿದೆ.
ಜೀವಮಾನವೆಲ್ಲಾ ಪಾಳೆಯಗಾರರ ವಿರುದ್ಧ , ನೆರೆಯ ರಾಜ್ಯಗಳಾದ ಮರಾಠರ ಹಾಗೂ ನಿಜಾಮರ ವಿರುದ್ಧ ಹಾಗೂ ಬ್ರಿಟಿಷರ ವಿರುದ್ಧದ ಯುದ್ದಗಳಲ್ಲಿಯೆ ಮುಳುಗಬೆಕಾಗಿ ಬಂದ ಟಿಪ್ಪೂವಿಗೆ ಒಂದು ಅಭಿವ್ರದ್ದಿಪರ ಮುನ್ನೋಟದ ಆಡಳಿತವನ್ನೂ ಮಾಡಲು ಹೇಗೆ ಸಾಧ್ಯವಾಯಿತು ಎಂಬುದೇ ಒಂದು ಸೋಜಿಗ.





ಮೇಲುಕೋಟೆ ಪ್ರಕರಣದ ವಿವರಗಳನ್ನು ಬರೆಯಿರಿ ಸಾಹೀಬ್